ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮೊಳಗೆ ಹೂವು ಅರಳಲಿ...

Last Updated 22 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಅದೊಂದು ಸುಂದರವಾದ ದಿನ. ಸೂರ್ಯ ತನ್ನ ಹೊಂಗಿರಣಗಳನ್ನು ಪಸರಿಸುತ್ತ ಬಾನಲ್ಲಿ ನಗುತ್ತಿದ್ದ. ನಾನು ಮರವೊಂದನ್ನು ಗಮನವಿಟ್ಟು ನೋಡುತ್ತಿದ್ದೆ. ನನ್ನ ಮನಸ್ಸು ಸ್ತಬ್ಧವಾಗಿತ್ತು. ಅದು ಆ ಮರದ ಬಗ್ಗೆ ಯಾವುದೇ ಪೂರ್ವಗ್ರಹ ಹೊಂದಿರಲಿಲ್ಲ. ಅದರ ಗುಣಗಳನ್ನು, ಅದರ ಲಾಭಗಳನ್ನು ಅಳೆಯುತ್ತಿರಲಿಲ್ಲ. ಯಾವುದೇ ಕನಸು ಕಾಣುತ್ತಿರಲಿಲ್ಲ.

ಆ ಮರದ ಹೂವುಗಳು ಮತ್ತು ಎಲೆಗಳು ಜೀವಂತ ಬಣ್ಣಗಳಿಂದ ತುಂಬಿ ಹೊಳೆಯುತ್ತಿದ್ದವು. ಅಪೂರ್ವ ಶಾಂತಿಯೊಂದು ನನ್ನನ್ನು ಆವರಿಸಿತ್ತು. ಆ ಮರವನ್ನು ನಾನು ಅಕ್ಕರೆಯಿಂದ ನೋಡುತ್ತಿದ್ದೆ.

ನಾನು ನೋಡುತ್ತಿದ್ದಂತೆಯೇ ಹೂವೊಂದು ನೆಲದ ಮೇಲೆ ಉದುರಿತು. ಅದರ ಹಿಂದೆ ಎಲೆಯೊಂದು ನಿಧಾನವಾಗಿ ತೇಲುತ್ತಾ ನೆಲಕ್ಕೆ ಬಿತ್ತು. ಇದನ್ನೆಲ್ಲ ಕಿರುಗಣ್ಣಿನಿಂದ ನೋಡಿದರೂ ನನ್ನ ಗಮನವೆಲ್ಲ ಆ ಮರದ ಮೇಲೆ ಇತ್ತು.  ಆ ಮರದ ಮೇಲೆ ನನಗೆ ಪ್ರೀತಿ ಉಕ್ಕೇರಿತು.

ಹೂವು ಅಥವಾ ಎಲೆ ಉದುರಿದ್ದಕ್ಕೆ ಅದಕ್ಕೆ ಒಂಚೂರು ನೋವಿರಲಿಲ್ಲ. ಪ್ರಶಾಂತವಾದ ಮೌನದಲ್ಲಿ ಅದು ಉಸಿರಾಡುತ್ತ ನಿಂತಿತ್ತು. ಹೊಸ ಚಿಗುರು, ಮೊಗ್ಗು, ಎಲೆಗಳನ್ನು ಅರಳಿಸುವಲ್ಲಿ ನಿರತವಾಗಿದ್ದ ಆ ಮರಕ್ಕೆ ಎಲೆ, ಹೂವು ಉದುರಿಬಿದ್ದಿದ್ದಕ್ಕೆ ಅಳುತ್ತ ಕೂರಲು ಸಮಯ ಇರಲಿಲ್ಲ.

ಇದು ನೋಡುವ ಧ್ಯಾನ
ಇಂತಹ ಧ್ಯಾನವನ್ನು ನೀವೂ ಮಾಡಿ. ನಿಮ್ಮ ಆಲೋಚನೆಗಳು ಸುಳಿದಾಡದಂತೆ ಬೆಳೆದು ನಿಂತ ಮರವನ್ನು ನೋಡಿ. ಅದರಿಂದ ಪಾಠ ಕಲಿಯಿರಿ. ಕಿಟಕಿಯಿಂದ ಒಳಬರುತ್ತಿರುವ ಸೂರ್ಯನ ಕಿರಣಗಳನ್ನೊಮ್ಮೆ ಅವಲೋಕಿಸಿ. ಅದು ಪ್ರೀತಿಯಲ್ಲದೇ ಇನ್ನೇನೂ ಅಲ್ಲ. ಅದು ನಿಮ್ಮ ಕಣ, ಕಣಗಳನ್ನೂ ಸ್ಪರ್ಶಿಸುತ್ತದೆ. ನಿಮ್ಮನ್ನು ಗುಣಮುಖರನ್ನಾಗಿ ಮಾಡುತ್ತದೆ. ಒತ್ತಡ ತಗ್ಗಿಸುತ್ತದೆ. ನರಕೋಶಗಳನ್ನು ಉತ್ತೇಜಿಸುತ್ತದೆ.

ಬೌದ್ಧಿಕತೆಯ ಪೊಳ್ಳಿಗಿಂತ ಸತ್ಯವನ್ನು ಅರಿಯುವುದು ಲೇಸು. ನಮ್ಮ ಆಕಾಂಕ್ಷೆಗಳು, ನಮ್ಮ ಭಾವನೆಗಳು, ನಮ್ಮ ಬಯಕೆಗಳು ಎಲ್ಲವೂ ಸುಳ್ಳಾಗಿರುತ್ತವೆ. ಈ ಸುಳ್ಳು ನಮ್ಮೊಳಗೆ ಅನಾರೋಗ್ಯವನ್ನು, ಸಂಘರ್ಷವನ್ನು ಹುಟ್ಟುಹಾಕುತ್ತದೆ. ನಮ್ಮ ಸಂಬಂಧಗಳಲ್ಲಿ ಹುಳಿಹಿಂಡುತ್ತದೆ. ಈ ಸಂಘರ್ಷದ ಪರಿಣಾಮವಾಗಿ ನಾವು ಹೂವು, ಎಲೆಗಳನ್ನು ಅರಳಿಸುವ ಬದಲು ಮುಳ್ಳುಗಳನ್ನು ಅರಳಿಸುತ್ತೇವೆ.

ಕಚೇರಿಯಲ್ಲಿ ಕೆಲಸವಿದೆ. ಅದನ್ನು ಮಾಡಿ ಮುಗಿಸಿ ಬಾಸ್‌ ಪ್ರಶಂಸೆ ಪಡೆಯಬೇಕು ಎನ್ನುವ ಆತುರದಲ್ಲಿ ಮಗನ ಸ್ಕೂಲ್‌–ಡೇ ಕಾರ್ಯಕ್ರಮಕ್ಕೆ ಚಕ್ಕರ್‌ ಹಾಕಬೇಡಿ. ನಾನು ಇವರೆಗೆ ಪೊಳ್ಳಿನ ಹಿಂದೆ ಬಿದ್ದಿದ್ದೆ ಎನ್ನುವುದನ್ನು ಮೊದಲು ಒಪ್ಪಿಕೊಳ್ಳಿ. ಇನ್ನು ಮುಂದಾದರೂ ಮಹತ್ವಾಕಾಂಕ್ಷೆ ತ್ಯಜಿಸಿ  ಸರಳ ಬದುಕು ಅಪ್ಪಿಕೊಳ್ಳಿ.
ಈ ಮೂರು ಸಂಗತಿಗಳನ್ನು ಅರಿತುಕೊಳ್ಳಿ

ಮಾನವ ಬದುಕಿನ ವೈಶಿಷ್ಟ್ಯ: ಮಾನವ ಬದುಕಿನ ವೈಶಿಷ್ಟ್ಯವೆಂದರೆ ವಿಶ್ವದ ಎಲ್ಲ ಅದ್ಭುತ ಸಂಗತಿಗಳನ್ನು ಅವಲೋಕಿಸುವ ಅವಕಾಶವಿರುತ್ತದೆ. ನೀವು ಯಾವುದನ್ನೂ ವಿಶ್ಲೇಷಣೆಗೆ ಹಚ್ಚಬಾರದು. ಎಲ್ಲ ಘಟನೆ, ಸಂಗತಿಗಳಿಗೂ ಸಾಕ್ಷ್ಯವಾಗಿ ನಿಲ್ಲಬೇಕು ಅಷ್ಟೇ. ಯಾವುದೋ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕುಳಿತಂತೆ ಎಲ್ಲವನ್ನೂ ಗಮನಿಸುತ್ತ ಹೋಗಬೇಕು. ಈ ಭೂಮಿಯ ಮೇಲಿನ ಎಲ್ಲ ಸೌಂದರ್ಯ, ಸೃಜನಶೀಲತೆಯನ್ನು ಅವಲೋಕಿಸಬೇಕು. ಶ್ರೀ ಶ್ರೀ ರವಿಶಂಕರ್‌ ಹೇಳುವಂತೆ ಸೂರ್ಯೋದಯ ಮತ್ತು ಸೂರ್ಯಾಸ್ತ ಅಂದರೆ ನಿಮಗೆ ಎತ್ತುವ ಆರತಿ ಇದ್ದಂತೆ.

ನಶ್ವರತೆ ಮತ್ತು ಸಾವು: ನಿತ್ಯಜೀವನದ ನಶ್ವರತೆ ಮತ್ತು ನಿಮ್ಮ ಮನೆಯ ಬಾಗಿಲಲ್ಲೇ ಇರುವ ಸಾವನ್ನು ನೆನಪಿಸಿಕೊಳ್ಳಿ. ಪ್ರತಿ ದಿನವೂ ನಿಮಗೆ ಹೊಸ ದಿನವಾಗಿರುತ್ತದೆ. ಈ ವಿಶ್ವ ನಿಮಗೆ ನೀಡಿರುವ ಉಡುಗೊರೆಯಾಗಿರುತ್ತದೆ. ದಿನದ 12 ಗಂಟೆಯೂ ನೀವು ಹೂವುಗಳನ್ನು ಅರಳಿಸಬಹುದು. ನಿಮ್ಮ ಬದುಕಿನ ಕೋಣೆಯಲ್ಲಿ ನಡೆಯುತ್ತ ಹೂವುಗಳನ್ನು, ಮೊಗ್ಗುಗಳನ್ನು ನೋಡಿ. ಕಿರಿಕಿರಿ ನೀಡಿದ್ದ ಸಂಗತಿಗಳನ್ನು ಮನಸ್ಸಿಗೆ ತಂದುಕೊಂಡು ನೋವು ಪಡಬೇಡಿ. ಮಹಾಸಂತರ ಚಿಂತನೆಗಳನ್ನು ನಿಮ್ಮದಾಗಿಸಿಕೊಂಡು ವಿಶ್ವಾಸ ಮತ್ತು ನಂಬಿಕೆಯಿಂದ ನಡೆಯಿರಿ.

ಆಲೋಚನೆಗಳ ಪರಿಣಾಮ: ನಮ್ಮ ಚಿಂತನೆಗಳ ಪರಿಣಾಮ ಮತ್ತು ಕ್ರಿಯೆ – ಸಂತರು ಇದನ್ನು ಸ್ಪಷ್ಟವಾಗಿ ವಿವರಿಸುತ್ತಾರೆ. ಈ ಜಗತ್ತಿನಲ್ಲಿರುವ ಸಂತಸವೆಲ್ಲ ಇತರರನ್ನು ಖುಷಿಯಾಗಿಡುವ ಬಯಕೆಯಿಂದ ಹುಟ್ಟಿದ್ದು. ನಾನು ಖುಷಿಯಾಗಿರಬೇಕು ಎಂಬ ಬಯಕೆಯಿಂದ ನೋವು ಹುಟ್ಟುತ್ತದೆ.

ಯಾರಿಗಾದರೂ ನೋವು ಕೊಡುವುದು ಸಲ್ಲ. ಹಾಗೆ ಯಾರಿಗಾದರೂ ನೋವಾದಲ್ಲಿ ಕ್ಷಮೆ ಯಾಚಿಸಿ. ಪ್ರೀತಿ ಮತ್ತು ಕರುಣೆ, ವಾತ್ಸಲ್ಯವನ್ನು ಎಂದೂ ಕಳೆದುಕೊಳ್ಳಬೇಡಿ.ಜನರು ನಿಮಗೆ ಅಂತಹದ್ದೇ ಪ್ರೀತ್ಯಾದರ ತೋರದಿದ್ದರೂ ನಿಮ್ಮಿಂದ ಹೊರಟ ಆ ಭಾವನೆಗಳು ನಿಮ್ಮ ಹೃದಯವನ್ನು ಮತ್ತಷ್ಟು ಮೃದುವಾಗಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT