ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಸೇವೆ ಸವಾಲಿಗೆ ಯೋಜನೆಗಳೇ ಉತ್ತರ

ವಾರದ ಸಂದರ್ಶನ
Last Updated 26 ನವೆಂಬರ್ 2016, 19:30 IST
ಅಕ್ಷರ ಗಾತ್ರ
ರಮೇಶ್‌ ಕುಮಾರ್‌ ಒಬ್ಬ ಕನಸುಗಾರ. ರಾಜಕಾರಣದಲ್ಲಿ ಸುದೀರ್ಘ ಅನುಭವ ಹೊಂದಿರುವ ಅವರು, ಸಿದ್ದರಾಮಯ್ಯನವರ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದಾರೆ. ಜನರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ‘ಮೇಜರ್‌ ಸರ್ಜರಿ’ ಮಾಡಲು ಹೊರಟಿದ್ದಾರೆ. ಖಾಸಗಿ ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ಎದುರು ಹಾಕಿಕೊಂಡು ತಮ್ಮ ಕೆಲಸದಲ್ಲಿ ಸಫಲತೆ ಕಾಣುವರೇ ಎನ್ನುವುದು  ಮಿಲಿಯನ್‌ ಡಾಲರ್‌ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಸಿಗಲು  ಕನಿಷ್ಠ ಆರು ತಿಂಗಳಾದರೂ ಕಾಯಬೇಕು. ರಮೇಶ್‌ ಕುಮಾರ್‌ ತಮ್ಮ ಮುಂದಿರುವ ಯೋಜನೆಗಳು ಮತ್ತು ಅವುಗಳ ಅನುಷ್ಠಾನ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.
 
* ಆರೋಗ್ಯ ಸೇವೆಯನ್ನು ಸುಧಾರಿಸಲು ಹೊರಟಿದ್ದೀರಿ. ನಿಮ್ಮ ಮುಂದಿರುವ ಯೋಜನೆಗಳೇನು?
ನಾನು ಹಳ್ಳಿಗಾಡಿನಿಂದ ಬಂದವನು. ಆಸ್ಪತ್ರೆ ಮತ್ತು ವೈದ್ಯರೇ ಇಲ್ಲದೆ ನಮ್ಮ ಜನ ನರಳಾಡಿದ್ದನ್ನು ಕಣ್ಣಾರೆ ಕಂಡಿದ್ದೇನೆ.  ಅವರಿಗಾಗಿ ಏನಾದರೂ ಮಾಡಲೇಬೇಕೆಂಬ ತುಡಿತವಿದೆ. ಜನರ ಋಣಭಾರ ನನ್ನ ಮೇಲಿದೆ. ನಾನು ಅಧಿಕಾರ ಇಲ್ಲದಿದ್ದಾಗ ಸರ್ಕಾರವನ್ನು ಟೀಕೆ ಮಾಡಿದ್ದೇನೆ. ಈಗ ನನಗೇ ಅಧಿಕಾರ ಸಿಕ್ಕಿದೆ. ಏನಾದರೂ ಸಾಧಿಸಿ ತೋರಿಸುವ ಸಂದರ್ಭ ಬಂದಿದೆ. ಈಗ ಏನೂ ಮಾಡದಿದ್ದರೆ ಟೀಕೆಗಳಿಗೆ ಗುರಿಯಾಗಬೇಕಾಗುತ್ತದೆ. ಈ ಕಾರಣದಿಂದ ಆಸ್‍‍ಪತ್ರೆಗಳನ್ನು ಸುಧಾರಣೆ ಮಾಡಬೇಕಿದೆ.
 
ನಮ್ಮ ಕಾಲದಲ್ಲಿ ಎಲ್ಲರೂ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿದ್ದರು. ವೈದ್ಯರೆಂದರೆ  ಜನ ದೇವರಂತೆ ಕಾಣುತ್ತಿದ್ದರು. ಆಗ ಖಾಸಗಿ ಆಸ್ಪತ್ರೆಗಳು ಎಲ್ಲೋ ಕೆಲವಿದ್ದವು. ಇದು ಖಾಸಗಿ ಆಸ್ಪತ್ರೆಗಳ ಯುಗ. ಕಾಸಿದ್ದವರಿಗೆ ಖಾಸಗಿ ಆಸ್ಪತ್ರೆ, ಬಡವರಿಗೆ ಸರ್ಕಾರಿ ಆಸ್ಪತ್ರೆ ಎಂಬ ಮನೋಭಾವ ಬಲವಾಗಿ ಬೆಳೆದಿದೆ. ಈ ದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂಬ ವಾತಾವರಣವನ್ನು ನಿರ್ಮಿಸಬೇಕಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಸೌಲಭ್ಯಗಳು ಸಿಗಬೇಕು. ತಜ್ಞ ವೈದ್ಯರ ಸೇವೆ ದೊರೆಯಬೇಕು.  ಅದಕ್ಕಾಗಿ  ಅಗತ್ಯವಾದ ಯೋಜನೆಗಳನ್ನು ರೂಪಿಸಿದ್ದೇನೆ.
 
* ಇರುವ ಕಡಿಮೆ ಅಧಿಕಾರಾವಧಿಯಲ್ಲಿ ನಿಮ್ಮ ಯೋಜನೆಗಳ ಜಾರಿ ಸಾಧ್ಯವೇ?
ಏಕೆ ಸಾಧ್ಯ ಇಲ್ಲ? ಇಚ್ಛಾಶಕ್ತಿ ಇದ್ದರೆ ಏನು ಬೇಕಾದರೂ ಮಾಡಬಹುದು. ರಾಜ್ಯದಲ್ಲಿ 2,207 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ನಾವು ಸಣ್ಣವರಿದ್ದಾಗ ಈ ಆರೋಗ್ಯ ಕೇಂದ್ರಗಳಲ್ಲಿ ಆರ್ಎಂಪಿ ಕಲಿತ ವೈದ್ಯರಿದ್ದರು. ಬಳಿಕ ಎಂಬಿಬಿಎಸ್‌ ಕಲಿತವರು ಬಂದರು. ಸದ್ಯ ಖಾಸಗಿ, ಸರ್ಕಾರಿ ಎಲ್ಲಾ ಸೇರಿ ರಾಜ್ಯದಲ್ಲಿ 53 ವೈದ್ಯಕೀಯ ಕಾಲೇಜುಗಳಿವೆ. ಈ ಕಾಲೇಜುಗಳಿಂದ ಪ್ರತಿ ವರ್ಷ 5 ಸಾವಿರ ವೈದ್ಯರು ಹೊರ ಬರುತ್ತಾರೆ. ಸರ್ಕಾರಿ ಸೇವೆಗೆ ಬೇಕಾಗಿದ್ದು 800 ವೈದ್ಯರು ಮಾತ್ರ. ಈ ಎಲ್ಲಾ ಕಾಲೇಜುಗಳಿಗೆ ಸರ್ಕಾರದ ಸಹಾಯ ಇದೆ. ಬಡವರ ತೆರಿಗೆ ಹಣದಲ್ಲಿ ಇವು ನಡೆಯುತ್ತಿವೆ.  
 
₹ 1 ಕೋಟಿ ಕೊಟ್ಟು ಕಲಿತವರು ಬಿಡಿ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಉಚಿತವಾಗಿ ಕಲಿತವರೂ ಗ್ರಾಮೀಣ ಸೇವೆಗೆ ಬರುವುದಿಲ್ಲ. ವರ್ಗಾವಣೆ ಮಾಡಿದರೆ ಕೋರ್ಟ್‌ಗೆ ಹೋಗುತ್ತಾರೆ. ಈ ಸ್ಥಿತಿ ಸುಧಾರಣೆ ಆಗಬೇಡವೇ, ನೀವೇ ಹೇಳಿ? ಅದಕ್ಕಾಗಿ ಆಯುಷ್‌, ಹೋಮಿಯೋಪಥಿ ಮತ್ತು ಯುನಾನಿ ಪದವಿ ಪಡೆದ ವೈದ್ಯರನ್ನು ಹಳ್ಳಿಗಳಿಗೆ ಕಳುಹಿಸಲಾಗುತ್ತಿದೆ. ಅವರಿಗೆ ಅಲೋಪಥಿ ಔಷಧದ ಬಗ್ಗೆಯೂ ಮೂರು ತಿಂಗಳ ತರಬೇತಿ ಕೊಡಲಾಗುತ್ತದೆ. 
 
* ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಸೇವೆ ಹೇಗೆ ಒದಗಿಸುತ್ತೀರಿ?
ಸರ್ಕಾರಿ ಸೇವೆಗೆ ಬರುವ ತಜ್ಞ ವೈದ್ಯರಿಗೆ ₹ 1 ಲಕ್ಷ ವೇತನ, ₹ 20 ಸಾವಿರ ಮನೆ ಬಾಡಿಗೆ ಭತ್ಯೆ ಕೊಡಲಾಗುತ್ತಿದೆ. ನಂಜುಂಡಪ್ಪ ವರದಿ ಪ್ರಕಾರ, ಹಿಂದುಳಿದ ತಾಲ್ಲೂಕುಗಳಲ್ಲಿ ಕೆಲಸ ಮಾಡಲು ಬರುವವರಿಗೆ ಇನ್ನೂ ₹ 25 ಸಾವಿರ ಹೆಚ್ಚು ಕೊಡುತ್ತೇವೆ. ಇಷ್ಟು ಕೊಡುತ್ತೇವೆ ಅಂದರೂ ಹಳ್ಳಿಯಲ್ಲಿ ಕೆಲಸ ಮಾಡಲು ಬರುವುದಿಲ್ಲ ಎಂದರೆ ಹೇಗೆ? ಹಳ್ಳಿಯವರು ಅಷ್ಟು ಕಳಪೆಯೇ?  ತಜ್ಞ ವೈದ್ಯರು ಗ್ರಾಮೀಣ ಪ್ರದೇಶದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು.
 
* ಹಾಗಿದ್ದರೆ, ತಜ್ಞ ವೈದ್ಯರ ಕೊರತೆ ತುಂಬಲು ಏನು ಮಾಡುತ್ತೀರಿ?
ತಜ್ಞ ವೈದ್ಯರ ಕೊರತೆ ನೀಗಿಸಲು ಸರ್ಕಾರಿ ಸೇವೆಯಲ್ಲಿರುವ ಪದವೀಧರ ವೈದ್ಯರಿಗೆ ಸ್ನಾತಕೋತ್ತರ ಡಿಪ್ಲೊಮಾ ವೈದ್ಯಕೀಯ ಕೋರ್ಸ್ ಆರಂಭಿಸಲಾಗುವುದು. ಈ ಕೋರ್ಸ್‌ ಮುಗಿಸಿದ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವಂತೆ ಆದೇಶ ನೀಡಲಾಗುವುದು.
 
* ಸರ್ಕಾರಿ ಆಸ್ಪತ್ರೆಗಳೆಂದರೆ ಜನ ಬೆನ್ನು ತಿರುಗಿಸುತ್ತಾರೆ. ಅದನ್ನು ಹೇಗೆ ಸುಧಾರಣೆ ಮಾಡುವಿರಿ?
ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ತಾಲ್ಲೂಕು ಆಸ್ಪತ್ರೆಗಳಲ್ಲಿ ತುರ್ತು ನಿಗಾ ಘಟಕ ತೆರೆಯಲಾಗುವುದು. ಪ್ರತಿ ಘಟಕಕ್ಕೆ ₹ 27 ಲಕ್ಷ ವೆಚ್ಚವಾಗುತ್ತದೆ. ಆಯಾಯ ತಾಲ್ಲೂಕಿನ ಶಾಸಕರು, ಸಂಸದರಿಂದ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್‌ನಿಂದ ಅನುದಾನ ಪಡೆಯಲಾಗುವುದು. ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿರುವ ಬಡ ರೋಗಿಗಳಿಗೆ ತಾಲ್ಲೂಕು ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್ ಸೌಲಭ್ಯ ಒದಗಿಸಲಾಗುವುದು.
 
ಜನವರಿ ಒಂದರಿಂದ ಪ್ರತಿ 10 ಕಿ.ಮೀ. ವ್ಯಾಪ್ತಿಯಲ್ಲಿ ಆಂಬುಲೆನ್ಸ್‌ಗಳಿರುತ್ತವೆ. ನಮ್ಮಲ್ಲಿರುವ ಆಂಬುಲೆನ್ಸ್‌ಗಳ ಜೊತೆಗೆ ಟೆಂಡರ್‌ ಕರೆಯಲಾಗಿರುವ  300 ಆಂಬುಲೆನ್ಸ್‌ಗಳು 20 ನಿಮಿಷದಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲಿವೆ. ಈ ಆಂಬುಲೆನ್ಸ್‌ಗಳಲ್ಲಿ ಪ್ರಥಮ ಚಿಕಿತ್ಸೆಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳೂ ಇರುತ್ತವೆ. ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಶೀಘ್ರದಲ್ಲಿಯೇ ಯೂನಿವರ್ಸಲ್ ಹೆಲ್ತ್ ಕಾರ್ಡ್ ಯೋಜನೆ ಜಾರಿಗೆ ಬರಲಿದೆ. 
 
ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್‌ಗಳಿಗೆ ಹೋಗಿ ನೋಡಿ ಬಂದಿದ್ದೇನೆ. ಅದೇ ಮಾದರಿಯ ಆಸ್ಪತ್ರೆಗಳು ರಾಜ್ಯದಲ್ಲೂ ಆರಂಭವಾಗಲಿವೆ. ಈ ಆಸ್ಪತ್ರೆಗಳಲ್ಲಿ ರಕ್ತ ತಪಾಸಣೆಗೆ ಅತ್ಯಾಧುನಿಕ ಸಾಧನ ಬಳಸಲಾಗಿದೆ. ಕೇವಲ ಒಂದು ಗಂಟೆಯಲ್ಲಿ ಅದು ವರದಿ ನೀಡುತ್ತದೆ. ಬಯೋಕಾನ್‌ ಮತ್ತು ಇನ್ಫೊಸಿಸ್‌ ಸಂಸ್ಥೆಗಳು ಈ ಸಾಧನ  ಒದಗಿಸುವ ಭರವಸೆ ನೀಡಿವೆ.
 
* ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಸಾಧ್ಯವೇ?
ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲು ತಿದ್ದುಪಡಿ ಮಸೂದೆ ತರಲಾಗುತ್ತಿದೆ. ಈ ಆಸ್ಪತ್ರೆಗಳು ಇನ್ನು ಮುಂದೆ ರೋಗಿಗಳಿಂದ ದುಬಾರಿ ದರ ವಸೂಲು ಮಾಡುವಂತಿಲ್ಲ. ಅಲ್ಲದೆ,  ವೈದ್ಯರ ಖರ್ಚು ವೆಚ್ಚದ ಬಗ್ಗೆಯೂ ರೋಗಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ. ಪ್ರತಿ ಚಿಕಿತ್ಸೆಗೆ ಎಷ್ಟು ಖರ್ಚಾಗಲಿದೆ ಎಂದು ದರ ಪಟ್ಟಿ ಪ್ರಕಟಿಸುವುದು ಕಡ್ಡಾಯ ಮಾಡಲಾಗುವುದು. ಖಾಸಗಿ ಆಸ್ಪತ್ರೆಗಳ ಸುಧಾರಣೆಗೆ ಸಂಬಂಧಿಸಿದಂತೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ತಜ್ಞ ವೈದ್ಯರು, ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು, ನಿವೃತ್ತ ಅಧಿಕಾರಿಗಳು ಹಾಗೂ ಕಾನೂನು ತಜ್ಞರು ಇರಲಿದ್ದಾರೆ. ಆರು ವಾರಗಳಲ್ಲಿ ಸಮಿತಿ ವರದಿ ಕೊಡಲಿದೆ. ಆ ವರದಿಯನ್ನು ಮತ್ತೊಮ್ಮೆ ಪರಿಶೀಲಿಸಿ ಜಾರಿಗೆ ಕೊಡಲಾಗುವುದು.
 
* ಖಾಸಗಿ ಆಸ್ಪತ್ರೆಗಳ ಲಾಬಿ ಇದಕ್ಕೆ ಅವಕಾಶ ಕೊಡುವುದೇ? ಅದು ಪ್ರಬಲವಲ್ಲವೇ? 
ನನಗೆ ಮತ ಹಾಕಿದ್ದಾರಲ್ಲಾ ಅವರ ಶಕ್ತಿ ಮುಂದೆ ಇಂಥವರ ಶಕ್ತಿ ಏನೂ ಅಲ್ಲ. ನನ್ನ ಮತದಾರರು ನನಗೆ  ಶಕ್ತಿ ತುಂಬಿದ್ದಾರೆ. ಅವರ ಬೆಂಬಲ ಇರುವವರೆಗೂ ನಾನು ಯಾವುದಕ್ಕೂ ಹೆದರಲಾರೆ.
 
* ನಿಮ್ಮ ಚಿಂತನೆಗೆ ಸರ್ಕಾರದ ಬೆಂಬಲವಿದೆಯೇ?
ನನ್ನನ್ನು ಮಂತ್ರಿ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕೇಳಿರಲಿಲ್ಲ. ನನ್ನ ಪರವಾಗಿ ಯಾರೂ ಮಾತನಾಡಿಲ್ಲ. ಸಿದ್ದರಾಮಯ್ಯ ಮತ್ತು ನಾನು 35 ವರ್ಷಗಳ ಸ್ನೇಹಿತರು. ನನ್ನ ಜಾಯಮಾನ, ಮನೋಭಾವ ಅವರಿಗೆ ಗೊತ್ತು. ವ್ಯವಸ್ಥೆ  ಸುಧಾರಣೆ ಆಗಬೇಕು ಎಂದು ನನಗೆ ಹೊಣೆ ವಹಿಸಿದ್ದಾರೆ. ನನ್ನ ಎಲ್ಲ ಯೋಜನೆಗಳನ್ನು ಅವರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ನಾಯಕನ ಬೆಂಬಲ ಇಲ್ಲದೆ ಇದೆಲ್ಲವನ್ನೂ ಮಾಡೋಕೆ ಆಗುತ್ತಾ? ಅವರ ಜೊತೆ ಚರ್ಚಿಸಿಯೇ ಎಲ್ಲವನ್ನೂ ಮಾಡುತ್ತಿದ್ದೇನೆ. 
 
* ಎಲ್ಲಾ ಯೋಜನೆಗಳು ಚೆನ್ನಾಗಿವೆ. ಆದರೆ ನಿಮಗೆ ಸಿಗುವ ಅನುದಾನ ಸಾಕಾಗುವುದೆ?
ಆರೋಗ್ಯ ಇಲಾಖೆಗೆ ವರ್ಷಕ್ಕೆ ₹ 2 ಸಾವಿರ ಕೋಟಿ ರಾಜ್ಯ ಸರ್ಕಾರ ಕೊಡುತ್ತಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ₹ 2 ಸಾವಿರ ಕೋಟಿ ಬರುತ್ತದೆ. ನಮ್ಮ ಅಗತ್ಯಕ್ಕೆ ತಕ್ಕಂತೆ ಅನುದಾನ ಬಳಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇದರಿಂದಾಗಿ  ₹ 700 ಕೋಟಿ ಬಳಕೆ ಮಾಡಿಕೊಳ್ಳಲು ಅವಕಾಶ ಇದೆ. ಲಭ್ಯವಿರುವ ಹಣದಲ್ಲೇ ಎಲ್ಲಾ ಯೋಜನೆಗಳನ್ನು ಮಾಡಿ ಮುಗಿಸುತ್ತೇವೆ. ಹೀಗಾಗಿ ಹಣದ ಕೊರತೆ ಬೀಳುವುದಿಲ್ಲ.  
 
* ಔಷಧಿ ಖರೀದಿಯಲ್ಲಿ ನಡೆಯುತ್ತಿರುವ  ಅವ್ಯವಹಾರಗಳನ್ನು ಹೇಗೆ ನಿಯಂತ್ರಿಸುತ್ತೀರಿ?
ಔಷಧಿ ಖರೀದಿ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ. ಅವಧಿ ಮೀರಿದ ಔಷಧಿಯನ್ನು ಖರೀದಿಸಿ ಕೋಟ್ಯಂತರ ರೂಪಾಯಿ ವ್ಯರ್ಥ ಮಾಡಲಾಗಿದೆ. ಅದರ ಹಿಂದೆ ದೊಡ್ಡ ಅಕ್ರಮವೇ ನಡೆದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಲಭ್ಯ ಇದ್ದರೂ ರೋಗಿಗಳಿಗೆ ಕೊಡದೆ ಹೊರಗೆ ಖರೀದಿಸುವಂತೆ ಚೀಟಿ ಬರೆದು ಕೊಡಲಾಗುತ್ತದೆ. ಹೊರಗೆ ಖರೀದಿಸುವ ಔಷಧಿಗಳಿಗೆ ಜನ ದುಬಾರಿ ದರ ಪಾವತಿಸಬೇಕಾಗಿದೆ. ಇದು ನಿಲ್ಲಬೇಕು. ಉದಾಹರಣೆಗೆ ₹ 2,314 ಮೌಲ್ಯದ ಔಷಧವನ್ನು ದೆಹಲಿಯ ‘ಏಮ್ಸ್‌’ನಲ್ಲಿ ಕೇವಲ ₹ 250ಕ್ಕೆ ಕೊಡಲಾಗುತ್ತಿದೆ. ಆದರೆ ಹೊರಗೆ ಔಷಧ ಖರೀದಿಸುವವರನ್ನು ಔಷಧ ಕಂಪೆನಿಗಳು  ಲೂಟಿ ಮಾಡುತ್ತಿವೆ. ಇಂತಹ ಲೂಟಿ ಸರಿಪಡಿಸಲು ಹೊಸ ನೀತಿ ಜಾರಿಗೊಳಿಸಲಾಗುತ್ತಿದೆ. ಖಾಸಗಿಯವರು ಮಾನವೀಯತೆಯಿಂದ ನಡೆದುಕೊಂಡರೆ  ಕಾಯ್ದೆಗಳು ಏಕೆ ಬೇಕು? ಔಷಧಿ ಕಂಪೆನಿಗಳು ದರ ಕಡಿಮೆ ಮಾಡಿದರೆ ಜನೌಷಧಿ ಕೇಂದ್ರಗಳು ಏಕೆ ಬೇಕು? ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿಗಳನ್ನು ಈವರೆಗೆ ಡ್ರಗ್‌ ಲಾಜಿಸ್ಟಿಕ್‌ನವರು ಕೊಡುತ್ತಿದ್ದಾರೆ. ಇನ್ನು ಮುಂದೆ ಆಯಾ ಆಸ್ಪತ್ರೆಗಳ ವೈದ್ಯರು ಸ್ಥಳೀಯವಾಗಿ ಅಲ್ಲಿಗೆ ಬರುವ ರೋಗಿಗಳ ಸರಾಸರಿ ಸಂಖ್ಯೆ ಗಮನಿಸಿ ಆನ್‌ಲೈನ್‌ನಲ್ಲಿ ಔಷಧಿಗೆ ಬೇಡಿಕೆ ಸಲ್ಲಿಸಬೇಕು. ಅವರು ಕೇಳಿದ್ದಕ್ಕಿಂತ ಶೇ 5ರಷ್ಟು ಹೆಚ್ಚು ಕಳಿಹಿಸುತ್ತೇವೆ. ಕೇಂದ್ರ ಸರ್ಕಾರದ ಸಹಕಾರದೊಂದಿಗೆ 200 ಕಡೆ ಜನೌಷಧಿ ಕೇಂದ್ರ ಆರಂಭಿಸುತ್ತೇವೆ. ಈ ಕೇಂದ್ರಗಳು ಆಸ್ಪತ್ರೆಗಳ ಆವರಣದಲ್ಲೇ ಇರುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣೀಕರಿಸಿದ ಬ್ರಾಂಡ್ ಅಲ್ಲದ, ಅಷ್ಟೇ ಪರಿಣಾಮಕಾರಿಯಾದ ಔಷಧಿ ಇಲ್ಲಿ ಲಭ್ಯ ಇರುತ್ತದೆ. ಎಲ್ಲವೂ ಪಾರದರ್ಶಕವಾಗಿ, ಟೆಂಡರ್‌ ಪ್ರಕ್ರಿಯೆ ಮೂಲಕ ನಡೆಯುತ್ತವೆ.
 
ಆಸ್ಪತ್ರೆಗಳಿಗೆ ಬರುವ ಒಳರೋಗಿಗಳಿಗೆ ಅವರನ್ನು ಆರೈಕೆ ಮಾಡುವವರೆಗೆ ಸಬ್ಸಿಡಿ ದರದಲ್ಲಿ ಊಟ ಮತ್ತು ತಿಂಡಿ ಒದಗಿಸುವ ಯೋಜನೆಯೂ ಜಾರಿಗೆ ಬರಲಿದೆ. ಇದಕ್ಕಾಗಿ ಆಹಾರ ಇಲಾಖೆ ಸಬ್ಸಿಡಿ ದರದಲ್ಲಿ ಪಡಿತರ ಪದಾರ್ಥಗಳನ್ನು ಪೂರೈಸಲಿದೆ. ಆರಂಭದಲ್ಲಿ ಪ್ರಾಯೋಗಿಕವಾಗಿ ಕೆಲವು ಕಡೆ ಹೋಟೆಲ್‌ಗಳನ್ನು ತೆರೆಯಲಾಗುವುದು. ಮಹಿಳಾ ಸ್ವಸಹಾಯ ಸಂಘಗಳಿಗೆ ಆದ್ಯತೆ ನೀಡಲಾಗುವುದು. ಉಚಿತ ಸ್ಥಳ, ನೀರು ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗುವುದು.
ಈ ಎಲ್ಲಾ ಯೋಜನೆಗಳನ್ನು ಮುಂದಿನ ಆರು ತಿಂಗಳಲ್ಲಿ ಕಾರ್ಯರೂಪಕ್ಕೆ ತರುವ ವಿಶ್ವಾಸವಿದೆ. ನನ್ನ ಯೋಜನೆಗಳು ಭರವಸೆಗಳಾಗಿ ಮಾತ್ರ 
ಉಳಿಯುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT