ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಸಮಸ್ಯೆ: ಹಲವು ಮುಖ

Last Updated 25 ನವೆಂಬರ್ 2016, 19:30 IST
ಅಕ್ಷರ ಗಾತ್ರ

‘ಅಮ್ಮ, ನಾನು ಜೋಕರ್‌ ಅಲ್ಲ. ಆದರೂ ಶಾಲೆಯಲ್ಲಿ ಎಲ್ಲರೂ ನನ್ನ ನೋಡಿ ನಗೋದ್ಯಾಕಮ್ಮ? ನಾನು ನಡೆದರೂ ನಗುತ್ತಾರೆ, ಓಡಿದರೂ ನಗುತ್ತಾರೆ, ನಾನು ಲಂಚ್‌ ಬಾಕ್ಸ್‌ ತೆರೆದರೆ ಎಲ್ಲರ ಕಣ್ಣೂ ನನ್ನ ಬಾಕ್ಸ್‌ ಮೇಲೆಯೇ. ನಾನು ಎಷ್ಟು ತಿನ್ನುತ್ತೇನೆ, ಏನು ತಿನ್ನುತ್ತೇನೆ ಎನ್ನುವ ಕುತೂಹಲ... ಯಾಕಮ್ಮ ಹೀಗೆ?’

ಮಗನ ಪ್ರಶ್ನೆಗೆ ಉತ್ತರಿಸಲಾಗದೇ ದಿಗಿಲುಗೊಳ್ಳುವ ಅಮ್ಮ  ಕುಟುಂಬ ವೈದ್ಯರ ಬಳಿ ತನ್ನ ಅಳಲು ತೋಡಿಕೊಳ್ಳುತ್ತಾಳೆ. 14 ವರ್ಷದ ಬಾಲಕನನ್ನು ಹೀಗೆ ಚಿಂತೆಗೀಡು ಮಾಡುವ ಈ ದುಗುಡ ಅಮ್ಮನನ್ನೂ ಬಿಟ್ಟಿರುವುದಿಲ್ಲ. ‘ನಿಮ್ಮ ಮಗ ಓವರ್‌ ವೇಟಾ?’ ‘ತಿನ್ನಲು ಏನು ಕೊಡುತ್ತೀರಿ?’ ಎನ್ನುವ ಪ್ರಶ್ನೆಗಳಿಗೆ ಅಮ್ಮನೂ ರೋಸಿ ಹೋಗುವುದಿದೆ.

ಇಲ್ಲಿದೆ ಮೂಲ: ಮಕ್ಕಳ ಬೊಜ್ಜಿಗೆ ಕಾರಣ ಹಾಗೂ ಪರಿಹಾರ ಎರಡೂ ತಾಯಿಯ ಎದೆಹಾಲಿನಲ್ಲಿದೆ.

ಇತ್ತೀಚೆಗೆ ದುಡಿಯುವ ತಾಯಂದಿರ ಸಂಖ್ಯೆ ಹೆಚ್ಚಿದೆ. ಮೂರು ತಿಂಗಳಿಗೆಲ್ಲ ಪುಟ್ಟ ಕಂದಮ್ಮಗಳನ್ನು ‘‘ಕೇರ್‌ ಟೇಕರ್‌’’ಗಳ ಮಡಿಲಿಗೆ ಹಾಕಿ ಅಮ್ಮಂದಿರು ಕಚೇರಿಗೆ ಹಾಜರಾಗಬೇಕಾದ ಅನಿವಾರ್ಯತೆ ಇದೆ ಕೌಟುಂಬಿಕ ಹಾಗೂ ಆರ್ಥಿಕ ಬದ್ಧತೆಯೂ ಸೇರಿದಂತೆ ಅನೇಕ ಕಾರಣಗಳಿಂದಾಗಿ ತಾಯಿ ಬಹಳ ಬೇಗ ಕೆಲಸಕ್ಕೆ ಹಿಂದಿರುಗುತ್ತಾಳೆ. ಮೂರನೇ ತಿಂಗಳಿಗೇ ಹೊರಗಿನ ಆಹಾರಕ್ಕೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಕಂದನ ಪಾಲಿಗೆ ಬರುತ್ತದೆ. ಆದರೆ ತಾಯಿಯ ಹಾಲಿನಲ್ಲಿ ಸಿಗುವ ಲಾಭಗಳು ಕೃತಕ ಆಹಾರಗಳಲ್ಲಿ ಸಿಗದು. ಮಕ್ಕಳ ಬೊಜ್ಜಿನ ಮೂಲ ಇರುವುದು ಇಲ್ಲಿಯೇ.

ಮನೆಯಿಂದ ಹೊರಗೆ ಬಿಡಿ: ತಮಗೆ ಸಮಯವಿಲ್ಲ ಎನ್ನುವ ಕಾರಣಕ್ಕೆ ಹೆಚ್ಚಿನ ಪಾಲಕರು ಮಕ್ಕಳನ್ನು ಟಿ.ವಿ. ಪರದೆಯ ಮುಂದೆ ಕೂರಿಸಿ ರಿಮೋಟ್‌ ಕೈಗೆ ಕೊಟ್ಟು ಬಿಡುತ್ತಾರೆ. ಇನ್ನೂ ಕೆಲವು ಪಾಲಕರು ಮೊಬೈಲ್‌, ಟ್ಯಾಬ್‌ಗಳಲ್ಲಿ ಗೇಮ್‌ ಹಾಕಿಕೊಟ್ಟು ಮಕ್ಕಳನ್ನು ಸುಮ್ಮನಾಗಿಸುತ್ತಾರೆ. ದಿನದಲ್ಲಿ ಒಂದರ್ಧ ಗಂಟೆ ಅಥವಾ ವಾರಕ್ಕೊಮ್ಮೆಯಾದರೂ ಬಿಡುವು ಮಾಡಿಕೊಂಡು ಮಕ್ಕಳನ್ನು ಉದ್ಯಾನಕ್ಕೆ, ಮೈದಾನಕ್ಕೆ ಕರೆದುಕೊಂಡು ಹೋಗಿ.

ಮಕ್ಕಳೇ ಸ್ನೇಹಿತರೊಟ್ಟಿಗೆ ಹೊರಗೆ ಆಡಲು ಹೋಗುವುದಾದರೂ ಸರಿ. ಅದನ್ನು ತಡೆಯಬೇಡಿ. ಎಲ್ಲಾದರೂ ಬಿದ್ದರೆ, ಕಿತ್ತಾಡಿಕೊಂಡರೆ ಎನ್ನುವ ಭಯ ಬೇಡ. ಅವೆಲ್ಲ ಬಾಲ್ಯಾವಸ್ಥೆಯ ಮಧುರ ನೆನಪುಗಳಾಗುತ್ತವೆ. ಆದರೆ ಹೊರಗೆ ಆಟಕ್ಕೆ ಹೋದಾಗ ಸುರಕ್ಷಾ ಕ್ರಮ ತೆಗೆದುಕೊಳ್ಳುವಂತೆ ಮಕ್ಕಳಿಗೆ ತಿಳಿ ಹೇಳಿ. ಒಂದು ವೇಳೆ ಇದಕ್ಕೂ ಅವಕಾಶ ಇಲ್ಲದೇ ಹೋದರೆ ನೃತ್ಯ, ಸ್ಕೇಟಿಂಗ್‌, ಈಜು ಸೇರಿದಂತೆ ಯಾವುದಾದರೂ ದೈಹಿಕ ಶ್ರಮ ಕೇಳುವ ತರಗತಿಗಳಿಗೆ ಮಕ್ಕಳನ್ನು ಸೇರಿಸಿ.

ಹೆಣ್ಣುಮಕ್ಕಳ ದುಗುಡ: ಬೊಜ್ಜು ಮಕ್ಕಳ ಸಂಕಷ್ಟ ಒಂದೆರಡಲ್ಲ. ಅದರಲ್ಲೂ ಅತಿತೂಕ ಹೊಂದಿರುವ ಹೆಣ್ಣುಮಕ್ಕಳ ಹಾಗೂ ಅವರ ಪಾಲಕರ ಗೋಳು ಹೇಳುವುದು ಇನ್ನೂ ಕಷ್ಟ.

ಬೊಜ್ಜು ಹೊಂದಿರುವ ಹೆಣ್ಣುಮಕ್ಕಳು ಸಾಮಾನ್ಯ ಮಕ್ಕಳಿಗಿಂತ ಬಹುಬೇಗ, 8–9ನೇ ವರ್ಷಕ್ಕೆ ಋತುಮತಿ ಆಗುತ್ತಾರೆ. ಪಾಲಕರಿಗೂ–ಮಕ್ಕಳಿಗೂ ಇದು ಒಂದು ರೀತಿಯ ಯಾತನಾಮಯ ಸನ್ನಿವೇಶ.

ಮಕ್ಕಳಲ್ಲಿ ಆರೋಗ್ಯಕರ ತೂಕವನ್ನು ಕಾಯುವ ಜೊತೆಗೆ ಅವರ ಮನಸ್ಸಿನಲ್ಲಿ ನೆಲೆನಿಂತಿರುವ ಬೇಸರದ, ಖೇದದ ಭಾವನೆಗಳನ್ನು ದೂರ ಮಾಡಲು ಪಾಲಕರು, ಶಿಕ್ಷಕರು, ವೈದ್ಯರು ಹಾಗೂ ಸಮಾಜದ ಎಲ್ಲ ಜವಾಬ್ದಾರಿಯುತ ನಾಗರಿಕರು ಪ್ರಯತ್ನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT