ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಕೆಸರೆರಚಾಟದಲ್ಲಿ ಜನಹಿತ ನೇಪಥ್ಯಕ್ಕೆ ಸರಿಯದಿರಲಿ

Last Updated 27 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಗರಿಷ್ಠ  ಮುಖಬೆಲೆಯ ನೋಟು ರದ್ದುಗೊಳಿಸುವ ಅನಿರೀಕ್ಷಿತ ದಾಳ ಉರುಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರವು ಈಗ ರಾಜಕೀಯ ವಿವಾದವಾಗಿ ಹೊಸ ತಿರುವು ಪಡೆಯುತ್ತಿದೆ. ಕಾಂಗ್ರೆಸ್‌ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ಸೋಮವಾರ ದೇಶದಾದ್ಯಂತ ‘ಆಕ್ರೋಶ ದಿನ’ ಆಚರಣೆಗೆ ಕರೆ ನೀಡಿವೆ. ದಿನನಿತ್ಯದ ವಹಿವಾಟು ಸೇರಿದಂತೆ ಆರ್ಥಿಕ ಚಟುವಟಿಕೆಗಳು ಈಗಾಗಲೇ ಸಾಕಷ್ಟು ಕುಂಠಿತಗೊಂಡಿದ್ದು, ‘ಆಕ್ರೋಶ ದಿನ’ ಬಂದ್‌ ಸ್ವರೂಪ ಪಡೆದುಕೊಂಡರೆ ಆರ್ಥಿಕತೆಗೆ ಇನ್ನಷ್ಟು ಹಾನಿ ಉಂಟಾಗಲಿದೆ.

ಕಪ್ಪು ಹಣದ ಹಾವಳಿ ಮಟ್ಟ ಹಾಕುವ  ಉದ್ದೇಶಕ್ಕೆ ಜನರು ಸಹಾನುಭೂತಿ ಹೊಂದಿದ್ದರೂ, ತಮ್ಮ ನಿತ್ಯದ ಬದುಕಿನ ಸಂಕಷ್ಟ ಹೆಚ್ಚಿದರೆ ಮುಂದೊಂದು ದಿನ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದು ಊಹಿಸುವುದು ಸುಲಭವಲ್ಲ.  ದೇಶದ ನಗದು ಅಗತ್ಯವು ₹ 10 ಲಕ್ಷ ಕೋಟಿ ಎನ್ನುವ ಅಂದಾಜಿದ್ದು, ಸದ್ಯ ಪೂರೈಕೆಯಾಗುತ್ತಿರುವ ಪ್ರಮಾಣ ಆಧರಿಸಿ ಹೇಳುವುದಾದರೆ ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ಇನ್ನೂ ಕೆಲವು ವಾರಗಳೇ ಬೇಕಾಗಬಹುದು. ಇದರಿಂದ ಭವಿಷ್ಯದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಅವಕಾಶ ಸೃಷ್ಟಿಗೆ ಅಡ್ಡಿ ಉಂಟಾಗಲಿದೆ.

ಸಂಸತ್‌ನ ಚಳಿಗಾಲದ ಅಧಿವೇಶನದ ಆರಂಭದಿಂದಲೂ ನಿರಂತರವಾಗಿ ಪ್ರತಿಭಟನೆ ದಾಖಲಿಸುತ್ತ ಕಲಾಪಕ್ಕೆ ಅಡ್ಡಿಪಡಿಸಿರುವ ವಿರೋಧ ಪಕ್ಷಗಳು, ಈಗ ಈ ವಿವಾದವನ್ನು ಬೀದಿಗೆ ಎಳೆದು ತರಲು ಹೊರಟಿವೆ. ಈ ಬಗ್ಗೆ ರಾಜಕೀಯ ಮುಖಂಡರಲ್ಲೂ ಒಮ್ಮತಾಭಿಪ್ರಾಯ ಇಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (ಜೆಡಿಯು) ಅವರು ‘ಆಕ್ರೋಶ  ದಿನ’ ಆಚರಣೆಗೆ ವಿರೋಧ ವ್ಯಕ್ತಪಡಿಸಿ ಪ್ರಧಾನಿ ನಿರ್ಧಾರ ಬೆಂಬಲಿಸಿರುವುದು, ರಾಜಕೀಯ ಪಕ್ಷಗಳಲ್ಲಿನ ಒಡಕಿಗೆ ಸಾಕ್ಷಿಯಾಗಿದೆ.

‘ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 2ರಷ್ಟು ಕಡಿಮೆಯಾಗಲಿದೆ’ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆತಂಕ ವ್ಯಕ್ತಪಡಿಸಿದ್ದಾರೆ.  ವಲಸೆ ಕಾರ್ಮಿಕರು, ರೈತರು, ಹಿರಿಯ ನಾಗರಿಕರು, ಅನೌಪಚಾರಿಕ ವಲಯದಲ್ಲಿ ದುಡಿಯುವವರ ಪಾಲಿಗೆ  ಈ ‘ನಗದು ಬರಗಾಲ’ ಪರಿಸ್ಥಿತಿ ತೀವ್ರ ಸಂಕಷ್ಟ ತಂದೊಡ್ಡಿದೆ.

ಅಲ್ಪಾವಧಿಯಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಅಡಚಣೆ ಉಂಟಾಗಿ ಆರ್ಥಿಕ ಬೆಳವಣಿಗೆ ದುರ್ಬಲಗೊಳ್ಳಲಿದೆ ಎಂದು ಜಾಗತಿಕ ಮಾನದಂಡ ಸಂಸ್ಥೆ ಮೂಡಿಸ್‌ ಕೂಡ ಅಂದಾಜಿಸಿರುವುದನ್ನು ಸುಲಭವಾಗಿ ತಳ್ಳಿಹಾಕಲಿಕ್ಕಾಗದು. ಪ್ರಸಕ್ತ  ತ್ರೈಮಾಸಿಕದಲ್ಲಿ ಆರ್ಥಿಕತೆಗೆ ಹೊಡೆತ ಬೀಳಲಿದೆ ಎನ್ನುವ ಆತಂಕವನ್ನು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೂ ಒಪ್ಪಿಕೊಂಡಿರುವುದು, ಸರ್ಕಾರಕ್ಕೂ ವಸ್ತುಸ್ಥಿತಿ ಮನವರಿಕೆಯಾಗಿರುವುದನ್ನು ಸೂಚಿಸುತ್ತದೆ.  ಆದರೆ ಶೀಘ್ರವೇ ಮಾಮೂಲು ಸ್ಥಿತಿ ನಿರ್ಮಾಣವಾಗಲಿದೆ ಎಂಬ ಆಶಾಭಾವವನ್ನೂ ಸಚಿವೆ ವ್ಯಕ್ತಪಡಿಸಿದ್ದಾರೆ.

‘ನೋಟು ರದ್ದತಿ ನಿರ್ಧಾರ ವಿರೋಧಿಸುವ ರಾಜಕಾರಣಿಗಳು ಕಪ್ಪು ಹಣದ ಸಮರ್ಥಕರು’ ಎನ್ನುವ  ಮೋದಿ ಟೀಕೆ ಪ್ರತಿಪಕ್ಷಗಳನ್ನು ಕೆರಳಿಸಿದ್ದು, ಕ್ಷಮಾಪಣೆಗೆ ಪಟ್ಟು ಹಿಡಿದಿವೆ. ಪರಸ್ಪರ ಕೆಸರೆರಚಾಟದ ಆರೋಪ ಪ್ರತ್ಯಾರೋಪಗಳಲ್ಲಿ, ಜನರ ಸಂಕಷ್ಟ ಕಳೆದು ಹೋಗಬಾರದಷ್ಟೆ. ರಚನಾತ್ಮಕ ಸಂವಾದ ಮತ್ತು ಸಲಹೆ ಮೂಲಕ ಈ ಬಿಕ್ಕಟ್ಟಿನಿಂದ ಆದಷ್ಟು ಬೇಗ ಹೊರಬರುವ ಬಗ್ಗೆ, ಸವಾಲನ್ನು ಸಮರ್ಥವಾಗಿ ನಿರ್ವಹಿಸುವುದರ ಬಗ್ಗೆ  ಜನಪ್ರತಿನಿಧಿಗಳು ಪಕ್ಷಭೇದ ಮರೆತು ಗಮನ ಕೊಡಬೇಕಾಗಿದೆ.

ನೋಟು ರದ್ದತಿಯು ಒಂದರ್ಥದಲ್ಲಿ ಜನರ ದುಡ್ಡನ್ನು ಭಾಗಶಃ ರಾಷ್ಟ್ರೀಕರಣ ಮಾಡಿದಂತೆ ಭಾಸವಾಗುತ್ತಿದೆ. ಸಂಕಷ್ಟ ಎಲ್ಲರ ಅನುಭವಕ್ಕೆ ಬರುತ್ತಿದ್ದು,  ಈ ಬಿಕ್ಕಟ್ಟಿನಿಂದಾಗಿ ಸುಲಭವಾಗಿ ಹೊರ ಬರಲು ಸಾಧ್ಯವಾಗುತ್ತಿಲ್ಲ. ‘ಕಪ್ಪು ಹಣ ಮತ್ತು ಭ್ರಷ್ಟಾಚಾರ ವಿರುದ್ಧದ ಹೋರಾಟದ ಆರಂಭವಷ್ಟೇ’ ಎಂದು ಪ್ರಧಾನಿ  ಹೇಳಿರುವುದು ನೋಡಿದರೆ ಸರ್ಕಾರದ ಬತ್ತಳಿಕೆಯಲ್ಲಿ ಇನ್ನಷ್ಟು ಕಠಿಣ ಕ್ರಮಗಳು ಇರುವುದು ಸ್ಪಷ್ಟಗೊಳ್ಳುತ್ತದೆ.

ಚುನಾವಣಾ ಪ್ರಚಾರದ ಮೇಲೆ ಅವಾಸ್ತವಿಕ ವೆಚ್ಚ ಮಿತಿ ಜಾರಿಯಲ್ಲಿ ಇರುವವರೆಗೆ ಕಪ್ಪು ಹಣದ ಹಾವಳಿಗೆ ತೆರೆ ಬೀಳದು. ಅರ್ಥವ್ಯವಸ್ಥೆಯು ಸೂಕ್ಷ್ಮ  ಸಂಯೋಜನೆಯಾಗಿದ್ದು, ನಗದು ಅಲಭ್ಯತೆಯು ವಿವಿಧ ವಲಯಗಳಲ್ಲಿ ವ್ಯಾಪಕ  ಪ್ರತಿಕೂಲ ಪರಿಣಾಮ ಬೀರಲಿದೆ. ಈ ಬಿಕ್ಕಟ್ಟು ಸಾಮಾಜಿಕ ಅಶಾಂತಿಗೆ  ಎಡೆ ಮಾಡಿಕೊಡದಂತೆ ಮಾಡಲು ಜವಾಬ್ದಾರಿಯಿಂದ ವರ್ತಿಸುವ ಅನಿವಾರ್ಯ ಇದೆ.  ನಗದು ಬರ ಪರಿಸ್ಥಿತಿಯಿಂದ ಆದಷ್ಟು ಬೇಗ ಹೊರಬರಲು ವಿವಿಧ ನೆಲೆಗಳಲ್ಲಿ ಕ್ರಮಗಳನ್ನು ಯೋಜಿಸುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT