ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್ ಕಲಿಕೆ: ಭಯವೇಕೆ?

Last Updated 27 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಒಂದು ವಿಷಯದ ತಜ್ಞರಿಗೆ ಮತ್ತೊಂದು ಕ್ಷೇತ್ರದ ಬಗ್ಗೆ ಹೇಳುವ ಸಂದರ್ಭ ಬಂದರೆ ಲೀಲಾಜಾಲವಾಗಿ ‘ಆ ಕ್ಷೇತ್ರವನ್ನು ಕುರಿತಾಗಿ ನನಗೆ ಹೆಚ್ಚು ತಿಳಿದಿಲ್ಲ’ ಎಂದು ಬಿಡುತ್ತಾರೆ.ಆದರೆ, ಕಂಪ್ಯೂಟರ್ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಲು ಬಹಳ ಸಂಕೋಚ ಪಡುತ್ತಾರೆ.

ಇದು ಎಲ್ಲ ಕ್ಷೇತ್ರಗಳಲ್ಲಿ ಕಂಪ್ಯೂಟರ್‌ಗಳ ವಿಪರೀತ ಬಳಕೆಯಿರುವ ಇಂದಿನ ಮಾತಲ್ಲ, ಕಂಪ್ಯೂಟರ್‌ಗಳು ನಿಧಾನವಾಗಿ ನಮ್ಮ ಜೀವನಕ್ಕೆ ಕಾಲಿಡುತ್ತಿದ್ದ ಸಂದರ್ಭದಲ್ಲಿಯೂ ಈ ಪರಿಸ್ಥಿತಿ ಇತ್ತು. ಇದಕ್ಕೆ ಕಾರಣಗಳು ಎರಡು: ಒಂದು ನಮ್ಮಲ್ಲಿನ ಕೀಳಿರಿಮೆ. ಎರಡು: ಕಂಪ್ಯೂಟರ್‌ಗಳ ತಂತ್ರವನ್ನು ತಿಳಿದವರು ಸೃಷ್ಟಿಸಿರುವ ಮಿಥ್ಯಾಜಗತ್ತು!

ಕಂಪ್ಯೂಟರ್‌ನಲ್ಲಿ ಭಯ ಪಡಬೇಕಾದ ಅಥವಾ ಸಂಕೋಚ ಪಡಬೇಕಾದಂಥದ್ದೇನೂ ಇಲ್ಲ! ಒಂದು ಸಣ್ಣ ಪುಸ್ತಕ ಓದಿ ಕಂಪ್ಯೂಟರ್‌ ಬಗ್ಗೆ ತಿಳಿದೆವು ಎನ್ನಲು ಸಾಧ್ಯವೆ? ಅಥವಾ ಕೆಲವೇ ದಿನಗಳ ಅಥವಾ ಒಂದೆರಡು ತಿಂಗಳ ಕೋರ್ಸ್ ಮಾಡಿ ಕಂಪ್ಯೂಟರನ್ನು ತಿಳಿಯಲು ಸಾಧ್ಯವೆ? – ಎಂಬ ಪ್ರಶ್ನೆಗೆ ನಮಗೆ ನಾವೇ ‘ಇಲ್ಲ’ ಎಂಬ ಉತ್ತರ ಕೊಟ್ಟುಕೊಂಡು ಮಾನಸಿಕ ದೂರವನ್ನು ಸೃಷ್ಟಿಸಿಕೊಂಡಿರುತ್ತೇವೆ. ಕಂಪ್ಯೂಟರನ್ನು ಕಲಿಸುವ ಮಂದಿ (ಎಲ್ಲರೂ ಅಲ್ಲ) ಬೇಡದ ಭ್ರಮಾಲೋಕ ಸೃಷ್ಟಿಸಿ ಈ ದೂರವನ್ನು ಹೆಚ್ಚಿಸುತ್ತಾರೆ. ಇದಕ್ಕೆ ಪರಿಹಾರವೆಂದರೆ ಸರಿಯಾದ ತಿಳಿವಳಿಕೆ.

ಕಂಪ್ಯೂಟರ್‌ವಿದ್ಯೆಯೂ ಇತರ ಎಲ್ಲ ವಿದ್ಯೆಯಂತೆಯೇ. ಆದರೆ, ತುಸು ಹೆಚ್ಚು ಸರಳ, ಅಷ್ಟೆ! ಇನ್ನು ಒಂದೇ ತಿಂಗಳಲ್ಲಿ ಕಲಿಯಬಹುದೇ, ವರ್ಷಗಳು ಬೇಕಲ್ಲವೆ? – ಎಂಬ ಪ್ರಶ್ನೆ ಬರುವುದು ಸಾಮಾನ್ಯವಾಗಿ ನಮ್ಮ ಕಂಪ್ಯೂಟರ್ ಕಲಿಕೆಯನ್ನು ಕಂಪ್ಯೂಟರ್ ಎಂಜಿನಿಯರಿಂಗ್ ಕಲಿಕೆಗೆ ಹೋಲಿಸಿಕೊಂಡಾಗ. ಎಲ್ಲ ಕಲಿಕೆಗಳಲ್ಲಿ ಎರಡು ವಿಭಾಗಗಳಿರುತ್ತವೆ.

ಯಾವುದನ್ನು ಕಲಿಯುತ್ತೇವೆ ಎಂಬುದರ ಮೇಲೆ ಅದನ್ನು ಕಲಿಯಲು ಬೇಕಾಗುವ ಸಮಯವನ್ನು ನಿರ್ಧರಿಸಬಹುದು. ಒಂದು ಉದಾಹರಣೆಯೊಂದಿಗೆ ಇದನ್ನು ಸ್ಪಷ್ಟಪಡಿಸಿಕೊಳ್ಳೋಣ. ನಾವು ದ್ವಿಚಕ್ರವಾಹನ ಖರೀದಿಸಿದ್ದೇವೆಂದುಕೊಳ್ಳೋಣ.

ಈಗ ಕಲಿಯಬೇಕು ಎಂದಾಗ ಎರಡು ಆಯ್ಕೆಗಳು ನಮ್ಮ ಮುಂದಿರುತ್ತವೆ. ಒಂದು: ಎಂಜಿನಿಯರಿಂಗ್ ದೃಷ್ಟಿಯಿಂದ ಈ ವಾಹನ ಹೇಗೆ ಕೆಲಸ ಮಾಡುತ್ತದೆ, ಕೆಟ್ಟರೆ ಹೇಗೆ ಸರಿಪಡಿಸುವುದು ಎಂಬುದು. ಎರಡು:  ಅದನ್ನು ನಡೆಸುವ ವಿಧಾನವನ್ನು (ಡ್ರೈವಿಂಗ್) ಕಲಿಯುವುದು. ನನಗೆ ವಾಹನ ನಡೆಸುವುದನ್ನು ಮಾತ್ರ ಕಲಿಯಬೇಕು ಎನ್ನುವುದಾದರೆ ಕಲಿಯಲು ತೀರಾ ಹೆಚ್ಚೆಂದರೆ ಒಂದು ವಾರ ಸಾಕು.

ಆದರೆ, ಅದೇ ಆ ವಾಹನ ಅಟೋಮೊಬೈಲ್ ಎಂಜಿನಿಯರಿಂಗ್ ದೃಷ್ಟಿಯಿಂದ ಹೇಗೆ ಕೆಲಸ ಮಾಡುತ್ತದೆ, ಕೆಟ್ಟರೆ ದುರಸ್ತಿ ಮಾಡುವುದು ಹೇಗೆ ಎಂಬುದನ್ನೆಲ್ಲಾ ಕಲಿಯಬೆಕು ಎಂದರೆ ವರ್ಷಗಳು ಬೇಕಾಗುತ್ತವೆ, ಈಗ ವಿಷಯ ನಮಗೆ ಸ್ಪಷ್ಟವಾಯಿತಲ್ಲವೆ? ಇದನ್ನು ಕಂಪ್ಯೂಟರ್‌ನ ಕಲಿಕೆಗೆ ಅನ್ವಯಿಸೋಣ.

ನಾವು ನಮ್ಮ ಕೆಲಸಗಳನ್ನು ಕಂಪ್ಯೂಟರ್‌ನಿಂದ ಮಾಡಿಸುವುದನ್ನು ಮಾತ್ರ ಕಲಿಯಬೇಕು ಎಂದರೆ (ಉದಾ: ಈ ಅಂಚೆ ಪತ್ರವ್ಯವಹಾರ, ವರ್ಡ್, ಎಕ್ಸೆಲ್ ಅಥವಾ ಪವರ್‌ಪಾಯಿಂಟ್ ಬಳಸುವುದನ್ನು ಕಲಿಯುವುದು) ಒಂದು ನಿರ್ದಿಷ್ಟ ಅವಧಿಯ ಕೋರ್ಸ್ ಮಾತ್ರ ಸಾಕು.

ಅದೇ ಕಂಪ್ಯೂಟರ್  ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಅರಿಯಬೇಕಾದರೆ ಅಥವಾ ಇನ್ನೂ ಹೆಚ್ಚಿನ ಅಧ್ಯಯನ ಎಂದರೆ ಸಹಜವಾಗಿಯೇ ವರ್ಷಾವಧಿ ಸಮಯ ಬೇಕಾಗುತ್ತದೆ. ಎಂದರೆ, ಗಣಕಗಳಲ್ಲಿ ನೀವು ಏನನ್ನು ಕಲಿಯಬಯಸುತ್ತೀರಿ ಎಂಬುದನ್ನು ಅವಲಂಬಿಸಿ ಅದಕ್ಕೆ ತಕ್ಕಷ್ಟು ಸಮಯ ಬೇಕಾಗುತ್ತದೆಯೇ ಹೊರತಾಗಿ ಏನೇ ಮಾಡಬೇಕಾದರೂ ವರ್ಷಗಳ ತರಬೇತಿ ಬೇಕಾಗುವುದಿಲ್ಲ.

ಆದರೆ, ಕೆಲವು ಮೂಲಭೂತ ವಿಷಯಗಳನ್ನು ತಿಳಿಯಬೇಕಾಗುತ್ತದೆ. ಉದಾಹರಣೆಗೆ, ನಾವು  ಹೇಗೆ ವಾಹನ ಚಲಾಯಿಸುವಾಗ ಬ್ರೇಕು, ಕ್ಲಚ್ಚು ಯಾವುದು, ಹೇಗೆ ಅವನ್ನು ಉಪಯೋಗಿಸಬೇಕು ಎಂದು ಅರಿಯಬೇಕಾಗುತ್ತದೆ. ಆದರೆ ಈ ಕಲಿಕೆಗೆ ಅತಿ ಕಡಿಮೆ ಸಮಯ ಬೇಕಾಗುತ್ತದೆ. ಹೀಗೆಯೇ ಕಂಪ್ಯೂಟರನ್ನು ಕಲಿಯಲು ಆರಂಭದಲ್ಲಿ ಕೆಲವೊಂದು ಸಂಗತಿಗಳನ್ನು ತಿಳಿದಿರಬೇಕಾಗುತ್ತದೆ.

* ಕಂಪ್ಯೂಟರನ್ನು ಕಲಿಯುವಾಗ ನಮ್ಮಲ್ಲಿ ಕಾಡುವ ದೊಡ್ಡ ಭಯ ಎಂದರೆ – ನಾವೇನೋ ಮಾಡಲು ಹೋಗಿ ಇನ್ನೇನೋ ಅಗಿಬಿಟ್ಟರೆ? ಎಲ್ಲ ಡಿಲೀಟ್ ಆಗಿಬಿಟ್ಟರೆ? ಎಂಬುದು! ಇದಕ್ಕೆ ಕಾರಣವಿಲ್ಲ. ನಾವೇನೋ ಮಾಡಹೋಗಿ ಎಲ್ಲವನ್ನು ಅಳಿಸುವ ಸಾಧ್ಯತೆಗಳು ತೀರಾ ಕಡಿಮೆ. ಗಣಕಗಳಲ್ಲಿ ತಂತಾನೆ ಏನೂ ಆಗುವುದಿಲ್ಲ. ಒಂದೋ ಯಾರೋ ಮಾಡಿರಬೇಕು, ಇಲ್ಲವೇ ಮಾಡಿಸಿರಬೇಕು. ಮಾಡಿರುವ ಕೆಲಸವನ್ನು ಉಳಿಸುವ ಬಗ್ಗೆ ತರಬೇತಿಗಳಲ್ಲಿ ಗಮನವಿಟ್ಟು ಕಲಿತರೆ ಆಯಿತು.

* ಹಾಗೆಯೇ, ಕಂಪ್ಯೂಟರ್‌ಗೆ ಒಂದು ಒಳ್ಳೆಯ ಯುಪಿಎಸ್ ಇರಲಿ. ಒಂದು ಆಂಟಿವೈರಸ್‍ ತಂತ್ರಾಂಶ ಹಾಕಿಸಿರಿ. ನಿಯಮಿತವಾಗಿ ವೈರಸ್‍ ಸ್ಕಾನ್‍ ಮಾಡಿರಿ. ಈ ಕಾರ್ಯಕ್ಕೆ ಯಾರನ್ನಾದರೂ ನಿಯೋಜಿಸಬಹುದು. ಕಚೇರಿಯ ಕಂಪ್ಯೂಟರ್ ಅದರ ಗಾಂಭೀರ್ಯವನ್ನು ಉಳಿಸಿಕೊಳ್ಳಲಿ. ಬೇಡದ ಹಾಡುಗಳು, ಸಿನೆಮಾ ಎಲ್ಲಿದಂಲೋ ಡೌನ್‍ಲೋಡ್ ಮಾಡಿದ ಆಟ ಇತ್ಯಾದಿಗಳನ್ನು ಕಚೇರಿಯ ಕಂಪ್ಯೂಟರ್‌ಗೆ ಹಾಕಬೇಡಿ, ಹಾಕಲು ಬಿಡಬೇಡಿ.

* ಕಂಪ್ಯೂಟರನ್ನು ಕಲಿಯಲು ಅತಿಹೆಚ್ಚಿನ ಬುದ್ಧಿಮತ್ತೆ, ‘ಐಕ್ಯೂ’ ಇರಬೇಕು ಎಂಬುದೂ ಸಹ ಮತ್ತೊಂದು ತಪ್ಪು ಕಲ್ಪನೆ. ಒಟ್ಟಾರೆ, ನಮ್ಮ ಕೆಲಸಕ್ಕೆ ಬೇಕಾದಷ್ಟು ತರಬೇತಿಯನ್ನು ಪಡೆದು ಯಾವುದೇ ರೀತಿಯ ಹಿಂಜರಿಕೆ ಇಲ್ಲದೆ ನಾವು ಕಂಪ್ಯೂಟರನ್ನು ಬಳಸಬಹುದು. ಅಂತಹ ಅನೇಕ ಕೈಪಿಡಿಗಳು ಇಂದು ಪುಸ್ತಕದ ಮಳಿಗೆಗಳಲ್ಲಿ ದೊರೆಯುತವೆ.

ಅಷ್ಟು ಮಾತ್ರವಲ್ಲ, ನೀವು ಸುಮ್ಮನೆ ಗೂಗಲ್ಲಿಗೆ ಹೋಗಿ ನಿಮಗೆ ಬೇಕಾಗಿರುವುದನ್ನು ಯೂಟ್ಯೂಬ್‌ನಲ್ಲಿ  ಟೈಪ್ ಮಾಡಿದರೆ (ಉದಾಹರಣೆಗೆ: ವರ್ಡ್‌ನಲ್ಲಿ ಮೇಲ್ ಮರ್ಜ್ ಹೇಗೆ ಮಾಡುವುದು?) ಅದನ್ನು ತೋರಿಸುವ ವಿಡಿಯೋವೇ ಸಿಕ್ಕುತ್ತದೆ! ಬೇಕಿದ್ದಲ್ಲಿ ಆ ವಿಡಿಯೋವನ್ನು ಮತ್ತೆ ಮತ್ತೆ ಹಾಕಿ ತಿಳಿದುಕೊಳ್ಳಬಹುದು. ಇನ್ನೇನು ಬೇಕು! ಇದೊಂದು ವರದಾನವೇ ಎನ್ನಬಹುದು. 

* ಇನ್ನೊಂದು ವಿಚಾರ: ಕಂಪ್ಯೂಟರನ್ನು ಬಳಸುವಾಗ ಮೌಸ್‍ ಬಳಸುವುದು ಸಾಮಾನ್ಯವಲ್ಲವೆ? ಬಹುತೇಕ ಕೆಲಸಗಳನ್ನು ಕೀಲಿಗಳನ್ನು ಬಳಸಿಯೂ ಮಾಡಬಹುದು. ಇದಕ್ಕೆ ಕೀಬೋರ್ಡ್ ಶಾರ್ಟ್ ಕಟ್ ಎಂದು ಕರೆಯುತ್ತಾರೆ. ಕೆಲವರು ಇವನ್ನು ಚೆನ್ನಾಗಿ ಕಲಿತು, ನೋಡುಗರು ಕಕಮಕರಾಗುವಂತೆ ಕೆಲಸ ಮಾಡುತ್ತಾರೆ! ಅವರನ್ನು ನೋಡಿ ನಾವು ಹೆದರುತ್ತೇವೆ. ಆದರೆ ಹೆದರುವ ಆವಶ್ಯಕತೆಯಿಲ್ಲ. ಸಹಾಯ ವಿಭಾಗಕ್ಕೆ ಹೋಗಿ ಕೀಬೋರ್ಡ್ ಶಾರ್ಟ್ ಕಟ್‍ ಎಂದು ಕೀಲಿ ಮಾಡಿದರೆ ಎಲ್ಲ ಶಾರ್ಟ್ ಕಟ್‍ಗಳೂ ಪಟ್ಟಿಯಾಗುತ್ತವೆ! ಅವನ್ನು ಬೇಕಾದಲ್ಲಿ ಮುದ್ರಿಸಿ ಇಟ್ಟುಕೊಂಡರಾಯಿತು.

* ಹಾಗೆ ನೋಡಿದರೆ ಇಡೀ ಜಗತ್ತಿನಲ್ಲಿ ‘ಕಂಪ್ಯೂಟರ್‌ ಹೇಗೆ ಕೆಲಸ ಮಾಡುತ್ತದೆ’ – ಎಂದು ಆದ್ಯಂತ ಕಲಿತು ಬಳಸುತ್ತಿರು­ವವರಿಗಿಂತ ಅಗತ್ಯಕ್ಕೆ ಬೇಕಾದಷ್ಟು ತರಬೇತಿ ಪಡೆದು ಬಳಸುತ್ತಿರುವವರೇ ಹೆಚ್ಚು.

ದಿನವಹಿ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಯುವ ನಮ್ಮ ಬ್ಯಾಂಕುಗಳಲ್ಲಿ, ರೈಲು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ಥಳ ಕಾಯ್ದಿರಿಸುವ ಕೌಂಟರ್‌ಗಳು, ಇನ್ಸುರೆನ್ಸ್ ಕಂಪನಿಗಳಲ್ಲಿ ಗಣಕಯಂತ್ರಗಳನ್ನು ಬಳಸುವವರು  ಕಂಪ್ಯೂಟರ್‌ತಜ್ಞರೇನೂ ಅಲ್ಲ! ಅವರೂ ಅಗತ್ಯಕ್ಕೆ ಬೇಕಾದಷ್ಟುನ್ನು ಸಣ್ಣ ತರಬೇತಿ ಕಾರ್ಯಕ್ರಮಗಳಲ್ಲಿ ಕಲಿತು ಬಳಸುತ್ತಿರುವವರು. 

* ಇನ್ನು  ಕಂಪ್ಯೂಟರ್‌–ಕಲಿಕೆಗೆ ಇಂಗ್ಲಿಷ್‌ನ ಪ್ರೌಢಜ್ಞಾನವಿರಬೇಕು ಎಂಬುದೂ ಒಂದು ಮೂಢನಂಬಿಕೆ! ನಾವು ನಿತ್ಯಜೀವನದಲ್ಲಿ ಬಳಸುವಷ್ಟು ಇಂಗ್ಲಿಷ್ ಸಾಕು.

* ಕೊನೆಯದಾಗಿ, ನಮ್ಮ ರಸ್ತೆ ಬದಿಗಳಲ್ಲಿ ಟಿಕೆಟ್ ಬುಕ್ ಮಾಡುತ್ತೇವೆಂದೂ ಡಿಟಿಪಿ ಮಾಡುತ್ತೇವೆಂದು ಮಳಿಗೆಗಳಲ್ಲಿ ಕೂತಿರುವವರು  ಕಂಪ್ಯೂಟರ್‌–ತಜ್ಞರೇ?  ಕಂಪ್ಯೂಟರ್‌ನ ಕಲಿಕೆ ಅತ್ಯಂತ ಸಂತೋಷ ಕೊಡುವ ಚಟುವಟಿಕೆಯೇ ಹೌದು.

ಮಾನವ ಇದುವರೆಗೂ ಕಂಡುಹಿಡಿದಿರುವ ಅತಿ ಕೌತುಕದ ವಸ್ತು  ಎಂದರೆ ಅದು  ಕಂಪ್ಯೂಟರ್‌ ಎನ್ನಬಹುದು.  ಕಂಪ್ಯೂಟರ್‌ನ ತಂತ್ರಜ್ಞಾನವನ್ನು ಕನಿಷ್ಠ ನಮಗೆ ಆವಶ್ಯಕವಿರುವಷ್ಟನ್ನಾದರೂ ಕಲಿಯಲೇಬೇಕು. ಹೀಗೆ ಮಾಡುವುದರಲ್ಲಿ  ಕಂಪ್ಯೂಟರ್‌ ಎಂಬ ಕೌತುಕವನ್ನು ಬಳಸಿದ ತೃಪ್ತಿ ಮತ್ತು ಆನಂದಗಳನ್ನೂ ಹೊಂದಬಹುದು. ಬನ್ನಿ.ಕಂಪ್ಯೂಟರ್‌ನ ಕಲಿಕೆ ಆರಂಭಿಸಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT