ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾದ ಬೆಂಗಳೂರಿನ ವಾಸ್ತುಶಿಲ್ಪ

ವಾಸ್ತುಶಿಲ್ಪಿ ಮನದಾಳ
Last Updated 24 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಎಚ್‌.ಎಸ್. ಅನಂತರಾಮ ಅವರು ನಗರದ ಹಿರಿಯ ವಾಸ್ತುಶಿಲ್ಪಿಗಳಲ್ಲಿ ಒಬ್ಬರು. ಈ ಹಿರಿತನಕ್ಕೆ ಒಂದು ಕಾರಣವೂ ಇದೆ. ಬೆಂಗಳೂರಿನ ಯುವಿಸಿಇಯಲ್ಲಿ ಆರ್ಕಿಟೆಕ್ಟ್‌ ಕೋರ್ಸ್‌ನ ಮೊದಲ ಬ್ಯಾಚ್‌ನ ವಿದ್ಯಾರ್ಥಿ ಇವರು.  ಇದು ರಾಜ್ಯದಲ್ಲೇ ಆರ್ಕಿಟೆಕ್ಟ್‌ ಕೋರ್ಸ್‌ ಇದ್ದ ಏಕೈಕ ಕಾಲೇಜಾಗಿತ್ತು. 1972ರಲ್ಲಿ ಆರ್ಕಿಟೆಕ್ಟ್‌ ಕೋರ್ಸ್‌ ಮುಗಿಸಿದ ಮೊದಲ ಬ್ಯಾಚ್‌ನ ಸದಸ್ಯರು ಇವರು. ಆನಂತರ ಐಐಟಿ ಖರಗ್‌ಪುರದಲ್ಲಿ ಸ್ನಾತಕೋತ್ತರ  ಪದವಿ ಮುಗಿಸಿದರು.

1980ರಿಂದ ತಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಅನಂತರಾಮ ಅವರು 1991ರಲ್ಲಿ ಅನಂತರಾಮ ಅಂಡ್ ಅಸೋಸಿಯೇಟ್ಸ್‌ ಆರಂಭಿಸಿದರು. ಶಿಕ್ಷಣ ಸಂಸ್ಥೆ, ಕೈಗಾರಿಕಾ ಕೇಂದ್ರ, ವಾಣಿಜ್ಯ ಸಂಕೀರ್ಣ, ಆಸ್ಪತ್ರೆ, ಕೌಶಲ ಅಭಿವೃದ್ಧಿ ಕೇಂದ್ರ, ಮನೆಗಳು, ಬಂಗಲೆಗಳು ಹೀಗೆ ಎಲ್ಲ ರೀತಿಯ ಕಟ್ಟಡಗಳ ವಿನ್ಯಾಸ ಮಾಡಿದ ಹಿರಿಮೆ ಇವರದು. ಸದ್ಯ ಇವರು ಎಂ.ಎಸ್‌.ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.

ಧರ್ಮಸ್ಥಳದ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಕೇಂದ್ರ, ಎಸ್‌.ಡಿ.ಎಂ ಕಾಲೇಜು, ಶಾಂತಿವನ, ಬೆಂಗಳೂರು ಮತ್ತು ಕಲಬುರ್ಗಿಯ ಕೌಶಲ ಅಭಿವೃದ್ಧಿ ಕೇಂದ್ರ ಅಲ್ಲದೆ ಬೆಂಗಳೂರಿನಲ್ಲೂ ಇತರ ಹಲವು ಕಟ್ಟಡಗಳ ವಿನ್ಯಾಸ ಮಾಡಿದ್ದಾರೆ. ಇಷ್ಟು ವರ್ಷಗಳ ಅನುಭವವನ್ನು ಅವರು ಮೆಟ್ರೊ ಜತೆ ಹಂಚಿಕೊಂಡಿದ್ದಾರೆ.

*ಇಷ್ಟು ವರ್ಷಗಳಿಂದ ಈ ಕ್ಷೇತ್ರದಲ್ಲಿದ್ದೀರಿ ಯಾವ ಬದಲಾವಣೆ ಗಮನಿಸಿದ್ದೀರಿ?
ಹಳೇ ಕಾಲದ ಆರ್ಕಿಟೆಕ್ಚರ್‌ ಕಾಕ್ಸ್‌ಟೌನ್‌, ಓಲ್ಡ್‌ ಕ್ಯಾಂಟ್‌ ಏರಿಯಾ, ವಿಶ್ವೇಶ್ವರಪುರದಲ್ಲಿ ಕಾಣಸಿಗುತ್ತಿದ್ದವು. ಅಲ್ಲಿ ಆರ್ನಮೆಂಟಲ್‌ ಬಿಲ್ಡಿಂಗ್ ಇರ್ತಾ ಇದ್ವು. ಹಳೆ ಮನೆಗಳಲ್ಲಿ ಬಹಳಷ್ಟು ಬ್ರಿಟಿಷ್‌ ಶೈಲಿ ಅನುಕರಿಸುತ್ತಿದ್ದವು.  ಕನ್ಸರ್‌ವೆನ್ಸಿ ರಸ್ತೆಯಿಂದಲೂ ಬಾಗಿಲು ಇರುತ್ತಿದ್ದವು. ಇದಾದ ನಂತರ ಬೆಂಗಳೂರಿನಲ್ಲಿ ಹೌಸಿಂಗ್‌ ಬೋರ್ಡ್ ಮತ್ತು ಸಿಐಟಿಬಿ (ಸಿಟಿ ಇಂಪ್ರೂಮೆಂಟ್‌ ಟ್ರಸ್ಟ್‌ ಬೋರ್ಡ್‌) ಸಂಸ್ಕೃತಿ ಆರಂಭವಾಯಿತು. ಆಗ ಕಾಂಕ್ರಿಟ್ ಬಿಲ್ಡಿಂಗ್‌ ಬಂದವು. ಆಗೆಲ್ಲ ಆರ್ಕಿಟೆಕ್ಟ್‌ ಪಾತ್ರ ಬಹಳ ಕಡಿಮೆ. ಎಸಿಸಿ  ಕಂಪೆನಿ ಪುಸ್ತಕ ಬಿಡುಗಡೆ ಮಾಡುತ್ತಿತ್ತು. ಜನ ಆರ್ಕಿಟೆಕ್ಟ್‌ ಬಳಿ ಹೋಗುತ್ತಿರಲಿಲ್ಲ. ಮೇಸ್ತ್ರಿ  ಹತ್ರ ಹೋಗೋರು. ಅವರು ಯಾವುದೊ ಒಂದನ್ನು ಕಾಪಿ ಮಾಡಿ ಮನೆ ಕಟ್ಟಿ ಕೊಡೋರು. ವಿಂಡ್ಸರ್‌ ಮ್ಯಾನರ್ ಹೋಟೆಲ್‌ ಬಂದ ನಂತರ ಜನರಿಗೆ ಅದರ ಬಗ್ಗೆ ಆಸಕ್ತಿ ಹೆಚ್ಚಿತು. ಮತ್ತೆ ಕಮಾನು ಮತ್ತು ಕಂಬಗಳ ಕಟ್ಟಡಗಳು (ಬೆಂಗಳೂರಿನ ಪುರಭವನ ರೀತಿ)  ಬಂದವು. ಈಗ ಗ್ಲಾಸ್‌ ಆರ್ಕಿಟೆಕ್ಚರ್‌ ಬಂದಿದೆ. ಮಾಡರ್ನ್‌ ಫಿನಿಶಿಂಗ್‌, ಮಾರ್ಬಲ್‌ ಬಂತು. ಮರದ ಬದಲಿಗೆ ಸಿಪಿವಿಸಿ, ಯುಪಿಯುಸಿ, ಅಲ್ಯೂಮಿನಿಯಂ  ವಿಂಡೊ ಬಂದವು. ಮೊದಲೆಲ್ಲ ಕಟ್ಟಡ ಸಾಮಗ್ರಿ  ಬಾಂಬೆಯಿಂದ ತರಿಸಿಕೊಳ್ಳುತ್ತಿದ್ದರು. ಆದರೆ ಈಗ ಬೆಂಗಳೂರಿನಲ್ಲೇ ಎಲ್ಲವೂ ಸಿಗುತ್ತಿದೆ.

*ನಗರ ಇಷ್ಟು ವೇಗದಲ್ಲಿ ಬೆಳೆಯುತ್ತಿದೆ. ಇಂತಹ ಸಮಯದಲ್ಲಿ ಆರ್ಕಿಟೆಕ್ಟ್‌ ಸಲಹೆ ಪಡೆದು ಮನೆ ಕಟ್ಟೋಕೆ ಸಾಧ್ಯವೇ?
ನಗರ ಈ ವೇಗದಲ್ಲಿ ಬೆಳೆಯುತ್ತಿರುವುದು ಒಳ್ಳೆಯದಲ್ಲ. ಆಗಿನ ಬೆಂಗಳೂರಿನ ತಂಪಾದ ವಾತಾವರಣ ಇಲ್ಲವಾಗಿದೆ. ಈಗಂತೂ ಕಾಂಕ್ರಿಟ್‌ ಕಾಡಾಗಿದೆ. ಮೊದಲ ಬಾರಿಗೆ ಐಟಿಐ, ಎಚ್ಎಂಟಿ ಸೇರಿದಂತೆ ಐದು ಪ್ರಮುಖ ಕಾರ್ಖಾನೆ ಬಂದಾಗ ಜನರೆಲ್ಲ  ಅವು  ಇರುವಲ್ಲಿಗೆ ವಲಸೆ ಹೋದರು.  ವಸತಿಗೃಹಗಳ ಸಂಸ್ಕೃತಿ ಆರಂಭವಾಯಿತು.  ನಂತರ ಭೂಮಿ  ಬೆಲೆ ಹೆಚ್ಚಾಗಿರುವುದರಿಂದ ಕೇವಲ ನೆಲ ಮಹಡಿ ಕಟ್ಟಿದರೆ ಸಾಲುವುದಿಲ್ಲ ಎಂದು  ಇರುವ ಜಾಗದಲ್ಲಿ ಎರಡು ಮೂರು ಮಹಡಿ ಕಟ್ಟಲು ಆರಂಭಿಸಿದರು.  ನಮ್ಮಲ್ಲಿ ಆರ್ಕಿಟೆಕ್ಟ್‌ ಸಂಖ್ಯೆ ಕಡಿಮೆ ಇದೆ. ಈಗ ವಾಸ್ತುಶಿಲ್ಪ ಶಾಸ್ತ್ರ ಓದದೇ ಇರೋರೂ ವಾಸ್ತುಶಿಲ್ಪಿಗಳಾಗಿದ್ದಾರೆ. ಮೇಸ್ತ್ರಿಗಳೂ ಯಾವುದಾದರೂ ಪ್ಲಾನ್‌ ಸಿಕ್ಕಿದರೂ ಮನೆ ಕಟ್ಟುತ್ತಾರೆ. ನಗರ ಹೀಗೆ ಬೆಳೆಯುತ್ತಿರುವುದರಿಂದ ನಿಯಮ ಬದ್ಧವಾಗಿ ಯಾವುದನ್ನೂ ಮಾಡುತ್ತಿಲ್ಲ.

*ಒಂದು ಕಟ್ಟಡ ಕಟ್ಟಿಸುವವರಿಗೆ ನೀವು ಮುಂದಿಡುವ ಪ್ರಶ್ನೆಗಳೇನು?
ಅವರು ಬಂದ ಕೂಡಲೇ ಅವರ ಸೈಟ್‌ ಎಲ್ಲಿದೆ ಎಂದು ನೋಡ್ತೀವಿ. ಮಣ್ಣು ಹೇಗಿದೆ ಎಂದು ಪರೀಕ್ಷೆ ಮಾಡಿಸುತ್ತೇವೆ. ಆಮೇಲೆ ಕಾನೂನು ಪ್ರಕಾರ ಎಷ್ಟು ಮಹಡಿ ಕಟ್ಟಬಹುದು ಎಂದು ತಿಳಿಸುತ್ತೇವೆ. ಡಿಜಿಟಲ್‌ ಸರ್ವೆ ಮ್ಯಾಪ್‌ ತಯಾರಿಸುತ್ತೇವೆ. ಮನೆಯ ಸದಸ್ಯರ ಅವಶ್ಯಕತೆಗಳೇನು ಎಂಬುದನ್ನು ತಿಳಿದುಕೊಳ್ಳುತ್ತೇವೆ. ಸ್ಕಿಮ್ಯಾಟಿಕ್‌ ಡ್ರಾಯಿಂಗ್ ಮಾಡ್ತೀವಿ. ಬಜೆಟ್ ತಿಳಿಸುತ್ತೇವೆ.

*ನೀವು ಪರಿಸರ ಸ್ನೇಹಿ ಕಟ್ಟಡಗಳತ್ತ  ಹೆಚ್ಚು ಗಮನಹರಿಸಿದ್ದೀರಿ. ಇದು ಬೆಂಗಳೂರಿನಂತಹ ನಗರದಲ್ಲಿ ಎಷ್ಟು ಅನಿವಾರ್ಯ ಮತ್ತು ಅಗತ್ಯ?
ಈಗ ಗ್ರೀನ್‌ ಬಿಲ್ಡಿಂಗ್ ಹೆಚ್ಚು ಪಾಪ್ಯುಲರ್ ಆಗ್ತಾ ಇದೆ. ಸ್ಥಳೀಯವಾಗಿ  ಸಿಗುವ ವಸ್ತುಗಳನ್ನೇ ಬಳಸಿ ಪರಿಸರಕ್ಕೆ ಹಾನಿಯಾಗದಂತೆ ಕಟ್ಟಡ ಕಟ್ಟಬೇಕು. ಸರಳವಾದ ಫ್ಲೋರಿಂಗ್‌, ಮಣ್ಣು  ಹಾಗೂ ಸಿಮೆಂಟ್‌ ಬ್ಲಾಕ್‌ ಬಳಸಿ ನಿರ್ಮಿಸುವುದು, ಹವಾಮಾನ ಮತ್ತು ಸೂರ್ಯನ ಚಲನೆಗೆ ಅನುಗುಣವಾಗಿ ಕಟ್ಟುವುದು. ರೇಡಿಯೇಷನ್ ತಡೆಯೋದು, ಸ್ಕೈಲೈಟ್‌ ನಿರ್ಮಿಸಿದರೆ ಕೃತಕ  ಬೆಳಕಿನ ಅವಲಂಬನೆ ತಪ್ಪುತ್ತದೆ. ಕೆಲ ವರ್ಷಗಳ ಹಿಂದೆ ಜನರ ಅಗತ್ಯ ಕಡಿಮೆ ಇತ್ತು. ಈಗ ಹಾಗಿಲ್ಲ. ಎಷ್ಟೋ ಮನೆಗಳಲ್ಲಿ ಆಗ ಪೀಠೋಪಕರಣವೇ ಇರುತ್ತಿರಲಿಲ್ಲ. ಈಗ  ಎಲ್ಲವೂ ಬೇಕು.

*ಬೆಂಗಳೂರಿನ ವಾಸ್ತು ಯಾವ ಮೂಲದ್ದು?
ಬೆಂಗಳೂರಿಗೆ ವಾಸ್ತು ಬಂದಿದ್ದು ಆಂಧ್ರಪ್ರದೇಶದಿಂದ. ಆಂಧ್ರದಲ್ಲಿ ತಿರುಪತಿ ರೆಡ್ಡಿ ಅನ್ನೋರು ಇದ್ರು. ಅವರು  ವಾಸ್ತು ಪುಸ್ತಕಗಳನ್ನು ಬರೆದಿದ್ದರು. ಬೆಂಗಳೂರಿನಲ್ಲಿದ್ದ ಆಂಧ್ರಪ್ರದೇಶ ಮೂಲದವರು ಅಲ್ಲಿಂದ ಜನರನ್ನು ಕರೆಸಿ ಮನೆ ಕಟ್ಟಿಸಿಕೊಳ್ಳೋರು. ಈಗಂತೂ ಎಲ್ಲರೂ ವಾಸ್ತು ಹೇಳುತ್ತಾರೆ.

*ಮನೆಗೂ ಆರ್ಕಿಟೆಕ್ಟ್‌ಗೂ ಯಾವ ರೀತಿಯ ಸಂಬಂಧ?
ಇದೊಂದು ವಿಶಿಷ್ಟ ರೀತಿಯ ಸಂಬಂಧ ಮತ್ತು ಅನುಬಂಧ. ಮನೆ ಕಟ್ಟಲು ರಾತ್ರೋ ರಾತ್ರಿ ಆಗುವುದಿಲ್ಲ. ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ವೇಗವಾಗಿ ಕಟ್ಟುತ್ತಾರೆ. ಕಷ್ಟಪಟ್ಟು ಸಂಪಾದಿಸಿದ ಇಲ್ಲವೇ ಬೇರೆ ಬೇರೆ ಮೂಲದ ಹಣ ಒಟ್ಟು ಹಾಕಿ ಕಟ್ಟಿದ ಮನೆ ವರ್ಷಾನುಗಟ್ಟಲೆ ನಡೆಯುತ್ತದೆ. ಆಗೆಲ್ಲ ಆರ್ಕಿಟೆಕ್ಟ್‌ ಮಾಡಿರುವ   ವ್ಯವಸ್ಥೆಗಳು ಮನೆ ಸದಸ್ಯರಿಗೆ ಅನುಕೂಲವಾಗು ವಂತಿರಲೇಬೇಕು. 

*ಎಲ್ಲಾ ರೀತಿಯ ಕಟ್ಟಡಗಳಿಗೂ ಆರ್ಕಿಟೆಕ್ಟ್‌ ಸಲಹೆ ಪಡೆಯಬೇಕೇ?
ಪಡೆದರೆ ಒಳ್ಳೆಯದು. ಆದರೆ ಹೆಚ್ಚಿನವರು ಪಡೆಯುವುದಿಲ್ಲ. ಹಿಂದಿನ ಕಾಲದಲ್ಲಿ ಎಲ್ಲರ ಮನೆಗಳೂ ಒಂದೇ ರೀತಿ ಇರುತ್ತಿದ್ದವು. ಈಗ ಎಲ್ಲರಿಗೂ ಬೇರೆ ಬೇರೆ ವಿನ್ಯಾಸ  ಬೇಕು. ಹೊಸ ರೀತಿ ಬೇಕು. ಮನೆ ಎಲ್ಲರಿಗೂ ಕಾಣುವುದು ಅದರ ಹೊರಭಾಗದಿಂದ. ಮನೆಯವರು ತಮ್ಮ ಮನೆಯ ಮುಂಭಾಗವನ್ನು ನೋಡಿಕೊಳ್ಳುವುದಿಲ್ಲ. ಆದರೆ ಬೇರೆಯವರು ನೋಡುತ್ತಾರೆ. ಅವರು ‘ಏನಪ್ಪ ಈ ಮನೆಗೆ ಈ ಬಣ್ಣದ ಪೇಂಟ್‌  ಮಾಡಿದ್ದಾರೆ’ ಎಂದು ಅಂದುಕೊಳ್ಳುವ ಹಾಗೆ ಇರಬಾರದು. ಆರ್ಕಿಟೆಕ್ಟ್‌ ಮನೆಯ ನಿರ್ದೇಶಕ. ಆತ ಮನೆ ಬಿಟ್ಟು ರಸ್ತೆ, ಅಣೆಕಟ್ಟು ನಿರ್ಮಿಸಲ್ಲ. ಆತನಿಂದ ಮೌಲ್ಯವುಳ್ಳ ಹಾಗೂ ಅಭಿರುಚಿಯ ನಕ್ಷೆ ಸಿಗುತ್ತದೆ. ಅದು ಇಂದಿನದಾಗಿರುತ್ತದೆ. ಎಲ್ಲ ನಕ್ಷೆಯೂ ಬಳಕೆಸ್ನೇಹಿ ಆಗಿರಬೇಕು.   ಆರ್ಕಿಟೆಕ್ಟ್ ಸಲಹೆಯಿಂದ ಮನೆಯ ನಿರ್ಮಾಣ ವೆಚ್ಚ ಕಡಿಮೆಯಾಗುತ್ತದೆ. 

*ಒಂದು ಮನೆಯನ್ನು ಎಲ್ಲರಿಗೂ ಇಷ್ಟವಾಗುವ ಹಾಗೆ ಮಾಡುವ ಸವಾಲುಗಳೇನು?
ಮನೆಯ ಸದಸ್ಯರ ಅಭಿರುಚಿಯನ್ನು ಅರ್ಥ ಮಾಡಿಕೊಳ್ಳಬೇಕು. ಮನೆ ಇಂದು ಪ್ರತಿಷ್ಠೆಯ ಸಂಕೇತ. ಮನೆ ಕಟ್ಟುವ ವಿಚಾರಕ್ಕೆ ಬಂದಾಗ ಕಷ್ಟಪಟ್ಟಾದರೂ ಹಣ ಹಾಕುತ್ತಾರೆ. ಮನೆಕಟ್ಟಲು ಶುರು ಮಾಡಿದರೆ ಒಬ್ಬೊಬ್ಬರು ಒಂದೊಂದು ರೀತಿ ಐಡಿಯಾ ಕೊಡ್ತಾರೆ. ಆಗ ಮನೆಕಟ್ಟುವವರ ಆಲೋಚನೆಯೇ ಬದಲಾಗಬಹುದು.

ಆರ್ಕಿಟೆಕ್ಟ್ ಮನೆ ಕಟ್ಟಿಕೊಡೋದು ಕಾದಂಬರಿ ಬರೆದಂತೆ ಆಗಬೇಕು. ಶುರು ಮಾಡಿ ಕೊನೆ ತನಕ ಆತನೇ ಇರಬೇಕು. ಆತನದೇ ಆಲೋಚನೆ ಜಾರಿಯಾಗಬೇಕು. ಆರ್ಕಿಟೆಕ್ಟ್‌ ಜತೆ ಮನೆ ಮಾಲೀಕರ ಸಂಬಂಧವೂ ಚೆನ್ನಾಗಿರಬೇಕು. ಮನೆಯ ಒಳಗೆ ಒಂದು ಪ್ರತಿಮೆ ಎಲ್ಲಿ ಇಟ್ಟರೆ ಚೆನ್ನಾಗಿರುತ್ತದೆ, ಗಡಿಯಾರ ಎಲ್ಲಿದ್ದರೆ ಚೆನ್ನ ಎಂಬ ಸೌಂದರ್ಯ ಪ್ರಜ್ಞೆ ಇರಬೇಕು. ನಾವು ಮನೆಯೊಳಗೆ ಏನೇ ಮಾಡಿದರೂ ಸದಸ್ಯರಿಗೆ ಉಪಯುಕ್ತವಾಗಿರಬೇಕು.  ದೇವರ ಮನೆ ದೊಡ್ಡದು ಮಾಡಿ ಪುಟ್ಟ ಫೋಟೊ ಇದ್ದರೆ ಆಗಲ್ಲ. ಮನೆಗೆ ಬಂದರೆ ಖುಷಿ ಎನಿಸುವಂತಿರಬೇಕು.

*
ಮನೆಯ ಸುತ್ತ ಮರಗಿಡ ಬೆಳೆಸಲಿ ಎಂಬುದು ನಮ್ಮ ಸಲಹೆ. ಆದರೆ 30 X40 ಸೈಟ್‌ ಅವರೂ ಒಂದಿಂಚೂ ಜಾಗ ಬಿಡದೆ ಮನೆ ಕಟ್ಟುತ್ತಾರೆ. ಹಣ ಇರೋರು ಟೆರೇಸ್‌ ಗಾರ್ಡನ್‌ ಮಾಡುತ್ತಾರೆ. ಆದರೆ ಅದರ ನಿರ್ವಹಣೆ ಕಷ್ಟ. ಅಗತ್ಯಗಳು ಸಂಪೂರ್ಣ ಬದಲಾಗಿವೆ.
-ಎಚ್‌.ಎಸ್.ಅನಂತರಾಮ,
ವಾಸ್ತುಶಿಲ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT