ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೆಬಲ್ ಗಾರ್ಡನ್’ ಎಂಬ ಅಂದದ ಉದ್ಯಾನ

Last Updated 24 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಲಕ್ಷ ಹಣ ವ್ಯಯಿಸಿ ಕನಸಿನ ಮನೆ ಕಟ್ಟಿದ ಮಾತ್ರಕ್ಕೆ ಮುಗಿಯಲಿಲ್ಲ. ಮನೆ ಸೌಂದರ್ಯ ಇಮ್ಮಡಿಸಬೇಕಾದರೆ ಮನೆಯ ಮುಂದೊಂದು ಉದ್ಯಾನ ಬೇಕು. ಹಿಂದೆಲ್ಲಾ ಅಂಗಳದ ಒಂದು ಬದಿಯಲ್ಲಿ ಸಾಲಾಗಿ ನೆಲದ ಮೇಲೆ ಅಥವಾ ಹೂಕುಂಡಗಳಲ್ಲಿ ಗಿಡಗಳನ್ನು ಬೆಳೆಸಿದರೆ ಅದೇ ಉದ್ಯಾನವೆನಿಸುತ್ತಿತ್ತು. ಆಧುನಿಕತೆಯ ಸ್ಪರ್ಶ ತಗುಲಿದಾಗ ಹುಲ್ಲುಹಾಸುಗಳು ಉದ್ಯಾನಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡವು.

ಸಪಾಟಾದ ಉದ್ಯಾನದ ಬದಲು, ಪುಟ್ಟ ಹುಲ್ಲುಹಾಸಿನ ದಿಬ್ಬಗಳು, ಅದರ ಮಧ್ಯೆ ಹಾಗೂ ಬದಿಗಳಲ್ಲಿ ಹೂಗಿಡಗಳು ಪ್ರಮುಖ ಆಕರ್ಷಣೆ ಎನಿಸತೊಡಗಿದವು. ಆದರೆ ಬರಿಯ ಕಾಂಕ್ರೀಟ್, ತಾರಸಿಯ ಮನೆ ಎಂಬುದಕ್ಕಿಂತ ಆಚೆಗಿನ ವೈಭವ, ಕಲಾತ್ಮಕತೆ ಮನೆಗಳಿಗೆ ಬಂದಾಗ ಅಂತಹ ವಿಸ್ಮಯ ಸೌಧಗಳ ಎದುರು ಉದ್ಯಾನ ನಿರ್ಮಿಸಲಿಕ್ಕಾಗಿ ‘ಲ್ಯಾಂಡ್‌ ಸ್ಕೇಪಿಂಗ್‌’ ಎಂಬ ಉದ್ಯಮವೇ ಹುಟ್ಟಿಕೊಂಡಿತು.

ಮನೆಯ ಕಟ್ಟಡಕ್ಕೆ ನೀಲಿನಕ್ಷೆ ತಯಾರಿಸುವಂತೆ ಲ್ಯಾಂಡ್ ಸ್ಕೇಪ್ ತಜ್ಞರು ಗೇಟ್‌ನಿಂದ ಮನೆಯ ಬಾಗಿಲಿನ ತನಕ ರಸ್ತೆಯ ವಿನ್ಯಾಸ, ಈಜುಕೊಳ, ಉದ್ಯಾನ ಇತ್ಯಾದಿಗಳ ವಿನ್ಯಾಸಗಳನ್ನು ತಯಾರಿಸಿ ಅದರಂತೆ ಇವೆಲ್ಲವನ್ನೂ ನಿರ್ಮಿಸುತ್ತಾರೆ. ಮನೆಯ ವಿಸ್ತೀರ್ಣ, ವಿನ್ಯಾಸಗಳಿಗೆ ಮತ್ತಷ್ಟು ಮೆರುಗು ಕೊಡುವಂತೆ ಉದ್ಯಾನದ ವಿನ್ಯಾಸ ಮಾಡಲಾಗುತ್ತದೆ.

ಹೊಸ ಟ್ರೆಂಡ್‌
ಗಾರ್ಡನಿಂಗ್‌ ಕ್ಷೇತ್ರದ ಹೊಸ ಟ್ರೆಂಡ್ ಎಂದರೆ ‘ಪೆಬಲ್ ಗಾರ್ಡನ್’ ಅಂದರೆ ಕಲ್ಲುಗಳ ಉದ್ಯಾನ ಎನ್ನಬಹುದು. ಗಾರ್ಡನಿಂಗ್‌ನಲ್ಲಿ ಕಲ್ಲುಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಉದ್ಯಾನದ ಮಧ್ಯೆ ಆಲಂಕಾರಿಕ ಕಾಲುಹಾದಿ ಮಾಡಲು ಅವನ್ನು ಬಳಸುತ್ತಾರೆ. ಸುತ್ತಲೂ ಹೂವಿನ ಗಿಡಗಳಿದ್ದು ಮಧ್ಯೆ ಕಲ್ಲುಗಳನ್ನು ಹರಡಿ ಮಾಡಿದ ಈ ಕಾಲುಹಾದಿ ಉದ್ಯಾನದ ಶೋಭೆಯನ್ನು ಹೆಚ್ಚಿಸುತ್ತದೆ.

ಗಾರ್ಡನ್ ವಿಸ್ತೀರ್ಣದಲ್ಲಿ ಚಿಕ್ಕದಾಗಿದ್ದರೆ ಪೂರ್ತಿ ಕಲ್ಲುಗಳನ್ನು ಹರಡಿ ಮಧ್ಯೆ ಕುಂಡಗಳಲ್ಲಿ ಗಿಡಗ ಳನ್ನು ಇಡಬಹುದು ಅಥವಾ ಕಳ್ಳಿ ಜಾತಿಯ ಗಿಡಗಳನ್ನು ಈ ಕಲ್ಲುಗಳ ಮಧ್ಯೆ ನೆಟ್ಟರೆ ಸುಂದರವಾಗಿ ಕಾಣುತ್ತದೆ. ಮನೆಯಂಗಳದಲ್ಲಿರುವ ದೊಡ್ಡ ಮರವನ್ನು ಉಳಿಸಿಕೊಂಡೇ ಗಾರ್ಡನ್ ನಿರ್ಮಿಸಬೇಕಿದ್ದರೆ, ಅದರ ಸುತ್ತ ಚಂದದ ಆಕೃತಿಯಲ್ಲಿ ಕಲ್ಲುಗಳನ್ನು ಹರಡಿ ಗಾರ್ಡನ್‌ನ ಅಂದಕ್ಕೆ ಕುಂದು ಬಾರದಂತೆ ನೋಡಿಕೊಳ್ಳಬಹುದು.

ಉದ್ಯಾನದ ಮಧ್ಯದಲ್ಲಿ ಸಣ್ಣದೊಂದು ಕೊಳ ನಿರ್ಮಿಸಿ ಅದರಲ್ಲಿ ತಾವರೆ, ನೈದಿಲೆಗಳನ್ನು ಬೆಳೆಸಿದರೆ ಉದ್ಯಾನದ ಅಂದ ಹೆಚ್ಚಿಸುತ್ತದೆ. ಈ ಸಣ್ಣ ಕಲಾತ್ಮಕ ಕೊಳದ ನಿರ್ಮಾಣಕ್ಕೆ ಸಣ್ಣ, ದೊಡ್ಡ ಕಲ್ಲುಗಳು ಬೇಕೇಬೇಕು.

ಜಲಪಾತವೂ ಇರಲಿ
ಉದ್ಯಾನದ ವೈಭವವನ್ನು ಮತ್ತಷ್ಟು ಹೆಚ್ಚಿಸಬೇಕಿದ್ದರೆ ಪುಟ್ಟದೊಂದು ಕೃತಕ ಜಲಪಾತ ನಿರ್ಮಿಸಬೇಕು. ಇಲ್ಲೂ ಕಲಾತ್ಮಕವಾಗಿ ಕಲ್ಲುಗಳನ್ನು ಜೋಡಿಸಬೇಕಾಗುತ್ತದೆ. ಹರಡಿದ ಸಣ್ಣ ಕಲ್ಲುಗಳ ಮಧ್ಯೆ ಒಂದೆರಡು ಸಣ್ಣ ಉರುಟಾದ ಬಂಡೆಗಳನ್ನಿಡುವುದೂ ಆಧುನಿಕ ಗಾರ್ಡನ್ ವಿನ್ಯಾಸದ ಒಂದು ಅಂಗ. ಚಪ್ಪಡಿ ಕಲ್ಲುಗಳಿಂದ ಪೂರ್ತಿ ಉದ್ಯಾನದ ಸುತ್ತ, ಅಥವಾ ಉದ್ಯಾನದ ನಿರ್ದಿಷ್ಟ ಕಡೆಗಳಲ್ಲಿ ಬೇಲಿ ನಿರ್ಮಿಸಿದರೂ ಚೆನ್ನಾಗಿರುತ್ತದೆ. ಉದ್ಯಾನವನ್ನು ಹಂತ ಹಂತವಾಗಿ (ಅಂತಸ್ತುಗಳ ರೀತಿ) ವಿಭಾಗಿಸಬೇಕಾದರೂ ಕಲ್ಲುಗಳು ಬಳಕೆಯಾಗುತ್ತವೆ. ಗಾರ್ಡನ್ ಮಧ್ಯೆ ಕಲ್ಲಿನ ಆಸನ ಹಾಗೂ ಟೀಪಾಯಿ ನಿರ್ಮಿಸಿದರೆ ಅದೊಂದು ಸಂಪೂರ್ಣ ಸುಂದರ ಉದ್ಯಾನವೆನಿಸುತ್ತದೆ.

ಗ್ರಾನೈಟ್‌ನ ತುಂಡುಗಳನ್ನು ಉದ್ಯಾನದಲ್ಲಿ ಹರಡುವುದು ಆಕರ್ಷಕ ನೋಟ ನೀಡುತ್ತದೆ. ಇವು ಹೆಚ್ಚು ದುಬಾರಿಯೂ ಅಲ್ಲ. ಆದರೆ ಇದರ ಸಣ್ಣ ತುಣುಕುಗಳು ಕಾಲಿಗೆ ಚುಚ್ಚಬಹುದು. ಮನೆಯೊಳಗೆ ಬಂದರೆ  ನೆಲ ಹಾಳಾಗುವ ಅಪಾಯವೂ ಇದೆ.

ನದಿ ತೀರದ ಕಲ್ಲುಗಳು ಉದ್ಯಾನದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತವೆ. ಹರಿವ ನದಿ ನೀರಿನ ರಭಸಕ್ಕೆ ಈ ಕಲ್ಲುಗಳು ವಿವಿಧ ರೂಪ ಪಡೆದು ನುಣುಪಾಗಿರುತ್ತವೆ. ಕೇಸರಿ, ಕಂದು, ಬಿಳಿ, ಬೂದು ಅಥವಾ ಮಿಶ್ರ ಬಣ್ಣಗಳಲ್ಲಿ ಇವು ಸಿಗುತ್ತವೆ. ಈ ನೈಸರ್ಗಿಕ ಕಲ್ಲುಗಳನ್ನು ಯಾವುದೇ ನದಿ ದಂಡೆಯಿಂದಲೂ ಸಂಗ್ರಹಿಸಬಹುದು. ಮಳಿಗೆಗಳಲ್ಲಿಯೂ ಇವು ಕೈಗೆಟಕುವ ದರದಲ್ಲಿ ಲಭ್ಯ.

ಕಲ್ಲುಗಳು ಉದ್ಯಾನದ ಸೌಂದರ್ಯ ಹೆಚ್ಚುವ ಜತೆಗೆ ಕಳೆಗಿಡಗಳು ಬೆಳೆಯದಂತೆ ತಡೆಯುತ್ತವೆ. ಮಾರುಕಟ್ಟೆಯಲ್ಲಿ ಪಾಲಿಶ್ ಮಾಡಿದ ಹಾಗೂ ಪಾಲಿಶ್ ಮಾಡದ ಕಲ್ಲುಗಳು ಲಭ್ಯ. ವಿವಿಧ ಬಣ್ಣಗಳಲ್ಲಿ ಲಭ್ಯವಿರುವ ಕಲ್ಲುಗಳಲ್ಲಿ ಅಮೃತಶಿಲೆಯಂತಹ ಬಿಳಿ ಹಾಗೂ ಇದ್ದಿಲಿನಂತೆ ಕಪ್ಪಾದ ನುಣುಪು ಉರುಟು ಶಿಲೆಗಳಿಗೆ ಬೆಲೆ ಹೆಚ್ಚು.

ಆದರೆ ಇವನ್ನು ಕೈತೋಟ/ಉದ್ಯಾನಕ್ಕಿಂತ ಮನೆಯೊಳಗೆ, ಅಂದರೆ ಕಟ್ಟಡದೊಳಗೆ ನಿರ್ಮಿಸುವ ‘ಪೆಬಲ್ ಕೋರ್ಟ್ ಯಾರ್ಡ್’ ಎಂಬ ಸಣ್ಣ ಅಂಗಳದಲ್ಲಿ ಬಳಸುವುದೇ ಹೆಚ್ಚು. ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ಮನೆಯ ಗೋಡೆಯನ್ನೂ ಪೆಬಲ್‌ಗಳಿಂದ ಅಂದಗೊಳಿಸಲಾಗುತ್ತದೆ.

ಕಲಾಸಕ್ತಿ ಇರುವವರು ಲ್ಯಾಂಡ್ ಸ್ಕೇಪ್ ತಜ್ಞರ ನೆರವಿಲ್ಲದೇ ಸಮೀಪದ ಹೊಳೆಯಿಂದ ಕಲ್ಲುಗಳನ್ನು ಹೆಕ್ಕಿ ತಂದು ಅಥವಾ ಜಲ್ಲಿಕಲ್ಲುಗಳನ್ನು ಬಳಸಿ ನಿಮ್ಮದೇ ಶೈಲಿಯಲ್ಲಿ ಉದ್ಯಾನ ವಿನ್ಯಾಸ ಮಾಡಬಹುದು.
-ಜೆಸ್ಸಿ ಪಿ.ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT