ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮಹಡಿ ಆಸ್ಪತ್ರೆಗಳಿಗಿಲ್ಲ ಅಗ್ನಿ ಸುರಕ್ಷತೆ

ಅಗ್ನಿಶಾಮಕ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಗೊಂಡ ಕಟುವಾಸ್ತವ
Last Updated 25 ನವೆಂಬರ್ 2016, 10:13 IST
ಅಕ್ಷರ ಗಾತ್ರ

ಮೈಸೂರು: ಬಹುಮಹಡಿ ಕಟ್ಟಡದಲ್ಲಿರುವ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದ್ದು, ನಿಯಮ ಉಲ್ಲಂಘಿಸಿದ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆಯ ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಹಾಸನದಲ್ಲಿ 10 ಬಹುಮಹಡಿ ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತೆಗೆ ಯಾವುದೇ ಕ್ರಮ ವಹಿಸಿಲ್ಲ. ಮಂಡ್ಯದ ಒಂದು ಹಾಗೂ ಮೈಸೂರಿನ ನಾಲ್ಕು ಆಸ್ಪತ್ರೆಗಳು ಮಾರ್ಗದರ್ಶಿ ಸೂಚಕಗಳನ್ನು ಉಲ್ಲಂಘಿಸಿವೆ.

ಅ. 17ರಂದು ಒಡಿಶಾದ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 24 ಮಂದಿ ಮೃತಪಟ್ಟ ಪರಿಣಾಮ ರಾಜ್ಯದ ಎಲ್ಲ ಆಸ್ಪತ್ರೆಗಳ ಅಗ್ನಿ ಸುರಕ್ಷತೆಯ ಕುರಿತು ಸಮೀಕ್ಷೆ ನಡೆಸುವಂತೆ ಅಗ್ನಿಶಾಮಕ ಇಲಾಖೆಗೆ ಸೂಚನೆ ನೀಡಲಾಗಿದೆ. ಮೊದಲ ಹಂತದಲ್ಲಿ ಬಹುಮಹಡಿ ಕಟ್ಟಡಗಳಲ್ಲಿರುವ ಆಸ್ಪತ್ರೆಗಳ ಸಮೀಕ್ಷೆ ನಡೆಸಲಾಗಿದೆ. ಇತರ ಕಟ್ಟಡಗಳಲ್ಲಿರುವ ಆಸ್ಪತ್ರೆ, ನರ್ಸಿಂಗ್‌ ಹೋಂ ಹಾಗೂ ಕ್ಲಿನಿಕ್‌ಗಳ ಪರಿಶೀಲನೆ ನಡೆಯುತ್ತಿದ್ದು, ಎರಡನೇ ಹಂತದಲ್ಲಿ ಕ್ರಮ ಜರುಗಿಸಲು ನಿರ್ಧರಿಸಿದೆ.

ಎನ್‌ಬಿಸಿ ನಿಯಮ: ರಾಷ್ಟ್ರೀಯ ಕಟ್ಟಡಗಳ ನಿಗಮದ (ಎನ್‌ಬಿಸಿ) 2005ರ ಪರಿಷ್ಕೃತ ನಿಯಮಗಳ ಪ್ರಕಾರ 15 ಮೀಟರ್‌ಗೂ ಎತ್ತರದ ಕಟ್ಟಡವನ್ನು ಬಹುಮಹಡಿಯ ಕಟ್ಟಡವೆಂದು ಪರಿಗಣಿಸಲಾಗುತ್ತದೆ. ಇಂಥ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆಗೆ ಸಂಬಂಧಿಸಿದಂತೆ ನಿರ್ಮಾಣ ಹಂತದಲ್ಲಿಯೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಕಡ್ಡಾಯ.

‘ಬೆಂಕಿ ನಂದಕ ಯಂತ್ರಗಳನ್ನು ಪ್ರತಿ ಮಹಡಿಯಲ್ಲಿಯೂ ಸನ್ನದ್ಧವಾಗಿ ಇಟ್ಟುಕೊಳ್ಳಬೇಕು. ಜ್ವಾಲೆಯ ಕೆನ್ನಾಲಿಗೆ ಹೆಚ್ಚಾದಾಗ ನೀರಿನ ಮೂಲಕವೇ ಅಗ್ನಿಯನ್ನು ಶಮನ ಮಾಡಲು ಸಾಧ್ಯ. ಹೀಗಾಗಿ, ನೀರು ಹರಿಸಲು ಕೊಳವೆ ಮಾರ್ಗವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಪ್ರತಿ 8 ಮೀಟರ್‌ಗೆ ಸ್ಪ್ರಿಂಕ್ಲರ್‌ ಅಳವಡಿಸಬೇಕು. ತುರ್ತು ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಇರಬೇಕು. ಕಟ್ಟಡದ ಎರಡು ಭಾಗಗಳಲ್ಲಿ ಮೆಟ್ಟಿಲು ವ್ಯವಸ್ಥೆ (ಸ್ಟೇರ್‌ಕೇಸ್‌) ಇರಬೇಕು. ಎನ್‌ಬಿಸಿಯ ಯಾವ ನಿಯಮಗಳೂ ಪಾಲನೆಯಾಗಿಲ್ಲ’ ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಜಿ.ಈಶ್ವರ್‌ ನಾಯ್ಕ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬಾಡಿಗೆ ಕಟ್ಟಡಗಳು: ಮೈಸೂರು ಜಿಲ್ಲೆಯ 6 ಬಹುಮಹಡಿ ಆಸ್ಪತ್ರೆಗಳ ಪೈಕಿ ನಾಲ್ಕರಲ್ಲಿ ಎನ್‌ಬಿಸಿ ನಿಯಮ ಪಾಲನೆಯಾಗಿಲ್ಲ. ಅಗ್ರಹಾರದಲ್ಲಿರುವ ಜೆಎಸ್‌ಎಸ್ ಮಲ್ಟಿಸ್ಪೆಷಾಲಿಟಿ ಹಾಗೂ ಕುವೆಂಪುನಗರದ ಅಪೋಲೊ ಆಸ್ಪತ್ರೆಗಳಲ್ಲಿ ಮಾತ್ರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಹಾಸನದ 63 ಆಸ್ಪತ್ರೆಗಳ ಪೈಕಿ 10 ಬಹುಮಹಡಿ ಆಸ್ಪತ್ರೆಗಳಿದ್ದು, ಯಾವುದೂ ಸುರಕ್ಷಿತವಾಗಿಲ್ಲ. ಚಾಮರಾಜನಗರದಲ್ಲಿ ಬಹುಮಹಡಿ ಆಸ್ಪತ್ರೆಗಳಿಲ್ಲ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ.

ಬಹುತೇಕ ಆಸ್ಪತ್ರೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ವಾಣಿಜ್ಯ ಸಂಕೀರ್ಣಗಳನ್ನು ಆಸ್ಪತ್ರೆಯಾಗಿ ಪರಿವರ್ತನೆ ಮಾಡಲಾಗಿದೆ. ಡಯಾಲಿಸಿಸ್, ತುರ್ತುನಿಗಾ ಘಟಕ, ಪ್ರಯೋಗಾಲಯ ಸೇರಿ ಇತರೆಡೆ ಬೆಂಕಿ ದುರಂತ ಸಂಭವಿಸುವ ಸಾಧ್ಯತೆ ಹೆಚ್ಚು. ಇಂತಹ ಸ್ಥಳಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಿಲ್ಲ ಎನ್ನುವುದು ಬೆಳಕಿಗೆ ಬಂದಿದೆ.

ನಿರ್ವಹಣೆ ಕೊರತೆ: ‘ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವ ಸಂದರ್ಭದಲ್ಲಿ ನೂತನ ಕಟ್ಟಡಗಳಿಗೆ ಅಗ್ನಿ ನಂದಕ ಯಂತ್ರಗಳನ್ನು ಅಳವಡಿಸಲಾಗುತ್ತದೆ.

ಕಾಲಾನಂತರ ನಿರ್ವಹಣೆ ಕೊರತೆಯಿಂದಾಗಿ ಯಂತ್ರಗಳು ನಿಷ್ಪ್ರಯೋಜಕವಾಗುತ್ತವೆ. ಈ ನಿಟ್ಟಿನಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ಗಮನಹರಿಸುತ್ತಿಲ್ಲ. ಈ ಯಂತ್ರಗಳನ್ನು ಬಳಕೆ ಮಾಡುವ ಕುರಿತು ಕಟ್ಟಡದಲ್ಲಿರುವ ಸಿಬ್ಬಂದಿ ತರಬೇತಿ ಪಡೆಯಬೇಕು. ಆದರೆ, ಬಹುತೇಕ ಸಿಬ್ಬಂದಿ ಈ ತರಬೇತಿಯನ್ನು ಉಪೇಕ್ಷಿ ಸುತ್ತಾರೆ’ ಎಂದು ಈಶ್ವರ್‌ ನಾಯ್ಕ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT