ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕೇಶಿಯಾ, ನೀಲಗಿರಿಯ ಅಪಾಯ

Last Updated 27 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಳಗಾವಿಯಲ್ಲಿ  ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಇನ್ನು ಮುಂದೆ ಅಕೇಶಿಯಾ ಹಾಗೂ ನೀಲಗಿರಿ ಸಸಿಗಳನ್ನು ನೆಡುವುದನ್ನು ನಿಷೇಧಿಸುವ ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ. ಇವುಗಳಿಂದ ಆಗುತ್ತಿರುವ ಹಾನಿಯ ಕುರಿತು ರೈತರು, ವಿಜ್ಞಾನಿಗಳು ಹಲವಾರು ವರ್ಷಗಳಿಂದ ತಮ್ಮ ನಿಖರವಾದ ಅಭಿಪ್ರಾಯ ಮಂಡಿಸುತ್ತಾ ಬಂದಿದ್ದರೂ ಹಿಂದಿನ ಸರ್ಕಾರಗಳು ಇದನ್ನು ನಿಷೇಧಿಸುವ ಕ್ರಮ ಕೈಗೊಂಡಿರಲಿಲ್ಲ.

ಕರ್ನಾಟಕದಲ್ಲಿ ನೀಲಗಿರಿ ಗಿಡಗಳನ್ನು ವ್ಯಾಪಕವಾಗಿ ಬೆಳೆಸಲು ಆರಂಭವಾಗಿದ್ದು 1980ರ ದಶಕದಲ್ಲಿ. ವಿಶ್ವಬ್ಯಾಂಕ್‌ನ ಸಾಮಾಜಿಕ ಅರಣ್ಯ ಯೋಜನೆ ಅಡಿಯಲ್ಲಿ ನೀಲಗಿರಿ ನೆಡುತೋಪು ಬೆಳೆಸಲಿಕ್ಕೆ ಅರಣ್ಯ ಇಲಾಖೆಯು ಹೆಚ್ಚಿನ ಪ್ರಾಮುಖ್ಯ ನೀಡಿತು. ಮಲೆನಾಡಿನಲ್ಲಿ ನೈಸರ್ಗಿಕ ಅರಣ್ಯ ಕಡಿದು ನೀಲಗಿರಿ ನೆಡಲಾಯಿತು.

ಬಯಲು ಸೀಮೆಯಲ್ಲಿ ಗೋಮಾಳಗಳನ್ನು ನೀಲಗಿರಿ ನೆಡುತೋಪಿಗಾಗಿ ಬಲಿಕೊಡಲಾಯಿತು. ನೀಲಗಿರಿಯು ಅತೀ ಶೀಘ್ರ ಬೆಳೆದು ನೀರಿನ ಸೆಲೆಗಳನ್ನು ಬರಡಾಗಿಸಿ, ಜಾನುವಾರುಗಳಿಗೆ ಮೇವಿಲ್ಲದಂತೆ ಮಾಡಿದಾಗ ರಾಜ್ಯದ ರೈತ ಸಂಘವು ನೀಲಗಿರಿ ವಿರುದ್ಧ ವ್ಯಾಪಕವಾದ ಜನಾಂದೋಲನವನ್ನು ಮಾಡಿ ಇದನ್ನು ನಿಷೇಧಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದನ್ನು ನಾವು ನೆನಪಿಸಿಕೊಳ್ಳಬೇಕು.

ಈ ಒತ್ತಡದಿಂದಾಗಿ ಗೋಮಾಳ ಹಾಗೂ ಅರಣ್ಯ ಪ್ರದೇಶಗಳಲ್ಲಿ ನೀಲಗಿರಿ ನೆಡುವುದನ್ನು ಇಲಾಖೆ ನಿಷೇಧಿಸಿತು. ಆದರೆ ರೈತರ ಸ್ವಂತ ಜಮೀನಿನಲ್ಲಿ, ಬರಡಾದ ಪ್ರದೇಶದಲ್ಲಿ ನೀಲಗಿರಿ ಬೆಳೆಸುವ ಕ್ರಮ ಇಂದಿಗೂ ಜಾರಿಯಲ್ಲಿದೆ. ಕಾಗದ ಹಾಗೂ ಪಾಲಿಫೈಬರ್ ಕಾರ್ಖಾನೆಯವರು ತಮ್ಮ ಬೇಡಿಕೆ ಪೂರೈಕೆಗಾಗಿ ಇಂದಿಗೂ ನೀಲಗಿರಿ ಬೆಳೆಯಲು ದೊಡ್ಡ ಪ್ರಮಾಣದಲ್ಲಿ ಯೋಜನೆ ಜಾರಿಗೊಳಿಸುತ್ತಿದ್ದಾರೆ. ಆದರೆ ಸರ್ಕಾರ ಇದನ್ನು ನಿಷೇಧಿಸಿಲ್ಲ.

ಅಕೇಶಿಯಾ ನೆಡುತೋಪಿನ ನಿರ್ಮಾಣ ಬ್ರಿಟಿಷ್ ಸರ್ಕಾರದ ನೆರವಿನ ಪಶ್ಚಿಮಘಟ್ಟ ಅಭಿವೃದ್ಧಿ ಯೋಜನೆಯಡಿಯಲ್ಲಿ ವ್ಯಾಪಕವಾಗಿ ನಡೆಯಿತು. ಒಂದು ಅಂದಾಜಿನ ಪ್ರಕಾರ ಇಂದು ರಾಜ್ಯದಲ್ಲಿ ಅಕೇಶಿಯಾ ಗಿಡಗಳ ಜಾತಿಯ ನೆಡುತೋಪು 4 ಲಕ್ಷ ಎಕರೆಗೂ ಮೀರಿದೆ. ರಾಜ್ಯದ ಅರಣ್ಯದಲ್ಲಿ ಎಲ್ಲಿ ನೋಡಿದರೂ ಏಕಚಕ್ರಾಧಿಪತಿಯಂತೆ ಕಾಡಿನ ರಾಜವೃಕ್ಷವಾಗಿ ರಾರಾಜಿಸುತ್ತಿದೆ!

ಹಣ ಗಳಿಸಬೇಕೆಂಬ ಒಂದೇ ಪ್ರಮುಖ ಉದ್ದೇಶವನ್ನು ಇಟ್ಟುಕೊಂಡು ಅರಣ್ಯ ಇಲಾಖೆಯು ರಾಜ್ಯದಾದ್ಯಂತ ಆಸ್ಟ್ರೇಲಿಯಾ ಮೂಲದ ಅಕೇಶಿಯಾ ನೆಡುತೋಪನ್ನು ಬೆಳೆಸುವ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ಇದನ್ನು ಪ್ರಸಾರ ಮಾಡುವುದು ಸುಲಭವಾಗಿತ್ತು. ಅಕೇಶಿಯಾದ ಎಲೆಗಳು ದಪ್ಪವಾಗಿದ್ದು ಅದನ್ನು ಜಾನುವಾರುಗಳು ಮೇಯಲು ಇಷ್ಟಪಡುವುದಿಲ್ಲ. ಹೀಗಾಗಿ ಜಾನುವಾರುಗಳ ಒತ್ತಡವನ್ನು ತಡೆದುಕೊಂಡು ಶೀಘ್ರ ಗತಿಯಲ್ಲಿ ಬೆಳೆಯುವ ಗಿಡವಾಗಿ ಅಕೇಶಿಯಾ ಹೆಚ್ಚಿನ ಪ್ರಾಮುಖ್ಯ ಪಡೆಯಿತು.

ವಿದೇಶಿ ಹಣದಿಂದ ಅರಣ್ಯೀಕರಣ ಯೋಜನೆ ಕೈಗೊಂಡರು. ತಪಾಸಣೆಗೆ ಬಂದಾಗ ನೆಟ್ಟ ಗಿಡಗಳಲ್ಲಿ ಎಷ್ಟು ಬದುಕಿವೆ, ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿವೆ ಎಂಬುದನ್ನು ಅರಿಯಲು ಅವರನ್ನು ಅಕೇಶಿಯಾ ನೆಡುತೋಪುಗಳಿಗೆ ಕರೆದೊಯ್ಯುತ್ತಿದ್ದರು. ತಮ್ಮ ಹಣದಿಂದ ಸರಿಯಾಗಿ ಅರಣ್ಯೀಕರಣವಾಗುತ್ತಿದೆ ಎಂದು ಹಣ ನೀಡಿದವರಿಗೆ ಸಮಾಧಾನ, ತಮ್ಮ ಸಾಧನೆಯನ್ನು ತೋರಿಸಲು ಅರಣ್ಯ ಇಲಾಖೆಗೆ ಇದೊಂದು ಸಾಧನವಾಗಿತ್ತು.

ಈ ಕಾರಣಗಳಿಂದಾಗಿ ಅಕೇಶಿಯಾ ಬಹುಬೇಗನೆ ಅರಣ್ಯ ಇಲಾಖೆಯ ‘ರಾಜ’ ವೃಕ್ಷವಾಗಿ ರಾಜ್ಯದ ಅರಣ್ಯ ಪ್ರದೇಶಕ್ಕೆ ಲಗ್ಗೆ ಇಟ್ಟಿತು. ಶಿವಮೊಗ್ಗ ಜಿಲ್ಲೆಯ ಹೊಸನಗರದ ಶರಾವತಿ ಜಲಾನಯನ ಪ್ರದೇಶದಲ್ಲಿ ಇದ್ದಂತಹ ಕಾಡನ್ನು, ಕುರುಚಲು ಗಿಡಗಳನ್ನು  ನಾಶಪಡಿಸಿ ಸ್ಥಳೀಯವಾಗಿದ್ದ ಗಿಡಗಳನ್ನು ಬೇರುಸಹಿತ ಕಿತ್ತು ಅವುಗಳನ್ನು ಬೆಂಕಿ ಹಚ್ಚಿ ನಾಶಪಡಿಸಿ ನಂತರ ಅದೇ ಸ್ಥಳದಲ್ಲಿ ಅಕೇಶಿಯಾ ನೆಡುತೋಪನ್ನು ಬೆಳೆಸುವ ವಿಧಾನ ಬೆಳೆದು ಬಂತು. ಜನರ ಉರುವಲಿನ ಬೇಡಿಕೆ ಈಡೇರಿಸುವ ಉದ್ದೇಶ ಹೊಂದಿದ್ದರೂ ಅಂತಿಮವಾಗಿ ಅರಣ್ಯ ಆಧಾರಿತ ಉದ್ದಿಮೆಗಳಿಗೆ ಅಕೇಶಿಯಾ ನೆಡುತೋಪುಗಳನ್ನು ಕಟಾವು ಮಾಡಿ ಮಾರಾಟ ಮಾಡುವ ಪರಂಪರೆಯನ್ನು ಅರಣ್ಯ ಇಲಾಖೆ ನಿಷ್ಠೆಯಿಂದ ಪಾಲಿಸಿಕೊಂಡು ಬಂದಿದೆ.

ಸರ್ಕಾರವು ಅರಣ್ಯ ಸಂರಕ್ಷಣೆಗಾಗಿ ಜಾರಿಗೊಳಿಸಿದ, ಜಂಟಿ ಅರಣ್ಯ ಯೋಜನೆ ಅಡಿ ‘ಪಾಲಿಸಿದರೆ ಪಾಲು’ ಎಂಬ ನೀತಿಯಡಿಯಲ್ಲಿ ನೆಡುತೋಪಿನ ಆದಾಯದಲ್ಲಿ ಶೇ 50ರಷ್ಟು ಅರಣ್ಯ ಸಮಿತಿಗಳಿಗೆ ನೀಡುವ ಕ್ರಮದಿಂದಾಗಿ ಅರಣ್ಯ ಸಮಿತಿಗಳು ಹೆಚ್ಚಿನ ಪ್ರಮಾಣದಲ್ಲಿ ಅಕೇಶಿಯಾ ನೆಡುತೋಪನ್ನು ಬೆಳೆಸಲು  ಮುಂದೆ ಬಂದಿವೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮ ಅರಣ್ಯ ಸಮಿತಿಗಳು ಹಣ ಗಳಿಸಿರುವುದು ಅಕೇಶಿಯಾ ನೆಡುತೋಪಿನ ಕಟಾವಿನಿಂದ ಎಂದು ಹೇಳಬಹುದು.

ಇದೇ ಮಾದರಿಯಲ್ಲಿ ರಾಜ್ಯದ ಶಾಲೆಗಳ ಆವಾರದಲ್ಲಿ ಆರಂಭಿಸಲಾದ ‘ಶಾಲಾವನ’ ಕಾರ್ಯಕ್ರಮದ ಯಶಸ್ಸಿನಲ್ಲಿ ಸಹ ಅಕೇಶಿಯಾದ್ದೆ ಪ್ರಾಮುಖ್ಯತೆ. ಕಟಾವಾದ ಗಿಡಗಳ ಆದಾಯದಲ್ಲಿ ಶಾಲೆಗಳು ಅರ್ಧ ಹಣ ಪಡೆಯುವ ಧಾವಂತದಲ್ಲಿ ಇದಕ್ಕೆ ಆದ್ಯತೆ ನೀಡಿವೆ.

ನೆಡುತೋಪು ಬೆಳೆಸುವಾಗ ಒಂದೇ ಜಾತಿಯ ಗಿಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ, ತೀವ್ರ ಸಾಂದ್ರತೆಯಲ್ಲಿ ಅಂತರವಿಲ್ಲದೇ ನೆಡಲಾಗುತ್ತದೆ. ಹೀಗೆ ನೆಟ್ಟಾಗ ಅವುಗಳು ಅಡ್ಡ ಬೆಳೆಯದೆ ನೇರವಾಗಿ ಬೆಳೆದು ಎತ್ತರದ ಗಳಗಳಾಗಿ, ಮರದ ದಿಮ್ಮಿಗಳಾಗಿ ಬೆಳೆಯುತ್ತವೆ. ಈ ನೆಡುತೋಪು ಆ ಪ್ರದೇಶದಲ್ಲಿರುವ ಮಣ್ಣಿನ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ  ಮಣ್ಣನ್ನು ಬರಡಾಗಿಸುತ್ತದೆ. ಎರಡನೆಯ ಕಂತಿನಲ್ಲಿ ಗಿಡ ಬೆಳೆಯುವಾಗ ರಾಸಾಯನಿಕ ಗೊಬ್ಬರ ಬಳಕೆ ಅನಿವಾರ್ಯವಾಗುತ್ತದೆ. 

ಈಗ ಅಕೇಶಿಯಾ, ನೀಲಗಿರಿ ನಿಷೇಧ ಜಾರಿ ಆದರೂ ರೈತರು ತಮ್ಮ ಸ್ವಂತ ಜಮೀನಿನಲ್ಲಿ ಅದನ್ನು ಬೆಳೆಯುವುದಕ್ಕೆ ನಿಷೇಧ ಇಲ್ಲ.  ಅಕೇಶಿಯಾ ನೆಡುತೋಪಿನಿಂದಾಗಿ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿದ್ದರೂ, ಮಳೆ ವಿಫಲವಾದಾಗ ಅಕೇಶಿಯಾ ಬೆಳೆಯುವುದೇ ರೈತನಿಗೆ ಲಾಭದಾಯಕ ಆಗಿದೆ. ಅಕೇಶಿಯಾದಿಂದ ಪ್ರಯೋಜನವೂ ಆಗಿದೆ. ಇದರಿಂದ ನೈಸರ್ಗಿಕ ಕಾಡಿನ ಮೇಲಿನ ಒತ್ತಡ ಕಡಿಮೆ ಆಗಿದೆ. ಹೆಚ್ಚುತ್ತಿರುವ ಮರಮಟ್ಟುಗಳ ಬೇಡಿಕೆಯನ್ನು ಶೀಘ್ರವಾಗಿ ಪೂರೈಸಲು ಅಕೇಶಿಯಾ ನಾಟಾದಿಂದ ಸಾಧ್ಯವಾಗಿದೆ.

ಜೀವ ವೈವಿಧ್ಯದ ತವರಾದ ಪಶ್ಚಿಮಘಟ್ಟದಲ್ಲಿ ಅಕೇಶಿಯಾದಿಂದ ಅಪಾರ ಹಾನಿ ಸಂಭವಿಸಿದೆ. ದನ ಕರುಗಳಿಗೆ ಮೇವಿಲ್ಲದ ಹಾಗೆ ಹುಲ್ಲುಗಾವಲನ್ನು ನಾಶ ಮಾಡಿದೆ. ಕಾಡಿನಲ್ಲಿರುವ ಕಾಡೆಮ್ಮೆ ಹಾಗೂ ಇತರ ಪ್ರಾಣಿಗಳಿಗೆ ಆಹಾರವಾಗಿರುವ ಹುಲ್ಲು ಬೆಳೆಯದಂತೆ ನೆಡುತೋಪಿನ ನಿರ್ಮಾಣ ಆಗಿದೆ.

ಇದರಿಂದಾಗಿ ವನ್ಯಪ್ರಾಣಿಗಳು ಕೃಷಿಕನ ಹೊಲಕ್ಕೆ ಲಗ್ಗೆ ಇಟ್ಟಿವೆ.  ಅಕೇಶಿಯಾದ ನಿಷೇಧವಾದರೂ ಅದರ ಬೀಜಗಳು ನೆಲದಲ್ಲಿ ಹರಡಿದಾಗ ಲಕ್ಷಾಂತರ ಸಸಿಗಳು ಹುಟ್ಟಿಕೊಳ್ಳುತ್ತವೆ. ಇದನ್ನು ಸರ್ಕಾರ ಹೇಗೆ ನಿಯಂತ್ರಿಸುತ್ತದೆ?

ನಮ್ಮ ನೆಲ, ಜಲ ಹಾಗೂ ಪರಿಸರಕ್ಕೆ ಹೊಂದಿಕೊಳ್ಳುವ ಗಿಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವತ್ತ ಸರ್ಕಾರ ಗಮನಹರಿಸಬೇಕಾಗಿದೆ.
ಇದರಲ್ಲಿ ಜನರೂ ಭಾಗಿಯಾಗಿ ತಮ್ಮ ಬೆಂಬಲ ನೀಡಿ ‘ಸ್ವಂತ ಜಮೀನಿನಲ್ಲಿ ಅಕೇಶಿಯಾ ಹಾಗೂ ನೀಲಗಿರಿಯನ್ನು ಬೆಳೆಯುವುದಿಲ್ಲ’ ಎಂಬ ನಿರ್ಧಾರಕ್ಕೆ ಬರಬೇಕು. ಇಲ್ಲವಾದರೆ ಸರ್ಕಾರದ ನಿಷೇಧ, ಅರಣ್ಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT