ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲೆ ಹತ್ತಿದಳು, ಏಣಿ ಒದ್ದಳು...

ಕಟಕಟೆ-42
Last Updated 26 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಎರಡು ದಶಕಗಳ ಹಿಂದಿನ ಮಾತೇ ಬೇರೆ. ವಿಚ್ಛೇದನ ಎನ್ನುವುದು ನೂರರಲ್ಲಿ ಒಂದೆರಡು ಇದ್ದರೆ ಅದೇ ದೊಡ್ಡದು. ದಂಪತಿ ವಿಚ್ಛೇದನ ನೀಡುತ್ತಾರೆ ಎಂದರೆ ಅವರನ್ನು ನೋಡುವ ದೃಷ್ಟಿ ಬೇರೆ ಇತ್ತು, ಮಾತ್ರವಲ್ಲ, ವಿಚ್ಛೇದನ ಬಯಸುವವರ ಪರ ವಕಾಲತ್ತು ವಹಿಸಿದರೆ ಅಂಥ ವಕೀಲರನ್ನು ನುಂಗುವ ಹಾಗೆ ನೋಡುತ್ತಿದ್ದರು. ಆದರೆ ಇಂದು ವಿಚ್ಛೇದನ ಪ್ರಕರಣಗಳು ತೀರಾ ಸಾಮಾನ್ಯ ಎನ್ನುವಂತಾಗಿವೆ.
 
ಇಲ್ಲಿ ಹೇಳಹೊರಟಿರುವುದು ಆಗಿನ  ಕಾಲದ್ದೇ ಘಟನೆ. ಕೋಲಾರದ ಡಾ. ಸುಂದರ್‌ ಬೆಂಗಳೂರಿನಲ್ಲಿ ಉಪನ್ಯಾಸಕರಾಗಿದ್ದರು. ಅವರ ಪತ್ನಿ ವಿಮಲಾ ಸಸ್ಯವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆ.
 
ಸುಂದರ್‌ ಅವರು ಉತ್ತಮ ಉಪನ್ಯಾಸಕ ಎಂಬ ಹೆಗ್ಗಳಿಕೆ ಪಡೆದವರು ಜೊತೆಗೆ ಬುದ್ಧಿವಂತರು. ಆದರೆ ಸುಂದರ ರೂಪ ಮಾತ್ರ ಇರಲಿಲ್ಲ.  ಹೆಂಡತಿ ವಿಮಲಾ ಸಂಪೂರ್ಣ ಇವರ ತದ್ವಿರುದ್ಧ. ತುಂಬಾ ರೂಪವತಿ, ಆದರೆ ಒರಟು ಸ್ವಭಾವ  ಹಾಗೂ ಹಟಮಾರಿ ಹೆಣ್ಣು. 
 
ಗುಣ, ಹಣ, ಬುದ್ಧಿ ಎಷ್ಟೇ ಇರಲಿ... ಮೊದಲು ನೋಡುವುದು ರೂಪ ಅಲ್ಲವೇ? ಇಲ್ಲೂ ಹಾಗೆಯೇ ಆಯಿತು. ವಿಮಲಾ ಅವರ ಸ್ನೇಹಿತೆಯರು ‘ಅಯ್ಯೋ ಇವರನ್ಯಾಕೆ ಒಪ್ಪಿಕೊಂಡೆ? ನಿನಗೆ ಇನ್ನೂ ರೂಪವಂತ ಗಂಡ ಸಿಕ್ಕುತ್ತಿದ್ದನಲ್ಲ, ಅವಸರ ಏಕೆ ಮಾಡಿದೆ? ನಿಮ್ಮಿಬ್ಬರ ಜೋಡಿ ಸ್ವಲ್ಪವೂ ಚೆನ್ನಾಗಿಲ್ಲ...’ ಎಂದೆಲ್ಲಾ ವಿಮಲಾ ಅವರ ಕಿವಿ ತುಂಬಿದರು. ಈ ಮಾತುಗಳು ಮದುವೆ ನಂತರವೂ ವಿಮಲಾ ಅವರ ತಲೆಯಲ್ಲಿ ಪ್ರತಿಧ್ವನಿಸತೊಡಗಿದವು.
 
ಇಂಥ ಅಸಮಾಧಾನದ ನಡುವೆಯೇ ಸಂಸಾರ ಹಾಗೂ ಹೀಗೂ ಹಲವು ವರ್ಷ ಸಾಗಿತು. ಹೆಂಡತಿಗೆ ಸುಂದರ್‌  ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ನೌಕರಿ ಕೊಡಿಸಿದರು. ದಂಪತಿಗೆ ವಿವೇಕ್‌ ಎಂಬ ಮಗ ಹುಟ್ಟಿದ. 
 
ವಿಮಲಾ ಅವರಿಗೆ ತಮ್ಮ ಕೆಲ ಸ್ನೇಹಿತರಂತೆ ಅಮೆರಿಕದ ವಿಶ್ವವಿದ್ಯಾಲಯದಲ್ಲಿ ನೌಕರಿ ಮಾಡುವ ಆಸೆಯಾಯಿತು. ಇದಕ್ಕೆ ಸುಂದರ್‌ ಕೂಡ ಒಪ್ಪಿಕೊಂಡರು. ಅಂದು ಇದ್ದ ವೀಸಾ ಕಾಯ್ದೆಯಂತೆ, ಹೆಂಡತಿಯನ್ನು ಅಮೆರಿಕಕ್ಕೆ ಕಳುಹಿಸಿದರೆ ಗಂಡನಿಗೂ ವೀಸಾ ಸಿಕ್ಕುವ ಅವಕಾಶ ಹೆಚ್ಚು ಇತ್ತು. ಆದ್ದರಿಂದ ತಾವೂ ನಂತರ ಅಮೆರಿಕಕ್ಕೆ ಹೋಗಬಹುದು ಎಂದುಕೊಂಡರು ಸುಂದರ್‌. ಗಂಡ ಅನುಮತಿ ಕೊಟ್ಟಿದ್ದೇ ತಡ... ವಿಮಲಾ ಮಗ ವಿವೇಕನೊಂದಿಗೆ ಅಮೆರಿಕಕ್ಕೆ ಪ್ರಯಾಣ ಬೆಳೆಸಿದರು.
 
ಅಲ್ಲಿಯ ವಿಶ್ವವಿದ್ಯಾಲಯವೊಂದರಲ್ಲಿ ರಿಸರ್ಚ್‌ ಸ್ಕಾಲರ್‌ ಆಗಿ ಸೇರಿಕೊಂಡರು. ಮಗನನ್ನು ಕ್ಯಾಲಿಫೋರ್ನಿಯಾದಲ್ಲಿ ಶಾಲೆಗೆ ಸೇರಿಸಿದರು.
ಇತ್ತ ಡಾ.ಸುಂದರ್‌ ವೀಸಾಕ್ಕೆ ಸಂಬಂಧಿಸಿದಂತೆ ಹೆಂಡತಿಗೆ ಎಲ್ಲಾ ದಾಖಲೆಗಳನ್ನು ಕಳುಹಿಸಿ ಉತ್ತರಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತರು. ಕೆಲ ವರ್ಷ ಕಳೆದರೂ ಹೆಂಡತಿಯಿಂದ ಸುದ್ದಿಯೇ ಬರಲಿಲ್ಲ. ಆಗೀಗ ಬರುತ್ತಿದ್ದ  ಪತ್ರ, ದೂರವಾಣಿ ಕರೆಗಳೂ ನಿಂತು ಹೋದವು. ಇದರಿಂದ ಸುಂದರ್‌ ಆತಂಕಗೊಂಡರೂ ಹೆಂಡತಿ ಬಿಝಿ ಇರಬೇಕು ಎಂದುಕೊಂಡು ಸಮಾಧಾನ ಪಟ್ಟುಕೊಳ್ಳತೊಡಗಿದರು.
 
***
ಅಮೆರಿಕದ ಜೀವನಕ್ಕೆ ಸಂಪೂರ್ಣ ಒಗ್ಗಿ ಹೋದರು ವಿಮಲಾ. ವೇಷಭೂಷಣ ಎಲ್ಲವೂ ಬದಲಾಯಿತು. ಕೈತುಂಬಾ ಹಣ ಸಿಗುತ್ತಿದ್ದ ಕಾರಣ ವಿಲಾಸಿ ಜೀವನಕ್ಕೇನೂ ಕೊರತೆ ಇರಲಿಲ್ಲ. ಇದೆಲ್ಲಾ ಸಿಕ್ಕಮೇಲೆ ಇನ್ನೇನು? ವಯಸ್ಸು ಕೂಡ ಚಿಕ್ಕದಾಗಿದ್ದರಿಂದ ಸಂಗಾತಿಯ ಅವಶ್ಯಕತೆ ಕಾಡಿತು. ಅವರ ಈ ಅವಶ್ಯಕತೆ ಪೂರೈಸಿದರು ರಾಬರ್ಟ್‌. ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದ ರಾಬರ್ಟ್‌ ಅವರೊಂದಿಗೆ  ವಿಮಲಾ ಸ್ನೇಹ ಬೆಳೆಯಿತು. ಇಬ್ಬರೂ ಒಂದೇ ಮನೆಯಲ್ಲಿ (ಲಿವ್‌ ಇನ್‌ ರಿಲೇಷನ್‌) ಉಳಿದರು.
 
ಈ ನಡುವೆ ಏಕಾಂಗಿಯಾದ ಸುಂದರ್‌ ತಮ್ಮ ದೊಡ್ಡ ಮನೆಯನ್ನು ಬದಲಾಯಿಸಿ ವಿಶ್ವವಿದ್ಯಾಲಯದ ವಸತಿಗೃಹಕ್ಕೆ ಹೋದರು. ಒಂದು ದಿನ ಅವರ ಸ್ನೇಹಿತ ಮಹೇಶ್‌, ವಿಮಲಾ ಅವರನ್ನು ತಾವು ಐದಾರು ತಿಂಗಳ ಹಿಂದೆ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ನೋಡಿರುವುದಾಗಿ ಹೇಳಿದರು. ಅಮೆರಿಕದಿಂದ ಬೆಂಗಳೂರಿಗೆ ಹೆಂಡತಿ ವಾಪಸಾದದ್ದನ್ನು ಸುಂದರ್‌ ನಂಬಲಿಲ್ಲ. ಅದಾದ ಸ್ವಲ್ಪ ದಿನಗಳಲ್ಲೇ ಅಚಾನಕ್‌ ಆಗಿ ಅಂಗಡಿಯೊಂದರಲ್ಲಿ ವಿಮಲಾರನ್ನು ಹೋಲುವ ಹೆಣ್ಣನ್ನು ನೋಡಿ ಸುಂದರ್ ಅವಾಕ್ಕಾದರು.   ವೇಷಭೂಷಣ ಬದಲಾಗಿದ್ದರಿಂದ ಗುರುತಿಸುವುದು ಕಷ್ಟ ಎನಿಸಿ ಪದೇ ಪದೇ ನೋಡಿದರು. ಕೊನೆಗೆ ಈಕೆ ತಮ್ಮ ಪತ್ನಿಯೇ ಎಂದು  ಖಾತರಿಯಾಯಿತು. ಅಷ್ಟರಲ್ಲಿಯೇ ವಿಮಲಾ ಅಲ್ಲಿಂದ ಕಾರು ಹತ್ತಿ ಹೊರಟೇ ಬಿಟ್ಟರು.
 
ಇಷ್ಟು ದಿನ ಹೆಂಡತಿ ಬಗ್ಗೆ ಸಮಾಧಾನ ಪಟ್ಟುಕೊಳ್ಳುತ್ತಿದ್ದ ಸುಂದರ್‌ ಅವರಿಗೆ  ಈಗ ಏನೋ ಎಡವಟ್ಟಾಗಿದೆ ಎಂದು ತಿಳಿಯಿತು. ಈ ಬಗ್ಗೆ ಅವರು ಸ್ನೇಹಿತ ಮಹೇಶ್‌ ಅವರ ಬಳಿ ಹೇಳಿದಾಗ, ಮಹೇಶ್‌ ಅವರನ್ನು ಕರೆದುಕೊಂಡು ನನ್ನ ಕಚೇರಿಗೆ ಬಂದರು. 
 
ವಿಷಯವನ್ನು ಸಂಪೂರ್ಣ ಕೇಳಿದ ಮೇಲೆ ವಿಮಲಾ ಏನಾದರೂ ವಿಚ್ಛೇದನಕ್ಕೆ ಕೋರಿ ಅರ್ಜಿ ಸಲ್ಲಿಸಿರಬಹುದೇ ಎಂದು ಒಂದು ಕ್ಷಣ ಅನಿಸಿತು. ಈ ಕುರಿತು ಕೌಟುಂಬಿಕ ಕೋರ್ಟ್‌ನಲ್ಲಿ ವಿಚಾರಿಸಿ ಬರುವಂತೆ ನನ್ನ  ಕಿರಿಯ ಸಹೋದ್ಯೋಗಿಗೆ ಹೇಳಿದೆ.
 
ನನ್ನ ಊಹೆ ಸರಿಯಾಗಿತ್ತು. ವಿಚ್ಛೇದನಕ್ಕೆ ಕೋರಿ ವಿಮಲಾ ಅರ್ಜಿ ಸಲ್ಲಿಸಿದ್ದರು. ಅವರು ಹಳೆಯ ಮನೆಯ ವಿಳಾಸ ನೀಡಿದ್ದರಿಂದ ನೋಟಿಸ್‌ ಸುಂದರ್‌ ಅವರಿಗೆ ಸಿಕ್ಕಿರಲಿಲ್ಲ. ಆದ್ದರಿಂದ ‘ಎಕ್ಸ್‌–ಪಾರ್ಟಿ’ (ಪ್ರತಿವಾದಿಗಳು ಇಲ್ಲದೆಯೇ ಕೇವಲ ಅರ್ಜಿದಾರರ ಸಮ್ಮುಖದಲ್ಲಿ) ವಿಚಾರಣೆ ನಡೆದು  ಕೋರ್ಟ್‌ ಅಂತಿಮ ಆದೇಶ ಪ್ರಕಟಿಸಲು ದಿನಾಂಕವೊಂದನ್ನು ನಿಗದಿ ಮಾಡಿತ್ತು.
 
ಆದೇಶ ಪ್ರಕಟಿಸುವ ದಿನ ಸುಂದರ್‌ ಅವರೂ ಹೋದರು. ಅಪ್ಪಟ ಭಾರತೀಯ ನಾರಿಯಂತೆ ತಯಾರಾಗಿ ಬಂದಿದ್ದ ಹೆಂಡತಿಯನ್ನು ನೋಡಿ ಸುಂದರ್‌ ಅವರು ಆ ಕ್ಷಣದಲ್ಲಿ ವಿಚಲಿತರಾದರು. ಆಕೆ ಮಾಡಿದ ತಪ್ಪುಗಳೆಲ್ಲಾ ಮಸುಕಾಗಿ ಕಂಡವು, ಸುಮಧುರ ನೆನಪುಗಳು ಕಾಡತೊಡಗಿದವು. ಹಾಗೆ ಹೆಂಡತಿಯನ್ನು ನೋಡುತ್ತಿದ್ದಾಗಲೇ ವಿಚ್ಛೇದನದ ಅರ್ಜಿ ಅವರಿಗೆ ಸಿಕ್ಕಿತು. ಅದನ್ನು ಓದುತ್ತಿದ್ದಂತೆಯೇ ಸುಂದರ್‌ ಅವರ ಕಣ್ಣಲ್ಲಿ ನೀರು ಸುರಿಯಿತು, ರೋಷ ಉಕ್ಕಿತು... ಹೆಂಡತಿಯ ಮೇಲಿನ ಪ್ರೀತಿ ಕರಗಿತು. ಏಕೆಂದರೆ ಅರ್ಜಿಯಲ್ಲಿ ವಿಮಲಾ  ತಮ್ಮ ಗಂಡ ವ್ಯಭಿಚಾರಿ, ಕುಡುಕ,  ಹಿಂಸೆಪ್ರಿಯ... ಹೀಗೆ ಏನೇನೋ ಕಾರಣ ನೀಡಿ ತಮಗೆ ವಿಚ್ಛೇದನ ಬೇಕು ಎಂದು ಕೋರಿದ್ದರು.  ಇಷ್ಟೆಲ್ಲಾ ಆರೋಪ ಮಾಡಿದ ಹೆಂಡತಿಗೆ ವಿಚ್ಛೇದನ ಕೊಡಲೇಬಾರದು ಎಂದು ನಿರ್ಧರಿಸಿದ ಸುಂದರ್‌, ‘ಎಷ್ಟೇ ಖರ್ಚಾದರೂ ಪರವಾಗಿಲ್ಲ. ವಿಮಲಾಳ ಈ ಅರ್ಜಿಯನ್ನು ವಜಾ ಮಾಡಿಸಲೇ ಬೇಕು’ ಎಂದು ನನ್ನ ಬಳಿ ಪಟ್ಟು ಹಿಡಿದರು.
 
ಆ ದಿನವೇ ಆದೇಶ ಪ್ರಕಟಗೊಳ್ಳುವುದಿತ್ತು. ಆದ್ದರಿಂದ ನನಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಆದರೂ ವಿಮಲಾ ಅವರ ಬಗ್ಗೆ ನ್ಯಾಯಾಧೀಶರ ಗಮನಕ್ಕೆ ತಂದೆ. ಮನೆ ಬದಲಾವಣೆ ಆಗಿದ್ದರಿಂದ ನೋಟಿಸ್‌ ಸಿಕ್ಕಿಲ್ಲದ್ದನ್ನು ತಿಳಿಸಿದೆ. ಆದರೆ ಆ ಹಂತದಲ್ಲಿ (ಮಹಿಳೆಯರ ಪರವಾಗಿ ತುಂಬಾ ಕಳಕಳಿಯುಳ್ಳ) ನ್ಯಾಯಾಧೀಶರು ಇದನ್ನು ನಂಬುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಹೆಂಡತಿಗೆ ಹಿಂಸೆ ಕೊಡಲೇಬೇಕೆಂಬ ಉದ್ದೇಶದಿಂದ ಆದೇಶ ಪ್ರಕಟಗೊಳ್ಳುವ ದಿನ ಸುಂದರ್‌ ಈ ರೀತಿ ಗಲಾಟೆ ಮಾಡುತ್ತಿರುವುದಾಗಿ ಅವರು ಅಭಿಪ್ರಾಯಪಟ್ಟರು. ಹಾಗೂ ಹೀಗೂ ಮಾಡಿ ನಾನು ಅವರ ಮನವೊಲಿಸಲು ಯಶಸ್ವಿಯಾದೆ. ಆಗ ನ್ಯಾಯಾಧೀಶರು ನನಗೆ ವಾದ ಮಂಡಿಸಲು ಎರಡು ದಿನಗಳ ಅವಕಾಶ ನೀಡಿದರು. ಸಾಧ್ಯವಾದರೆ ಇಬ್ಬರ ನಡುವೆ ರಾಜಿಸಂಧಾನ ಮಾಡಲು ಪ್ರಯತ್ನಿಸಿ ಎಂದರು.
 
ಮಾರನೆಯ ದಿನ ರಾಜಿಸಂಧಾನ. ಗಂಡನ ಅನುಪಸ್ಥಿತಿಯಲ್ಲಿ ವಿಚ್ಛೇದನದ ಆದೇಶ ಪಡೆದುಕೊಳ್ಳಲು ಉತ್ಸುಕರಾಗಿದ್ದ ವಿಮಲಾ, ಕೊನೆಯ ಕ್ಷಣದಲ್ಲಿ ಕೈಗೆ ಸಿಕ್ಕ ಅವಕಾಶ ಚೆಲ್ಲಿ ಹೋದದ್ದರಿಂದ ಕೋಪಗೊಂಡಿದ್ದರು. ರಾಜಿಸಂಧಾನದ ದಿನವೇ ಆವೇಶಭರಿತರಾಗಿ ಗಂಡನ ಮುಖಕ್ಕೆ ಉಗಿದುಬಿಟ್ಟರು! ಅದು ಅಲ್ಲಿದ್ದವರಿಗೂ ಸಿಡಿಯಿತು.  ‘ನೀನು ನನ್ನ ಭವಿಷ್ಯವನ್ನು ಹಾಳು ಮಾಡುತ್ತಿದ್ದಿಯ, ನಿನಗೆ ಏನು ಮಾಡಬೇಕೆಂದು ನನಗೆ ಗೊತ್ತು.  ಈ ರಾಜಿಗೆ ನಾನು ಒಪ್ಪುವುದಿಲ್ಲ’ ಎಂದು ಹೊರಟು ಹೋದರು. ನ್ಯಾಯಾಧೀಶರ ಮಾತಿಗೆ ಬೆಲೆ ಕೊಟ್ಟು ರಾಜಿ ಪ್ರಯತ್ನಕ್ಕೆ ಕೈ ಹಾಕಿದ ನನಗೂ ಅವಮಾನವಾದಂತೆ ಅನಿಸಿತು. ಅಲ್ಲಿಗೆ ರಾಜಿಸಂಧಾನ ಅಂತ್ಯವಾಯಿತು. 
 
ಮರುದಿನ, ನಡೆದ ವಿಷಯವನ್ನು ನ್ಯಾಯಾಧೀಶರ ಮುಂದಿಟ್ಟೆ. ವಿಮಲಾ ಅವರ ನಡತೆಗೆ ಅವರೂ ಬೇಸರ ವ್ಯಕ್ತಪಡಿಸಿ, ವಿಮಲಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸುವಂತೆ ಹೇಳಿದರು. ವಿಮಲಾ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿ ಪಾಟಿ ಸವಾಲು ಮಾಡುತ್ತಿದ್ದಾಗ ಅವರು ಗಂಡನದ್ದೇ ತಪ್ಪು ಎಂಬಂತೆ ಪಟಪಟ ಉತ್ತರಿಸತೊಡಗಿದರು. ನನಗೆ ಅವರನ್ನು ತಹಬದಿಗೆ ತರುವುದೇ ಕಷ್ಟ ಎನಿಸತೊಡಗಿತು.
 
ಆದರೆ ಆಗ ಸಿನಿಮೀಯ ರೀತಿಯಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆಯಿತು! ವಿಮಲಾ ಅವರ ಕೈಯಲ್ಲಿದ್ದ ವ್ಯಾನಿಟಿ ಬ್ಯಾಗ್ ಕೆಳಗೆ ಬಿತ್ತು. ಅದರಲ್ಲಿದ್ದ ಅವರ ಪಾಸ್‌ಪೋರ್ಟ್‌, ಫೋಟೊ ಸೇರಿದಂತೆ ಮತ್ತಿತರ ಕಾಗದ ಪತ್ರಗಳು ಕೆಳಗೆ ಬಿದ್ದವು. ಕೋರ್ಟ್‌ನಲ್ಲಿದ್ದ ಅಟೆಂಡರ್‌ ಅವುಗಳನ್ನು ಎತ್ತಿಕೊಡಲು ಬಂದಾಗ ‘ನಾನೇ ಆ ಕೆಲಸ ಮಾಡುತ್ತೇನೆ’ ಎಂದು ಹೇಳಿ ಒಂದೊಂದೇ ಕಾಗದ ಪತ್ರಗಳನ್ನು ನೋಡಿದೆ. ಅಬ್ಬಾ... ನನಗೆ ಚಿನ್ನದ ಗಣಿಯೇ ಸಿಕ್ಕಂತಾಯ್ತು! ಏಕೆಂದರೆ ವಿಮಲಾ ಅವರ ಎರಡು ಪಾಸ್‌ಪೋರ್ಟ್‌ (ಒಂದು ಈ ಗಂಡನ ಜೊತೆ, ಇನ್ನೊಂದು ಸ್ನೇಹಿತನ ಜೊತೆಗಿನದ್ದು) ಇದ್ದವು. ಎರಡರಲ್ಲೂ ಬೇರೆ ಬೇರೆ ವಿಳಾಸ ಇತ್ತು. ಈ ವಿಭಿನ್ನ ವಿಳಾಸಗಳಿಂದ ಆಕೆಯ ಇನ್ನಿತರ ವ್ಯವಹಾರಗಳು ನಡೆದಿರುವ ದಾಖಲೆ ಪತ್ರಗಳೂ ಸಿಕ್ಕವು. ಇನ್ನೇನು ಬೇಕು? ಈ ಕೇಸಿನ ಬೇಟೆ ಆಡಲು ಬೇಕಾದ ಎಲ್ಲವೂ ನನಗೆ ಸಿಕ್ಕಿಬಿಟ್ಟಿತು. ನನ್ನ ಪಾಟಿ ಸವಾಲಿನ ವರಸೆಯೇ ಬೇರೆಯಾಯಿತು.
 
ಈಗಾಗಲೇ ಎಲ್ಲಾ ದಾಖಲೆ ನನ್ನ ಕೈ ಸೇರಿದ್ದನ್ನು ಕಂಡ ವಿಮಲಾ ಅವರ ಮುಖ ಇಂಗು ತಿಂದ ಮಂಗನಂತಾಯಿತು. ಎಲ್ಲವನ್ನೂ ಕೋರ್ಟ್‌ ಮುಂದಿಟ್ಟೆ. ನ್ಯಾಯಾಧೀಶರಿಗೂ ಕೋಪ ಬಂದಿತು. ‘ಈ ರೀತಿ ಸುಳ್ಳು ಹೇಳಿ ನ್ಯಾಯಾಲಯದ ಸಮಯವನ್ನು ಹಾಳುಮಾಡುತ್ತೀರಿ’ ಎಂದು ವಿಮಲಾ ಅವರನ್ನು ಗದರಿಸಿದರು.  ಇಷ್ಟು ಆಗುತ್ತಿದ್ದಂತೆಯೇ ಅನಾರೋಗ್ಯದ ನೆಪ ಹೇಳಿದ ವಿಮಲಾ, ಪಾಟಿ ಸವಾಲನ್ನು ಮುಂದೂಡುವಂತೆ  ವಿನಂತಿಸಿಕೊಂಡರು. ಮರುದಿನಕ್ಕೆ ವಿಚಾರಣೆ ಮುಂದೂಡಲಾಯಿತು.
 
ಅದೇ ಸಂಜೆ ವಿಮಲಾ ನನ್ನ ಕಚೇರಿಗೆ ಬಂದರು. ನನಗೆ ಇರಸುಮುರುಸಾದರೂ ಕುಳಿತುಕೊಳ್ಳುವಂತೆ ಹೇಳಿದೆ. ಬಂದ ವಿಷಯ ಕೇಳಿದೆ. ಆಕೆ ಎಷ್ಟು ‘ಬುದ್ಧಿವಂತೆ’ ಎಂದರೆ ಅಮೆರಿಕದಲ್ಲಿರುವ ನನ್ನ ಸಂಬಂಧಿಕರನ್ನೂ ಪತ್ತೆ ಹಚ್ಚಿ ಬಿಟ್ಟಿದ್ದರು! ಅವರ ಹೆಸರನ್ನೆಲ್ಲಾ ನನಗೆ ಹೇಳಿ ಅವರ ಪರಿಚಯ ತಮಗೆ ಇರುವುದಾಗಿ ಹೇಳಿದರು. ಸುಂದರ್‌ ಅವರ ನಡತೆ ಸರಿ ಇಲ್ಲ ಎಂಬ ಅರ್ಥ ಬರುವಂತೆ ಕೋರ್ಟ್‌ನಲ್ಲಿ ವಾದಿಸಿ ತಮ್ಮ ಪರವಾಗಿ ಆದೇಶ ಬರುವಂತೆ ಮಾಡಬೇಕೆಂದು ಕೋರಿಕೊಂಡರು. ಅದಕ್ಕೆ ಎಷ್ಟೇ ಖರ್ಚಾದರೂ ಪರವಾಗಿಲ್ಲ ಎಂದರು. ನನಗೆ ಸಿಟ್ಟು ಬಂದು ಅವರನ್ನು ಹೊರಕ್ಕೆ ಕಳಿಸಿದೆ. ಈ ಬಗ್ಗೆ ಸುಂದರ್‌ ಅವರಿಗೆ ತಿಳಿಸಿದೆ.
 
ಅಲ್ಲಿಯವರೆಗೆ ವಿಚ್ಛೇದನಕ್ಕೆ ಒಪ್ಪದಿದ್ದ ಸುಂದರ್‌ ಅವರು ಹೆಂಡತಿಯ ಅತಿರೇಕದ ನಡೆಗಳಿಂದ ಬೇಸತ್ತು ವಿಚ್ಛೇದನಕ್ಕೆ ಮುಂದಾದರು. ತಮ್ಮ ಮೇಲೆ ಹೆಂಡತಿ ಮಾಡಿರುವ ಆರೋಪಗಳು ನಿರಾಧಾರ ಎಂದು ನ್ಯಾಯಾಧೀಶರಿಂದ ಹೇಗಾದರೂ ಹೇಳಿಸುವಂತೆ ಮಾಡಿ ಎಂದು ನನ್ನನ್ನು ಕೋರಿದರು. 
 
ವಿಮಲಾ ಅವರ ನಡವಳಿಕೆ ಬಗ್ಗೆ ಅವರ ಪರ ವಕೀಲರಿಗೆ ತಿಳಿಸಿದೆ. ಅವರೂ ಈಗಾಗಲೇ ವಿಮಲಾ ನಡೆದುಕೊಂಡ ರೀತಿಯಿಂದ ಬೇಸತ್ತಿದ್ದರು. ‘ಪರಸ್ಪರ ಒಪ್ಪಿಗೆ’ (ಮ್ಯೂಚುವಲ್‌ ಕನ್ಸೆಂಟ್‌) ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಯಿತು.  ಅದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಸುಂದರ್‌ ಅವರನ್ನು ಉದ್ದೇಶಿಸಿ ‘ನಿಮಗೆ ಜೀವನಪರ್ಯಂತ ಮುಕ್ತಿ ಸಿಕ್ಕಿದೆ. ಆದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಒಳ್ಳೆಯದಾಗಲಿ’ ಎಂದು ಹಾರೈಸಿದರು.  ತಮ್ಮ ಶ್ರೇಯಸ್ಸಿಗೆ ಕಾರಣರಾದ ಗಂಡನ ಚರಿತ್ರೆಗೇ ಕಳಂಕ ತರಹೊರಟಿದ್ದ ವಿಮಲಾ ಅವರಿಗೆ ಬೇಕಾದದ್ದು (ವಿಚ್ಛೇದನ) ಸಿಕ್ಕಿತೆನ್ನಿ. ಆದರೆ ನಿರಪರಾಧಿ ಸುಂದರ್‌ ‘ಪರ್ಸ್‌’ ದೆಸೆಯಿಂದಾಗಿ ಆರೋಪಮುಕ್ತಗೊಂಡರು ಜೊತೆಗೆ ‘ಸುಂದರಿ’ಯಿಂದ ಶಾಶ್ವತವಾಗಿ ಬಿಡುಗಡೆಗೊಂಡರು. ದೈವಲೀಲೆ ಎಂದರೆ ಇದೇ ಇರಬೇಕು...!
(ಲೇಖಕ ಹೈಕೋರ್ಟ್‌ ವಕೀಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT