ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಕಾಯುವ ಕೈಗಳಿಗೆ ಶಕ್ತಿ ತುಂಬಬೇಕು

Last Updated 21 ನವೆಂಬರ್ 2016, 19:30 IST
ಅಕ್ಷರ ಗಾತ್ರ
ನವೆಂಬರ್‌ 1ರಂದು ಕರ್ನಾಟಕವು 61ನೇ ರಾಜ್ಯೋತ್ಸವ ಆಚರಿಸಿದೆ. ಹಲವು ಕ್ಷೇತ್ರಗಳಲ್ಲಿ ರಾಜ್ಯ ದಾಪುಗಾಲು ಇಟ್ಟಿದೆ. ಆದರೆ, ಈ ಹೊತ್ತಿನಲ್ಲಿ ಹಿಂದಿನ ವಿದ್ಯಮಾನಗಳನ್ನು ಅವಲೋಕಿಸಿ, ಅದರಿಂದ ಕೆಲವನ್ನು ಕಲಿತು, ಮುಂದಿನ 40 ವರ್ಷಗಳಲ್ಲಿ ಏನು ಮಾಡಬೇಕು ಎಂಬುದನ್ನು ಆಲೋಚಿಸುವ ಜರೂರು ಕೂಡ ಇದೆ. ಯಾವುದೇ ರಾಜ್ಯ ಅಥವಾ ದೇಶದ ಪ್ರಗತಿಯ ಮುಖ್ಯ ಅಂಶ ಅಲ್ಲಿನ ನಾಗರಿಕರ ಆರೋಗ್ಯ. ಕರ್ನಾಟಕದ ಜನರ ಸಾಮರ್ಥ್ಯವನ್ನು ಪರಿಗಣಿಸಿ ಹೇಳುವುದಾದರೆ, ಈ ಕ್ಷೇತ್ರದಲ್ಲಿ ನಾವು ಇನ್ನೂ ಉತ್ತಮ ಕೆಲಸ ಮಾಡಬಹುದಿತ್ತು.
 
ಸಮಗ್ರ ಅಭಿವೃದ್ಧಿಗೆ ಮಾನವನ ಆರೋಗ್ಯ ತೀರಾ ಪ್ರಮುಖ. ಈಗ ನಾವು ಆರೋಗ್ಯ ಕ್ಷೇತ್ರಕ್ಕೆ ಮಾಡುತ್ತಿರುವ ಶೇಕಡ 1ಕ್ಕಿಂತ ಕಡಿಮೆ ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಬೇಕು. ದಶಕಗಳ ನಂತರದ ಕಾಲಘಟ್ಟದಲ್ಲಿ ತನ್ನ ಪ್ರಜೆಗಳ ಆರೋಗ್ಯ ರಕ್ಷಣೆ ಹೇಗಿರಬೇಕು ಎಂಬ ಬಗ್ಗೆ ಎಲ್ಲ ಆಯಾಮಗಳಿಂದ ಯೋಚಿಸಿ, ರಾಜ್ಯ ಹೊಸ ಆರೋಗ್ಯ ನೀತಿಯೊಂದನ್ನು ರೂಪಿಸಬೇಕು.
 
ಆರೋಗ್ಯ ರಕ್ಷಣಾ ವ್ಯವಸ್ಥೆ
ಔಷಧ ಹಾಗೂ ವೈದ್ಯರ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದು ಆರೋಗ್ಯ ರಕ್ಷಣಾ ವ್ಯವಸ್ಥೆಯ ಹಲವು ಮುಖಗಳಲ್ಲಿ ಒಂದು. ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಯೋಜನೆಗಳ ಚುಕ್ಕಾಣಿಯನ್ನು ವೈದ್ಯಕೀಯ ವೃತ್ತಿಯಲ್ಲಿ ಇರುವವರೇ ಹಿಡಿದಿರಬೇಕು ಎಂಬ ಧೋರಣೆ ಬದಲಾಗಬೇಕು. ವೈದ್ಯ ವೃತ್ತಿಯಲ್ಲಿ ಇಲ್ಲದ, ಬೇರೆ ಬೇರೆ ಕ್ಷೇತ್ರಗಳ ವೃತ್ತಿಪರರು ಹಾಗೂ ವಿವಿಧ ಬಗೆಯ ಕೌಶಲ ಹೊಂದಿರುವವರ ಭಾಗವಹಿಸುವಿಕೆಗೆ ಆರೋಗ್ಯ ಕ್ಷೇತ್ರದಲ್ಲಿ ಅವಕಾಶಗಳಿವೆ.
 
ಉದಾಹರಣೆಗೆ: ಶುದ್ಧ ಕುಡಿಯುವ ನೀರಿಗೆ ಸಂಬಂಧಿಸಿದ ಅಭಿಯಾನವನ್ನು ಉತ್ತಮ ಸಂವಹನ ಕಲೆ ಹೊಂದಿರುವ ಅಧಿಕಾರಿಗಳು ವೈದ್ಯರಿಗಿಂತ ಹೆಚ್ಚು ಉತ್ತಮವಾಗಿ ನಿಭಾಯಿಸಬಲ್ಲರು. ಬೇರೆ ಬೇರೆ ಜ್ಞಾನಶಿಸ್ತುಗಳ, ಹಿನ್ನೆಲೆಯ ವ್ಯಕ್ತಿಗಳನ್ನು ಆರೋಗ್ಯ ರಕ್ಷಣಾ ಕಾರ್ಯಕ್ರಮದ ಅಡಿ ತರುವುದು ಆದ್ಯತೆಯ ಕೆಲಸವಾಗಬೇಕು. ಇದರಿಂದ ವೈದ್ಯರ ಕೊರತೆಯ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಆರೋಗ್ಯ ಸೇವೆಗಳ ಮೇಲಿನ ವೆಚ್ಚ ತಗ್ಗಿಸಲು ಸಾಧ್ಯವಾಗುತ್ತದೆ. ವೈದ್ಯರಿಗೆ ಸಹಾಯಕ ಆಗಿ ಕೆಲಸ ಮಾಡಬಲ್ಲವರನ್ನು ತರಬೇತುಗೊಳಿಸಲು ರಾಜ್ಯ ಪರ್ಯಾಯ ಮಾದರಿಯೊಂದನ್ನು ರೂಪಿಸಬೇಕು. ಈ ಸಹಾಯಕರು, ವೈದ್ಯರ ಹಾಗೂ ರೋಗಿಯ ನಡುವೆ ಮಧ್ಯವರ್ತಿಯಂತೆ ಕೆಲಸ ಮಾಡಬೇಕು, ವೈದ್ಯರ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು.
 
ಉತ್ತೇಜನ
ಕರ್ನಾಟಕದಲ್ಲಿ ಸಾಂಪ್ರದಾಯಿಕ ವೈದ್ಯಪದ್ಧತಿ ಅನುಸಾರ ಔಷಧಿ ನೀಡುವ 70 ಸಾವಿರಕ್ಕೂ ಹೆಚ್ಚು ಜನ ಇದ್ದಾರೆ. ರಾಜ್ಯದಲ್ಲಿ ಆರೋಗ್ಯ ರಕ್ಷಣಾ ಸೇವೆಗಳ ವ್ಯವಸ್ಥೆಯು ಸಮುದಾಯಗಳಲ್ಲಿ ಇರುವ ಜ್ಞಾನವನ್ನು ಬಳಸಿಕೊಂಡು ರೂಪುಗೊಳ್ಳಬೇಕು. ನಾವು ಸಾಂಪ್ರದಾಯಿಕ ವೈದ್ಯಪದ್ಧತಿ, ಆಯುಷ್‌ ಪದ್ಧತಿಗಳನ್ನು ಅಲೋಪಥಿಯನ್ನು ಕಂಡಂತೆಯೇ ಕಾಣಬೇಕು. ಪರಸ್ಪರರ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ ಪ್ರತಿ ವೈದ್ಯಪದ್ಧತಿಯ ನಡುವೆ ಗೌರವ ಭಾವನೆ ಬೆಳೆಸಬೇಕು. ಅಲೋಪಥಿಗೆ ಒಂದು ಆಸ್ಪತ್ರೆ, ಆಯುರ್ವೇದಕ್ಕೆ ಪ್ರತ್ಯೇಕ ಆಸ್ಪತ್ರೆ ಎಂಬ ವ್ಯವಸ್ಥೆಯ ಬದಲು, ಬಹುಬಗೆಯ ವೈದ್ಯಪದ್ಧತಿಗಳ ಅನುಸಾರ ಒಂದೇ ಸೂರಿನಡಿ ಚಿಕಿತ್ಸೆ ನೀಡುವ ಕೇಂದ್ರಗಳನ್ನು ಸರ್ಕಾರ ಆರಂಭಿಸಬೇಕು.
 
ದಕ್ಷ ವಿಮಾ ಯೋಜನೆ
ಆರೋಗ್ಯ ಸೇವೆಗಳು ಬಡವರಿಗೂ ಸಿಗುವಂತೆ ಆಗಬೇಕು ಎಂಬ ಉದ್ದೇಶದಿಂದ ವಿಮಾ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೆ ಬಡ ಕುಟುಂಬಗಳು ಚಿಕ್ಕ–ಪುಟ್ಟ ಖರ್ಚುಗಳನ್ನು ತಾವೇ ನಿಭಾಯಿಸಿಕೊಳ್ಳಬೇಕು, ಎಲ್ಲ ಬಗೆಯ ಕಾಯಿಲೆಗಳು ವಿಮೆ ವ್ಯಾಪ್ತಿಗೆ ಬರುವುದಿಲ್ಲ ಎಂಬುದನ್ನು ಅಧ್ಯಯನಗಳು ಕಂಡುಕೊಂಡಿವೆ. ಬಡವರನ್ನು ಗುರಿಯಾಗಿಟ್ಟುಕೊಂಡು ಜಾರಿಗೆ ತಂದ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ ಹಾಗೂ ಯಶಸ್ವಿನಿ ಯೋಜನೆಗಳಲ್ಲಿ ದೋಷಗಳು ಇರುವುದಕ್ಕೆ ಸಾಕ್ಷ್ಯಗಳಿವೆ. ಆರೋಗ್ಯ ವಿಮಾ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿರುವುದು ವಿಮಾ ಕಂಪೆನಿಯನ್ನು ಗಮನದಲ್ಲಿ ಇರಿಸಿಕೊಂಡೇ ಹೊರತು, ಅದನ್ನು ಬಳಸುವವನನ್ನು ಗಮನದಲ್ಲಿಟ್ಟುಕೊಂಡು ಅಲ್ಲ ಎಂಬುದನ್ನು ಇದು ತೋರಿಸುತ್ತದೆ. ‘ಹಣ ಇಲ್ಲ ಎಂಬ ಕಾರಣಕ್ಕೆ ಯಾವುದೇ ವ್ಯಕ್ತಿ ವೈದ್ಯಕೀಯ ಸೇವೆಗಳಿಂದ ವಂಚಿತನಾಗಬಾರದು’ ಎಂಬ ಉದ್ದೇಶದೊಂದಿಗೆ ಆರೋಗ್ಯ ವಿಮಾ ಯೋಜನೆಗಳನ್ನು ರೂಪಿಸಬೇಕು. ಸರ್ಕಾರಗಳು ರೂಪಿಸಿರುವ ಹಲವು ಆರೋಗ್ಯ ವಿಮೆ ಯೋಜನೆಗಳನ್ನು ಒಂದೇ ಯೋಜನೆಯಡಿ ತರಬೇಕು.
 
 ಪ್ರಾದೇಶಿಕ ಅಸಮಾನತೆ ನಿವಾರಣೆ
ಸರ್ಕಾರಗಳ ಪ್ರಯತ್ನದ ನಂತರವೂ ಆರೋಗ್ಯ ಸೇವೆಗಳು ಎಲ್ಲೆಡೆ ಒಂದೇ ಗುಣಮಟ್ಟದಲ್ಲಿ ಸಿಗುತ್ತಿಲ್ಲ, ಪ್ರತಿ ಹಂತದಲ್ಲೂ ಪ್ರಾದೇಶಿಕ ಅಸಮಾನತೆ ಇದೆ. ಯೋಜನೆಗಳನ್ನು ರೂಪಿಸುವಾಗ ಜಿಲ್ಲೆಗಳ, ಪ್ರದೇಶಗಳ ಆರೋಗ್ಯ ಸ್ಥಿತಿ ಏನು ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕು. ಆಗ, ಹಿಂದುಳಿದಿರುವ ಜಿಲ್ಲೆಗಳ ಪರಿಸ್ಥಿತಿ ಸುಧಾರಿಸುವಂತಹ ಯೋಜನೆಗಳನ್ನು ರೂಪಿಸಲು ಸಾಧ್ಯ.
 
ಜಿಲ್ಲೆಗಳಿಗೆ ಹಣಕಾಸಿನ ಅನುದಾನ ನೀಡುವ ವ್ಯವಸ್ಥೆಯಲ್ಲಿ ಬದಲಾವಣೆ ಬೇಕು. ‘ಸೌಲಭ್ಯ ಆಧಾರಿತ’ ಅನುದಾನ ವ್ಯವಸ್ಥೆಯಿಂದ ‘ಅವಶ್ಯಕತೆ ಆಧಾರಿತ’ ಅನುದಾನ ವ್ಯವಸ್ಥೆಗೆ ಹೊರಳಿಕೊಳ್ಳಬೇಕು. ‘ಸೌಲಭ್ಯ ಆಧಾರಿತ’ ಅನುದಾನದಿಂದ ಅವಶ್ಯಕತೆಗಳು ಹೆಚ್ಚಿರುವ, ಸೌಲಭ್ಯಗಳು ಕಡಿಮೆ ಇರುವ ಜಿಲ್ಲೆಗೆ, ಅವಶ್ಯಕತೆಗಳು ಕಡಿಮೆ ಇರುವ ಹಾಗೂ ಸೌಲಭ್ಯ ಹೆಚ್ಚಿರುವ ಜಿಲ್ಲೆಗಿಂತ ಕಡಿಮೆ ಅನುದಾನ ಸಿಗುತ್ತಿದೆ. ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 
 
ಆದರೆ, ಉತ್ತರ ಕರ್ನಾಟಕದಲ್ಲಿ ಇವುಗಳ ಸಂಖ್ಯೆ ಬಹಳ ಕಡಿಮೆ. ಜನಸಂಖ್ಯೆ ಹಾಗೂ ಅಗತ್ಯಗಳ ಆಧಾರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹಂಚಿಕೆ ಮಾಡುವುದರಿಂದ ಮೂಲಸೌಕರ್ಯದ ಅಸಮಾನತೆ ಕಡಿಮೆ ಆಗುತ್ತದೆ. ಹಾಗೆಯೇ, ಈಗಿರುವ 2,200 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬದಲು, 1,750 ಕೇಂದ್ರಗಳಿದ್ದರೆ ಜನರ ಅಗತ್ಯಗಳು ಈಡೇರುತ್ತವೆ.
 
ಆರೋಗ್ಯ ಇಲಾಖೆಯು ರೋಗಗಳನ್ನು ಮಾತ್ರ ಗುರಿಯಾಗಿಸಿಕೊಂಡು ಕೆಲಸ ಮಾಡುವ ಪ್ರವೃತ್ತಿಯನ್ನು ಬಿಡಬೇಕು. ರೋಗಗಳ ನಿಯಂತ್ರಣಕ್ಕೆ ಸಮಗ್ರ ಕಾರ್ಯವಿಧಾನ ಬೇಕು. ಎಚ್‌ಐವಿ/ಏಯ್ಡ್ಸ್‌, ಟಿ.ಬಿ, ಮಲೇರಿಯಾದಂತಹ ಕಾಯಿಲೆಗಳನ್ನು ತಡೆಯುವುದು ದೊಡ್ಡ ಸವಾಲು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈ ರೋಗಗಳನ್ನು ತಡೆಯಲು ಹೆಚ್ಚಿನ ಒತ್ತು ನೀಡಬೇಕು. ಆದರೆ, ರೋಗಗಳನ್ನೇ ಗುರಿಯಾಗಿಟ್ಟುಕೊಂಡು ರೂಪುಗೊಳ್ಳುವ ಯೋಜನೆಗಳು, ವ್ಯವಸ್ಥೆಯ ಮೇಲೆ ಆಡಳಿತಾತ್ಮಕ ಒತ್ತಡ ಸೃಷ್ಟಿಸುತ್ತವೆ. ಬಹುಬಗೆಯ ಪ್ರಯತ್ನಗಳು ದೊಡ್ಡಮಟ್ಟದಲ್ಲಿ ಒಂದಾಗಿ, ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಅನುಷ್ಠಾನಕ್ಕೆ ಬಂದಾಗ ಮಾತ್ರ, ರೋಗ ನಿಯಂತ್ರಣ ಸಾಧ್ಯ.
 
ಸಮುದಾಯಗಳ ಬಲವರ್ಧನೆ
ಆರೋಗ್ಯ ರಕ್ಷಣೆಯಲ್ಲಿ ಸಮುದಾಯದ ಸಹಭಾಗಿತ್ವಕ್ಕೆ ರಾಷ್ಟ್ರೀಯ ಆರೋಗ್ಯ ಮಿಷನ್‌ ಭಾರಿ ಆದ್ಯತೆ ನೀಡಿದೆ. ಆದರೆ, ತಳಹಂತದಲ್ಲಿ ಇದಕ್ಕೆ ಮಿಶ್ರ ಪ್ರತಿಕ್ರಿಯೆ ಇದೆ. ಪ್ರಕ್ರಿಯೆಯೊಂದರ ಮೇಲೆ ಸಮುದಾಯದ ಕಣ್ಗಾವಲು ಇಡಲು ನಿರಂತರ ಪ್ರಯತ್ನ ನಡೆಸುತ್ತಿದ್ದರೆ, ಪಾರದರ್ಶಕತೆ, ಉತ್ತರದಾಯಿತ್ವ ಹೆಚ್ಚುತ್ತದೆ ಎಂಬುದಕ್ಕೆ ಆಧಾರಗಳಿವೆ. ಹಾಗೆಯೇ, ಇದರಿಂದ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದ, ಆರ್ಥಿಕವಾಗಿ ಹೊರೆಯಲ್ಲದ ಪರಿಹಾರ ಮಾರ್ಗಗಳೂ ಸಿಗುತ್ತವೆ. ಸಮುದಾಯದ ಕಣ್ಗಾವಲು ಹಾಗೂ ಸಾಮಾಜಿಕ ಉತ್ತರದಾಯಿತ್ವ ಪ್ರಕ್ರಿಯೆಗಳು ಬಾಯುಪಚಾರಕ್ಕೆ ಮಾತ್ರ ಸೀಮಿತವಾಗಬಾರದು. ಅವು ಆರೋಗ್ಯ ರಕ್ಷಣೆ ವ್ಯವಸ್ಥೆಯ ಭಾಗ ಆಗಬೇಕು.
 
ವೃದ್ಧರ ಬಗ್ಗೆ ಕಾಳಜಿ
ತನ್ನಲ್ಲಿ ಯುವ ಜನ ಹೆಚ್ಚಿದ್ದಾರೆ ಎಂದು ಭಾರತ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆದರೆ, ವೃದ್ಧರ ಸಂಖ್ಯೆ ಹೆಚ್ಚುವುದು, ಅವರು ಹರೆಯದವರ ಮೇಲೆ ಅವಲಂಬಿತರಾಗುವುದು ಭವಿಷ್ಯದಲ್ಲಿ ನಮ್ಮ ಪಾಲಿಗೆ ಕಾದಿದೆ. ಒಬ್ಬರಿಂದ ಒಬ್ಬರಿಗೆ ಹರಡದ ರೋಗಗಳು ಹೆಚ್ಚುತ್ತಿವೆ. ಇದರ ಜೊತೆಗೇ, ಇಳಿ ವಯಸ್ಸಿನವರ ಸಂಖ್ಯೆಯೂ ಹೆಚ್ಚಾದಾಗ ಆ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ.
 
ಗುಣಪಡಿಸಲಾಗದಂತಹ ರೋಗಗಳಿಂದ ನರಳುತ್ತಿರುವವರ ಆರೈಕೆಯು ಸಾರ್ವಜನಿಕ ಆರೋಗ್ಯ ಕಾಪಾಡುವ ವಿಚಾರದಲ್ಲಿ ಪ್ರಮುಖ ಅಂಶ. ಇಂಥವರ ಆರೈಕೆಗಾಗಿ ಈಚೆಗೆ ಘೋಷಿಸಿರುವ ನೀತಿಯನ್ನು ಸ್ವಾಗತಿಸಬೇಕು. ಗುಣಪಡಿಸಲಾಗದ ರೋಗ ಎಂದರೆ ಕ್ಯಾನ್ಸರ್‌ ಮಾತ್ರವೇ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದರ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ನರ, ಹೃದಯ, ಶ್ವಾಸಕೋಶ ಸಂಬಂಧಿ ರೋಗಗಳು, ಏಯ್ಡ್ಸ್‌ ಕೂಡ ಸೇರಿವೆ. ಇಳಿ ವಯಸ್ಸಿನವರ ಸಂಖ್ಯೆ ಹೆಚ್ಚಿದಂತೆಲ್ಲ, ಗುಣಪಡಿಸಲಾಗದ ರೋಗದಿಂದ ನರಳುತ್ತಿರುವವರ ಆರೈಕೆಯ ಅಗತ್ಯತೆಯೂ ಹೆಚ್ಚುತ್ತದೆ. ಈ ಅಗತ್ಯಗಳಿಗೆ ಸ್ಪಂದಿಸಲು ಸಾರ್ವಜನಿಕ ಆರೋಗ್ಯ ಸೇವೆಗಳು ಸಜ್ಜಾಗಿರಬೇಕು.
 
ಮುಖ್ಯ ವಾಹಿನಿ ಜೊತೆ ಮಾನಸಿಕ ಆರೋಗ್ಯ ಸೇವೆಯ ಜೋಡಣೆ
2020ರ ವೇಳೆಗೆ ರಾಜ್ಯದ ಶೇಕಡ 20ರಷ್ಟು ಜನ ಒಂದಲ್ಲ ಒಂದು ಬಗೆಯ ಮಾನಸಿಕ ಅನಾರೋಗ್ಯದ ಸಮಸ್ಯೆ ಎದುರಿಸುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಜನಜಾಗೃತಿ ಮೂಡಿಸಲು ಸಂಪನ್ಮೂಲ ಒಟ್ಟುಗೂಡಿಸಬೇಕಾಗಿದೆ. ಜನಜಾಗೃತಿಯ ಜೊತೆಯಲ್ಲೇ, ರೋಗಗಳು ಬಾರದಂತೆ ನಿಗಾ ವಹಿಸುವ ಹಾಗೂ ಬಂದಿರುವ ರೋಗಗಳನ್ನು ನಿವಾರಿಸಿಕೊಳ್ಳುವ ಸಾಮರ್ಥ್ಯ ವರ್ಧನೆಯ ಕೆಲಸವೂ ಆಗಬೇಕು.
 
ಖಾಸಗಿ ಕ್ಷೇತ್ರದ ಸುಧಾರಣೆ
ಶೇಕಡ 20ಕ್ಕಿಂತ ಕಡಿಮೆ ಮೂಲಸೌಕರ್ಯ ಹೊಂದಿರುವ ಖಾಸಗಿ ಕ್ಷೇತ್ರವು, ಆರೋಗ್ಯ ಸೇವಾ ಕ್ಷೇತ್ರದಲ್ಲಿ ಶೇಕಡ 60ಕ್ಕಿಂತ ಹೆಚ್ಚಿನ ಜನರಿಗೆ ಸೇವೆ ಒದಗಿಸುತ್ತಿದೆ. ಇದು ಗುಣಮಟ್ಟದ ಸಮಸ್ಯೆ ಸೃಷ್ಟಿಸುತ್ತದೆ. ಸರ್ಕಾರವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಶಕ್ತಗೊಳಿಸುವ ಜೊತೆಯಲ್ಲೇ, ಖಾಸಗಿ ಕ್ಷೇತ್ರವನ್ನು ಕಾನೂನಿನ ಮೂಲಕ ನಿಯಂತ್ರಿಸುವ ಕೆಲಸವನ್ನೂ ಮಾಡಬೇಕು. ಇಲ್ಲಿ ಆರೋಗ್ಯ ಸೇವೆಗಳಿಗೆ ಖಾಸಗಿ ಕ್ಷೇತ್ರ ನೀಡಿರುವ ಕೊಡುಗೆಯನ್ನು ನಿರ್ಲಕ್ಷಿಸಬಾರದು.
 
ದೇಶದ ಆರೋಗ್ಯ ಅಗತ್ಯತೆಗಳು ಏನು ಎಂಬ ಬಗೆಗಿನ ಮಾತುಕತೆಗಳಲ್ಲಿ ಖಾಸಗಿ ರಂಗವನ್ನೂ ಭಾಗಿಯಾಗಿಸಿಕೊಳ್ಳಬೇಕು, ಅವರ ಪಾತ್ರವನ್ನು ಇನ್ನಷ್ಟು ಹೆಚ್ಚಿಸಬೇಕು.ಒಳ್ಳೆಯ ನೀತಿ, ದೂರಗಾಮಿ ದೃಷ್ಟಿಕೋನಕ್ಕೆ ಹೊಂದಿಕೆ ಆಗುವಂತೆ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ, ನೀತಿ ಹಾಗೂ ದೃಷ್ಟಿಕೋನ ನಿಷ್ಪ್ರಯೋಜಕ ಆಗುತ್ತವೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿನ ಜನರ ಸಾಮರ್ಥ್ಯವನ್ನು ಹೆಚ್ಚಿಸಬೇಕು. ತಮ್ಮ ಪಾಲಿನ ಗುರಿಯನ್ನು ಸಾಧಿಸದಿದ್ದರೆ, ಅವರನ್ನು ಉತ್ತರದಾಯಿ ಆಗಿಸಬೇಕು. ಈ ವ್ಯವಸ್ಥೆಯ ಮೇಲೆ ನಿಗಾ ಇಡಬಲ್ಲ ಒಂಬುಡ್ಸ್‌ಮನ್‌ ಈ ಹೊತ್ತಿನ ಜರೂರು. ಜನರ ಭವಿಷ್ಯ ಆರೋಗ್ಯಕರವಾಗಿ, ಸುರಕ್ಷಿತ ಕೈಗಳಲ್ಲಿ ಇರಬೇಕು ಎಂದಾದರೆ ಇಂಥದ್ದೊಂದು ವ್ಯವಸ್ಥೆ ಬೇಕು.
 
**
 
**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT