ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಜೊತೆಗೆ ನೀವಿದ್ದೀರಾ?

Last Updated 29 ನವೆಂಬರ್ 2016, 19:30 IST
ಅಕ್ಷರ ಗಾತ್ರ

–ಡಿ ಎಂ. ಹೆಗಡೆ

ನಾವೆಲ್ಲರೂ ಇರುವುದೇ ಹೀಗೆ!

ನಮಗೆ ನಮ್ಮ ನೆರೆಹೊರೆಯವರ ಬಗ್ಗೆ ಬಹಳಷ್ಟು ಗೊತ್ತಿರುತ್ತದೆ. ನಮಗೆ ಸಿನಿಮಾ ನಟರ ಬಗ್ಗೆ, ರಾಜಕಾರಣಿಗಳ ಬಗ್ಗೆ ಗೊತ್ತಿರುತ್ತದೆ. ನಮಗೆ ಯಾವಾಗಲೂ ಉಳಿದವರ ಬಗ್ಗೆ ಅವರಿವರ ಬಗ್ಗೆ ಇನ್ನಷ್ಟು ಮತ್ತಷ್ಟು ತಿಳಿದುಕೊಳ್ಳುವ ಆಸೆ ಇರುತ್ತದೆ. ಆದರೆ, ನಮಗೆ ನಮ್ಮ ಬಗ್ಗೆ ಬಹಳ ಕಡಿಮೆ ಗೊತ್ತಿರುತ್ತದೆ. ಅಥವಾ ಬಹಳಷ್ಟು ಸಲ ನಮಗೆ ನಮ್ಮ ಬಗ್ಗೆ ರವಷ್ಟೂ ಗೊತ್ತಿರುವುದೇ ಇಲ್ಲ! ಉಳಿದವರ ಬಗ್ಗೆ ನಮಗೆ ಇರುವ ಕುತೂಹಲ ಜಾಸ್ತಿ. ನಮ್ಮ ಬಗ್ಗೆ ನಮಗಿರುವ ಆಸಕ್ತಿ ಬಹುತೇಕ ನಾಸ್ತಿ! ನಮ್ಮ ಬಗ್ಗೆ ನಾವು ತಿಳಿದುಕೊಳ್ಳಲಿಕ್ಕಿದೆ ಅಥವಾ ತಿಳಿದುಕೊಳ್ಳಬೇಕಾಗಿದೆ ಎನ್ನುವುದನ್ನು ನಮಗೆ ಯಾರೂ ಹೇಳಿರುವುದಿಲ್ಲ.

ನಾವು ಬೇರೆಯವರ ಜೊತೆಗೆ ಮಾತನಾಡುವಾಗ ನಮ್ಮ ಮಾತುಗಳನ್ನೇ ಗಮನಿಸಿಕೊಂಡಾಗ, ನಾವು ಎಷ್ಟೊಂದು ಆಸಕ್ತಿಯಿಂದ ಅವರಿವರ ಬಗ್ಗೆ ಎಷ್ಟೊಂದು ಮಾತನಾಡುತ್ತೇವೆ ಎನ್ನುವುದನ್ನು ನಾವೇ ತಿಳಿದುಕೊಳ್ಳಬಹುದು. ಬೆಳಗಿನಿಂದ ರಾತ್ರಿಯವರೆಗೆ ನಾವೆಲ್ಲರೂ ಅವರಿವರ ಜೊತೆ ಮಾತನಾಡುತ್ತಲೇ ಇರುತ್ತೇವೆ. ಅದನ್ನು ಹೊರತಾಗಿಯೂ ನಮ್ಮೊಳಗೂ ನಾವು ಮಾತನಾಡಿಕೊಳ್ಳುತ್ತಲೇ ಇರುತ್ತೇವೆ. ಹೊರಗಿನಿಂದ ನೋಡುವವರಿಗೆ ನಾವು ಮೌನವಾಗಿರುವಂತೆ ಕಂಡರೂ, ನಾವು ಮಾತ್ರ ನಮ್ಮೊಳಗಿನ ಮಾತುಕತೆಯಲ್ಲಿ ಮಗ್ನರಾಗಿರುತ್ತೇವೆ. ಕೆಲವರಂತೂ ಹೊರಗಿನಿಂದ ಯಾರಾದರೂ ಕೂಗಿ ಕರೆದರೂ ಕೇಳಿಸಲಾರದಷ್ಟು ತಮ್ಮೊಳಗಿನ ಮಾತುಕತೆಯಲ್ಲಿ ಮೈಮರೆತಿರುತ್ತಾರೆ. 

ನಮ್ಮ ದೈನಂದಿನ ಬಹಳಷ್ಟು ಸಮಸ್ಯೆಗಳಿಗೆ ನಾವು ಹೀಗಿರುವುದೇ ಕಾರಣ. ನಾವು ಅನುಭವಿಸುವ ಬಹಳಷ್ಟು ಮನೋದೈಹಿಕ ಸಮಸ್ಯೆಗಳಿಗೆ ನಮ್ಮನ್ನು ನಾವು ಸರಿಯಾಗಿ ಗಮನಿಸಿಕೊಳ್ಳದೇ ಇರುವುದೇ ಕಾರಣವಾಗಿದೆ. ಇದರ ಜೊತೆಗೆ ಉಳಿದವರ ಬಗ್ಗೆ ಅಗತ್ಯಕ್ಕಿಂತಲೂ ಹೆಚ್ಚಿಗೆ ಆಲೋಚನೆ ಮಾಡುವುದೂ ಮತ್ತೊಂದು ಬಹುಮುಖ್ಯ ಕಾರಣವಾಗಿದೆ. ಅವರಿವರ ಬಗ್ಗೆ ಆಲೋಚಿಸುತ್ತಾ ನಮ್ಮ ಮನಸ್ಸನ್ನು ಗಲೀಜಮಾಡಿಕೊಳ್ಳುತ್ತಾ ಇರುತ್ತೇವೆ.

ನಮ್ಮ ಮನಸ್ಸು ಹಾಳಾದರೆ ತತ್‌ಕ್ಷಣ ನಮ್ಮ ಭಾವನೆಗಳು ಗಲಿಬಿಲಿಗೊಳ್ಳುತ್ತವೆ. ಹಾಗಾದಕೂಡಲೇ ನಮ್ಮ ಮನಸ್ಸು ಮತ್ತು ಶರೀರದ ನಡುವಿನ ಸಾಮರಸ್ಯ ಹದಗೆಡಲಿಕ್ಕೆ ಶುರುವಾಗುತ್ತದೆ. ಪರಿಸ್ಥಿತಿ ಹೀಗೇ ಮುಂದುವರಿಯುತ್ತಾ  ಕೆಲವಷ್ಟು ರೋಗಗಳು ಉಲ್ಬಣಿಸಲಿಕ್ಕೆ ಶುರುವಾಗುತ್ತವೆ. ಅಂತಹ ರೋಗಗಳಿಗೆ ತತ್‌ಕ್ಷಣಕ್ಕೆ ನಾವು ಔಷಧವನ್ನು ಮಾಡುತ್ತೇವೆ.

ಹಾಗೆ ಮಾಡುವ ಬಹಳಷ್ಟು ಔಷಧಗಳು ಕೇವಲ ಶರೀರಕ್ಕೆ ಮಾಡುವಂತಹುವಾಗಿರುತ್ತದೆ. ಆದರೆ, ಔಷಧ ಬೇಕಾಗಿರವುದು ಮನಸ್ಸು ಮತ್ತು ಶರೀರ ಎರಡಕ್ಕೂ ಆಗಿರುತ್ತದೆ. ಆದರೆ, ಮನಸ್ಸಿನ ಬಗ್ಗೆ ಗಮನ ಹರಿಸದ ನಾವು ನಮ್ಮ ರೋಗದ ಅನುಭವವು ಶರೀರದಲ್ಲಿ ಉಂಟಾಗಿರುವುದರಿಂದ ಶರೀರಕ್ಕೆ ಔಷಧವನ್ನು ಮಾಡುತ್ತೇವೆ. ಎಷ್ಟೇ ಉಪಚಾರ ಮಾಡಿದರೂ, ವೈದ್ಯರನ್ನು ಬದಲಾಯಿಸಿದರೂ, ಔಷಧಗಳನ್ನು ಬದಲಾಯಿಸಿದರೂ, ರೋಗನಿಯಂತ್ರಣಕ್ಕೆ ಬರದಿರುವಾಗ ಮತ್ತಷ್ಟು ಗಾಬರಿಗೊಳ್ಳುತ್ತೇವೆ. ಮನಸ್ಸಿನ ಅಂತರಾಳದಲ್ಲಿ ಭಯ ಶುರುವಾಗುತ್ತದೆ. ಭಯದಿಂದಾಗಿ ಆರೋಗ್ಯ ಮತ್ತಷ್ಟು ಹದಗೆಡುತ್ತದೆ. ಒಂದೊಂದಾಗಿ ಶರೀರದ ಭಾಗಗಳು ಸಮತೋಲನವನ್ನು ಕಳೆದುಕೊಳ್ಳಲಿಕ್ಕೆ ಪ್ರಾರಂಭಿಸುತ್ತವೆ.

ಹೀಗಾಗಿ, ನಾವು ಯಾವಾಗಲೂ ನಮ್ಮ ಮನಸ್ಸಿನ ಬಗ್ಗೆ ಮತ್ತು ಅದರ ಆರೋಗ್ಯದ ಬಗ್ಗೆ ಹೆಚ್ಚು ಗಮನವನ್ನಿಡಬೇಕು. ಧನಾತ್ಮಕ ಆಲೋಚನೆಗಳಿಂದ ಹೆಚ್ಚು ನೆಮ್ಮದಿಯಿಂದ ಇರುವ ಮನಸ್ಸಿನ ಮನುಷ್ಯರ ಆಯುರಾರೋಗ್ಯ ಹೆಚ್ಚು ಚೆನ್ನಾಗಿರುತ್ತದೆ. ನಮ್ಮ ಬಗ್ಗೆ ನಾವು ಆಲೋಚನೆ ಮಾಡದಿದ್ದರೆ ಮತ್ತೆ ಯಾರು ನಮ್ಮ ಬಗ್ಗೆ ಆಲೋಚನೆ ಮಾಡಬೇಕು.

ಮೊದಲು ನಮ್ಮ ಬಗ್ಗೆ ನಾವು ಆಲೋಚಿಸುವುದನ್ನು ರೂಢಿಮಾಡಿಕೊಳ್ಳಬೇಕು. ವಿಶ್ವವಂದ್ಯ ಸ್ವಾಮಿ ವಿವೇಕಾನಂದರು ಹೇಳಿದ ಚೈತನ್ಯಪೂರ್ಣವಾದ ಮಾತು ನನಗಿಲ್ಲಿ ನೆನಪಾಗುತ್ತದೆ. ‘ದಿನದಲ್ಲಿ ಒಮ್ಮೆಯಾದರು ನಿಮ್ಮ ಜೊತೆಗೆ ನೀವು ಮಾತನಾಡಿರಿ. ಇಲ್ಲವಾದರೆ ಜಗತ್ತಿನ ಅತ್ಯದ್ಭುತ ವ್ಯಕ್ತಿಯೊಬ್ಬರ ಜೊತೆಗೆ ಇರುವ ಅವಕಾಶವನ್ನು ಕಳೆದುಕೊಳ್ಳುತ್ತೀರಿ.’ 

ಎಂದರೆ, ನೀವು ಜಗತ್ತಿನ ಒಬ್ಬ ಅತ್ಯದ್ಭುತ ವ್ಯಕ್ತಿ. ಹೀಗೆಂದು ಸ್ವಾಮೀ ವಿವೇಕಾನಂದರು ಹೇಳಿದ್ದಾರೆ. ಅವರು ಹೇಳಿದಂತೆ ನಮಗೆ ನಮ್ಮ ಬಗ್ಗೆ ಅನ್ನಿಸಬೇಕಲ್ಲ! ಸ್ವಾಮೀಜಿಯವರು ಜಗತ್ತಿನ ಅತ್ಯದ್ಭುತ ವ್ಯಕ್ತಿ ಎನ್ನುವುದನ್ನು ನಾವೆಲ್ಲರೂ ಮನಸಾರೆ ಒಪ್ಪುತ್ತೇವೆ. ಆದರೆ, ಅವರು ಹೇಳಿದಂತೆ ನಮ್ಮಲ್ಲಿರುವ ಶಕ್ತಶಾಲಿ ವ್ಯಕ್ತಿತ್ವವನ್ನು ಪತ್ತೆಹಚ್ಚುವಲ್ಲಿ ನಾವು ಎಡವುತ್ತೇವೆ. ಅಲ್ಲಿಯೇ ಇರುವುದು ಈ ಜಗದ ಸೋಜಿಗ. ತನ್ನೊಳಗಿನ ಚೈತನ್ಯವನ್ನು ಅರಿತುಕೊಳ್ಳುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ.

ತನ್ನನ್ನು ತಾನು ಜಗತ್ತಿನ ಅಪರೂಪದ ವ್ಯಕ್ತಿ ಅಂತ ತಿಳಿದುಕೊಳ್ಳುವುದು ಅಹಂಕಾರವಾಗುತ್ತದೆಯಲ್ಲವೇ? – ಎಂದು ಕೆಲವರು ಪ್ರಶ್ನಿಸುತ್ತಾರೆ. ಆದರೆ, ಅದು ಹಾಗಲ್ಲ. ತನ್ನ ಸಾಮರ್ಥ್ಯವನ್ನು ತಾನು ಅರಿತುಕೊಳ್ಳುವುದು ಮತ್ತು ತಾನು ಸಂತೋಷದಿಂದ ಇರುವುದು ಹಾಗೂ ಇತರರ ಸಂತೋಷಕ್ಕಾಗಿ ಬದುಕುವುದು ಅಹಂಕಾರವಾಗುವುದಿಲ್ಲ. ಅದು ಸಾರ್ಥಕ ಬದುಕಿನ ಮಾದರಿಯಾಗುತ್ತದೆ. ತಾನು ಕಣ್ಣಿಲ್ಲದವನು  ಕೈಯಲ್ಲಿ ಬ್ಯಾಟರಿಯನ್ನಿಟ್ಟುಕೊಂಡು ಕಣ್ಣಿರುವವರ ದಾರಿಗೆ ಬೆಳಕ್ಕನ್ನು ತೋರಿಸಿದವನು ಹೇಗೆ ಅದ್ಭುತ ವ್ಯಕ್ತಿಯೋ, ಹಾಗೆಯೇ ಸ್ವಲ್ಪವಾದರೂ ಬೆಳಕನ್ನು ಕೊಡುವುದು ಉಳಿದವರ ಕರ್ತವ್ಯವಾಗುತ್ತದೆಯಲ್ಲವೇನು?

ಸೃಷ್ಟಿಯಲ್ಲಿ ಎಲ್ಲವೂ ಅಪರೂಪದ್ದೇ ಆಗಿವೆ. ಅಮೂಲ್ಯ ಅಲ್ಲದಿರುವುದನ್ನು ಸೃಷ್ಟಿಯೂ ಕೂಡ ಸೃಷ್ಟಿಸುವುದಿಲ್ಲ. ಅಕಸ್ಮಾತ್ ಅಂತಹುದೇನಾದರೂ ಸೃಷ್ಟಿಯಾಗಿದ್ದೇ ಆದರೆ ಅದು ಉಳಿದು ಬೆಳೆಯುವುದಿಲ್ಲ. ಅಶಕ್ತವಾದದ್ದೆಲ್ಲವೂ ನಶಿಸಿ ಹೋಗುತ್ತದೆ. ಅದು ಕಾಲನಿಯಮವೇ ಆಗಿದೆ.

ತನ್ನೊಳಗಿನ ಚೈತನ್ನವನ್ನು ತಾನು ಅರಿತುಕೊಂಡು, ಅದನ್ನು ತನ್ನ ಮತ್ತು ಇತರರ ಸಂತೋಷಕ್ಕಾಗಿ ಬಳಸಿಕೊಳ್ಳುವುದರಲ್ಲಿಯೇ ಬದುಕಿನ ನಿಜವಾದ ಸಾರ್ಥಕತೆ ಇದೆ. ಅದನ್ನೇ ಸ್ವಾಮೀ ವಿವೇಕಾನಂದರು ಜಗತ್ತಿನ ಜನರಿಗೆ ತಿಳಿಸಿ ಹೇಳಲಿಕ್ಕೆ ಪ್ರಯತ್ನಿಸಿರುವುದು. ಸ್ವಾಮೀಜಿಯವರ ಜೀವನಸಂದೇಶಗಳನ್ನು ಅನುಸರಿಸುತ್ತ ನಡೆದರೆ ಯಾರದ್ದೇ ಆದರೂ ಜೀವನವೊಂದು ನಿತ್ಯ ಸಂತೋಷದ ಜಾತ್ರೆ!

ಹಾಗಾದರೆ, ದಿನಕ್ಕೊಮ್ಮೆಯಾದರೂ ನಾವು ನಮ್ಮ ಜೊತೆಗೆ ಮಾತನಾಡಬೇಕು. ನಾವು ನಮ್ಮ ಮನಸ್ಸಿನ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಳ್ಳಬೇಕು. ಅದರ ಬೇಕು ಬೇಡಗಳನ್ನು ಕೇಳಿಸಿಕೊಳ್ಳಬೇಕು. ಮನಸ್ಸಿಗೆ ನೋವಾಗುವ ಕೆಲಸವನ್ನು ಮಾಡಬಾರದು. ಮನಸ್ಸಿಗೆ ಗೆಲುವಾಗುವ ಕೆಲಸವನ್ನು ಮಾಡಬೇಕು.  ಬೇರೆಯವರನ್ನು ಮೆಚ್ಚಿಸಲಿಕ್ಕಾಗಿ, ನಮ್ಮ ಮನಸ್ಸಿಗೆ ನೋವಾಗುವಂತಹ ಯಾವುದೇ ಕೆಲಸವನ್ನಾದರೂ ಮಾಡಬಾರದು. ಮನಸ್ಸು ತನಗಾಗುವ ನೋವನ್ನು ಮರೆಯುವುದಿಲ್ಲ. ಮತ್ತು ಹಾಗೆ ಮನಸ್ಸಿನಾಳದಲ್ಲಿ ಶೇಖರಣೆಗೊಂಡ ನೋವು ಮುಂದೊಮ್ಮೆ ರೋಗವಾಗಿ ಪ್ರಕಟವಾಗುತ್ತದೆ. ಆಗ ಮತ್ತೂ ನೋವಿನಲ್ಲಿ ಬದುಕಬೇಕಾದ ಬವಣೆ ನಮ್ಮದಾಗುತ್ತದೆ.

ನಮ್ಮ ಮನಸ್ಸಿನ ಜೊತೆಗೆ ಅದರ ನೆಮ್ಮದಿಗಾಗಿ ನಾವು ಇರುವುದರಿಂದ ನಮ್ಮೊಳಗೆ ಸಮಾಧಾನ ಸಿಗುತ್ತದೆ. ಹೊರಗಡೆಯ ಯಾವುದರಿಂದಲೂ ಯಾವಾಗಲೂ ಸಿಗಲಾರದ ನೆಮ್ಮದಿ ಹಾಗೂ ಸಮಾಧಾನ ನಮ್ಮ ಮನಸ್ಸಿನ ಜೊತೆಗಿರುವುದರಿಂದ ಮಾತ್ರ ಸಿಗುತ್ತದೆ. ಆ ಸಮಾಧಾನವನ್ನು ಅನುಭವಿಸಲಿಕ್ಕೆ ಪ್ರತಿದಿನ ಒಂದಿಷ್ಟು ಸಮಯವನ್ನು ಮೀಸಲಿಡಬೇಕಾಗುತ್ತದೆ.

ದಿನದ ಕೆಲಸಗಳನ್ನೆಲ್ಲ ಮುಗಿಸಿಕೊಂಡು ಸಾಯಂಕಾಲ ಮನೆಗೆ ಬಂದ ನಂತರ ಕೈಕಾಲು ಮುಖವನ್ನು ತೊಳೆದುಕೊಂಡು ಅಥವಾ ಸ್ನಾನವನ್ನು ಮಾಡಿಕೊಂಡು ಸುಖಾಸನದಲ್ಲಿ ಕುಳಿತುಕೊಳ್ಳಬೇಕು. ಕಣ್ಣುಗಳನ್ನು ಮುಚ್ಚಿಕೊಂಡಿದ್ದರೆ ಒಳ್ಳೆಯದು. ದೀರ್ಘವಾಗಿ ಉಸಿರಾಡಿ. ಹಾಗೆಯೇ ನಿಮ್ಮ ಉಸಿರಾಟದ ಮೇಲೆ ಗಮನವನ್ನೆಲ್ಲ ಕೇಂದ್ರೀಕರಿಸಿ. ಮೂರ ನಿಮಿಷಗಳ ಕಾಲ ಇದನ್ನೇ ಮುಂದುವರೆಸಿ. ನಂತರ ಬೆಳಗಿನಿಂದ ಇಲ್ಲಿಯತನಕ ನಿಮ್ಮ ದಿನಚರಿಯನ್ನು ಗಮನಿಸಿ. ಇಡೀ ದಿನ ನಡೆದ ಎಲ್ಲ ಘಟನೆಗಳು ಟಿವಿ ಧಾರಾವಾಹಿಯಂತೆ ನಿಮ್ಮ ಮನಸ್ಸಿನ ಪರದೆಯ ಮೇಲೆ ಬಂದುಹೋಗುತ್ತವೆ. ಮೂರು ಸಲ ಉಸಿರಾಡಿ. ನಂತರ ಕಣ್ಣು ಬಿಡಿ. ಮೂರು ಸಲ ಉಸಿರಾಡಿ.

ಮತ್ತೆ ಕಣ್ಣುಗಳನ್ನು ಮುಚ್ಚಿಕೊಳ್ಳಿ. ಮೂರು ಸಲ ಉಸಿರಾಡಿ. ನಂತರ ಮನಸ್ಸಿಗೆ ಹಿತವೆನ್ನಿಸುವ ನೆನಪುಗಳನ್ನು ನೆನಪು ಮಾಡಿಕೊಳ್ಳಿ. ನಿಧಾನವಾಗಿ ತಲೆಯ ತುದಿಯಿಂದ ಕಾಲಬೆರಳುಗಳ ಕೊನೆಯವರೆಗೆ ನಿಮ್ಮ ಮನಸ್ಸನ್ನು ಕರೆದುಕೊಂಡು ಹೋಗಿ. ಶರೀರದ ಪ್ರತಿಯೊಂದು ಭಾಗವನ್ನು ಮನಸ್ಸು ತಲುಪಿದಾಗ ಆಯಾ ಭಾಗವನ್ನು ರಿಲ್ಯಾಕ್ಸ್‌ ಮಾಡುತ್ತ ಮುಂದುವರೆಯಿರಿ. ದೀರ್ಘವಾಗಿ ನಿಟ್ಟುಸಿರನ್ನು ಹೊರಗೆ ಹಾಕಿ. ನಂತರ ದೀರ್ಘವಾಗಿ ಪ್ರಾಣವಾಯುವನ್ನು ಮೂಗಿನ ಮೂಲಕ ಒಳಗೆಳೆದುಕೊಳ್ಳಿ.

ಪ್ರಾಣವಾಯುವು ನಿಮ್ಮ ಮೂಗಿನ ಮೂಲಕ ಶರೀರದ ಒಳಗೆ ಬರುತ್ತಿದ್ದಂತೆಯೇ, ನಿಮ್ಮ ಶರೀರದಲ್ಲಿ ಚೈತನ್ಯವು ತುಂಬುತ್ತಿರುವಂತೆ ಅಂದುಕೊಳ್ಳಿ. ನಿಧಾನವಾಗಿ ಬಿಸಿಯುಸಿರನ್ನು ನಿಧಾನವಾಗಿ ಹೊರಗೆ ಬಿಡಿ. ಇದನ್ನು ಐದು ಸಲ ಮಾಡಿ. ಇಷ್ಟಾಗುವಾಗ ಶರೀರ ಮತ್ತು ಮನಸ್ಸಿನ ಸುಸ್ತು ಕಡಿಮೆಯಾಗಿರುತ್ತದೆ. ನಿಮ್ಮಲ್ಲಿ ಸಾಕಷ್ಟು ಉತ್ಸಾಹ ಬಂದಿರುತ್ತದೆ. ಇನ್ನು ಮೇಲೆ ಹೀಗೆಯೇ ಸಂತೋಷದಿಂದ ಬದುಕುತ್ತೇನೆ ಎಂದು ಅಂದುಕೊಳ್ಳುತ್ತಾ ಮನಸ್ಸಿನಲ್ಲಿಯೇ ನಿಮ್ಮ ತಂದೆತಾಯಿಗೆ, ಸೃಷ್ಟಿಗೆ, ಭೂಮಾತೆಗೆ ಮತ್ತು ನಿಮ್ಮ ಸಂತೋಷಕ್ಕೆ ಕಾರಣರಾದ ಎಲ್ಲರಿಗೆ ಮನಸ್ಸಿನಾಳದಿಂದ ವಂದಿಸುತ್ತಾ ಕಣ್ಣುಗಳನ್ನು ಬಿಡಿ.

ಇದನ್ನು ಮಾಡುತ್ತ ಮಾಡುತ್ತ ನಿಮ್ಮ ದೈನಂದಿನ ಬದುಕಿನಲ್ಲಿ ಉಂಟಾಗುವ ಧನಾತ್ಮಕ ಬದಲಾವಣೆಗಳನ್ನು ಗುರುತಿಸಿಕೊಳ್ಳಿ. ನಿಮ್ಮ ಎಲ್ಲ ನೆಮ್ಮದಿ ಹಾಗೂ ಸಂತೋಷಕ್ಕೆ ಕಾರಣವಾಗುತ್ತಿರುವ ಎಲ್ಲವನ್ನೂ ಕೃತಜ್ಞತೆಯಿಂದ ಸ್ಮರಿಸುತ್ತ ಇರಿ. ನಿಮ್ಮ ಎದೆ, ಹೊಟ್ಟೆ, ಬೆನ್ನು ಮತ್ತು ಕೈಕಾಲುಗಳಲ್ಲಿ ಹೊಸ ಹುರುಪು ಬಂದಂತಾಗುತ್ತಿರುವುದನ್ನು ಗಮನಿಸಿಕೊಳ್ಳಿ. 

ಹೀಗೆಯೇ, ನಿಮ್ಮ ಜೊತೆಗೆ ನೀವಿರುವದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದಾಗುವ ಅಸಂಖ್ಯ ಪ್ರಯೋಜನಗಳನ್ನು ಅನುಭವಿಸುತ್ತಾ ಸುಖವಾಗಿರಿ. ಉಳಿದ ಯಾರಾದರೂ ಇರುತ್ತಾರೋ ಅಥವಾ ಇಲ್ಲವೋ ಎನ್ನುವುದು ಹೊರಗಿನ ವಿಚಾರ. ನೀವಾದರೂ ನಿಮ್ಮ ಜೊತೆಗಿದ್ದೀರಾ? ಹಾಗಂತ ನಿಮ್ಮನ್ನೇ ನೀವು ಪ್ರಶ್ನಿಸಿಕೊಳ್ಳುತ್ತ ಇರಿ. ಮತ್ತು ಸಾಧ್ಯವಾದಷ್ಟು ಹೆಚ್ಚು ಹೊತ್ತು ಈ ಜಗತ್ತಿನ ಅತ್ಯದ್ಭುತ ವ್ಯಕ್ತಿಯ (ನಿಮ್ಮ) ಜೊತೆಗೆ ನೀವಿರುವಂತೆ ನೋಡಿಕೊಳ್ಳಿ. ನಿಮ್ಮ ಬದುಕಿನ ಯಶಸ್ಸು ಮತ್ತು ಸಂತೋಷ ಸದಾ ನಿಮ್ಮದಾಗಲಿ.


(ಸಂಮೋಹನ ತಜ್ಙ, ಆಪ್ತಸಮಾಲೋಚಕ ಮತ್ತು ತರಬೇತುದಾರರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT