ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿ ತೂಕದ ಮಕ್ಕಳಲ್ಲೂ ಅಪೌಷ್ಟಿಕತೆ

Last Updated 25 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಮಕ್ಕಳಲ್ಲಿ ಬೊಜ್ಜು ಮತ್ತು ಅಪೌಷ್ಟಿಕತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಎರಡು ಹೊರೆಯನ್ನು ಹೊರಬೇಕಾಗಿದೆ. ಹೌದು, ಇದು ನಮ್ಮ ಸಾಮಾಜಿಕ-ಆರ್ಥಿಕ ವಲಯಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅಪೌಷ್ಟಿಕತೆಯಿಂದ ಬೆಳವಣಿಗೆಯಲ್ಲಿ ಕುಂಠಿತಗೊಳ್ಳುತ್ತದೆ. ಬೊಜ್ಜು ಅಥವಾ ಅತಿಯಾದ ತೂಕ ಅಥವಾ ಮಧುಮೇಹ, ಕೊಬ್ಬು, ಲವಣಾಂಶ ಹೆಚ್ಚಿರುವ ಮಕ್ಕಳು ಮತ್ತು ಯುವಕ/ಯುವತಿಯರ ಸಂಖ್ಯೆ ಹೆಚ್ಚಾಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯೂಎಚ್‌ಒ) ವರದಿ ಪ್ರಕಾರ, ಮಕ್ಕಳಲ್ಲಿ ಬರುವ ಅತಿಯಾದ ತೂಕ ಮತ್ತು ಬೊಜ್ಜು ಯೌವನಾವಸ್ಥೆಗೆ ಮುಂದುವರಿದು ಹೃದ್ರೋಗ ಮತ್ತು ಮಧುಮೇಹದಂತಹ ಆರೋಗ್ಯ ಸವಾಲುಗಳಿಗೆ ಕಾರಣವಾಗುತ್ತವೆ. ಇದರ ಪರಿಣಾಮ ಬಹುಬೇಗನೇ ಸಾವು ಬರುವ ಮತ್ತು ತಾರುಣ್ಯದಲ್ಲಿಯೇ ಅಂಗವೈಕಲ್ಯ ಬರುವ ಅಪಾಯಗಳಿವೆ.

ಚಿಕ್ಕಂದಿನಿಂದಲೇ ಉತ್ತಮ ಆಹಾರಾಭ್ಯಾಸ
ತಮ್ಮ ಮಕ್ಕಳ ಆಹಾರಪದ್ಧತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರು ಪೋಷಕರು. ಮಕ್ಕಳಿಗೆ ಯಾವ ರೀತಿಯ ಪೌಷ್ಟಿಕ ಆಹಾರ ನೀಡಬೇಕೆಂಬುದರ ಬಗ್ಗೆ ಅವರಲ್ಲಿ ಅರಿವು ಇರಬೇಕಾದುದು ಬಹುಮುಖ್ಯವಾದ ಅಂಶ.  ಮಕ್ಕಳು ಹೆಚ್ಚು ತೂಕ ಹೊಂದದಂತೆ ನೋಡಿಕೊಳ್ಳಬೇಕಾದುದು ಅವರ ಕರ್ತವ್ಯ. ವಿಶೇಷವಾಗಿ ಜಂಕ್‌ಫುಡ್‌ಗಳ ಜಾಹೀರಾತು ಸೇರಿದಂತೆ ಬಾಹ್ಯ ಪ್ರಭಾವಗಳು ಆಹಾರಪದ್ಧತಿಯ ಮೇಲೆ ಪರಿಣಾಮ ಬೀರುವುದನ್ನು ಪೋಷಕರು ತಪ್ಪಿಸಬೇಕು. ಇದರ ಬದಲಾಗಿ ಮಕ್ಕಳಲ್ಲಿ ಆರೋಗ್ಯಕರ ಮತ್ತು ಪೌಷ್ಟಿಕಾಂಶ ಇರುವ ಆಹಾರದ ಅಭ್ಯಾಸ ಮಾಡಿಸಬೇಕು. ಉತ್ತಮ ಜೀವನಶೈಲಿಯ ಬಗ್ಗೆ ಮನವರಿಕೆ ಮಾಡಿಕೊಡಬೇಕು.

ಬೊಜ್ಜು ಪರೀಕ್ಷೆ
ತೂಕವೊಂದೇ ಮಕ್ಕಳ ಬೊಜ್ಜಿನ ಮಾಪಕ ಎಂದು ಪೋಷಕರು ತಪ್ಪು ಕಲ್ಪನೆ ಹೊಂದಿದ್ದಾರೆ. ಆದರೆ, ಬಾಡಿ ಮಾಸ್ ಇಂಡೆಕ್ಸ್(ಬಿಎಂಐ) ಪರೀಕ್ಷೆಯಲ್ಲಿ ಮಕ್ಕಳ ತೂಕ ಮತ್ತು ಎತ್ತರದ ಆಧಾರದ ಮೂಲಕ ದೇಹದಲ್ಲಿನ ಕೊಬ್ಬಿನ ಅಂಶವನ್ನು ಅಂದಾಜು ಮಾಡಲಾಗುತ್ತದೆ. ಈ ಮೂಲಕ ಮಗುವಿಗೆ ಬೊಜ್ಜು ಇದೆಯೇ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು.

ಬೊಜ್ಜಿನಿಂದ ಆಗುವ ಅಪಾಯಗಳು
ಅತಿಯಾದ ಜಂಕ್‌ಫುಡ್ ಸೇವನೆ, ಕ್ಯಾಲರಿ ಹೆಚ್ಚಿರುವ ಪಾನೀಯಗಳ ಸೇವನೆ, ಕಡಿಮೆ ದೈಹಿಕ ಚಟುವಟಿಕೆ ಸೇರಿದಂತೆ ಮತ್ತಿತರ ಅಂಶಗಳು ಮಕ್ಕಳಲ್ಲಿ ಅತಿಯಾದ ತೂಕ ಮತ್ತು ಬೊಜ್ಜು ಬರಲು ಪ್ರಮುಖ ಕಾರಣಗಳಾಗುತ್ತವೆ. ಕೆಲವು ಅಧ್ಯಯನಗಳು ಹೇಳುವಂತೆ, ಬೊಜ್ಜು ಬರಲು ಅನುವಂಶೀಯತೆಯೂ ಕಾರಣವಾಗಬಲ್ಲದು. ಅತಿಯಾದ ತೂಕ ಹೊಂದಿದ ವ್ಯಕ್ತಿಗಳನ್ನು ಹೊಂದಿರುವ ಕುಟುಂಬದಲ್ಲಿನ ಮಕ್ಕಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸದಿದ್ದರೆ ಮಕ್ಕಳಲ್ಲಿ ವಯಸ್ಸಿಗೆ ಮೀರಿದ ತೂಕ ಹೆಚ್ಚಳವಾಗುವ ಸಾಧ್ಯತೆಗಳು ಇವೆ.

ಪಾಶ್ಚಾತ್ಯ ದೇಶಗಳಲ್ಲಿ ಜಂಕ್‌ಫುಡ್ ಮತ್ತು ಪಾನೀಯಗಳು  ದೈನಂದಿನ ಆಹಾರಪದ್ಧತಿಯ ಭಾಗವಾಗಿರುವುದರಿಂದ ಕಡಿಮೆ ಆದಾಯ ಇರುವ ಹೆಚ್ಚು ಮಕ್ಕಳಲ್ಲಿ ಬೊಜ್ಜು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಭಾರತದಲ್ಲಿ ಮಧ್ಯಮ ವರ್ಗ ಮತ್ತು  ಶ್ರೀಮಂತ ವರ್ಗದ ಕುಟುಂಬಗಳ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆಗಳು ಹೆಚ್ಚಾಗಿ ಎದುರಾಗುತ್ತವೆ. ಇದಕ್ಕೆ ಪ್ರಮುಖ ಕಾರಣ ಭಾರತೀಯ ಮಾರುಕಟ್ಟೆಯಲ್ಲಿ ಅತಿಯಾಗಿ ದೊರೆಯುವ ಪ್ಯಾಕೇಜ್ಡ್ ಜಂಕ್‌ಫುಡ್‌ಗಳು. ಇವು ಮಧ್ಯಮ ಮತ್ತು ಶ್ರೀಮಂತವರ್ಗದ ಕುಟುಂಬಗಳ ಮಕ್ಕಳಿಗೆ ಸುಲಭವಾಗಿ ಲಭ್ಯವಾಗುವಂತಹ ಆಹಾರ ಪದಾರ್ಥಗಳಾಗಿವೆ.

ಹೆಚ್ಚು ಕ್ಯಾಲರಿಗಳಿರುವ ಕ್ಯಾಂಡೀಸ್, ಚಾಕೊಲೇಟ್‌ಗಳು, ಚಿಪ್ಸ್, ಬಿಸ್ಕತ್ತು, ನೂಡಲ್ಸ್ ಮಕ್ಕಳು ಸ್ನ್ಯಾಕ್ಸ್‌ಗಾಗಿ ಆಯ್ದುಕೊಳ್ಳುತ್ತಾರೆ. ಜಾಗತಿಕ ಮಟ್ಟದ ಫಾಸ್ಟ್‌ಫುಡ್‌ಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ, ಈ ಫುಡ್‌ಗಳ ಮೇಲಿನ ರಿಯಾಯ್ತಿಗಳು, ಬರ್ಗರ್‌ಗಳು ಮತ್ತು ಪಿಜ್ಜಾಗಳು ಮನೆಯಲ್ಲಿ ಮಾಡುವ ಆಹಾರಗಳಿಗೆ ಪರ್ಯಾಯವಾಗಿ ಆವರಿಸಿಕೊಂಡಿವೆ.

ಬಾಲ್ಯದಲ್ಲಿ ಬೊಜ್ಜು ತಡೆ ಅಗತ್ಯ
ನಮ್ಮ ಮಕ್ಕಳಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿ ಮಾಡುವ ಮೂಲಕ ದೇಶದಲ್ಲಿ ಸಾಂಕ್ರಾಮಿಕ ರೋಗದಂತೆ ಹೆಚ್ಚಾಗುತ್ತಿರುವ ಬಾಲ್ಯಾವಸ್ಥೆಯ ಬೊಜ್ಜಿನ ಸಮಸ್ಯೆಯಿಂದ ದೂರವಿರಬಹುದು.  ತೂಕ ಕಡಿಮೆ ಮಾಡುವುದು ಮತ್ತು ಆರೋಗ್ಯಕಾರಿ ತೂಕವನ್ನು ಹೊಂದುವ ನಿಟ್ಟಿನಲ್ಲಿ ಮಕ್ಕಳಿಗೆ ಪೋಷಕರು ಮಾಡಬೇಕಾದ ಕರ್ತವ್ಯಗಳು ಇಲ್ಲಿವೆ.

ಆರೋಗ್ಯಕಾರಿ ಆಹಾರಪದ್ಧತಿಯನ್ನು ಬೆಳೆಸಿ
ಸಮತೋಲಿತ ಮತ್ತು ಸುಸ್ಥಿರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಮಕ್ಕಳು ಮನೆಯಲ್ಲೇ ಸಿದ್ಧಪಡಿಸಿದ ಆಹಾರವನ್ನು ಸೇವಿಸಬೇಕು. ಪೌಷ್ಟಿಕ ಆಹಾರವನ್ನೇ ಸೇವಿಸಬೇಕು ಎಂದು ಮಕ್ಕಳಿಗೆ ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು. ಪೌಷ್ಟಿಕ ಆಹಾರವನ್ನು ತಯಾರು ಮಾಡಿಕೊಟ್ಟು ಅದರ ಮಹತ್ವದ ಬಗ್ಗೆ ಮಕ್ಕಳಲ್ಲಿ ತಿಳಿಹೇಳಬೇಕು. ಜಂಕ್‌ಫುಡ್‌ಗಳಿಂದ  ಮಕ್ಕಳನ್ನು ಸಂಪೂರ್ಣವಾಗಿ ದೂರವಿಡುವುದು ಉತ್ತಮ.

ಅತಿಯಾದ ಆಹಾರ ಸೇವನೆ ಬೇಡ
ಅತಿಯಾದ ಕ್ಯಾಲರಿ ಇರುವ ಆಹಾರ ಸೇವನೆ ಮಾಡುವುದು ಅಪಾಯಕಾರಿ. ಇದರಿಂದ ಮಕ್ಕಳು ದೈನಂದಿನ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗುವುದು ಕಷ್ಟಕರವಾಗಲಿದೆ. ಸ್ವಲ್ಪ ಸ್ವಲ್ಪವೇ ಆಹಾರ ಸೇವನೆ ಮಾಡುವುದು, ನಿಧಾನವಾಗಿ ಸೇವಿಸುವುದು ಮತ್ತು ಹೊಟ್ಟೆ ತುಂಬಿದ ಅನುಭವ ಆದ ತಕ್ಷಣ ಆಹಾರ ಸೇವನೆಯನ್ನು ನಿಲ್ಲಿಸುವುದನ್ನು ಉತ್ತೇಜಿಸಬೇಕು. ಇದು ಭಾರತೀಯ ಕುಟುಂಬಗಳಲ್ಲಿ ರೂಢಿಗೆ ಬರಬೇಕಾದ ಅತ್ಯಗತ್ಯವಾದ ಪದ್ಧತಿ. ಏಕೆಂದರೆ, ಪೋಷಕರು, ಅಜ್ಜ-ಅಜ್ಜಿಯರು ಮತ್ತು ಬಂಧುಗಳು ತಮ್ಮ ಮಕ್ಕಳು ಹೆಚ್ಚು ಹೆಚ್ಚು ಆಹಾರ ತಿನ್ನುವುದು ಪ್ರೀತಿಯ ಸಂಕೇತ ಎಂದು ಭಾವಿಸಿದ್ದಾರೆ.

ಸಿಹಿ ತಿನಿಸುಗಳಿಂದ ದೂರವಿಡಿ
ಸಾಫ್ಟ್ ಡ್ರಿಂಕ್ಸ್ ಮತ್ತು ಪ್ಯಾಕೇಜ್ಡ್ ಜ್ಯೂಸ್‌ಗಳಿಗೆ ಹೆಚ್ಚು ರಾಸಾಯನಿಕಯುಕ್ತ ಸಂರಕ್ಷಕಗಳನ್ನು ಮತ್ತು ಸಕ್ಕರೆಯನ್ನು ಬಳಸಲಾಗಿರುತ್ತದೆ. ಆದ್ದರಿಂದ ಈ ಉತ್ಪನ್ನಗಳಿಂದ ಮಕ್ಕಳನ್ನು ದೂರವಿಡಿ.

ವ್ಯಾಯಾಮವನ್ನು ಉತ್ತೇಜಿಸಿ
ಮಕ್ಕಳ ಬೆಳವಣಿಗೆ ಮತ್ತು ಆರೋಗ್ಯಕರ ತೂಕ ನಿರ್ವಹಣೆಗೆ ಕೆಲವು ದೈನಂದಿನ ದೈಹಿಕ ವ್ಯಾಯಾಮಗಳು ಅಗತ್ಯವಾಗಿವೆ. ಟಿವಿ ವೀಕ್ಷಣೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವಂತೆ ಪೋಷಕರು ನೋಡಿಕೊಳ್ಳಬೇಕು. ಅದರ ಬದಲಾಗಿ ಮಕ್ಕಳಿಗೆ ಇಷ್ಟವಾಗುವ ಕ್ರೀಡೆ, ಈಜು, ಸೈಕ್ಲಿಂಗ್ ಮತ್ತು ಡಾನ್ಸ್‌್‌ನಂತಹ ಚಟುವಟಿಕೆಗಳಲ್ಲಿ ಹೆಚ್ಚು ತೊಡಗುವಂತೆ ನೋಡಿಕೊಳ್ಳಬೇಕು. ಮನೆಗಳ ಸಮೀಪ ಆಟದ ಮೈದಾನಗಳು ಇಲ್ಲದಿರುವುದು, ನೆರೆಹೊರೆಯ ಮಕ್ಕಳ ಜೊತೆ ಆಟ ಆಡಲು ಸಾಧ್ಯವಾಗದಿರುವುದರಿಂದ ಮಕ್ಕಳು ಮೊಬೈಲ್ ಫೋನ್, ಟ್ಯಾಬ್ಲೆಟ್ಸ್‌ನಂತಹ ಗ್ಯಾಡ್ಜೆಟ್ಸ್‌ಗಳಲ್ಲೇ ಹೆಚ್ಚು ಕಾಲವ್ಯಯ ಮಾಡುತ್ತಿವೆ.

ನಮ್ಮ ಮಕ್ಕಳ ಭವಿಷ್ಯ ನಮ್ಮ ಕೈಯಲ್ಲಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಉತ್ತಮ ಆಹಾರಪದ್ಧತಿ ಮತ್ತು ಜೀವನ ಶೈಲಿಯನ್ನು ಬೆಳೆಸಿಕೊಳ್ಳುವಂತೆ ಮಾಡುವುದೇ ನಾವು ಅವರಿಗೆ ಕೊಡುವ ಬಹುದೊಡ್ಡ ಉಡುಗೊರೆ. ಇದು ಸದೃಢ ಪ್ರೌಢಾವಸ್ಥೆಯನ್ನು ಪಡೆಯಲು  ಸಹಕಾರಿಯಾಗುತ್ತದೆ. ಪೋಷಕರು ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಇದನ್ನೇ ನೋಡಿ ಮಕ್ಕಳು ಕಲಿಯುತ್ತಾರೆ. ಈ ಮೂಲಕ ಪೋಷಕರು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕು.
–ಡಾ. ಲಕ್ಷ್ಮಿ ಮೆನನ್, ಮಕ್ಕಳ ವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT