ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದ ಬಾಂಧವ್ಯ

ರಾಷ್ಟ್ರೀಯ ತಂಡದ ನೇತೃತ್ವ ಸಂಭ್ರಮ
Last Updated 27 ನವೆಂಬರ್ 2016, 19:30 IST
ಅಕ್ಷರ ಗಾತ್ರ

‘ಬ್ಯಾಸ್ಕೆಟ್‌ಬಾಲ್‌ ಅಂಕಣದಲ್ಲಿ ಪಾದಗಳ ಚಲನೆಯ ಸ್ಪೀಡ್‌ ಹೆಚ್ಚಾಗಬೇಕು. ಬಾಲ್‌ ಪಾಸಿಂಗ್‌ನಲ್ಲಿ ಚಾಕಚಕ್ಯತೆ ತೋರಿಸಬೇಕು. ದೈಹಿಕ ಸಾಮರ್ಥ್ಯವನ್ನೂ ಹೆಚ್ಚಿಸಿಕೊಳ್ಳಬೇಕು. ಆಗಲೇ ಭಾರತ ತಂಡವು ಫಿಬಾ ಏಷ್ಯಾದಂತಹ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಲು ಸಾಧ್ಯ’ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಇತ್ತೀಚೆಗೆ ನಡೆದ ಫಿಬಾ ಏಷ್ಯಾ 18 ವರ್ಷದೊಳಗಿನ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಭಾರತ ತಂಡದ ನಾಯಕಿ ಯಾಗಿದ್ದ ಎಚ್‌.ಎಂ. ಬಾಂಧವ್ಯ ಅವರ ಅನಿಸಿಕೆ ಇದು. ಈ ಟೂರ್ನಿಯಲ್ಲಿ ಭಾರತ ತಂಡವು ಆರನೇ ಸ್ಥಾನ ಗಳಿಸಿದೆ.

ಟೂರ್ನಿಯ ಅನುಭವ, ಭಾರತ ತಂಡವು ಮಾಡಿಕೊಳ್ಳಬೇಕಿರುವ ಸುಧಾರಣೆ, ತಂಡಕ್ಕೆ ಸಿಗಬೇಕಿರುವ ಹೆಚ್ಚಿನ ಪ್ರೋತ್ಸಾಹ ಮುಂತಾದ ವಿಷಯಗಳ ಬಗ್ಗೆ ಅವರು ‘ಪ್ರಜಾವಾಣಿ’ ಜತೆಗೆ ಮಾತನಾಡಿದರು. ಹುಟ್ಟೂರಾದ ಮಂಡ್ಯ ಜಿಲ್ಲೆಯ ಹೆಮ್ಮಿಗೆ ಗ್ರಾಮದಲ್ಲಿ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

‘ಟೂರ್ನಿಯಲ್ಲಿ ಭಾಗವಹಿಸಿದ್ದ ಹನ್ನೆರಡು ರಾಷ್ಟ್ರಗಳ ಪೈಕಿ ನಮ್ಮ ತಂಡದ ಸ್ಥಾನ ಹೆಚ್ಚೂ ಕಡಿಮೆ ಮಧ್ಯದಲ್ಲಿದೆ. ಮೊದಲ ಮೂರು ಸ್ಥಾನಗಳ ಒಳಗಿನ ಸಾಧನೆ ಮಾಡಲು ಕಠಿಣ ಪ್ರಯತ್ನದ ಅವಶ್ಯಕತೆ ಇದೆ. ಚೀನಾ, ದಕ್ಷಿಣ ಕೊರಿಯಾ, ಚೀನಾ ತೈಪೆ, ಜಪಾನ್‌ನಂತಹ ತಂಡಗಳಿಗೆ ಹೋಲಿಸಿದಾಗ ನಾವು ಹಿಂದಿದ್ದೇವೆ’ ‘ನಮ್ಮ ತಂಡವು ಅಂಕಣದಲ್ಲಿ ಪಾದಗಳ ಚಲನೆಯ ಸ್ಪೀಡ್‌, ಬಾಲ್‌ ಪಾಸಿಂಗ್‌, ದೈಹಿಕ ಸಾಮರ್ಥ್ಯ ವಿಷಯದಲ್ಲಿ ಬಹಳಷ್ಟು ಸುಧಾರಣೆ ಕಾಣಬೇಕಿದೆ. ಬೇರೆ ದೇಶದ ತಂಡಗಳ ಆಟಗಾರರ ಸ್ಪೀಡ್‌, ಪಾಸಿಂಗ್‌ಗೆ ಹೋಲಿಸಿದರೆ, ನಮ್ಮ ಆಟ ಉತ್ತಮ ಪಡಿಸಿಕೊಳ್ಳಲು ಇನ್ನೂ ಸಾಕಷ್ಟು ಅವಕಾಶಗಳಿರುವುದು ಕಂಡು ಬಂದಿತು’ ಎನ್ನುತ್ತಾರೆ ಬಾಂಧವ್ಯ.

‘ಚೀನಾ, ಜಪಾನ್‌, ದಕ್ಷಿಣ ಕೊರಿಯಾ ದೇಶಗಳಲ್ಲಿ ಮಕ್ಕಳು ಚಿಕ್ಕವರಿದ್ದಾಗಲೇ ಆಟಕ್ಕೆ ಸೇರಿಸಲಾಗುತ್ತದೆ. ಪೋಷಕರೂ ಆಟಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಆದರೆ, ನಮ್ಮಲ್ಲಿ ಆಟದೊಂದಿಗೆ ಓದಿಗೂ ಹೆಚ್ಚಿನ ಲಕ್ಷ್ಯ ನೀಡಬೇಕು. ಓದಿನಲ್ಲಿ ಸ್ವಲ್ಪ ಹಿಂದುಳಿದರೆ ಆಟಕ್ಕೆ ಕಳುಹಿಸುವುದನ್ನೇ ನಿಲ್ಲಿಸಲಾಗುತ್ತದೆ. ಎರಡನ್ನೂ ಬ್ಯಾಲೆನ್ಸ್ ಮಾಡಲು ಬಹಳಷ್ಟು ಶ್ರಮ ಪಡಬೇಕಾಗುತ್ತದೆ. ಆಟಕ್ಕಿಂತ ಅಂಕಗಳ ಮೇಲೆಯೇ ಪೋಷಕರಿಗೆ ಹೆಚ್ಚಿನ ಲಕ್ಷ್ಯವಿರುತ್ತದೆ’. 

‘ನಾಲ್ಕನೇ ತರಗತಿ ಓದುವಾಗ ಆಟವಾಡಲು ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಒಂಬತ್ತನೇ ತರಗತಿಗೆ ಬರುವ ವೇಳೆಗೆ ಓದಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಆಟಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಸಾಧನೆಯ ಸಮಯದಲ್ಲಿ ಪ್ರೋತ್ಸಾಹದ ಕೊರತೆ ಬಹಳಷ್ಟು ಕ್ರೀಡಾಪಟುಗಳನ್ನು ಕಾಡುತ್ತದೆ. ಆದರೆ, ವಿದೇಶದಲ್ಲಿ ನಿರಂತರ ಪ್ರೋತ್ಸಾಹ ದೊರೆಯುತ್ತದೆ. ನಮ್ಮಲ್ಲಿಯೂ ಕ್ರೀಡೆಗೆ ಅಷ್ಟೇ ಪ್ರೋತ್ಸಾಹ ದೊರೆಯುವಂತಾಗಬೇಕು ಎನ್ನುತ್ತಾರೆ’  ಅವರು.

‘ಚೀನಾ, ಜಪಾನ್‌ ಮುಂತಾದ ತಂಡದ ಆಟಗಾರರು ಟೂರ್ನಿಗಾಗಿ ಏಳು ತಿಂಗಳ ಕಾಲ ಸತತವಾಗಿ ಅಭ್ಯಾಸ ನಡೆಸಿದ್ದಾರೆ. ನಮಗೆ ಎರಡು ತಿಂಗಳು ಮಾತ್ರ ಅಭ್ಯಾಸ ನಡೆಸಲು ಸಾಧ್ಯವಾಯಿತು. ಓದಿನ ಕಾರಣದಿಂದ ಹೆಚ್ಚು ದಿನ ತರಬೇತಿಗೆ ಹೋಗಲು ಸಾಧ್ಯವಾಗುವುದಿಲ್ಲ’ ಎಂದರು.

‘ಭಾರತದ ಸಿನಿಯರ್ ತಂಡದಲ್ಲಿಯೂ ಆಟವಾಡಿದ್ದೇನೆ. ಇಲ್ಲಿಯವರೆಗೆ ನಾಲ್ಕು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಿದ್ದೇನೆ. ಹಿರಿಯ ಆಟಗಾರರ ಹಾಗೂ ಉಳಿದ ತಂಡಗಳ ಆಟಗಾರರ ಆಟ ನೋಡಿ ಸಾಕಷ್ಟು ಕಲಿತಿದ್ದೇನೆ. ಕಲಿಯವುದು ಇನ್ನೂ ತುಂಬಾ ಇದೆ’

‘ಗ್ರಾಮೀಣ ಪ್ರದೇಶದಲ್ಲಿ ಬ್ಯಾಸ್ಕೆಟ್‌ಬಾಲ್‌ ಆಟ ಇನ್ನೂ ಅಪರಿಚಿತವಾಗಿಯೇ ಉಳಿದಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಹೆಚ್ಚಿನ ಪ್ರೋತ್ಸಾಹವಿದೆ. ಕರ್ನಾಟಕದಲ್ಲಿ ಗಮನಾರ್ಹ ಪ್ರೋತ್ಸಾಹ ಸಿಗುತ್ತಿದೆ. ಸೌಲಭ್ಯಗಳು ಉತ್ತಮವಾಗಿವೆ’

‘ಕ್ರಿಕೆಟ್‌ ಹಾಗೂ ಕಬಡ್ಡಿ ಆಟಗಳಿಗೆ ಹೋಲಿಸಿದರೆ, ಪ್ರೋತ್ಸಾಹದ ಕೊರತೆ ಕಾಣುತ್ತಿದೆ. ಜತೆಗೆ ಹೆಚ್ಚು, ಹೆಚ್ಚು ಟೂರ್ನಿಗಳು ಆಗಬೇಕು. ಆಗ ಅಭ್ಯಾಸಕ್ಕೆ ಹೆಚ್ಚಿನ ಅವಕಾಶ ಸಿಗುತ್ತದೆ.  ಹೆಚ್ಚು ಟೂರ್ನಿಗಳಾದರೆ ಒಳ್ಳೆಯದು’

‘ಅಂತರರಾಷ್ಟ್ರೀಯ ಟೂರ್ನಿಯೊಂದರಲ್ಲಿ ದೇಶದ ತಂಡದ ನೇತೃತ್ವ ವಹಿಸಿದ್ದು  ಬಹಳ ಖುಷಿ ತಂದಿದೆ. ಕೇವಲ ಆಟಗಾರ್ತಿಯಾಗಿದ್ದ ನನ್ನ ಆಟದ ಮೇಲೆ ಹೆಚ್ಚಿನ ಗಮನ ಕೊಟ್ಟಿದ್ದರೆ ಸಾಕಿತ್ತು. ನಾಯಕಿಯಾದಾಗ ತಂಡವಾಗಿ ಯೋಚನೆ ಮಾಡಬೇಕಾಗುತ್ತದೆ. ಆ ಸವಾಲನ್ನು ಸಮರ್ಥವಾಗಿ ಎದುರಿಸಿದ್ದೇನೆ’ ಎಂದರು.

ಬಾಂಧವ್ಯ ಅವರ ಹುಟ್ಟೂರು ಮಂಡ್ಯ ತಾಲ್ಲೂಕಿನ ಹೆಮ್ಮಿಗೆ. ಎಳವೆಯಲ್ಲಿಯೇ  ಕ್ರೀಡೆಯಲ್ಲಿ ಆಸಕ್ತಿ ಇತ್ತು. ಮಂಡ್ಯದ ಕ್ರೀಡಾ ವಸತಿ ನಿಲಯದಲ್ಲಿ ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿಯಾಗಿ ರೂಪುಗೊಂಡರು. ಈಗ ಮೂಡಬಿದಿರೆಯ ಆಳ್ವಾಸ್‌ ಸಂಸ್ಥೆಯಲ್ಲಿ ಬಿ.ಕಾಂ. ಮೊದಲ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ.

ರಾಷ್ಟ್ರೀಯ ಸಬ್‌ ಜೂನಿಯರ್‌ ಚಾಂಪಿಯನ್‌ಷಿಪ್‌, ಜೂನಿಯರ್‌ ಚಾಂಪಿಯನ್‌ಷಿಪ್‌, 22, 23ನೇ ಫಿಬಾ ಏಷ್ಯಾ ಟೂರ್ನಿ, ಸಿನಿಯರ್‌ ಏಷ್ಯನ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ ಸೇರಿದಂತೆ ಹಲವು ಟೂರ್ನಿಗಳಲ್ಲಿ ಭಾಗವಹಿಸಿ ಪದಕ ಗೆದ್ದುಕೊಂಡಿದ್ದಾರೆ.

ಇವರು ಎಚ್‌.ಕೆ.ಮಹೇಶ್‌ ಹಾಗೂ ಪುಟ್ಟತಾಯಮ್ಮ ದಂಪತಿಯ ಪುತ್ರಿ. ‘ತಂದೆ–ತಾಯಿಯ ಪ್ರೋತ್ಸಾಹ ಮತ್ತು ಕೋಚ್‌ ರವಿಪ್ರಕಾಶ್‌ ಅವರ ತರಬೇತಿ ಇಲ್ಲದಿದ್ದರೆ ನಾನು ಇವತ್ತು ಈ ಎತ್ತರಕ್ಕೆ ಏರಲು ಸಾಧ್ಯವೇ ಆಗುತ್ತಿರಲಿಲ್ಲ. ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ನ ಅಧ್ಯಕ್ಷ ಗೋವಿಂದರಾಜ್‌ ಅವರು ಎಲ್ಲಾ ಹಂತಗಳಲ್ಲಿಯೂ ನನ್ನ ಆಟದ ಸಾಮರ್ಥ್ಯವನ್ನು ಗುರುತಿಸಿ ಮಾರ್ಗದರ್ಶನ ನೀಡಿದ್ದಾರೆ ಮತ್ತು ಅವಕಾಶಗಳನ್ನು ಕೊಟ್ಟಿದ್ದಾರೆ. ಇದೀಗ ನಾನು ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದು, ಅಲ್ಲಿಯೂ ಉತ್ತಮ ಪ್ರೋತ್ಸಾಹವಿದೆ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT