ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು

ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ 2016
Last Updated 27 ನವೆಂಬರ್ 2016, 6:31 IST
ಅಕ್ಷರ ಗಾತ್ರ

What’s in a name? That which we call a rose
By any other word would smell as sweet
–William Shakespeare (Romeo & Juliet)

ಕೊನೆಗೂ ತನ್ನ ಹೆಸರನ್ನು ಬದಲಿಸುವ ನಿರ್ಧಾರ ಮಾಡಿ ಅದಕ್ಕೆ ಅಗತ್ಯವಿದ್ದ ಸ್ಟಾಂಪ್‌ ಪೇಪರ್‌, ಎಸ್‌.ಎಸ್‌.ಎಲ್‌.ಸಿ. ಮಾರ್ಕ್ಸ್‌ ಕಾರ್ಡ್‌ ಹಾಗೂ ರೇಷನ್‌ ಕಾರ್ಡ್‌ಗಳ ಛಾಯಾಪ್ರತಿಗಳೊಂದಿಗೆ ತನ್ನೂರಿನ ಬಸ್‌ ಹಿಡಿದು ಪೇಟೆಯ ಸಿಕ್ವೇರಲಾಜ್‌ನಲ್ಲಿದ್ದ ನೋಟರಿ ಎಲ್‌.ಡಿ. ವರ್ಮಾ ಅವರನ್ನು ನೋಡಹೊರಟಿದ್ದ ರಾಜಪ್ಪ ಉರುಫ್‌ ರಾಜಪ್ಪ ಅಮಿನ್‌ ಉರುಫ್‌ ಅಮಿನ್‌ ಕೊಡಿಯಾಲನಿಗೆ ಬಸ್‌ನಲ್ಲಿ ಕುಳಿತಲ್ಲೇ ಪದೇ ಪದೇ ವಾರದ ಹಿಂದೆ ತನ್ನ ಕಾಲೇಜಿನ ಸ್ಪೋರ್ಟ್ಸ್‌ ಡೇ ದಿನ ಸ್ಪೋರ್ಟ್ಸ್‌ ಗ್ರೌಂಡ್‌ನಲ್ಲಿ ನಡೆದ ಘಟನೆಯೇ ನೆನಪಿಗೆ ಬರುತ್ತಿತ್ತು. ರಾಜಪ್ಪ ಜಂಪ್ಸ್‌ ಇವೆಂಟ್‌ನ ಒಂದು ಭಾಗವಾದ ಟ್ರಿಪ್‌ಲ್‌ ಜಂಪ್‌ಗೆ ತನ್ನ ಸಹೋದ್ಯೋಗಿ ಗೆಳೆಯನ ಜತೆ ತಯಾರಾಗುತ್ತಿದ್ದ.

ಹೈಜಂಪ್‌ ಇವೆಂಟ್‌ ಆಗ ತಾನೇ ಮುಗಿದಿದ್ದು ಇನ್ನು ತನ್ನ ಡ್ಯೂಟಿ ಮುಗಿಯಲು ಟ್ರಿಪ್‌ಲ್‌ ಜಂಪ್‌ ಮಾತ್ರ ಬಾಕಿ ಇತ್ತು. ಬರೆಯುವ ಪ್ಯಾಡ್‌ ಮತ್ತು ಪೆನ್ನು ಎತ್ತಿಕೊಂಡು ಟ್ರಿಪಲ್‌ ಜಂಪ್‌ ನಡೆಯುವ ಕ್ರೀಡಾಂಗಣದ ಬಲ ಮೂಲೆಯ ಹೊಯಿಗೆ ತುಂಬಿದ ಜಾಗಕ್ಕೆ ತನ್ನ ಒಂದಿಬ್ಬರು ಸ್ಟೂಡೆಂಟ್‌ ವಾಲಂಟಿರ್ಸ್‌ಯ ಜತೆ ತನ್ನ ಸ್ಪೋರ್ಟ್ಸ್‌ ಕ್ಯಾಪನ್ನು ಸರಿಪಡಿಸಿಕೊಳ್ಳುತ್ತ ರಾಜಪ್ಪ ಬರುತ್ತಿದ್ದ. ಆಗ ಇದ್ದಕ್ಕಿದ್ದಂತೆ ಅನೌನ್ಸರ್‌ ಸ್ವಾಮಿ, ಮೈಕ್‌ನ ಸದ್ದನ್ನೂ ಮೀರಿಸುವಂತೆ ತನ್ನ ಬೆನ್ನ ಹಿಂದಿನ ಪೆವಿಲಿಯನ್‌ ಕಡೆಯಿಂದ ‘ರಾಜಪ್ಪಾ’ ಎನ್ನುವ ಕೂಗು ಕೇಳಿಸಿತು. ಆ ಕೂಗು ಎಷ್ಟೊಂದು ರೂಕ್ಷವಾಗಿತ್ತೆಂದರೆ ಅಯಾಚಿತವಾಗಿಯೇ ರಾಜಪ್ಪ ಧ್ವನಿ ಬಂದ ಕಡೆಗೆ ತಿರುಗಿ ನೋಡಬೇಕಾಯ್ತು. ನೋಡಿದರೆ ಪೆವಿಲಿಯನ್‌ನಲ್ಲಿ ಕೂತ ವಿದ್ಯಾರ್ಥಿಗಳ ನಡುವಿಂದ ನಗುವಿನಿಂದ ಉಕ್ಕುತ್ತಿದ್ದ ಹಲ್ಲುಗಳು ಆ ಬಿಸಿಲಿನ ಝಳದ ಮಧ್ಯೆಯೂ ಅಸ್ಪಷ್ಟವಾಗಿ ಮಿನುಗುತ್ತಿದ್ದವು.

ಇವೆಂಟ್‌ ಮುಗಿದದ್ದೇ ಪೆವಿಲಿಯನ್‌ಗೂ ತೆರಳದೆ ಬಿಸಿಲಲ್ಲಿ ನಿಂತು ಗಂಟಲೊಣಗಿದ್ದರೂ ಸಾಫ್ಟ್‌ ಡ್ರಿಂಕ್ಸ್‌ಗಾಗಿ ಕಾಯದೆ ತನ್ನ ಕ್ಯಾಪ್‌ ಮತ್ತು ಪ್ಯಾಡನ್ನು ಸಹೋದ್ಯೋಗಿಯ ಕೈಗೊಪ್ಪಿಸಿದ್ದೇ ನೇರವಾಗಿ ಗ್ರೌಂಡ್‌ನ ಹೊರಬಂದು ತನ್ನೂರಿನ ಬಸ್‌ ಹತ್ತಿದ್ದ. ಎಂದೂ ಯಾವತ್ತೂ ವಿದ್ಯಾರ್ಥಿಗಳಿಂದ ಲೇವಡಿ ಮಾಡಿಸಿಕೊಳ್ಳದೇ ಇದ್ದ ರಾಜಪ್ಪನಿಗೆ ಆವೊತ್ತು ಬಸ್‌ನಲ್ಲಿ ಕೂತು ಮನೆಯ ಕಡೆ ಬರುತ್ತಿದ್ದಂತೆ ತನ್ನ ಅಪ್ಪ ಅಮ್ಮ ಇಟ್ಟ ರಾಜಪ್ಪ ಅನ್ನುವ ಹೆಸರು ಕೂಡ ಅಷ್ಟು ಸುರಕ್ಷಿತ ಅಲ್ಲ ಎಂದು ಮೊದಲ ಬಾರಿಗೆ ಅನಿಸಿಬಿಟ್ಟಿತು. ಅವೊತ್ತೆ ತನ್ನ ಹೆಸರು ಬದಲಿಸುವ ನಿರ್ಧಾರಕ್ಕೂ ಬಂದುಬಿಟ್ಟಿದ್ದ ರಾಜಪ್ಪ. ಆದರೆ ಈ ಹಿಂದೆ ತನ್ನ ಹೆಸರಿನ ಜತೆಯಿದ್ದ ಅಮಿನ್‌, ಕೊಡಿಯಾಲಗಳ ಉಪಾಧಿಯನ್ನು ನಿವಾರಿಸಿದಷ್ಟು ಸುಲಭವಾಗಿ ಅಪ್ಪ ಅಮ್ಮ ತನಗೆ ನೀಡಿದ್ದ ರಾಜಪ್ಪ ಅನ್ನುವ ತನ್ನ ಮೂಲ ಹೆಸರನ್ನು ನಿವಾರಿಸುವುದು ಸಾಧ್ಯವಿರಲಿಲ್ಲ.

ಜತೆಗೆ ಹೆಸರು ಅಳಿಸುವುದೆಂದರೆ ಅದು ತನ್ನ ಅಸ್ತಿತ್ವವನ್ನೇ ಅಳಿಸಿದಂತೆ ಅಲ್ಲವೇ? ಆ ಹೆಸರಿನ ಜೊತೆಗೆ ತಾನು ಬೆಳೆಯಿಸಿಕೊಂಡು ಬಂದ ತನ್ನ ವ್ಯಕ್ತಿತ್ವದ ಬೇರೆ ಬೇರೆ ಮುಖಗಳನ್ನೇ ಅಲ್ಲವೆ? ಎಂದೂ ಅನ್ನಿಸಿ ಮುಂದೆ ನಾಲ್ಕೈದು ದಿನ ಅನಿರ್ಧಾರದ ಅನಿಶ್ಚಿತತೆಯ ಚಕ್ರವ್ಯೂಹದಲ್ಲಿ ಒದ್ದಾಡಿ ಕೊನೆಗೂ ಗಟ್ಟಿ ಮನಸ್ಸು ಮಾಡಿ ಹೆಸರು ಬದಲಿಸುವ ನಿರ್ಧಾರಕ್ಕೆ ರಾಜಪ್ಪ ಬಂದಿದ್ದ. ಹೊಸ ಹೆಸರಿನ ಮೂಲಕ ತನಗೆ ಹೊಸದೇ ಒಂದು ವ್ಯಕ್ತಿತ್ವ ಪ್ರಾಪ್ತವಾಗುವುದೆಂದೂ ಭೂತದ ಯಾವ ಹಂಗೂ ಇಲ್ಲದಂತೆ ಅದು ತನ್ನನ್ನು ಹೊಸ ಬದುಕಿನತ್ತ ಮುನ್ನಡೆಸಲು ನೆರವಾಗಬಹುದೆಂದೂ ಪ್ರಾಮಾಣಿಕವಾಗಿ ನಂಬಿದ್ದ.

ಹೀಗೆ ಒಂದು ತಿಂಗಳ ಹಿಂದಷ್ಟೇ ನೋಟರಿಯಾಗಿ ನೇಮಕಗೊಂಡು ಪೇಟೆಯಲ್ಲಿ ಆಫೀಸು ತೆರೆದಿದ್ದ – ತನ್ನ ಕಾಲೇಜಿನಲ್ಲಿ ಕಮರ್ಷಿಯಲ್‌ ಲಾ ಕಲಿಸುತ್ತಿದ್ದ – ಲಾಯರ್‌ ಎಲ್‌.ಡಿ. ವರ್ಮ ಸಲಹೆಯಂತೆ ರಾಜಪ್ಪ ಅಗತ್ಯದ ಎಲ್ಲ ದಾಖಲೆ ಪತ್ರಗಳಿದ್ದ ಒಂದು ದಪ್ಪ ಕೋರಾ ಬಣ್ಣದ ಲಕೋಟೆ ಹಿಡಿದು ಈವೊತ್ತು ಸಂಜೆ ಅವರನ್ನು ಭೆಟ್ಟಿಯಾಗಲು ಹೊರಟಿದ್ದ. ಬಸ್‌ ಆರ್‌ಟಿಓ ಬಸ್‌ ಸ್ಟ್ಯಾಂಡ್‌ನಲ್ಲಿ ನಿಂತಾಗ ಇಳಿದು ಟೌನ್‌ಹಾಲ್‌ ದಾಟಿ ನೆಹರೂ ಪಾರ್ಕಿನ ಎದುರಿನ ರಸ್ತೆಯಾಚೆಗಿನ ಸಿಕ್ವೇರಾ ಲಾಜ್‌ನತ್ತ ಹೊರಳುತ್ತಿದ್ದಂತೆ ಹೊಟ್ಟೆಯೊಳಗೆ ಚುರುಗುಟ್ಟುವ ಅನುಭವವಾಗಿ ರಾಜಪ್ಪ ಒಮ್ಮೆ ವಾಚ್‌ ನೋಡಿಕೊಂಡ. ಆರು ಗಂಟೆಗೆ ಇನ್ನೂ ಇಪ್ಪತ್ತು ನಿಮಿಷ ಇದೆ ಅನ್ನಿಸಿ ಸೀದಾ ದಾಟಿ ಪಕ್ಕದ ‘ತಾಜ್‌ಮಹಲ್‌’ ಹೊಕ್ಕ.

***
ಹಾಗೆ ನೋಡಿದರೆ ರಾಜಪ್ಪನಿಗೆ ತನ್ನ ಹೆಸರಿನ ಮೇಲಿದ್ದ ಈ ಬಗೆಯ ಮೋಹ ಮತ್ತು ನಿರ್ಮೋಹದ ಹಿನ್ನೆಲೆಯಲ್ಲಿ ಒಂದು ದೊಡ್ಡ ಕಥೆಯೇ ಇದೆ. ಆಗ ರಾಜಪ್ಪ ಎಸ್‌.ಎಸ್‌.ಎಲ್‌.ಸಿ. ಓದುತ್ತಿದ್ದ. ಆತನ ಸೋದರ ಮಾವ ಅಂದರೆ ರಾಜಪ್ಪನ ತಾಯಿ ಕೂಸಮ್ಮನ ತಮ್ಮ ಮುಂಬಯಿಯ ಒಂದು ಪ್ರತಿಷ್ಠಿತ ಕಂಪೆನಿಯಲ್ಲಿದ್ದು, ಕಷ್ಟದಲ್ಲಿದ್ದ ತನ್ನ ಅಕ್ಕನ ಮನೆಗೆ ತಿಂಗಳು ತಿಂಗಳು ಎಂಬಂತೆ ಮನಿಯಾರ್ಡರ್‌ ಮಾಡುತ್ತಿದ್ದ. ಮನೆಯ ಜವಾಬ್ದಾರಿಯಿಲ್ಲದ ಕುಡುಕ ಗಂಡನಿಂದಾಗಿ ಪಡಬಾರದ ಕಷ್ಟಪಡುತ್ತಿದ್ದ ಕೂಸಮ್ಮ ಮುಂಬಯಿಂದ ತಮ್ಮ ಕಳುಹಿಸುತ್ತಿದ್ದ ಈ ದುಡ್ಡಿನಿಂದಲೇ ಅದು ಹೇಗೋ ಒದ್ದಾಡಿ ತನ್ನ ನಾಲ್ಕು ಗಂಡು, ಎರಡು ಹೆಣ್ಣುಮಕ್ಕಳನ್ನು ಓದಿಸುತ್ತಿದ್ದಳು.

ಕಲಿಯುವುದರಲ್ಲಿ ಮುಂದಿದ್ದ ರಾಜಪ್ಪ ಎಸ್‌.ಎಸ್‌.ಎಲ್‌.ಸಿಯಲ್ಲಿ ಇಡೀ ಹೈಸ್ಕೂಲಿಗೇ ಫಸ್ಟ್‌ಕ್ಲಾಸ್‌ ತಗೊಂಡು ಪಾಸಾಗಿದ್ದ. ಮನೆಯ ಪರಿಸ್ಥಿತಿಯಿಂದಾಗಿ ಇನ್ನು ಓದು ಮುಂದುವರಿಸುವುದು ಸಾಧ್ಯವೇ ಇಲ್ಲ ಎನ್ನುವಾಗ ಕಾಲೇಜಿಗೆ ಅರ್ಜಿ ಹಾಕುವ ಹಿಂದಿನ ದಿನ ಮುಂಬಯಿಂದ ಇನ್ನೂರು ರೂಪಾಯಿ ಮನಿಆರ್ಡರ್‌ ಮತ್ತು ಪತ್ರ ಬಂದು ರಾಜಪ್ಪ ಕಾಲೇಜು ಮೆಟ್ಟಿಲು ಹತ್ತುವಂತಾದ. ಕೂಸಮ್ಮನಿಗೆ ತಮ್ಮ ಬರೆಯುತ್ತಿದ್ದ ಪತ್ರದ ತುಂಬ ನೀಲಿಶಾಯಿಯಲ್ಲಿ ಬಲಕ್ಕೆ ವಾಲಿಸಿದಂತೆ ಒತ್ತೊತ್ತಾಗಿ ಬರೆದ ಚಿಕ್ಕ ಚಿಕ್ಕ ಮುದ್ದಾದ ಅಕ್ಷರಗಳು. ಮಾವನ ಪತ್ರ ಬಂದಾಗ ಮನೆಯವರೆಲ್ಲರೂ ಅದೊಂದು ಕಾದಂಬರಿಯೋ ಕಥೆಯೋ ಎಂಬ ಹಾಗೆ ರಾಜಪ್ಪನಿಂದ ಅಥವಾ ಅವನ ಅಣ್ಣನಿಂದ ಪತ್ರವನ್ನು ಓದಿಸಿ ಹಿಗ್ಗುತ್ತಿದ್ದರು.

ಕಡು ಹಸಿರು ಬಣ್ಣದ ಇನ್‌ಲ್ಯಾಂಡ್‌ ಲೆಟರ್‌ ತುಂಬ ಅಕ್ಕ, ಅಕ್ಕನ ಮಕ್ಕಳ ಕಾಳಜಿಯ ಜೊತೆಗೆ ಉಪದೇಶ ಹಾಗೂ ಬುದ್ಧಿವಾದದ ಮಾತುಗಳು; ಮಹಾಪುರುಷರ, ಸಂತರ ನುಡಿಮುತ್ತುಗಳು. ಒಮ್ಮೆ ಮಾವ ವಿವೇಕಾನಂದರನ್ನು ಕೋಟ್‌ ಮಾಡಿ ಇಂಗ್ಲಿಷ್‌ನಲ್ಲಿ ಬರೆದ – A man is not to be slighted by the work he does, but by the way he does it –  ಎಂಬ ಮಾತಂತೂ ರಾಜಪ್ಪನ ನೆನಪಿನಲ್ಲಿ ಇನ್ನೂ ಹಚ್ಚಹಸಿರಾಗಿ ಉಳಿದಿದೆ. ಇನ್ನೊಮ್ಮೆ ‘ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಪ್ರತೀ ಪರೀಕ್ಷೆಯಲ್ಲಿ ಫಸ್ಟ್‌ ಬರುತ್ತಿರುವ ನಿಮ್ಮ ಮಗನಿಗೆ ನೀವು ಕೊಡುವ ಪ್ರೋತ್ಸಾಹ ಏನು ಭಾವ?’ ಎಂಬ ಮೃದುವಾಗಿ ತರಾಟೆಗೆ ತಗೊಂಡು ಬರೆದ ಪತ್ರದ ಸಾಲನ್ನು ತಾನೇ ತನ್ನ ಅಪ್ಪನಿಗೆ ಓದಿ ಹೇಳಿ ಹೆಮ್ಮೆ ಅನುಭವಿಸಿದ್ದೂ ಇದೆ (ಆಗ ಅಪ್ಪನೂ ಗದ್ಗದಿಸಿದ್ದ!).

ಇನ್‌ಲ್ಯಾಂಡ್‌ ಲೆಟರ್‌ನ ಹಿಂದೆ ಮತ್ತು ಮುಂದೆ ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದ ಮಾವನ ವಿಳಾಸದ ಅಕ್ಷರ ಕೂಡಾ ಅಷ್ಟೇ ಮುದ್ದಾಗಿರುತ್ತಿತ್ತು. ಪರಮೇಶ್ವರ ಎನ್ನುವ ತನ್ನ ಹೆಸರಿನ ಹಾಗೂ ತಬುರ ಎನ್ನುವ ತಂದೆಯ ಹೆಸರಿನ ಮೊದಲಕ್ಷರಗಳಿಗೆ ತನ್ನ ಜಾತಿಯ ಒಳಪಂಗಡದ ‘ಅಮಿನ್‌’ ಶಬ್ದವನ್ನು ಸೇರಿಸಿ, ಪಿ.ಟಿ. ಅಮಿನ್‌ ಎನ್ನುವ ಹೆಸರಿನಲ್ಲಿ ಮಾವ ಪತ್ರ ಬರೆಯುತ್ತಿದ್ದ. ಆಗೀಗ ರಾಜಪ್ಪನಿಗೆ ಪತ್ರ ಬರೆಯುವಾಗಲೂ ಮಾವ ರಾಜಪ್ಪ ಎಚ್‌. ಅಮಿನ್‌ ಎಂದೇ ಬರೆಯುತ್ತಿದ್ದ (ಎಚ್‌. ಅಂದರೆ ರಾಜಪ್ಪನ ಅಪ್ಪ ಹೂವಯ್ಯ).

ಆತ ವರ್ಷಕ್ಕೊಮ್ಮೆ ಊರಿಗೆ ಬಂದು ತಿರುಗಿ ಮುಂಬೈಗೆ ಹೊರಟಾಗಲೆಲ್ಲ ರಾಜಪ್ಪನ ಅಮ್ಮ ತನ್ನ ತಮ್ಮ ಬಾಲ್ಯದ ದಿನಗಳಲ್ಲಿ ತುಂಬ ಇಷ್ಟಪಡುತ್ತಿದ್ದನೆಂದು ಅವಲಕ್ಕಿ ಬಾಬಣ್ಣನ ಮನೆಯಿಂದ ಚೆನ್ನಾಗಿ ಕುಟ್ಟಿದ ಒಂದು ಸೇರು ಅವಲಕ್ಕಿ ಮತ್ತು ಪೇಟೆಯ ಬೇಕರಿಯಿಂದ ಒಂದು ಕಿಲೋ ಮಾಲ್‌ಪುರಿಯನ್ನು ತರಿಸಿ ಪೊಟ್ಟಣ ಕಟ್ಟಿಕೊಡುತ್ತಿದ್ದಳು. ಮಾವ ಕೂಡಾ ಅಕ್ಕನ ನೆನಪಿಗೆ ಆಕೆ ಕಟ್ಟಿಕೊಟ್ಟ ಪೊಟ್ಟಣವನ್ನು ಅಷ್ಟೇ ಪ್ರೀತಿಯಿಂದ ತನ್ನ ಬ್ಯಾಗಿನೊಳಗೆ ತುರುಕಿಸುತ್ತಿದ್ದ. ಬರಬರುತ್ತ ಮಾವನ ಈ ಪ್ರೀತಿ, ಔದಾರ್ಯ ಮತ್ತು ಮುತ್ತು ಪೋಣಿಸಿದಂಥ ಮುದ್ದಾದ ಅಕ್ಷರಗಳಿಂದಾಗಿ ಮಾವ ಬಳಸುತ್ತಿದ್ದ ಈ ಅಮಿನ್‌ – ಬಳಿ ಸೂಚಕ ಶಬ್ದ ತೀರಾ ಆಕರ್ಷಕವಾಗಿ ಕಾಣಿಸತೊಡಗಿತು ರಾಜಪ್ಪನಿಗೆ.

ಅಲ್ಲದೆ ವರ್ಷಕ್ಕೊಮ್ಮೆ ಮುಂಬಯಿಂದ ಊರಿಗೆ ಬರುತ್ತಿದ್ದ ಚಿಕ್ಕಪ್ಪ ತರುತ್ತಿದ್ದ ಮುಂಬೈ ಪರಿಮಳ ಹೊಡೆಯುವ ಬ್ಯಾಟರಿ ಟ್ರಾನ್ಸಿಸ್ಟರ್‌ ತಿರುಗಿಸಿದಾಗಲೆಲ್ಲ ರೇಡಿಯೋ ಸಿಲೋನ್‌ನ ಬಿನಾಕಾ ಗೀತ್‌ ಮಾಲಾ ಕಾರ್ಯಕ್ರಮಗಳಲ್ಲಿ ಕೇಳಿಬರುತ್ತಿದ್ದ ಅಮಿನ್‌ ಸಯಾನಿಯ ಸುಮಧುರ ಧ್ವನಿ ಕೂಡ ಒಂದು ವಿಚಿತ್ರ ಅಲೌಕಿಕ ಅನುಭವವನ್ನೇ ಹುಟ್ಟಿಸುತ್ತಿತ್ತು ರಾಜಪ್ಪನಲ್ಲಿ. ಅಂತೆಯೇ ಸಾಹಿತ್ಯದ ಆಸಕ್ತಿ ಇದ್ದ ರಾಜಪ್ಪ ಮುಂದೆ ಕಾಲೇಜಿನ ವಾಲ್‌ ಮ್ಯಾಗಝಿನ್‌, ವಾರ್ಷಿಕ ಸಂಚಿಕೆಗಳಲ್ಲಿ ಬರೆಯುವಾಗಲೆಲ್ಲ ತನ್ನ ಹೆಸರಿನ ತುದಿಯಲ್ಲಿ ‘ಅಮಿನ್‌’ ಸೇರಿಸಿ ಬರೆಯಲಾರಂಭಿಸಿದ.

ಮಾವನ ಹೆಸರಿನ ತುದಿಯ ‘ಅಮಿನ್‌’ ಪ್ರಿಯವಾಗಿ ಬಿಟ್ಟಿದ್ದರಿಂದ ಅಮಿನ್‌ ಸಯಾನಿಯ ‘ಅಮಿನ್‌’ ಪ್ರಿಯವಾಯಿತೋ ಅಥವಾ ಅಮಿನ್‌ ಸಯಾನಿಯ ಅಲೌಕಿಕ ಗಂಭೀರ ಧ್ವನಿಯೇ ಉದಾರಿ ಮಾವ ಬಳಸುತ್ತಿದ್ದ ‘ಅಮಿನ್‌’ ಶಬ್ದವನ್ನು ಪ್ರಿಯಗೊಳಿಸಿತೋ? ಒಟ್ಟಿನಲ್ಲಿ ಎಸ್‌.ಎಸ್‌.ಎಲ್‌.ಸಿ. ಸರ್ಟಿಫಿಕೇಟ್‌ನಲ್ಲಿ ರಾಜಪ್ಪ ಎಂದು ಮಾತ್ರ ನಮೂದಾಗಿದ್ದ ರಾಜಪ್ಪ ಈಗ ‘ರಾಜಪ್ಪ ಅಮಿನ್‌’ ಆಗಿ ಕಾಲೇಜಿನಲ್ಲಿ ಕಲಿಕೆಯಲ್ಲೂ ಉದಯೋನ್ಮುಖ ಸಾಹಿತಿಯಾಗಿಯೂ ಹೆಸರಾಗಿಬಿಟ್ಟ. ಹಲವು ಅಂತರ ಕಾಲೇಜು ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದ.

ಅವು ಕೊಡಿಯಾಲ ಮಠದ ಸ್ವಾಮಿಗಳು ಹೆಸರು ಮಾಡುತ್ತಿದ್ದ ದಿನಗಳು. ಆ ಹೊತ್ತು ಚಲಾವಣೆಯಲ್ಲಿದ್ದ ಮಠದ ಸ್ವಾಮಿಗಳಲ್ಲೇ ಅವರು ಪ್ರಗತಿಪರ ಆಲೋಚನೆಯ ಸ್ವಾಮೀಜಿಯೆಂದು ಹೆಸರಾಗಿದ್ದರು. ವಾಸ್ತವವಾಗಿ ರಾಜಪ್ಪನ ಊರಿನಲ್ಲೇ ಅಂದರೆ ಕೊಡಿಯಾಲದಲ್ಲೇ ಈ ಸ್ವಾಮೀಜಿಯ ಮೂಲ ಮಠ ಕೂಡಾ ಇತ್ತು. ಚಿಕ್ಕಂದಿನಲ್ಲಿ ರಾಜಪ್ಪ ವರ್ಷಕ್ಕೊಮ್ಮೆ ಈ ಸ್ವಾಮೀಜಿ ಮಠಕ್ಕೆ ಭೇಟಿ ಕೊಡುತ್ತಿದ್ದಾಗ ನಡೆಯುತ್ತಿದ್ದ ಸಮಾರಾಧನೆಗೆಂದು ನೆರೆಯ ಮಕ್ಕಳೊಂದಿಗೆ ತನ್ನ ಅಣ್ಣ ತಮ್ಮಂದಿರ ಜತೆ ಹೋದದ್ದೂ ಇದೆ. ಮಠದಲ್ಲಿ ಜಡಭರತರಂತೆ ಕೂತುಂಡು ಬೊಜ್ಜು ಬೆಳೆಸುತ್ತಿದ್ದ ಇತರ ಹಲವು ಮಠದ ಸ್ವಾಮಿಗಳ ನಡುವೆ ಪಾದರಸದಂತೆ ಚುರುಕಾಗಿ ಓಡಾಡುತ್ತ ಮಠದ ವ್ಯಾಪ್ತಿಯನ್ನು ಮೀರಿದ ಹಲವು ಸಮಾಜ ಸುಧಾರಣೆಯ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದು – ವಿಶಿಷ್ಟ ಶೈಲಿಯ ಸ್ವಾಮೀಜಿಯೆಂದು ಪ್ರಗತಿಪರ ಚಿಂತಕರ, ಬುದ್ಧಿಜೀವಿಗಳ ಪ್ರಶಂಸೆಗೆ ಪಾತ್ರರಾಗಿದ್ದರು.

ಅದೇ ದಿನಗಳಲ್ಲಿ ವಾರ್ಷಿಕೋತ್ಸವದ ಸಮಾರಂಭದಲ್ಲಿ ಭಾಗವಹಿಸಲೆಂದು ಸ್ವಾಮೀಜಿ ಒಮ್ಮೆ ರಾಜಪ್ಪ ಕಲಿಯುತ್ತಿದ್ದ ಕಾಲೇಜಿಗೂ ಬಂದುಹೋಗಿದ್ದರು. ಯಾವತ್ತೂ ರಾತ್ರಿ ನಡೆಯುವ ಕಾಲೇಜಿನ ವಾರ್ಷಿಕೋತ್ಸವದ ಸಮಾರಂಭವನ್ನು – ತನ್ನ ಊರಿಗೆ ತಿರುಗಿಹೋಗಲು ತಡರಾತ್ರಿ ಬಸ್ಸು ಇಲ್ಲವೆನ್ನುವ ನೆಪದಲ್ಲಿ  ತಪ್ಪಿಸಿಕೊಳ್ಳುತ್ತಿದ್ದ ರಾಜಪ್ಪನಿಗೆ, ಈ ಸಂಗತಿಯೆಲ್ಲ ಮರುದಿನ ಅಚ್ಚರಿಯ ಸಂಭ್ರಮದ ಸುದ್ದಿಯಾಗಿ ಬಂದು ತಲುಪಿ ಸ್ವಾಮೀಜಿಯ ಬಗೆಗೆ ವಿಚಿತ್ರ ಆಕರ್ಷಣೆಯನ್ನು ಹುಟ್ಟಿಸುತ್ತಿತ್ತು.

ಆ ವರ್ಷ ಆಂಧ್ರಪ್ರದೇಶದ ಕರಾವಳಿ ತೀರಕ್ಕೆ ಚಂಡಮಾರುತ ಅಪ್ಪಳಿಸಿ ಸಾವಿರಾರು ಮಂದಿ ಅಸುನೀಗಿ, ಲಕ್ಷಾಂತರ ಮಂದಿ ಮನೆ ಮಾರು ಕಳೆದುಕೊಂಡಾಗ ಸಂತ್ರಸ್ತರಿಗಾಗಿ ಪಾದಯಾತ್ರೆ ನಡೆಸಿ ದುಡ್ಡು ಸಂಗ್ರಹಿಸಿ – ‘ಸ್ವಾಮೀಜಿಯೆಂದರೆ ಹೀಗಿರಬೇಕು’ ಎಂದು ಜನ ಮೆಚ್ಚುಗೆಯಿಂದ ತಲೆದೂಗುವಂತೆ ಮಾಡಿದ್ದರು. ತಮ್ಮ ದಂತಗೋಪುರದಿಂದ ಇಳಿಯಲು ನಿರಾಕರಿಸುವ ಸ್ವಾಮಿಗಳ ಮಧ್ಯೆ ಈ ಸ್ವಾಮೀಜಿ ಒಂದು ಅಚ್ಚರಿಯಾಗಿ ಕಂಡಿದ್ದರು ರಾಜಪ್ಪನಿಗೆ.

ಸ್ವಾಮೀಜಿ ಮಾಡಿದ ಇನ್ನೂ ಒಂದು ದೊಡ್ಡ ಕ್ರಾಂತಿಕಾರೀ ಕೆಲಸವೆಂದರೆ, ದಲಿತಕೇರಿಗೆ ಹೋಗಿ ಶ್ರೀಕೃಷ್ಣನ ಫೋಟೋ ವಿತರಿಸಿದ್ದು. ಅಸ್ಪೃಶ್ಯರನ್ನು ಮುಟ್ಟಲೇ ಹೇಸುವ ಸ್ವಾಮಿಗಳ ಮಧ್ಯೆ ಈ ಸ್ವಾಮೀಜಿ ದಲಿತ ಕೇರಿಗೇ ಹೋಗಿ ಫೋಟೋ ಹಂಚಿದ್ದು ದೊಡ್ಡ ಕ್ರಾಂತಿಯೆಂಬಂತೆ ದೇಶದ ಪ್ರಮುಖ ದಿನಪತ್ರಿಕೆಗಳಲ್ಲಿ ಸುದ್ದಿಯಾಗತೊಡಗಿತು. ಇದು ಕೂಡ ಪುನರಾತ್ಥಾನ ವಾದಿಗಳ ಸೋಗೆಂದೂ ದಲಿತಕೇರಿಯಲ್ಲಿ ಸಂಚರಿಸಿ ಫೋಟೋ ಹಂಚಿದ ಮಾತ್ರಕ್ಕೆ ಅದು ದಲಿತರ ಮೇಲಿನ ಪ್ರೀತಿಯನ್ನು ಸಾಬೀತುಪಡಿಸುವುದಿಲ್ಲವೆಂದೂ ಇದು ವ್ಯವಸ್ಥೆಗೆ ತೇಪೆ ಹಚ್ಚುವ ಸುಧಾರಣೆಯ ಕಾರ್ಯ ಮಾತ್ರವೆಂದೂ ಇದರಿಂದ ಒಟ್ಟು ವ್ಯವಸ್ಥೆ ಬದಲಾಗದೆಂದೂ ಕೆಲವು ಎಡಪಂಥೀಯ ಹಾಗೂ ಬಂಡಾಯ ಚಳವಳಿಯ ಮುಂದಾಳುಗಳು ಅಪಸ್ವರ ಎತ್ತಿದರೂ ಈ ಎಲ್ಲ ಅಪಸ್ವರಗಳನ್ನು ಮುಳುಗಿಸುವಂತೆ ಮಾಧ್ಯಮಗಳಲ್ಲಿ, ಜನಸಾಮಾನ್ಯರ ಮಧ್ಯೆ, ರಾಜಪ್ಪನಂಥ ಉದಾರವಾದೀ ಶೂದ್ರರಲ್ಲಿ ಈ ಸ್ವಾಮಿಗಳು ಜನಪ್ರಿಯರಾಗುತ್ತಲೇ ಹೋದರು.

ರಾಜಪ್ಪನಿಗೆ ‘ರಾಜಪ್ಪ ಅಮಿನ್‌’ ಅನ್ನುವ ತನ್ನ ಹೆಸರಿನ ತುದಿಗೆ ‘ಕೊಡಿಯಾಲ’ ಅನ್ನುವ ತನ್ನ ಊರಿನ ಹೆಸರನ್ನು ತಗಲಿಸಬೇಕೆನ್ನಿಸಿದ್ದು ಇದೇ ಕಾರಣಕ್ಕೆ. ಇದರಿಂದ ತನ್ನ ಹೆಸರಿನ ಘನತೆ ಹೆಚ್ಚುವುದೆಂದೂ ತನ್ನ ಬರವಣಿಗೆ ಹೆಚ್ಚು ಜನಕ್ಕೆ ಅಪೀಲ್‌ ಆಗಬಹುದೆಂದೂ ಅನಿಸತೊಡಗಿ – ಮುಂದೆ ಪತ್ರಿಕೆಗಳಲ್ಲಿ ಕತೆ, ಕವಿತೆ, ವಿಮರ್ಶೆ ಬರೆಯುವಾಗಲೆಲ್ಲ ತನ್ನ ಹೆಸರನ್ನು ‘ರಾಜಪ್ಪ ಅಮಿನ್‌ ಕೊಡಿಯಾಲ’ ಎಂದೇ ಬರೆಯಲಾರಂಭಿಸಿದ.

ಈ ಸಂದರ್ಭದಲ್ಲಿ ಯಾರಾದರೂ ಹೊಸದಾಗಿ ಪರಿಚಯವಾದವರು ರಾಜಪ್ಪನ ಹೆಸರಿನ ಕೊಡಿಯಾಲದಿಂದಾಗಿ ಆತ ಶಿರಸಿ ಕಡೆಯವನಿರಬಹುದೆಂದು ತಪ್ಪಾಗಿ ಭಾವಿಸಿ ‘ಎಲ್ಲಿ ಶಿರಸಿ ಕಡೆಯವರೋ?’ ಎಂದು ಪ್ರಶ್ನಿಸಿದಾಗಲೋ ಅಥವಾ ‘ಶಿರಸಿಯಿಂದ ದಿನಾ ಕೆಲಸಕ್ಕೆ ಮಂಗಳೂರಿಗೆ ಬರುವುದೋ? ಛೇ ತುಂಬ ಕಷ್ಟ ಅಲ್ಲವೇ?’ ಎಂದು ಕನಿಕರ ತೋರಿಸಿದಾಗಲೋ ರಾಜಪ್ಪ – ‘ಛೇ ನಿಮಗೆ ಗೊತ್ತಿಲ್ಲ. ಅಲ್ಲಿ ಕೊಡಿಯಾಲ ಅನ್ನುವ ಊರೇ ಇಲ್ಲ. ಅಲ್ಲಿರುವುದು ಮೂಲ ಮಠದ ಶಾಖೆ ಅಷ್ಟೆ. ಆದರೆ ಮೂಲ ಮಠ ಮಾತ್ರ ನಮ್ಮಲ್ಲೇ ಇರುವುದು’ ಎಂದು ಅವರ ಅಜ್ಞಾನಕ್ಕೆಂಬಂತೆ ನಕ್ಕುಬಿಡುತ್ತಿದ್ದ. ತಾನು ಅಲ್ಲಿಗೇ ಸಂಬಂಧಪಟ್ಟವನೆಂದು ಒಳಗೊಳಗೇ ಹೆಮ್ಮೆಪಡುತ್ತಿದ್ದ.

ಹೀಗೆ ಉತ್ತಮ ವಿದ್ಯಾರ್ಥಿ, ಉದಯೋನ್ಮುಖ ಸಾಹಿತಿ ಎಂದು ಹೆಸರು ಪಡೆಯಲಾರಂಭಿಸಿದ ರಾಜಪ್ಪನ ಹೆಸರಿಗೆ ಇದ್ದಕ್ಕಿದ್ದಂತೆ ಕಳಂಕ ತಟ್ಟಿದ್ದು ಆತ ಫೈನಲ್‌ ಇಯರ್‌ ಬಿಎ ಓದುವ ಹೊತ್ತಿಗೆ. ಇಲ್ಲಿಯವರೆಗೆ ‘ತನ್ನ ಹೆಸರಂದರೆ ತಾನು’, ‘ತಾನೆಂದರೆ ತನ್ನ ಹೆಸರು’ ಎಂಬ ಅಭೇದ ಅದ್ವೈತದಲ್ಲಿ ತನ್ನ ವ್ಯಕ್ತಿತ್ವಕ್ಕೆ ಚರ್ಮದ ಹಾಗೆ ಅಂಟಿಕೊಂಡಿದ್ದ ತನ್ನ ಹೆಸರನ್ನು ಅದರ ಸಕಲಾರ್ಥದಲ್ಲಿ ಆನಂದಿಸುತ್ತಿದ್ದ ರಾಜಪ್ಪನ ಖುಷಿಗೆ ತಡೆಬಂದದ್ದು ಉಗಾಂಡದ ಇದಿ ಅಮಿನ್‌ನಿಂದ ಎನ್ನುವುದು ತಮಾಷೆಯ ವಿಷಯವಾದರೂ ನಿಜವಾಗಿತ್ತು.

ಯಾಕೆಂದರೆ ಆ ಹೊತ್ತಿಗೆ ಉಗಾಂಡದ ಅಧ್ಯಕ್ಷ ಇದಿ ಅಮಿನ್‌ ಸರ್ವಾಧಿಕಾರಿಯಾಗಿ ನರಹತ್ಯೆ ನಡೆಸುತ್ತ ಇಡೀ ಪ್ರಪಂಚಕ್ಕೆ ಭೀಕರ ಕ್ರೌರ್ಯದ ಸಂಕೇತವಾಗಿ ಕಾಣಿಸಿತೊಡಗಿದ್ದ. ದಿನನಿತ್ಯ ರೇಡಿಯೋ ವಾತ್ರೆಗಳಲ್ಲಿ, ಪತ್ರಿಕೆಗಳ ಕಾಲಂಗಳಲ್ಲಿ ಈತನ ನರಹತ್ಯೆಯ ಸುದ್ದಿ ಒಂದೇ ಸಮನೆ ದಟ್ಟವಾಗಿ ಕಾಣಿಸಲಾರಂಭಿಸಿದಾಗ, ಮೊದಲ ಬಾರಿಗೆ ರಾಜಪ್ಪ ‘ಅಮಿನ್‌’ ಎಂದು ಕರೆಸಿಕೊಳ್ಳುವುದಕ್ಕೆ, ಹಾಗೆಂದು ಬರೆಯುವುದಕ್ಕೆ ಮುಜುಗರ ಪಟ್ಟ. ‘ಅಮಿನ್‌’ ಹೆಸರಿನ ಮಾವ ಎಷ್ಟು ಒಳ್ಳೆಯವರಾದರೇನಂತೆ? ಈ ದುಷ್ಟ ಅಮಿನ್‌ ಮಾತ್ರ ಎಂಥ ರಕ್ತಪಿಪಾಸುವಾಗಿ ಬಿಟ್ಟನಲ್ಲ ಎಂದು ಹಳಹಳಿಸಿದ. ಹೋದಲ್ಲಿ, ಬಂದಲ್ಲಿ, ಉಣ್ಣುವಾಗ, ಓದುವಾಗ, ನಿದ್ದೆಯಲ್ಲಿ ಕೂಡ ಈ ಅಮಿನ್‌ನ ನರಹತ್ಯೆಯ ದೃಶ್ಯ ದುಃಸ್ವಪ್ನವಾಗಿ ಕಾಡಿ ಪ್ರಪಂಚದ ಎಲ್ಲ ನರಹತ್ಯೆಯ ಕಳಂಕವೂ ತನ್ನ ಹೆಸರಿಗೇ ಅಂಟಿದಂತೆನಿಸಿ, ತನ್ನ ಹೆಸರಿಂದಲೂ ಈ ನರಹತ್ಯೆಯ ನೆತ್ತರು ತೊಟ್ಟಿಕ್ಕಿದ ಅನುಭವವಾಗಿ ನಡುಗಿದ.

ಮುಂದೆ ಉಗಾಂಡದಲ್ಲಿ ಕ್ಷಿಪ್ರ ಕ್ರಾಂತಿ ನಡೆದು ಇದಿ ಅಮಿನ್‌ ದೇಶಭ್ರಷ್ಟನಾಗಿ ಹೋದರೂ ದುಃಸ್ವಪ್ನವಾಗಿ ಕಾಡಿದ ಈ ಅಮಿನ್‌ ಶಬ್ದ ಮಾತ್ರ ರಾಜಪ್ಪನ ಹೆಸರಿನ ತುದಿಯಲ್ಲಿ ಇನ್ನೂ ಅಶುಭಸೂಚಕವಾಗಿ ತೂಗುತ್ತಲೇ ಇತ್ತು. ರಾಜಪ್ಪ ತನ್ನ ಹೆಸರಿನ ಅಮಿನ್‌ ಶಬ್ದವನ್ನು ಕಿತ್ತೊಗೆಯುವ ಆಲೋಚನೆಯನ್ನು ಈಗ ಗಂಭೀರವಾಗಿ ಮಾಡತೊಡಗಿದ. ಅದಕ್ಕೆ ಒಂದು ಒಳ್ಳೆಯ ಮುಹೂರ್ತವೂ ಕೂಡಿ ಬಂತು.
ಒಮ್ಮೆ ರಾಜಪ್ಪ ಕಾಲೇಜು ಲೈಬ್ರರಿಯಲ್ಲಿ ಕೂತು ಯಾವುದೋ ಮ್ಯಾಗಝಿನ್‌ ತಿರುವಿ ಹಾಕುತ್ತಿರಬೇಕಾದರೆ ಭರವಸೆಯ ಸಾಹಿತಿ ಎಂದು ತನ್ನಲ್ಲಿ ತುಂಬ ಅಭಿಮಾನ ಹೊಂದಿದ್ದ ಪ್ರಗತಿಪರ ಮನೋಭಾವದ ತನ್ನ ಇಂಗ್ಲಿಷ್‌ ಮಾಸ್ಟ್ರು ವಿಕ್ರಂ ಸರ್‌ ಅಧ್ಯಾಪಕರಿಗೆಂದು ಕಾದಿರಿಸಿದ್ದ ಕುರ್ಚಿಗಳ ಸಾಲಿನಲ್ಲಿ ಕೂರುತ್ತ, ಎದುರು ಕೂತ ರಾಜಪ್ಪನಲ್ಲಿ ಕೆಳದನಿಯಲ್ಲಿ ಲೋಕಾಭಿರಾಮವಾಗಿ ಮಾತಾಡುತ್ತ ಕೊನೆಯಲ್ಲಿ – ‘‘ತುಂಬಾ ಜಾತ್ಯತೀತವಾಗಿ ಪ್ರಗತಿಪರವಾಗಿ ಬರೆಯುವ ನೀನು ನಿನ್ನ ಹೆಸರಿನಲ್ಲಿ ಮಾತ್ರ ಜಾತಿಸೂಚಕ ‘ಅಮಿನ್‌’ ಶಬ್ದವನ್ನು ಯಾಕೆ ಉಪಯೋಗಿಸುತ್ತಿ?’’ ಎಂದು ನೇರವಾಗಿ ಕೇಳಿದ್ದರು. ರಾಜಪ್ಪ ತಬ್ಬಿಬ್ಬಾಗಿ ‘ಫೇಮಸ್‌’ ಎಂದೇನೋ ತೊದಲಿದ. ತಾನು ಆ ಹೆಸರಿನಲ್ಲೇ ಫೇಮಸ್‌ ಆಗಿದ್ದೇನೆ ಎಂದು ತಾನೆಂದೆ ಎಂದು ತಪ್ಪಾಗಿ ತಿಳಿದುಕೊಂಡ ವಿಕ್ರಂ ಸರ್‌ – ‘ಸರಿ ಹಾಗಾದರೆ’ ಎಂದು ನಕ್ಕು ಹೊರಟುಹೋಗಿದ್ದರು.

ಅವರು ಹೊರಟುಹೋದ ಮೇಲೆ ಏನೋ ಹೇಳಹೋಗಿ ಏನೋ ಹೇಳಿದೆನಲ್ಲ ಎಂದು ಹಳಹಳಿಸಿದ ರಾಜಪ್ಪನಿಗೆ, ಆ ಕ್ಷಣದಲ್ಲಿ ವಿಕ್ರಂ ಸರ್‌ ಹೇಳಿದ್ದರಲ್ಲಿ ಅರ್ಥ ಇದೆ ಅನಿಸಿದರೂ ಮುಂದೆ ಒಂದೆರಡು ದಿನ ಮಾವನ ಮೇಲಿನ ಪ್ರೀತಿ ಹಾಗೂ ಇದಿ ಅಮಿನ್‌ನ ಮೇಲಿನ ದ್ವೇಷ – ಇವೆರಡರ ನಡುವೆ ಒದ್ದಾಡಿದ. ಕೊನೆಗೊಂದು ದಿನ ಗಟ್ಟಿ ಮನಸ್ಸು ಮಾಡಿ ತನ್ನ ಹೆಸರಿನ ಅಮಿನ್‌ ಶಬ್ದವನ್ನು ಕಿತ್ತೊಗೆದೇ ಬಿಟ್ಟ. ಆದರೆ ಹಾಗೆ ಕಿತ್ತೊಗೆಯಲು ನಿರ್ಧರಿಸಿದ ದಿನ ಮಾತ್ರ ರಾಜಪ್ಪನಿಗೆ ತನ್ನ ವ್ಯಕ್ತಿತ್ವದಿಂದ ಏನೋ ಒಂದು ಹೊರಟು ಹೋದಂತೆನಿಸಿ ಅನ್ಯಮನಸ್ಕನಾಗಿ ಮನೆಯೆದುರಿನ ಗುಡ್ಡೆ ಏರಿ ಕತ್ತಲಾಗುವವರೆಗೂ ಕೂತಿದ್ದ. ಆದರೆ ಇದರಿಂದ ಮುಂದಿನ ದಿನಗಳಲ್ಲಿ ಮಾತ್ರ ತಾನು ತನ್ನ ಇಂಗ್ಲಿಷ್‌ ಮಾಸ್ಟರ ಅಭಿಮಾನಕ್ಕೆ ಹೀಗಾದರೂ ಪಾತ್ರನಾದೆನಲ್ಲ ಎಂಬ ಹಿಗ್ಗನ್ನೂ ಅನುಭವಿಸಿದ.

ಮುಂದೆ ಕಾಲೇಜಿನ ಭಿತ್ತಿಪತ್ರದಲ್ಲಿ, ಪತ್ರಿಕೆಗಳಲ್ಲಿ ತನ್ನ ಹೆಸರು ತಳೆದ ಹೊಸ ಅವತಾರವನ್ನು ಕಂಡ ತನ್ನ ಕೆಲವು ಗೆಳೆಯರು, ಸಹಪಾಠಿಗಳು ಆ ಬಗ್ಗೆ ಕೇಳಿದಾಗ ಅದು ವಿಕ್ರಂ ಮಾಸ್ಟ್ರ ಸಲಹೆ ಅಂದುಬಿಟ್ಟ. ಅಲ್ಲದೆ ಅದಕ್ಕೆ ಅವರು ಕೊಟ್ಟ ಕಾರಣವನ್ನು ವಿವರಿಸಿ, ತನ್ನ ಹೆಸರಿನಿಂದ ಅಮಿನ್‌ ಶಬ್ದವನ್ನು ನಿವಾರಿಸಿದ್ದರ ಸಮರ್ಥನೆಯನ್ನೂ ಮಾಡಿದ. ಮುಂದೆ ತನ್ನ ಹೆಸರಿನ ತುದಿಯಲ್ಲಿ ‘ಅಮಿನ್‌’ ಶಬ್ದ ಪ್ರಯೋಗಿಸಿ (ಅದಕ್ಕೆ ರಾಜಪ್ಪನೇ ಸ್ಫೂರ್ತಿಯೂ ಆಗಿದ್ದ!) ರಾಜಪ್ಪನ ಹಾಗೇ ಕತೆ ಕವಿತೆ ಬರೆದುಕೊಂಡು ಸಾಹಿತಿಯಾಗಲು ಪ್ರಯತ್ನಿಸುತ್ತಿದ್ದ ತನ್ನ ಇನ್ನೊಬ್ಬ ಕಿರಿಯ ಗೆಳೆಯ ರಾಜೀವ್‌ ಅಮಿನ್‌ ಅಂತೂ ಒಂದು ದಿನ ರಾಜಪ್ಪನ ಮನೆಗೆ ಬಂದು, ಚಹಾ ಕುಡಿದು, ತನ್ನ ಹೆಸರಿಂದ ಅಮಿನ್‌ ಶಬ್ದವನ್ನು ಕಿತ್ತೊಗೆದದ್ದಕ್ಕೆ ರಾಜಪ್ಪನನ್ನು ಬಲವಾಗಿ ತರಾಟೆಗೆ ತಗೊಂಡ. ರಾಜಪ್ಪ ತನ್ನ ಹೆಸರಿನ ತುದಿಯಲ್ಲಿ ಮತ್ತೆ ಅಮಿನ್‌ ಶಬ್ದ ಸೇರಿಸುವಂತೆ ಒತ್ತಾಯಿಸಿ, ಸಾಧ್ಯವಾಗದೆ ಅಳುಮೋರೆ ಮಾಡಿಕೊಂಡು ಎದ್ದೂ ಹೋಗಿದ್ದ.

ಮುಂದೆ ಕಾಲೇಜು ಮುಗಿಸಿ ಕೇಂದ್ರ ಸರ್ಕಾರಿ ಕಚೇರಿಯ ಉದ್ಯೋಗಿಯೂ ಆಗಿ ಊರೂರು ಸುತ್ತಲಾರಂಭಿಸಿದ ರಾಜಪ್ಪ ಅರ್ಥಾತ್‌ ರಾಜಪ್ಪ ಕೊಡಿಯಾಲ. ತಂಗಿಯಂದಿರ ಮದುವೆ, ತಮ್ಮಂದಿರ ವಿದ್ಯಾಭ್ಯಾಸ, ಅಮ್ಮನ ಅನಾರೋಗ್ಯ, ಅಪ್ಪನ ಕಾಟ – ಇವುಗಳ ಮಧ್ಯೆಯೂ ಸಾಹಿತ್ಯಾಸಕ್ತಿಯನ್ನು ಜೀವಂತವಾಗಿ ಉಳಿಸಿಕೊಂಡಿದ್ದ. ಈ ನಡುವೆ ‘ರಾಜಪ್ಪ ಕೊಡಿಯಾಲ’ ಅನ್ನುವ ಹೆಸರಿನಲ್ಲೇ ಸಾಹಿತ್ಯ ವಲಯದಲ್ಲಿ ಸಾಕಷ್ಟು ಹೆಸರು ಮಾಡಿದ್ದ. ಮುಂದೆ ಪ್ರೈವೇಟ್‌ ಆಗಿ ಎಂ.ಎ.ಗೆ ಕಟ್ಟಿ ಮುಂದೊಂದು ದಿನ ತಾನು ಕಲಿತ ಕಾಲೇಜಿನಲ್ಲೇ ಕನ್ನಡ ಉಪನ್ಯಾಸಕನೂ ಆದ.

ಅದು ದೇಶದಲ್ಲಿ ಅಯೋಧ್ಯೆಯ ವಿವಾದ ಕಾವೇರುತ್ತಿದ್ದ ದಿನಗಳು. ಇಡೀ ದೇಶ ಮಂದಿರ ವಿರೋಧಿ ಹಾಗೂ ಮಂದಿರ ಪರ ಎಂದು ಇಬ್ಭಾಗವಾಗಿತ್ತು. ಕೇಂದ್ರ ಸರ್ಕಾರಿ ನೌಕರನೆಂಬ ನೆಲೆಯಲ್ಲಿ ಮಲೆನಾಡಿನ ವಿವಿಧ ಊರುಗಳ ನೀರು ಕುಡಿದಿದ್ದ ರಾಜಪ್ಪ ಆಗಲೇ ಹೆಚ್ಚು ಪ್ರಗತಿಪರ ಸಾಹಿತಿಯಾಗಿ ಗುರುತಿಸಿಕೊಂಡಿದ್ದ. ಸಹಜವಾಗಿಯೇ ಕೊಡಿಯಾಲ ಸ್ವಾಮೀಜಿಯ ಮಂದಿರ ಪರ ನಿಲುವು ಅವನಲ್ಲಿ ನಿರಾಶೆಯನ್ನು ಹುಟ್ಟಿಸಿತ್ತು. ಮುಂದೆ ಬಾಬರಿ ಮಸೀದಿ ಉರುಳಿಬಿದ್ದಾಗ ಅದರ ಮುಂಚೂಣಿಯಲ್ಲಿ ಇತರ ರಾಜಕೀಯ ನಾಯಕರ ಜತೆ ಈ ಕೊಡಿಯಾಲ ಸ್ವಾಮೀಜಿಯೂ ಇದ್ದರೆಂದೂ ಇಟ್ಟಿಗೆ ಸಂಗ್ರಹದಲ್ಲೀ ಅವರು ಸಕ್ರಿಯ ಪಾತ್ರ ವಹಿಸಿದರೆಂದೂ ತಿಳಿದುಬಂದಾಗ ತನ್ನ ಹೆಸರಿನ ಜತೆ ಸೇರಿಹೋಗಿದ್ದ ಕೊಡಿಯಾಲದ ಬಗೆಗೂ ರಾಜಪ್ಪ ಕಿರಿಕಿರಿ ಅನುಭವಿಸತೊಡಗಿದ.

ದಿನನಿತ್ಯವೆಂಬಂತೆ ಇತರ ನಾಯಕರ ಜತೆ ಪ್ರಗತಿಪರ ಚಿಂತಕರ, ಪತ್ರಿಕೆಗಳ ಕೆಂಗಣ್ಣಿಗೆ ಗುರಿಯಾಗತೊಡಗಿದ ಈ ಕೊಡಿಯಾಲ ಸ್ವಾಮೀಜಿ ಸುದ್ದಿ ಮಾಧ್ಯಮಗಳಲ್ಲೆಲ್ಲ ಪ್ರಮುಖ ಖಳಯಕನೆಂಬಂತೆ ಬಿಂಬಿಸಲ್ಪಟ್ಟಾಗ ರಾಜಪ್ಪ ಹೌಹಾರಿದ. ಈ ಹಿಂದೆ ಎಡಪಂಥೀಯ ಬುದ್ಧಿಜೀವಿಗಳು ಕೊಡಿಯಾಲ ಸ್ವಾಮೀಜಿ ಓರ್ವ ಯಥಾಸ್ಥಿತಿವಾದಿಯೆಂದೂ ಹಿಂದೂ ಧರ್ಮದ ರಿವೈವಲಿಸ್ಟ್‌ ಎಂದೂ ದಲಿತಕೇರಿಯಲ್ಲಿ ಕೃಷ್ಣನ ಫೋಟೋ ಹಂಚುವ ಕೇವಲ ಕಣ್ಣೊರೆಸುವ ತಂತ್ರವೆಂದೂ ಆಪಾದಿಸಿದಾಗ ತನ್ನ ಹೆಸರಿನ ತುದಿಯ ಕೊಡಿಯಾಲದ ಬಗ್ಗೆ ಏನೂ ಅನಿಸದಿದ್ದ ರಾಜಪ್ಪನಿಗೆ ಈಗ ಮಾತ್ರ ಈ ಸ್ವಾಮೀಜಿಯ ಕೊಡಿಯಾಲಕ್ಕೆ ಅಂಟಿದ ಮೈಲಿಗೆ ಸ್ವತಃ ತನ್ನ ಹೆಸರಿಗೇ ಅಂಟಿದ ಮೈಲಿಗೆ ಅಂತನ್ನಿಸಿ, ತನ್ನನ್ನು ಕಂಡಲ್ಲೆಲ್ಲ ತನ್ನ ಗೆಳೆಯರು ಕೊಡಿಯಾಲ ಸ್ವಾಮೀಜಿ, ಕೊಡಿಯಾಲ ಸ್ವಾಮೀಜಿ ಎಂದು ಅಪಹಾಸ್ಯ ಮಾಡಿದಂತೆ ಭಾಸವಾಗಿ, ಒಂದು ದಿನ ತನ್ನ ಹೆಸರಿಂದ ಕೊಡಿಯಾಲವನ್ನೂ ತೆಗೆದುಬಿಟ್ಟ.

ತನ್ನ ಅಪ್ಪ–ಅಮ್ಮ ಇಟ್ಟ ಮೂಲ ಹೆಸರನ್ನು ಮಾತ್ರ ಉಳಿಸಿಕೊಂಡು, ಇನ್ನು ಪೀಡೆ ಕಳೆಯಿತು ಎಂದು ನಿಟ್ಟುಸಿರುಬಿಟ್ಟ. ಹೀಗೆ ತನ್ನ ಮೈಗೆ ಸುತ್ತಿದ ಭ್ರಮೆಗಳ ಬಟ್ಟೆಯನ್ನು ಒಂದೊಂದಾಗಿ ಕಳಚಿ ತನ್ನ ನಿಜದ ಅಸ್ತಿತ್ವವನ್ನು ಮುಟ್ಟಿದಂತೆ ರಾಜಪ್ಪ ಪುಳಕಿತನಾದರೂ ತನ್ನ ಬೋಳು ಹೆಸರಲ್ಲಿ ವ್ಯವಹರಿಸುವಾಗ ಒಮ್ಮೊಮ್ಮೆ ಸಾರ್ವಜನಿಕವಾಗಿ ಬೆತ್ತಲೆಸ್ನಾನ ಮಾಡಿಕೊಂಡಂತೆಯೂ ಅನಿಸುತ್ತಿತ್ತು. ‘ರಾಜಪ್ಪ’ ಅನ್ನುವ ಹೆಸರಿನಲ್ಲಿ ಈತನ ಬರವಣಿಗೆ ಪ್ರಕಟವಾದಾಗಲೆಲ್ಲ ‘ಇದ್ಯಾವ ರಾಜಪ್ಪ?’ ಎಂದು ಹೊಸ ಹೆಸರನ್ನು ಕಂಡವರಂತೆ – ಕೆಲವು ಓದುಗರು ಕೇಳುವಂತಾದರು.

ಇದೆಲ್ಲ ಆಗಿ ಈಗ ಎಷ್ಟೋ ವರ್ಷಗಳು, ಈ ನಡುವೆ ಕೊಡಿಯಾಲದ ಊರು ಕೊಂಕಣ್‌ ರೈಲ್ವೆಗೆ ಮತ್ತು ನಾಗಾರ್ಜುನ ಸ್ಟೀಲ್‌ ಫ್ಯಾಕ್ಟರಿಗೆಂದು ಅಕ್ವಯರ್‌ ಆಗಿತ್ತು. ಚುಕ್‌ಬುಕ್‌ ಎಂದು ಕೊಡಿಯಾಲದ ಹೃದಯವನ್ನು ಎರಡಾಗಿ ಸೀಳುತ್ತ ಮಂಗಳೂರು–ಮುಂಬಯಿ ರೈಲು ಓಡಲಾರಂಭಿಸಿತ್ತು. ಇದಿ ಅಮಿನ್‌ ಯಾರಿಗೂ ಪತ್ತೆ ಇಲ್ಲದಂತೆ ಯಾವುದೋ ಅರಬ್‌ ದೇಶದಲ್ಲಿ ತಲೆಮರೆಸಿಕೊಂಡಿದ್ದವ ಈಚೆಗೆ ಸತ್ತುಹೋದ ಸುದ್ದಿ ಪೇಪರಲ್ಲಿ ಬಂತು. ಬುದ್ಧಿಜೀವಿ ವಲಯದಲ್ಲಿ ಕೊಡಿಯಾಲ ಸ್ವಾಮೀಜಿಗಿದ್ದ – ರಿಯಾಕ್ಷನರಿ ಅನ್ನುವ ಹೆಸರು ಹಾಗೇ ಮುಂದುವರಿದಿತ್ತು. ತಂಗಿಗೆ ಮದುವೆಯಾಗಿತ್ತು.

ಅಣ್ಣ ಮದುವೆಯಾಗಿ ಮುಂಬಯಿಯಲ್ಲಿದ್ದ. ತಮ್ಮಂದಿರು ಬೇರೆ ಬೇರೆ ಕಡೆ ಕೆಲಸದಲ್ಲಿದ್ದರು. ಕೊನೆಯವಳ ಮದುವೆಯಾಗಿಲ್ಲ ಅನ್ನುವ ನೆಪದಲ್ಲಿ ರಾಜಪ್ಪ ಇನ್ನೂ ಬ್ರಹ್ಮಚಾರಿಯಾಗಿಯೇ ಉಳಿದಿದ್ದ. ಈ ನಡುವೆ ಕಾದಂಬರಿಯೊಂದನ್ನು ಬರೆದ ರಾಜಪ್ಪನಿಗೆ ವಿಮರ್ಶಕ ವಲಯದಲ್ಲಿ ಒಳ್ಳೆಯ ಹೆಸರೂ ಬಂತು. ಹೀಗೆ ದಿನಗಳು ಸುರಳೀತ ಉರುಳುತ್ತಿವೆ ಅನ್ನುವಾಗಲೇ ಈಚೆಗೆ ಎಂಟು ತಿಂಗಳ ಹಿಂದೆ ರಾಜಪ್ಪನ ಏರಿಳಿತವಿಲ್ಲದ ನೀರಸ ಬದುಕಿಗೆ ಬೆಂಕಿ ಹಚ್ಚುವ ಆ ಘಟನೆ ನಡೆದಿತ್ತು.

ಅದು ಏಪ್ರಿಲ್‌ ತಿಂಗಳ ಬೇಸಿಗೆಯ ರಜೆಯ ಸಮಯ. ಮಧ್ಯಾಹ್ನ ಎರಡು ಗಂಟೆಗೆ ಕಾಲೇಜಿನ ಪರೀಕ್ಷೆಯ ಡ್ಯೂಟಿ ಇತ್ತು. ರಾಜಪ್ಪ ಚಾವಡಿಯಲ್ಲಿ ಕುರ್ಚಿ ಮೇಲೆ ಟೀವಿ ನೋಡುತ್ತ ಕುಳಿತಿದ್ದ. ಅಮ್ಮ ಮತ್ತು ಕೊನೆಯ ತಂಗಿ ಮದುವೆಗೆಂದು ವಾಮಂಜೂರಿಗೆ ಹೊರಟಿದ್ದರೆ ಅಪ್ಪ ತನ್ನ ತಂಗಿಯ ಮನೆಗೆ ಹಿಂದಿನ ದಿನವೇ ಅಳಿಯನ ನಿಶ್ಚಿತಾರ್ಥ ಪಕ್ಕಾ ಮಾಡಲು ಹೋಗಿದ್ದವ ಇನ್ನೂ ಬಂದಿರಲಿಲ್ಲ. ಅಷ್ಟು ಹೊತ್ತಿಗೆ, ಪಕ್ಕದ ಮನೆಯ ಸುಮತಿ ಹಿಂದಿನ ದಿನ ಕೊಂಡುಹೋಗಿದ್ದ ‘ಗೃಹಶೋಭಾ’ ಹಿಂತಿರುಗಿಸಲು ಬಂದಿದ್ದಳು. ಬಹುಶಃ ಅವಳಿಗೆ ಮನೆಯಲ್ಲಿ ರಾಜಪ್ಪನಲ್ಲದೇ ಬೇರೆ ಯಾರೂ ಇಲ್ಲದ್ದು ಗೊತ್ತಿರಲಿಕ್ಕಿಲ್ಲ.

ತುಸುವೇ ಓರೆಯಾಗಿದ್ದ ಬಾಗಿಲು ದೂಡಿ ಸೀದ ಒಳಗೇ ಬಂದಳು. ರಾಜಪ್ಪನನ್ನು ಕಂಡದ್ದೇ ತುಸು ಬೆಚ್ಚಿದಂತೆ ಕಂಡರೂ ಸಾವರಿಸಿಕೊಂಡು ನಾಚುಗೆಯ ನಗೆ ನಕ್ಕು ಮ್ಯಾಗಝಿನ್‌ ಆತನ ಕೈಗೆ ಕೊಟ್ಟು ಹಿಂತಿರುಗಬೇಕೆನ್ನುವಷ್ಟರಲ್ಲಿ ರಾಜಪ್ಪ ಅವಳ ಕೈಹಿಡಿದಿದ್ದ. ಆಮೇಲೆ ಆರಂಭದಲ್ಲಿ ಕೊಸರಿಕೊಂಡ ಸುಮತಿ ನಿಧಾನವಾಗಿ ತನ್ನ ಪಟ್ಟು ಸಡಿಲಿಸಿದ್ದು, ರಾಜಪ್ಪ ಮೈಮೇಲೆ ಬಂದವನಂತೆ ವರ್ತಿಸಿದ್ದು ಎಲ್ಲ ಮುಗಿದು ಅವಳು ಮುಖ ಮುಚ್ಚಿಕೊಂಡು ಓಡಿದ್ದು – ಇದೆಲ್ಲ ಕ್ಷಣಾರ್ಧದಲ್ಲಿ ಕನಸಿನಲ್ಲೆಂಬಂತೆ ನಡೆದುಹೋಗಿತ್ತು. ಅವಳು ಹೊರಟುಹೋದ ಮೇಲೆ ಅವಳು ಇದನ್ನೊಂದು ರಂಪವಾಗಿಸಬಹುದೆಂದು ಹೆದರಿದ ರಾಜಪ್ಪ ಆ ದಿನವಿಡೀ ಆತಂಕದಲ್ಲೇ ಕಳೆದಿದ್ದ. ಆದರೆ ಅಂಥದ್ದೇನೂ ನಡೆಯದಿದ್ದಾಗ ರಾಜಪ್ಪ ಸಮಾಧಾನದ ಉಸಿರು ಬಿಟ್ಟಿದ್ದರೂ ಆ ದಿವಸವಿಡೀ ಸುಮತಿಯ ಮನೆಯಲ್ಲಿ ಕವಿದ ವಿಚಿತ್ರ ಮೌನ ಮಾತ್ರ ಅವನನ್ನು ಒಳಗೇ ಕುಕ್ಕಿ ತಿಂದಿತ್ತು.

ಪಿಯುಸಿ ಮುಗಿಸಿ ಮುಂದೆ ಓದುವ ಉಪಾಯವಿಲ್ಲದೆ ಬೀಡಿ ಸುತ್ತಿಕೊಂಡು ಇದ್ದಳು ಸುಮತಿ. ಅಪ್ಪ ರಾಜು ಶೆಟ್ಟಿ, ಸಿಕ್ಕ ಕೂಲಿ ಕೆಲಸಕ್ಕೆ ಹೋಗುತ್ತಿದ್ದರೆ ತಾಯಿ ಇಂದಿರ ಹೊರಗೆ ದುಡಿಯಲು ಹೋಗುತ್ತಿದ್ದಳು. ಒಂದೆರಡು ಬಾರಿ ಕೆಲಸಕ್ಕೆ ರಾಜಪ್ಪನಿಂದ ಅರ್ಜಿ ಬರೆಯಿಸಿ ಅಲ್ಲಿ ಇಲ್ಲಿ ಕಳಿಸಿದ ಸುಮತಿ, ಮುಂದೆ ಒಂದಕ್ಕೂ ಉತ್ತರವಿಲ್ಲದಿದ್ದಾಗ ಮನೆಯಲ್ಲೆ ಬೀಡಿ ಸುತ್ತುವ ನಿರ್ಧಾರಕ್ಕೆ ಬಂದಿದ್ದಳು. ಆಗೀಗ ಟಿವಿ ನೋಡಲೆಂದೋ ರಾಜಪ್ಪ ಲೈಬ್ರೆರಿಯಿಂದ ತರುವ ಮ್ಯಾಗಝಿನ್‌ ಕೇಳಲೆಂದೋ ಮನೆಗೆ ಬರುತ್ತಿದ್ದ ಸುಮತಿ ಬಿ.ಎ ಮುಗಿಸಿ ಮದುವೆಗೆ ಕಾದು ಕುಳಿತಿದ್ದ ರಾಜಪ್ಪನ ತಂಗಿಯ ಜೊತೆ ಹೆಚ್ಚು ಹೊಂದಾಣಿಕೆಯಿಂದಿದ್ದಳು.

ಮುಂದೆ ಮರ್ಯಾದೆಯ ಪ್ರಶ್ನೆಯೆಂದೋ ಹೆದರಿಕೆಯೋ ಒಟ್ಟಿನಲ್ಲಿ ಇದು ಯಾರ ಗಮನಕ್ಕೂ ಬರದಂತೆ ಮುಚ್ಚಿಹೋಗಿತ್ತು. ಆದರೆ ತನ್ನ ತಪ್ಪಿನ ಅರಿವಾದಾಗ ಮಾತ್ರ ರಾಜಪ್ಪ ಒಳಗೇ ಪಶ್ವಾತ್ತಾಪದಲ್ಲಿ ಬೇಯುತ್ತಿದ್ದ. ಯಾರ ಎದುರಲ್ಲಲ್ಲವಾದರೂ ಸುಮತಿ ಎದುರಾದಾಗಲೆಲ್ಲ ತಾನು ಎಂಥ ಕ್ಷುದ್ರ ಜಂತುವಾಗಿಬಿಟ್ಟೆ ಅನಿಸುತ್ತಿತ್ತು. ಆದರೆ ರಾಜಪ್ಪನ ಆತಂಕ ಪೂರಾ ಪರಿಹಾರವಾಗಿರಲಿಲ್ಲ. ಒಂದು ದಿನ ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ತನ್ನನ್ನು ಭೆಟ್ಟಿಯಾದ ಸುಮತಿ, ತನಗೆ ಎಂದಿನಂತೆ ಆ ತಿಂಗಳು ಮುಟ್ಟುನಿಲ್ಲದ ಬಗ್ಗೆ ಹೇಳಿ ರಾಜಪ್ಪನಲ್ಲಿ ಭಾರೀ ಆತಂಕ ಮೂಡಿಸಿದಳು.

ಆಮೇಲೆ ತಾನು ಜಾಬ್‌ ಇಂಟರ್‌ವ್ಯೂನ ನೆಪದಲ್ಲಿ – ಅವಳು ಬಸ್ಸಿನ ಎದುರಿನ ಸೀಟಿನಲ್ಲೂ ತಾನು ಹಿಂದಿನ ಸೀಟಿನಲ್ಲೂ ಕೂತು ಪಡುಕೆರೆಯಲ್ಲಿ ಇಳಿದು, ಅಲ್ಲಿಂದ ರಿಕ್ಷಾ ಮಾಡಿ ಯಾವುದೋ ಸರ್ಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿನ ಲೇಡಿ ಡಾಕ್ಟ್ರ ಸೂಚನೆಯಂತೆ ಹೊರಗಿನ ಯಾವುದೋ ಪ್ರೈವೇಟ್‌ ಲ್ಯಾಬ್‌ನಲ್ಲಿ ಯೂರಿನ್‌ ಟೆಸ್ಟ್‌ ಮಾಡಿಸಿ, ‘ಪಾಸಿಟಿವ್‌’ ಎಂದು ಗೊತ್ತಾದ ಮೇಲೆ, ಮತ್ತೆ ನಾಲ್ಕು ದಿನ ಕಳೆದು ಮತ್ತೆ ಅದೇ ನೆವದಲ್ಲಿ, ಅದೇ ರೀತಿಯಲ್ಲಿ ಹೋಗಿ ಗರ್ಭವನ್ನು ನಿವಾರಿಸಿದ್ದು, ಅದು ಮತ್ತೊಂದು ಕಥೆ.

ಅದಾಗಿ ಇದೀಗ ಐದಾರು ತಿಂಗಳುಗಳೇ ಆಗಿದ್ದರೂ ಇತ್ತೀಚೆಗೆ ಒಂದೆರಡು ವಾರಗಳಿಂದ ರಾಜಪ್ಪನಿಗೆ ವಿಚಿತ್ರ ಅನುಭವಗಳಾಗಲಾರಭಿಸಿದ್ದವು. ಮನೆಬಿಟ್ಟು ಬಸ್‌ ಹಿಡಿಯಲೆಂದು ರಸ್ತೆಯಲ್ಲಿ ನಡೆದರೆ ಮತ್ತೆ ಬಸ್ಸಿಳಿದು ಕಾಲೇಜಿನತ್ತ ರಸ್ತೆಯಲ್ಲಿ ಹೆಜ್ಜೆ ಹಾಕಿದರೆ, ರಸ್ತೆಯಲ್ಲಿ ಎದುರಾದ ಜನ ಒಂದು ಕ್ಷಣ ಪರಸ್ಪರ ಮಾತಾಡುವುದನ್ನು ನಿಲ್ಲಿಸಿ ರಾಜಪ್ಪನನ್ನೇ ಗಮನಿಸಿದ ಹಾಗೆ ಅನಿಸುತ್ತಿತ್ತು. ಆಮೇಲೆ ಮೆಲ್ಲಗೆ ಮೀಸೆಯಡಿ ನಕ್ಕ ಹಾಗೆ. ಅವರನ್ನು ಹಾದು ಮುಂದೆ ಹೋದರೆ ಹಿಂದಿನಿಂದ ಅಡಗಿಸಿಟ್ಟ ನಗು ಒಮ್ಮೆಗೇ ಸ್ಫೋಟಿಸಿದ ಹಾಗೆ ಭಾಸವಾಗುತ್ತಿತ್ತು.

ಆದರೆ ಹಿಂದೆ ತಿರುಗುವುದಕ್ಕೆ ಮಾತ್ರ ಧೈರ್ಯ ಸಾಲುತ್ತಿರಲಿಲ್ಲ. ಮೊನ್ನೆ ಬೆಳಿಗ್ಗೆ ತನ್ನ ಸ್ಟಾಫ್‌ ರೂಂ ಹೊಕ್ಕಾಗ ತಮ್ಮಷ್ಟಕ್ಕೆ ಮಾತಾಡಿಕೊಳ್ಳುತ್ತಿದ್ದ ತನ್ನ ಸಹೋದ್ಯೋಗಿಗಳು ರಾಜಪ್ಪನ ಪ್ರವೇಶವಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿ, ಒಂದು ಕ್ಷಣ ಮೌನವಾಗಿ ತನ್ನನ್ನೇ ದಿಟ್ಟಿಸಿ ಮತ್ತೆ ಮುಂದುವರಿಸಿದ್ದು ಇಲ್ಲಿಯವರೆಗೂ ಅವರು ಮಾತನಾಡುತ್ತಿದ್ದುದು ತನ್ಮ ಬಗ್ಗೆಯೇ ಇರಬಹುದು ಎನ್ನುವ ಗುಮಾನಿಯನ್ನು ಮುಡಿಸಿತ್ತು ರಾಜಪ್ಪನಲ್ಲಿ. ಅದಕ್ಕೆಲ್ಲ ಕಿರೀಟವಿಟ್ಟಂತೆ ವಾರದ ಹಿಂದೆ ಸ್ಪೋರ್ಟ್ಸ್‌ ಗ್ರೌಂಡಿನಲ್ಲಿ ಆ ಕಹಿ ಪ್ರಸಂಗವೂ ನಡೆದಿತ್ತಿತ್ತು.

***
‘ತಾಜ್‌ಮಹಲ್‌’ನಲ್ಲಿ ಮಸಾಲೆದೋಸೆ ಮತ್ತು ಟೀಗೆ ಆರ್ಡರ್‌ ಮಾಡಿ ಇದನ್ನೆಲ್ಲ ಯೋಚಿಸುತ್ತ ‘ನೊಣ ಯಂತ್ರ’ದಲ್ಲಿ ನೊಣಗಳು ಚಿಟ್‌ಚಿಟ್‌ ಎಂದು ಸದ್ದು ಮಾಡುತ್ತ ಎಬ್ಬಿಸುತ್ತಿದ್ದ ಕರಕು ವಾಸನೆಯನ್ನು ಸಹಿಸುತ್ತ ಕೂತಿದ್ದ ರಾಜಪ್ಪನಿಗೆ ಫಕ್ಕನೆ ತಾನು ಹುಡುಗನಾಗಿದ್ದಾಗ ತಾನು ಮತ್ತು ತನ್ನ ಅಮ್ಮ ಜೊತೆಯಾಗಿ ಕಡೆಯುವ ಕಲ್ಲಿನಲ್ಲಿ ನೆನೆಸಿದ ಅಕ್ಕಿ ಕಡೆಯುತ್ತಿದ್ದಾಗ, ಒಂದು ಮುಸ್ಸಂಜೆ ಹೊತ್ತು ಅಡುಗೆ ಮನೆಯ ಮಬ್ಬುಕತ್ತಲೆಯಲ್ಲಿ ಅಮ್ಮ ತನ್ನ ಹೆಸರಿನ ಬಗೆಗೆ ಹೇಳಿದ ಕಥೆ ನೆನಪಾಗಿ ಮನಸ್ಸು ವ್ಯಾಕುಲಗೊಂಡಿತು. ಅಮ್ಮನ ಪ್ರಕಾರ ರಾಜಪ್ಪನದು ರಾಕ್ಷಸ ಯೋಗವಂತೆ.

ಅವನು ಹುಟ್ಟಿದ ನಕ್ಷತ್ರದಲ್ಲಿ ಅವನು ದೇವರ ವೈರಿಯಾಗುತ್ತಾನೆ ಎಂದಿತ್ತಂತೆ. ರಾಜಪ್ಪ ಹುಟ್ಟಿದ ಗಳಿಗೆ, ನಕ್ಷತ್ರದ ಆಧಾರದಲ್ಲಿ ಕವಡೆ ಹಾಕಿ ನೋಡಿದ ಭಟ್ಟರಿಗೆ ಆಶ್ಚರ್ಯ ಕಾದಿತ್ತಂತೆ: ಯಾಕೆಂದರೆ ಹುಟ್ಟಿದ ಮಗುವಿಗೆ ಬಂದ ಹೆಸರು ಹಿರಣ್ಯಾಕ್ಷ ಎಂದು. ಗಾಬರಿಗೊಂಡ ಅಪ್ಪ ಮತ್ತು ಅಮ್ಮನಿಗೆ ಗಾಬರಿ ಅಗತ್ಯವಿಲ್ಲವೆಂದೂ ಅವನದು ರಾಕ್ಷಸ ಯೋಗವಾದುದರಿಂದ ವರ್ಷಂಪ್ರತಿ ಸೋಣ ಸಂಕ್ರಾಂತಿಯ ದಿವಸ ವಿಷ್ಣುಮೂರ್ತಿ ದೇವರಿಗೆ ಹೂವಿನ ಪೂಜೆ ಕೊಟ್ಟರೆ ಎಲ್ಲ ಸರಿಯಾಗುತ್ತದೆ ಎಂದೂ ಅವರೇ ಪರಿಹಾರ ಸೂಚಿಸಿದರಂತೆ.

ಆಮೇಲೆ ಹಿರಣ್ಯಾಕ್ಷ ಅನ್ನುವ ಹೆಸರಿನ ಬದಲು ‘ರ’ ಎಂಬ ಅಕ್ಷರ ಇರುವ ವೀರಪ್ಪ ಅನ್ನುವ ಹೆಸರನ್ನು ಅವರೇ ಸೂಚಿಸಿದರಂತೆ. ಮನೆಗೆ ಬಂದ ಅಪ್ಪ ಅಮ್ಮನಿಗೆ ಯಾಕೋ ಆ ಹೆಸರೂ ಚೆನ್ನಾಗಿಲ್ಲ ಅನ್ನಿಸಿ, ಮಗುವಿಗೆ ತಾವೇ ರಾಜಪ್ಪ ಅನ್ನುವ ಹೆಸರನ್ನು ಇಟ್ಟರಂತೆ. ಹೀಗೆಂದು ಕಥೆ ಹೇಳಿ ಮುಗಿಸಿದ ಅಮ್ಮ ಅಕ್ಕಿ ಕಡೆಯುವುದನ್ನು ಒಮ್ಮೆ ನಿಲ್ಲಿಸಿ ತನ್ನ ಗಲ್ಲ ನೀವಿ, ‘ನೀನು ದಿನಾ ದೇವರ ಭಜನೆ ಮಾಡುತ್ತಿರಬೇಕು ಮಗಾ’ ಎಂದು ಕಕ್ಕುಲತೆಯಲ್ಲಿ ಬೇಡಿದ್ದಳು! ಕಥೆ ಕೇಳಿದ ರಾಜಪ್ಪನಿಗೆ ಆ ಕ್ಷಣದಲ್ಲಿ ತೆಳ್ಳಗೆ ಬೆವರೊಡೆಯುತ್ತಿದ್ದ ತನ್ನ ಮೈಯಲ್ಲೂ ಚಳಿ ಹುಟ್ಟಿದಂತೆನಿಸಿ ಕುಳಿತಲ್ಲೆ ಗಡಗಡ ನಡುಗಿದ್ದ. ಮುಂದೆ ದೇವಿಯ ಮೇಲೆ ಒಂದು ಭಜನೆಯನ್ನೂ ಬರೆದು ಅದನ್ನು ಉಳಿದ ಮಕ್ಕಳ ಜೊತೆ ದಿನಾ ಸಂಜೆ ದೀಪ ಹಚ್ಚುವ ಹೊತ್ತು ದೇವರ ಪಟದೆದುರು ರಾಗವಾಗಿ ಹಾಡುವುದಕ್ಕೂ ಶುರುಮಾಡಿದ್ದ.

ಇದನ್ನೆಲ್ಲ ಯೋಚಿಸುತ್ತ ವೇಟರ್‌ ತಂದಿಟ್ಟ ದೋಸೆ ತಿನ್ನುತ್ತ ಕುಳಿತಿದ್ದ ರಾಜಪ್ಪನಿಗೆ, ಪ್ರತಿವರ್ಷ ತನ್ನೂರಿಂದ ತನ್ನನ್ನು ರೈಲ್ವೇ ಹಳಿಯ ಮೇಲೆ ಏದುಸಿರುಬಿಡುತ್ತ ಉದ್ದಕ್ಕೆ ಮೂರು ಮೈಲು ನಡೆಯಿಸಿಕೊಂಡು ಹೋಗಿ ಮತ್ತೆ ಬಸ್‌ ಹತ್ತಿ ವಿಷ್ಣುಮೂರ್ತಿ ದೇವರಿಗೆ ಹೂವಿನಪೂಜೆ ಕೊಟ್ಟು, ತಿರುಗಿ ಬರುವಾಗ ತೋಳಿಗೊಂದು ಮಂತ್ರಿಸಿದ ತಾಯಿತ, ಕೊರಳಿಗೊಂದು ಮಂತ್ರಿಸಿದ ನೂಲು ಕಟ್ಟಿಕೊಂಡು ಬಸ್‌ ಹತ್ತಿ ಇಳಿದು ಮತ್ತೆ ಅದೇ ರೈಲ್ವೇ ಹಳಿಯಲ್ಲಿ ಅದೇ ರೀತಿ ಉಬ್ಬಸಪಡುತ್ತ ಹುಡುಗನಾದ ತನ್ನನ್ನು ನಡೆಯಿಸಿಕೊಂಡು ಬರುತ್ತಿದ್ದ ಅಮ್ಮನ ನೆನಪೂ ಆಯ್ತು.

ಅಮ್ಮ ಈ ಕಥೆ ಹೇಳಿದಾಗ ತನಗೆ ಹದಿಮೂರೋ ಹದಿನಾಲ್ಕೋ ವರ್ಷ. ಮುಂದೆ ತಾನು ದೊಡ್ಡವನಾಗಿ ಹಲವು ಪುಸ್ತಕಗಳನ್ನು ಓದಿ, ಹಲವು ಊರು ತಿರುಗಿ ದೇವರು ಧರ್ಮಗಳ ಬಗ್ಗೆ ಅನಾದರ ಬೆಳೆಯಿಸಿಕೊಂಡದ್ದು, ಪ್ರಚಂಡ ನಾಸ್ತಿಕನಾಗಿ ಬದಲಾದದ್ದು ಎಲ್ಲ ಎಷ್ಟು ಕಾಕತಾಳೀಯ ಅನ್ನಿಸಿತು. ಆದರೆ ಈಗ ತನ್ನ ಹೆಸರಿನ ಜತೆಗೇ ಎದ್ದುಬರುವ ಅಪ್ಪ–ಅಮ್ಮನ ಈ ಸ್ಮೃತಿಯನ್ನಾದರೂ ನಾನು ಹೇಗೆ ಮರೆಯಲಿ? ಅಪ್ಪ–ಅಮ್ಮ ಇಟ್ಟ ಹೆಸರನ್ನೇ ಬದಲಿಸ ಹೊರಟ ನಾನು ಅದರೊಂದಿಗೇ ಹಾಯುವ ಬಾಲ್ಯದ ಅಷ್ಟೂ ನೆನಪುಗಳನ್ನು ನಿರಾಕರಿಸಿದ ಹಾಗೇ ಅಲ್ಲವೇ? ನಿಜ. ಈ ಪ್ರಪಂಚದಲ್ಲಿ ನಾನು ಅವರಿಟ್ಟ ಹೆಸರಿನಿಂದಲೇ ನಿಜವಾಗಬೇಕು. ಅದು ನಿಜ ಮತ್ತು ಅದೇ ನಿಜ ಕೂಡ. ನನ್ನ ಹೆಸರನ್ನು ಬದಲಿಸುವುದೂ ಬೇಡ.

ಅದು ಹೊತ್ತು ತರುವ ಆಪ್ಯಾಯಮಾನ ನೆನಪುಗಳನ್ನು ನಿರಾಕರಿಸುವುದೂ ಬೇಡ. ತಮ್ಮನಿಗೆ ಇಷ್ಟವೆಂದು ಎಷ್ಟೋ ವರ್ಷಗಳ ನಂತರವೂ ನೆನಪು ಮಾಡಿಕೊಂಡು ಕುಟ್ಟಿದ ಅವಲಕ್ಕಿ, ಮಾಲ್‌ಪುರಿ ಕಟ್ಟಿಕೊಡುವ ಮೂಲಕ ತನ್ನ ತಮ್ಮನ ನೆನಪನ್ನು ಅಮ್ಮ ಜೀವಂತವಾಗಿ ಉದ್ದೀಪಿಸಬಲ್ಲಳಾದರೆ – ನಾನೂ ನನ್ನ ಅಪ್ಪ ಅಮ್ಮ ಇಟ್ಟ ಹೆಸರಿನಲ್ಲೇ ಅವರ ಸ್ಮೃತಿಯನ್ನು ಜೀವಂತವಾಗಿ ಉಳಿಸಿಕೊಳ್ಳಬಲ್ಲೆ ಅನ್ನಿಸಿತು. ಜೊತೆಗೆ ಹೊಸ ಹೆಸರು ತನಗೆ ಕೊಡಬಹುದಾದ ಹೊಸ ವ್ಯಕ್ತಿತ್ವ, ಈ ಎಲ್ಲ ನೆನಪುಗಳಿಗೆ ಹೊರಗಿನದ್ದು ಎಂದೂ ಅನ್ನಿಸಿತು.

ಟೀ ಕುಡಿದು ಬಿಲ್‌ಕೊಟ್ಟು ವರ್ಮನನ್ನು ನೋಡುವ ನಿರ್ಧಾರ ಬದಲಿಸಿ ಸೆಂಟ್ರಲ್‌ ಟಾಕೀಸಿನ ಹತ್ತಿರ ಬಂದು ತನ್ನೂರಿನ ಬಸ್‌ಗೆಂದು ಕಾಯುತ್ತ ನಿಂತ ರಾಜಪ್ಪನಿಗೆ ಪಕ್ಕದಲ್ಲೆ ದೊಡ್ಡ ಕಬ್ಬಿಣದ ಕಸದ ತೊಟ್ಟಿ ಕಾಣಿಸಿತು. ಕೈಯಲ್ಲಿದ್ದ ಲಕೋಟೆಯನ್ನು ಅದರೊಳಗಿನ ದಾಖಲೆ ಪತ್ರಗಳ ಸಮೇತ ಅಡ್ಡಕ್ಕೆ ಮತ್ತು ಉದ್ದಕ್ಕೆ ನೀಟಾಗಿ ಹರಿದು ಚುರು ಚೂರು ಮಾಡಿ ತೊಟ್ಟಿಗೆ ಎಸೆದು ಬಿಟ್ಟ. ಎಲ್ಲಿಂದಲೋ ಬಾಯಾಡಿಸುತ್ತ ಬಂದ ದನವೊಂದು ತೊಟ್ಟಿಗೆ ಬಾಯಿಹಾಕಿತು. ನೋಡುತ್ತ ನಿಂತ ರಾಜಪ್ಪ ಹೊಸ ಜನ್ಮ ತಳೆದವನಂತೆ ನಿರಾಳವಾಗಿ ಉಸಿರಾಡಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT