ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ತಟ್ಟೆ ಉದ್ಯಮದ ಯಶೋಗಾಥೆ

Last Updated 22 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಏನಾದರೂ ಸಾಧಿಸಬೇಕೆಂದರೆ ಮೊದಲು ಕನಸುಗಳಿರಬೇಕು. ಅಂತಹ ಕನಸುಗಳನ್ನು ನನಸಾಗಿಸಲು ದೃಢ ಸಂಕಲ್ಪದಿಂದ ದಿಟ್ಟ  ಹೆಜ್ಜೆ ಇಟ್ಟರೆ, ಎದುರಾಗುವ ಸಂಕಷ್ಟಗಳನ್ನೆಲ್ಲ ಸಮರ್ಥವಾಗಿ ಎದುರಿಸಿ ಸಾಧನೇಯ ಮೆಟ್ಟಿಲುಗಳನ್ನು ಏರಬಹುದು. ಇದಕ್ಕೆ  ಉದ್ಯಮಿ ಅರವಿಂದ ವಲ್ಲಿ ಅವರ ಯಶೋಗಾಥೆ ಇನ್ನೊಂದು ಉದಾಹರಣೆಯಾಗಿದೆ.

ಬಿ.ಕಾಂ,  ಉದ್ಯಮದ ಆಡಳಿತದಲ್ಲಿ (ಹಣಕಾಸು) ಸ್ನಾತಕೋತ್ತರ ಡಿಪ್ಲೊಮಾ, ಮಾನವ ಸಂಪನ್ಮೂಲ ನಿರ್ವಹಣೆ ವಿಷಯದಲ್ಲಿ ಡಿಪ್ಲೊಮಾ ಮಾಡಿರುವ ಇವರು ಆರಂಭದಲ್ಲಿ ಬಹುರಾಷ್ಟ್ರೀಯ  ಕಂಪೆನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. 

ಉದ್ಯೋಗಕ್ಕಾಗಿ  ಗಂಟೆಗಟ್ಟಲೆ ಬಸ್‌ನಲ್ಲಿ ಪ್ರಯಾಣ ಮಾಡಬೇಕಾಗಿ ಬಂದು ಆರೋಗ್ಯ ಹದಗೆಡತೊಡಗಿದಾಗ 2008ರಲ್ಲಿ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟರು. ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದು ಬೇಸರ ಎನಿಸಿದಾಗ ಸ್ವ ಉದ್ಯೋಗದತ್ತ  ಮನಸ್ಸು ವಾಲತೊಡಗಿತು. ಆದರೆ, ಯಾವ ಉದ್ಯೋಗ ಹಮ್ಮಿಕೊಳ್ಳಬೇಕು ಎನ್ನುವುದು ಸ್ಪಷ್ಟವಾಗಿರಲಿಲ್ಲ. ಏನು ಮಾಡಬೇಕು ಎನ್ನುವ ಗೊಂದಲದಲ್ಲಿ ಇದ್ದರು.  2009 ಮಾರ್ಚ್ ತಿಂಗಳಲ್ಲಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಅಡಿಕೆ ಹಾಳೆಯಿಂದ ವಿವಿಧ ಬಗೆಯ ತಟ್ಟೆಗಳನ್ನು ಮಾಡುವ ಲೇಖನವು  ನೀಡಿದ ಸ್ಫೂರ್ತಿಯು ಅರವಿಂದ ವಲ್ಲಿ ಅವರನ್ನು ಆ ದಿಕ್ಕಿನಲ್ಲಿ ಅಲೋಚಿಸುವಂತೆ ಮಾಡಿತು.

ಇವರು ಅಡಿಕೆ ಹಾಳೆಯ ತಟ್ಟೆ ಮತ್ತು ಬಟ್ಟಲುಗಳನ್ನು ತಯಾರಿಸಲು ಹೊರಟಾಗ ಔತಣ ಕೂಟಗಳಲ್ಲಿ ಪ್ಲಾಸ್ಟಿಕ ಪ್ಲೇಟುಗಳ ಬಳಕೆಯೇ ಹೆಚ್ಚಿತ್ತು. ಮಾರುಕಟ್ಟೆಯಲ್ಲಿ ಅಡಿಕೆಹಾಳೆಯ ತಟ್ಟೆಗಳು ಲಭ್ಯ ಇದ್ದರೂ, ತಯಾರಕರು ಅವುಗಳನ್ನು ಮಾರಾಟ ಮಾಡಲು ಹೆಣಗುತ್ತಿದ್ದರು. ಕೈಗೆಟುಕುವ ಬೆಲೆಯಲ್ಲಿ ಸಿಗುವ ಉಂಡು ಬೀಸಾಡಬಹುದಾದ ಪ್ಲಾಸ್ಟಿಕ ಪ್ಲೇಟುಗಳ ಬಳಕೆಯೇ ಹೆಚ್ಚಿತ್ತು. 
 
ಮಣ್ಣಿನಲ್ಲಿ ಸುಲಭವಾಗಿ ನಾಶವಾಗದ, ಬೆಂಕಿ ಹಚ್ಚಿ ಸುಟ್ಟರೆ  ಪರಿಸರ ಮಾಲಿನ್ಯಕ್ಕೆ ಕಾರಣವಾಗುವ   ಪ್ಲಾಸ್ಟಿಕ ಪ್ಲೇಟುಗಳಿಗೆ ಬದಲಿ ಉತ್ಪನ್ನಕ್ಕೆ ಬೇಡಿಕೆಯೂ ಇತ್ತು. ಹೀಗಾಗಿ ಆ ದಿನಗಳಲ್ಲಿ   ಸುಲಭದಲ್ಲಿ ಸಿಗುವ ಅಡಿಕೆ ಹಾಳೆಗಳಿಂದಲೇ ಸ್ವ ಉದ್ಯೋಗ ಶುರು ಮಾಡಲು ತೀರ್ಮಾನಿಸಿದರು. 

‘ಸ್ವ ಉದ್ಯೋಗ’ ಮಾಡಲು ತೀರ್ಮಾನಿಸಿದಾಗ  ಅಡಿಕೆ ಹಾಳೆಯ ತಟ್ಟೆಗಳನ್ನೇ ತಯಾರಿಸಲು ಏಕೆ ನಿರ್ಧರಿಸಿದರು. ಆರೇಳು  ವರ್ಷಗಳ ಹಿಂದೆ ಜನರಿಗಿನ್ನೂ ಇದು ಹೊಸ ವಿಷಯ, ಕಾಗದದ ಪ್ಲೇಟುಗಳಿಗೆ ಹೋಲಿಸಿದರೆ ಅಡಿಕೆ ಹಾಳೆಯ ತಟ್ಟೆಗಳ ಬೆಲೆಯೂ ದುಬಾರಿಯಾಗಿತ್ತು. ಮಾರುಕಟ್ಟೆಯಲ್ಲಿ ಇವುಗಳಿಗೆ ಬೇಡಿಕೆ ಕುದುರಬಹುದು ಎಂಬ ದೃಢ ವಿಶ್ವಾಸವೇನೂ ಅವರಿಗೆ ಇದ್ದಿರಲಿಲ್ಲ.  ಆದರೂ ದೃಢ ನಿಶ್ಚಯದಿಂದ ಮುಂದೆ ಹೆಜ್ಜೆ ಇಟ್ಟಿದ್ದರು.

‘ಪರಿಸರ ಸ್ನೇಹಿ ತಟ್ಟೆಗಳ ತಯಾರಿಕೆಗೆ  ಬೇಕಾಗುವ ಕಚ್ಚಾವಸ್ತು ಸುಲಭದಲ್ಲಿ ಸಿಕ್ಕರೆ,  ಪ್ಲಾಸ್ಟಿಕ ಸರಕುಗಳಿಗೆ ಬದಲಿ ವ್ಯವಸ್ಥೆ ಆಗುವುದಾದರೆ ಅಡಿಕೆ ಹಾಳೆಯ ತಟ್ಟೆಗಳನ್ನೇ ತಯಾರಿಸುವುದು ಒಳಿತು ಎಂಬ ತೀರ್ಮಾನಕ್ಕೆ ಬಂದಿದ್ದೆ. ಈ ಉತ್ಪನ್ನಗಳಿಗೆ ಮುಂದೊಂದು ದಿನ ಖಂಡಿತವಾಗಿಯೂ ಜನಪ್ರಿಯವಾಗುವ ವಿಶ್ವಾಸ ನನಗೆ ಇತ್ತು’ ಎಂದು ವಲ್ಲಿ ಅವರು ಹೇಳುತ್ತಾರೆ.

ಇವರು ಅಡಿಕೆ ಹಾಳೆಯ ತಟ್ಟೆ ಮತ್ತು  ಬಟ್ಟಲುಗಳ ತಯಾರಿಕೆಯ ಸ್ವ ಉದ್ಯೋಗ ಮಾಡಲು ತೀರ್ಮಾನಿಸಿ ಮುನ್ನಡೆದಾಗ ಅನುಭವದ ಕೊರತೆಯಿಂದಾಗಿ ಕತ್ತಲಲ್ಲಿ ದಾರಿ ಹುಡುಕಿದಂತಾಯಿತು.  ಆಗ ‘ಕರ್ನಾಟಕ ಮಹಿಳಾ ಸ್ವ ಉದ್ಯೋಗಿಗಳ ಒಕ್ಕೂಟ’ವು ಮಾರ್ಗದರ್ಶಿಯಂತೆ ಸಹಾಯಕ್ಕೆ ಬಂದಿತು.

ಈ ಒಕ್ಕೂಟವು ಸ್ವ ಉದ್ಯೋಗ ಶುರು ಮಾಡಲು ಹೊರಟ ಮಹಿಳೆಯರಿಗೆ ಮಾರ್ಗದರ್ಶನ ಮಾಡುವುದಲ್ಲದೇ ಕೈಗಾರಿಕೆಗೆ ಬೇಕಾಗುವ ಕಚ್ಚಾವಸ್ತುಗಳ ಖರೀದಿ ಮತ್ತು ಸಿದ್ಧ ವಸ್ತುಗಳನ್ನು ಮಾರಾಟ  ಮಾಡಲೂ ಸಹಾಯ ಮಾಡುತ್ತದೆ. ಸಣ್ಣ ಕೈಗಾರಿಕೆ ಶುರುಮಾಡಲು ‘ಸಣ್ಣ ಕೈಗಾರಿಕೆ  ಸರ್ಟಿಫಿಕೇಟ’ (SSI), ವ್ಯಾಟ್‌  ನೋಂದಣಿ, ಬ್ಯಾಂಕ್‌ನಿಂದ ಸಾಲ ಮತ್ತಿತರ ಪೂರ್ವಭಾವಿ ಸಿದ್ಧತೆಗಳೂ ಬೇಕಾಗುತ್ತವೆ.

ಈ ಎಲ್ಲಾ ವ್ಯವಸ್ಥೆಗಳನ್ನು  ಮಾಡಿಕೊಂಡ  ಇವರು  2010ರ  ಮಾರ್ಚ್‌ ತಿಂಗಳಲ್ಲಿ  ತಲಘಟ್ಟಪುರದಲ್ಲಿ ‘ನಮ್ಮನೆ ಇಂಡಸ್ಟ್ರೀಸ್‌’ ಹೆಸರಿನಲ್ಲಿ ಅಡಿಕೆ ಹಾಳೆಗಳ ತಟ್ಟೆ ಮತ್ತು ಬಟ್ಟಲು ತಯಾರಿಕೆಗೆ ಚಾಲನೆ ನೀಡಿದರು.

ಈ ಗೃಹ ಕೈಗಾರಿಕೆ   ಶುರುಮಾಡಿದಾಗ ಸಹಾಯಕ್ಕೆ ಬಂದ   ಜಿಲ್ಲಾ ಉದ್ಯಮ ಕೇಂದ್ರದ ಮಾರ್ಗದರ್ಶನ, ಪ್ರಧಾನ ಮಂತ್ರಿ ಉದ್ಯೋಗ ಯೋಜನೆಯ  ಅಳವಡಿಕೆ, ಸಾಲ ಸೌಲಭ್ಯ ಮಂಜೂರು ಮಾಡಿದ   ಪಂಜಾಬ್‌ ಆ್ಯಂಡ್‌ ಸಿಂಧ್‌ ಬ್ಯಾಂಕ್ ಮತ್ತು ಸ್ವ ಉದ್ಯೋಗದ ತರಬೇತಿ ಕೊಟ್ಟ ಸಂಸ್ಥೆಯನ್ನು ಅವರು ಸ್ಮರಿಸಿಕೊಳ್ಳುತ್ತಾರೆ.

ಕೈಗಾರಿಕೆಗೆ ಬೇಕಾಗುವ ಕಚ್ಚಾವಸ್ತುಗಳಾದ ಅಡಿಕೆ ಹಾಳೆಯನ್ನು ವಿಶಾಲವಾದ ಅಡಿಕೆ ತೋಟಗಳಿರುವ ಊರಾದ ತುಮಕುರು, ಶಿವಮೊಗ್ಗದಿಂದ ತರಿಸುತ್ತಿದ್ದಾರೆ. ಆದರೆ ಆಗಾಗ ಕೈಕೊಡುವ ವಿದ್ಯುತ್ ಮತ್ತು ಯಂತ್ರಗಳ ದುರಸ್ತಿ, ಕೆಲಸದವರ ಅನಧಿಕೃತ ರಜೆ, ಕೆಲಸದವರ ಬದಲಾವಣೆ ತಲೆನೋವು ತರತೊಡಗಿತು. ಇದರಿಂದ ಉತ್ಪಾದನೆಯಲ್ಲಿ ಏರು ಪೇರು ಉಂಟಾಯಿತು.

ತಟ್ಟೆ ಮತ್ತು ಬಟ್ಟಲುಗಳ ತಯಾರಿಕೆಯ ವಿಧಾನವನ್ನು ವಿವರಿಸುವ ಅವರು, 15-ರಿಂದ 20 ನಿಮಿಷ ನೀರಿನಲ್ಲಿ ನೆನೆಸಿ, ಬ್ರಷ್‌ನಿಂದ ತಿಕ್ಕಿ ತೊಳೆದು,  ಸುಮಾರು ಅರ್ಧ ಗಂಟೆ ಒಣಗಿಸಬೇಕು. ಅರ್ಧ ಒಣಗಿದ ಹಾಳೆಯನ್ನು ನಿರ್ದಿಷ್ಟ ಆಕಾರ ಕೊಡುವ ಯಂತ್ರದಲ್ಲಿಟ್ಟಾಗ  ತಟ್ಟೆ ಮತ್ತು ಬಟ್ಟಲುಗಳು ತಯಾರಾಗುತ್ತವೆ. ಅವುಗಳನ್ನು ಸ್ವಲ್ಪ ಹೊತ್ತು ಒಣಗಲು ಬಿಟ್ಟು ಪ್ಯಾಕ್‌ ಮಾಡಿದರೆ ಉತ್ಪನ್ನವು ಮಾರುಕಟ್ಟೆಗೆ ಹೋಗಲು ಸಿದ್ಧವಾಗಿರುತ್ತದೆ’ ಎಂದು ಹೇಳುತ್ತಾರೆ.

ನಾಲ್ಕೈದು ಜನರು ಕೆಲಸದವರಿದ್ದರೂ ಇವರೇ  ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಿದ  ನಂತರವೇ ಪ್ಯಾಕ್‌ ಮಾಡಲಾಗುವುದು.ಸದ್ಯಕ್ಕೆ ನಾಲ್ಕು ವಿಧದ  ತಟ್ಟೆಗಳು ಹಾಗೂ ಮೂರು ವಿಧದ ಬಟ್ಟಲುಗಳನ್ನು ತಯಾರಿಸಲಾಗುತ್ತಿದೆ. ಎಲ್ಲಾ ಕೈಗಾರಿಕೆಯಲ್ಲೂ ಕಸದ ವಿಲೆವಾರಿ ಒಂದು ದೊಡ್ಡ ತಲೆನೋವಾಗಿರುತ್ತದೆ, ಆದರೆ ಇಲ್ಲಿ ಕೈಗಾರಿಕೆಯ ಕಸ ಹಸುಗಳಿಗೆ ಉತ್ತಮ ಆಹಾರವಾಗಿರುವುದರಿಂದ ಅದರ ವಿಲೇವಾರಿ ಸಮಸ್ಯೆಯೂ ಇಲ್ಲಿ ಎದುರಾಗುವುದಿಲ್ಲ.
 
ಮೊದಲಿಗೆ  ಯಾವುದೇ ರಾಸಾಯನಿಕ ಪದಾರ್ಥ ಬಳಸಿ  ತಯಾರಿಸಿದ,  ಮೈಕ್ರೊ ಓವನ್‌ನಲ್ಲಿಟ್ಟು ಬಿಸಿ ಮಾಡಬಹುದಾದ  ತಟ್ಟೆ ಮತ್ತು ಬಟ್ಟಲುಗಳ ಉಪಯೋಗ ಮತ್ತು ಗುಣ ಮಟ್ಟದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟು ಮಾರಾಟ ಮಾಡಬೇಕಾಗುತ್ತಿತ್ತು. ಈಗ ಆ ತೊಂದರೆ ಇಲ್ಲದಿದ್ದರೂ ಮಾರುಕಟ್ಟೆಯಲ್ಲಿ ಹಲವಾರು ತಯಾರಕರಿದ್ದಾರೆ.

ಇದರಿಂದಾಗಿ ಸ್ಪರ್ಧೆಯೂ ಜಾಸ್ತಿಯಾಗಿದೆ. ಮೊದಲು ಅಡಿಕೆ ಹಾಳೆಯೊಂದಕ್ಕೆ 25ಪೈಸೆಯಂತೆ ಸಿಗುತ್ತಿದ್ದರೆ, ಹಾಳೆಯ ಉಪಯೋಗ ಗೊತ್ತಾಗುತ್ತಿದ್ದಂತೆ ಬೆಲೆ ಎರಡು ರೂಪಾಯಿಗಳಿಗೆ ಏರಿದೆ. 2013ರಲ್ಲಿ ಕೈಗಾರಿಕೆಯನ್ನು ತಲಘಟ್ಟಪುರದಿಂದ ಬನಶಂಕರಿ 6ನೇ ಹಂತಕ್ಕೆ ಸ್ಥಳಂತರಿಸಿದಾಗ ತೊಂದರೆಗಳ ಸರಮಾಲೆಯೇ ಎದುರಾಯಿತು,

ಹೊಸ ಜಾಗವು ಬೆಂಗಳೂರು ಅಭಿವ್ರದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿದ್ದು,  ಟ್ರೇಡ್‌ ಲೈಸೆನ್ಸ್‌  ಸಿಗಲಿಲ್ಲ. (ಈಗ ಸಣ್ಣ ಕೈಗಾರಿಕೆಗೆ ಟ್ರೇಡ್‌ ಲೈಸೆನ್ಸ  ರದ್ದುಪಡಿಸಿದ್ಧಾರೆ), ಬೆಂಗಳೂರು ವಿದ್ಯುತ್‌ ಸರಬರಾಜು  ಮಂಡಳಿಯು  (ಬೆಸ್ಕಾಂ)   ವಿದ್ಯುತ್ತನ್ನು ವಾಣಿಜ್ಯ ದರದಲ್ಲಿ ಪೂರೈಸಿತು.  ವಾಣಿಜ್ಯ ದರದ ವಿದ್ಯುತ್‌ನಿಂದಾಗಿ ಉದ್ಯಮದ ಲಾಭ  ಕಡಿಮೆಯಾಗತೊಡಗಿತು.

ಕಷ್ಟ ಪಟ್ಟು ಶುರುಮಾಡಿದ ಕೈಗಾರಿಕೆ ಸ್ಥಗಿತಗೊಳಿಸುವ ಪರಿಸ್ಥಿತಿ  ಎದುರಾದಾಗ ಕೈಗಾರಿಕೆಗೆ ಸೌರ ವಿದ್ಯುತ್‌   ಉಪಯೋಗಿಸಲು ನಿರ್ಧರಿಸಿದರು, ತಮ್ಮ ಮನೆಯ ಚಾವಣಿಯ ಮೇಲೆಯೇ 20 ಸೌರ ಫಲಕಗಳನ್ನು ಅಳವಡಿಸಿ  ಸೌರ ವಿದ್ಯುತ್ತನ್ನು ಉತ್ಪಾದಿಸಿದರು. ಇದಕ್ಕಾಗಿ ಅಂದಾಜು  ರೂ  7.5 ಲಕ್ಷ ಖರ್ಚಾದರೂ, ರೂ 1.1 ಲಕ್ಷದ ಸಹಾಯಧನ ಸಿಕ್ಕಿತ್ತು. ಜತೆಗೆ   ಮನೆ ಮತ್ತು ಉದ್ಯಮಕ್ಕೆ ಉಪಯೋಗಿಸಿ ಹೆಚ್ಚಾದ ವಿದ್ಯುತ್ತನ್ನು  ‘ಬೆಸ್ಕಾಂ’ಗೆ ಮಾರಾಟ ಮಾಡತೊಡಗಿದರು. ಗೃಹ ಕೈಗಾರಿಕಾ ಘಟಕಕ್ಕೆ ಸಂಪೂರ್ಣ ಸೌರ ವಿದ್ಯುತ್ತನ್ನು ಉಪಯೋಗಿಸಿದ ರಾಜ್ಯದ ಪ್ರಥಮ ಮಹಿಳೆ ಎನ್ನುವ ಹೆಗ್ಗಳಿಕೆಗೆ   ಇವರು ಪಾತ್ರರಾದರು.

‘ನಮ್ಮನೆ ಇಂಡಸ್ಟ್ರೀಸ್‌’ನಲ್ಲಿ   ತಯಾರಾದ  ತಟ್ಟೆ ಮತ್ತು ಬಟ್ಟಲುಗಳು ಕರ್ನಾಟಕದಲ್ಲಿ ಮಾತ್ರವಲ್ಲದೆ ಮುಂಬೈ, ಪುಣೆ, ಔರಂಗಾಬಾದ, ನಾಗಪುರ, ಕೋಲ್ಕತ್ತ ನಗರಗಳಿಗೂ ತಲುಪುತ್ತಿದೆ.

‘ಸ್ವ ಉದ್ಯೋಗ ಮಾಡುವುದಾದರೆ, ‘ಪ್ರಧಾನ ಮಂತ್ರಿ ಸ್ವ ಉದ್ಯೋಗ ಕಾರ್ಯಕ್ರಮ’ದಿಂದ ಸಾಲ, ಸಹಾಯಧನ, ಕೆನರಾ  ಬ್ಯಾಂಕ್‌ನಿಂದ ಮಹಿಳಾ ಉದ್ಯಮಿಗಳಿಗಾಗಿ ಇರುವ ಸಂಚಾರಿ ‘ನಮ್ಮೂರ ಸಂತೆ’  ಮಾರಾಟ ಮಳಿಗೆ,  ಉದ್ಯಮಿಗಳಿಗಾಗಿ ನೀಡಲಾಗುವ 15 ದಿನಗಳ ‘ಸ್ವ ಉದ್ಯೋಗದ ತರಬೇತಿ’, ‘ಲಘು ಉದ್ಯೋಗ ಭಾರತಿ’ಯಿಂದ ಮಾರ್ಗದರ್ಶನ ಪಡೆಯಬಹುದಾಗಿದೆ.

ಸಣ್ಣ ಕೈಗಾರಿಕೆಗೆ ಬೇಕಾಗುವ ಕಚ್ಚಾವಸ್ತುಗಳು  ಕೃಷಿ  ಮೂಲದ್ದಾಗಿದ್ದು,  ಸಿದ್ಧ ಉತ್ಪನ್ನಗಳು  ‘ಪರಿಸರ ಸ್ನೇಹಿ’ಯಾಗಿದ್ದರೆ, ಉದ್ಯಮದ ವರಮಾನವು ಸಂಪೂರ್ಣ ತೆರಿಗೆ ವಿನಾಯ್ತಿ ಹೊಂದಿರುತ್ತದೆ.  ಈ ಎಲ್ಲ ಸೌಲಭ್ಯಗಳನ್ನು ಮಹಿಳೆಯರು ಬಳಸಿಕೊಂಡು ಯಶಸ್ವಿ ಉದ್ಯಮಿಗಳಾಗಬಹುದು’ ಎಂದು ಅವರು  ಕಿವಿಮಾತು ಹೇಳುತ್ತಾರೆ.

‘ಹೊಸದಾಗಿ ಸ್ವ ಉದ್ಯೋಗ ಶುರು ಮಾಡುವವರಿಗೆ ಮಾರ್ಗದರ್ಶನ ನೀಡಲು ನಾನು ಹಿಂಜರಿಯುವುದಿಲ್ಲ’ ಎಂದೂ ಹೇಳುತ್ತಾರೆ. ಕರ್ನಾಟಕ ಮಹಿಳಾ  ಅಭಿವೃದ್ಧಿ ಕೇಂದ್ರ , ಕ್ರಷಿ ಉತ್ಪನ್ನ ಕೇಂದ್ರ ಹಾಗೂ ಖಾದಿ ಭಂಡಾರದಲ್ಲಿ ಸತತ 3 ವರ್ಷ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದಾರೆ, ದಸರಾ ಉತ್ಸವ ಸೇರಿದಂತೆ ಹಲವಾರು ಮೇಳಗಳಲ್ಲಿ  ಭಾಗವಹಿಸಿದ್ದಾರೆ. ಕರ್ನಾಟಕ ಮಹಿಳಾ ಸ್ವ ಉದ್ಯೋಗಿಗಳ ಒಕ್ಕೂಟದಿಂದ ‘ಸ್ವ ಉದ್ಯೋಗ ಪ್ರವೀಣೆ" ಎಂದೂ  ಗುರುತಿಸಿಕೊಂಡಿದ್ದಾರೆ.

‘ಅಡಿಕೆ ಹಾಳೆಯಿಂದ ಸದ್ಯಕ್ಕೆ ತಟ್ಟೆ ಮತ್ತು   ಬಟ್ಟಲುಗಳನ್ನು ಮಾತ್ರ ತಯಾರಿಸಲಾಗುತ್ತಿದೆ. ಚಿಕ್ಕ ಪುಟ್ಟ ಪಾತ್ರೆ, ಚಮಚ , ಸೌಟುಗಳಿಗೆ ಈ ತಯಾರಿಕೆ ವಿಸ್ತರಿಸುವ ಆಲೋಚನೆ ಇದೆ. ಇದಕ್ಕಾಗಿ   ಮತ್ತೊಂದು  ಘಟಕವನ್ನೂ ಆರಂಭಿಸುವ ಉದ್ದೇಶ ಇದೆ.  ಈಗ ಉದ್ಯಮ ಆರಂಭದ ಅನುಭವ ಇದ್ದರೂ, ಹೊಸ ತೊಂದರೆಗಳೂ ಇದ್ದೇ ಇರುತ್ತವೆ. ಆ ಕಾರಣಕ್ಕೆ  ಯಾರೊಬ್ಬರೂ ಹಿಮ್ಮೆಟ್ಟಬಾರದು’ ಎಂದು ಹೇಳುತ್ತಾರೆ.

ಸಣ್ಣ ಉದ್ದಿಮೆದಾರರು ಎದುರಿಸುವ ಅರ್ಥಿಕ ತೊಂದರೆಗಳನ್ನು ಕಡಿಮೆ ಮಾಡಲು ವಿವಿಧ ಸರಕಾರಿ ಇಲಾಖೆಗಳ ಮಧ್ಯೆ  ಹೊಂದಾಣಿಕೆ  ಇರಬೇಕು. ಬ್ಯಾಂಕುಗಳು ಸಾಲ ನೀಡುವಾಗ ಹೆಚ್ಚು ಸತಾಯಿಸಬಾರದು. ಇದರಿಂದ ಸ್ವಂತ ಉದ್ಯೋಗ ಆರಂಭಿಸಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಾರೆ. ಇಂತಹ ವಿಷಯಗಳಲ್ಲಿ ಕುಟುಂಬದ ಪುರುಷರು ನೆರವಿಗೆ ನಿಲ್ಲಬೇಕು. ನನ್ನ ವಿಷಯದಲ್ಲಿ  ಪತಿ ಸತೀಶ್‌ ಭಕ್ಷಿ ಮತ್ತು ಮಗ ಆಕಾಶ್‌  ಎಲ್ಲ ಹಂತಗಳಲ್ಲೂ ನೆರವಿಗೆ ನಿಂತಿದ್ದರು’ ಎಂದು  ಅವರು  ಹೇಳುತ್ತಾರೆ. ಮಾಹಿತಿಗೆ ಸಂಪರ್ಕಿಸಿ 94835 10240  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT