ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆಗಳಿವೆ... ವೇದಿಕೆಯೇ ಇಲ್ಲ

ಮೈಸೂರಿನಲ್ಲಿ ಈಜು
Last Updated 27 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು ಬಳಿಕ ಅತಿ ಹೆಚ್ಚು ಕ್ರೀಡಾ ಚಟುವಟಿಕೆಗಳು ನಡೆಯುವ ಮೈಸೂರು ನಗರಿಯಲ್ಲಿ ಈಜುಕೊಳಗಳಿಗೆ ಬರ. ಸ್ಪರ್ಧಿಗಳಿಗೆ ಸರಿಯಾಗಿ ಲಭ್ಯವಾಗುತ್ತಿರುವ ಏಕೈಕ ಈಜುಕೊಳವೆಂದರೆ ಮೈಸೂರು ವಿ.ವಿಯದ್ದು ಮಾತ್ರ. ಈಜು ಕ್ಲಬ್‌ಗಳೂ ಇಲ್ಲಿಲ್ಲ. ಕೋಚ್‌ಗಳಿಗೂ ಕೊರತೆ ಇದೆ. ಹೀಗಾಗಿ, ಪ್ರತಿಭೆ ಅನಾವರಣಕ್ಕೆ ಸಮರ್ಪಕ ವೇದಿಕೆಯೇ ಇಲ್ಲದಂತಾಗಿದೆ. ಈ ಬಗ್ಗೆ ಕೆ. ಓಂಕಾರ ಮೂರ್ತಿ ಬರೆದಿದ್ದಾರೆ.

14 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರ ಮೈಸೂರು. ಆ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಿಶ್ವದ ಪ್ರಮುಖ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು, ಮಾಲ್‌ಗಳು, ಹೋಟೆಲ್‌ಗಳು, ವೃತ್ತಗಳು, ರಸ್ತೆಗಳು, ಕೈಗಾರಿಕೆಗಳು ತಲೆ ಎತ್ತುತ್ತಿವೆ. ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಷ್ಟೇ ಏಕೆ? ಬೆಂಗಳೂರಿನ ಬಳಿಕ ಅತಿ ಹೆಚ್ಚು ಕ್ರೀಡಾ ಚಟುವಟಿಕೆಗಳು ನಡೆಯುವುದು ಇಲ್ಲಿಯೇ. ಈ ಜಿಲ್ಲೆಯವರೇ ಈಗ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಸ್ಪರ್ಧಿಗಳಿಗೆ ಬೇಕಿರುವ ಅಂತರರಾಷ್ಟ್ರೀಯ ದರ್ಜೆಯ ಈಜುಕೊಳವೇ ಇಲ್ಲಿಲ್ಲ!

ನಗರದಲ್ಲಿ 50ಕ್ಕೂ ಹೆಚ್ಚು ಕ್ರಿಕೆಟ್‌ ಕ್ಲಬ್‌ಗಳಿವೆ. ಬೇಕಾದಷ್ಟು ಮೈದಾನಗಳಿವೆ. ಹೆಸರಾಂತ ಶಿಕ್ಷಣ ಸಂಸ್ಥೆಗಳಿವೆ. ಸರ್ಕಾರಕ್ಕೆ ಸೇರಿದ ವಿಶಾಲ ಜಮೀನೂ ಇದೆ. ಆದರೆ, ಈಜುಕೊಳ ನಿರ್ಮಿಸಬೇಕೆಂಬ ಕಲ್ಪನೆ ಯಾರಿಗೂ ಹೊಳೆದಿಲ್ಲ.

ಇರುವ ಒಂದು ಈಜುಕೊಳ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿದ್ದು. ಬೇಸಿಗೆ ರಜೆ ಬಂತೆಂದರೆ ಈ ಈಜುಕೊಳ ದಲ್ಲಿ ಇನ್ನಿಲ್ಲದ ನೂಕುನುಗ್ಗಲು. ಬೇರೆ ಸಮಯದಲ್ಲೂ ಭರ್ತಿಯಾಗಿರುತ್ತದೆ. ನಗರದ ಬೇರೆ ಕಡೆ ಸರಿಯಾದ ಈಜುಕೊಳ ಇಲ್ಲದ ಕಾರಣ ಎಲ್ಲರೂ ಇಲ್ಲಿಗೆ ಬರುತ್ತಾರೆ. 50ವರ್ಷಗಳ ಹಿಂದಯೇ ಕಟ್ಟಲಾಗಿರುವ ಈಜುಕೊಳ ಅಂತರರಾಷ್ಟ್ರೀಯ ದರ್ಜೆಯದ್ದಲ್ಲ.

‘ಮೈಸೂರು ನಗರ ಬದಲಾದರೂ ಈಜುಕೊಳದ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಸಾರ್ವಜನಿಕರಿಗೆ ಸುಲಭವಾಗಿ ಕೈಗೆಟುಕುವ ಮತ್ತೊಂದು ಈಜುಕೊಳ ನಿರ್ಮಾಣವಾಗಲೇ ಇಲ್ಲ. ರಾಜ್ಯದಲ್ಲಿ ಈಜು ಕ್ರೀಡೆ ಕೇವಲ ಬೆಂಗಳೂರಿಗೆ ಸೀಮಿತವಾಗಿರುವಂತಿದೆ’ ಎಂದು ಹೇಳುತ್ತಾರೆ ಮೈಸೂರು ವಿ.ವಿ ಈಜು ಕೋಚ್‌ ಪುಟ್ಟಸ್ವಾಮಿ.

ಡ್ರೆಸ್ಸಿಂಗ್‌ ಕೊಠಡಿ ಹಾಗೂ ಇತರ ಕಾಮಗಾರಿ ನಡೆಯುತ್ತಿರುವುದರಿಂದ ಸರಸ್ವತಿಪುರಂನಲ್ಲಿರುವ ವಿ.ವಿ ಈಜುಕೊಳ ಕೆಲವೊಮ್ಮೆ ಮುಚ್ಚಿರುತ್ತದೆ. ಹೀಗಾಗಿ, ಸ್ಪರ್ಧಿಗಳು ಅಭ್ಯಾಸವನ್ನೇ ನಿಲ್ಲಿಸಬೇಕಾದ ಪರಿಸ್ಥಿತಿ ಈ ಊರಲ್ಲಿ ನಿರ್ಮಾಣವಾಗಿದೆ.

‘ಹೆಚ್ಚು ಈಜುಕೊಳಗಳು ಇರಬೇಕು ಹಾಗೂ ಹೆಚ್ಚು ಸ್ಪರ್ಧೆಗಳು ನಡೆಯಬೇಕು. ಆಗ ಈಜು ಸ್ಪರ್ಧೆ ಮೇಲೆ ಆಸಕ್ತಿ ಮೂಡುತ್ತದೆ. ಹೆಚ್ಚು ಮಂದಿ ಪಾಲ್ಗೊಳ್ಳುತ್ತಾರೆ. ಆದರೆ, ಈಜುಕೊಳಗಳೇ ಇಲ್ಲದಿದ್ದರೆ ಪ್ರತಿಭೆಗಳು ಅರಳುವುದಾದರೂ ಹೇಗೆ’ ಎಂದು ಪುಟ್ಟಸ್ವಾಮಿ ಪ್ರಶ್ನಿಸುತ್ತಾರೆ.

ಮೈಸೂರಿನಿಂದ ಸದ್ಯ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಈಜುಪಟುಗಳೆಂದರೆ ಎ.ತೇಜಸ್‌, ಕೀರ್ತನಾ ಹಾಗೂ ಆಶೀಶ್‌ . ಹೆಚ್ಚು ಈಜುಕೊಳಗಳು ಇದ್ದಿದ್ದರೆ ಮತ್ತಷ್ಟು ಈಜುಪಟುಗಳು ಹೊರಹೊಮ್ಮುತ್ತಿದ್ದರೊ ಏನೋ? ‘ಬೆಂಗಳೂರಿನಂಥ ಸೌಲಭ್ಯ ಇಲ್ಲಿ ಇದ್ದಿದ್ದರೆ ಪ್ರದರ್ಶನ ಮಟ್ಟದಲ್ಲಿ ಖಂಡಿತ ಮತ್ತಷ್ಟು ಸುಧಾರಣೆ ಕಾಣಬಹುದಿತ್ತು. ಜೊತೆಗೆ ಇಲ್ಲಿ ಸ್ಪರ್ಧಿಗಳು ಹಾಗೂ ಸ್ಪರ್ಧೆಗಳು ಕಡಿಮೆ’ ಎಂದು ಪ್ರತಿಕ್ರಿಯಿಸುತ್ತಾರೆ ಕೀರ್ತನಾ.

ಗುತ್ತಿಗೆಯ ಎಡವಟ್ಟು
ಜೆ.ಪಿ.ನಗರದಲ್ಲಿರುವ ಪಂಡಿತ ಪುಟ್ಟರಾಜು ಗವಾಯಿ ಕ್ರೀಡಾ ಸಂಕೀರ್ಣದಲ್ಲಿ ಈಚೆಗೆ ಈಜುಕೊಳ ನಿರ್ಮಿಸಲಾಗಿದೆ. ಆದರೆ, ಮೈಸೂರು ಮಹಾನಗರ ಪಾಲಿಕೆಯು ಇದರ ನಿರ್ವಹಣೆಯನ್ನು 30 ವರ್ಷಗಳ ಅವಧಿಗೆ ಖಾಸಗಿ ಸಂಸ್ಥೆಯವರಿಗೆ ಗುತ್ತಿಗೆ ನೀಡಿದೆ. ಪಾಲಿಕೆಯ ಜಮೀನಿನಲ್ಲಿ ಗುತ್ತಿಗೆದಾರರೇ ಈಜುಕೊಳ ನಿರ್ಮಿಸಿ, ನಿರ್ವಹಣೆ ಮಾಡುತ್ತಿದ್ದಾರೆ. ಹೀಗಾಗಿ, ಸಾರ್ವಜನಿಕರಿಗೆ ಹಾಗೂ ಸ್ಪರ್ಧಿಗಳಿಗೆ ಸುಲಭವಾಗಿ ಪ್ರವೇಶ ಸಿಗುತ್ತಿಲ್ಲ. ಸುತ್ತಮುತ್ತಲಿನ ಜನರೇ ಈ ಬಗ್ಗೆ ದೂರು ನೀಡುತ್ತಿದ್ದಾರೆ. ಶಾಲಾ ಕಾಲೇಜುಗಳ ಮಕ್ಕಳಿಗೆ ಸುಲಭವಾಗಿ ಸಿಗದಂಥ ಪರಿಸ್ಥಿತಿ ಇದೆ. ನಿತ್ಯ ಈಜಕೊಳದ ಬಳಕೆಗೆ ₹ 40 ಶುಲ್ಕ ಬೇರೆ.

ಆರು ಈಜುಕೊಳಕ್ಕೆ ಟೆಂಡರ್‌
ಮೈಸೂರು ನಗರದ ನಾಲ್ಕು ಭಾಗಗಳಲ್ಲಿ ಸುಸಜ್ಜಿತ ಈಜುಕೊಳ ನಿರ್ಮಿಸಬೇಕು ಎಂಬುದು ಹಲವು ವರ್ಷಗಳ ಮಾತು. ಹೊಸದಾಗಿ ಆರು ಈಜುಕೊಳ ನಿರ್ಮಿಸಲು ಮಹಾನಗರ ಪಾಲಿಕೆಯೇನೋ ಯೋಜನೆ ರೂಪಿಸಿದೆ. ಆದರೆ, ಈ ಎಲ್ಲಾ ಈಜುಕೊಳಗಳ ನಿರ್ಮಾಣ ಹಾಗೂ ನಿರ್ವಹಣೆಯನ್ನು ಗುತ್ತಿಗೆ ನೀಡಲು ಮುಂದಾಗಿದೆ. ಹೀಗಾದರೆ, ಸಾರ್ವಜನಿಕರಿಗೆ ಸುಲಭವಾಗಿ ಸಿಗುವುದಿಲ್ಲ ಎಂಬುದು ಕೋಚ್‌ ಹಾಗೂ ಪೋಷಕರ ಆತಂಕ.

ಈಗಾಗಲೇ ಮೂರು ಈಜುಕೊಳಗಳ ನಿರ್ಮಾಣ ಹಾಗೂ ನಿರ್ವಹಣೆಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ‘30 ವರ್ಷಗಳ ಅವಧಿಯ ನಿರ್ವಹಣೆಗೆ ಗುತ್ತಿಗೆ ನೀಡಲಾಗಿದ್ದು, ಸಾರ್ವಜನಿಕರ ಬಳಕೆಗೆ ಗಂಟೆಗೆ ₹ 40 ದರ ನಿಗದಿಪಡಿಸಲು ಸೂಚಿಸಲಾಗಿದೆ. ಪಾಲಿಕೆ ವತಿಯಿಂದ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಹೆಚ್ಚು ಹೊರೆ ಬೀಳುತ್ತದೆ’ ಎನ್ನುತ್ತಾರೆ ಮೈಸೂರು ಮೇಯರ್‌ ಬಿ.ಎಲ್‌.ಭೈರಪ್ಪ.

ನಿವೇದಿತಾ ನಗರ ಕ್ರೀಡಾಂಗಣದಲ್ಲಿ, ನಾರಾಯಣ ಶಾಸ್ತ್ರಿ ರಸ್ತೆಯ ಭಾವಸಾರ ಈಜುಕೊಳ ಹಾಗೂ ಉದಯಗಿರಿಯ ಅಲಿ ಪಾರ್ಕ್‌ನಲ್ಲಿ ಈಜುಕೊಳ ನಿರ್ಮಿಸಲಾಗುತ್ತಿದೆ. ಉಳಿದ ಮೂರು ಈಜುಕೊಳಗಳ ನಿರ್ಮಾಣಕ್ಕೆ ಟೆಂಡರ್‌ ಕರೆಯಲು ಸಿದ್ಧತೆ ನಡೆದಿದೆ. ಕನ್ನೇಗೌಡ ಕ್ರೀಡಾಂಗಣ, ಎನ್‌.ಆರ್‌.ಮೊಹಲ್ಲಾ ಹಾಗೂ ಗೋಕುಲಂನಲ್ಲಿ ಈ ಈಜುಕೊಳ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಆದರೆ, ಈಜುಕೊಳಗಳು ಬಳಕೆಗೆ ಲಭ್ಯವಾಗಲು ಇನ್ನೆಷ್ಟು ವರ್ಷಗಳು ಬೇಕೋ ಏನೋ?

ಫೆಲ್ಪ್ಸ್‌ ಪ್ರತಿಷ್ಠಾನ
ಮೈಸೂರಿನ ಅಸೋಸಿಯೇಷನ್ ಆಫ್ ಇಂಟಿಗ್ರೇಟೆಡ್ ಮೈಸೂರು ಈಜು ಸಂಸ್ಥೆಯು ಅಮೆರಿಕದ ಮೈಕೆಲ್‌ ಫೆಲ್ಪ್ಸ್ ಪ್ರತಿಷ್ಠಾನದೊಂದಿಗೆ ಒಪ್ಪಂದ ಮಾಡಿಕೊಂಡು ಸ್ಪರ್ಧಾತ್ಮಕ ಈಜುಪಟುಗಳನ್ನು ತರಬೇತುಗೊಳಿಸುತ್ತಿದೆ. ಸುಮಾರು 15 ಈಜುಪಟುಗಳು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ‘ಮೈಸೂರಿನಲ್ಲಿ ಇರುವ ಪ್ರಮಾಣೀಕೃತ ಈಜು ಕೋಚ್‌ಗಳ ಸಂಖ್ಯೆ ಕೇವಲ ಮೂರು. ಕ್ರೀಡಾ ಇಲಾಖೆಯಿಂದ ಜಿಲ್ಲೆಗೆ ಕೋಚ್‌ ನೇಮಿಸಿಲ್ಲ. ಹೀಗಾಗಿ, ಇಲ್ಲಿನ ಮಕ್ಕಳು ಇತಿಮಿತಿಯಲ್ಲಿ ಈಜು ಕಲಿಯಬೇಕಿದೆ’ ಎಂದು ಪ್ರತಿಷ್ಠಾನದ ಕೋಚ್‌ ಸುಂದರೇಶನ್‌ ಹೇಳುತ್ತಾರೆ.

ಮುಗಿಯದ ಈಜುಕೊಳ ಕಾಮಗಾರಿ
ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಈಜುಕೊಳಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ₹ 3.62 ಕೋಟಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ದರ್ಜೆಯ ಈಜುಕೊಳ ನಿರ್ಮಿಸಲು 2013ರಲ್ಲಿ ಗುತ್ತಿಗೆ ನೀಡಲಾಗಿತ್ತು. 10 ಲೇನ್‌ಗಳ 25x50 ಮೀ. ಅಳತೆಯ ಈಜುಕೊಳ ಹಾಗೂ 21x21 ಮೀ. ಅಳತೆಯ ಅಭ್ಯಾಸ ಈಜುಕೊಳ ನಿರ್ಮಿಸಲಾಗುತ್ತಿದೆ.

‘ಈಜುಕೊಳ ನಿರ್ಮಾಣ ವಿಳಂಬವಾಗಿರುವುದು ನಿಜ. ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿದ್ದು, ಹಣ ಬಿಡುಗಡೆ ಆಗಬೇಕಿದೆ. ಜನವರಿ ವೇಳೆಗೆ ಚಾಲನೆ ಸಿಗಲಿದ್ದು, ಸಾರ್ವಜನಿಕರ ಉಪಯೋಗಕ್ಕೆ ದೊರೆಯಲಿದೆ’ ಎಂದು ಹೇಳುತ್ತಾರೆ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್‌.

ಮಕ್ಕಳಿಗೆ ತೊಂದರೆ
ದಸರಾ ಕ್ರೀಡಾಕೂಟ ಶುರುವಾಗಿ 50 ವರ್ಷಗಳಾದರೂ ಮೈಸೂರಿನಲ್ಲಿ ಕ್ರೀಡಾ ಇಲಾಖೆ ವತಿಯಿಂದ ಒಂದೂ ಈಜುಕೊಳ ನಿರ್ಮಿಸಿಲ್ಲ. ಕೋಚ್‌ಗಳು ಇಲ್ಲ. ಸ್ಪರ್ಧೆಗಳಂತೂ ಮೊದಲೇ ನಡೆಯಲ್ಲ. ಹೀಗಾಗಿ, ಈ ಭಾಗದ ಮಕ್ಕಳು ಈಜು ಸ್ಪರ್ಧೆಯಲ್ಲಿ ಹಿಂದೆ ಬಿದ್ದಿದ್ದಾರೆ ಎನ್ನುತ್ತಾರೆ ದೈಹಿಕ ಶಿಕ್ಷಣ ತಜ್ಞ ಶೇಷಣ್ಣ.

ಈಜು ಕಲಿಯಲು ಮೈಸೂರಿನ ಮಕ್ಕಳು ಬೆಂಗಳೂರಿಗೆ ಹೋಗಬೇಕಾದ ಇದೆ. ದಸರಾ ಈಜು ಸ್ಪರ್ಧೆ ಆಯೋಜಿಸಲ್ಲೂ ಇಲ್ಲಿ ತೊಂದರೆಯಾಗುತ್ತಿದೆ. ತರಬೇತಿಗಾಗಿ, ಶಿಬಿರಕ್ಕಾಗಿ, ಸ್ಪರ್ಧೆ ನಡೆಸಲು ಕೂಡ ಮೈಸೂರು ವಿ.ವಿ ಈಜುಕೊಳವೊಂದನ್ನೇ ಅವಲಂಬಿಸಬೇಕಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಕೀರ್ತನಾ, ತೇಜಸ್‌ ಎಂಬ ಪ್ರತಿಭೆಗಳು...
ಮೈಸೂರಿನಲ್ಲಿ ಸದ್ಯ ಗಮನ ಸೆಳೆಯುತ್ತಿರುವ ಈಜುಪಟುಗಳೆಂದರೆ ಎಂ.ಎಸ್‌.ಕೀರ್ತನಾ, ಎ.ತೇಜಸ್‌ ಹಾಗೂ ಆಶೀಶ್‌. ಪ್ರಮತಿ ಹಿಲ್‌ ವ್ಯೂ ಶಿಕ್ಷಣ ಸಂಸ್ಥೆಯ ಕೀರ್ತನಾ ಅವರು ಭೋಪಾಲ್‌ನಲ್ಲಿ ನಡೆದ ರಾಷ್ಟ್ರೀಯ ಶಾಲಾ ಈಜು ಚಾಂಪಿಯನ್‌ಷಿಪ್‌ನಲ್ಲಿ ಮೂರು ಕಂಚಿನ ಪದಕ ಗೆದ್ದು ಬಂದಿದ್ದಾರೆ. ದಸರಾ ಈಜು ಸ್ಪರ್ಧೆಯ 400 ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಮೈಸೂರು ನಗರ ಅಂತರ ಕಾಲೇಜುಮಟ್ಟದ ಈಜು ಸ್ಪರ್ಧೆಯಲ್ಲಿ ಕೀರ್ತನಾ 9 ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಅವರು 200 ಮೀಟರ್ ವೈಯಕ್ತಿಕ ಮೆಡ್ಲೆ, 50 ಮೀ. ಬ್ಯಾಕ್‌ಸ್ಟ್ರೋಕ್‌, 200 ಮೀ. ಫ್ರೀಸ್ಟೈಲ್‌, 100 ಮೀ.ಬ್ಯಾಕ್‌ಸ್ಟ್ರೋಕ್‌, 400 ಮೀ.ಫ್ರೀಸ್ಟೈಲ್‌, 100 ಮೀ.ಬಟರ್‌ಫ್ಲೈ, 200 ಮೀ. ಬ್ಯಾಕ್‌ಸ್ಟ್ರೋಕ್‌, 50 ಮೀ.ಫ್ರೀಸ್ಟೈಲ್‌, 50 ಮೀ.ಬಟರ್‌ಫ್ಲೈ ವಿಭಾಗಗಳಲ್ಲಿ ಮೊದಲ ಸ್ಥಾನ ಪಡೆದಿದ್ದರು.

ಮಹಾರಾಜ ಕಾಲೇಜಿನ ತೇಜಸ್‌ ಏಳು ವಿಭಾಗಗಳಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಅವರು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಈಜು ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದಾರೆ. ವಾಟರ್‌ ಪೋಲೊ ಸ್ಪರ್ಧೆಯಲ್ಲಿ ಆಶೀಶ್‌ ಮಿಂಚುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT