ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಡ್‌ನೆಟ್ ಕೃಷಿಯಲ್ಲಿ ಲಾಭ ಕಂಡು

Last Updated 28 ನವೆಂಬರ್ 2016, 19:30 IST
ಅಕ್ಷರ ಗಾತ್ರ
‘ಛಬ್ಬಿ’ಗೆ ಹುಬ್ಬಳ್ಳಿಯಿಂದ 15 ಕಿ.ಮೀ. ದೂರ. ಅಲ್ಲೆಲ್ಲ ಕೃಷಿಯೇ ಜೀವಾಳ. ಬಸವರಾಜ ಯಲ್ಲಪ್ಪ ವಡ್ಡರ್‌ ಅವರದ್ದು ಒಂದಷ್ಟು ಹೊಲವಿದೆ. ಆದರೆ ಅವರಿಗೆ ನೀರಿನದೇ ದೊಡ್ಡ ಸಮಸ್ಯೆಯಾಗಿತ್ತು. ಕೊಳವೆಬಾವಿ ಕೊರೆಸಿದರೂ ಅದರಲ್ಲಿ ಅರ್ಧದಿಂದ ಒಂದು ಇಂಚಿನಷ್ಟು ನೀರು ಮಾತ್ರ ಬರೋದು. ಅದು ಕೂಡ ಬಿಟ್ಟು ಬಿಟ್ಟು ರಾಡಿ ನೀರು ಪಂಪ್‌ ಆಗೋದು. ಅದರಲ್ಲೇ ಚಿಕ್ಕು ತೋಟ ಮಾಡಿಕೊಂಡು ಅಷ್ಟೊಂದು ಆದಾಯ ಕಾಣದೇ ಹಾಗೋ ಹೀಗೋ ನಡೆಸಿಕೊಂಡು ಹೋಗಿದ್ದರು.
 
ಆದರೀಗ ಅಲ್ಲಿನ ಚಿತ್ರಣ ಪೂರ್ತಿ ಬದಲಾಗಿದೆ. ಶೇಡ್‌ ನೆಟ್‌(ನೆರಳಿನ ಮನೆ)ನೊಳಗೆ ಮೆಣಸಿನ ಭರಪೂರ ಬೆಳೆ ಬಂದಿದೆ. ನಿರೀಕ್ಷೆಗೂ ಮೀರಿ ಲಾಭ ಲಭಿಸಿದೆ.  
 
ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಿಟ್ಟ ಯೋಜನೆ ಜೊತೆಗೆ ನೀರಿನ  ಸಮಸ್ಯೆಗೆ ಕಂಡುಕೊಂಡ ಮಾರ್ಗ ಅವರ ಪಾಲಿಗೆ ವರದಾನವೆನಿಸಿತು. ನಿರೀಕ್ಷೆಗೂ ಮೀರಿ ಆದಾಯ ತಂದು ಕೊಟ್ಟಿತು.
 
ಯೋಜನೆಯಲ್ಲಿನ ಶೇ 90ರಷ್ಟು ಸಬ್ಸಿಡಿ ಕರಿತು ತೋಟಗಾರಿಕಾ ಇಲಾಖೆಯ ಹುಬ್ಬಳ್ಳಿ ತಾಲ್ಲೂಕು ಸಹಾಯಕ ನಿರ್ದೇಶಕಿ ಶಿಲ್ಪಶ್ರೀ ಅವರು ಯಲ್ಲಪ್ಪ ವಡ್ಡರ್‌ ಅವರಿಗೆ ಸಲಹೆ ನೀಡಿದರು. ತಂದೆಗೆ ವಯಸ್ಸಾಗಿದ್ದ ಕಾರಣ ಅವರ ಮಗ ಬಸವರಾಜ ವಡ್ಡರ್‌ ಯೋಜನೆ ಬಗ್ಗೆ ಆಸಕ್ತಿ ತೋರಿದರು. ಮೊದಲು ಹಿಂಜರಿದರೂ ಧೈರ್ಯ ಮಾಡಿ ಬ್ಯಾಂಕಿನಲ್ಲಿ ಸಾಲ ಪಡೆದು ನೆರಳಿನ ಮನೆಯಲ್ಲಿ ಮೆಣಸಿನ ಕಾಯಿ ಬೆಳೆಯಲು ಮುಂದಾದರು. 
 
ಚಿಕ್ಕು ತೋಟ ತೆಗೆದು ನೆರಳಿನ ಮನೆ ಕಟ್ಟಿದರು. ರಾಷ್ಟ್ರೀಯ ತೋಟಗಾರಿಕಾ ಮಿಷನ್‌ (ಎನ್‌ಎಚ್‌ಎಂ) ಹಾಗೂ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ 40 ಗುಂಟೆ (4000 ಚ.ಮೀ.) ಕ್ಷೇತ್ರದಲ್ಲಿ ಮೆಣಸಿನ ಸಸಿ ನೆಟ್ಟರು. ಆದರೆ ಮೆಣಸಿನ ಕೃಷಿಗೆ ಅಗತ್ಯ ನೀರಿನ ಸಮಸ್ಯೆಯನ್ನು ನಿವಾರಿಸಿಕೊಂಡರು. ಮನಸ್ಸಿದ್ದರೆ ಮಾರ್ಗ ಎನ್ನಲು ಬಸವರಾಜ ಅವರು ಇಲ್ಲಿ ಮಾದರಿಯಾಗುತ್ತಾರೆ. 
 
ನೀರಿನ ಸಮಸ್ಯೆಗೆ ಅವರು ಕಂಡುಕೊಂಡ ಪರಿಹಾರ ಮಾರ್ಗ ಹೀಗಿದೆ. ಕೊಳವೆಯಿಂದ ಬಿಟ್ಟು ಬಿಟ್ಟು ಬರುತ್ತಿದ್ದ ರಾಡಿ ನೀರನ್ನು ಸಂಗ್ರಹಿಸಲು ದೊಡ್ಡ ತೊಟ್ಟಿ ನಿರ್ಮಿಸಿದರು. ಒಂದು ತಾಸಿಗೆ ಹೆಚ್ಚೆಂದರೆ 3500 ಲೀಟರ್‌ ನೀರು ಮಾತ್ರ ಲಭ್ಯವಾಗುತ್ತಿದ್ದು, ಆ ನೀರನ್ನು ತೊಟ್ಟಿಯಲ್ಲಿ ಸಂಗ್ರಹಿಸಿಕೊಂಡರು. ಮಣ್ಣು ರಾಡಿ ನೀರಿಗೆ ಮುಕ್ತಿ ಕೊಡಲು ಸ್ಯಾಂಡ್‌ ಫಿಲ್ಟರ್ ಫಿಟ್‌ ಮಾಡಿದರು. ಶುದ್ಧೀಕರಿಸಿದ ನೀರನ್ನು ಡ್ರಿಪ್‌ ಮೂಲಕ ಮೆಣಸಿನ ಬೆಳೆಗೆ ಹಾಯಿಸಿದರು. ಕೇಳಲು, ಓದಲು ಸರಳವಾಗಿ ಕಂಡರೂ ಬಸವರಾಜ ಅನುಸರಿಸಿದ ಮಾರ್ಗ ಮಾದರಿಯೇ ಸರಿ. ಅವರ ಮೆಣಸಿನ ಬೆಳೆ ಕೂಡ ಮಾದರಿ ಬೇಸಾಯದ ಸಾಲಿಗೆ ಸೇರಿದೆ. 
 
ತೋಟಗಾರಿಕಾ ಇಲಾಖೆಯಿಂದ ನೀಡಲಾದ ಸಬ್ಸಿಡಿ ಬಳಸಿಕೊಂಡು ಬಸವರಾಜ ಅವರು ತಮ್ಮ ಕೈಯಿಂದ ಹೆಚ್ಚುವರಿ ₹5 ಲಕ್ಷದಷ್ಟು ವಿನಿಯೋಗಿಸಿದ್ದಾರೆ. ಅದರಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಹೆಚ್ಚು ಹಣ ವೆಚ್ಚವಾಗಿದೆ. ನೆರಳಿನ ಮನೆಯೊಳಗೆ ಸೆಗಣಿ ಗೊಬ್ಬರ, ಕೋಳಿ ಗೊಬ್ಬರ ಹಾಕಿ ಮಡಿ ಸಿದ್ಧಪಡಿಸಿದ್ದು, ಮಡಿಯೊಳಗೇ ನೀರಿನ ಡ್ರಿಪ್‌ ಮಾರ್ಗ ಅಳವಡಿಸಿದ್ದಾರೆ.  ಮಾರ್ಚ್‌ನಲ್ಲಿ ತಡಸ್‌ ಕ್ರಾಸ್‌ ಹತ್ತಿರದ ನರ್ಸರಿಯಿಂದ 70 ಪೈಸೆಗೆ ಒಂದು ಸಸಿಯಂತೆ ಸಿತಾರಾ ತಳಿಯ 4,500 ಮೆಣಸಿನ ಸಸಿ ತಂದು ಒಟ್ಟು 4000 ಚ.ಮೀ. ಕ್ಷೇತ್ರದಲ್ಲಿ ನಾಟಿ ಮಾಡಿದರು. ನಡುವೆ ಬದನೆ ಕಾಯಿ, ಟೊಮೆಟೊ ಗಿಡಗಳನ್ನು ನೆಟ್ಟಿದ್ದಾರೆ. ಬಸವರಾಜ ಅವರ ನಿರೀಕ್ಷೆಯ ಬೆಳೆ ಆಗಸ್ಟ್‌ ತಿಂಗಳಲ್ಲೇ ಕೈಸೇರಿದ್ದು, ಈಗಲೂ ಗಿಡಗಳಲ್ಲಿ ಮೆಣಸಿನ ಹೂವು, ಕಾಯಿ ಕಚ್ಚಿದ್ದು, ಕೊಯ್ಲು ನಿರಂತರವಾಗಿದೆ. ಪ್ರತಿ 12 ದಿನಗಳಿಗೊಮ್ಮೆ 25 ಕ್ವಿಂಟಾಲ್‌ನಷ್ಟು ಹಸಿಮೆಣಸು ಕೊಯ್ಲು ನಡೆಸುವ ಬಸವರಾಜ ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಮಾರುಕಟ್ಟೆ ಕಂಡುಕೊಂಡಿದ್ದಾರೆ. 
 
‘ಪ್ರತಿ ಕೆ.ಜಿ.ಗೆ ₹160 ದರ ಸಿಕ್ಕಿದ್ದರಿಂದ ಲಾಭ ದೊರೆತಿದೆ. ದರ ವ್ಯತ್ಯಾಸವಾಗುತ್ತಲೇ ಇರುವುದರಿಂದ ನಂತರದ ದಿನಗಳಲ್ಲಿ ₹10, ₹6ರ ದರವೂ ಸಿಕ್ಕಿದೆ. ಈವರೆಗೆ 25 ಟನ್‌ನಷ್ಟು ಮೆಣಸಿನ ಇಳುವರಿ ಲಭಿಸಿದ್ದು ಉತ್ತಮ ಲಾಭವಾಗಿದೆ. ಒಟ್ಟಾರೆ ಒಂದೇ ಬೆಳೆಯಲ್ಲಿ 3 ಲಕ್ಷ ನಿವ್ವಳ ಆದಾಯ ಸಿಕ್ಕಿದೆ’ ಎನ್ನುತ್ತಾರೆ ಬಸವರಾಜ.  
(ಮಣ್ಣು ರಾಡಿ ನೀರನ್ನು ಶುದ್ಧೀಕರಿಸಲು ಅಳವಡಿಸಲಾದ ಸ್ಯಾಂಡ್‌ ಫಿಲ್ಟರ್‌)
ಡಿಸೆಂಬರ್‌ ನಂತರ ಮೆಣಸಿನ ಗಿಡ ತೆಗೆದು ಮಡಿಗೆ ಗೊಬ್ಬರ ಸೇರಿಸಿ ಅಲ್ಲಿ ಬೀನ್ಸ್‌ ಬೇಸಾಯ ನಡೆಸುವುದು ಅವರ ಮುಂದಾಲೋಚನೆಯಾಗಿದೆ. ಒಂದು ಜಾಗದಲ್ಲಿ ಒಂದೇ ಬೆಳೆ ಬೆಳೆಯದೇ ಬದಲಾಯಿಸುವುದರಿಂದ ಮಣ್ಣಿನ ಫಲವತ್ತತೆಯನ್ನೂ ಉಳಿಸಿಕೊಳ್ಳಬಹುದು ಎಂಬುದು ಅವರ ಅಭಿಪ್ರಾಯ. ಜೊತೆಗೆ ಬೀನ್ಸ್‌ ಬೆಳೆಯುವುದರಿಂದ ಗಿಡಗಳ ಬೇರುಗಳಿಂದ ಮಣ್ಣಿಗೆ ಪೋಷಕಾಂಶಗಳ ಲಭ್ಯತೆಯಾಗಲಿದೆ ಎಂಬುದು ಪ್ರಮುಖ ಕಾರಣ. 
 
ಬಸವರಾಜ ಅವರು ಮಣ್ಣಿನ ಫಲವತ್ತತೆ ಉಳಿಸಿಕೊಳ್ಳಲು ಗುಂಡಿ ಗೊಬ್ಬರದ ಜೊತೆ ಕೋಳಿ ಗೊಬ್ಬರವನ್ನು ತಂದು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಆದರೆ ಕೋಳಿ ಗೊಬ್ಬರವನ್ನು ನೇರವಾಗಿ ಪೂರೈಸದೆ ಗುಂಡಿ ಗೊಬ್ಬರದ ಜೊತೆ ಮಿಶ್ರ ಮಾತ್ರ ಅಂದರೆ ಗುಂಡಿ ಗೊಬ್ಬರ: ಕೋಳಿ ಗೊಬ್ಬರವನ್ನು 4:1 ಪ್ರಮಾಣದಲ್ಲಿ ನೀಡುವುದು ಉತ್ತಮ ಎಂಬುದು ಶಿಲ್ಪಶ್ರೀ ಅವರ ಸಲಹೆ.
 
**
ಎಲೆಮುರುಟು ರೋಗಕ್ಕೆ ಇಲ್ಲೊಂದು ಮನೆಮದ್ದು
ಮೆಣಸು, ಟೊಮೆಟೊ, ಬದನೆ ಬೇಸಾಯವನ್ನು ಬಾಧಿಸುವ ಎಲೆ ಮುರುಟು ರೋಗಕ್ಕೆ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಶಿಲ್ಪಶ್ರೀ ಅವರು ನೀಡುವ ಸಲಹೆ ಹೀಗಿದೆ.
 
ಒಂದೂವರೆ ಕೆ.ಜಿ.ಬೆಳ್ಳುಳ್ಳಿ, ಒಂದೂವರೆ ಕೆ.ಜಿ. ಹಸಿಮೆಣಸನ್ನು ಪ್ರತ್ಯೇಕವಾಗಿ ಅರೆದುಕೊಳ್ಳಬೇಕು. ಅದನ್ನು ಒಂದೂವರೆ ಲೀಟರ್‌ ಸೀಮೆಎಣ್ಣೆಯಲ್ಲಿ 2 ತಾಸು ನೆನೆಸಿಟ್ಟು ಹಿಂಡಿ ದ್ರಾವಣವನ್ನು ಮಾತ್ರ ತೆಗೆಯಬೇಕು. ಆ ದ್ರಾವಣಕ್ಕೆ ಒಂದೂವರೆ ಕೆ.ಜಿ ಸಾಬೂನು ಪುಡಿಯನ್ನು (ನೊರೆ ಬರಿಸುವ ಉದ್ದೇಶ)ಸೇರಿಸಿ ಕದಡಬೇಕು. ಒಟ್ಟಾರೆ ಈ ದ್ರಾವಣವನ್ನು ಒಂದು ಲೀಟರ್‌ ನೀರಿಗೆ 5 ಎಂ.ಎಲ್‌ ಸೇರಿಸಿ ಎಲೆ ಮುರುಟು ರೋಗವಿರುವ ಗಿಡದ ಮೇಲೆ ಸಿಂಪಡಿಸಬೇಕು. ಇದರಿಂದ ಬಾಧೆ ನಿಯಂತ್ರಣಕ್ಕೆ ಬರಲಿದೆ. 
 
**
ಶೇಡ್‌ ನೆಟ್‌ ಕೃಷಿಯ ಲಾಭ
(ಶೇಡ್‌ನೆಟ್‌ ಹೊರಭಾಗ ಅಂಟಿಕೊಂಡಿರುವ ಬಸವನ ಹುಳುಗಳು)
ಸಹಜವಾಗಿ ಹೊಲದಲ್ಲಿ ಬೆಳೆಯುವ ಬೇಸಾಯಕ್ಕೆ ಹೋಲಿಸಿದಲ್ಲಿ ಶೇಡ್‌ ನೆಟ್‌ (ನೆರಳಿನ ಮನೆ)ನಲ್ಲಿ ಕೃಷಿ ನಡೆಸಿದಲ್ಲಿ ಮೂರು ಪಟ್ಟು ಹೆಚ್ಚು ಇಳುವರಿ ದೊರಕಲಿದೆ. ಕೀಟಗಳ ಕಾಟ ಇರದೇ ರೋಗಗಳು ಕೂಡ ಹೆಚ್ಚು ಬಾಧಿಸವು. ಕಡಿಮೆ ನೀರು ಸಾಕಾಗಲಿದೆ.
 
ಒಂದು ಬಾರಿ ಶೇಡ್‌ ನೆಟ್‌ ಅಳವಡಿಸಿದಲ್ಲಿ ಸೂಕ್ತ ನಿರ್ವಹಣೆಯಿಟ್ಟಲ್ಲಿ ಐದು ವರ್ಷಗಳವರೆಗೆ ಬದಲಾಯಿಸುವ ಪ್ರಮೇಯವಿಲ್ಲ. ಹೈಬ್ರಿಡ್‌ ತಳಿ ಬಳಸಿದಲ್ಲಿ ಇಳುವರಿ ಇನ್ನೂ ಹೆಚ್ಚು ಪಡೆಬಹುದು. ಕಳೆ ಬಾಧೆಯೂ ನಿಯಂತ್ರಣದಲ್ಲಿರಲಿದೆ. ಮಡಿಯೊಳಗೆ (ಬೆಡ್‌) ಅಳವಡಿಸುವ ಡ್ರಿಪ್ ಮೂಲಕವೇ ಗೊಬ್ಬರ ಪೂರೈಸುವುದರಿಂದ ಗೊಬ್ಬರ ಅನವಶ್ಯಕ ವ್ಯರ್ಥ ಉಂಟಾಗದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT