ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸ್ನಿಲ್ಯಾಂಡ್‌ ಕಟ್ಟೋಣ, ಸಿಂಗಪುರ ಮೀರಿ ಬೆಳೆಯೋಣ!

Last Updated 28 ನವೆಂಬರ್ 2016, 20:14 IST
ಅಕ್ಷರ ಗಾತ್ರ

‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ...’ ಹಾಡಿನ ಮೂಲಕ ಕುವೆಂಪು ಅವರು ನಮ್ಮ ರಾಜ್ಯ ಎಷ್ಟೊಂದು ಸಂಪದ್ಭರಿತ ಎಂಬುದರ ಚಿತ್ರಣವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಕುವೆಂಪು ಅವರಂತೆಯೇ ಇನ್ನೂ ಹಲವು ಕವಿವರ್ಯರು ನಾಡಿನ ಸೊಬಗನ್ನು ತಮ್ಮ ಕಾವ್ಯದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಅವರೆಲ್ಲ ಸಾಹಿತ್ಯ ಸೃಷ್ಟಿಯ ಮಿತಿಯಲ್ಲಿ ಹೇಳಿದ್ದಕ್ಕಿಂತಲೂ ನಮ್ಮ ನಾಡು ಪ್ರಾಕೃತಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಐತಿಹಾಸಿಕವಾಗಿ ಸಂಪದ್ಭರಿತವಾಗಿದೆ. ಈ ಹಿಂದೆ ಆಡಳಿತ ನಡೆಸಿದ ವಿಜಯನಗರ, ರಾಷ್ಟ್ರಕೂಟ, ಕದಂಬ, ಹೊಯ್ಸಳ ಮೊದಲಾದ ರಾಜರು ನಾಡಿನ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಆಡಳಿತದ ವೈಭವದ ಕುರುಹುಗಳಾಗಿ ಅರಮನೆಗಳು, ಸ್ಮಾರಕಗಳು, ಶಿಲಾಶಾಸನಗಳು ರಾಜ್ಯದ ಉದ್ದಗಲಕ್ಕೂ ಹರಡಿವೆ. ಗತವೈಭವದ ಕಥೆಗಳನ್ನು ಅವುಗಳು ಸಾರಿ ಹೇಳುತ್ತವೆ.

ಕಡಲತೀರ, ನದಿ ಕಿನಾರೆ, ಜಲಪಾತ, ಅಭಯಾರಣ್ಯ, ಗಿರಿಶ್ರೇಣಿ, ಅರಮನೆ, ಪುರಾತನ ಸ್ಮಾರಕ, ನೆಲದ ಸಂಸ್ಕೃತಿಯನ್ನು ಎತ್ತಿತೋರುವ ಜನಪದ ಕಲೆ, ಜಿಹ್ವಾಚಪಲ ತಣಿಸುವ ತಹರೇವಾರಿ ತಿಂಡಿ–ತಿನಿಸು, ಊಟೋಪಚಾರ ಹಾಗೂ ಅದೆಲ್ಲದರೊಳಗೆ ಹಾಸುಹೊಕ್ಕಾಗಿರುವ ವಿಶಿಷ್ಟ ಸಂಸ್ಕೃತಿ–ಪರಂಪರೆ... ಹೀಗೆ ಪ್ರವಾಸಿಗಳು ಬಯಸುವ ಎಲ್ಲವನ್ನೂ ಹೊಂದಿರುವುದು ಕರ್ನಾಟಕದ ಹಿರಿಮೆ. ಒಂದರೊಳಗೆ ಮತ್ತೊಂದು ಅಂತರ್ಗತವಾದ ಈ ಪಾರಂಪರಿಕ ಐಸಿರಿಯನ್ನು ದಾರದಲ್ಲಿ ಪೋಣಿಸಿದ ಹೂವುಗಳಂತೆ ಒಂದಾಗಿ ಉಳಿಸುವ ಉದ್ದೇಶದಿಂದ ಉದಯವಾದದ್ದು ಕನ್ನಡ ನಾಡು. ಏಕೀಕರಣ ನಂತರ 60 ವರ್ಷಗಳ ತಿಟ್ಹತ್ತಿ ನಿಂತಿರುವ ನಾವು, ಈಗ ಎಲ್ಲಿದ್ದೇವೆ ಎಂದು ಅವಲೋಕಿಸುವ ಜೊತೆಗೆ, ಮುಂದಿನ ನಲವತ್ತು ವರ್ಷಗಳಲ್ಲಿ ಏನಾಗಬೇಕು ಎಂಬುದನ್ನು ಆಲೋಚಿಸಬೇಕಾದ ಕಾಲವಿದು. ಈ ಮಂಥನ ಆಡಳಿತಗಾರರಲ್ಲಿ ಮಾತ್ರವಲ್ಲದೆ ರಾಜ್ಯದ ಪ್ರತಿಯೊಬ್ಬ ಪ್ರಜೆಯಲ್ಲೂ ನಡೆಯಬೇಕು.

ಜಗತ್ತಿನ ಹಲವು ದೇಶಗಳು ಪ್ರವಾಸೋದ್ಯಮವನ್ನೇ ತಮ್ಮ ಮೂಲ ಬಂಡವಾಳವನ್ನಾಗಿ ಮಾಡಿಕೊಂಡಿವೆ. ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ ವಾತಾವರಣ ನಮ್ಮ ರಾಜ್ಯದಲ್ಲಿದ್ದರೂ ಆರ್ಥಿಕ ಅಭಿವೃದ್ಧಿಗೆ ಅದನ್ನು ಬಳಸಿಕೊಳ್ಳುವತ್ತ ಹಿಂದಿನ ಹಲವು ಮುಖ್ಯಮಂತ್ರಿಗಳು ಗಮನಹರಿಸಲಿಲ್ಲ. ಮೊದಲ ಬಾರಿಗೆ ಅದರ ಮಹತ್ವ ಗುರುತಿಸುವ ಪ್ರಯತ್ನ ಮಾಡಿದವರು ಆರ್‌.ಗುಂಡೂರಾವ್‌. ಖಾಸಗಿಯಾಗಿ ಪರಿಸರ ಪ್ರವಾಸೋದ್ಯಮದಲ್ಲಿ ತೊಡಗಿಕೊಂಡಿದ್ದ ಕರ್ನಲ್‌ ಜಾನ್‌ ವೇಕ್‌ಫೀಲ್ಡ್‌ ಅವರನ್ನು ಸರ್ಕಾರದ ಸೇವೆಗೆ ಕರೆತಂದ ಅವರು ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್‌ಗಳ ಅಭಿವೃದ್ಧಿಗೆ ಕಾರಣರಾದರು. ಸೋನಾಲ್‌ ಮಾನಸಿಂಗ್‌ ಅವರಂತಹ ಪ್ರಸಿದ್ಧ ಕಲಾವಿದರಿಂದ ಕಾರ್ಯಕ್ರಮ ಮಾಡಿಸಿ, ‘ಪ್ರವಾಸಿ ವಾರ’ ಆಚರಿಸುವ ಮೂಲಕ ರಾಜ್ಯದ ಪ್ರವಾಸಿ ತಾಣಗಳಿಗೆ ಪ್ರಚಾರ ಕೊಡಿಸುವ ಪ್ರಯತ್ನವನ್ನೂ ಮಾಡಿದರು.

ಪ್ರವಾಸೋದ್ಯಮವೇ ರಾಜ್ಯದ ಮೊದಲ ಆದ್ಯತೆ ಎಂದು ಘೋಷಿಸಿದವರು ಎಸ್‌.ಎಂ. ಕೃಷ್ಣ. ಸರ್ಕಾರಿ–ಖಾಸಗಿ ಸಹಭಾಗಿತ್ವಕ್ಕೆ ಮೊದಲ ಬಾರಿಗೆ ಅವರು ‘ಕನೆಕ್ಟ್‌’ ಸಮಾವೇಶ ಏರ್ಪಡಿಸಿದರು. ನಾನಾದೇಶಗಳಲ್ಲಿ ರಾಜ್ಯದ ಪ್ರವಾಸಿತಾಣಗಳ ಮಾಹಿತಿ ಸಿಗುವಂತೆ ನೋಡಿಕೊಳ್ಳಲು ‘ಕನೆಕ್ಟ್‌’ ಸಮಾವೇಶ ನೆರವಾಯಿತು. ಪ್ರವಾಸೋದ್ಯಮಕ್ಕೆ ಒದಗಿಸುತ್ತಿದ್ದ ಬಜೆಟ್‌ ಮೊತ್ತವನ್ನು ಅವರು ದ್ವಿಗುಣಗೊಳಿಸಿದರು. ಆ ಅವಧಿಯಲ್ಲಿ ನಾನು ಪ್ರವಾಸೋದ್ಯಮ ಇಲಾಖೆಯ ಆಯುಕ್ತನಾಗಿದ್ದೆ. ಬಳಿಕ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದೆ. ಕನೆಕ್ಟ್‌ನಿಂದ ಸಿಕ್ಕ ಖಾಸಗಿ ಸಹಭಾಗಿತ್ವದ ಮೂಲಕ ಪ್ರಪಂಚಕ್ಕೆ ‘ಕರ್ನಾಟಕ–ಥಿಯೇಟರ್‌ ಆಫ್‌ ಇನ್‌ಸ್ಪಿರೇಷನ್‌’ ಎಂಬ ಘೋಷವಾಕ್ಯದೊಂದಿಗೆ ನಮ್ಮ ರಾಜ್ಯದ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಬಿಂಬಿಸಲು ಯತ್ನಿಸಿದೆವು. ಕೊಡಗು ಹಾಗೂ ಹಂಪಿಗಳತ್ತ ವಿಶ್ವ ಪ್ರವಾಸೋದ್ಯಮ ಮಾರುಕಟ್ಟೆಯನ್ನು ಸೆಳೆಯಲೂ ಯಶಸ್ವಿಯಾದೆವು.

‘ಅತಿಥಿ ದೇವೋಭವ’ ಎಂಬ ಹೆಸರಿನಲ್ಲಿ ಹೋಂ ಸ್ಟೇ ವ್ಯವಸ್ಥೆಯನ್ನು ಆರಂಭಿಸಲಾಯಿತು. ನಮ್ಮ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗಳಿಗೆ ಉಳಿದುಕೊಳ್ಳಲು ಹೋಟೆಲ್‌ಗಳೇ ಇಲ್ಲದಿರುವ ಕೊರತೆಯನ್ನು ನೀಗಿಸಲು ಮಾಡಲಾದ ಅದ್ಭುತ ವ್ಯವಸ್ಥೆ ಇದು. ಪಾರಂಪರಿಕ ಕಟ್ಟಡ, ದೇವಸ್ಥಾನ ನೋಡುವುದಷ್ಟೇ ಅಲ್ಲದೆ ನೆಲದ ಸಂಸ್ಕೃತಿಯನ್ನೂ ಪ್ರವಾಸಿಗರು ಅನುಭವಿಸಬೇಕು ಎನ್ನುವ ಉದ್ದೇಶ ಸಹ ಈ ಯೋಜನೆಯ ಹಿಂದಿತ್ತು. ಸ್ಥಳೀಯರಿಗೆ ಸಹ್ಯವಲ್ಲದ ಚಟುವಟಿಕೆ ತಾಣಗಳಾಗಿ ಹೋಂ ಸ್ಟೇಗಳು ಪರಿವರ್ತನೆಗೊಂಡದ್ದು ವಿಷಾದದ ಸಂಗತಿ. ಒಂದೆಡೆ ವಾರಾಂತ್ಯದಲ್ಲಿ ಟೆಕ್ಕಿಗಳು ಮದ್ಯದ ಬಾಟಲಿಗಳನ್ನು ಒಯ್ದು, ಈ ಹೋಂ ಸ್ಟೇಗಳನ್ನೇ ಕುಡಿತದ ಅಡ್ಡೆ ಮಾಡಿಕೊಂಡರೆ, ಇನ್ನೊಂದೆಡೆ ನಿಯಮಬದ್ಧವಾಗಿ ನಡೆಯುತ್ತಿದ್ದ ಹೋಂ ಸ್ಟೇಗಳ ಮೇಲೆ ಕಂದಾಯ, ಪೊಲೀಸ್‌, ಅಬಕಾರಿ ಅಧಿಕಾರಿಗಳು ಮುಗಿಬಿದ್ದರು. ಹೀಗಾಗಿ ಯೋಜನೆಯ ಗುರಿ ಈಡೇರಲಿಲ್ಲ. ಹೋಂ ಸ್ಟೇಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವ ಜೊತೆಗೆ ಈ ಉದ್ಯಮದಲ್ಲಿ ತೊಡಗಿಸಿಕೊಂಡವರಿಗೆ ಅಧಿಕಾರಿಗಳಿಂದ ತೊಂದರೆ ಆಗದಂತೆಯೂ ಎಚ್ಚರ ವಹಿಸಬೇಕು. 

ರಾಜ್ಯಕ್ಕೆ ಐವತ್ತು ತುಂಬಿದ ನೆಪದಲ್ಲಿ ಆರಂಭಿಸಿದ ‘ಸುವರ್ಣ ರಥ’ದ ಯೋಜನೆ ಒಂದು ಬಲು ಅಪರೂಪದ ಯತ್ನ. ರಾಜ್ಯದ ಎಲ್ಲ ಪ್ರಮುಖ ಪ್ರವಾಸಿ ತಾಣಗಳನ್ನು ರೈಲು ಯಾತ್ರೆಯ ಮೂಲಕ ನೋಡುವ ಅವಕಾಶವನ್ನು ನಾವು ಸೃಷ್ಟಿಸಿದ್ದೆವು. ಮೊದಮೊದಲು ಸರಿಯಾಗಿಯೇ ನಡೆದ ಈ ಯೋಜನೆ ಬಳಿಕ ಹಳಿ ತಪ್ಪಿತು. ಅದು ರಾಜ್ಯದಿಂದ ಹೊರಗೂ ಸಂಚರಿಸಲು ಆರಂಭಿಸಿ ಮೂಲ ಉದ್ದೇಶಕ್ಕೆ ಪೆಟ್ಟುಬಿತ್ತು. ಇನ್ನು ರಾಜ್ಯದಲ್ಲಿ ಕಳೆದ 3–4 ವರ್ಷಗಳಲ್ಲಿ ಇಲಾಖೆಯ ಜವಾಬ್ದಾರಿ ಹೊತ್ತ ಸಚಿವರಿಗೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಕನಸುಗಳಿರಲಿಲ್ಲ. ಬರೀ ಬೃಹತ್‌ ಕೈಗಾರಿಕೆ, ಬಂಡವಾಳ ಹೂಡಿಕೆ ಗುಂಗಿನಲ್ಲಿದ್ದುದರಿಂದ ಪ್ರವಾಸೋದ್ಯಮಕ್ಕೆ ಬಹಳ ಹಿನ್ನಡೆಯಾಯ್ತು.

ಪ್ರವಾಸಿಗಳನ್ನೂ ಡಾಲರ್‌ಗಳ ಹೊಳೆಯನ್ನೂ ಆಕರ್ಷಿಸುವಂತಹ ನೂರಾರು ತಾಣಗಳು ನಮ್ಮ ರಾಜ್ಯದಲ್ಲಿವೆ. ಮಾರುಕಟ್ಟೆ ಕೇಂದ್ರಿತವಾಗಿ ಅವುಗಳನ್ನು ಅಭಿವೃದ್ಧಿ ಮಾಡಲು ವೃತ್ತಿಪರತೆ ಅಗತ್ಯವಾಗಿದೆ. ಈ ಹೊಣೆಯನ್ನು ಹೊತ್ತ ಪ್ರವಾಸೋದ್ಯಮ ಇಲಾಖೆಯ ಆಯುಕ್ತ, ನಿರ್ದೇಶಕರನ್ನು ವರ್ಷಕ್ಕೊಮ್ಮೆ ಬದಲಾವಣೆ ಮಾಡುವ ಪರಿಪಾಠ ಒಳ್ಳೆಯದಲ್ಲ. ಕಳೆದ 12 ವರ್ಷಗಳ ಅವಧಿಯಲ್ಲಿ ಅಂದಾಜು ಡಜನ್ ಸಚಿವರು, ಅಷ್ಟೇ ಸಂಖ್ಯೆಯ ಕಾರ್ಯದರ್ಶಿಗಳು ಹಾಗೂ ನಿರ್ದೇಶಕರನ್ನು ಈ ಇಲಾಖೆ ಕಂಡಿದೆ. ಪ್ರವಾಸೋದ್ಯಮ ಕ್ಷೇತ್ರವನ್ನು ಅರ್ಥಮಾಡಿಕೊಳ್ಳುವ ಮುನ್ನವೇ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಕಾರ್ಯಗಳು ಸರಿಯಾಗಿ ನಡೆಯಲಾರವು. ಅದರ ಪರಿಣಾಮ ಇಡೀ ಉದ್ಯಮದ ಮೇಲಾಗುತ್ತದೆ. ಇಲಾಖೆಯ ಜವಾಬ್ದಾರಿ ಹೊತ್ತ ಹಿರಿಯ ಅಧಿಕಾರಿಗಳಿಗೆ ಕೇರಳದಂತೆ ರಾಜ್ಯದಲ್ಲೂ ಕನಿಷ್ಠ ಮೂರು ವರ್ಷ ಅದೇ ಹುದ್ದೆಯಲ್ಲಿ ಇರುವ ಅವಕಾಶ ಕಲ್ಪಿಸಬೇಕು. ಕೇರಳದಲ್ಲಿ ಇಲಾಖೆಯ ನಿರ್ದೇಶಕರಾದ ಅಧಿಕಾರಿಗಳನ್ನೇ ಕಾರ್ಯದರ್ಶಿ ಹುದ್ದೆಗೂ ನೇಮಕ ಮಾಡಲಾಗುತ್ತದೆ. ಪ್ರವಾಸೋದ್ಯಮದ ಸ್ಪಷ್ಟ ಜ್ಞಾನ ಅವರಲ್ಲಿ ಇರುವುದರಿಂದ ಕಾರ್ಯಸಾಧು ಯೋಜನೆಗಳನ್ನು ಹಾಕಿಕೊಳ್ಳಲು ಸಾಧ್ಯವಾಗುತ್ತದೆ.

ರಾಜ್ಯಕ್ಕೆ ಒಂದು ಪ್ರವಾಸೋದ್ಯಮ ಮಂಡಳಿ ಬೇಕು ನಿಜ. ಆದರೆ, ಅದು ಉದ್ಯಮಿಗಳ ಕ್ಲಬ್‌ ಆಗಬಾರದು. ಸಾಹಿತ್ಯ, ಸಂಸ್ಕೃತಿ, ಉದ್ಯಮ, ಪರಂಪರೆ ಮೊದಲಾದ ಕ್ಷೇತ್ರಗಳ ಪ್ರತಿನಿಧಿಗಳು ಅಲ್ಲಿರಬೇಕು. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಉನ್ನತಾಧಿಕಾರದ ಮಂಡಳಿ ಅದಾಗಬೇಕು. ಅದು ಕಾಲಕಾಲಕ್ಕೆ ಸಭೆ ಸೇರಿ, ಯೋಜನೆಗಳನ್ನು ರೂಪಿಸಬೇಕು. ಇಲಾಖೆಗೆ ಮಾರ್ಗದರ್ಶನ ನೀಡುವಂತೆ ಇರಬೇಕು.

ಪ್ರವಾಸೋದ್ಯಮ ಇಲಾಖೆಗೆ ಸಿಬ್ಬಂದಿ ಕೊರತೆ ಒಂದು ಶಾಪವಾಗಿ ಕಾಡುತ್ತಾ ಬಂದಿದೆ. ಪ್ರವಾಸಿ ತಾಣಗಳ ಕುರಿತು ಸಮಗ್ರ ಮಾಹಿತಿ ಇರುವ ಸಂಪನ್ಮೂಲ ವ್ಯಕ್ತಿಗಳು ಇಲಾಖೆಗೆ ತೀರಾ ಅಗತ್ಯ ವಾಗಿದೆ. ಎಂತಹ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಂಡರೂ ಅದಕ್ಕೆ ತಕ್ಕಂತೆ ಸಮರ್ಪಣಾಭಾವ ಕಾಣದಿದ್ದರೆ ಎಲ್ಲವೂ ವ್ಯರ್ಥ ವಾಗುತ್ತದೆ. ಹಳಿತಪ್ಪಿದ ‘ಸುವರ್ಣ ರಥ’ ಹಾಗೂ ದಿಕ್ಕುತಪ್ಪಿದ ‘ಅತಿಥಿ ದೇವೋಭವ’ ಯೋಜನೆಗಳೇ ಇದಕ್ಕೆ ಉದಾಹರಣೆ.
ನಮ್ಮ ಶಾಸಕರಿಗೆ ಕ್ಷೇತ್ರದ ವ್ಯಾಧಿ ಅತಿಯಾಗಿದೆ. ಏನೇ ಯೋಜನೆಗಳಿದ್ದರೂ ಅದು ತಮ್ಮ ಕ್ಷೇತ್ರದಲ್ಲೇ ಅನುಷ್ಠಾನವಾಗ  ಬೇಕು ಎಂಬ ಹಪಾಹಪಿ. ಹಿಂದೆ ಸಚಿವರೊಬ್ಬರು ತಮ್ಮೂರಿನ ಕೆರೆಯಲ್ಲಿ ಬೋಟಿಂಗ್‌ ವ್ಯವಸ್ಥೆ ಮಾಡಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿಸಿದರು. ಮತ್ತೊಬ್ಬರು ಬೆಟ್ಟಕ್ಕೆ ಬೆಳಕಿನ ವ್ಯವಸ್ಥೆ ಮಾಡುವ ಹೆಸರಿನಲ್ಲಿ ಹಣ ಪೋಲು ಮಾಡಿದರು. ಮೊದಲು ಪ್ರವಾಸಿ ತಾಣಗಳು ಅಭಿವೃದ್ಧಿಯಾಗಬೇಕು. ಆಗ ಅದರ ಲಾಭ ಅಕ್ಕ–ಪಕ್ಕದ ತಮ್ಮ ಕ್ಷೇತ್ರಗಳಿಗೂ ದಕ್ಕುತ್ತದೆ ಎಂಬುದನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು.

ಪ್ರವಾಸೋದ್ಯಮ ಒಂದು ಅದ್ಭುತ ಸಾಧ್ಯತೆಗಳುಳ್ಳ ಉದ್ಯಮ. ಇಲ್ಲಿ ಮಾಲಿನ್ಯ ಇಲ್ಲ, ಇದು ಜನಸ್ನೇಹಿ ಕೂಡ ಹೌದು. ನಾವು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಬಗ್ಗೆ ಸಾಕಷ್ಟು ಮಾತನಾಡುತ್ತೇವೆ. ಈ ಎರಡು ಕ್ಷೇತ್ರಗಳು ಎಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗ ನೀಡಬಲ್ಲವು. ಆದರೆ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯಿಂದ ಒಬ್ಬ ಹೂವು ಮಾರುವವ, ಒಬ್ಬ ಹಾವಾಡಿಗ ಕೂಡ ತನ್ನದೇ ಆದ ನೆಲೆ ಕಂಡುಕೊಳ್ಳುತ್ತಾನೆ. ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣನಾದವ ಸಹ ಇಲ್ಲಿ ಬದುಕು ಕಂಡುಕೊಳ್ಳುತ್ತಾನೆ. ಎಲ್ಲ ವರ್ಗಗಳ, ಎಲ್ಲ ಕೌಶಲಗಳ ಜನರಿಗೆ ಉದ್ಯೋಗ ನೀಡಬಲ್ಲ ಸಾಮರ್ಥ್ಯ ಪ್ರವಾಸೋದ್ಯಮಕ್ಕೆ ಇದೆ. ನಮ್ಮ ಆಚಾರ-ವಿಚಾರ, ಕರಕುಶಲ ಕಲೆಗಳನ್ನು ದೇಶ ವಿದೇಶಗಳ ಜನರಿಗೆ ತಿಳಿಸಿಕೊಡುವ ಅವಕಾಶ ಇರುವ ಉದ್ಯಮ ಇದು. ಅದನ್ನು ನಾವು ಬಳಸಿಕೊಳ್ಳಬೇಕು. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ನನ್ನಲ್ಲಿ ಮಿತಿಯಿಲ್ಲದ ಕನಸುಗಳಿವೆ.

ಏನು ಆಗಬೇಕು?

ಅಲ್ಪಾವಧಿಯಲ್ಲಿ...
* ರಾಷ್ಟ್ರೀಯ, ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಾಜ್ಯದ ಪ್ರವಾಸಿ ತಾಣಗಳ ಕುರಿತು ಪ್ರಚಾರ ಮಾಡಬೇಕು. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಎಲ್ಲರನ್ನೂ ಒಂದೆಡೆ ಸೇರಿಸಲು ‘ಕನೆಕ್ಟ್‌’ ಸಮಾವೇಶಗಳನ್ನು ಮಾಡಬೇಕು
* ಪ್ರತಿಕೂಲ ವಾತಾವರಣದಲ್ಲೂ ಯುಎಇ, ಸಿಂಗಪುರ (ಈ ದೇಶಗಳಲ್ಲಿ ಕಾಡುಗಳಿಲ್ಲ; ಪಾರಂಪರಿಕ ತಾಣಗಳೂ ಇಲ್ಲ), ಇಂಗ್ಲೆಂಡ್‌ ಹಾಗೂ ಫ್ರಾನ್ಸ್‌ ದೇಶಗಳು ಪ್ರವಾಸೋದ್ಯಮದಲ್ಲಿ ಬೆಳೆದಿರುವ ಪರಿ ನಮಗೆ ಮಾದರಿ ಆಗಬೇಕು. ನಮ್ಮಲ್ಲಿರುವ ಪ್ರಕೃತಿದತ್ತವಾದ ಅಪ್ಯಾಯಮಾನ ಹವಾಮಾನ, ಆಕರ್ಷಕ ಪ್ರವಾಸಿ ತಾಣಗಳನ್ನು ಬಳಸಿಕೊಂಡು ಬೆಳೆಯಬೇಕು
* ಹಳಿ ತಪ್ಪಿದ ಸುವರ್ಣ ರಥ, ದಿಕ್ಕು ತಪ್ಪಿದ ಅತಿಥಿ ದೇವೋಭವ ಯೋಜನೆಗಳನ್ನು ಮತ್ತೆ ಸರಿದಾರಿಗೆ ತರಬೇಕು
* ಇದುವರೆಗೆ ಹೆಚ್ಚಾಗಿ ಗಮನಕೊಡದ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು (ಉದಾಹರಣೆಗೆ: ಬೀದರ್‌, ಕಲಬುರ್ಗಿ, ದಾಂಡೇಲಿ)
* ಪರಿಸರ, ಆರೋಗ್ಯ, ಶಿಕ್ಷಣ, ವ್ಯಾಪಾರ ಪ್ರವಾಸೋದ್ಯಮವನ್ನು ಒಂದಕ್ಕೊಂದು ಪೂರಕವಾಗಿ ಅಭಿವೃದ್ಧಿ ಮಾಡಬೇಕು
* ಪ್ರವಾಸಿ ತಾಣಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ತಾಣಗಳನ್ನು ಸುಲಭವಾಗಿ ತಲುಪಲು ದಾರಿಯುದ್ದಕ್ಕೂ ಸೂಚನಾ ಫಲಕಗಳನ್ನು ಹಾಕಬೇಕು. ಜಿಲ್ಲಾ ಪ್ರವಾಸೋದ್ಯಮ ಪರಿಷತ್‌ಗಳಿಗೆ ಮರುಜೀವ ನೀಡಬೇಕು
* ಹೋಂ ಸ್ಟೇಗಳು, ಸ್ಥಳೀಯವಾಗಿ ಸೇವೆ ಒದಗಿಸುವ ಇತರ ಸಣ್ಣ ಉದ್ಯಮಗಳಿಗೆ ಪ್ರಮಾಣಪತ್ರ ನೀಡುವ ವ್ಯವಸ್ಥೆ ಆಗಬೇಕು. ಆ ಮೂಲಕ ಗುಣಮಟ್ಟ ಖಾತರಿಗೊಳಿಸಿ ಪ್ರವಾಸಿಗಳಿಗೆ ಆಯ್ಕೆಯನ್ನು ಸುಲಭಗೊಳಿಸಬೇಕು
* ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವ ನಿರಂತರವಾಗಿ ಮುಂದುವರಿಯಲು ಪ್ರತೀವರ್ಷ ಟ್ರಾವೆಲ್‌ ಏಜೆಂಟ್‌ಗಳು, ಹೋಟೆಲ್‌ ಮಾಲೀಕರ ಸಭೆ ನಡೆಸಬೇಕು. ವರ್ಷಕ್ಕೊಮ್ಮೆ ಅಂತರರಾಷ್ಟ್ರೀಯ ಪ್ರವಾಸಿ ಮೇಳ ಸಂಘಟಿಸಬೇಕು
* ಫೋನ್‌, ಇಂಟರ್ನೆಟ್‌ ಸಂಪರ್ಕ ಎಲ್ಲೆಡೆ ಸಿಗುವಂತೆ ನೋಡಿಕೊಳ್ಳಬೇಕು ಹಾಗೂ ಪ್ರವಾಸಿಗರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕು

ಮಧ್ಯಮಾವಧಿಯಲ್ಲಿ...
*ಹಂಪಿ, ಐಹೊಳೆ, ಪಟ್ಟದಕಲ್‌, ಬೇಲೂರು, ಹಳೇಬೀಡು ಮೊದಲಾದ ಪಾರಂಪರಿಕ ತಾಣಗಳನ್ನು ‘ಪ್ರವಾಸಿ ನಗರ’ಗಳಾಗಿ ಪರಿವರ್ತಿಸಲು ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು.
*ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಒಂದಕ್ಕೊಂದು ಪೂರಕವಾಗಿವೆ. ಹೀಗಾಗಿ ಈ ಎರಡೂ ಇಲಾಖೆಗಳಿಗೆ ಒಬ್ಬರೇ ಸಚಿವರು, ಕಾರ್ಯದರ್ಶಿ ಇರುವಂತೆ ನೋಡಿಕೊಳ್ಳಬೇಕು
*ಪ್ರವಾಸೋದ್ಯಮದಲ್ಲಿ ವಿಪರೀತ ಉದ್ಯೋಗಾವಕಾಶಗಳು ಇವೆ. ಈ ಉದ್ಯೋಗಗಳಿಗೆ ವೃತ್ತಿಪರರನ್ನು ತಯಾರುಮಾಡಲು ಪೂರಕವಾದ ಕೋರ್ಸ್‌ಗಳನ್ನು ವಿಶ್ವವಿದ್ಯಾಲಯಗಳಲ್ಲಿ ಆರಂಭಿಸಬೇಕು
*ರಾಜ್ಯದ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮ ಹೂಡಿಕೆ ಮೇಳಗಳನ್ನು ನಡೆಸಬೇಕು
*ಪ್ರವಾಸೋದ್ಯಮಕ್ಕೆ ಪೂರಕವಾಗಿ ಲೋಕೋಪಯೋಗಿ, ಕನ್ನಡ ಮತ್ತು ಸಂಸ್ಕೃತಿ, ಅರಣ್ಯ, ನೀರಾವರಿ, ತೋಟಗಾರಿಕೆ, ಸಾರಿಗೆ ಇಲಾಖೆಗಳು ಸಹ ತಮ್ಮ ಯೋಜನೆಗಳನ್ನು ರೂಪಿಸಬೇಕು.

ದೀರ್ಘಾವಧಿಯಲ್ಲಿ...
*ಪ್ರವಾಸಿ ತಾಣಗಳ ಮಧ್ಯೆ ಅತಿ ವೇಗದ ಹೆದ್ದಾರಿಗಳು ಹಾಗೂ ಹೆದ್ದಾರಿಯುದ್ದಕ್ಕೂ  ಹಾಲಿಡೇ ವಿಲೇಜ್‌ಗಳನ್ನು ನಿರ್ಮಿಸಬೇಕು. ದೊಡ್ಡ ದೊಡ್ಡ ಪ್ರವಾಸಿ ಕೇಂದ್ರಗಳಿಗೆ ಹತ್ತಿರದಲ್ಲಿ ಪುಟ್ಟ–ಪುಟ್ಟ ವಿಮಾನ ನಿಲ್ದಾಣಗಳ ವ್ಯವಸ್ಥೆ ಮಾಡಬೇಕು
*ವಿಶ್ವದರ್ಜೆಯ ಹಾಗೂ ವಿಶ್ವಮಟ್ಟದ ಯೋಜನೆಗಳನ್ನೇ ಹಾಕಿಕೊಳ್ಳಬೇಕು. ಡಿಸ್ನಿಲ್ಯಾಂಡ್‌, ವಾಟರ್‌ ವರ್ಲ್ಡ್‌ನಂತಹ ತಾಣಗಳನ್ನೂ ಮೀರಿಸುವಂತಹ ಮನರಂಜನೆ ಕೇಂದ್ರಗಳನ್ನು ನಿರ್ಮಿಸಬೇಕು
*ಪೂರ್ವ ಹಾಗೂ ಪಶ್ಚಿಮದ ಸಂಪರ್ಕ ಕೊಂಡಿಗಳಾಗಿರುವ ಸಿಂಗಪುರ ಹಾಗೂ ದುಬೈನ ಅವಕಾಶಗಳನ್ನು ಬೆಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣಗಳು ಪಡೆಯುವಂತೆ ಅಲ್ಲಿನ ಸೌಲಭ್ಯಗಳನ್ನು ವಿಶ್ವದರ್ಜೆಯ ಎತ್ತರಕ್ಕೆ ಏರಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT