ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಿಂದ ಉಗ್ರರ ಪರಾರಿ ಭದ್ರತಾ ವ್ಯವಸ್ಥೆ ಬಿಗಿಯಾಗಲಿ

Last Updated 28 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಪಂಜಾಬ್‌ನ ಪಟಿಯಾಲಾದ ಭಾರಿ ಭದ್ರತೆಯ ನಾಭಾ ಜೈಲಿನಿಂದ ಐವರು ಖಲಿಸ್ತಾನ ಉಗ್ರರ ಪರಾರಿಗೆ 10 ಮಂದಿಯ ಶಸ್ತ್ರಸಜ್ಜಿತ  ಗುಂಪು ಪೊಲೀಸ್‌ ಸಮವಸ್ತ್ರದಲ್ಲಿ ಹಾಡಹಗಲೇ ನಡೆಸಿದ ಯಶಸ್ವಿ ದಾಳಿಯು ನಮ್ಮ ಜೈಲುಗಳ ಭದ್ರತಾ ವ್ಯವಸ್ಥೆ ಬಗ್ಗೆ ಹತ್ತಾರು ಅನುಮಾನಗಳನ್ನು ಮೂಡಿಸುತ್ತದೆ.

ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈ ಐವರ ಪರಾರಿಗೆ  ನಡೆದ ಪ್ರಯತ್ನ ಮತ್ತು ಗುಂಡಿನ ದಾಳಿ ಬಗ್ಗೆಯೇ ಅನೇಕ  ಸಂದೇಹಗಳು ವ್ಯಕ್ತವಾಗಿದ್ದು, ಒಳಗಿನವರ ಸಹಕಾರದಿಂದಲೇ ಈ ಕೃತ್ಯ ಎಸಗಿರುವ ಶಂಕೆ ದಟ್ಟವಾಗಿದೆ.

ಉಗ್ರರನ್ನು ಪರಾರಿ ಮಾಡಿಸಲು ಸಂಚು ರೂಪಿಸಿದ್ದ ಪ್ರಮುಖ ಆರೋಪಿ ಪರಮಿಂದರ್‌ ಸಿಂಗ್‌ ಮತ್ತು  ಉಗ್ರಗಾಮಿ ಸಂಘಟನೆ ಖಲಿಸ್ತಾನ್‌ ಲಿಬರೇಷನ್‌ ಫ್ರಂಟ್‌ನ ಮುಖ್ಯಸ್ಥ ಹರಮಿಂದರ್‌ ಸಿಂಗ್‌ ಮಿಂಟೂನನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಿರುವುದು ಸಮಾಧಾನ ತರುವ ಬೆಳವಣಿಗೆಯಾಗಿದೆ.

‘ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾದ  (ಸಿಮಿ) ಎಂಟು ಮಂದಿ ಕಾರ್ಯಕರ್ತರು ಮಧ್ಯಪ್ರದೇಶದ  ಬಿಗಿ ಭದ್ರತೆಯ ಐಎಸ್‌ಒ ಪ್ರಮಾಣೀಕೃತ ಬೋಫಾಲ್‌ ಸೆಂಟ್ರಲ್‌ ಜೈಲ್‌ನಿಂದ ಅಕ್ಟೋಬರ್‌ 31ರಂದು ಪರಾರಿಯಾಗಿದ್ದರು. ಬಳಿಕ ಅವರು ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾದರು. ಈ ಎನ್‌ಕೌಂಟರ್‌ ವಿವಾದಕ್ಕೆ ಕಾರಣವಾಗಿದೆ.

ದೇಶದಲ್ಲಿನ ಜೈಲುಗಳ ಅಂಕಿಅಂಶಗಳ ಕುರಿತು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ವರದಿ ಪ್ರಕಾರ, 2015ರಲ್ಲಿ ಒಟ್ಟು 200 ಕೈದಿಗಳು ಆರು ರಾಜ್ಯಗಳ ಬಿಗಿ ಭದ್ರತೆಯ ಜೈಲುಗಳಿಂದ ಪರಾರಿಯಾಗಿದ್ದಾರೆ. ಇವರಲ್ಲಿ ಚಿಕ್ಕ ಪುಟ್ಟ ಕಳ್ಳರು, ದುಷ್ಕರ್ಮಿಗಳ ಜತೆಗೆ ಉಗ್ರಗಾಮಿಗಳೂ ಸೇರಿರುವುದು ಕಳವಳ ಮೂಡಿಸುವ ಸಂಗತಿ. 2011 ರಿಂದ 2015ರವರೆಗಿನ ಅವಧಿಯಲ್ಲಿ ಜೈಲುಗಳಿಗೆ ಕನ್ನ ಹಾಕಿದ 83 ಘಟನೆಗಳು ನಡೆದಿದ್ದು, ಅವುಗಳಲ್ಲಿ ರಾಜಸ್ತಾನ (41) ಮುಂಚೂಣಿಯಲ್ಲಿದೆ. 

ಕೈದಿಗಳ ಪರಾರಿ, ಪರಸ್ಪರ ಹೊಡೆದಾಟ, ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆದ ಘಟನೆಗಳಿಗೆ ಕರ್ನಾಟಕವೂ  ಸಾಕ್ಷಿಯಾಗಿದೆ. ಈ ಎಲ್ಲ ಘಟನೆಗಳು ನಮ್ಮ ಜೈಲುಗಳಲ್ಲಿ ಇರುವ ಅತ್ಯಂತ ಕಳಪೆ ಸ್ವರೂಪದ ಭದ್ರತಾ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತವೆ. ‘ಜೈಲುಗಳಲ್ಲಿ  ಎಲ್ಲವೂ ಸರಿಯಾಗಿದೆ, ಎಲ್ಲ ಕೈದಿಗಳೂ ನಮ್ಮ ನಿಯಂತ್ರಣದಲ್ಲಿ ಇದ್ದಾರೆ. ಯಾವುದೇ ಅಹಿತಕರ ಘಟನೆಗೆ ಆಸ್ಪದವೇ ಇಲ್ಲ’ ಎನ್ನುವ  ನಿರಾತಂಕ, ಉದಾಸೀನ ಭಾವ ನಮ್ಮ ಜೈಲು ಅಧಿಕಾರಿಗಳಲ್ಲಿ ಇರುವುದರಿಂದಲೇ  ಇಂತಹ ಘಟನೆಗಳು ಪುನರಾವರ್ತನೆ ಆಗುತ್ತಲೇ ಇರುತ್ತವೆ.

ಜೈಲು ಅಧಿಕಾರಿಗಳು ಮತ್ತು ಪೊಲೀಸರು ಹತ್ತಾರು ಬಗೆಯ ಆಮಿಷಕ್ಕೆ ಒಳಗಾಗಿ ಕೈದಿಗಳ ಜತೆ ತೀರ ಸಲುಗೆಯಿಂದ ಇರುವುದೇ ಅವರು ಪರಾರಿಯಾಗಲು ಕಾರಣವಾಗುತ್ತಿದೆ. ಜೈಲುಗಳು ಈಗ ಬರೀ ಜೈಲುಗಳಾಗಿಯೇ ಉಳಿದಿಲ್ಲ. ಜೈಲುಗಳಾಚೆ ನಡೆಸುವ ವಂಚನೆ, ದುಷ್ಕೃತ್ಯಗಳ ಸಂಚನ್ನು ರೂಪಿಸುವ ಕಾರಸ್ತಾನವಾಗಿಯೂ  ದುರ್ಬಳಕೆಯಾಗುತ್ತಿವೆ. ಇದಕ್ಕೆ ಪೊಲೀಸರ ಪ್ರತ್ಯಕ್ಷ ಇಲ್ಲವೆ ಪರೋಕ್ಷ ಕುಮ್ಮಕ್ಕು ಇದ್ದೇ ಇರುತ್ತದೆ.

ಕೈದಿಗಳು ಪರಾರಿಯಾಗಲು ಹೊಸ ಹೊಸ ಮಾರ್ಗೋಪಾಯಗಳನ್ನು ಹುಡುಕುತ್ತಲೇ ಇರುತ್ತಾರೆ.  ಕನ್ನ ಹಾಕಿ ಪರಾರಿಯಾಗುವುದು ಒಂದು ಬಗೆಯದಾದರೆ, ಹೊರಗಿನವರು ಮತ್ತು ಒಳಗಿನವರ ಸಹಾಯದಿಂದ ಪರಾರಿಯಾಗುವ ಘಟನೆಗಳು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತವೆ.

ಇಂತಹ ಘಟನೆಗಳಿಂದ ನಮ್ಮ ವ್ಯವಸ್ಥೆ ಪಾಠ ಕಲಿಯುವುದೇ ಇಲ್ಲವೇನೊ ಎನ್ನುವ ಅನುಮಾನವೂ ಮೂಡುತ್ತದೆ. ಪೊಲೀಸ್‌ ವ್ಯವಸ್ಥೆ ಸುಧಾರಣೆ ಜತೆಗೆ, ಜೈಲುಗಳ ಸುಧಾರಣೆ ಬಗ್ಗೆಯೂ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದನ್ನು  ಇಂತಹ ಪ್ರಕರಣಗಳು ನೆನಪಿಸುತ್ತಿವೆ. ಪೊಲೀಸ್‌ ವ್ಯವಸ್ಥೆಗೆ  ಅಂಟಿಕೊಂಡಿರುವ ಅದಕ್ಷತೆಯ ಕಳಂಕ ತೊಡೆದು ಹಾಕುವ ಪ್ರಾಮಾಣಿಕ ಪ್ರಯತ್ನಗಳು ನಡೆದರೆ, ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಿದರೆ, ಭದ್ರತಾ ಲೋಪಗಳಿಂದ ಹೊಸ ಪಾಠ ಕಲಿತರೆ ಮಾತ್ರ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬಹುದು.

ಭೂಗತ ಲೋಕದ ಪಾತಕಿಗಳು ಮತ್ತು ಭಯೋತ್ಪಾದಕರು ಇರುವ ಜೈಲುಗಳೂ ಸೇರಿದಂತೆ ಎಲ್ಲೆಡೆ ಗರಿಷ್ಠ   ಭದ್ರತೆ ಅಳವಡಿಕೆ, ಒಳಗಿನವರ ಪ್ರತಿಯೊಂದು ಚಲನವಲನದ  ಮೇಲೆ ನಿರಂತರ ಹದ್ದಿನ ಕಣ್ಗಾವಲು ಇದ್ದರೆ ಮಾತ್ರ ಇಂತಹ ಮುಜುಗರಕ್ಕೆ ಎಡೆ ಮಾಡಿಕೊಡುವ, ಭದ್ರತಾ ವೈಫಲ್ಯ ಸಾಬೀತಾಗುವ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT