ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಸ್ಥಿತಿ ನಿರ್ವಹಣೆಗೆ ಬೇಕು ಗಂಭೀರ ಯತ್ನ

ಸಂಪಾದಕೀಯ
Last Updated 24 ನವೆಂಬರ್ 2016, 19:30 IST
ಅಕ್ಷರ ಗಾತ್ರ
ರಾಜ್ಯದಲ್ಲಿ ಸತತ ಮೂರನೇ ಬಾರಿಗೆ ಬರಗಾಲ ಬಂದಿದೆ. ಕಳೆದ ನಾಲ್ಕು ದಶಕಗಳಲ್ಲಿಯೇ ಇದು ಭೀಕರ ಬರಗಾಲ. ಕಾವೇರಿ ಕಣಿವೆಯಲ್ಲಿರುವ ನಾಲ್ಕೂ ಜಲಾಶಯಗಳು ಬರಿದಾಗಿವೆ. ತುಂಗಾ, ಭದ್ರಾ ಜಲಾಶಯಗಳಲ್ಲೂ ನೀರು ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ನೀರಿಗೆ ಹಾಹಾಕಾರ ಇದೆ.  ರಾಜ್ಯ ಸರ್ಕಾರ ಈಗಾಗಲೇ ‘15 ಜಿಲ್ಲೆಗಳ 139 ತಾಲ್ಲೂಕುಗಳು ಬರಪೀಡಿತ’ ಎಂದು ಘೋಷಣೆ ಮಾಡಿದೆ. ಬರದಿಂದ ₹17,193 ಕೋಟಿ ನಷ್ಟವಾಗಿದೆ ಎಂದೂ ಅಂದಾಜಿಸಿದೆ.
 
₹4702 ಕೋಟಿ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿದೆ. ಕುಡಿಯುವ ನೀರು ಮತ್ತು ಮೇವು ಪೂರೈಕೆಗೆ ₹ 214 ಕೋಟಿ, ಜಾನುವಾರುಗಳ ಔಷಧಿಗೆ ₹ 15 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. 283 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವುದಾಗಿಯೂ ವಾದಿಸುತ್ತಿದೆ. ಜೊತೆಗೆ ಕೊಳವೆ ಬಾವಿ ಕೊರೆಸಲು ಇರುವ ನಿರ್ಬಂಧವನ್ನು ತೆಗೆದು ಹಾಕುವುದಾಗಿಯೂ ಹೇಳಿದೆ. ಬರ ಸಮಸ್ಯೆ ಕುರಿತು ಸಹಾಯವಾಣಿಯನ್ನೂ ತೆರೆಯಲಾಗಿದೆ.
 
ಇಷ್ಟಿದ್ದರೂ ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ಭಾವನೆ ಜನರಲ್ಲಿ ಇದೆ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬರ ನಿರ್ವಹಣೆಯಲ್ಲಿ ಜಡತ್ವ ಇದೆ ಎಂದು ನೇರ ಆರೋಪ ಮಾಡಿದ್ದಾರೆ. ವಿಧಾನ ಮಂಡಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಸದಸ್ಯರು ಬರಗಾಲದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ರಾಜಕೀಯವನ್ನು ಬದಿಗೆ ಒತ್ತಿ ರೈತರ ಮತ್ತು ಗ್ರಾಮೀಣ ಭಾಗದ ಜನರ ಸಮಸ್ಯೆಗೆ ಮಿಡಿದಿದ್ದಾರೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ. ಆದರೂ ರಾಜ್ಯ ಸರ್ಕಾರದ ಕಾರ್ಯವೈಖರಿಯಲ್ಲಿ ಚುರುಕುತನ ಕಾಣುತ್ತಿಲ್ಲ. 
 
ರಾಜ್ಯದಲ್ಲಿ ಈಶಾನ್ಯ ಮತ್ತು ನೈರುತ್ಯ ಮುಂಗಾರು ವಿಫಲವಾಗಿವೆ. ಇದರಿಂದ ಶೇ80ರಷ್ಟು ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು. ಜನರು ಗುಳೆ ಹೋಗುವುದನ್ನು ತಪ್ಪಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಬರ ಪರಿಹಾರ ಕಾಮಗಾರಿಗಳ ಬಗ್ಗೆ ನಿಗಾ ವಹಿಸಬೇಕು. ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಹಾರ ಕಾಮಗಾರಿಗಳ ಸಮರ್ಪಕ ಜಾರಿಗೆ ಶ್ರಮಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
 
ಸಚಿವರು, ಶಾಸಕರ ಜೊತೆಗೆ ಅಧಿಕಾರಿಗಳನ್ನೂ ಬಡಿದೆಚ್ಚರಿಸುವ ಕೆಲಸವನ್ನು ಮುಖ್ಯಮಂತ್ರಿ ಮಾಡಬೇಕಾಗಿದೆ. ಕಳೆದ ವರ್ಷ ಬರ ನಿರ್ವಹಣೆಗೆ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾದ ಹಣದಲ್ಲಿ ₹ 36 ಕೋಟಿ  ಇನ್ನೂ ಖರ್ಚಾಗಿಲ್ಲ ಎಂದರೆ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಇಂತಹ  ನಿರ್ಲಕ್ಷ್ಯ ಅಕ್ಷಮ್ಯ. ಬರ ಪರಿಹಾರ ಕಾಮಗಾರಿಗಳಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
 
ಬರ ಅಧ್ಯಯನಕ್ಕೆ ಬಂದಿದ್ದ ಕೇಂದ್ರ ತಂಡವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಸರಿಯಾಗಿ ಅನುಷ್ಠಾನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರ ಹೆಚ್ಚಿನ ಗಮನ ನೀಡಬೇಕು. ಸತತ ಬರಗಾಲದಿಂದ ಆಹಾರ ಉತ್ಪಾದನೆಯ ಮೇಲೂ ಪರಿಣಾಮವಾಗಿದೆ. ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. 2016ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ರಾಜ್ಯದಲ್ಲಿ 457 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ.
 
ಸಹಕಾರ ಸಂಘಗಳಿಂದ ರೈತರು ಪಡೆದ ಸಾಲದ ಮೊತ್ತ ಸುಮಾರು ₹ 10 ಸಾವಿರ ಕೋಟಿ.  ವಾಣಿಜ್ಯ ಬ್ಯಾಂಕ್‌ಗಳಿಂದ  ಪಡೆದ ಸಾಲದ ಮೊತ್ತ  ₹ 35 ಸಾವಿರ ಕೋಟಿಗೂ ಹೆಚ್ಚು. ಸಹಕಾರ ಸಂಘಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಿದರೂ ಶೇ 20ರಷ್ಟು ರೈತರಿಗೆ ಮಾತ್ರ ಅನುಕೂಲವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಜರೂರಾಗಿ ರೈತರ ನೆರವಿಗೆ ಬರಬೇಕು. ಆಲಸ್ಯವನ್ನು ಬಿಟ್ಟು ಬರ ಪರಿಹಾರ ಕಾರ್ಯದಲ್ಲಿ ತೊಡಗಬೇಕು. ತಕ್ಷಣದ ಕ್ರಮಗಳ ಜೊತೆಗೆ ದೀರ್ಘಾವಧಿ ಕ್ರಮಗಳನ್ನೂ ಕೈಗೊಳ್ಳಬೇಕು. ಎಲ್ಲ ರೀತಿಯ ದುಂದು ವೆಚ್ಚಗಳನ್ನು ನಿಲ್ಲಿಸಿ ಜನರ ನೆರವಿಗೆ ಧಾವಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT