ಹಣವೇ ನಿನ್ನಯ ಗುಣ ಮತ್ತು ಬಣ್ಣ!

ನವೆಂಬರ್ ಎಂಟರ ನಡುರಾತ್ರಿಗೆ ನೋಟುಗಳನ್ನು ಹಠಾತ್ತನೆ ರದ್ದು ಮಾಡಿದ ನಮ್ಮ ಪ್ರಧಾನಿ ನರೇಂದ್ರ ಮೋದಿ, ಇಡೀ ದೇಶದ ಬಡವ ಬಲ್ಲಿದರಿಗೆ ಹೇಗೆ ನಡುಕ ಹುಟ್ಟಿಸಿದರು ಅನ್ನುವುದೆಲ್ಲ ಈಗ ಚರಿತ್ರೆಯ ಭಾಗವಾಗಿಹೋಯಿತು.

ಹಣವೇ ನಿನ್ನಯ ಗುಣ ಮತ್ತು ಬಣ್ಣ!

ನವೆಂಬರ್ ಎಂಟರ ನಡುರಾತ್ರಿಗೆ ನೋಟುಗಳನ್ನು ಹಠಾತ್ತನೆ ರದ್ದು ಮಾಡಿದ ನಮ್ಮ ಪ್ರಧಾನಿ ನರೇಂದ್ರ ಮೋದಿ, ಇಡೀ ದೇಶದ ಬಡವ ಬಲ್ಲಿದರಿಗೆ ಹೇಗೆ ನಡುಕ ಹುಟ್ಟಿಸಿದರು ಅನ್ನುವುದೆಲ್ಲ ಈಗ ಚರಿತ್ರೆಯ ಭಾಗವಾಗಿಹೋಯಿತು. ಆರ್ಥಿಕತೆ ಅನ್ನುವ ಒಂದು ದೊಡ್ಡ ವ್ಯವಸ್ಥೆಯ ರಥ ಉರುಳುವುದು ನೋಟುಗಳೆಂದು ಕರೆಯುವ ಕಾಗದದ ಚೂರುಗಳ ಚಲಾವಣೆ ಪಥದ ಮೇಲೆ ಮಾತ್ರವೇ ಅನ್ನುವ ಚರ್ಚೆ ಮತ್ತೆ ಆರಂಭವಾಯಿತು. ಒಂದು ಪ್ರಶ್ನೆಗೆ ಒಂದು ಉತ್ತರ ಅನ್ನುವುದು ಕೇವಲ ಪರೀಕ್ಷೆಗಳಲ್ಲಿ ಅಂಕಗಳಿಕೆಗೆ ಮಾತ್ರವೇ ಹೊರತು, ಇಂಥ ಮಹಾ ಛೂಮಂತ್ರಜಾಲದಲ್ಲಿ ಒಂದು ಪ್ರಶ್ನೆಗೆ ಹಲವು ಉತ್ತರಗಳು ಇರುತ್ತವೆ ಅನ್ನುವುದೂ ಖಚಿತವಾಯಿತು. 

ಎಲ್ಲಕ್ಕಿಂತ ಹೆಚ್ಚಾಗಿ ಹಣದ ಅಥವಾ ಕಾಂಚಾಣದ ಕುರುಡುಗುಣ, ಹಲವು ಬಣ್ಣ ಮತ್ತು ರಾಜಕಾರಣ ದೇಶದಾದ್ಯಂತ ಹುಚ್ಚೆದ್ದು ಕುಣಿಯಿತು. ಕೋಟಿ ಕೋಟಿ ರೂಪಾಯಿಗಳ ಕಪ್ಪುಹಣದ ತೆರಿಗೆ ಕಳ್ಳಸುಳ್ಳರಿಗಿರಲಿ, ಹತ್ತಿಪ್ಪತ್ತು ಸಾವಿರಗಳ ಸತ್ಯವಂತರಿಗೂ ಇದು ಕಾಲವಲ್ಲ ಎಂಬ ಭಯ ಹುಟ್ಟಿಸಿತು. ಒಟ್ಟಾರೆ ಆರ್ಥಿಕ ಮತ್ತು ರಾಜಕೀಯ ವಿಚಾರಗಳಲ್ಲಿ ಕಣ್ಣಿಗೆ ಕಾಣುವ ವಾಸ್ತವ ಸತ್ಯ ಬೇರೆ, ಸತ್ಯೋತ್ತರ ವಾಸ್ತವ ಬೇರೆ ಅನ್ನುವುದಕ್ಕೆ ತಾಜಾ ಉದಾಹರಣೆ ಸಿಕ್ಕಿತು. ಎಷ್ಟೆಂದರೂ ಹೇಳಿಕೇಳಿ ಇದು ‘ಸತ್ಯೋತ್ತರ’ ಕಾಲ!

ನಾಲ್ಕು ದಶಕಗಳ ಹಿಂದೆ ಪ್ರಧಾನಿ ಇಂದಿರಾ ಗಾಂಧಿ ಅವರು ಆಕಾಶವಾಣಿಯಲ್ಲಿ ಕೋಪಾವೇಶದಿಂದ ಮಾತನಾಡುತ್ತ ರಾಜಕೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದನ್ನು ಕಿವಿಯಾರೆ ಕೇಳಿದ್ದೆವು; ಈಗ ಪ್ರಧಾನಿ ನರೇಂದ್ರ ಮೋದಿ ಅವರು ವೀರಾವೇಶದಿಂದ ಮಾತನಾಡುತ್ತ ಒಂದು ಥರದ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡುವುದನ್ನು ಟಿವಿ ತೆರೆಯ ಮೇಲೆ ಕಣ್ಣಾರೆ ನೋಡಿದೆವು. ಆಗಿನ ತುರ್ತು ಪರಿಸ್ಥಿತಿಗೆ ಇಂದಿರಾ ಗಾಂಧಿಯೇ ಏಕೈಕ ಕಾರಣ, ಈಗಿನದಕ್ಕೆ ಏನೇನೋ ಕಾರಣ. ಹೆಚ್ಚು ಮೌಲ್ಯದ ನೋಟುಗಳನ್ನು ಅಮಾನ್ಯ ಮಾಡುವ ನಿರ್ಧಾರವನ್ನು ಪ್ರಧಾನ ಮಂತ್ರಿಗಳು ಘೋಷಿಸಿದ ಶೈಲಿಯೂ ಅಸಾಮಾನ್ಯವಾಗಿತ್ತು.

ಕೇಂದ್ರ ಸರ್ಕಾರ, ಮಂತ್ರಿ ಮಂಡಲ, ಅರ್ಥಖಾತೆ, ಆರ್ಥಿಕ ವ್ಯವಸ್ಥೆ, ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕುಗಳ ಜಾಲ, ನೀತಿ ಆಯೋಗ ಇತ್ಯಾದಿಗಳನ್ನೆಲ್ಲ ಆಪೋಶನ ತೆಗೆದುಕೊಂಡಂತಿದ್ದ ಈ ಪ್ರಚಂಡ ಪ್ರಧಾನಿ, ತಾನು ಕೈಗೊಂಡ ನಿರ್ಧಾರವನ್ನು ‘ನಾಳೆ ಎಂದರೆ ದೇಶ ಹಾಳು’ ಎನ್ನುವಂತೆ ಘೋಷಿಸಿದ ರೀತಿಯೇ ದೇಶವನ್ನು ಬೆಚ್ಚಿಬೀಳಿಸಿತು. ಅವರ ಘೋಷಣೆಯುದ್ದಕ್ಕೂ ‘ನಾನೇನಾನು’ ವಿಜೃಂಭಿಸಿದ್ದು ಸಹಜ, ಏಕೆಂದರೆ ಎಷ್ಟಾದರೂ ಅವರು ಸಂತ ಜ್ಞಾನೇಶ್ವರನ ನಾಡಿನಲ್ಲಿ ಹುಟ್ಟಿದ ಸರ್ವಾಧಿಕಾರಿ ಮನೋಭಾವದ ‘ಸ್ವಂತ ನಾನೇಶ್ವರ’!

ಕಪ್ಪುಹಣವನ್ನು ನಾಶ ಮಾಡುವುದು ಮತ್ತು ಭ್ರಷ್ಟಾಚಾರವನ್ನು ತಡೆಯುವುದು ಈ ದಿಟ್ಟ ನಿರ್ಧಾರದ ಮುಖ್ಯ ಆಶಯ ಎಂಬುದಕ್ಕೆ ಎಲ್ಲ ಪ್ರಜೆಗಳ ಸ್ವಾಗತ ಇದ್ದೇ ಇರುತ್ತದೆ. ಅಲ್ಲಿಂದಾಚೆಗೆ ಆದ ಪರಿಣಾಮ ಮತ್ತು ಅನುಭವ ಮಾತ್ರ ಊಹಾತೀತ. ನೋಟುಗಳ ಮಾನ್ಯತೆ ಅಂದು ಮಧ್ಯರಾತ್ರಿಯಿಂದ ರದ್ದಾದ ನಂತರ ದೇಶದ ಮುಂದೆ ಧುತ್ತೆಂದು ಹಲವಾರು ಸಮಸ್ಯೆಗಳು ಎದ್ದು ನಿಂತವು. ನಮ್ಮಲ್ಲಿ ಚಲಾವಣೆಯಲ್ಲಿದ್ದ ನೋಟುಗಳ ಪೈಕಿ ಶೇ 86 ರಷ್ಟು ದೊಡ್ಡ ಪ್ರಮಾಣದಲ್ಲಿ ಐದು ನೂರು ಮತ್ತು ಸಾವಿರ ರೂಪಾಯಿನ ನೋಟುಗಳೇ ಇದ್ದವಂತೆ. ಹಾಗೆ ಥಟ್ಟೆಂದು ರದ್ದಿ ಕಾಗದವಾದ ನೋಟುಗಳ ಬದಲಿಗೆ ಅಷ್ಟೇ ಹೊಸ ನೋಟುಗಳು ಬರುವುದು ಅಸಾಧ್ಯವಾಯಿತು.

ಅರ್ಥ ವ್ಯವಸ್ಥೆ ರಿಪೇರಿ ಮಾಡುವ ಪ್ರಧಾನ ಮಂತ್ರಿಗಳ ಬದ್ಧತೆಯನ್ನು ಸರತಿಯ ಸಾಲುಗಳಲ್ಲಿ ನಿಂತ ಜನ ಮೆಚ್ಚಿಕೊಂಡರೂ ಅವರು ಕೈಗೊಂಡ ಕ್ರಮಕ್ಕೆ ಅಗತ್ಯವಾಗಿದ್ದ ಸಿದ್ಧತೆಯೇ ಇಲ್ಲದಿರುವುದು ಜನರಿಗೇ ಸಂಕಷ್ಟಗಳನ್ನು ತಂದಿತು. ಅವರ ದುಡ್ಡಿನ ಮೇಲೆ ಇವರ ಹಿಡಿತ, ದಿನಕ್ಕೊಂದು ಬದಲಾಗುವ ನಿಯಮ, ಹೆದರಿಕೆ ಹುಟ್ಟಿಸುವ ವದಂತಿಗಳ ಹಾರಾಟ, ಆಘಾತಕಾರಿ ತೆರಿಗೆ ದಾಳಿ ಬೆದರಿಕೆಗಳು ಇವೆಲ್ಲದರಿಂದ ಹೈರಾಣಾದ ಜನರಿಗೆ ತುರ್ತು ಪರಿಸ್ಥಿತಿ ನೆನಪಾಗಿರಬಹುದು.

‘ಜನ ದಂಗೆ ಏಳುವ ಮುನ್ನ ಪರಿಸ್ಥಿತಿ ಸರಿಪಡಿಸಿ’ ಎಂದು ಸರ್ವೋಚ್ಚ ನ್ಯಾಯಾಲಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರಲ್ಲಿ ಆಶ್ಚರ್ಯವಿಲ್ಲ. ಇಷ್ಟು ದಿನ ಬಡಜನರು ಬ್ಯಾಂಕಿನಿಂದ ಕಡಿಮೆ ಬಡ್ಡಿಗೆ ಸಾಲ ಪಡೆದು ಸರ್ಕಾರವನ್ನು, ರಾಜಕಾರಣಿಗಳನ್ನು ಹೊಗಳುತ್ತಿದ್ದರು. ಈಗ ಬ್ಯಾಂಕಿನ ಮುಂದೆ ಸರತಿ ಸಾಲಿನಲ್ಲಿ ನಿಂತು ತಮ್ಮದೇ ಹಣವನ್ನು ಪಡೆದು ಅವರನ್ನು ಹೊಗಳುವಂತಾಯಿತು.

ಚುನಾವಣೆಯಲ್ಲಿ ಮಾತು ಕೊಟ್ಟಿದ್ದಂತೆ ವಿದೇಶಿ ಬ್ಯಾಂಕುಗಳಲ್ಲಿ ಬಚ್ಚಿಟ್ಟಿರುವ ಕಪ್ಪುಹಣವನ್ನು ತಂದು ಬಡವರ ಬದುಕನ್ನು ಸುಧಾರಿಸದೇ ವಿಫಲರಾದ ಪ್ರಧಾನಿ ನಾನಾ ಬಗೆಯ ಟೀಕೆಗಳನ್ನು ಕೇಳಬೇಕಾಯಿತು. ಈಗ ಸ್ವದೇಶದಲ್ಲಿ ಬ್ಯಾಂಕುಗಳಿಂದ ದೂರವಾಗಿ ಹಲವೆಡೆ ಬಚ್ಚಿಟ್ಟಿರುವ ಕಪ್ಪುಹಣವನ್ನು ಸಂಹಾರ ಮಾಡುವ ಅವರ ನಿರ್ಧಾರ ಬಡವರ ಬದುಕಿನ ಅಲ್ಪಸ್ವಲ್ಪ ನೆಮ್ಮದಿಯನ್ನೂ ಕಸಿದುಕೊಂಡಿತು ಎಂಬ ಟೀಕೆಗಳನ್ನು ಕೇಳಬೇಕಾಯಿತು.

1978 ರಲ್ಲಿ ಒಂದು ಸಾವಿರ ರೂಪಾಯಿ ನೋಟುಗಳನ್ನು ರದ್ದು ಮಾಡಿದಾಗ, ಕಪ್ಪುಹಣದ ಶ್ರೀಮಂತರ ಸಂದೂಕಗಳಲ್ಲಿ ಮಾತ್ರ ಇದ್ದ ಅವನ್ನು ಉಳಿದವರು ಬಳಸುತ್ತಿರಲಿಲ್ಲ; ಆದರೆ ಈಗ ರದ್ದಾಗಿರುವ ಐದು ನೂರು ಮತ್ತು ಸಾವಿರ ರೂಪಾಯಿ ನೋಟುಗಳು ಎಲ್ಲ ಅರ್ಥಗಳಲ್ಲಿ ಮಧ್ಯಮ ವರ್ಗ ಮತ್ತು ಬಡವರ್ಗದ ಸಾಮಾನ್ಯ ವ್ಯವಹಾರದ ಹಣ. ಆ ನೋಟುಗಳು ಕೆಲವರಿಗೆ ಮಾತ್ರ ಶೇಖರಣೆಯಾದರೆ, ಉಳಿದ ಎಲ್ಲ ಜನರಿಗೆ ಬದುಕು ನಿರ್ವಹಿಸಲು ಅಗತ್ಯವಾದ ವಿತರಣೆಯ ಹಣ.

ನಮ್ಮ ಹಳ್ಳಿಗಳಿಂದ ಹಿಡಿದು ಮಹಾನಗರಗಳ ತನಕ ಹತ್ತಾರು ಕೋಟಿ ಸಣ್ಣಪುಟ್ಟ ಅಂಗಡಿಗಳು ವ್ಯಾಪಾರ ನಡೆಸುತ್ತ ಜನರಿಗೆ ದಿನನಿತ್ಯಕ್ಕೆ ಬೇಕಾದ ಅಗತ್ಯಗಳನ್ನು ಪೂರೈಸುತ್ತವೆ. ಈ ಹತ್ತಾರು ಕೋಟಿ ಅಂಗಡಿಗಳ ಪೈಕಿ ಹತ್ತಾರು ಸಾವಿರ ಅಂಗಡಿಗಳಲ್ಲಿ ಕೂಡ ಕೊಂಡ ಸರಕಿಗೆ ಬಿಲ್ ಮಾಡಲು ಕಂಪ್ಯೂಟರ್, ಹಣ ಕೊಡಲು ಕ್ರೆಡಿಟ್ ಕಾರ್ಡ್ ಉಜ್ಜುವ ಯಂತ್ರ ಇರುವುದಿಲ್ಲ. ರೂಪಾಯಿ ನೋಟುಗಳಲ್ಲೇ ಕೊಡುವುದು- ಪಡೆಯುವುದೆಲ್ಲ ಮುಗಿಯುತ್ತದೆ. ನೋಟೇ ನಂಬಿಕೆ ಕಳೆದುಕೊಂಡರೆ ಉಳಿದೆಲ್ಲ ನಂಬಿಕೆಯೂ ಕುಸಿಯುತ್ತದೆ. ಹಾಗೆ ಆಗಿದ್ದರಿಂದಲೇ ಆಕ್ರೋಶ ಮತ್ತು ಆಕ್ರಂದನವೇ ಹೆಚ್ಚಾಗಿ ಕೇಳಿಬಂತು.

ಒಂದು ಅಂದಾಜಿನ ಪ್ರಕಾರ, ದೇಶದಲ್ಲಿರುವ ಕಪ್ಪುಹಣದಲ್ಲಿ ಶೇ 6ರಷ್ಟು ಮಾತ್ರ ರೂಪಾಯಿ ನೋಟುಗಳ ರೂಪದಲ್ಲಿ ಇದೆಯಂತೆ, ಉಳಿದದ್ದು ಹಲವು ಅವತಾರಗಳಲ್ಲಿ ಸುಪ್ತವಾಗಿದೆಯಂತೆ. ಕಪ್ಪುಹಣಕ್ಕಿಂತ ಅಪಾರವಾಗಿ, ಅಗಾಧವಾಗಿ ಹರಡಿಕೊಂಡಿರುವುದು ಕಪ್ಪುಸಂಪತ್ತು. ಬೇನಾಮಿ ಆಸ್ತಿಯೇ ನಮ್ಮ ಮುಂದಿನ ಗುರಿ ಎಂಬ ಪ್ರಕಟಣೆ ಹೊರಬಿದ್ದಿದ್ದರೂ ದೇಶದಲ್ಲಿರುವ ಕಪ್ಪುಸಂಪತ್ತು ಶೋಧಿಸುವುದು ಮತ್ತು ವಶಪಡಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಆಸ್ತಿಪಾಸ್ತಿಗಳ, ವಜ್ರವೈಢೂರ್ಯ ಚಿನ್ನಬೆಳ್ಳಿಗಳ ರೂಪದ ಕಪ್ಪುಸಂಪತ್ತಿನ ಆಳಅಗಲಗಳನ್ನು ಊಹಿಸುವುದೇ ಅತ್ಯಂತ ದೊಡ್ಡ ಸವಾಲು.

ಕಪ್ಪುಹಣ ಊಹಾತೀತ ಪ್ರಮಾಣದಲ್ಲಿ ಚಲಾವಣೆಯಲ್ಲಿರುವುದು ಲಂಚರುಷುವತ್ತಿನ ರೂಪದಲ್ಲಿ. ಈ ಭ್ರಷ್ಟಾಚಾರ ನಿಯಂತ್ರಣದ ಹೆಸರಿನಲ್ಲಿರುವ ಅಷ್ಟೊಂದು ದೊಡ್ಡ ವ್ಯವಸ್ಥೆಯಿಂದ ಇದುವರೆಗೆ ಏನು ಪ್ರಯೋಜನ ಆಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ಈಗ ಅಲ್ಲಿರುವ ಕಪ್ಪುಹಣ ಕಂಡುಹಿಡಿಯಲು ಹೊಸ ಯಂತ್ರತಂತ್ರ ಕಂಡುಹಿಡಿಯಬೇಕಷ್ಟೆ. ಭ್ರಷ್ಟಾಚಾರದ ಕಪ್ಪುಹಣದ ನೋಟುಗಳು ಕಪ್ಪುಸಂಪತ್ತು ಆಗಿ ಪರಿವರ್ತನೆ ಆಗುವುದು ಖಚಿತ.

ಎಲ್ಲ ರಾಜ್ಯಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಅಗಾಧವಾಗಿ ಬೆಳೆದು ಕಪ್ಪುಹಣವು ಮಣ್ಣಿನ ಬಣ್ಣ ತಳೆಯುತ್ತದೆ. ಎಲ್ಲ ರಾಜ್ಯಭಾಷೆಗಳಲ್ಲಿ ಸಿನಿಮಾ ಉದ್ಯಮ ಕಪ್ಪುಹಣದಿಂದಲೇ ನಳನಳಿಸುತ್ತಾ ಬೆಳೆದು ಹಲವು ಬಣ್ಣಗಳಲ್ಲಿ ನಳನಳಿಸುತ್ತದೆ. ಕಪ್ಪುಹಣದಿಂದ ಏನೇನು ಉದ್ಯಮ ಬೆಳೆಯುತ್ತದೆ ಎನ್ನುವುದನ್ನು ಹೇಳಲು ಯಾರೂ ಅರ್ಥಶಾಸ್ತ್ರ ಓದಬೇಕಿಲ್ಲ, ಗಿಳಿಶಾಸ್ತ್ರ ಕೇಳಬೇಕಿಲ್ಲ. ಕಪ್ಪುನೋಟುಗಳಿಂದ ಬೆಳೆದ ಇದನ್ನು ನಿಯಂತ್ರಿಸಲು ಯಾವ ಅರ್ಥನೋಟ ಬೇಕು?

ಆಮೇಲೆ ಬೇರೆ ಸಂಸ್ಥೆಗಳು ಬಿಡಿ, ಅನೇಕ ದೇಶಗಳಲ್ಲಿ ಇರುವಂತೆ, ನಮ್ಮ ದೇಶದಲ್ಲೂ ಬಹುಪಾಲು ಶಿಕ್ಷಣ ಸಂಸ್ಥೆಗಳು ಉಳಿಯುವುದು, ಬೆಳೆಯುವುದು ಕಪ್ಪುಹಣದ ಬೆಂಬಲದಲ್ಲಿ. ಎಂಜಿನಿಯರಿಂಗ್ ಮತ್ತು ಮೆಡಿಕಲ್ ಸೇರಿ ಅನೇಕ ಕೋರ್ಸುಗಳ ಸೀಟುಗಳಿಗೆ ಕಪ್ಪುಹಣ ಹೇಗೆ ಹರಿದು ಬರುತ್ತದೆ ಎನ್ನುವುದು ಎಲ್ಲ ಶಿಕ್ಷಣವೇತ್ತರಿಗೆ ಗೊತ್ತಿರುವ ಸಂಗತಿ. ರಾಜಕಾರಣಿಗಳು ತಾವು ಗಳಿಸಿದ ಕಪ್ಪುಹಣವನ್ನು ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಲ್ಲಿ ಬಂಡವಾಳವಾಗಿ ತೊಡಗಿಸುವುದು ಯಾವ ರಾಜ್ಯದಲ್ಲಿ ಇಲ್ಲ? ಇಲ್ಲೆಲ್ಲ ಕಪ್ಪುಹಣಕ್ಕೆ ವಿವಿಧ ಬಣ್ಣಗಳ ಸಮವಸ್ತ್ರ ತೊಡಗಿಸಲಾಗುತ್ತದೆ.

ಶಿಕ್ಷಣದ ವ್ಯಾಪಾರಿಗಳು ತಾವು ಗಳಿಸಿದ ಈ ಕಪ್ಪುಹಣವನ್ನು ದೊಡ್ಡ ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಟ್ಟು ತಾವೂ ವಿಧಾನ ಪರಿಷತ್ತು, ರಾಜ್ಯಸಭೆಗಳಿಗೆ ನಾಮಕರಣಗೊಂಡು ಉಪಕೃತರಾಗುತ್ತಾರೆ. ಕೆಲವರು ನೇರ ಚುನಾವಣೆಗೆ ನಿಂತುಗೆದ್ದು ಶಾಸಕ, ಸಂಸದ, ಸಚಿವ ಏನಾದರೂ ಆಗುತ್ತಾರೆ. ದೊಡ್ಡ ಶಿಕ್ಷಣ ಸಂಸ್ಥೆಗಳು ಬಿಡಿ, ನರ್ಸರಿ ಶಾಲೆಗಳಿಗೂ ಸಾಮಾನ್ಯರ ಸಾಲದ ಹಣ, ಉಳಿತಾಯದ ಹಣ ವಂತಿಗೆಯಾಗಿ ಬರುವಂತೆ ಕಪ್ಪುಹಣವೂ ಹರಿದುಬರುತ್ತದೆ. ಮೋದಿ ಮಾಸ್ತರು ಈ ಕಪ್ಪುವಿದ್ಯೆಯನ್ನು ನಪಾಸು ಮಾಡುವುದು ಹೇಗೆ?

ಆಮೇಲೆ, ನಮ್ಮ ದೇಶದ ಉದ್ದಗಲಕ್ಕೆ ಹರಡಿಕೊಂಡಿರುವ ಎಲ್ಲ ಧಾರ್ಮಿಕ ಕೇಂದ್ರಗಳು ಮತ್ತು ಜಾತಿಮತಧರ್ಮಗಳ ಮಠಗಳು ಕಪ್ಪುಹಣಕ್ಕೆ ನೆಚ್ಚಿನ ಮಡಿಲುಗಳಾಗಿವೆ ಮತ್ತು ರಾಜಕಾರಣಿಗಳ ಕಪ್ಪುಹಣವನ್ನು ರಕ್ಷಿಸುವುದು ಅನೇಕ ಮಠಾಧೀಶರ, ಬಾಬಾಗಳ ಪವಿತ್ರ ಕರ್ತವ್ಯವಾಗಿದೆ ಎಂಬ ಕಟುಸತ್ಯವನ್ನೂ ನಾವು ಒಪ್ಪಿಕೊಳ್ಳಬೇಕು. ತೆರಿಗೆ ಇಲಾಖೆ ದಾಳಿಯ ಭಯವೇ ಇಲ್ಲ ಅಂದುಕೊಂಡಿರುವ ಕಾರಣದಿಂದ ರಾಜಕಾರಣಿಗಳಿಗೆ, ಉನ್ನತ ಅಧಿಕಾರಿಗಳಿಗೆ ಇವು ಅತ್ಯಂತ ಶ್ರದ್ಧಾಭಕ್ತಿಯ ತಾಣಗಳಾಗಿವೆ. ಇಂದಿರಾ ಗಾಂಧಿ ಅವರೇ ಯಾವ್ಯಾವ ಮಠಗಳಲ್ಲಿ, ದೈವಕ್ಷೇತ್ರಗಳಲ್ಲಿ ಹಣ ಇಟ್ಟಿದ್ದರು, ಈಗಿನ ಯಾವ ಸಣ್ಣದೊಡ್ಡ ರಾಜಕಾರಣಿಗಳು ಎಲ್ಲೆಲ್ಲಿ ಹಣ ಇಟ್ಟಿದ್ದಾರೆ, ಐಎಎಸ್ ಸೇರಿ ಯಾವ ಅಧಿಕಾರಿಗಳು ಯಾವ ಸ್ವಾಮೀಜಿಗಳ ಭಕ್ತಾಗ್ರಣಿಗಳು ಎಂಬುದೆಲ್ಲ ಸಮಾಜದಲ್ಲಿ ಹರಿದಾಡುವ ಕೇವಲ ವದಂತಿಗಳು ಮಾತ್ರ ಅಲ್ಲ!

ಇಲ್ಲಿ ಕಪ್ಪುಹಣಕ್ಕೆ ಅರಿಶಿನ ಕುಂಕುಮ ಕೇಸರಿಯ ಬಣ್ಣ! ಇನ್ನು ಪುಟ್ಟಪರ್ತಿಯ ಸತ್ಯಸಾಯಿಬಾಬಾ ನಿಧನರಾದಾಗ ಅವರ ಬೃಹತ್ ಧಾರ್ಮಿಕ ಕ್ಷೇತ್ರದ ಆವರಣದಿಂದ ಹೊರಹೊರಟ ರಾಶಿ ನೋಟುಗಳು ಮತ್ತು ಇತರ ಸಂಪತ್ತು ತುಂಬಿದ ಲಾರಿಗಳು ಎಲ್ಲೆಲ್ಲಿಗೆ ಹೋದವು ಎನ್ನುವುದೇ ಒಂದು ಸಂಶೋಧನಾ ಆಯೋಗಕ್ಕೆ ಅರ್ಹವಾದ ವಿಷಯ. ನೂರಾರು ಮಸೀದಿಗಳು, ಚರ್ಚುಗಳು ಮತ್ತು ಇತರ ಧಾರ್ಮಿಕ ಸಂಸ್ಥೆ-ವ್ಯವಸ್ಥೆಗಳಲ್ಲಿ ಕಪ್ಪುಹಣ ಇಲ್ಲ ಎಂದು ಯಾರಾದರೂ ಪ್ರಮಾಣ ಮಾಡಿ ಹೇಳಲಿ ನೋಡೋಣ! ಯೋಗ ಮಾಡಿಕೊಂಡಿದ್ದ ಕಾವಿಧಾರಿಗಳು ಬಹಳ ದೊಡ್ಡ ಉದ್ಯಮಿಗಳಾಗಲು ಕಪ್ಪುಹಣದ ಬೆಂಬಲವಿಲ್ಲ ಎಂದರೆ ಯಾರಾದರೂ ನಂಬುತ್ತಾರೆಯೇ? ಕಪ್ಪುಹಣಕ್ಕೆ ನಮ್ಮ ದೇಶದಲ್ಲಿ ದೇವರ ಶ್ರೀರಕ್ಷೆಯೂ ಇದೆ!

ಒಟ್ಟಿನಲ್ಲಿ ದೇಶದ ಉದ್ದಗಲಕ್ಕೆ ಜನರೆಲ್ಲ ಹಣ, ಅದರ ಗುಣ ಮತ್ತು ಅದರ ಬಣ್ಣ ಕುರಿತೇ ಮಾತನಾಡುತ್ತಿರುವುದು ಸಹಜ. ಆದರೆ ಮಾತನಾಡಬೇಕಾದವರು ಮಾತ್ರ ಮೌನವಾಗಿ ಇದ್ದಾರಲ್ಲ! ನೋಟು ರದ್ದು ಮಾಡಿರುವ ನಮ್ಮ ಇಂದಿನ ಪ್ರಧಾನಿ ಕೇವಲ ಒಬ್ಬ ಅನುಭವಸ್ಥ ರಾಜಕಾರಣಿಯೇ ಹೊರತು ಇನ್ನೇನೂ ಅಲ್ಲ. ಆದರೆ ನಮ್ಮ ಹಿಂದಿನ ಪ್ರಧಾನಿ ಮನಮೋಹನ ಸಿಂಗ್ ಒಬ್ಬ ಅರ್ಥಶಾಸ್ತ್ರಜ್ಞ, ಅಂತರರಾಷ್ಟ್ರೀಯ ಹಣಕಾಸು ನಿಧಿ ಅನುಭವ ಇರುವ ತಜ್ಞ, ಭಾರತೀಯ ರಿಸರ್ವ್ ಬ್ಯಾಂಕ್‌ನ ನೇತಾರ, ವಿತ್ತ ಸಚಿವ, ಪ್ರಧಾನ ಮಂತ್ರಿ ಹೀಗೆ ಏನೇನೋ ಆಗಿದ್ದರಲ್ಲ?

ಈ ವಿಷಯದ ಬಗ್ಗೆ ಮಾತನಾಡಲು ಇವರಿಗಿಂತ ಸಮರ್ಥರು ಬೇರೆ ಯಾರೂ ಇರಲಾರರು. ಆದರೆ ಅವರ ಈ ಮೌನ, ಸಮ್ಮತಿಯೇ ಇರಬಹುದು. ಹಾಗೆಯೇ ನಮ್ಮ ಅರ್ಥವ್ಯವಸ್ಥೆಯನ್ನು ಊರ್ಜಿತಗೊಳಿಸಲು ಹೇಗೂ ಪ್ರಧಾನಿ ಇದ್ದಾರಲ್ಲ ಎಂದು ರಿಸರ್ವ್ ಬ್ಯಾಂಕ್‌ನ ಉರ್ಜಿತ್ ಪಟೇಲ್ ಕೂಡ ಬಾಯಿಬಿಡದೆ ಸುಮ್ಮನಿರಬಹುದು! ಕಪ್ಪುಹಣದ ಮೇಲಿನ ಸಮರದಲ್ಲಿ ಇದು ಮೊದಲ ಹೆಜ್ಜೆ ಎಂದು ಇತರ ಅನೇಕರು ಹೇಳುವುದು ಮುಂದಿನ ನಡೆಯಿಂದಷ್ಟೇ ಸಾಬೀತಾಗಬೇಕು.

Comments
ಈ ವಿಭಾಗದಿಂದ ಇನ್ನಷ್ಟು
ಪಾದುಕಾ ಪುರಾಣಕ್ಕೆ ಹೊಸ ಪ್ರಸಂಗ ಅನಗತ್ಯ

ಜೀವನ್ಮುಖಿ
ಪಾದುಕಾ ಪುರಾಣಕ್ಕೆ ಹೊಸ ಪ್ರಸಂಗ ಅನಗತ್ಯ

28 Feb, 2017
ಮಾತಿನ ಮಂಟಪದಲ್ಲೇ ಉಳಿದ ಮಹಿಳಾ ಮೀಸಲಾತಿ

ಜೀವನ್ಮುಖಿ
ಮಾತಿನ ಮಂಟಪದಲ್ಲೇ ಉಳಿದ ಮಹಿಳಾ ಮೀಸಲಾತಿ

14 Feb, 2017
ಜನಪ್ರತಿನಿಧಿಗಳ ‘ಪ್ರತಿಭಾ ಪ್ರದರ್ಶನ’ ಹೀಗಿರಬೇಕೆ?

ಜೀವನ್ಮುಖಿ
ಜನಪ್ರತಿನಿಧಿಗಳ ‘ಪ್ರತಿಭಾ ಪ್ರದರ್ಶನ’ ಹೀಗಿರಬೇಕೆ?

31 Jan, 2017
ಖಾದಿ ಬಿಟ್ಟು ಬೇರೆ ಯಾದಿ ತಯಾರಿಸಿ ಮೋದಿ

ಜೀವನ್ಮುಖಿ
ಖಾದಿ ಬಿಟ್ಟು ಬೇರೆ ಯಾದಿ ತಯಾರಿಸಿ ಮೋದಿ

17 Jan, 2017
ವಿರೋಧ ಪಕ್ಷವಾಗದ ಅದಕ್ಷ ರಾಜಕಾರಣ

ಜೀವನ್ಮುಖಿ
ವಿರೋಧ ಪಕ್ಷವಾಗದ ಅದಕ್ಷ ರಾಜಕಾರಣ

3 Jan, 2017