ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸಹಸ್ರಮಾನದ ಯುವತಿಯ ಮನೋನಂದನ

Last Updated 25 ನವೆಂಬರ್ 2016, 11:12 IST
ಅಕ್ಷರ ಗಾತ್ರ

ಚಿತ್ರ: ಡಿಯರ್ ಜಿಂದಗಿ (ಹಿಂದಿ)
ನಿರ್ಮಾಣ: ಗೌರಿ ಖಾನ್, ಕರಣ್ ಜೋಹರ್, ಗೌರಿ ಶಿಂಧೆ
ನಿರ್ದೇಶನ: ಗೌರಿ ಶಿಂಧೆ
ತಾರಾಗಣ: ಅಲಿಯಾ ಭಟ್, ಶಾರುಖ್ ಖಾನ್, ಇರಾ ದುಬೆ, ಯಶಸ್ವಿನಿ ದಯಾಮ

‘ಬಾಲ್ಯದಲ್ಲಿ ನನ್ನ ಅಪ್ಪ ಇಲ್ಲಿಗೆ ಪ್ರತಿ ಭಾನುವಾರ ಸಂಜೆ ಕರೆತಂದು, ಅಲೆಗಳ ಜತೆ ಕಬಡ್ಡಿ ಆಡಿಸುತ್ತಿದ್ದ’ – ಹೀಗೆ ತನ್ನಲ್ಲಿಗೆ ಪರಿಹಾರಕ್ಕೆಂದು ಬಂದ ಯುವತಿಗೆ ಹೇಳುವ ಮನೋವೈದ್ಯ, ಕಡಲತಟದಲ್ಲಿ ಅಲೆಗಳ ಜತೆ ಕಬಡ್ಡಿ ಆಡಿ ತೋರಿಸುತ್ತಾನೆ. ಅಲೆಗಳೊಟ್ಟಿಗೆ ಮಗುವಿನಂತೆ ಆಡುವ ಯುವತಿಯ ಮನೋನಂದನ ನಮಗೆಲ್ಲ ಕಾಣಿಸುತ್ತದೆ.

ಸಂಗಾತ ಶೋಧದಲ್ಲಿ ವ್ಯಾಕುಲಕ್ಕೆ ಒಳಗಾಗುವ ಯುವತಿಯು ಮನೋವೈದ್ಯನಲ್ಲಿಗೆ ಚಿಕಿತ್ಸೆಗಾಗಿ ಹೋಗುವ ಕಥಾನಕವನ್ನು ಗೌರಿ ಶಿಂಧೆ ತಮ್ಮ ಈ ಚಿತ್ರದ ವಸ್ತುವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ದೀರ್ಘಾವಧಿಯ ಕಥನ ಭಿತ್ತಿ ಅವರಿಗೆ ಬೇಕಿಲ್ಲ. ‘ಇಂಗ್ಲಿಷ್ ವಿಂಗ್ಲಿಷ್’ ಹಿಂದಿ ಚಿತ್ರದಲ್ಲೂ ಇದನ್ನು ನಾವು ಕಂಡಿದ್ದೆವು. ಚಿಕಿತ್ಸೆಯ ವಿಧಾನವನ್ನು ವೈದ್ಯ ವಿಜ್ಞಾನದ ಪ್ರಕ್ರಿಯೆ ತೋರುವ ಹಂಗಿಗೆ ಒಳಪಡಿಸದೆ ಭಾವವೀಣೆಯ ತಂತಿ ಮೀಟುವ ಜಾಹೀರಾತು ದರ್ಶನದ ತತ್ತ್ವಕ್ಕೆ ಹೊರಳಿಕೊಂಡಿದ್ದಾರೆ. ಎಷ್ಟೇ ಆಗಲಿ ಅವರು ಜಾಹೀರಾತು ಚಿತ್ರಗಳ ತಯಾರಿಯಲ್ಲಿ ಪಳಗಿದವರು. ಅದಕ್ಕೇ ಸಂಕಲನ, ವ್ಯವಕಲನದ ಲೆಕ್ಕಾಚಾರದಲ್ಲಿ ನಿಸ್ಸೀಮರು. 

ಗೌರಿ ಶಿಂಧೆ ಪರಿಕಲ್ಪನೆಯ ನಾಯಕಿ ಇಷ್ಟವಾಗುವುದು ಅವಳ ವೃತ್ತಿಪ್ರೀತಿ ಹಾಗೂ ನೇರವಂತಿಕೆಯಿಂದ. ಅಲಿಯಾ ಭಟ್ ಆ ಪಾತ್ರವನ್ನು ಉತ್ಕಟತೆಯಿಂದ ಅನುಭವಿಸಿದ್ದಾರೆ. ಅನುಮಾನ, ಉದಾಸೀನ, ಸಿಟ್ಟು–ಸೆಡವು, ಹೇವರಿಕೆ, ಬಿಕ್ಕುವಿಕೆ, ಅರಳುವಿಕೆ ಎಲ್ಲಾ ಭಾವನದಿಗಳನ್ನೂ ತಮ್ಮ ಪುಟ್ಟ ಚಹರೆಯಲ್ಲಿ ಅವರು ಅಡಗಿಸಿಟ್ಟುಕೊಂಡಿರುವಂತಿದೆ.

ಶಾರುಖ್ ಖಾನ್ ತಮ್ಮ ತಾರಾ ವರ್ಚಸ್ಸಿನಿಂದ ಹೊರಬಂದು ಮನೋವೈದ್ಯನ ಕುರ್ಚಿ ಮೇಲೆ ಕುಳಿತಿದ್ದಾರೆ. ಅಭಿನಯ ಅವರಿಗೆ ಸವಾಲೇ ಅಲ್ಲ. ನಿರ್ದಿಷ್ಟ ಏರಿಳಿತದಲ್ಲಿ ಸಂಭಾಷಣೆ ಒಪ್ಪಿಸಿರುವ ಅವರು ಧರಿಸಿರುವ ವಸ್ತ್ರಗಳು ಆಕರ್ಷಕವಾಗಿವೆ. ಎದೆಗೆ ಗುಂಡಿಕ್ಕುವಷ್ಟು ತೀವ್ರವಾದ ಸಂಭಾಷಣೆಯನ್ನು ಅನೇಕ ದೃಶ್ಯಗಳಲ್ಲಿ ಬರೆದಿರುವ ಗೌರಿ ಶಿಂಧೆ ಕುಶಲಮತಿ. ಸಂಕಲನಸ್ನೇಹಿ ಚಿತ್ರಕಥೆಯನ್ನು ರೂಪಿಸಿರುವ ಅವರು, ಅದನ್ನು ಪ್ರಜ್ಞಾಪೂರ್ವಕವಾಗಿಯೇ ವಾಚ್ಯವಾಗಿಸಿದ್ದಾರೆ. ಗೋಡೆಗಳ ನಡುವೆ ಪಾತ್ರಗಳ ನಡುವೆ ನಡೆಯುವ ವಾಗ್ವಾದವನ್ನು ಮೆಲೋಡ್ರಾಮಾದ ಮಟ್ಟಕ್ಕೇರಿಸಿ ಮಜಾ ಕೊಟ್ಟಿದ್ದಾರೆ. ಅದು ಅವರ ಸಿನಿಮಾ ಕ್ರಮ.

‘ಇನ್ನೂ ಹೀಗೆ ಆಗಬಹುದಿತ್ತು’ ಎಂದು ಈ ಸಿನಿಮಾ ಇಟ್ಟುಕೊಂಡು ಹೇಳಲೂ ನೆಪಗಳು ಸಿಗುತ್ತವೆ. ನಾಯಕಿಯ ಬಾಲ್ಯದ ದಿನಗಳನ್ನು ತೋರುವ ಕ್ರಮವನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಅಲ್ಲಿ ಅಜ್ಜ–ಅಜ್ಜಿಯ ಚಹರೆಗಳೇ ನಮ್ಮ ನೆನಪಿನಲ್ಲಿ ಉಳಿಯುವುದಿಲ್ಲ. ನಾಯಕಿಯ ಮನೋನಂದನವನ್ನಷ್ಟೇ ತೋರುವ ಉಮ್ಮೇದಿನಿಂದ ಅವಳ ಪಾತ್ರದ ಸುತ್ತಲಿನ ಹಲವು ಪಾತ್ರಗಳು ಕೇವಲ ವರ್ತಿಸುವಂತೆ ಬಿಂಬಿತವಾಗಿವೆ.

ನಾಯಕಿ ಸ್ನೇಹಿತೆಯ ಪಾತ್ರದಲ್ಲಿ ಇರಾ ದುಬೆ ಹೆಚ್ಚು ಇಷ್ಟವಾಗುತ್ತಾರೆ. ಕುನಾಲ್ ಕಪೂರ್ ಕೂಡ ಕಾಣಿಸಿಕೊಳ್ಳುವಷ್ಟೂ ಹೊತ್ತು ಗಮನಾರ್ಹ. ಅಮಿತ್ ತ್ರಿವೇದಿ ಹಿನ್ನೆಲೆ ಸಂಗೀತ ಚಿತ್ರದ ಔಚಿತ್ಯಕ್ಕೆ ಸ್ಪಂದಿಸಿದೆ. ಹೇಮಂತಿ ಸರ್ಕಾರ್ ಸಂಕಲನ ಶ್ಲಾಘನೀಯ.
ಹೊಸ ಸಹಸ್ರಮಾನದ ಡಿಜಿಟಲೀಕೃತ ಮನಸ್ಸುಗಳ ಮಂಥನ ಮಾಡುವ ಹಂಬಲವಿರುವ ‘ಡಿಯರ್ ಜಿಂದಗಿ’ ನೋಡಲು ಯೋಗ್ಯ ಎನ್ನುವುದಕ್ಕೆ ಅನೇಕ ಕಾರಣಗಳು ಸಿಗುತ್ತವೆ. ಅದೇ ಈ ಸಿನಿಮಾದ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT