ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಹೂಡಿಕೆಯ ಉತ್ತಮ ತತ್ವ

Last Updated 29 ನವೆಂಬರ್ 2016, 19:30 IST
ಅಕ್ಷರ ಗಾತ್ರ

-ಭರತ್‌ ಷಾ

ಬಂಡವಾಳ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದು  ಅಂದು ಕೊಂಡಷ್ಟು ಸುಲಭದ ಕೆಲಸವಲ್ಲ. ಮಾರುಕಟ್ಟೆಯ ಏರಿಳಿತದ ಬಗ್ಗೆ ಕಣಿ ಕೇಳುತ್ತ  ನಿರ್ಧಾರಕ್ಕೆ ಬರುವುದೂ ಜಾಣತನವೂ ಅಲ್ಲ. ಯಾವುದೇ ಕಾರಣಕ್ಕೂ  ಗಲಿಬಿಲಿಗೆ ಒಳಗಾಗದೇ, ಕಠಿಣ ಶಿಸ್ತು ಮತ್ತು ಪ್ರಯಾಸಕರ ಪ್ರಯತ್ನಗಳಿಂದ  ಬಂಡವಾಳ ಪೇಟೆಯಲ್ಲಿ ನಮಗೆ ಬೇಕಾದ ಷೇರುಗಳನ್ನು ಸರಳವಾಗಿ ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.

ಮಾರುಕಟ್ಟೆಯ ಏರಿಳಿತದ  ಮಟ್ಟದ ಬಗ್ಗೆ ಅಂದಾಜು ಮಾಡಿ ಸಕಾಲದಲ್ಲಿ ಹೂಡಿಕೆ ನಿರ್ಧಾರದ ದೋಣಿ ಏರಿ ಪ್ರತಿಕೂಲ ಅಲೆಗಳ ವಿರುದ್ಧ ಮುಂದೆ ಸಾಗುವ ಜಾಣ್ಮೆ ತೋರುತ್ತ ಮುನ್ನಡೆಯಬೇಕು. ಹೂಡಿಕೆ ಮಾಡಿದ ಬಂಡವಾಳದ ಸಂರಕ್ಷಣೆ ಮಾಡುವುದು ಮತ್ತು ಬಂಡವಾಳ ವೃದ್ಧಿ ಮಾಡುವುದು ಉತ್ತಮ ಹೂಡಿಕೆಯ ತತ್ವಜ್ಞಾನವಾಗಿದೆ. ಸಂರಕ್ಷಣೆ ಮತ್ತು ವೃದ್ಧಿಯಲ್ಲಿ ಯಾವುದು ಮುಖ್ಯವಾಗಿರಬೇಕು ಎನ್ನುವ ಗೊಂದಲವೂ ಎದುರಾಗುತ್ತದೆ. ಎರಡೂ ಸಮಾನ ಮಹತ್ವ ಹೊಂದಿದ್ದರೂ ಸಂಪತ್ತು ವೃದ್ಧಿಗಿಂತ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಲು ಗಮನ ಹರಿಸಬೇಕು.

ಹೂಡಿಕೆ ಮಾಡಿದ  ಬಂಡವಾಳದ ಸಂರಕ್ಷಣೆ ಎಂದರೆ, ಪ್ರತಿ ದಿನದ ಬದಲಾವಣೆಗಳಲ್ಲಿ ಯಾವುದೇ ನಷ್ಟ ಉಂಟಾಗದಂತೆ ನೋಡಿಕೊಳ್ಳುವುದೂ ಅಲ್ಲ.  ಕಾಲ ಗತಿಸಿದಂತೆ ಹೂಡಿಕೆ ಮಾಡಿದ ಬಂಡವಾಳವು ಶಾಶ್ವತವಾಗಿ ನಾಶವಾಗದಂತೆ ಕಾಳಜಿ ವಹಿಸುವುದೇ ಆಗಿದೆ.

ಬಂಡವಾಳದ ಅತ್ಯುತ್ತಮ ನಿರ್ವಹಣೆ ಎಂದರೆ, ನ್ಯಾಯೋಚಿತ ರೀತಿಯಲ್ಲಿ ಬಂಡವಾಳವನ್ನು ವಿತರಿಸುವುದರ ಜತೆಗೆ, ಸಮಗ್ರತೆ ಕಾಯ್ದುಕೊಂಡು ಸ್ಪರ್ಧಾತ್ಮಕ ಬಗೆಯಲ್ಲಿ ಅದನ್ನು ಕಾರ್ಯಗತಗೊಳಿಸುವ ಜಾಣ್ಮೆಯನ್ನೂ ಪ್ರದರ್ಶಿಸಬೇಕು.ವಹಿವಾಟಿನ  ಗುಣಮಟ್ಟ ಕಣ್ಣಿಗೆ ಕಾಣಿಸದಿದ್ದರೂ ವಹಿವಾಟನ್ನು ಲಾಭದಾಯಕವಾಗಿ ಪರಿವರ್ತಿಸುವುದೇ ಇಲ್ಲಿ ಮುಖ್ಯವಾಗಿರುತ್ತದೆ.

ಗುಣಮಟ್ಟದ ಹಣಕಾಸು ಪರಿಸ್ಥಿತಿಯು, ಸಾಮಾನ್ಯವಾಗಿ ಗುಣಮಟ್ಟದ ವಹಿವಾಟು ಮತ್ತು ಗುಣಮಟ್ಟದ ನಿರ್ವಹಣೆಯಿಂದ ಹೊರಹೊಮ್ಮುತ್ತದೆ. ಆದರೆ, ಅದನ್ನೇ ಅಂತಿಮ ಎಂದೂ   ಭಾವಿಸಬಾರದು. ಅದನ್ನೂ ಪರೀಕ್ಷೆಗೆ ಒಳಪಡಿಸುತ್ತಿರಬೇಕು. ಅವಕಾಶಗಳ ಗಾತ್ರ ಮತ್ತು ನಿರ್ವಹಣಾ ಸಾಮರ್ಥ್ಯ ಆಧರಿಸಿ ಬಂಡವಾಳದ ಪ್ರಗತಿ ನಿರ್ಧಾರಗೊಳ್ಳುತ್ತದೆ.

ವಹಿವಾಟಿನ ಅಂತಸ್ವತ್ವ ಆಧರಿಸಿಯೇ ಭವಿಷ್ಯದ  ಅವಕಾಶಗಳ ಗಾತ್ರ ನಿರ್ಧಾರವಾಗುತ್ತದೆ. ಸಮರ್ಥ ಆಡಳಿತ ಮಂಡಳಿಯ ಕೈಗೆ ಸಿಗುವ ವಿಪುಲ ಪ್ರಮಾಣದ ಅವಕಾಶಗಳು ಉದ್ಯಮದ ಬೆಳವಣಿಗೆ, ವಹಿವಾಟಿನ ಸ್ವರೂಪ, ಲಾಭ ಮತ್ತು ಹಣದ ಹರಿವಿನ ಪ್ರಮಾಣವನ್ನು ಹೆಚ್ಚಿಸುತ್ತವೆ. ಸುಸ್ಥಿರ, ದೀರ್ಘಕಾಲ ಬಾಳಿಕೆ ಬರುವ ಲಾಭವು (ಹಣದ ಒಳ ಹರಿವು) ಸ್ಥಿರ ವರಮಾನಕ್ಕಿಂತ ಷೇರುಗಳಲ್ಲಿನ ಹೂಡಿಕೆಯನ್ನು ಬೇರ್ಪಡಿಸಲು ನೆರವಾಗುತ್ತದೆ.

ಗುಣಮಟ್ಟದ ವಹಿವಾಟು, ಹೂಡಿಕೆದಾರ ಪಾಲಿಗೆ ಬಂಡವಾಳ ಹೂಡಿಕೆಯು ಹೆಚ್ಚು ಲಾಭದಾಯಕವನ್ನಾಗಿ ಮಾಡುತ್ತದೆ. ಅನೇಕ ವೃತ್ತಿನಿರತ ಹೂಡಿಕೆದಾರರು ಇತರರ ವಹಿವಾಟಿನ ಜತೆ ತಮ್ಮದನ್ನು ನಿರಂತರವಾಗಿ ಹೋಲಿಕೆ ಮಾಡುತ್ತ ಸಂಕಟಪಡುತ್ತಲೇ ಇರುತ್ತಾರೆ. ಬಂಡವಾಳ ಹೂಡಿಕೆ ನಿರ್ಧಾರಗಳಲ್ಲಿ ಇಂತಹ ಹೋಲಿಕೆಯ ಪರಾಮರ್ಶೆಯು ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

ಹೂಡಿಕೆಗೆ ಸಂಪೂರ್ಣವಾಗಿ ಪ್ರತಿಫಲ (ಲಾಭ) ಬರಬೇಕು ಎನ್ನುವುದೂ ಕೂಡ ಹೂಡಿಕೆಯ ಇನ್ನೊಂದು ಪ್ರಮುಖ ತತ್ವವಾಗಿದೆ. ಸೈದ್ಧಾಂತಿಕವಾಗಿ ಹೇಳುವುದಾದರೆ, ಹೂಡಿಕೆಯನ್ನು ಕೇಂದ್ರೀಕರಿಸಬೇಕು ಎನ್ನುವುದು ಮುಖ್ಯವಾದ ವಿಚಾರವಾಗಿದೆ. ಪ್ರಾಯೋಗಿಕ ನೆಲೆಯಲ್ಲಿ ಇದರ ಪರಿಣಾಮಗಳು ಹೂಡಿಕೆದಾರನ ನಿರೀಕ್ಷೆಗೆ ವ್ಯತಿರಿಕ್ತವಾಗಿರುತ್ತವೆ. ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಸಂಗತಿಗಳನ್ನು ಸಮರ್ಥವಾಗಿ ಎದುರಿಸುವ ರೀತಿಯಲ್ಲಿ, ಹೂಡಿಕೆಯಲ್ಲಿ ಅತಿರೇಕ ತಪ್ಪಿಸುವುದರಿಂದಲೂ ಸಾಕಷ್ಟು  ಪ್ರಯೋಜನಗಳು ಇವೆ.

ಒಂದೆಡೆಯೇ ಬಂಡವಾಳ ಹೂಡಿಕೆ ಕೇಂದ್ರಕರಿಸಿದ್ದರೆ ಊಹಿಸಲಾಗದ ಅನಿರೀಕ್ಷಿತ ಘಟನೆಗಳಿಂದ ಅದು ಸಂಪೂರ್ಣವಾಗಿ ನಾಶವಾಗುವ ಅಪಾಯ ಇರುತ್ತದೆ. ಹೀಗಾಗಿ ಎಚ್ಚರವಹಿಸಬೇಕು. ಬಂಡವಾಳ ಹೂಡಿಕೆ ಜಗತ್ತಿನಲ್ಲಿ ನೆಮ್ಮದಿ ಮತ್ತು ಪ್ರಸನ್ನತೆಯು  ಶಾಶ್ವತವಾಗಿ ಇರಲಾರದು. ಬುದ್ಧಿಪೂರ್ವಕವಾಗಿ ಹೂಡಿಕೆಯನ್ನು ಒಂದೆಡೆಯೇ ಕೇಂದ್ರೀಕರಿಸುವ ಮತ್ತು ವೈವಿಧ್ಯಮಯವಾಗಿ ಹೂಡಿಕೆ ಮಾಡುವ ಜಾಣತನ ತೋರುವಲ್ಲಿ ಸಮತೋಲನ ಸಾಧಿಸುವ ವಿವೇಕತನ ತೋರಬೇಕು.

ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುವಿಕೆಯು ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಮೌಲ್ಯಯುತವಾದ ಚಿಂತನೆಯಾಗಿದೆ.  ಆದರೆ,  ಬಂಡವಾಳ ಹೂಡಿಕೆಯ ನಿರ್ಧಾರ ಯಶಸ್ವಿಯಾಗಬೇಕಾದರೆ ಇದಕ್ಕೆ ವಿಭಿನ್ನವಾಗಿ ಆಲೋಚಿಸಿ ಹೂಡಿಕೆ ಮೊತ್ತವನ್ನು ಪ್ರತ್ಯೇಕಗೊಳಿಸುವ ನಿರ್ಧಾರಕ್ಕೆ ಬರುವುದು ಮುಖ್ಯವಾಗಿರುತ್ತದೆ. ಅಂದರೆ ಮಾತ್ರ  ಸಂಪತ್ತು ವೃದ್ಧಿಯಾಗುತ್ತದೆ.

ಹಣ ಹೂಡಿಕೆ ನಿರ್ಧಾರ ಕೈಗೊಂಡ ನಂತರವೂ ಮಾನಸಿಕ ದೃಢತೆ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಹೀಗಾಗಿ ಹಣ ಹೂಡಿಕೆ ನಿರ್ಧಾರ ಕೈಗೊಳ್ಳುವ ಮುನ್ನ ಅಗತ್ಯವಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾಕಷ್ಟು ಪರಿಶ್ರಮ ಪಡಲು ಮರೆಯಲೇಬಾರದು.  ಹೂಡಿಕೆ ಮಾಡಿದ ನಂತರವೂ ಹೂಡಿಕೆಯ ನಿರ್ಧಾರದ ಜತೆ ಯಾವತ್ತೂ ಚೆಲ್ಲಾಟ ಆಡಬಾರದು.   ಹೀಗೆ ಹೇಳುವುದು ತುಂಬ ಸುಲಭವಾಗಿದ್ದರೂ, ಅದನ್ನು ಕಾರ್ಯಗತಗೊಳಿಸುವುದು ತುಂಬ ಕಠಿಣ ಎನ್ನುವುದನ್ನೂ ಮರೆಯಬಾರದು!


(ಎಎಸ್‌ಕೆ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT