ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಜ್ಜಿಗೆ ಆಯುರ್ವೇದ ಮದ್ದು

Last Updated 25 ನವೆಂಬರ್ 2016, 19:30 IST
ಅಕ್ಷರ ಗಾತ್ರ

ನವಯುಗದ ಆರೋಗ್ಯ ಸಮಸ್ಯೆಗಳಲ್ಲಿ ಬೃಹದಾಕಾರವಾಗಿ  ಬೆಳೆದಿರುವುದರಲ್ಲಿ ಸ್ಥೂಲಕಾಯತೆ  ಅಥವಾ ಬೊಜ್ಜು  ಪ್ರಮುಖವಾದುದು. ಇದು ಮನುಷ್ಯನ ಒಟ್ಟು ಜೀವನ ಗುಣಮಟ್ಟದ ಮೇಲೆ ಗಂಭೀರ  ಪ್ರಭಾವ ಬೀರುತ್ತದೆ. ಕೌಟುಂಬಿಕ, ಸಾಮಾಜಿಕ ಹಾಗೂ ಔದ್ಯೋಗಿಕ ಬದುಕಿನ ಮೇಲೂ ತನ್ನ ಕರಾಳ ಛಾಯೆಯನ್ನು ಚೆಲ್ಲುತ್ತದೆ. ಸ್ಥೂಲಕಾಯದ ಹಲವು ಮಜಲುಗಳ ಮೇಲೆ ತಜ್ಞರು ಇಲ್ಲಿ ಬೆಳಕು ಚೆಲ್ಲಿದ್ದಾರೆ.

ಕೃಶ ಮತ್ತು ಸ್ಥೂಲಕಾಯರಲ್ಲಿ ಯಾರು ಹಿತವರು? ಆಯುರ್ವೇದ ಸಂಹಿತೆಗಳು ಸಾರುವಂತೆ ಸಪೂರ ಶರೀರದವರಿಗೆ ಚಿಕಿತ್ಸೆ ಬೇಗ ಫಲಿಸೀತು. ಬೊಜ್ಜಿನವರಿಗಿಲ್ಲವಂತೆ ಚಿಕಿತ್ಸೋಪಚಾರ. ಸಾರಾಸಗಟಾಗಿ ಚರಕಮಹರ್ಷಿಗಳು ಅವರನ್ನು ಚಿಕಿತ್ಸೆಗೆ ತಿರಸ್ಕರಿಸುತ್ತಾರೆ.  ಅದು ಏಕೆ? ಚರಕ ನೀಡುವ ಕಾರಣಗಳ ಪಟ್ಟಿ ಉದ್ದನೆಯದು. ಆ ಸಂಗತಿಗಳು ಮೂರು ಸಾವಿರ ವರುಷಗಳ ಹಿಂದಿನವು. ಆದರೆ ಅವು ಇಂದಿಗೂ ಸೈ. 

ಅತಿ ದಢೂತಿತನದಿಂದ ಉದ್ದನೆ ಆಯುಷ್ಯಕ್ಕೆ ಕುತ್ತು. ಅವರು ನೋಡಲಷ್ಟೆ ದಪ್ಪ. ಬಲಶಾಲಿಗಳಲ್ಲ. ಲೈಂಗಿಕ ಕಸುವು ಅವರಲ್ಲಿ ಕುಸಿತ. ಸದಾ ಕಾಲ ಸುಸ್ತು ಪಡುವರು. ದೇಹದಲ್ಲಿ ದುರ್ವಾಸನೆ ಹೊಮ್ಮುತ್ತದೆ. ಹಸಿವು, ನೀರಡಿಕೆ ಮೇರೆ ಮೀರುತ್ತದೆ. ಇದು ಬೊಜ್ಜಿನವರಲ್ಲಿ ಕಾಣುವ ಎಂಟು ದೋಷ ಎಂದು ಚರಕಸಂಹಿತೆ ನಮೂದಿಸಿದೆ. ಸಪೂರದವರಿಗಿಂತ ತೋರದವರೇ ಹೆಚ್ಚಿನ ಪ್ರಮಾಣದಲ್ಲಿ ಬಳಲುತ್ತಾರೆ. ಸಂಕಷ್ಟಗಳಿಗೆ ಒಳಗಾಗುತ್ತಾರೆ.

ಆಯುರ್ವೇದ ರೀತ್ಯಾ ಎಂಟು ಬಗೆಯ ಜನರು ನಿಂದಿತರು. ಅಂದರೆ ಅವರಿಗೆ ಚಿಕಿತ್ಸೆ ಫಲಿಸುವುದಿಲ್ಲ. ಅಂತಹ ಎಂಟರ ಪೈಕಿ ಸ್ಥೂಲಕಾಯ ಇರುವವರದೂ ಒಂದು ಗುಂಪು. ಅತಿ ಉದ್ದ, ಕುಳ್ಳ, ಅತಿ ಕಪ್ಪು, ಅತಿ ಬಿಳಿ, ಅತಿ ಹೆಚ್ಚು ಕೂದಲಿನ, ಕೂದಲೇ ಇಲ್ಲದ ಹಾಗೂ ಅತಿ ಕೃಶಕಾಯದವರು ಚಿಕಿತ್ಸೆ ಫಲಿಸದೇ ಉಳಿದ ಏಳು ಗುಂಪಿನವರು.

ದಢೂತಿ ದೇಹದ ಹಿಂದಿರುವ ಕಾರಣಗಳನ್ನು ಆಯುರ್ವೇದ ತುಂಬ ಸರಳವಾಗಿ ಗುರುತಿಸುತ್ತದೆ; ನಿರೂಪಿಸುತ್ತದೆ ಕೂಡ. ಆಸ್ಯಾ ಸುಖ – ಎಂದರೆ ತನ್ನ ಬಾಯಿ ಕೇಳಿದ್ದನ್ನು ಕೇಳಿದಾಗೆಲ್ಲ ತಿನ್ನುವುದು, ಸ್ವಪ್ನಸುಖ – ಎಂದರೆ ಅಹರ್ನಿಶಿ ಸದಾ ನಿದ್ದೆ ಮಾಡುವುದು, ಯದ್ವಾತದ್ವಾ ಮೊಸರಿನ ಸೇವನೆ, ಹೊಸ ಅಂದರೆ ಆಗ ತಾನೇ ಕೊಯಿಲಾದ ಅಕ್ಕಿ–ಬೇಳೆಯಂತಹ ಆಹಾರಧಾನ್ಯಗಳ ಅತಿ ಬಳಕೆ, ಹೊಸ ಬೆಲ್ಲ ಸೇವನೆ ಮತ್ತು ಸಿಹಿ ಪದಾರ್ಥಗಳ ಅತಿ ಸೇವನೆಯಿಂದ ಕಫ ಹೆಚ್ಚುತ್ತದೆ. ಅದು ಬೊಜ್ಜಿನ ಮೂಲ. ಅಂತಹ ರೋಗಿಗಳಿಗೆ ಅತಿ ಹೆಚ್ಚಿನ ಹಸಿವೆ ಇರುವುದನ್ನು ಕೂಡ ಸಂಹಿತೆಗಳು ಉಲ್ಲೇಖಿಸುತ್ತವೆ.

ತಿಂದ ಆಹಾರವೂ ಅತಿ ಬೇಗ ಪಚನಗೊಳ್ಳುತ್ತದೆ. ಹಾಗಾಗಿ ಮತ್ತೆ ಮತ್ತೆ ತಿನ್ನುವ ಕಳ್ಳ ಹಸಿವೆ ಸಹ ಅವರಿಗಿದೆ. ಹೀಗೆ ಮತ್ತೆ ಮತ್ತೆ ದೇಹದ ಬೊಜ್ಜು ಏರುವುದು. ದೇಹದ ಒಳಗಿನ ಎಲ್ಲ ಬಗೆಯ ಮಾರ್ಗಗಳು ಬೊಜ್ಜಿನ ದೆಸೆಯಿಂದ ಮುಚ್ಚುವವಂತೆ. ಹಾಗಾಗಿ ಹೊರ ಹೋಗಲು ಹಾದಿ ಕಾಣದ ವಾಯುವು ಉದರದೊಳಗೇ ಹೆಚ್ಚು ಹೆಚ್ಚು ಓಡಾಡುವುದಂತೆ. ಆಗ ಉದರದ ಅಗ್ನಿ ಪ್ರಜ್ವಲ. ಹೆಚ್ಚು ಆಹಾರ ಕೇಳುವುದು ಸಹಜ.

ಕಾಡ್ಗಿಚ್ಚು ಇಡಿಯ ಕಾಡು ಸುಡುವಂತಹ ನಿದರ್ಶನವನ್ನು ಇಲ್ಲಿ ಚರಕರು ನೀಡಿದ್ದಾರೆ. ಅಂತಹ ಬೆಂಕಿಯೋಪಾದಿ ದೇಹ ಸುಡುವ ಕಾಯಿಲೆ ಸಂಕುಲಗಳು ಬೊಜ್ಜಿನ ಮಂದಿಗೆ ಉಂಟಾಗುತ್ತವೆ ಎಂಬ ವಿವರ ಇದೆ. ಬೊಜ್ಜಿನ ಮಂದಿಯಲ್ಲಿ ದೇಹದ ಕೊಬ್ಬು ಮಾತ್ರ ಹೆಚ್ಚುತ್ತಾ ಹೋಗುತ್ತದೆ. ಶರೀರದ ಉಳಿದ ಧಾತುಗಳಾದ ರಸ, ರಕ್ತ, ಮಾಂಸ, ಮೂಳೆ ಮತ್ತು ರೇತಸ್ಸು ಪೋಷಣೆಗೊಳ್ಳದು.

ಹಾಗೆಂದು ಸಾಧ್ಯವಾದಾಗಲೆಲ್ಲ ಬೊಜ್ಜು ಕರಗಿಸುವ ಶತಪ್ರಯತ್ನ ಮಾಡಿರಿ ಎನ್ನುತ್ತವೆ ಗ್ರಂಥಗಳು. ಆಯುರ್ವೇದದ ಪ್ರಕಾರ ದಶವಿಧ ಲಂಘನ ಚಿಕಿತ್ಸೆ ಎಂಬ ವಿಧಾನವಿದೆ. ದೇಹಾರೋಗ್ಯ ಪಾಲನೆಗೆ ಮತ್ತು ದೇಹದ ಬೊಜ್ಜು ನಿಯಂತ್ರಣಕ್ಕೆ ಅದು ಸಹಕಾರಿ. ಇಲ್ಲಿ ಭೋಗಕ್ಕೆ ಆಸ್ಪದ ಇಲ್ಲ; ತ್ಯಾಗವೇ ಪ್ರಧಾನ. ವಮನ, ವಿರೇಚನ, ಎರಡು ಬಗೆಯ ಬಸ್ತಿ ಚಿಕಿತ್ಸೆ ಪಂಚಕರ್ಮದ ಸೂತ್ರಗಳು.

ಬಾಯಾರಿಕೆ ತಡೆಯುವುದು, ಗಾಳಿಯ ಎದುರು ನಡಿಗೆ, ಬಿಸಿಲಿಗೆ ಮೈಯೊಡ್ಡುವುದು ಇತರ ಮುಖ್ಯ ವಿಧಾನ.  ಅನಂತರ ಪ್ರಧಾನವಾದುದು ಪಾಚನದ್ರವ್ಯಗಳನ್ನು ಬಳಸಿ ದೇಹದ ಕೊಬ್ಬು ಕರಗಿಸುವ ವಿಧಾನ. ವ್ಯಾಯಾಮ ಮತ್ತು ಉಪವಾಸ ಮುಂದಿನ ಪ್ರಬಲ ಅಸ್ತ್ರ. ಅಭ್ಯಂಗ ಮತ್ತು ಉದ್ವರ್ತನ ಎಂಬ ಇನ್ನಿತರ ವಿಧಾನಗಳನ್ನೂ ಬಳಸಿ ದೇಹದ ಕೊಬ್ಬಿನ ಪ್ರಮಾಣ ಕರಗಿಸಬಲ್ಲ ಚಿಕಿತ್ಸೆ ಅಂದು ಮತ್ತು ಇಂದು ಪ್ರಚಲಿತ.

ಮನುಷ್ಯ ತನ್ನ ಹಲ್ಲಿನಿಂದಲೇ ತನ್ನ ಗೋರಿ ತೋಡಿಕೊಳ್ಳುವನು ಎಂಬ ಆಂಗ್ಲಗಾದೆ ಮಾತದು. ಸ್ಥೌಲ್ಯದ ಮಟ್ಟಿಗೆ ಇದು ಬಹುತೇಕ ಸರಿಹೋಗುತ್ತದೆ. ಆಯುರ್ವೇದ ಮತ್ತು ಆಧುನಿಕ ವೈದ್ಯ ಪದ್ಧತಿಗಳೆರಡೂ ಈ ಸಂಗತಿಯನ್ನು ಒಪ್ಪತ್ತವೆ. ಬೊಜ್ಜು ಮತ್ತು ವಂಶಪಾರಂಪರಿಕ ಕಾರಣಗಳ ಸಂಬಂಧವನ್ನು ಆಯುರ್ವೇದ ಕೂಡ ಪ್ರತಿಪಾದಿಸುತ್ತದೆ.

ಗೌತಮ ಬುದ್ಧ ಎಂದರೆ ಕೃಶಶರೀರಿಯ ಚಿತ್ರ ಕಣ್ಮುಂದೆ ಸಹಜ. ಚರಕಸಂಹಿತೆಯ ಸಂಕಲನ ಯುಗದ ಯುಗಪುರುಷನೀತ. ಹಾಗಾದರೆ ಕ್ರಿ.ಶ. ಹತ್ತನೆಯ ಶತಮಾನದ ನಗುತ್ತಿರುವ ಬುದ್ಧನಿಗೇಕೆ ಡೊಳ್ಳು ಹೊಟ್ಟೆ? ಬೊಜ್ಜಿನ ದಢೂತಿ ಮೈ?  ನಡುರಾತ್ರಿಯಲ್ಲಿ ಜಗವೆಲ್ಲ ಮಲಗಿದಾಗ ಅರಮನೆಯ ಸುಖದ ಸುಪ್ಪತ್ತಿಗೆ ತೊರೆದಾತ ಗೌತಮ ಬುದ್ಧ. ವೈಶಾಖದ ಹುಣ್ಣಿಮೆಯಂದು ಆತನಿಗೆ ಜ್ಞಾನೋದಯ. ಅವಸಾನ ಸಹ ಅದೇ ಹುಣ್ಣಿಮೆ ದಿನ. ಅಂತಿಮ ದಿನಗಳಲ್ಲಿ ಕಡು ಉಪವಾಸ ಸಹ ಆತ ಮಾಡಿದ ವೃತ್ತಾಂತಗಳಿವೆ.

ಅದು ಬುದ್ಧದ್ಧಕಾಲೀನ ಶರೀರಚಿಂತೆಯ ಒಂದು ಮಾದರಿ. ಆಂದರೆ ದೇಹಾರೋಗ್ಯ ಪಾಲನೆಯ ಒಳಗುಟ್ಟು. ಚರಕಸಂಹಿತೆ ಕೂಡ ಅದನ್ನೇ ಒಪ್ಪುತ್ತದೆ. ಗೌತಮ ಬುದ್ಧ ಇದ್ದುದೆಲ್ಲವನ್ನೂ ಒದ್ದು ಎದ್ದು ನಡೆದ. ಉಲ್ಲೇಖಗಳ ಪ್ರಕಾರ ಹತ್ತನೆಯ ಶತಮಾನದ ನಗುತ್ತಿರುವ ಬುದ್ಧ ಅರಮನೆಯಲ್ಲಿ ಉಳಿದುಕೊಂಡು ಬೆಳೆದವನು. ರಾಜೋಪಚಾರ ಆದರಾತಿಥ್ಯ ಸ್ವೀಕರಿಸಿ ಸುಕುಮಾರನಾಗಿ ಬೆಳೆದಿರಬಹುದು. ಹೀಗೆ ಆಹಾರ ಸಂಸ್ಕೃತಿ ಮತ್ತು ದಿನಚರಿಯ ಜೊತೆಗೆ ದೇಹದ ಬೊಜ್ಜಿನ ನಂಟು ಗಂಟು ಹಾಕಿಕೊಂಡಿದೆ ಎಂಬುದು ನಿರ್ವಿವಾದದ ಸಂಗತಿ.

ಕವಿ ಕಾಳಿದಾಸನ ರಘುವಂಶ ಮಹಾಕಾವ್ಯದ ಒಂದು ಪ್ರಸಂಗ. ದಿಲೀಪ ಮಹಾರಾಜನಿಗೆ ಮಕ್ಕಳಾಗಲಿಲ್ಲ. ರಾಜಗುರು ವಸಿಷ್ಠರ ಆಣತಿಯಂತೆ ದಿಲೀಪನು ಮಹಾರಾಣಿ ಸುದಕ್ಷಿಣೆ ಸಹಿತ ವನಗಮನ ಮಾಡುತ್ತಾನೆ. ದೇವಧೇನು ನಂದಿನಿಯನ್ನು ಪ್ರಾರ್ಥಿಸುತ್ತಾನೆ. ಆಕೆ ಧರೆಗೆ ಬರುವಳು. ಆ ಗೋಸೇವೆಯ ಕಠಿಣ ವ್ರತ ಕೂಡ ಆತ ಕೈಗೊಂಡನು.  ವನವಾಸ, ಉಪವಾಸಗಳಿಂದ ಆತನ ಬೊಜ್ಜು ಕರಗಿರಬೇಕು. ಮತ್ತೆ ಪುರುಷತ್ವ ಹೆಚ್ಚಿಸಿಕೊಂಡ ದಿಲೀಪ ಅರಮನೆಗೆ ಮರಳುವನು. ಮುಂದೆ ಹುಟ್ಟುವ ಮಗನೇ ರಘು. ಆತ ದಶರಥನ ಅಜ್ಜ. ವನಗಮನ ಮತ್ತು ಗೋಸೇವೆಯ ಚಿಕಿತ್ಸೆಯನ್ನು ಬೊಜ್ಜು ಮತ್ತು ಮಧುಮೇಹ ಉಳ್ಳ ಮಂದಿಗೆ ಉಪದೇಶಿಸುವ ಉಲ್ಲೇಖ ಸುಶ್ರುತಸಂಹಿತೆಯಲ್ಲಿದೆ. ಹೀಗೆ ಬೊಜ್ಜು ಮತ್ತು ಮಧುಮೇಹದಂತಹ ಜೀವನಶೈಲಿಯ ರೋಗ ಮಾತ್ರವಲ್ಲ.

ಷಂಡತ್ವದಂತಹ ಉಪದ್ರವ ನಿರ್ವಹಣೆ ಉಲ್ಲೇಖಗಳು ಮೂರು ಸಾವಿರ ವರ್ಷ ಪೂರ್ವದ ಆಯುವೇದ ಸಂಹಿತೆಗಳ ಹೆಚ್ಚುಗಾರಿಕೆ. ಅನೇಕ ಮದ್ದಿನ ಬಳಕೆಗಳಿಂದ ಕೊಬ್ಬು ಕರಗಿಸುವ ಪ್ರಯತ್ನ ಗ್ರಂಥಗಳಲ್ಲಿದೆ. ಗುಗ್ಗುಳ ಎಂಬ ನೋವಿನ ಸಂಜೀವಿನಿ ಮೇದೋಪಹಾರಿ. ಅದು ಕೊಬ್ಬಿನ ರಾಮಬಾಣ.

ಅಮೃತಬಳ್ಳಿ, ಭದ್ರಮುಸ್ತೆ, ತ್ರಿಫಲೆ (ಅಳಲೆ, ನೆಲ್ಲಿ, ತಾರೆ), ಯಥೇಚ್ಛ ಬಳಸುವ ಮಜ್ಜಿಗೆ, ಜೇನು, ವಿಡಂಗ, ಒಣಶುಂಠಿ, ಕ್ಷಾರ ಎಂಬ ವಿಶಿಷ್ಟ ಮೂಲಿಕೆ ಉತ್ಪನ್ನ, ಜೇನುಸಹಿತ ಶುದ್ಧಗೊಳಿಸಿದ ಕಬ್ಬಿಣ ಭಸ್ಮದ ನ್ಯಾನೋ ಪ್ರಮಾಣದ ಸೇವನೆ, ಬಾರ್ಲಿ ಮತ್ತು ನೆಲ್ಲಿಯ ಜಂಟಿ ಬಳಕೆ, ಬಿಲ್ಪತ್ರೆ ಮತ್ತು ಇತರ ನಾಕು ಮರಗಳ (ಅರಣಿ, ಆನೆಮುಂಗು, ಶಿವನಿ ಮತ್ತು ಪಾದರಿ) ತೊಗಟೆ ಕಷಾಯ ಸೇವನೆ, ಕಹಿಪಡವಲ ಬೇರಿನ ಪುಡಿ, ಹುರುಳಿ ಬೀಜ, ಹೆಸರು ಧಾನ್ಯದ ಬಳಕೆಗಳು ಬೊಜ್ಜನ್ನು ದೂರವಿಡಲು ಮತ್ತು ಕರಗಿಸಲು ಸಮರ್ಥ ಎಂಬ ದೀರ್ಘ ವಿವರಣೆ ಚರಕ ಸಂಹಿತೆಯಲ್ಲಿದೆ.

ಕ್ರಮವರಿತು  ರಾತ್ರಿ ಪಾಳಿಯ ಎಚ್ಚರ, ದೇಹಾಭ್ಯಂಗ, ಕನಿಷ್ಠ ಚಿಂತೆಗಳೂ ಕೂಡ ದೇಹದ ಅನಗತ್ಯ ಕೊಬ್ಬು ಕರಗಿಸುವವು. ನಮ್ಮ ಜೀವನಶೈಲಿ ಮತ್ತು ಆಹಾರಕ್ರಮದಲ್ಲಿ ಇರಲಿ ಶಿಸ್ತು. ರೋಗ ಮತ್ತು ದುಃಖ ತರುವ ಬೊಜ್ಜಿನ ಗೊಡವೆ ನಮಗೆ ಖಂಡಿತ ಬೇಡವೇ ಬೇಡ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT