ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ಹಣ ಬಳಸಿ, ಎಚ್ಚರ ವಹಿಸಿ!

Last Updated 29 ನವೆಂಬರ್ 2016, 19:30 IST
ಅಕ್ಷರ ಗಾತ್ರ

-ಆನಂದ ಅರಸ್

ಗರಿಷ್ಠ ಮುಖ ಬೆಲೆಯ ನೋಟಗಳು ರದ್ದಾದ ನಂತರದ ಬದಲಾದ ಸನ್ನಿವೇಶದಲ್ಲಿ ‘ಪ್ಲಾಸ್ಟಿಕ್‌’ ಹಣದ ಬಳಕೆ ಹೆಚ್ಚುತ್ತಿದೆ. ಆದರೆ, ಸೈಬರ್‌ ವಂಚನೆ ಪ್ರಕರಣಗಳೂ ಏರುಗತಿಯಲ್ಲಿ  ಇರುವುದರಿಂದ    ‘ಪ್ಲಾಸ್ಟಿಕ್‌’ ಹಣ ಬಳಕೆದಾರರಲ್ಲಿ ಸಾಕಷ್ಟು ಆತಂಕ ಮನೆ ಮಾಡಿದೆ. ‘ಪ್ಟಾಸ್ಟಿಕ್‌’  ಹಣ ಬಳಕೆದಾರರು ತಮ್ಮ ಹಣ ಯಾವುದೇ ರೀತಿಯಲ್ಲಿ ದುರುಪಯೋಗವಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ.

ದೇಶದ ಜನಸಂಖ್ಯೆಯ ಶೇಕಡ 65ರಷ್ಟು ಜನರ ವಯಸ್ಸು 35ಕ್ಕಿಂತ ಕಡಿಮೆ. ಈ ಯುವ ಸಮುದಾಯ ಕಾಗದರಹಿತ ಡಿಜಿಟಲ್‌ ವಹಿವಾಟಿಗೆ ಹೆಚ್ಚಿನ ಒಲವು ತೋರುತ್ತಿದೆ. ಡೆಬಿಡ್‌ ಅಥವಾ ಕ್ರೆಡಿಟ್‌ ಕಾರ್ಡ್‌, ನೆಟ್‌ ಬ್ಯಾಂಕಿಂಗ್‌ ಮತ್ತು ಮೊಬೈಲ್‌ ವಾಲೆಟ್‌ಗಳನ್ನು ಯುವ ಜನಾಂಗ ಹೆಚ್ಚಾಗಿ ಬಳಸುತ್ತಿದೆ.

ಕ್ಯಾಬ್‌ಗಳಲ್ಲಿ ಸಂಚರಿಸಿದಾಗ, ಸಿನಿಮಾ ವೀಕ್ಷಿಸಲು ಟಿಕೆಟ್‌ ಖರೀದಿ ಮತ್ತು ದಿನಸಿ ಸಾಮಗ್ರಿ  ಖರೀದಿಸುವಾಗ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಡೆಬಿಟ್‌ ಕಾರ್ಡ್‌ ಅಥವಾ ನೆಟ್‌ ಬ್ಯಾಂಕಿಂಗ್‌ ಮೂಲಕ ಹಣ ಪಾವತಿಸುತ್ತಾರೆ. ಈ ರೀತಿಯ ವಹಿವಾಟು ಈಗ ಕೇವಲ ಯುವಜನಾಂಗಕ್ಕೆ ಮಾತ್ರ ಸೀಮಿತವಾಗುತ್ತಿಲ್ಲ. ಎಲ್ಲ ವಯಸ್ಸಿನ ಜನರೂ ಆನ್‌ಲೈನ್‌ ಅಥವಾ ಕಾರ್ಡ್‌ ಮೂಲಕ ವಹಿವಾಟು ನಡೆಸಲು ಆಸಕ್ತಿ ತೋರುತ್ತಿದ್ದಾರೆ. ನೋಟು ರದ್ದತಿ ಕಾರಣಕ್ಕೆ ಡಿಜಿಟಲ್‌ ವಹಿವಾಟಿನ ಅನಿವಾರ್ಯತೆಯೂ ಹೆಚ್ಚುತ್ತಿದೆ.

ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚುತ್ತಿರುವುದು ಮತ್ತು ಅಂತರ್ಜಾಲ ಸಂಪರ್ಕ ಪಡೆಯುವುದು ಸುಲಭವಾಗುತ್ತಿರುವುದರಿಂದ ಗ್ರಾಹಕರು ‘ಡಿಜಿಟಲ್‌ ಕ್ಯಾಷ್‌’ನತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ಪ್ಲಾಸ್ಟಿಕ್‌ ಹಣ ಅಥವಾ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಮತ್ತು ಸ್ಮಾರ್ಟ್‌ ಕಾರ್ಡ್‌ ಬಳಸುವುದು  ಸುಲಭ. ಅನೇಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ,  ವಂಚನೆಯ ಕರೆ, ಇ–ಮೇಲ್‌ಗಳಿಗೆ ಓಗೊಡದಿದ್ದರೆ ಸುರಕ್ಷಿತ ವಿಧಾನವೂ ಹೌದು. 

ಸರಕುಗಳಿಗೆ ತ್ವರಿತವಾಗಿ ಹಣ ಪಾವತಿಸಬಹುದು. ಜತೆಗೆ ಅಪಾರ ಮೊತ್ತದ ನಗದು ಕೊಂಡೊಯ್ಯುವ ಅಗತ್ಯವಿಲ್ಲ. ಹೀಗಾಗಿ ಈ ವ್ಯವಸ್ಥೆ ಅತಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. 2014–15ರಲ್ಲಿ ಶೇಕಡ 22.78 ಡೆಬಿಟ್‌ ಕಾರ್ಡ್‌ ಮತ್ತು ಶೇಕಡ 23.65ರಷ್ಟು ಕ್ರೆಡಿಟ್‌ ಕಾರ್ಡ್‌ಗಳ ಬಳಕೆಯಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಸೈಬರ್‌ ವಂಚನೆ ಈ ಕಾರ್ಡ್‌ಗಳಿಗೂ ತಟ್ಟಿದೆ.

ನಕಲಿ ಕಾರ್ಡ್‌ಗಳನ್ನು ಸೃಷ್ಟಿಸುವುದು, ರಹಸ್ಯಸಂಖ್ಯೆ (ಪಾಸ್‌ವರ್ಡ್‌) ಕದಿಯುವುದು ಮುಂತಾದ ವಂಚನೆ ಪ್ರಕರಣಗಳು ನಡೆಯುತ್ತಿವೆ. ಗ್ರಾಹಕರನ್ನು ನಯವಾಗಿ ಮಾತನಾಡಿಸಿ ಕಾರ್ಡ್‌ಗಳಿಗೆ ಸಂಬಂಧಿಸಿದ ಮಾಹಿತಿ ಪಡೆದು ಮೋಸ ಮಾಡುತ್ತಿರುವ ಪ್ರಕರಣಗಳು ಸಾಕಷ್ಟು ನಡೆದಿವೆ. ಇದರಿಂದ ಗ್ರಾಹಕರು ಗೊತ್ತಿದ್ದು ಇಲ್ಲವೆ ಗೊತ್ತಿಲ್ಲದೆಯೂ ಹಣ ಕಳೆದುಕೊಂಡಿದ್ದಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ನೀಡಿರುವ ಅಂಕಿ–ಅಂಶಗಳ ಪ್ರಕಾರ 2014–15ರಲ್ಲಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ 18,123 ದೂರುಗಳು ದಾಖಲಾಗಿವೆ. ಇದು ಗ್ರಾಹಕರು ವಿವಿಧ ಪ್ರಕರಣಗಳಿಗೆ ನೀಡಿರುವ ದೂರಿನ ಶೇಕಡ 20ರಷ್ಟಿದೆ. ಬ್ಯಾಂಕ್‌ನ ಪ್ರತಿನಿಧಿ ಅಥವಾ ಕಾರ್ಡ್‌ಗೆ ಸಂಬಂಧಿಸಿದ ಪರಿಶೀಲನೆ ನಡೆಸುವ ಅಧಿಕಾರಿ ಎಂದು ಹೇಳಿಕೊಂಡು ಗ್ರಾಹಕರಿಂದ ಸಂಪೂರ್ಣ ಮಾಹಿತಿ ಪಡೆದು ವಂಚಿಸಲಾಗುತ್ತಿದೆ.

ಕೆಲವು ಬಾರಿ ಚಾಣಾಕ್ಷತನದಿಂದ ಕಾರ್ಡ್‌ಗಳ ಮಾಹಿತಿಯನ್ನೇ ಕದಿಯಲಾಗುತ್ತದೆ. ಅಂಗಡಿ ಅಥವಾ ಮಾಲ್‌ಗಳಲ್ಲಿ ಸಾಮಗ್ರಿಗಳನ್ನು ಖರೀದಿಸಿ ಕಾರ್ಡ್‌ಗಳನ್ನು ಸ್ವೈಪ್‌ ಮಾಡಿದಾಗ ಕಾರ್ಡ್‌ ಸಂಖ್ಯೆ, ಸಿವಿವಿ ಪಡೆಯಲಾಗುತ್ತದೆ.  ರಹಸ್ಯವಾಗಿ ಪಾಸ್‌ವರ್ಡ್‌ಗಳನ್ನು ದಾಖಲಿಸಿದಾಗಲೂ ಅದನ್ನು ನೆನಪಿಟ್ಟುಕೊಳ್ಳುವ ಖದೀಮರೂ ಇದ್ದಾರೆ. ಕೆಲವು ಬಾರಿ ಅಮಾಯಕ ಗ್ರಾಹಕರಿಂದ ಸಿವಿವಿ ಸಂಖ್ಯೆ ಮತ್ತು ಒಂದು ಬಾರಿಯ ಪಾಸ್‌ವರ್ಡ್‌ಗಳು, ಇ–ಮೇಲ್‌ ವಿಳಾಸ, ಜನ್ಮ ದಿನಾಂಕಗಳನ್ನು ಪಡೆದು ಆನ್‌ಲೈನ್‌ ಮೂಲಕ ಸಾಮಗ್ರಿಗಳನ್ನು ಖರೀದಿಸಲಾಗುತ್ತದೆ.

ಇವುಗಳ ಜತೆಗೆ ನಕಲಿ ಕ್ರೆಡಿಟ್‌ ಕಾರ್ಡ್‌ಗಳನ್ನು ಸೃಷ್ಟಿಸುವುದು ಅಥವಾ ಅದೇ ರೂಪದ ಇನ್ನೊಂದು ಕಾರ್ಡ್‌ ತಯಾರಿಸಿ ಗ್ರಾಹಕರಿಂದ ಪಡೆದ ವಿವರಗಳನ್ನು ಜಾಣತನದಿಂದ ಇದಕ್ಕೆ ಸೇರಿ ಮೋಸ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ.

ಈ ರೀತಿಯ ವಂಚನೆ ಪ್ರಕರಣಗಳನ್ನು ತಡೆಯಲು ತಂತ್ರಜ್ಞಾನವೂ  ನೆರವಾಗುತ್ತಿದೆ. ಬ್ಯಾಂಕ್‌ಗಳು ಮ್ಯಾಗ್ನೆಟಿಕ್‌ ಪಟ್ಟಿಯ ಕಾರ್ಡ್‌ಗಳ ಬದಲಾಗಿ ಚಿಪ್‌ ಮತ್ತು ಪಿನ್‌ ಹೊಂದಿರುವ ಕಾರ್ಡ್‌ಗಳನ್ನು ಗ್ರಾಹಕರಿಗೆ ವಿತರಿಸುತ್ತಿವೆ. ಇದರಿಂದ ವಂಚನೆ ತಡೆಯಲು ಸಾಧ್ಯವಿದೆ. ಗ್ರಾಹಕರು ಸಹ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

* ವಿಶ್ವಾಸಾರ್ಹ ವ್ಯಕ್ತಿಗಳಿಗೆ ಅಗತ್ಯ ಮತ್ತು ಅನಿವಾರ್ಯವಿದ್ದಾಗ ಮಾತ್ರ ಕಾರ್ಡ್‌ ನೀಡಬೇಕು.
* ಪಿನ್‌, ಪಾಸ್‌ವರ್ಡ್‌ ಮತ್ತಿತರ  ಮಾಹಿತಿಯನ್ನು ಇನ್ನೊಬ್ಬರಿಗೆ ತಿಳಿಯದಂತೆ ಎಚ್ಚರವಹಿಸಬೇಕು.
* ವಂಚಕರು ಮಾಡುವ ದೂರವಾಣಿ ಕರೆಗಳ ಬಗ್ಗೆ ಜಾಗೃತರಾಗಬೇಕು.

ಎಲ್ಲ ಬ್ಯಾಂಕ್‌ ಗ್ರಾಹಕರಿಗೂ ಎಟಿಎಂ, ಡೆಬಿಟ್‌ ಕಾರ್ಡ್‌ ಹಾಗೂ ಮೊಬೈಲ್‌, ನೆಟ್‌ ಬ್ಯಾಂಕಿಂಗ್‌ ಕುರಿತಾದ ಅತಿ ಮುಖ್ಯವಾದ ಷರತ್ತುಗಳ ಬಗ್ಗೆ ವಿವರಗಳನ್ನು ಪಡೆಯುವ ಹಕ್ಕು ಇದೆ. ಕಾರ್ಡ್‌ಗಳನ್ನು ಕಳೆದುಕೊಂಡಿದ್ದರೆ ಅಥವಾ ವಂಚನೆಗೆ ಒಳಗಾಗಿರುವುದು ತಿಳಿದ ಕೂಡಲೇ  ಸಂಬಂಧಿಸಿದ ಬ್ಯಾಂಕ್‌ಗಳಿಗೆ  ಮಾಹಿತಿ ನೀಡಬೇಕು.

ಇದರಿಂದ ಕಾರ್ಡ್‌ಗಳು ದುರುಪಯೋಗವಾಗುವುದನ್ನು ತಪ್ಪಿಸಬಹುದು. ಬ್ಯಾಂಕ್‌ಗಳು ಸಹ ತಕ್ಷಣವೇ ಕಾರ್ಡ್‌ ಬಳಕೆಯನ್ನು ಸ್ಥಗಿತಗೊಳಿಸುತ್ತವೆ. ಗ್ರಾಹಕರ ಹಿತಾಸಕ್ತಿ ಕಾಪಾಡುವ ಸಂಬಂಧವಾಗಿಯೇ ಬ್ಯಾಂಕಿಂಗ್‌ ಸಂಹಿತೆ ಮತ್ತು ಭಾರತೀಯ ಗುಣಮಟ್ಟ ಮಂಡಳಿಯು  (ಬಿಸಿಎಸ್‌ಬಿಐ) ಹಲವಾರು ನಿಯಮಾವಳಿಗಳನ್ನು ರೂಪಿಸಿದೆ.ಇಂಟರ್‌ನೆಟ್‌ ಮತ್ತು ಮೊಬೈಲ್‌ ಬ್ಯಾಂಕಿಂಗ್‌ ಸಹ ಇದರಲ್ಲಿ ಸೇರಿದೆ.

ಗ್ರಾಹಕರ ಮಾಹಿತಿಯನ್ನು ಸುರಕ್ಷಿತವಾಗಿ ಕಾಪಾಡುವುದು ಸಹ ಬ್ಯಾಂಕ್‌ಗಳ ಜವಾಬ್ದಾರಿಯಾಗಿದೆ.  ಹಣಕಾಸಿನ ವಹಿವಾಟಿಗೆ ಗ್ರಾಹಕರು ಬ್ಯಾಂಕ್‌ಗಳ ಮೇಲೆಯೇ ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಹೀಗಾಗಿ ಬ್ಯಾಂಕ್‌ಗಳು ಮತ್ತು ಗ್ರಾಹಕರು  ಪ್ಲಾಸ್ಟಿಕ್‌ ಹಣದ ಬಳಕೆ ಹೆಚ್ಚಿಸುವುದರ ಜತೆಗೆ, ಅಂತಹ ವಹಿವಾಟಿನ ಸುರಕ್ಷತೆ ಕಡೆಗೂ ಸಾಕಷ್ಟು ಗಮನ ಹರಿಸಬೇಕಾದ ಅಗತ್ಯ ಈಗ ಹಿಂದೆಂದಿಗಿಂತ ಹೆಚ್ಚಿದೆ.

* 22.78%  ಡೆಬಿಟ್‌ ಕಾರ್ಡ್‌ 23.65% ಕ್ರೆಡಿಟ್‌ ಕಾರ್ಡ್‌  ಬಳಕೆ
* 18,123 ಕಾರ್ಡ್‌ ದುರ್ಬಳಕೆ ದೂರುಗಳ ಸಂಖ್ಯೆ (2014–15ರಲ್ಲಿ)

(ಬ್ಯಾಂಕಿಂಗ್‌ ಸಂಹಿತೆ ಮತ್ತು ಭಾರತೀಯ ಗುಣಮಟ್ಟ ಮಂಡಳಿ ಸಿಇಒ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT