ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿಯಿಂದ ಮಸಾಜ್

Last Updated 21 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಪ್ರಾಚೀನ ಕಾಲದಿಂದಲೂ ಭಾರತವು ಆಯುರ್ವೇದ ವೈದ್ಯಕೀಯ ಪದ್ಧತಿ ಮತ್ತು ಯೋಗಾಭ್ಯಾಸಕ್ಕೆ ವಿಶ್ವವಿಖ್ಯಾತಿ ಪಡೆದಿದೆ. ಯೋಗಾಸನದಿಂದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಇದಾಗಲೇ ಸಾಬೀತಾಗಿದೆ. ಋಷಿ ಮುನಿಗಳು ಪ್ರಾಚೀನ ಕಾಲದಿಂದಲೂ  ಈ ಅಭ್ಯಾಸವನ್ನು ಪಾಲಿಸಿಕೊಂಡೇ ನೂರಾರು ವರ್ಷ ಉತ್ತಮ ಆರೋಗ್ಯ ಕಾಪಾಡಿಕೊಂಡಿರುವ ಉದಾಹರಣೆಗಳು ನಮ್ಮ ಮುಂದಿವೆ.

ಸುಮಾರು 2500 ವರ್ಷಗಳಷ್ಟು ಹಳೆಯದಾದ ಈ ಪದ್ಧತಿಥಾಯ್ಲೆಂಡ್‌ನಲ್ಲಿ ಈಗ ಹೊಸ ರೂಪ ಪಡೆದುಕೊಂಡು ಮರಳಿ ಭಾರತಕ್ಕೆ ಕಾಲಿಡುತ್ತಿವೆ. ಅವುಗಳಲ್ಲಿ ಥಾಯ್ ಯೋಗಗಳಾದ ಯಾಮ್ ಕಾಂಗ್ (ಫೈರ್ ಥೆರಪಿ), ಥಾಯ್ ಯೋಗ ಮಸಾಜ್ ಮತ್ತು ಟಾಕ್ ಸೆನ್ ಮಸಾಜ್‌ಗಳು ಭಾರತಕ್ಕೆ ಪ್ರವೇಶ ಮಾಡುತ್ತಿವೆ.

ಈ ಪದ್ಧತಿಗಳನ್ನು ಭಾರತೀಯರು ವಿದೇಶಗಳಿಗೆ ಹೋಗಿ ಕಲಿತು ಅವುಗಳನ್ನು ನಮ್ಮದಾಗಿಸುವ ಪ್ರಯತ್ನಗಳು ಈಗ ನಡೆಯುತ್ತಿವೆ. ಇಂಥದ್ದೇ ಒಂದು ಪ್ರಯತ್ನವಾಗಿ, ಯಾಮ್ ಕಾಂಗ್ (ಫೈರ್ ಥೆರಪಿ–ಬೆಂಕಿಯ ಚಿಕಿತ್ಸೆ) ನೀಡುತ್ತಿದ್ದಾರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ಶ್ರೀಧರ. 2013ರಲ್ಲಿ ಥಾಯ್ಲೆಂಡ್‌ಗೆ ಹೋಗಿ ಇವುಗಳಲ್ಲಿ ಪರಿಣತಿ ಪಡೆದು ಬೆಂಗಳೂರಿನ ಜಯನಗರದಲ್ಲಿ  ‘ಗುರುಕರುಣ ಹೀಲಿಂಗ್‌’ ಮಸಾಜ್ ಕೇಂದ್ರ ಪ್ರಾರಂಭಿಸಿದ್ದಾರೆ.

‘ಆಧುನಿಕ ಬದುಕಿನ ಧಾವಂತದಲ್ಲಿ ಯಾಂತ್ರಿಕ ಜೀವನಕ್ಕೆ ಒಗ್ಗಿ ಹೋಗಿ ನಿತ್ಯ ಹಲವಾರು ಸಮಸ್ಯೆಗಳನ್ನು ತಂದುಕೊಳ್ಳುತ್ತಿರುವ ನಮ್ಮೀ ದಣಿದ ದೇಹಕ್ಕೆ ವಿಶ್ರಾಂತಿ ನೀಡಲು ನೆರವಾಗುವುದು ಈ ಚಿಕಿತ್ಸೆಯ ಪ್ರಮುಖ ಉದ್ದೇಶ. ದೇಹ ನೆಮ್ಮದಿಯಿಂದಿದ್ದರೆ ಮನಸ್ಸು ನೆಮ್ಮದಿಯಾಗಿರುತ್ತದೆ. ಇವೆರಡಕ್ಕೂ ಮದ್ದಾಗಿ ಈ ಚಿಕಿತ್ಸೆ ಕಾರ್ಯನಿರ್ವಹಿಸುತ್ತದೆ’ ಎನ್ನುತ್ತಾರೆ ಶ್ರೀಧರ.

ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ರಾಷ್ಟ್ರ ಮತ್ತು ಅಂತರರಾಷ್ಟೀಯ ಮಟ್ಟದ ಕ್ರೀಡಾಪಟುಗಳಿಗೆ ಶ್ರೀಧರ ಅವರು 17 ವರ್ಷಗಳಿಂದ ಚಿಕಿತ್ಸೆ ನೀಡುತ್ತಿದ್ದಾರೆ. ಚಿಕಿತ್ಸೆ ಪಡೆದಿರುವವರು ಪರಿಣಾಮಕಾರಿ ಫಲ ಕಂಡಿದ್ದಾರೆ. ಇವರು ನೀಡುತ್ತಿರುವ ಅತ್ಯಂತ ವಿನೂತನ ಚಿಕಿತ್ಸೆ ಎಂದರೆ ‘ಯಾಮ್ ಕಾಂಗ್’. ಇದು ಆಲಸ್ಯ, ಬೆನ್ನು ನೋವು, ಕೀಲು ನೋವು, ನಿದ್ರಾ ಸಮಸ್ಯೆ, ಸ್ನಾಯುಗಳ ಉರಿಯೂತ ಸಮಸ್ಯೆಗಳನ್ನು ಹೋಗಲಾಡಿಸಬಲ್ಲುದು.

ಹವಾ ನಿಯಂತ್ರಿತ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ, ಕ್ರೀಡಾಪಟುಗಳಿಗೆ ಇದು ಅತ್ಯಂತ ಪರಿಣಾಮಕಾರಿ ಚಿಕಿತ್ಸೆ. ಲಕ್ವ ಹೊಡೆದವರು ಈ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖವಲ್ಲದಿದ್ದರೂ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವಷ್ಟರ ಮಟ್ಟಿಗೆ ಗುಣ ಕಾಣುತ್ತಿದ್ದಾರೆ’ ಎನ್ನುತ್ತಾರೆ ಶ್ರೀಧರ. ಯಾಮ್ ಕಾಂಗ್ ಚಿಕಿತ್ಸೆಯನ್ನು ಬೌದ್ಧ ಬಿಕ್ಕುಗಳು ದೇವಸ್ಥಾನಗಳಲ್ಲಿ ರೈತರಿಗೆ ಮತ್ತು ಯೋಧರಿಗೆ ಉಚಿತವಾಗಿ ನೀಡುತ್ತಿದ್ದರು. ಇದರಿಂದ ರೈತರು ಕಾಯಿಲೆ ಬಂದಾಗ ಅವರೇ ಈ ಚಿಕಿತ್ಸೆಯಿಂದ ಗುಣಪಡಿಸಿಕೊಳ್ಳುತ್ತಿದ್ದರು. 

ಚಿಕಿತ್ಸೆ ಹೇಗೆ?
ಯಾಮ್ ಕಾಂಗ್ ಮಸಾಜ್ ಮಾಡಿಸಿಕೊಳ್ಳುವ ವ್ಯಕ್ತಿಯನ್ನು ಹಾಸಿಗೆ ಮೇಲೆ ಮಲಗಿಸಿ ಮೊದಲಿಗೆ ವಿಶೇಷ ತೈಲ ಹಚ್ಚಲಾಗುವುದು. ಕೆಂಡವಿರುವ ಕುಂಡದ ಮೇಲೆ ಕಬ್ಬಿಣದ ತುಂಡನ್ನು ಇಟ್ಟಿರುತ್ತಾರೆ. ತೈಲವನ್ನು ಶ್ರೀಧರ್‌ ಅವರು ತಮ್ಮ ಪಾದದಲ್ಲಿ ಅದ್ದಿ, ನಂತರ ಕಾದ ಕಬ್ಬಿಣಕ್ಕೆ ಕಾಲುಗಳಿಂದಲೇ ಸ್ಪರ್ಶಿಸಿ ತಕ್ಷಣವೇ ದೇಹಕ್ಕೆ ಮಸಾಜ್ ಮಾಡುತ್ತಾರೆ. ನಂತರ ಥಾಯ್ ಗಿಡಮೂಲಿಕೆಗಳ ಔಷಧದ ಬಟ್ಟಲಿಗೆ ಪಾದ ಅದ್ದಿ, ಅ ಪಾದವನ್ನು ಬೆಂಕಿಗೆ ಸ್ಪರ್ಶಿಸಿ ಮಸಾಜ್ ಮಾಡುತ್ತಾರೆ. ಬೆಂಕಿಯ ಮೇಲೆ ಕಾಲನ್ನಿಡುವುದು ಅಷ್ಟು ಸುಲಭದ ಮಾತಲ್ಲ. ಆದರೆ ಶ್ರೀಧರ್‌ ಅವರು ಇದನ್ನು ಕರಗತ ಮಾಡಿಕೊಂಡಿದ್ದಾರೆ.

ಮಸಾಜ್ ನಂತರ ಮೂರು ಗಂಟೆಗಳ ಕಾಲ ಹಾಗೆಯೇ ಬಿಡಬೇಕು. ಕನಿಷ್ಠ ಒಂದು ಗಂಟೆಯಾದರೂ ಇದ್ದರೆ ಒಳಿತು. ಈ ಮಸಾಜ್ ನಂತರ ಸ್ಟೀಮ್, ಸೋನ, ಜಕ್ಕೂಸಿ ಮಾಡಿಸುವ ಅಗತ್ಯವಿಲ್ಲ. ಕಡಲೆಹಿಟ್ಟು ಸೀಗೆಕಾಯಿ ಪುಡಿಯಿಂದ ಸ್ನಾನ ಮಾಡಬೇಕು.  ಮಸಾಜ್ ಮಾಡಿಸಿಕೊಳ್ಳುವವರು ಎರಡು ಗಂಟೆ ಮುಂಚಿತವಾಗಿ ಏನನ್ನೂ ತಿನ್ನಬಾರದು. ಕನಿಷ್ಠ ಒಂದು ಲೀಟರ್ ನೀರನ್ನು ಕುಡಿದಿರಬೇಕು. ಹೃದ್ರೋಗಿಗಳಿಗೆ, ಹೆಚ್ಚಿನ ರಕ್ತದೊತ್ತಡ ಹೊಂದಿರುವವರು ಮತ್ತು ಮಧುಮೇಹಿಗಳಿಗೆ ಈ ಚಿಕಿತ್ಸೆ ಸೂಕ್ತವಲ್ಲ. 

‘ಮಸಾಜ್‌ಗೆ ಏಳು ಗಿಡಮೂಲಿಕೆಗಳಿಂದ ಮಾಡಿದ ಔಷಧ, ಮೂರು ವಿಧದ ತೈಲ ಬಳಸುತ್ತೇವೆ. ಒಂದು ಗಂಟೆ ಅವಧಿಯ ಮಸಾಜ್ ಇದಾಗಿದೆ. ಸದ್ಯಕ್ಕೆ ಥಾಯ್ ಯೋಗ, ಟಾಕ್ ಸೆನ್ ಮತ್ತು ಯಾಮ್ ಕಾಂಗ್ ಚಿಕಿತ್ಸೆ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೊಂದು ವಿನೂತನ ಚಿಕಿತ್ಸೆಯಾಗಿರುವ ಗೊ ಷಾ ಪರಿಚಯಿಸುತ್ತೇನೆ’ ಎನ್ನುತ್ತಾರೆ ಶ್ರೀಧರ.

ಟಾಕ್ ಸೆನ್ ಥಾಯ್ ಯೋಗ
ಟಾಕ್ ಸೆನ್ ಥಾಯ್ ಯೋಗ ಎಂಬ ವಿಶೇಷ ರೀತಿಯ ಚಿಕಿತ್ಸೆಯನ್ನೂ ಇವರು ಮಾಡುತ್ತಾರೆ. ‘ಟಾಕ್’ ಎಂದರೆ ಮರದ ಸಾಧನವನ್ನು ಬಡಿದಾಗ ಹೊಮ್ಮುವ ಸದ್ದು. ‘ಸೆನ್’ ಎಂದರೆ ದೇಹದಲ್ಲಿ ಶಕ್ತಿ ಸಂಚರಿಸುವ ಮಾರ್ಗ ಎಂದರ್ಥ. ತೇಗ ಅಥವಾ ಹುಣಸೆ ಮರದಿಂದ ತಯಾರಿಸಲಾಗುವ ಈ ಸಾಧವನ್ನು ಕೆಲಕಾಲ ಬುದ್ಧ ದೇವಾಲಯದಲ್ಲಿಟ್ಟು, ನಂತರ ಬಳಸುತ್ತಾರೆ.

ಉತ್ತರ ಥಾಯ್ಲೆಂಡ್ ಮೂಲದ ಈ ವಿದ್ಯೆ ಬಳಸಿ ದೇಹದಲ್ಲಿ ನಕಾರಾತ್ಮಕ ಶಕ್ತಿಯನ್ನು ಹೊರಹಾಕಬಹುದು. ಇದರಿಂದ ದೇಹಕ್ಕಾದ ನೋವು, ಶಕ್ತಿ ಪರಿಚಲನೆಯ ತಡೆ, ನರ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಬಹುದು ಎಂಬ ನಂಬಿಕೆಯಿಂದ ಈ ಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ. ಆ ಚಿಕಿತ್ಸೆಯನ್ನೂ ಶ್ರೀಧರ್‌ ನೀಡುತ್ತಾರೆ. ಅವರ ಸಂಪರ್ಕಕ್ಕೆ: 9342617373.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT