ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದುರಹಿತ ವ್ಯವಹಾರವೆಂಬ ಭ್ರಮೆ

Last Updated 29 ನವೆಂಬರ್ 2016, 19:30 IST
ಅಕ್ಷರ ಗಾತ್ರ

‘ಎಂಬತ್ತು ಲಕ್ಷ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳಿವೆ. ನವೆಂಬರ್ ಹತ್ತರಿಂದ ಸುಮಾರು ನಲವತ್ತು ಲಕ್ಷ ಜನ ಅದರಲ್ಲಿ ವ್ಯವಹಾರ ನಡೆಸಿದ್ದಾರೆ’ ಎಂದು ಕೇಂದ್ರ ಅರ್ಥ ಸಚಿವ ಅರುಣ್ ಜೇಟ್ಲಿ ಇತ್ತೀಚೆಗೆ ಹೇಳಿದ್ದಾರೆ. ಭಾರತದ ಸಂದರ್ಭದಲ್ಲಿ ಈ ಮಾತಿನ ಸಂಭಾವ್ಯತೆಯನ್ನು ಪರೀಕ್ಷಿಸಿಕೊಳ್ಳಬೇಕು.

ಎಟಿಎಂಗಳಲ್ಲಿ ಪಡೆದುಕೊಳ್ಳುವ ಹಣವನ್ನು ₹ 4,000, ₹ 2000 ಎಂದೆಲ್ಲಾ ಮಿತಿಗೊಳಪಡಿಸಿದಾಗ ನಗದಿಗಾಗಿ ಬಹಳ ಜನ ಮತ್ತೆಮತ್ತೆ ಎಟಿಎಂಗಳಿಗೆ ದಾಳಿ ಇಟ್ಟದ್ದು ಸುಳ್ಳಲ್ಲ. ಹಲವು ಬ್ಯಾಂಕುಗಳ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹೊಂದಿರುವ ನಗರವಾಸಿಗಳು ಅವನ್ನು ತಮ್ಮ ಅನುಕೂಲಕ್ಕಾಗಿ ಆಗಾಗ್ಗೆ ಉಜ್ಜಿರಬಹುದಾದರೂ ಅದು ಹೆಚ್ಚು ಜನ ಬಳಸಿದ್ದನ್ನು ತೋರಿಸುತ್ತದೆ ಎನ್ನುವುದು ಸರಿಯಲ್ಲ. ಪ್ಲಾಸ್ಟಿಕ್ ಕಾರ್ಡ್ ಮತ್ತು ಮೊಬೈಲ್ ವಾಲೆಟ್‌ಗಳ ಮೂಲಕ ಹಣ ತೆಗೆದುಕೊಳ್ಳುವುದು ನಗದು ಬಳಕೆಯ ಅನಿವಾರ್ಯವನ್ನಷ್ಟೇ ಸೂಚಿಸುತ್ತದೆ.

ಕಪ್ಪುಹಣವನ್ನು ನಾಶಪಡಿಸುವಲ್ಲಿ ನಗದುರಹಿತ ವಹಿವಾಟು ಒಂದು ಅಸ್ತ್ರವಾಗಬಹುದಲ್ಲದೆ ಅದೇ ಅಂತಿಮವಲ್ಲ. ಹೆಚ್ಚಿನ ನಗದು ವ್ಯವಹಾರವಿರುವ ಚೀನಾ, ಜಪಾನ್‌ನಲ್ಲಿ ಕಾಳಧನವನ್ನು ಇನ್ನಿತರ ಮಾರ್ಗಗಳಿಂದ ಹತ್ತಿಕ್ಕಲಾಗಿದೆ. ಕಡಿಮೆ ಪ್ರಮಾಣದಲ್ಲಿ ನಗದು ವ್ಯವಹಾರ ಹೊಂದಿರುವ ಬ್ರೆಜಿಲ್ ದೇಶದಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಸಂಪತ್ತಿನ ಪಿಡುಗಿದೆ. ನಮ್ಮ ದೇಶದ ನಗದು ವಹಿವಾಟನ್ನು ಇನ್ನಿತರ ದೇಶಗಳೊಂದಿಗೆ ಹೋಲಿಸುವುದರಲ್ಲಿಯೇ ದೋಷವಿದೆ. ಇದು ಕೂಡ ಜಾಗತೀಕರಣದ ಕೊಡುಗೆ. ಪ್ರತಿ ರಾಷ್ಟ್ರಕ್ಕೂ ಅದರದ್ದೇ ಆದ ಅನನ್ಯತೆಯಿದೆ. ನಮ್ಮಲ್ಲಿನ ಕಪ್ಪುಹಣದ ಸಮಸ್ಯೆಯನ್ನೂ ಈ ದೃಷ್ಟಿಯಿಂದಲೇ ನೋಡಬೇಕು.

ನಮ್ಮ ದೇಶದ ಧಾರ್ಮಿಕತೆಯಲ್ಲಿ ನಗದಿಗೆ ಮಹತ್ವವಿದೆ. ದೇವಸ್ಥಾನಗಳಲ್ಲಿ ಜನರು ಹುಂಡಿಗೆ ಹಣ ತುಂಬುತ್ತಾರೆ. ತಿರುಪತಿಯ ಹುಂಡಿಗೆ ಹಣ ಹಾಕುವುದಕ್ಕೆ ತಾತ್ವಿಕ ಕಾರಣವನ್ನೂ ನೀಡಲಾಗಿದೆ. ಇದಲ್ಲದೆ ಅರ್ಚಕರ ತಟ್ಟೆಗೆ ದುಡ್ಡು ಹಾಕುವುದರಲ್ಲಿ ಭಕ್ತ ಆನಂದವನ್ನು ಅನುಭವಿಸುತ್ತಾನೆ. ಹಣ ಹಾಕದವರಿಗೆ ಪುಷ್ಪ ನೀಡದೆ, ಗಂಧ ಬಿಸಾಕುವವರೂ ಇದ್ದಾರೆ. ಸತ್ಯನಾರಾಯಣ ಪೂಜೆ, ನಾಗಮಂಡಲ, ಜ್ಯೋತಿಷ ಇವೆಲ್ಲಕ್ಕೂ ಕಣ್ಣೆದುರಿನ ಕಾಂಚಾಣವೇ ಕಾರಣ. ಪೌರೋಹಿತ್ಯ ಪ್ರಮುಖ ಕಸುಬುಗಳಲ್ಲಿ ಒಂದಾಗಿದೆ. ದವಸ, ಧಾನ್ಯವನ್ನಷ್ಟೇ ಕೊಂಡು ಹೋಗುವ, ದನ, ಕರು ದಾನ ಪಡೆದು ಸಾಕುವ ಪುರೋಹಿತರು ಈಗಿಲ್ಲ. ‘ಚಂದಮಾಮ’ ಕತೆಗಳಲ್ಲಿ ಬರುವ ಬಡ ಬ್ರಾಹ್ಮಣನ ಆರ್ಥಿಕತೆಯಲ್ಲಿ ಬದಲಾವಣೆಯಾಗಲು ಹಣದ ವ್ಯವಹಾರ ಮುಖ್ಯ ಕಾರಣ.

ಕರ್ನಾಟಕದ ಪಟ್ಟಣವೊಂದಕ್ಕೆ ಚಾತುರ್ಮಾಸಕ್ಕಾಗಿ ಪ್ರಸಿದ್ಧ ಸ್ವಾಮಿಗಳೊಬ್ಬರು ಬಂದಿದ್ದರು. ಸಂಜೆ ಅವರ ಪಾದಪೂಜೆ ನಿಗದಿಯಾಗಿತ್ತು. ಸಾವಿರ ರೂಪಾಯಿ ಕೊಟ್ಟು ಪಾದಪೂಜೆ ಮಾಡಬಹುದೆಂದು ಧ್ವನಿವರ್ಧಕದಲ್ಲಿ ಘೋಷಿಸಲಾಯಿತು. ಸಮಯ ಕಳೆದಂತೆ ದರ ಏರುತ್ತಾ ಹೋಗಿ ಅತಿ ಹೆಚ್ಚಿನ ಪಾದಪೂಜಾಕಾಂಕ್ಷಿಗಳು ಇದ್ದುದರಿಂದ ಅದು ಐದು ಸಾವಿರ ರೂಪಾಯಿಗೆ ತಲುಪಿತು. ಇದು ಯಾವ ಪಾಯಿಂಟ್ ಆಫ್ ಸೇಲ್‌ನಲ್ಲಿಯೂ (ಪಿಒಎಸ್) ಬರಲಾರದು.

ಹಣಕ್ಕೆ ಸಾಮಾಜಿಕ ಆಯಾಮವಿದೆ. ಹಣವಂತನಿಗೆ ಬೆಲೆ ಎನ್ನುವುದು ರೂಢಿಯ ಮಾತು. ಕೈಯಲ್ಲಿ ದುಡ್ಡಿಲ್ಲ ಎಂದು ಸಂಕೋಚದಿಂದ ವರ್ತಿಸುವ ಜನರಿದ್ದಾರೆ. ಹೊರಗೆ ಹೋಗುವಾಗ ಹಣ ಇಟ್ಟುಕೊಂಡು ಹೋಗುವುದನ್ನು, ಮನೆಯಲ್ಲಿ ಕೂಡಿಡುವುದನ್ನು ಬಯಸುತ್ತಾರೆ. ಶ್ರೀಮಂತರಿಗಿಂತ ಸಾಮಾನ್ಯರಿಗೆ ಅದೊಂದು ಭದ್ರತೆಯ ಭಾವನೆಯನ್ನು, ಧೈರ್ಯವನ್ನು ಕೊಡುತ್ತದೆ. ಡೇರಿಗೆ ಹಾಲು ಹಾಕಿ ಬಂದ ಹಣದಿಂದ ದಿನನಿತ್ಯದ ಖರ್ಚುಗಳನ್ನು ತೂಗಿಸುವ ಸಾವಿರಾರು ಕುಟುಂಬಗಳಿವೆ. ಬೀಡಿ, ಊದುಬತ್ತಿ ಇನ್ನಿತರ ಗೃಹ ಕೈಗಾರಿಕೆಗಳಿಗೂ ಇದು ಅನ್ವಯಿಸುತ್ತದೆ. ಇವುಗಳಲ್ಲಿ ಪ್ರಮುಖ ಪಾತ್ರ ವಹಿಸುವವರು ಮಹಿಳೆಯರು. ಮಹಿಳೆಯರ ಸಬಲೀಕರಣದಲ್ಲಿ ಹಣದ ಪಾತ್ರ ದೊಡ್ಡದಿದೆ. ಕಿರಾಣಿ ಅಂಗಡಿಗಳು, ರಸ್ತೆ ಬದಿಯ ವ್ಯಾಪಾರಿಗಳು, ಪಾನಿ ಪೂರಿ ಮಾರಿ ಹೊಟ್ಟೆ ಹೊರೆಯುವವರು, ರಾತ್ರಿ, ಹಗಲೆನ್ನದೆ ಲಾರಿ ಓಡಿಸುವ ಡ್ರೈವರುಗಳು ಸ್ವೈಪಿಂಗ್ ಮಷಿನ್‌  ಇಟ್ಟುಕೊಳ್ಳಲಾಗುವುದಿಲ್ಲ. ನಗದುರಹಿತ ವ್ಯವಹಾರ ಅವರ ಊಟ ಕಸಿದುಕೊಂಡರೆ, ಪೇಟಿಎಂ, ಎಂ ವೀಸಾದಂತಹ ವಾಲೆಟ್ ಕಂಪೆನಿಗಳು, ಆಲಿಬಾಬ, ಅಮೆಜಾನ್ ಮುಂತಾದ ಬಹುರಾಷ್ಟ್ರೀಯ ಕಂಪೆನಿಗಳು ಕೊಳ್ಳೆ ಹೊಡೆಯುತ್ತವೆ.

ತಿಂಗಳ ಮೊದಲನೆಯ ದಿನ ಬ್ಯಾಂಕ್‌ಗಳಲ್ಲಿ ಗ್ರಾಹಕರ ಸಂಖ್ಯೆ ಜಾಸ್ತಿ. ಹೆಚ್ಚಿನ ನಿವೃತ್ತರು ಆ ದಿನವೇ ಬರುತ್ತಾರೆ. ಎಟಿಎಂ ಕಾರ್ಡ್ ತೆಗೆದುಕೊಂಡವರು ಕೂಡ ಅದನ್ನು ಉಪಯೋಗಿಸುವುದಿಲ್ಲ. ಮಹಿಳೆಯರು, ವೃದ್ಧರು ಗಂಟೆಗಟ್ಟಲೆ ಕಾದು ಹಣ ಪಡೆದುಕೊಂಡು ಹೋಗುತ್ತಾರೆ. ಬ್ಯಾಂಕಿಗೆ ಬಂದು ಸಮಕಾಲೀನರ ಜತೆಗೆ ಮಾತುಕತೆ ನಡೆಸಿ, ಹಣ ಪಡೆಯುವ ಸಂಭ್ರಮದಿಂದ ಅವರು ವಿಮುಖರಾಗುವುದಿಲ್ಲ.

ಸಾಲ ತೆಗೆದುಕೊಳ್ಳಲು ಬ್ಯಾಂಕ್‌ಗಳಿಗೆ ಹೋಗುವ ರೈತರು ತಮ್ಮ ಹಣವನ್ನು ಅಲ್ಲಿ ಇಡುವುದು ಕಡಿಮೆ. ತಮ್ಮ ಸಾಲಕ್ಕೆ ಮುರಿದುಕೊಳ್ಳುತ್ತಾರೆ ಎನ್ನುವ ಅವ್ಯಕ್ತ ಭಯವೂ ಇದಕ್ಕೆ ಕಾರಣ. ಕಾಲಕಾಲಕ್ಕೆ ಕೃಷಿ ಮತ್ತು ಇನ್ನಿತರ ಕೃಷಿ ಸಂಬಂಧಿ ಸಾಲಗಳನ್ನು ಗಣನೀಯ ಪ್ರಮಾಣದಲ್ಲಿ ಪುನಾರಚನೆ ಮಾಡಲಾಗಿದೆ. ಅತಿವೃಷ್ಟಿ, ಅನಾವೃಷ್ಟಿ ಮತ್ತು ಇತರ ಕಾರಣಗಳಿಂದ ಅನ್ನದಾತನಿಗೆ ಸಾಲವನ್ನು ತೀರಿಸಲಾಗಿಲ್ಲ. ಕಾರ್ಪೊರೇಟ್ ಸಾಲಗಳನ್ನು ಮನ್ನಾ ಮಾಡಿ ಬ್ಯಾಲೆನ್ಸ್ ಶೀಟ್ ಸ್ವಚ್ಛ ಮಾಡುವ ಬ್ಯಾಂಕ್‌ಗಳು ಸರ್ಕಾರದ ಆದೇಶದಂತೆ ಸಾಲಗಳ ಪುನಾರಚನೆಯನ್ನಷ್ಟೇ ಮಾಡುತ್ತವೆ. ಇದರ ಅರಿವಿರುವ ರೈತರು ಬ್ಯಾಂಕ್‌ಗಳ ಹತ್ತಿರ ಸುಳಿಯುವುದಿಲ್ಲ. ನೋಟು ರದ್ದತಿಯಿಂದ ತಮ್ಮಲ್ಲಿರುವ ಅಷ್ಟೋ ಇಷ್ಟೋ ಹಣವನ್ನು ಕೃಷಿಕರು ಬ್ಯಾಂಕುಗಳಿಗೆ ತುಂಬಬೇಕಾಗಿದೆ. ರೈತರು ಒಪ್ಪಿದರೂ ಬಿಟ್ಟರೂ ಇವನ್ನು ತಮ್ಮಲ್ಲಿರುವ  ಸಾಲಗಳಿಗೆ ಬ್ಯಾಂಕುಗಳು ಜಮಾ ಮಾಡಿಕೊಳ್ಳುತ್ತವೆ. ನೋಟು ರದ್ದತಿಯಿಂದ ಬ್ಯಾಂಕುಗಳಿಗೆ ಒದಗುವ ಅನುಕೂಲಗಳಲ್ಲಿ ಇದೂ ಒಂದು.

ಇದಲ್ಲದೆ ನಗದು ವ್ಯವಹಾರಕ್ಕೆ ಇನ್ನಿತರ ಆರ್ಥಿಕ ಮಗ್ಗುಲುಗಳಿವೆ. ಬ್ಯಾಂಕುಗಳು ನೀಡುವ ಭದ್ರತೆ ಸೀಮಿತವಾದದ್ದು. ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಮುಂದುವರಿದ ದೇಶಗಳ ಬ್ಯಾಂಕ್‌ಗಳು ಮುಗ್ಗರಿಸಿದಾಗ ಹಲವರು ಸಂಕಷ್ಟಕ್ಕೀಡಾದರು. ಇಂಟರ್‌ನೆಟ್ ವ್ಯವಹಾರದಲ್ಲಿ ಕಳ್ಳಕಿಂಡಿ ಕೊರೆದು ಲಪಟಾಯಿಸುವುದು ಆಗಾಗ್ಗೆ ವರದಿಯಾಗುತ್ತಿದೆ. ಸರ್ಕಾರ ಬ್ಯಾಂಕ್ ವ್ಯವಹಾರಗಳ ಮೇಲೆ ಕಣ್ಗಾವಲಿರಿಸಿಕೊಳ್ಳುವ ಸಾಧ್ಯತೆಯೂ ಇದೆ. ಇದರಿಂದ ಆರ್ಥಿಕ ಸ್ವಾಯತ್ತತೆಗೆ ಧಕ್ಕೆ ಉಂಟಾಗುತ್ತದೆ.

ದೇಶದಲ್ಲಿ ಕೇವಲ ಶೇಕಡ ಆರರಷ್ಟು ನಗದು ರೂಪದಲ್ಲಿದ್ದು, ಉಳಿದ ಅಕ್ರಮ ಗಳಿಕೆ ಆಸ್ತಿಯು ಚಿನ್ನ, ಬಾಂಡ್‌ಗಳು, ವಿದೇಶಗಳಲ್ಲಿನ ಹೂಡಿಕೆಗಳಲ್ಲಿ ಇರುವುದರಿಂದ ನೋಟು ರದ್ದತಿಯಿಂದಾಗುವ ಅನುಕೂಲ ಸೀಮಿತವಾದುದು. ದೊಡ್ಡ ದೊಡ್ಡ ವ್ಯವಹಾರ ಮಾಡುವವರಿಗೆ, ನಗರವಾಸಿಗಳಿಗೆ, ಉದ್ಯೋಗಸ್ಥರಿಗೆ ನಗದುರಹಿತ ವ್ಯವಹಾರದಲ್ಲಿ ಇರುವ ಆಕರ್ಷಣೆಯನ್ನು ಅಲ್ಲಗಳೆಯಲಾಗದು. ಹಲವು ಅನುಕೂಲಗಳೂ ಇರುವುದರಿಂದ ಅವರು ಕಾರ್ಡ್‌ಗಳು, ಮೊಬೈಲ್ ವಾಲೆಟ್‌ಗಳನ್ನು ಬಳಸಬಹುದು. ಆದರೆ ಪ್ರತಿಶತ 70ರಷ್ಟು ಜನ ನಗದು ವಹಿವಾಟಿನ ಮೇಲೇ ಅವಲಂಬಿತರಾಗಿರುವುದರಿಂದ ಅವರ ಮೇಲೆ ಇದನ್ನು ಇದ್ದಕ್ಕಿದ್ದಂತೆ ಹೇರಲಾಗದು.

ಬ್ಯಾಂಕಿಂಗ್ ವ್ಯವಸ್ಥೆ ಇನ್ನೂ ರಾಷ್ಟ್ರದ ಉದ್ದಗಲಕ್ಕೆ, ಎಲ್ಲಾ ಪ್ರದೇಶಗಳಿಗೆ ವ್ಯಾಪಿಸಿಲ್ಲ. 38 ಜಿಲ್ಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಬ್ಯಾಂಕುಗಳಿವೆ. 2.20 ಲಕ್ಷ  ಎಟಿಎಂಗಳಲ್ಲಿ ಹೆಚ್ಚಿನವು ನಗರಗಳಲ್ಲಿ ಅಕ್ಕಪಕ್ಕದಲ್ಲಿವೆ. ಹಳ್ಳಿಗಳಲ್ಲಿ ಕಿಸಾನ್ ಕಾರ್ಡ್, ರೂಪೆ ಕಾರ್ಡ್ ಬಳಕೆ ತೀರಾ ಕಡಿಮೆ. ಕೇರಳದಂತಹ ಸಂಪೂರ್ಣ ಸಾಕ್ಷರತೆಯ ರಾಜ್ಯದಲ್ಲೂಮೀನುಗಾರರು, ಬೀದಿ ಬದಿ ವರ್ತಕರು, ಸ್ವ ಉದ್ಯೋಗಿಗಳು ನಗದಿನ ಮೂಲಕವೇ ವಹಿವಾಟು ಮಾಡುತ್ತಿದ್ದಾರೆ. ಅಂತಹುದರಲ್ಲಿ ನಗದುರಹಿತ ವ್ಯವಹಾರಕ್ಕೆ ಜನ ಹೊರಳುತ್ತಿದ್ದಾರೆ ಎನ್ನುವುದು ಕೇವಲ ಭ್ರಮೆಯಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT