ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್ಆ್ಯಪ್‌ನ ವಿಡಿಯೊ ಕರೆ ಸೌಲಭ್ಯ

Last Updated 22 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಇನ್‌ಸ್ಟಂಟ್‌ ಮೊಬೈಲ್ ಮಸೇಜಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವಾಟ್ಸ್ಆ್ಯಪ್‌ ಕಂಪೆನಿ ಶೀಘ್ರದಲ್ಲೇ ಭಾರತೀಯ ಬಳಕೆದಾರರಿಗಾಗಿ  ವಿಡಿಯೊ ಕಾಲಿಂಗ್‌ ಸೌಲಭ್ಯವನ್ನು ಬಿಡುಗಡೆ ಮಾಡಲಿದೆ.

ವಿಡಿಯೊ ಕಾಲಿಂಗ್‌ ರಂಗದಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಆಧಿಪತ್ಯ ಹೊಂದಿರುವ ಮೈಕ್ರೊಸಾಫ್ಟ್‌ನ ಸ್ಕೈಪ್‌, ಆ್ಯಪಲ್‌ ಕಂಪೆನಿಯ ಫೇಸ್‌ ಟೈಮ್‌ ಮತ್ತು ಇತ್ತೀಚೆಗೆ ಬಿಡುಗಡೆಯಾದ ಗೂಗಲ್‌ ಡೂ ಸೇವೆಗಳಿಗೆ ವಾಟ್ಸ್‌ಆ್ಯಪ್‌ ತೀವ್ರ ಪೈಪೋಟಿ ನೀಡುವ ನಿರೀಕ್ಷೆ ಇದೆ.

ಬಳಕೆದಾರರ ದೃಷ್ಟಿಯಿಂದ ವಾಟ್ಸ್‌ಆ್ಯಪ್‌ ಈ ಎಲ್ಲ ಕಂಪೆನಿಗಳಿಗಿಂತ ಮುಂದಿರುವುದು ಅದರ ಮಾರುಕಟ್ಟೆ ವಿಸ್ತರಣೆ ಸಾಧ್ಯತೆಯನ್ನು ಹೆಚ್ಚಿಸಿದೆ ಎನ್ನುತ್ತಾರೆ ವಿಶ್ಲೇಷಕರು.ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಇನ್ನೊಂದು ವಾರದಲ್ಲಿ ಈ ಸೌಲಭ್ಯ ಲಭಿಸಲಿದೆ. 16 ಕೋಟಿಗಿಂತಲೂ ಹೆಚ್ಚಿನ ಬಳಕೆದಾರರಿರುವ ಭಾರತದಲ್ಲೇ ವಾಟ್ಸ್‌ಆ್ಯಪ್‌ ವಿಡಿಯೊ ಕಾಲಿಂಗ್‌ ಸೇವೆ ಪ್ರಾರಂಭಿಸುತ್ತಿರುವುದು ಮತ್ತೊಂದು ವಿಶೇಷ.

ವಿಡಿಯೊ ಕಾಲಿಂಗ್‌ನ ಗುಣಮಟ್ಟ ಮೊಬೈಲ್‌  ನೆಟ್‌ವರ್ಕ್‌ ಗುಣಮಟ್ಟವನ್ನು ಆಧರಿಸಿದೆ. ಒಟ್ಟಿನಲ್ಲಿ ಧ್ವನಿ ಮತ್ತು ದೃಶ್ಯ ಆಧಾರಿತ ಸಂಭಾಷಣೆಯ ಮೊಬೈಲ್‌ ಸಂವಹನ ಕ್ಷೇತ್ರದಲ್ಲಿ ಇದು ಹೊಸ ಅಲೆಯನ್ನೇ ಸೃಷ್ಟಿಸಲಿದೆ. ಇದರಿಂದ 4ಜಿ ಮಾರುಕಟ್ಟೆ ವಿಸ್ತರಣೆಯ ಅವಕಾಶವೂ ಹೆಚ್ಚಲಿದೆ ಎಂದು ಕಂಪೆನಿ ಹೇಳಿದೆ.

ವಿಡಿಯೊ ತುಣುಕುಗಳನ್ನು ಸಂದರ್ಭಕ್ಕೆ ತಕ್ಕಂತೆ ಹೊಂದಿಸಿಕೊಳ್ಳುವ ಅವಕಾಶವೂ ಲಭ್ಯವಿದೆ ಎಂದು ಕಂಪೆನಿಯ ಮಾರುಕಟ್ಟೆ ಮುಖ್ಯಸ್ಥ ನೀರಜ್‌ ಆರೋರಾ ಹೇಳಿದ್ದಾರೆ.
ಬಳಕೆದಾರರ ಸುರಕ್ಷತೆ ಮತ್ತು ಖಾಸಗೀತನ ರಕ್ಷಣೆ ದೃಷ್ಟಿಯಿಂದ ಈಗಾಗಲೇ ಪಠ್ಯ ಮತ್ತು ಧ್ವನಿ ಸಂದೇಶದಲ್ಲಿ ಬಳಸಲಾಗುತ್ತಿರುವ ಗೂಢಲಿಫಿ ತಂತ್ರಜ್ಞಾನವನ್ನೇ ವಿಡಿಯೊ ಕಾಲಿಂಗ್‌ ಸೌಲಭ್ಯದಲ್ಲೂ ಅಳವಡಿಸಲಾಗಿದೆ.

ಈ ಸೌಲಭ್ಯಕ್ಕಾಗಿ ವಾಟ್ಸ್‌ ಆ್ಯಪ್‌ ಅಪ್ಲಿಕೇಷನ್‌ನಲ್ಲಿ  ಸ್ವಲ್ಪ ಪರಿಷ್ಕರಣೆ ಮಾಡಲಾಗಿದೆ. ಬಳಕೆದಾರ ಇದನ್ನು ಸುಲಭವಾಗಿ ಅಪ್‌ಡೇಟ್‌ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ಆ್ಯಪ್‌ ತೆರೆದಾಗ ಬಳಕೆದಾರನಿಗೆ ವಾಯಿಸ್‌ ಮತ್ತು ವಿಡಿಯೊ ಕಾಲಿಂಗ್‌ ಎಂಬ ಎರಡು ಆಯ್ಕೆ ಕಾಣಿಸುತ್ತದೆ. ಇದರಲ್ಲಿ ಬೇಕಿರುವುದನ್ನು ಆಯ್ಕೆ ಮಾಡಿಕೊಂಡು ಮುಂದುವರಿಯಬಹುದು.

ವಾಟ್ಸ್‌ ಆ್ಯಪ್‌ ಕಂಪೆನಿ ಕಳೆದ ಜೂನ್‌ನಲ್ಲಿ ಪ್ರಕಟಿಸಿದ ಅಂಕಿ ಅಂಶದಂತೆ ಪ್ರತಿದಿನ ಸುಮಾರು 1 ಕೋಟಿ ಮಂದಿ ಧ್ವನಿ ಆಧಾರಿತ ಕರೆ ಸೌಲಭ್ಯ ಬಳಸುತ್ತಿದ್ದಾರೆ.
ಆದರೆ, ವಿಡಿಯೊ ಕಾಲಿಂಗ್‌ ಸೇವೆ ಬಳಕೆಗೆ ಸಂಬಂಧಿಸಿದಂತೆ ಅಂದಾಜು ಬಳಕೆದಾರರ ಯಾವುದೇ ಅಂಕಿ ಅಂಶವನ್ನು ಕಂಪೆನಿ ಬಹಿರಂಗಪಡಿಸಿಲ್ಲ.

ಭಾರತ ಮತ್ತು ಬ್ರೆಜಿಲ್‌ನಲ್ಲಿ ವಾಟ್ಸ್‌ಆ್ಯಪ್‌ ಗರಿಷ್ಠ ಬಳಕೆದಾರರನ್ನು ಹೊಂದಿದ್ದು, ವಿಡಿಯೊ ಕಾಲ್‌ ಮಾರುಕಟ್ಟೆ ವಿಸ್ತರಣೆ ವಿಷಯಕ್ಕೆ ಬಂದರೆ ಭಾರತವೇ ನಮ್ಮ ಪ್ರಥಮ ಆಯ್ಕೆ ಎನ್ನುತ್ತಾರೆ ಆರೊರಾ.

ಭಾರತದಲ್ಲಿ ಇಂಟರ್‌ನೆಟ್‌ ಆಧರಿಸಿದ  ವಿಡಿಯೊ ಕಾಲಿಂಗ್‌  ಸೇವೆಯನ್ನು ಒದಗಿಸುವ ಹೈಕ್‌, ವೈಬರ್‌, ಲೀನ್‌ನಂತ ಕಂಪೆನಿಗಳ ಸ್ಪರ್ಧೆಯನ್ನೂ ವಾಟ್ಸ್‌ಆ್ಯಪ್‌ ಎದುರಿಸಬೇಕಿದೆ.

ಗೂಗಲ್ ಕಂಪೆನಿ ಕೂಡ ಈ ವರ್ಷದ ಆರಂಭದಲ್ಲಿ ಮೆಸೇಜಿಂಗ್‌ ಅಪ್ಲಿಕೇಷನ್‌ ಆಲೊ (Allo)ಮತ್ತು ವಿಡಿಯೊ ಕಾಲಿಂಗ್‌ ಅಪ್ಲಿಕೇಷನ್‌ ಡ್ಯೂ (Duo) ಬಿಡುಗಡೆ ಮಾಡಿತ್ತು. ಈ ಮೂಲಕ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್‌ ಸಂವಹನ ಅಪ್ಲಿಕೇಷನ್‌ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ.

ವಿಡಿಯೊ ಕಾಲಿಂಗ್‌ ಸೇವೆಯ ಬೆನ್ನಲ್ಲೇ, ವಾಣಿಜ್ಯ ಬಳಕೆಯ ಸಂದೇಶ ಸೇವೆ ಪ್ರಾರಂಭಿಸುವ ಗುರಿಯನ್ನು ವಾಟ್ಸ್‌ಆ್ಯಪ್‌ ಹೊಂದಿದೆ. ಏರ್‌ಲೈನ್ಸ್‌, ಕ್ರೆಡಿಟ್‌ ಕಾರ್ಡ್‌ ಸೇವೆ ಒದಗಿಸುವ ಕಂಪೆನಿಗಳು ಇ–ಮೇಲ್‌ ಮೂಲಕ ಗ್ರಾಹಕರ ಜತೆ ಸಂವಹನ ನಡೆಸುವ ಬದಲು ಈ ವೇದಿಕೆಯನ್ನು  ಬಳಸಿಕೊಳ್ಳಬಹುದು. ಇದು ಅಗ್ಗ,ಸರಳ ಮತ್ತು ಬಹುಪಯೋಗಿ ಎನ್ನುತ್ತಾರೆ ಆರೊರಾ.

***
ವಿಡಿಯೊ ಕರೆ ಸೌಲಭ್ಯ

* ಮೈಕ್ರೊಸಾಫ್ಟ್‌ ಸ್ಕೈಪ್‌

* ಆ್ಯಪಲ್‌  ಫೇಸ್‌ ಟೈಮ್‌ 

* ಗೂಗಲ್‌ ಡೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT