ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಖರೀದಿ ಇರಲಿ ಎಚ್ಚರ

Last Updated 24 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಪ್ರತ್ಯೇಕವಾಗಿ ಜೀವನ ಸಾಗಿಸುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ತಾವೇ ದುಡಿದು ಸ್ವತಂತ್ರವಾದ ಜೀವನ ಸಾಗಿಸಬೇಕೆಂದು ಈ ಮಹಿಳೆಯರು ಬಯಸುತ್ತಾರೆ. ಇವರ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿವೆ. ಈ ಬದಲಾವಣೆ ಅಥವಾ ರೂಪಾಂತರಗಳು ಮಹಿಳೆಯರ ಆದ್ಯತೆಗಳನ್ನು ಹೆಚ್ಚಿಸುವಂತೆ ಮಾಡಿವೆ.

ಸ್ವತಂತ್ರವಾಗಿ ಏಕಾಂಗಿಯಾಗಿ ಬದುಕುತ್ತಿರುವ ಭಾರತೀಯ ಮಹಿಳೆಯರು ದಾಖಲೆ ಪ್ರಮಾಣದಲ್ಲಿ ತಮ್ಮದೇ ಸ್ವಂತ ಮನೆಯನ್ನು ಖರೀದಿಸುತ್ತಿದ್ದಾರೆ.
ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿ ಐದು ಮಂದಿ ಮನೆ ಖರೀದಿದಾರರಲ್ಲಿ ಒಬ್ಬರು ಏಕಾಂಗಿ ಮಹಿಳೆ ಆಗಿರುತ್ತಾರೆ. ಅಲ್ಲದೆ ನಗರ ಪ್ರದೇಶಗಳಲ್ಲಿ ಆಸ್ತಿ ಖರೀದಿ ಮಾಡುವವರಲ್ಲಿ ಶೇ30ರಷ್ಟು ಮಹಿಳೆಯರಿದ್ದಾರೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.

ಮುಂದಿನ ಕೆಲವೇ ವರ್ಷಗಳಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚಾಗಲಿದೆ. ವಿವಾಹಿತರಿಗೆ ಹೋಲಿಸಿದಲ್ಲಿ ಏಕಾಂಗಿಯಾಗಿ ಜೀವನ ಸಾಗಿಸುವ ಮನೆ ಮಾಲೀಕರು ಹೆಚ್ಚು ತೆರಿಗೆ ವಿನಾಯ್ತಿಗಳ ಲಾಭವನ್ನು ಪಡೆಯುತ್ತಿದ್ದಾರೆ. ಏಕಾಂಗಿ ಜೀವನ ಸಾಗಿಸುತ್ತಾ ಮೊದಲ ಮನೆ ಖರೀದಿ ಮಾಡಲು ನಿರ್ಧರಿಸುವ ಮಹಿಳೆಯರು ಕೆಲವು ಸುರಕ್ಷಿತ ಮತ್ತು ಲಾಭದಾಯಕ ಅಂಶಗಳನ್ನು ತಿಳಿದುಕೊಳ್ಳುವುದು ಅಗತ್ಯ.

ಯೋಚಿಸಿ ಖರೀದಿಸಿ
ಯಾವುದೇ ಕೆಲಸಕ್ಕೆ ಖರ್ಚು ಮಾಡಬೇಕಾದರೆ ಯೋಜನೆ ಮತ್ತು ಬಜೆಟ್ ರೂಪಿಸುವುದು ಅತ್ಯಗತ್ಯ. ಮನೆ ಖರೀದಿಸುವ ಮುನ್ನ ನಿಮ್ಮ ಹಣಕಾಸು ಪರಿಸ್ಥಿತಿ ನೋಡಿಕೊಳ್ಳಿ.

ಮನೆ ಖರೀದಿ ಎನ್ನುವುದು ಜೀವನದ ಅತಿ ದೊಡ್ಡ ತೀರ್ಮಾನ. ನೀವು ಖರೀದಿ ಮಾಡುವ ಮನೆ ನಿಮ್ಮ ಹಣಕಾಸು ಸಾಮರ್ಥ್ಯ ಮತ್ತು ಯೋಜನೆಗೆ ಪೂರಕವಾಗಿರಬೇಕು. ಈ ಅಂಶಗಳ ಮೂಲಕ ಮನೆ ಖರೀದಿಯಲ್ಲಿ ಮೊದಲ ಹೆಜ್ಜೆ ಇಡಬೇಕು. ಅಲ್ಲದೇ, ಮೊದಲ ಬಾರಿ ಮನೆ ಖರೀದಿಸುವ ಮಹಿಳೆ ಮತ್ತೆಂದೂ ಮನೆ ಖರೀದಿಸುವುದಿಲ್ಲ ಎಂಬ ಅಂಶವನ್ನು ಮನಸಿನಲ್ಲಿಟ್ಟುಕೊಂಡೇ ಮನೆ ಖರೀದಿ ಪ್ರಕ್ರಿಯೆಗೆ ಕೈ ಹಾಕಬೇಕು.

ಭವಿಷ್ಯದಲ್ಲಿ ಉನ್ನತೀಕರಣ ಮಾಡಿಕೊಳ್ಳುವ ಇರಾದೆಯನ್ನು ಬಿಡಬೇಕು. ನಿಮ್ಮ ಹಣಕಾಸು ಪರಿಸ್ಥಿತಿಗೆ ಅನುಗುಣವಾಗಿ ಮನೆಯನ್ನು ಖರೀದಿಸುವ ನಿರ್ಧಾರ ಕೈಗೊಳ್ಳಬೇಕು.

ಮೊದಲ ಬಾರಿಗೆ ಮನೆ ಖರೀದಿಸಲು ಇಚ್ಛೆ ಇದ್ದವರು ದುಬಾರಿಯಾದ ಫ್ಲ್ಯಾಟ್‌ಗಳ ಖರೀದಿ ಮಾಡುವುದು ಸೂಕ್ತವಲ್ಲ. ಮೊದಲ ಮನೆ ಖರೀದಿ ಸಂದರ್ಭದಲ್ಲಿ ಮಾಡಿಕೊಳ್ಳುವ ಹಣಕಾಸು ರಾಜಿಯು ಬಹುದೊಡ್ಡ ತಪ್ಪು. ಈ ತಪ್ಪಿನಿಂದಾಗಿ ಭಾರೀ ಪ್ರಮಾಣದ ಇಎಂಐನಿಂದ ಹೊರೆ ಅನುಭವಿಸಬೇಕಾದ ಸಂದರ್ಭಗಳು ಬರಬಹುದು. ಕೈಗೆಟುಕುವ ದರದಲ್ಲಿ ಮನೆಗಳು ಲಭ್ಯವಿರುವ ವಸತಿ ಯೋಜನೆಗಳು ಸಾಕಷ್ಟಿವೆ. ಹೀಗಾಗಿ ಕೈಗೆಟುಕುವ ದರದ ಮನೆಗಳನ್ನು ಖರೀದಿಸಿದರೆ ನಿಮ್ಮ ಮೇಲಿನ ಆರ್ಥಿಕ ಹೊರೆ ಇರುವುದಿಲ್ಲ.

ನಿರ್ಧರಿಸುವ ಮುನ್ನ
ಒಂದು ಆಸ್ತಿ ಮೇಲೆ ಬಂಡವಾಳ ತೊಡಗಿಸುವ ಮುನ್ನ ಆ ಆಸ್ತಿಯ ಬಗ್ಗೆ ಹಲವು ವಿಧದಲ್ಲಿ ಅಧ್ಯಯನ ನಡೆಸಬೇಕು. ಈ ಬಗ್ಗೆ ಆನ್‌ಲೈನ್‌ನಲ್ಲಿ ಸಾಕಷ್ಟು ಮಾಹಿತಿಗಳು ಲಭ್ಯವಿವೆ. ಬಹುತೇಕ ಡೆವಲಪರ್‌ಗಳು ತಮ್ಮ ಕಂಪೆನಿಗಳ ವೆಬ್‌ಸೈಟ್‌ ಹೊಂದಿದ್ದು, ಅದರಲ್ಲಿ ತಮ್ಮ ವಸತಿ ಯೋಜನೆಗಳ ವಿವರ ಹಾಕಿರುತ್ತಾರೆ. ಈ ವಿಚಾರದಲ್ಲಿ ಆನ್‌ಲೈನ್‌ ಅಧ್ಯಯನ ನಡೆಸುವುದು ಉಪಕಾರಿ.

ಕನಸಿನ ಮನೆಯ ಸುತ್ತಮುತ್ತಲಿನ ವಾತಾವರಣ, ಭದ್ರತೆ ಮತ್ತು ಸುರಕ್ಷತೆ ಬಗ್ಗೆ ಅತ್ಯಂತ ಜಾಗರೂಕತೆಯಿಂದ ಪರಿಶೀಲನೆ ನಡೆಸಬೇಕು. ಡೆವಲಪರ್‌ಗಳು ಭರವಸೆ ನೀಡಿದಂತೆ ನಿಮ್ಮ ಆ ಮನೆ ಪ್ರಮುಖ ಸ್ಥಳಗಳಿಗೆ ಸಂಪರ್ಕ ಸಾಧಿಸುತ್ತದೆಯೇ? ಅಲ್ಲಿ ಅಗತ್ಯ ಮೂಲ ಸೌಕರ್ಯಗಳು ಇವೆಯೇ? ಎಂಬುದನ್ನು ಕೂಲಂಕಷವಾಗಿ ಪರೀಕ್ಷಿಸುವುದು ಅತ್ಯಗತ್ಯ.

ಸಮಗ್ರ ಪರಿಶೀಲನೆ ಮುಖ್ಯ
ಉತ್ತಮ ಸಾಲ ವ್ಯವಸ್ಥೆ ಬಗ್ಗೆ ಸಂಶೋಧನೆ ಮಾಡುವುದು ಅಗತ್ಯ. ಸಾಲದ ಆಯ್ಕೆಗಳಲ್ಲಿ ವೈವಿಧ್ಯತೆ ಇದೆ. ಅವುಗಳ ಬಗ್ಗೆಯೂ ಪರಿಶೀಲಿಸಿಕೊಳ್ಳಿ. ಗೃಹ ಸಾಲ ಮಾರುಕಟ್ಟೆ ಈಗ ಸ್ಪರ್ಧಾತ್ಮಕ ಹಂತವನ್ನು ತಲುಪಿದೆ. ಪ್ರಮುಖ ಬ್ಯಾಂಕ್‌ಗಳು ಗ್ರಾಹಕರನ್ನು ಸೆಳೆಯಲು ಹಲವಾರು ಆಕರ್ಷಕ ಸಾಲ ಯೋಜನೆಗಳನ್ನು ನೀಡುತ್ತಿವೆ. ಮಹಿಳೆಯರಿಗೆ ಕಡಿಮೆ ಬಡ್ಡಿ ದರ ಇರುತ್ತದೆ. ಸಾಮಾನ್ಯವಾಗಿ ಸಾಲದ ಮೇಲಿನ ಬಡ್ಡಿ ಶೇ9.3ರ ಆಸುಪಾಸಿನಲ್ಲಿ ಇರಲಿದೆ.

ಏಕಾಂಗಿ ಮಹಿಳೆಯರು ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಕೇವಲ ವಿಶೇಷ ಬಡ್ಡಿದರದ ಬಗ್ಗೆ ಮಾಹಿತಿ ಪಡೆಯುವುದರ ಜೊತೆಗೆ, ಮಹಿಳೆಯರಿಗೆ ಇರುವ ಇನ್ನಿತರ ಪ್ರೋತ್ಸಾಹ ಯೋಜನೆಗಳ ಬಗ್ಗೆಯೂ ಮಾಹಿತಿ ಪಡೆಯಬೇಕು.

ಬಹುತೇಕ ಬ್ಯಾಂಕ್‌ಗಳು ಸಾಲಗಾರರಿಗೆ ಅಗತ್ಯಕ್ಕೆ ತಕ್ಕ ಸುಲಭದ ಯೋಜನೆಗಳನ್ನು ಹೊಂದಿರುತ್ತವೆ. ಮಾತುಕತೆ ಮೂಲಕ ಅಂತಹ ಯೋಜನೆಗಳನ್ನು ಪಡೆಯಬಹುದಾಗಿದೆ. ಕೇವಲ ಬ್ಯಾಂಕ್‌ಗಳಷ್ಟೇ ಅಲ್ಲ, ಇತರ ಹಣಕಾಸು ಸಂಸ್ಥೆಗಳೂ ಮನೆ ಖರೀದಿಸಲು ಮುಂದೆ ಬರುವ ಏಕಾಂಗಿ ಮಹಿಳೆಯರನ್ನು ಸೆಳೆಯುವತ್ತ ಗಮನ ಹರಿಸಿವೆ. ಈ ಸಂಸ್ಥೆಗಳು ಮಹಿಳಾ ಗ್ರಾಹಕರಿಗಾಗಿ ಸಾಲ ನೀಡಲೆಂದೇ ಪ್ರತ್ಯೇಕ ವಿಭಾಗವನ್ನೇ ಆರಂಭಸಿವೆ.

ಈ ಸಂಸ್ಥೆಗಳಲ್ಲಿ ವೇತನ ಪಡೆಯುವ ಮತ್ತು ಸ್ವಯಂ ಉದ್ಯೋಗ ನಡೆಸುವ ಮಹಿಳೆಯರು ಕೈಗೆಟುಕುವ ದರದ ಮನೆಗಳನ್ನು ಖರೀದಿಸಲು ₹2 ರಿಂದ 12 ಲಕ್ಷದ ವರೆಗೆ ಸಾಲ ಪಡೆದುಕೊಳ್ಳಬಹುದು. ಇದಕ್ಕೆ ಶೇ10 ರಿಂದ 13ರಷ್ಟು ಬಡ್ಡಿ ವಿಧಿಸುತ್ತವೆ. ಆದರೆ, ಸಾಲ ನೀಡುವ ಹಣಕಾಸು ಸಂಸ್ಥೆಗಳ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸುವುದನ್ನು ಮರೆಯದಿರಿ. ಈ ವಿಚಾರದಲ್ಲಿ ಸ್ನೇಹಿತರು ಮತ್ತು ಸಂಬಂಧಿಕರ ಶಿಫಾರಸುಗಳನ್ನು ನಂಬಬೇಡಿ. ಸ್ವತಃ ಪರಿಶೀಲಿಸುವ ಮೂಲಕ ವಿಷಯ ಅರ್ಥೈಸಿಕೊಳ್ಳಿ. ಕಡಿಮೆ ಬಡ್ಡಿ ಮತ್ತು ಉತ್ತಮ ಸೌಕರ್ಯ ಇರುವ ಸಂಸ್ಥೆಗಳಿಂದ ಗೃಹಸಾಲ ಪಡೆಯಿರಿ.

ಜೇಬಿಗೆ ಹೆಚ್ಚು ಹೊರೆ ಬೇಡ
ಮೊದಲ ಬಾರಿ ಮನೆ ಖರೀದಿಸುವವರಿಗೆ ಅಧಿಕವಾದ ಆಯ್ಕೆಗಳಿರುತ್ತವೆ. ಈ ಆಯ್ಕೆಗಳನ್ನು ನೋಡಿ ಅಗತ್ಯಕ್ಕಿಂತ ಹೆಚ್ಚು ಹಣ ಹೂಡಿಕೆ ಮಾಡುವ ಬಗ್ಗೆ ಯೋಚನೆ ಮಾಡುತ್ತಾರೆ. ಆದರೆ ಮನೆ ಖರೀದಿಸುವ ಮುನ್ನ ಏಕಾಂಗಿ ಮಹಿಳೆಯರು ತಮ್ಮ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ‘ನಾನು ಎಷ್ಟು ಹಣವನ್ನು ವೆಚ್ಚ ಮಾಡಲು ಸಾಧ್ಯ  ಎಂದು ಯೋಚಿಸಿ ಅದಕ್ಕೆ ತಕ್ಕಂತೆ ಸಾಲ ಮಾಡಬೇಕು ಎಂಬುದನ್ನು ಮನಸಿನಲ್ಲಿಟ್ಟುಕೊಳ್ಳಬೇಕು. ಇದು ಪ್ರಜ್ಞಾವಂತ ಖರೀದಿದಾರರ ಲಕ್ಷಣ.

ಸಾಲ, ವಿಮೆ, ಇಎಂಐ
ಹೊಸ ಮನೆ ಖರೀದಿಗಾಗಿ ಪಡೆದ ಗೃಹಸಾಲಕ್ಕೆ ವಿಮೆ ಮಾಡಿಸುವಾಗಲೂ ತರಾತುರಿ ತೀರ್ಮಾನ ಸಲ್ಲದು. ನಿಮ್ಮ ಅಗತ್ಯಕ್ಕೆ ತಕ್ಕ ಸೂಕ್ತ ಪಾಲಿಸಿ ಖರೀದಿಸಿ. ಹೊಸ ಮನೆಯಲ್ಲಿ ಕೂಡಲೇ ವಾಸ ಮಾಡಲು ಸಾಧ್ಯವಾಗದಿದ್ದರೆ ಅದನ್ನು ಬಾಡಿಗೆ ಕೊಡುವುದು ಸೂಕ್ತ. ಇದರಿಂದ ಬರುವ ಬಾಡಿಗೆ ಹಣ ಒಂದು ರೀತಿಯ ಆದಾಯದ ಮೂಲವಾಗುತ್ತದೆ. ಇದೇ ಹಣವನ್ನು ಗೃಹಸಾಲದ ಇಎಂಐಗೆ ಸರಿದೂಗಿಸಬಹುದು.

ಆರ್ಥಿಕವಾಗಿ ಸ್ವತಂತ್ರವಾಗಿರುವ ಏಕಾಂಗಿ ಮಹಿಳೆ ತನ್ನದೇ ಶೈಲಿಯಲ್ಲಿ ಬುದಕು ಸಾಗಿಸುತ್ತಾಳೆ. ಮೊದಲ ಮನೆಯನ್ನು ಖರೀದಿಸುವ ಮುನ್ನ ಎಲ್ಲಾ ಆಯ್ಕೆಗಳನ್ನು ಅತ್ಯಂತ ಬುದ್ಧಿವಂತಿಕೆಯಿಂದ ಅವಲೋಕಿಸಿ ತೆಗೆದುಕೊಳ್ಳುವ ನಿರ್ಧಾರ ಜೀವನದ ಅತ್ಯಂತ ಮಹತ್ವದ ನಿರ್ಧಾರವಾಗಿರುತ್ತದೆ.
-ರಜೀಬ್ ದಾಶ್
(ಲೇಖಕರು: ಟಾಟಾ ಹೌಸಿಂಗ್, ಮಾರುಕಟ್ಟೆ ವಿಭಾಗದ ಮುಖ್ಯಸ್ಥರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT