ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ಹಾದಿಯಲ್ಲಿ ಇರಲಿ ಪ್ರೀತಿ ಶ್ರದ್ಧೆ

Last Updated 22 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಲೋಕೋ ಭಿನ್ನ ರುಚಿಃ
ಭಿನ್ನ ರೂಪ, ವಿಭಿನ್ನ ಬುದ್ಧಿ ಹಾಗೂ ಬೇರೆ ಬೇರೆ ರೀತಿಯಾಗಿ ಯೋಚಿಸುವ, ಕೆಲಸ ಮಾಡುವ ಮತ್ತು ಜೀವಿಸುವ ಮಂದಿ ಈ ಪ್ರಪಂಚದಲ್ಲಿದ್ದಾರೆ. ಪ್ರತಿಯೊಬ್ಬರಿಗೂ ಅವರದೇ ಆದ ನಿಲುವು, ಗುರಿ, ಒಲುಮೆ, ದ್ವೇಷ ಹಾಗೂ ಅಭಿಪ್ರಾಯಗಳಿರುತ್ತವೆ. ಕೆಲವರು ಹೀಗೆಯೇ ಬದುಕಬೇಕು ಎಂದು ನಿಯಮಾವಳಿಗಳನ್ನು ಹಾಕಿಕೊಂಡು ನಿಯಮಾನುಸಾರ ಬದುಕಿದರೆ, ಮತ್ತೆ ಕೆಲವರದು ಹೇಗೆ ಬದುಕಿದರೂ ನಡೆಯುತ್ತದೆ ಎನ್ನುವ ಧೋರಣೆ. ಕೆಲವರದು ಬದುಕು ನಡೆಸಿದಂತೆ ನಡೆಯೋಣ ಎಂಬ ನಿರ್ವಿಕಾರ ಭಾವ.

ಒಟ್ಟಿನಲ್ಲಿ ಎಲ್ಲರ ಜೀವನವೂ ಸಾಗುತ್ತಿರುತ್ತದೆ. ಗುರಿಯ ಅರಿವೇ ಇಲ್ಲದೆ ಸುತ್ತುವ ಗಾಣದೆತ್ತಿನಂತೆ ನಮ್ಮ ಬದುಕನ್ನು ಸವೆಸಿದರೆ, ಮನುಷ್ಯನಾಗಿ ಹುಟ್ಟಿ ಏನು ಪ್ರಯೋಜನ? ಮಾಡುವ ಕೆಲಸ ದೊಡ್ಡದಿರಲಿ, ಚಿಕ್ಕದಿರಲಿ, ಅದಕ್ಕೊಂದು ನಿರ್ದಿಷ್ಟ ಗುರಿ ಎನ್ನುವುದೊಂದು ಬೇಕು. ಆಗ ಆ ಕೆಲಸ ಪರಿಪೂರ್ಣವಾಗಿ ಯಶಸ್ಸನ್ನು ಗಳಿಸುತ್ತದೆ. ನಮ್ಮ ಲಕ್ಷ್ಯವು ನಾವು ಮಾಡುವ ಕೆಲಸದ ಮೇಲಿರಬೇಕೇ ಹೊರತು ಫಲಿತಾಂಶದಿಂದ ಸಿಗುವ ಯಶಸ್ಸಿನ ಮೇಲಲ್ಲ. ಮಾಡುವ ಕೆಲಸವನ್ನು ಪ್ರೀತಿಯಿಂದ, ಶ್ರದ್ಧೆಯಿಂದ ಮಾಡಿದರೆ, ಯಶಸ್ಸು ತಾನಾಗಿಯೇ ಹಿಂಬಾಲಿಸಿ ಬರುತ್ತದೆ.

ಆದಿಮಾನವನಿಂದ ಹಿಡಿದು ಇಂದಿನ ಪೀಳಿಗೆಯವರೆಗೂ ಮನುಷ್ಯನ ಮೂಲಭೂತ ಉದ್ದೇಶ ಹೊಟ್ಟೆಯ ಪಾಡು. ಅದಾದ ನಂತರ ಮನುಷ್ಯ ವಿಷಯಾಸಕ್ತನಾಗುತ್ತಾ ಹೋಗುತ್ತಾನೆ. ಗಮನ ಇತರ ವಸ್ತುಗಳೆಡೆಗೆ ಹರಿಯುತ್ತದೆ. ಬದುಕಿನ ಸುಖಸಾಧನಗಳ ಚಿಂತೆ, ಸಂಗಾತಿಯೆಡೆಗೆ ಗಮನ, ಯಶಸ್ಸಿನ ದಾಹ – ಹೀಗೆ ಇದು ಮುಂದುವರೆಯುತ್ತಲೇ ಹೋಗುತ್ತದೆ. ಬಯಸಿದ್ದು ಸಿಗದಿದ್ದಾಗ, ರಾಗ-ದ್ವೇಷಗಳ ಉದಯವಾಗುತ್ತದೆ.

ಎಲ್ಲ ಸಿಕ್ಕ ನಂತರ, ಅವುಗಳನ್ನು ಕಳೆದುಕೊಳ್ಳುವ ಭಯ. ಅವುಗಳ  ಭದ್ರತೆಯ ನಂತರದ್ದು ಪ್ರಾಣಭಯ. ಮಾನವನ ಗುರಿ ಇಷ್ಟಕ್ಕೆ ಮಾತ್ರ ಸೀಮಿತವಾಗಬಾರದು.ಮನುಷ್ಯನಿಗೆ ಅಗಾಧವಾದ ಯೋಚನಾಶಕ್ತಿಯಿದೆ. ಭವ್ಯವಾದ ಗುರಿಯನ್ನು ಹೊಂದುವ ಶಕ್ತಿಯಿದೆ. ಹಾಗೆಯೇ ಅದನ್ನು ಸಾಧಿಸುವ ಸಾಮರ್ಥ್ಯವೂ ಇದೆ. ಹೊಂದುವ ಧ್ಯೇಯ ಆಲೌಕಿಕದ್ದಾಗಿರಲೀ ಅಥವಾ ಲೌಕಿಕದ್ದಾಗಿರಲೀ, ಅದು ಒಳ್ಳೆಯ ಉದ್ದೇಶದಿಂದ ಕೂಡಿರಬೇಕು; ಸಂಕಲ್ಪ ಉನ್ನತ ಮಟ್ಟದಲ್ಲಿರಬೇಕು.

ಗುರಿಸಾಧನೆಯ ಹಾದಿಯಲ್ಲಿ ಬರುವ ತೊಂದರೆಗಳು ತಡೆಗಳಲ್ಲ, ಅವು ಮಾರ್ಗದರ್ಶನಗಳು. ಪರಿಸ್ಥಿತಿ ಯಾವುದೇ ಆಗಿರಲಿ, ಅದಕ್ಕೆ ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದರ ಮೇಲೆ ಅದರ ಸಾಧಕ-ಬಾಧಕಗಳು ನಿರ್ಧಾರವಾಗುತ್ತವೆ.

ನಮ್ಮ ಧ್ಯೇಯೋದ್ದೇಶಗಳು ನಡೆದು ಹೋದ ಘಟನೆಗಳಿಗೆ ಸಂಬಂಧಿಸಿದ್ದಾಗಿರಬಾರದು. ಭವಿಷ್ಯದ ಒಳಿತಿಗಾಗಿ ಹಾಗೂ ಒಳ್ಳೆಯ ಬದಲಾವಣೆಗಾಗಿ ಬದುಕು ಒಂದು ಗುರಿಯನ್ನು ಹೊಂದಬೇಕು. ಪ್ರತಿ ವ್ಯಕ್ತಿಯೂ ಹೇಗೆ ವಿಭಿನ್ನವಾಗಿರುತ್ತಾನೋ, ಹಾಗೆಯೇ ಪ್ರತಿಯೊಬ್ಬರ ಧ್ಯೇಯದಲ್ಲೂ ಗುರಿಯಲ್ಲೂ ಸಾಧನೆಯಲ್ಲೂ ಬದಲಾವಣೆಗಳು ಇದ್ದೇ ಇರುತ್ತವೆ. ಒಬ್ಬರು ಯಶಸ್ವಿಯಾದರೆಂದು ಆ ಗುರಿಯನ್ನು ಇನ್ನೊಬ್ಬರು ಅನುಸರಿಸಲಾಗುವುದಿಲ್ಲ.

ಅದು ಆಯಾ ವ್ಯಕ್ತಿಯ ಸುಪ್ತಮನಸ್ಸಿನಲ್ಲಿ ಚಿಗುರೊಡೆದು, ಹೆಮ್ಮರವಾಗಿ ಬೆಳೆದು ಫಲದ ರೂಪದಲ್ಲಿ ಹೊರಗೆ ಕಾಣಬೇಕು. ಜಾಗೃತಾವಸ್ಥೆಯಲ್ಲಿ ಸಾಧನೆಯ ಜಪ ನಿರಂತರವಾಗಿದ್ದಾಗ ಮಾತ್ರ ಅದು ಸುಪ್ತಮನಸ್ಸಿನಲ್ಲಿ ಸ್ಥಾಪಿತವಾಗಲು ಸಾಧ್ಯ. ಸಾಧನೆ ಯಾವುದೇ ಆಗಿರಲಿ, ಮೊದಲು ಅದನ್ನು ಸಾಧಿಸುವ ಛಲವಿರಬೇಕು. ಹಿಡಿದ ಛಲವನ್ನು ಪೂರ್ಣಗೊಳಿಸುವ ಮನಃಸ್ಥಿತಿಯನ್ನು ಹೊಂದಬೇಕು. ನಮ್ಮಲ್ಲಿ ನಮ್ಮ ಬಗ್ಗೆ ಭರವಸೆಯಿರಬೇಕು.

ಗುರಿಸಾಧನೆ ಯಾವ ರೂಪದ್ದಾದರೂ ಆಗಿರಬಹುದು. ಉದ್ದೇಶಿತ ಹಾದಿಯಲ್ಲಿ ನೆಡೆಯುವಾಗ ಮೊದಲ ಹೆಜ್ಜೆ ಬಹಳ ಮುಖ್ಯ. ತಪ್ಪು ಹೆಜ್ಜೆ ಇಟ್ಟರೆ ಸಾಗುವ ದಿಕ್ಕೇ ಬದಲಾಗಿಬಿಡುತ್ತದೆ. ದೂರದಲ್ಲಿ ಬೆಟ್ಟವೊಂದು ಕಾಣುತ್ತಿದೆ ಎಂದುಕೊಳ್ಳೋಣ. ಆ ಬೆಟ್ಟದ ತುದಿಯನ್ನು ತಲುಪಲು, ಅದರ ಬುಡದಲ್ಲಿರುವ ಮೊದಲ ಮೆಟ್ಟಿಲನ್ನು ಗುರುತಿಸುವುದು ಬಹಳ ಮುಖ್ಯ. ಮೊದಲ ನಡೆ ಸರಿ ಇಲ್ಲದಿದ್ದರೆ, ಸಾಧನೆ ಎಷ್ಟೇ ಅಮೋಘವಾದುದಾದರೂ ಗುರಿ ಮುಟ್ಟಲು ಸಾಧ್ಯವಿಲ್ಲ.

ಧ್ಯೇಯವಿಲ್ಲದ ಜೀವನ ನಿಂತ ನೀರಿನಂತಿರುತ್ತದೆ. ನಿಂತ ನೀರು, ಇರುವಷ್ಟು ಜಾಗದಲ್ಲೇ ತುಂಬಿ, ತುಳುಕಿ, ಬತ್ತಿ ಹೋಗುತ್ತದೆ. ಬದುಕು ಹರಿಯುವ ನೀರಾಗಬೇಕು, ಹರಿದು ಸಾಗರವನ್ನು ಸೇರಿದಾಗಲೇ ಆ ನೀರಿಗೆ ಸಾರ್ಥಕತೆ. ಕೆಲವೊಮ್ಮೆ ಸಾಧನೆಯ ಹಾದಿಯಲ್ಲಿ ತೊಂದರೆಗಳುಂಟಾದಾಗ, ಅಂದುಕೊಂಡಿರುವ ಗುರಿಯನ್ನು ಬದಲಿಸಬೇಡಿ.ಬದಲಿಗೆ ಸಾಧಿಸುತ್ತಿರುವ ಕ್ರಮವನ್ನು ಬದಲಿಸಿ.

ಬದುಕಿನಲ್ಲಿ ಯಾವುದಾದರೂ ವಸ್ತು, ವಿಷಯ ಅಥವಾ ಸಾಧನೆಯ ಬಗ್ಗೆ ಒಲವು ತೋರಿದಾಗ, ಅದರ ಬಗ್ಗೆಯೇ ಯೋಚಿಸತೊಡಗುತ್ತೇವೆ. ಸತತವಾಗಿ ವಿಚಾರ ಮಾಡುವುದರಿಂದ ಹಾಗೂ ಅದೇ ಜೀವನದ ಗುರಿಯಾದಾಗ, ಯೋಚನೆ ಕಾರ್ಯರೂಪಕ್ಕೆ ಬರುತ್ತದೆ.

ಅರಿತೋ ಅರಿಯದೆಯೋ ಇಲ್ಲಿ ‘ಆಕರ್ಷಣೆಯ ತತ್ವ’ (ಲಾ ಆಫ್ ಅಟ್ರಾಕ್ಷನ್) ಕೆಲಸ ಮಾಡತೊಡಗುತ್ತದೆ. ನಮ್ಮ ಮನಸ್ಸಿನಲ್ಲಿ ನೆಡೆಯುವ ಯೋಜನೆಗಳಿಗೆ ಯಾರ ಹಂಗೂ ಇಲ್ಲ. ಉದ್ದೇಶಿತ ಗುರಿ ಸಂದಿಗ್ಧತೆಗೆ ಸಿಲುಕಬಾರದು. ಧ್ಯೇಯದ ಉದ್ದೇಶ ಕವಲುದಾರಿಯಲ್ಲಿರಬಾರದು. ಉದ್ದೇಶಕ್ಕೆ ಮಿತಿಯಾಗಲೀ, ಸರಹದ್ದಾಗಲೀ ಇರಬಾರದು. ಗಡಿ ಹಾಕಿದ ಗುರಿ ಯಾವಾಗಲೂ ಅಡೆ-ತಡೆಗಳಿಂದ ಕೂಡಿರುತ್ತದೆ. ಗುರಿಯ ಎಲ್ಲೆ ಆಕಾಶದಷ್ಟು ಎತ್ತರವಾಗಿರಬೇಕು. ಮನಃಸಂಕಲ್ಪದ ತರುವಾಯ ಕಾರ್ಯಪ್ರವೃತ್ತರಾಗಬೇಕು.

ಜೀವನದಲ್ಲಿ ಪೂರ್ವಸಿದ್ಧತೆ ಫಲದಾಯಕ ಬಾಳ್ವೆಗೆ ಕೀಲಿ ಕೈ ಇದ್ದಂತೆ. ಭವಿಷ್ಯದ ಈ ಯೋಜನೆಗಳು ಅಥವಾ ಗುರಿಗಳು ಮುಂಬರುವ ಜೀವನವನ್ನು ಎದುರಿಸಲು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಿದ್ಧಗೊಳಿಸುತ್ತವೆ. ಉದಾಹರಣೆಗೆ, ಒಂದು ಪುಸ್ತಕವನ್ನು ಓದಲು ಶುರು ಮಾಡಿದ ನಂತರ ಅದನ್ನು ಒಂದು ವಾರದಲ್ಲಿ ಓದಿ ಮುಗಿಸುವ ಸಂಕಲ್ಪ ಮಾಡಿರುತ್ತೇವೆ ಎಂದು ಕೊಳ್ಳೋಣ.

ಓದುತ್ತಾ ಹೋದಂತೆ, ಉಳಿದ ಪುಟಗಳ ನೆರವಿನಿಂದ ಇನ್ನೆಷ್ಟು ದಿನಗಳಲ್ಲಿ ಓದಿ ಮುಗಿಸಬಹುದೆಂಬ ಅಂದಾಜು ನಮಗಾಗುತ್ತದೆ. ಅದರಂತೆ ಓದಿ ಮುಗಿಸುತ್ತೇವೆ. ಈ ರೀತಿಯ ನಿಶ್ಚಿತ ಏರ್ಪಾಡನ್ನು ಮಾಡಿಕೊಳ್ಳದೇ ಹೋದಲ್ಲಿ ಆ ಪುಸ್ತಕವನ್ನು ತಿಂಗಳುಗಳು ಕಳೆದರೂ ಓದುತ್ತಲೇ ಇರುತ್ತೇವೆ ಅಥವಾ ಓದಿದರಾಯಿತು ಎಂಬ ನಿರಾಸಕ್ತಿಯ ಭಾವ ನಮ್ಮನ್ನಾವರಿಸಿಬಿಡುತ್ತದೆ.

ಹೀಗೆ ಉದ್ದೇಶ ಚಿಕ್ಕದಾಗಲೀ ಅಥವಾ ದೊಡ್ಡದಾಗಿರಲೀ ಗುರಿಯೆನ್ನುವುದೊಂದು ಇದ್ದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಗುರಿಯಿಲ್ಲದ ಜೀವನ ಯಾವುದೇ ಏರಿಳಿತಗಳಿಲ್ಲದ ಯಾಂತ್ರಿಕ ಬದುಕಾಗುತ್ತದೆ. ಯಾಂತ್ರಿಕ ಬದುಕು ಆಸಕ್ತಿಯಿಲ್ಲದ ನೀರಸ  ಜೀವನವಾಗುತ್ತದೆ. ಧ್ಯೇಯೋದ್ದೇಶದ ಮತ್ತೊಂದು ಮಹತ್ವದ ಪ್ರಯೋಜನ ಜೀವನೋತ್ಸಾಹ.

ಗುರಿಸಾಧನೆಯ ಹಾದಿಯಲ್ಲಿ ಸಾಗುತ್ತಾ ಸಾಗುತ್ತಾ ಜೀವನದಲ್ಲಿ ಚೈತನ್ಯಶಕ್ತಿ ಅದಮ್ಯವಾಗಿ ಹೆಚ್ಚುತ್ತಾ ಹೋಗುತ್ತದೆ. ಗುರಿಸಾಧನೆಯ ನಿರ್ಣಾಯಕ ಏರ್ಪಾಟು ನಮ್ಮ ಕನಸುಗಳ ಬುನಾದಿಯಾಗುತ್ತದೆ. ನಾವು ನಮ್ಮ ವ್ಯಾಪ್ತಿ ಕ್ಷೇತ್ರವನ್ನು ಮೀರಿದ ಗುರಿಯನ್ನು ಹೊಂದಿದಾಗ ಮಾತ್ರ, ಆಗಾಗ್ಗೆ ನಮ್ಮ ಪರಿಮಿತಿಯಲ್ಲಾಗುವ ಹತಾಶೆ, ನಿರಾಶೆಗಳು ನಮ್ಮಿಂದ ದೂರಾಗಲು ಸಾಧ್ಯ.

ಗುರಿಸಾಧನೆಗಾಗಿ ತೆಗೆದುಕೊಳ್ಳುವ ಸಮಯ ಎಷ್ಟಾದರೂ ಆಗಲಿ, ಫಲಿತಾಂಶ ಮುಖ್ಯ. ಸಮಯ ಅದರಷ್ಟಕ್ಕೆ ಅದು ಹೋಗುತ್ತಿರುತ್ತದೆ. ಸೋಲೊಪ್ಪಿಕೊಳ್ಳದೆ ಮತ್ತೆ ಮತ್ತೆ ಪ್ರಯತ್ನಿಸಿದಾಗ ಮಾತ್ರ ಗುರಿಸಾಧನೆ ಸಾಧ್ಯ. ಅರಿವಿನ ಹಸಿವು ಮತ್ತು ಭರವಸೆಯಿದ್ದಲ್ಲಿ ಎಂಥ ಧ್ಯೇಯವನ್ನಾದರೂ ಸಾಧಿಸಬಹುದು. ಈ ಸಾಧನೆ ನಮ್ಮ ಜಯ ಮಾತ್ರವಲ್ಲ, ಇದು ಬೇರೆಯವರಿಗೂ ಮಾದರಿಯಾಗುತ್ತದೆ.

ಸಾಧನೆಯ ಹಾದಿಯಲ್ಲಿ ಬರುವ ಎಲ್ಲ ಅಡೆ-ತಡೆಗಳು, ನಷ್ಟಗಳನ್ನೆಲ್ಲ ಮೀರಿ ನಡೆದಾಗ ವಿಜಯಮಾಲೆ ನಮ್ಮ ಕೊರಳನ್ನಲಂಕರಿಸುತ್ತದೆ. ಉದ್ದೇಶಿತ ಹಾದಿಯಲ್ಲಿ ಬರುವ ನಮಗಿಷ್ಟವಾದ ಸವಾಲುಗಳನ್ನು ಮಾತ್ರ ಸ್ವೀಕರಿಸದೆ, ಎಲ್ಲ ಪಂಥಗಳನ್ನೂ ಅಂಗೀಕರಿಸಿದರೆ ಜಯ ಕಟ್ಟಿಟ್ಟ ಬುತ್ತಿ.    

ಬಾಳಿನಲ್ಲಿ ಗುರಿ ಯಾವಾಗಲೂ ದೊಡ್ಡದಾಗಿರಲಿ. ಸಾಧನೆಯ ಮಹತ್ವಾಕಾಂಕ್ಷೆಯ ಬಗ್ಗೆ ಭಯ ಬೇಡ. ಸಾಧನೆಯ ಪ್ರತಿಯೊಂದು ಮೆಟ್ಟಿಲನ್ನೂ ಹೆಮ್ಮೆಯಿಂದ ಹತ್ತಿದಲ್ಲಿ ಗುರಿ ಸಾಧನೆಯ ಶಿಖರವೇರುವುದರಲ್ಲಿ ಯಾವುದೇ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT