ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೂರಿ ಕಬಾಬ್‌ಗೆ ಕಾಂಟಿನೆಂಟಲ್‌ ಆಹಾರ ಸ್ಪರ್ಶ

ರಸಾಸ್ವಾದ
Last Updated 17 ಜನವರಿ 2017, 15:52 IST
ಅಕ್ಷರ ಗಾತ್ರ

ಬಾಣಸಿಗ ಸಚಿನ್‌ ತಲ್ವಾರ್‌ ಅವರು ಮಟನ್‌ ಖಡಕ್‌ ಸೀಖ್‌ ಕಬಾಬ್‌ ಮೇಲೆ ಮೆಕ್ಕೆಜೋಳದ ಹಿಟ್ಟು, ಷಾಹಿ ಜೀರಾದ ಲೇಪನ ಮಾಡಿದರು. ಎಣ್ಣೆಯಲ್ಲಿ ಕರಿದ  ಕಬಾಬ್‌ ಮೇಲೊಂದಿಷ್ಟು ಕಾಳುಮೆಣಸಿನ ಪುಡಿ ಹಾಕಿದರು. ಬಾಣಸಿಗ ಮಾಡುತ್ತಿದ್ದ ಮಾಂಸಾಹಾರಿ ಸ್ಟಾರ್ಟರ್‌ ಗಾಜಿನ ಗೋಡೆಯಿಂದ ಕಾಣುತ್ತಿತ್ತು.

ಗರಿಗರಿಯಾದ ಈ ತಿನಿಸು ಮೂಲತಃ ಭಾರತೀಯ ಆಹಾರವಾಗಿದ್ದರೂ, ಸೀಖ್‌ ಕಬಾಬ್‌ ಒಳಗೆ ಚೀಸ್‌ ಹಾಗೂ ಹಸಿರು ಮೆಣಸಿನಕಾಯಿ ತುಂಡು ಇರಿಸಿದ್ದರಿಂದ ಅದಕ್ಕೆ ಕಾಂಟಿನೆಂಟಲ್‌ ಆಹಾರದ ರುಚಿ ಬಂದಿತ್ತು.

ಬಾಳೆಕಾಯಿಯನ್ನು ಬೇಯಿಸಿ, ನಂತರ ಸಿಪ್ಪೆ ತೆಗೆಯಲಾಯಿತು. ಬಾಳೆಹಣ್ಣಿನೊಂದಿಗೆ ತುರಿದ ಬೀಟ್‌ರೂಟ್‌ ಸೇರಿಸಿ ಮಿಶ್ರಣ ಮಾಡಿದರು. ಕರಿಬೇವು, ಮಸಾಲೆ ಸೇರಿಸಿ ವಡೆ ಆಕಾರದಲ್ಲಿ ತಟ್ಟಿಕೊಂಡು ಗ್ರಿಲ್‌ ಮಾಡಲಾಯಿತು. ಇದಕ್ಕೆ ಟಿಕ್ಕಿ ಮೇಲ್‌ ಎಂಬ ಹೆಸರು.

ಮೈ ಫಾರ್ಚೂನ್  ಹೋಟೆಲ್‌ನ ‘ಮೈ ಇಂಡಿಯನ್‌ ಒವೆನ್‌’ನಲ್ಲಿ ನಡೆಯುತ್ತಿರುವ ಕಬಾಬ್‌ ಉತ್ಸವಕ್ಕಾಗಿ ಬಾಣಸಿಗ ಸಚಿನ್‌ ತಲ್ವಾರ್‌ ಸಿದ್ಧಪಡಿಸುತ್ತಿದ್ದ ಸಿಗ್ನೇಚರ್‌ ಕಬಾಬ್‌ಗಳಿವು.

ಸಚಿನ್‌ ಅವರು ಕಾಂಟಿನೆಂಟಲ್‌, ಉತ್ತರ ಭಾರತೀಯ ಆಹಾರ ಮಾಡುವುದರಲ್ಲಿ ನೈಪುಣ್ಯ ಸಾಧಿಸಿದವರು. ಇವರ ವಿಶೇಷವೆಂದರೆ ಭಾರತೀಯ ತಿನಿಸುಗಳಿಗೆ ಕಾಂಟಿನೆಂಟಲ್‌ ಆಹಾರ ಸಾಮಗ್ರಿಗಳನ್ನು ಸೇರಿಸಿ  ವಿಭಿನ್ನ ಫ್ಲೇವರ್‌ನಲ್ಲಿ ಬಡಿಸುತ್ತಾರೆ. ಆರು ಬಗೆಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ಕಬಾಬ್‌ಗಳು ಆಹಾರೋತ್ಸವದಲ್ಲಿವೆ.

ಕಬಾಬ್‌ ಪ್ರಿಯರಿಗೆ ಸಸ್ಯಾಹಾರದಲ್ಲಿ ಮುಖ್ಯವಾಗಿ ಅಂಜೂರ ಹಣ್ಣಿನಿಂದ ಮಾಡಿದ ‘ದಹಿ ಔರ್‌ ಅಂಜೂರ್‌ ಕಬಾಬ್‌’, ‘ಟಿಕ್ಕಿ ಮೇಲ್‌’, ‘ತಂದೂರಿ ಶಬನಂ’, ‘ತಂದೂರಿ ಫೂಲ್‌’, ‘ಹರಿಯಾಲಿ ಪನ್ನೀರ್‌ ಟಿಕ್ಕ’, ‘ಆಲೂ ಟಕ್‌’ ಇಷ್ಟವಾಗುತ್ತವೆ.

ಮಾಂಸಾಹಾರದಲ್ಲಿ ಚಿಕನ್‌ ಲೆಗ್‌ಪೀಸ್‌ನಿಂದ ಮಾಡಿದ ‘ತಂಗ್ಡಿ ಕಬಾಬ್‌’, ‘ಮಟನ್‌ ಕಡಕ್‌ ಸೀಖ್‌’, ‘ಸಿಲ್ವಟ್ಟ ಕಾ ಷಾಮಿ ಕಬಾಬ್‌’, ಬೆಳ್ಳುಳ್ಳಿ ಪರಿಮಳದ ‘ಮುರ್ಗ್‌ ಲೆಸೂನಿ ಟಿಕ್ಕ’, ‘ಮಹಿ ತಂದೂರಿ’ (ಮೀನು), ‘ಮೈ ಮಿಕ್ಸ್ ಕಬಾಬ್‌’ ಸವಿಯಬಹುದು.

ಉತ್ಸವದಲ್ಲಿ ಎಷ್ಟುಬೇಕಾದರೂ ಕಬಾಬ್‌ ತಿನ್ನಬಹುದು. ಜೊತೆಗೆ ಎರಡು ಬಾಟಲಿ ಬಿಯರ್‌ ಹಾಗೂ ಎರಡು ಪೆಗ್‌ ವಿಸ್ಕಿ ಸಹ ಉಚಿತವಾಗಿ ಸಿಗಲಿದೆ.
ಉತ್ಸವದ ಮೆನು ಅಲ್ಲದೇ ರೆಗ್ಯುಲರ್‌ ಮೆನುವಿನಲ್ಲೂ ಅನೇಕ ಸ್ಟಾರ್ಟರ್‌ಗಳಿವೆ. ಅವುಗಳಲ್ಲಿ ಸಾಲ್ಮನ್‌ ಮೀನಿನಿಂದ ಮಾಡಿದ ‘ಸಾಲ್ಮನ್‌ ತಂದೂರಿ’, ‘ಪನ್ನೀರ್‌ ಡ್ರಮ್‌’, ಮುಖ್ಯ ಮೆನುವಿನಲ್ಲಿ ರೋಟಿ,  ವೆಜ್‌, ನಾನ್‌ವೆಜ್‌ ಕರ್ರಿಗಳು, ಬಿರಿಯಾನಿಯೂ ಸಿಗುತ್ತದೆ.

ದೆಹಲಿ, ಮಧ್ಯಪ್ರದೇಶ, ರಾಜಸ್ತಾನ, ಆಂಧ್ರ ಪದೇಶ, ತಮಿಳು ನಾಡಿನ ರೆಸ್ಟೊರೆಂಟ್‌ಗಳಲ್ಲಿ ಕೆಲಸ ಮಾಡಿದ ಬಾಣಸಿಗ ಸಚಿನ್ ತಲ್ವಾರ್‌ ಅವರು ಮೈ ಫಾರ್ಚೂನ್‌ನಲ್ಲಿ ಮುಖ್ಯ ಬಾಣಸಿಗರಾಗಿದ್ದಾರೆ.

ಸಿಗಡಿ ಕೃಷಿ
ಐಟಿಸಿ ಸಮೂಹವು ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಸಿಗಡಿ ಕೃಷಿ ಮಾಡುತ್ತದೆ. ಇಲ್ಲಿ ಸಾಕಿದ ಸಿಗಡಿಯನ್ನು ಸಮೂಹದ ರೆಸ್ಟೊರೆಂಟ್‌ಗಳಲ್ಲಿ ಉಪಯೋಗಿಸಲಾಗುತ್ತದೆ. ಮೈ ಫಾರ್ಚೂನ್‌ನಲ್ಲಿ ದಿನಕ್ಕೆ 5ರಿಂದ 6 ಕೆ.ಜಿ ಸಿಗಡಿ ಬಳಕೆಯಾಗುತ್ತದೆಯಂತೆ.
ಮಧ್ಯಾಹ್ನ 12ರಿಂದ 3.30 ಹಾಗೂ ಸಂಜೆ 7ರಿಂದ ರಾತ್ರಿ 11ರವರೆಗೆ ಆಹಾರೋತ್ಸವ ಇರುತ್ತದೆ.

*
1997ರಲ್ಲಿ ನಾನು ಬಾಣಸಿಗ ವೃತ್ತಿಗೆ ಬಂದೆ. ನನಗೆ  ಸೈನ್ಯಕ್ಕೆ ಸೇರಿ ದೇಶಸೇವೆ ಮಾಡಬೇಕೆಂಬ ಬಯಕೆ ಇತ್ತು. ಎನ್‌ಡಿಎ ಪರೀಕ್ಷೆ (ನ್ಯಾಶನಲ್ ಡಿಫೆನ್ಸ್ ಅಕಾಡೆಮಿ ಎಕ್ಸಾಮ್) ಪಾಸಾಗಲಿಲ್ಲ. ನಮ್ಮ ಸಂಬಂಧಿಕರೊಬ್ಬರ ಮಾತು ಕೇಳಿ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಆಯ್ಕೆ ಮಾಡಿಕೊಂಡೆ. ದೇಶದ ನಾನಾ ರಾಜ್ಯಗಳಲ್ಲಿ ಕೆಲಸ ಮಾಡಿದ್ದೇನೆ. ದಕ್ಷಿಣ ಭಾರತದ ವಿವಿಧ ರಾಜ್ಯಗಳ ಅಡುಗೆ ರುಚಿ ಭಿನ್ನವಾಗಿರುತ್ತದೆ. ಉದಾಹರಣೆಗೆ ಸಾಂಬಾರಿಗೆ ಹಾಕುವ ಸಾಮಗ್ರಿಗಳೆಲ್ಲಾ ಒಂದೇ ಆದರೂ ರುಚಿ ಬೇರೆ. ಆಂಧ್ರದಲ್ಲಂತೂ ಹೆಚ್ಚು ಮಸಾಲೆ, ಖಾರ ಇದ್ದರೆ ಮಾತ್ರ ‘ಊಟ ಚೆನ್ನಾಗಿದೆ’ ಎನ್ನುತ್ತಾರೆ. ಕರ್ನಾಟಕದಲ್ಲೂ ಆಹಾರ ವೈವಿಧ್ಯ ಕಾಣಬಹುದು.
–ಸಚಿನ್‌ ತಲ್ವಾರ್‌, ಬಾಣಸಿಗ

ರೆಸ್ಟೊರೆಂಟ್‌: ಮೈ ಫಾರ್ಚೂನ್‌
ವಿಶೇಷತೆ: ತಂದೂರಿ ಕಬಾಬ್‌
ಸಮಯ: ಮಧ್ಯಾಹ್ನ 12ರಿಂದ 3.30 ಹಾಗೂ ಸಂಜೆ 7ರಿಂದ ರಾತ್ರಿ 11
ವೆಜ್‌ ಕಬಾಬ್‌: ₹899
ನಾನ್‌ವೆಜ್‌ ಕಬಾಬ್‌ : ₹1099
ಕೊನೆಯ ದಿನ: ನವೆಂಬರ್‌ 30
ಸ್ಥಳ: ನಂ46, ರಿಚ್ಮಂಡ್‌ ರಸ್ತೆ, ಹಾಸ್ಮಟ್‌ ಆಸ್ಪತ್ರೆ ಪಕ್ಕ, ಅಶೋಕ ನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT