ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಅಂಗಳದಲ್ಲಿ ‘ಮಾತೃ ಅಭಿಯಾನ’

Last Updated 25 ನವೆಂಬರ್ 2016, 19:30 IST
ಅಕ್ಷರ ಗಾತ್ರ

ದೇವಕಿ... ಸರೋಜ... ಸುಜಾತಾ...
ಮಂದಾಕಿನಿ... ದಲ್ಜೀತ್... ಲಕ್ಷ್ಮಿ...


ಅಕ್ಟೋಬರ್ 29ರಂದು ವಿಶಾಖಪಟ್ಟಣದ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಕ್ರಿಕೆಟ್ ತಂಡದ ಅಟಗಾರರ ಬೆನ್ನಿನ ಮೇಲೆ ರಾರಾಜಿಸಿದ ಹೆಸರುಗಳು ಇವು.  ಹುಡುಗರ ಟೀಶರ್ಟ್‌ ಮೇಲೆ ಮಹಿಳೆಯರ ಹೆಸರುಗಳನ್ನು ಇದೇ ಮೊದಲ ಬಾರಿಗೆ ನೋಡಿದ್ದ ಕ್ರಿಕೆಟ್‌ ಪ್ರೇಮಿಗಳು ಅಚ್ಚರಿಗೊಂಡರು. ಅವುಗಳು ಆಯಾ ಆಟಗಾರರ ತಾಯಂದಿರ ಹೆಸರು ಎಂದು ತಿಳಿದ ಮೇಲೆ ಚಪ್ಪಾಳೆ ಹೊಡೆದು ಅಭಿನಂದಿಸಿದ್ದರು.

ಆ ದಿನ ನ್ಯೂಜಿಲೆಂಡ್ ಎದುರಿನ ಸರಣಿಯ ಕೊನೆಯ ಪಂದ್ಯದುದ್ದಕ್ಕೂ ಆಟಗಾರರು ಅದೇ ದಿರಿಸಿನಲ್ಲಿ ಆಡಿದರು. ಪಂದ್ಯದ ಜೊತೆಗೆ ಅಭಿಮಾನಿಗಳ ಹೃದಯವನ್ನೂ ಗೆದ್ದರು. ಮಕ್ಕಳ ಹೆಸರಿನೊಂದಿಗೆ ತಂದೆಯ ಹೆಸರು ಮಾತ್ರ ಇರಬೇಕು ಎಂಬ ಸಂಪ್ರದಾಯ, ಕಾನೂನುಗಳನ್ನು ಬದಲಾಯಿಸುವ ಬಹಳ ಹಳೆಯ ಬೇಡಿಕೆಗೆ ಕ್ರಿಕೆಟಿಗರೂ ಕೈಜೋಡಿಸಿದರು. 

ಬಿಸಿಸಿಐ ಮತ್ತು ಸ್ಟಾರ್ ಸ್ಪೋರ್ಟ್ಸ್‌ ವಾಹಿನಿ ಜಂಟಿಯಾಗಿ ‘ನಯೀ ಸೋಚ್’ (ಹೊಸ ಚಿಂತನೆ) ಎಂಬ ಶೀರ್ಷಿಕೆಯೊಂದಿಗೆ ತಾಯಿಯ ಮಹತ್ವ, ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಆಶಯದ ಅಂಗವಾಗಿ ಈ ಟೀ-ಶರ್ಟ್‌ಗಳು ಗಮನ ಸೆಳೆದವು. ವಿಶಾಖಪಟ್ಟಣ ಪಂದ್ಯದ ಹದಿನೈದು ದಿನಗಳ ಮುನ್ನವೇ ಈ ಬಗ್ಗೆ ಜಾಹೀರಾತು ತುಣುಕುಗಳು ಪ್ರಸಾರವಾಗಿದ್ದವು.

ಕ್ರೀಡಾ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಂತಹದೊಂದು ಅಭಿಯಾನ ನಡೆದಿದೆ.  ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಅದರಿಂದಾಗಿ ಭಾರತದಲ್ಲಿ ನಡೆಯುವ ಪ್ರತಿಯೊಂದು ಏಕದಿನ ಸರಣಿಯಲ್ಲಿ ಈ ಪ್ರಯೋಗ ಮುಂದುವರಿಸುವ ಆಲೋಚನೆಯಲ್ಲಿ ಬಿಸಿಸಿಐ ಇದೆ.

ಆದರೆ, ಇದು ಕೇವಲ ಪ್ರದರ್ಶನ ಅಥವಾ ಪ್ರಚಾರದ ಗಿಮಿಕ್ ಆಗಿ ಉಳಿಯುವುದೇ ? ಬೇರುಬಿಟ್ಟ ವ್ಯವಸ್ಥೆಯೊಂದರ ಬದಲಾವಣೆಗೆ ನಿಜಕ್ಕೂ ಸಹಕಾರಿಯಾಗುವುದೇ?

ಅಪ್ಪನ ಹೆಸರು ಕಡ್ಡಾಯ
ಹೆಣ್ಣುಮಕ್ಕಳು ಮದುವೆಯಾಗಿ ಗಂಡನ ಮನೆ ಸೇರಿದಾಗ ತನ್ನ ತಂದೆಯ ಹೆಸರು, ಅಡ್ಡಹೆಸರನ್ನೂ ಬಿಟ್ಟು ಹೋಗುವ ಸಂಪ್ರದಾಯ ನಮ್ಮಲ್ಲಿದೆ. ವಿವಾಹದವರೆಗೂ ಅಪ್ಪ, ನಂತರ ಗಂಡನ ಹೆಸರು ಆಕೆಯ ಬೆನ್ನಿಗಿರುತ್ತದೆ. ಆದರೆ, ಗಂಡುಮಕ್ಕಳಿಗೆ ಈ ರೂಢಿ ಅನ್ವಯಿಸುವುದಿಲ್ಲ. ಅವರು ಮನೆತನದ  ವಾರಸುದಾರರು ಎಂಬ ಪ್ರತೀತಿ ತಲೆತಲಾಂತರಗಳಿಂದ ಇದೆ. ಶಾಲೆ, ಉದ್ಯೋಗದ ದಾಖಲೆಗಳಲ್ಲಿ ಮಕ್ಕಳೊಂದಿಗೆ ಅಪ್ಪನ ಹೆಸರು, ಅಡ್ಡಹೆಸರು ಕಡ್ಡಾಯ. ಆದರೆ, ಮಕ್ಕಳನ್ನು ಹೆತ್ತು, ಅವರ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿಯೂ ತನ್ನನ್ನು ಸಮರ್ಪಿಸಿಕೊಳ್ಳುವ ತಾಯಿಯ ಹೆಸರು ಈ ದಾಖಲೆಗಳಲ್ಲಿ ಕಡ್ಡಾಯ ಅಲ್ಲ.  ಬಹುಶಃ ಪುರುಷಪ್ರಧಾನ ವ್ಯವಸ್ಥೆಯ ವಿಜೃಂಭಣೆಯ ಆರಂಭದ ಹಂತ ಇದು. ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಕೇವಲ ಕುಟುಂಬಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರ ಜೀವನ ಈಗ ‘ಬಹುಶಿಸ್ತೀಯ’ ರೂಪ ಪಡೆದುಕೊಂಡಿದೆ. ಶಿಕ್ಷಣ, ಉದ್ಯೋಗಗಳ ಜೊತೆಗೆ ಅವರು ಕುಟುಂಬದ ನಿರ್ವಹಣೆಯನ್ನು ಮಾಡುತ್ತಿದ್ದಾರೆ.  ಆದರೂ ಸಂಪ್ರದಾಯ ಬದಲಾಗಿಲ್ಲ.

2015ರ ಸಂಯುಕ್ತ ರಾಷ್ಟ್ರಗಳ ಮಾನವ ಅಭಿವೃದ್ಧಿ ವರದಿಯ ಪ್ರಕಾರ ಲಿಂಗ ಸಮಾನತೆಯ ಸಾಧನೆಯಲ್ಲಿ ಭಾರತವು 130ನೇ ಸ್ಥಾನದಲ್ಲಿ (155 ದೇಶಗಳ ಪೈಕಿ) ಇದೆ. ಈ ಕಾಲದಲ್ಲಿಯೂ ಮಹಿಳೆಯರ ದೌರ್ಜನ್ಯಗಳ ಪ್ರಕರಣಗಳೆನೂ ಕಮ್ಮಿಯಾಗಿಲ್ಲ. ಯುರೋಪ್‌ ಖಂಡದ ಬಹಳಷ್ಟು ದೇಶಗಳಲ್ಲಿ ಶಾಲಾ ದಾಖಲಾತಿಗಳಲ್ಲಿ ತಾಯಿಯ ಹೆಸರು ಸೇರಿಸುವುದು ಕಡ್ಡಾಯವಿದೆ. ಮೂರು ವರ್ಷಗಳ ಹಿಂದೆ ಮೈಸೂರಿನಲ್ಲಿ ಸಾಹಿತಿ ದೇವನೂರ ಮಹಾದೇವ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಮಾವೇಶದಲ್ಲಿ ಭಾಗವಹಿಸಿದ್ದ ವಿದೇಶಿ ಪ್ರತಿನಿಧಿಗಳು ಈ ಕುರಿತು ಮಾಹಿತಿ ನೀಡಿದ್ದರು. 

ಹೆಣ್ಣುಮಕ್ಕಳ ರಕ್ಷಣೆ, ಪೋಷಣೆಗಾಗಿ ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸುತ್ತಿವೆ. ಆದರೆ ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಜಾಗೃತಿ ಮುಖ್ಯ.

ಮಾಧ್ಯಮವಾಗಿ ಕ್ರೀಡೆ
ಇತ್ತೀಚಿನ ದಿನಗಳಲ್ಲಿ ಮಹಿಳಾ ಸಬಲೀಕರಣದ ಅಭಿಯಾನಕ್ಕೆ ಕ್ರೀಡೆಯು ಮಾಧ್ಯಮವಾಗುತ್ತಿದೆ. ಇತ್ತೀಚೆಗೆ ಒಲಿಂಪಿಕ್ಸ್‌ನಲ್ಲಿ ಮಿಂಚಿದ ಭಾರತದ ಕ್ರೀಡಾಪಟುಗಳನ್ನು ಕೇಂದ್ರ ಸರ್ಕಾರವು ‘ಬೇಟಿ ಬಚಾವೊ, ಬೇಟಿ ಪಡಾವೊ’ ಯೋಜನೆಯ ಪ್ರಚಾರ ರಾಯಭಾರಿಗಳನ್ನಾಗಿ ಮಾಡಿತ್ತು. ಇದೀಗ ಕ್ರಿಕೆಟಿಗರು ಮಾತೃ ಕಾಣಿಕೆಯ  ಮಹತ್ವ ಸಾರುವ ಪ್ರಯತ್ನ ಆರಂಭಿಸಿದ್ದಾರೆ.

ದೇಶದ ಅತ್ಯಂತ ಜನಪ್ರಿಯ ಕ್ರೀಡೆಯಾಗಿರುವ ಕ್ರಿಕೆಟ್‌ ಆಟಗಾರರು ಇಂತಹದೊಂದು ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಆದರೆ, ಇತ್ತೀಚಿಗೆ ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್, ಆರ್.ಎಂ. ಲೋಧಾ ಸಮಿತಿಯ ಚಾಟಿಯೇಟು, ಸುಪ್ರೀಂ ಕೋರ್ಟ್‌ನ ಆದೇಶಗಳಲ್ಲಿ ಬಿಸಿಸಿಐ ಕ್ರಿಕೆಟ್‌ ಮೇಲಿನ ತನ್ನ ಹಿಡಿತವನ್ನು ಕಳೆದುಕೊಳ್ಳುವ ಆತಂಕದಲ್ಲಿದೆ. ಈ ಹಿನ್ನೆಲೆಯಲ್ಲಿ ಒಂದು ವರ್ಗದ ಜನರಲ್ಲಿ ಕ್ರಿಕೆಟ್ ಕುರಿತು ನಕಾರಾತ್ಮಕ ಧೋರಣೆ ಬೆಳೆಯುತ್ತಿರುವುದನ್ನೂ ಅಲ್ಲಗಳೆಯುವಂತಿಲ್ಲ. ಈ ಧೋರಣೆಯನ್ನು ಕಿತ್ತು ಹಾಕಲು ಬಿಸಿಸಿಐ ಇಂತಹ ಭಾವನಾತ್ಮಕ ಪ್ರಚಾರಕ್ಕೆ ಕೈಹಾಕಿದೆ ಎಂಬ ಟೀಕೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. 

ಆದರೆ, ಇವತ್ತಿನ ಪುಟ್ಟ ಕುಟುಂಬಗಳ ವ್ಯವಸ್ಥೆಯಲ್ಲಿ ಮಹಿಳೆಯರು ತಮ್ಮ  ಮಗ ಅಥವಾ ಮಗಳು ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಅಪಾರವಾಗಿ ಶ್ರಮಿಸುವುದು ಸುಳ್ಳಲ್ಲ. ಊಟ, ಬಟ್ಟೆ, ಓದು, ಓಡಾಟದಲ್ಲಿ ಅಮ್ಮಂದಿರ ಕೊಡುಗೆಯೇ ಹೆಚ್ಚಿನದ್ದು.  ಅದಕ್ಕೆ ಕ್ರೀಡಾ ಕ್ಷೇತ್ರವೂ ಹೊರತಲ್ಲ. ಕ್ರಿಕೆಟ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಟೆನಿಸ್, ಚೆಸ್ ಮತ್ತಿತರ ಕ್ರೀಡೆಗಳ ಜೂನಿಯರ್ ಮಟ್ಟದ ಟೂರ್ನಿಗಳಿಗೆ ಹೋಗಿ ನೋಡಬೇಕು. ತಮ್ಮ ಮಕ್ಕಳ ಊಟದ ಡಬ್ಬಿ, ಕ್ರೀಡಾ ಸಲಕರಣೆಗಳ ಕಿಟ್‌ಗಳನ್ನು ಹಿಡಿದ ಅಮ್ಮಂದಿರ ದೊಡ್ಡ ಗುಂಪು ಇದ್ದೇ ಇರುತ್ತದೆ.

ಓದು, ಕ್ರೀಡೆಗಳಲ್ಲಿ ತಮ್ಮ ಮಕ್ಕಳ ಪ್ರತಿಯೊಂದು ಬೆಳವಣಿಗೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಮಕ್ಕಳು ದೊಡ್ಡ ಸಾಧನೆ ಮಾಡಿದಾಗ ಅವರ ಹೆಸರು ಸಣ್ಣದಾಗಿ ಮಿಂಚಿ ಮರೆಯಾಗುತ್ತದೆ.

‘ಅಪ್ಪನ ಹೆಸರು ಬೆಳಗಿಸು ಎಂದು ಎಲ್ಲರೂ ಹೇಳುತ್ತಾರೆ. ಆದರೆ,  ಅಮ್ಮನ ಹೆಸರಿಗೂ ಕೀರ್ತಿ ತರುವುದು ಅಷ್ಟೇ ಪ್ರಮುಖವಾದದ್ದು’ ಎಂದು ಕ್ರಿಕೆಟಿಗ ಅಜಿಂಕ್ಯ ರಹಾನೆ ಜಾಹೀರಾತಿನಲ್ಲಿ ಹೇಳುವ ಮಾತು ಇಲ್ಲಿ ಪ್ರಸ್ತುತವಾಗುತ್ತದೆ.

ತಮ್ಮ ನೆಚ್ಚಿನ  ಆಟಗಾರರ  ನಡೆನುಡಿಗಳನ್ನು ಅನುಕರಿಸುವ ಕೋಟಿ ಕೋಟಿ ಅಭಿಮಾನಿಗಳು ಈ ದೇಶದಲ್ಲಿದ್ದಾರೆ. ಅವರ ಮನೋಭಾವದ ಬದಲಾವಣೆಯಲ್ಲಿ ಕ್ರಿಕೆಟಿಗರ ಈ ನಡೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕು.

ಅದ್ಭುತವಾದ ಕಾರ್ಯ
ಆಟಗಾರರ ಟೀಶರ್ಟ್‌ ಮೇಲೆ ಅವರ ತಾಯಂದಿರ ಹೆಸರು ಹಾಕಿದ್ದು ಅತ್ಯದ್ಭುತವಾದ ಕಾರ್ಯ. ಈ ಪರಿಕಲ್ಪನೆಯನ್ನು ಯಾರು ಮಾಡಿದರೋ ಗೊತ್ತಿಲ್ಲ. ಅವರಿಗೆ ಅಭಿನಂದನೆಗಳು. ನಾನು ಕೂಡ ಸಾಧ್ಯವಿದ್ದಷ್ಟು ಕಡೆ  ನನ್ನ ಹೆಸರಿನೊಂದಿಗೆ ತಾಯಿ ರಾಜಲಕ್ಷ್ಮೀ ಅವರ ಹೆಸರು ಸೇರಿಸುತ್ತೇನೆ. ನಾನು ಆಡುವಾಗ ಇಂತಹ ಐಡಿಯಾ ಹೊಳೆಯಲಿಲ್ಲ. ಇವತ್ತು ಆಧುನಿಕ ಜೀವನಶೈಲಿಯಲ್ಲಿ ಕುಟುಂಬಗಳು ಚಿಕ್ಕದಾಗಿವೆ. ಆದರೆ, ಮಹಿಳೆಯರ ಮೇಲಿನ ಒತ್ತಡ ಮಾತ್ರ ದೊಡ್ಡದಾಗಿ ಬೆಳೆದಿದೆ. ಕುಟುಂಬದ ಎಲ್ಲರ ಸಾಧನೆಯಲ್ಲಿಯೂ ಮಾತೆಯರ ಯೋಗದಾನವೇ ಹೆಚ್ಚು. ಹಾಗೆಂದು ತಂದೆಯ ಹೆಸರು ಬಿಟ್ಟು ಅಮ್ಮನ ಹೆಸರು ಹಾಕಬೇಕು ಎಂಬುದು ನಮ್ಮ ಬೇಡಿಕೆಯಲ್ಲ. ಅಪ್ಪ–ಅಮ್ಮ ಇಬ್ಬರ ಹೆಸರೂ ಸೇರಬೇಕು. ಸಮಾನತೆ ಸೃಷ್ಟಿಯಾಗಬೇಕು. ಆಂಧ್ರಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಹೆಸರು, ಅಡ್ಡಹೆಸರುಗಳ ಜೊತೆಗೆ ಮೂರ್ನಾಲ್ಕು ಅಕ್ಷರಗಳ ಇನಿಷಿಯಲ್ ಇರುತ್ತವೆ. ಅದರೊಂದಿಗೆ ಅಮ್ಮನ ಹೆಸರಿನ ಅಕ್ಷರ ಸೇರಿಸಿದರೆ ತಪ್ಪೇನು? ಈ ಅಭಿಯಾನ ಇಲ್ಲಿಗೆ ನಿಲ್ಲಬಾರದು. ಮುಂದುವರಿಯಬೇಕು.
–ಶಾಂತಾ ರಂಗಸ್ವಾಮಿ, ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ

*
ಪ್ರತಿಯೊಬ್ಬರ ಜೀವನ ರೂಪುಗೊಳ್ಳುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾದದ್ದು.  ಮಾತೆಯರು ತಮ್ಮ ಇಡೀ ಜೀವನವನ್ನು ಕುಟುಂಬಕ್ಕಾಗಿ ಸಮರ್ಪಿಸಿಕೊಳ್ಳುತ್ತಾರೆ. ಅವರ ತ್ಯಾಗ, ಪರಿಶ್ರಮಗಳ ಫಲವಾಗಿ ಅದ್ಭುತ ಆಟಗಾರರು, ವಿವಿಧ ಕ್ಷೇತ್ರದ ಸಾಧಕರು ರೂಪುಗೊಳ್ಳುತ್ತಾರೆ. ಅವರು ದೇಶದ ಹೆಸರು ಬೆಳಗುತ್ತಾರೆ. ಆದ್ದರಿಂದ ಇಡೀ ಮಹಿಳಾ ಕುಲಕ್ಕೆ ಕೃತಜ್ಞತೆ ಸಲ್ಲಿಸಲು ಅಭಿಯಾನ ಹಮ್ಮಿಕೊಂಡಿದ್ದೇವೆ.
–ಅನುರಾಗ್ ಠಾಕೂರ್, ಬಿಸಿಸಿಐ ಅಧ್ಯಕ್ಷ

*
ವಿಶ್ವದ ಕ್ರೀಡಾ ಇತಿಹಾಸದಲ್ಲಿಯೇ ಇಂತಹ ಅಭಿಯಾನ ಪ್ರಥಮ ಬಾರಿ ನಡೆಯುತ್ತಿದೆ. ಹೊಸ ವಿಚಾರ, ಚಿಂತನೆಗಳಿಗೆ ಬಲ ತುಂಬುವ ಪ್ರಯತ್ನ ಇದಾಗಿದೆ. ಭಾರತ ಕ್ರಿಕೆಟ್ ಆಟಗಾರರು ಮತ್ತು ಬಿಸಿಸಿಐ ತೆಗೆದುಕೊಂಡಿರುವ ಈ ಕ್ರಮ ಶ್ಲಾಘನೀಯ.
ಉದಯಶಂಕರ್,
ಸಿಇಒ, ಸ್ಟಾರ್ ಇಂಡಿಯಾ ಮುಖ್ಯಸ್ಥ

*
ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರ ಟೀಶರ್ಟ್ ಮೇಲೆ ಅವರ ಅಪ್ಪಂದಿರ ಹೆಸರುಗಳನ್ನು ಹಾಕಬೇಕು. ಹೆಣ್ಣುಮಕ್ಕಳು ಸಾಧನೆ ಮಾಡಲು ಕುಟುಂಬದಲ್ಲಿ ಅಪ್ಪನ ಬೆಂಬಲ ಮುಖ್ಯವಾಗುತ್ತದೆ. ಆದ್ದರಿಂದ ಅವರನ್ನು ಗೌರವಿಸುವ ಕಾರ್ಯವಾಗಬೇಕು.
–ಹರ್ಮನ್ ಪ್ರೀತ್ ಕೌರ್
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT