ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಂತವಾದೀತು ಟ್ರಂಪ್ ಸಂಪತ್ತಿನ ಮೋಹ

ಅಮೆರಿಕ ಅಧ್ಯಕ್ಷರ ಶ್ರೀಮಂತಿಕೆ ವೃದ್ಧಿಸಲು ಹಲವು ದೇಶಗಳಿಂದ ಪ್ರಯತ್ನ ಆರಂಭ
Last Updated 29 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಕ್ಲಿಂಟನ್ ಪ್ರತಿಷ್ಠಾನ ನಡೆಸಿದ ನಿಧಿ ಸಂಗ್ರಹದಲ್ಲಿ ಹಿತಾಸಕ್ತಿಗಳ ಸಂಘರ್ಷ ಇತ್ತು ಎಂಬುದನ್ನು ಯಾವುದೇ ಪುರಾವೆ ಇಲ್ಲದೆ ಪ್ರಕಟಿಸಲಾದ ಮಾಧ್ಯಮ ವರದಿಗಳು ನಿಮಗೆ ನೆನಪಿವೆಯೇ? ಈ ಎಲ್ಲ ಕೊಂಕುನುಡಿಗಳಿಂದ ಪ್ರಯೋಜನ ಪಡೆದ ವ್ಯಕ್ತಿ ಶ್ವೇತ ಭವನದತ್ತ ಸಾಗುತ್ತಿದ್ದಾರೆ. ನಿಜವಾದ ಹಿತಾಸಕ್ತಿಗಳ ಸಂಘರ್ಷ ಯಾವ ರೀತಿಯಲ್ಲಿರುತ್ತದೆ ಎಂಬುದನ್ನು ಅವರು ನಮಗೆ ತೋರಿಸುತ್ತಿದ್ದಾರೆ. ಜಗತ್ತಿನಾದ್ಯಂತ ಇರುವ ನಿರಂಕುಶ ಸರ್ಕಾರಗಳು ಅವರ ಉದ್ಯಮ ಸಾಮ್ರಾಜ್ಯಕ್ಕೆ ಅನುಕೂಲಗಳ ಮಳೆ ಸುರಿಸುತ್ತಿವೆ.

ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ಈ ಎಲ್ಲ ಅನುಕೂಲಗಳನ್ನು ತಿರಸ್ಕರಿಸಬಹುದು; ಅವರು ತಮ್ಮ ಹೋಟೆಲುಗಳು ಮತ್ತು ಇತರ ಉದ್ಯಮಗಳಿಂದ ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ದೂರ ಇರಿಸಬಹುದಿತ್ತು. ಆದರೆ ಅವರು ಹಾಗೆ ಮಾಡುತ್ತಿಲ್ಲ. ವಾಸ್ತವದಲ್ಲಿ, ಅವರು ತಮ್ಮ ವ್ಯಾಪಾರವನ್ನು ಬೆಳೆಸಲು ಅಧ್ಯಕ್ಷ ಸ್ಥಾನವನ್ನು ಮುಕ್ತವಾಗಿಯೇ ಬಳಸುತ್ತಿದ್ದಾರೆ. ವೈಯಕ್ತಿಕ ಸಂಪತ್ತನ್ನು ಬೆಳೆಸಿಕೊಳ್ಳಲು ರಾಜಕೀಯ ಅಧಿಕಾರವನ್ನು ಬಳಸಿಕೊಳ್ಳುವವರು ಅವರೊಬ್ಬರೇ ಅಲ್ಲ ಎಂಬುದು ಅವರ ಆರಂಭಿಕ ನೇಮಕಾತಿಗಳಿಂದ ಸ್ಪಷ್ಟವಾಗಿದೆ. ಅಧಿಕಾರ ಸ್ಥಾನಗಳಲ್ಲಿ ಇರುವವರು ನೇರವಾಗಿ ವ್ಯಾಪಾರಕ್ಕಿಳಿಯುವುದು ಈ ಆಡಳಿತದಾದ್ಯಂತ ಕಾಣಬಹುದಾದ ವ್ಯವಸ್ಥೆಯಾಗಿದೆ. ಆಡಳಿತ ವ್ಯವಸ್ಥೆಯ ಶಿಖರದಲ್ಲಿ ಹಿಂದೆಂದೂ ಕಂಡರಿಯದ ಭ್ರಷ್ಟಾಚಾರದ ಯುಗದತ್ತ ಅಮೆರಿಕ ಸಾಗುತ್ತಿದೆ.

ಅಧಿಕಾರ ಕೇಂದ್ರದಲ್ಲಿನ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುವುದು ಯಾಕೆ ಮುಖ್ಯ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳುವ ಅಗತ್ಯ ಇದೆ. ಉತ್ತರ ಈ ದಿಕ್ಕಿನಲ್ಲಿ ಇರಬಹುದು: ಇದು ನೇರವಾಗಿ ಹಣ ನೀಡುವ ರೂಪದ ಭ್ರಷ್ಟಾಚಾರ ಅಲ್ಲ, ಬದಲಿಗೆ ಅವರ ವೈಯಕ್ತಿಕ ಲಾಭಗಳಿಗೆ ಪೂರಕವಾದ ವ್ಯವಸ್ಥೆಯನ್ನು ರೂಪಿಸಿಕೊಡುವುದಾಗಿದೆ.

ನಿಜ, ಇದು ಸಣ್ಣ ಮೊತ್ತದ ಹಣವೂ ಅಲ್ಲ; ನಾವು ಭಾರಿ ಮೊತ್ತದ ಹಣದ ಬಗ್ಗೆ ಮಾತನಾಡುತ್ತಿದ್ದೇವೆ. ಬರೀ ಕೋಟಿಗಳಲ್ಲ, ಸಾವಿರಾರು ಕೋಟಿಗಳು ಟ್ರಂಪ್ ಅವರೊಬ್ಬರಿಗೇ ದೊರೆಯಲಿದೆ (ಹಾಗಾಗಿಯೇ ವೇತನ ತೆಗೆದುಕೊಳ್ಳುವುದಿಲ್ಲ ಎಂಬ ಅವರ ಭರವಸೆ ಹಾಸ್ಯಾಸ್ಪದ ಅನಿಸುವುದು). ಅಮೆರಿಕ ಬಹಳ ಶ್ರೀಮಂತ ರಾಷ್ಟ್ರ. ವರ್ಷಕ್ಕೆ ಸರ್ಕಾರ ವೆಚ್ಚ ಮಾಡುವ ಹಣ ನಾಲ್ಕು ಲಕ್ಷ ಕೋಟಿ ಡಾಲರ್‌ಗೂ ಹೆಚ್ಚು (ಸುಮಾರು ₹280 ಲಕ್ಷ ಕೋಟಿ). ಹಾಗಾಗಿ ಭಾರಿ ದೊಡ್ಡ ಪ್ರಮಾಣದಲ್ಲಿ ಲೂಟಿ ಮಾಡಿದರೂ ಅದು ಲೆಕ್ಕಪತ್ರ ಹೊಂದಾಣಿಕೆಯಲ್ಲಿನ ತಪ್ಪು ಎಂದಷ್ಟೇ ಕಾಣಿಸಿಕೊಳ್ಳುತ್ತದೆ. ಅತ್ಯಂತ ಒಳಗಿನ ವಲಯದಲ್ಲಿ ಇರುವವರ ಬೆರಳಿಗೆ ಅಂಟಿಕೊಳ್ಳುವ ಹಣ ದೊಡ್ಡ ವಿಷಯವಲ್ಲ, ಆದರೆ ಅದಕ್ಕಾಗಿ ಅವರು ಏನು ಮಾಡಬಹುದು ಎಂಬುದು ಬಹಳ ಮುಖ್ಯವಾದುದು. ಹಾಗೆಯೇ ಅದಕ್ಕಾಗಿ ಅವರು ರೂಪಿಸುವ ಕೆಟ್ಟ ನೀತಿಗಳು ದೇಶದ ಮೇಲೆ ಬೀರುವ ಪ್ರಭಾವದ ಬಗ್ಗೆಯೂ ಗಮನ ಹರಿಸುವುದು ಅಗತ್ಯ.

ಸಾಮಾನ್ಯವಾಗಿ, ಪ್ರಾಯೋಗಿಕತೆ ಅಂದರೆ ಯಾವುದು ಕಾರ್ಯಸಾಧ್ಯ ಮತ್ತು ಸಿದ್ಧಾಂತ ಅಂದರೆ ನಮ್ಮ ಗ್ರಹಿಕೆಗಳಿಗೆ ಯಾವುದು ಹೊಂದಿಕೆಯಾಗುತ್ತದೆ ಎಂಬುದರ ಸಂಯೋಜನೆ ನೀತಿ ನಿರೂಪಣೆಯಲ್ಲಿ ಪ್ರತಿಫಲಿಸುತ್ತದೆ. ಹಾಗೆಯೇ ನಮ್ಮಲ್ಲಿ ಸಾಮಾನ್ಯವಾಗಿರುವ ದೂರು ಏನೆಂದರೆ, ಪುರಾವೆಗಳನ್ನು ನಿರ್ಲಕ್ಷಿಸಿ ಸಿದ್ಧಾಂತವೇ ಮೇಲುಗೈ ಸಾಧಿಸುತ್ತದೆ ಎಂಬುದಾಗಿದೆ.

ಆದರೆ ಈಗ ಮೂರನೆಯ ಅತ್ಯಂತ ಶಕ್ತಿಶಾಲಿಯಾದ ಅಂಶವೊಂದು ನಮ್ಮ ಮುಂದೆ ಬಿಚ್ಚಿಕೊಳ್ಳುವುದನ್ನು ಕಾಣಲಿದ್ದೇವೆ. ತುತ್ತ ತುದಿಯಲ್ಲಿರುವ ವ್ಯಕ್ತಿಯೂ ಸೇರಿ ಅಧಿಕಾರಿಗಳು ಯಾವ ನೀತಿಗಳನ್ನು ತಮ್ಮ ಸ್ವಂತಕ್ಕೆ ಹಣವಾಗಿ ಪರಿವರ್ತಿಸಿಕೊಳ್ಳಲಿದ್ದಾರೆ? ಅದರ ಪರಿಣಾಮ ಅತ್ಯಂತ ಅನರ್ಥಕಾರಿಯಾಗಿರಲಿದೆ.

ತುಲನಾತ್ಮಕವಾಗಿ ಸಣ್ಣ ಅಂಶದಿಂದಲೇ ಆರಂಭಿಸೋಣ- ಬೆಟ್ಸಿ ಡವಾಸ್ ಅವರನ್ನು ಶಿಕ್ಷಣ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ. ಡವಾಸ್ ಅವರಿಗೆ ಟ್ರಂಪ್ ಜತೆಗೆ ಅತ್ಯಂತ ಸ್ಪಷ್ಟವಾದ ನಂಟು ಇದೆ. ಆ್ಯಮ್‌ವೇ ಕಂಪೆನಿ ಸೃಷ್ಟಿಸಿದ ಸಂಪತ್ತಿನಲ್ಲಿ ಡವಾಸ್ ಗಂಡನಿಗೆ ಪಾಲಿದೆ. ಆ್ಯಮ್‌ವೇ ಕಂಪೆನಿ ವಿರುದ್ಧ ವಂಚನೆ ಮೂಲಕ ಹಣ ಗಳಿಸಿದ ಆರೋಪ ಇದೆ. 2011ರಲ್ಲಿ ಈ ಕಂಪೆನಿ ವಿರುದ್ಧ ದೂರು ದಾಖಲಾಗಿದ್ದು 1.5 ಕೋಟಿ ಡಾಲರ್ (ಸುಮಾರು ನೂರು ಕೋಟಿ ರೂಪಾಯಿ) ಪರಿಹಾರವನ್ನೂ ಆ್ಯಮ್‌ವೇ ನೀಡಿದೆ. ಇಲ್ಲಿ ಬಹಳ ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶ ವಿದ್ಯಾರ್ಥಿ ವೇತನ ಯೋಜನೆ. ಈ ಯೋಜನೆ ಪ್ರಕಾರ ಮಕ್ಕಳಿಗೆ ಸರ್ಕಾರಿ ವ್ಯವಸ್ಥೆಯ ಮೂಲಕ ಶಿಕ್ಷಣ ನೀಡುವುದರ ಬದಲಿಗೆ ಹೆತ್ತವರಿಗೆ ಹಣ ನೀಡಲಾಗುತ್ತದೆ.

ವಿದ್ಯಾರ್ಥಿ ವೇತನ ಯೋಜನೆ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಈಗ ಸಾಕಷ್ಟು ಪುರಾವೆಗಳಿವೆ. ಅತ್ಯಂತ ಕೆಟ್ಟದಾಗಿ ಕಾರ್ಯನಿರ್ವಹಿಸುವ ಯೋಜನೆ ಇದು. ಉದಾಹರಣೆಗೆ ಲೂಸಿಯಾನಾವನ್ನೇ ತೆಗೆದುಕೊಳ್ಳಬಹುದು.  ವಿದ್ಯಾರ್ಥಿ ವೇತನ ಯೋಜನೆಯನ್ನು ವ್ಯಾಪಕವಾಗಿ ಅನುಷ್ಠಾನ ಮಾಡಿರುವುದರಿಂದಾಗಿ ವಿದ್ಯಾರ್ಥಿಗಳ ಸಾಧನೆಯ ಮಟ್ಟ ಬಹಳಷ್ಟು ಕುಸಿದಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ವಿದ್ಯಾರ್ಥಿ ವೇತನ ಯೋಜನೆಯ ಪ್ರತಿಪಾದಕರು ಅದನ್ನು ನಿಲ್ಲಿಸುವುದನ್ನು ಒಪ್ಪುವುದಿಲ್ಲ. ಈ ಯೋಜನೆಯ ಹಿಂದೆ ಸಿದ್ಧಾಂತದ ಪ್ರಭಾವ ಇದೆ. ಆದರೆ ಕ್ರಮೇಣ, ಈ ಯೋಜನೆ ಶಿಕ್ಷಣ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಕಾರ್ಯಕ್ರಮವಾಗಿ ಬದಲಾಗಬಹುದು. ಹಾಗೆಯೇ, ಲಾಭದ ಉದ್ದೇಶಕ್ಕೆ ನಡೆಯುವ ಶಿಕ್ಷಣ ಸಂಸ್ಥೆಗಳ ಹಿನ್ನೆಲೆ ನಿಜಕ್ಕೂ ಭಯಾನಕವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿನ ಭ್ರಷ್ಟಾಚಾರದ ವಿರುದ್ಧ ಬರಾಕ್ ಒಬಾಮ ನೇತೃತ್ವದ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಚುನಾವಣೆ ನಂತರ ಲಾಭದ ಉದ್ದೇಶದ ಶಿಕ್ಷಣ ಸಂಸ್ಥೆಗಳ ಷೇರು ಬೆಲೆ ವಿಪರೀತ ಏರಿಕೆಯಾಗಿದೆ. ಎರಡು, ಮೂರು ಅಥವಾ ಹಲವು ಟ್ರಂಪ್ ವಿಶ್ವವಿದ್ಯಾಲಯಗಳನ್ನು ನಾವು ಮುಂದೆ ಕಾಣಬಹುದು!

ಟ್ರಂಪ್ ಅವರ ಮೂಲಸೌಕರ್ಯ ಯೋಜನೆಯ ಬಗ್ಗೆ ಹೆಚ್ಚೇನೂ ಹೇಳುವ ಅಗತ್ಯ ಇಲ್ಲ. ಯಾವ ಕಾರಣವೂ ಇಲ್ಲದೆ ಅವರು ಸರ್ಕಾರದ ಸೊತ್ತುಗಳನ್ನು ವ್ಯಾಪಕವಾಗಿ ಖಾಸಗೀಕರಣಗೊಳಿಸುತ್ತಾರೆ. ಯಾವುದೇ ಸ್ಪಷ್ಟ ಕಾರಣ ಇಲ್ಲ ಎಂದು ಹೇಳಿದರೂ ಕಾರಣಗಳು ಇವೆ- ಸ್ವಜನ ಪಕ್ಷಪಾತಕ್ಕೆ ದೊರೆಯುವ ಹಲವು ಸಂದರ್ಭಗಳು ಮತ್ತು ಅದರ ಮೂಲಕ ಲಾಭ ಮಾಡಿಕೊಳ್ಳಲು ದೊರೆಯುವ ವಿಪುಲ ಅವಕಾಶಗಳು.

ಭ್ರಷ್ಟಾಚಾರವು ವಿದೇಶಾಂಗ ನೀತಿಯ ಮೇಲೆ ಬೀರುವ ಪರಿಣಾಮ ಮಾತ್ರ ನಿಜಕ್ಕೂ ಭಯ ಹುಟ್ಟಿಸುತ್ತಿದೆ. ಮತ್ತೊಂದು ಆತಂಕಕಾರಿ ಅಂಶವೆಂದರೆ, ಹಲವು ದೇಶಗಳ ಸರ್ಕಾರಗಳು ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಟ್ರಂಪ್ ಅವರ ವೈಯಕ್ತಿಕ ಸಂಪತ್ತು ವೃದ್ಧಿಗೆ ನೆರವಾಗಲು ಈಗಾಗಲೇ ಆರಂಭಿಸಿವೆ. ಟ್ರಂಪ್ ಅವರು ಇಂತಹ ಪ್ರಯತ್ನಗಳನ್ನು ಸ್ವಾಗತಿಸುತ್ತಿದ್ದಾರೆ.

ಇದು ಸರಿಯೇ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು- ಹೌದು, ಇದು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ. ವೇತನ ನಿಯಮಗಳ ಸ್ಪಷ್ಟ ಉಲ್ಲಂಘನೆ. ಆದರೆ ಸಂವಿಧಾನವನ್ನು ಜಾರಿಗೆ ತರಬೇಕಾದವರು ಯಾರು? ಕಾಂಗ್ರೆಸ್‌ನಲ್ಲಿರುವ ರಿಪಬ್ಲಿಕನ್ನರು ಈ ಕೆಲಸ ಮಾಡಬೇಕಲ್ಲವೇ? ಅಂತಹ ಮೂರ್ಖ ನಿರೀಕ್ಷೆ ಇರಿಸಿಕೊಳ್ಳಬೇಡಿ.

ಪ್ರಜಾಸತ್ತಾತ್ಮಕ ನಿಯಮಗಳು ಧ್ವಂಸವಾಗುತ್ತಿವೆ ಎಂಬ ಕಳಕಳಿಯನ್ನು ಬದಿಗಿಡಿ. ಅಮೆರಿಕದ ನೀತಿಯ ಮೇಲೆ ಈ ಲಂಚಾಡಳಿತ ಬೀರುವ ಪರಿಣಾಮದ ಬಗ್ಗೆ ಯೋಚನೆ ಮಾಡಿ. ಅಧ್ಯಕ್ಷ ಮತ್ತು ಅವರ ಗೆಳೆಯರ ಸಂಪತ್ತನ್ನು ವೃದ್ಧಿಸುವ ಮೂಲಕ ಪ್ರಭಾವಿಯಾಗುವ ಸರ್ಕಾರಗಳು ಯಾವ ರೀತಿಯದ್ದಾಗಿರುತ್ತವೆ? ಇದಕ್ಕೆ ಉತ್ತರ ಅತ್ಯಂತ ಸ್ಪಷ್ಟ- ಆಯಾ ದೇಶಗಳ ಕಾನೂನಿಗೆ ಬದ್ಧವಾಗಿಲ್ಲದ ದೇಶಗಳು ಮಾತ್ರ ಇಂತಹ ಕೆಲಸಕ್ಕೆ ಮುಂದಾಗುತ್ತವೆ.

ಈ ರೀತಿಯಲ್ಲಿ ಯೋಚನೆ ಮಾಡಿ ನೋಡೋಣ: ಟ್ರಂಪ್ ಅವರ ಗಾಲ್ಫ್ ಕೋರ್ಸ್‌ಗಳು ಅಥವಾ ಹೋಟೆಲುಗಳ ವ್ಯಾಪಾರ ಹೆಚ್ಚಿಸುವುದಕ್ಕಾಗಿ ಬ್ರಿಟನ್ ಅಥವಾ ಕೆನಡಾದಂತಹ ದೇಶಗಳು ಅಲ್ಲಿನ ನಿರ್ಬಂಧಗಳನ್ನು ಸಡಿಲಿಸಿ, ತಮ್ಮ ಪ್ರಭಾವ ಹೆಚ್ಚಿಸಲು ಯತ್ನಿಸಬಹುದೇ? ಇದಕ್ಕೆ ಉತ್ತರ ಇಲ್ಲ ಎಂಬುದೇ ಆಗಿದೆ. ಈ ದೇಶಗಳಲ್ಲಿ ಮುಕ್ತ ಮಾಧ್ಯಮ, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಮತ್ತು ಇಂತಹ ಅಸಮರ್ಪಕ ವರ್ತನೆಯನ್ನು ತಡೆಯುವುದಕ್ಕಾಗಿಯೇ ರೂಪುಗೊಂಡ ಸ್ಪಷ್ಟ ನಿಯಮಗಳಿವೆ. ಆದರೆ, ವ್ಲಾಡಿಮಿರ್ ಪುಟಿನ್ ಅವರ ರಷ್ಯಾದ ಬಗ್ಗೆ ಯೋಚಿಸಿ. ಅಮೆರಿಕದ ಆಡಳಿತ ಕೇಂದ್ರದಲ್ಲಿರುವ ವ್ಯಕ್ತಿಯ ಶ್ರೀಮಂತಿಕೆಗೆ ಭಾರಿ ಪ್ರಮಾಣದ ಸಂಪತ್ತನ್ನು ರಷ್ಯಾ ಸೇರಿಸಬಲ್ಲುದು. ಅದಕ್ಕೆ ಬದಲಾಗಿ ಅವರು ಬಾಲ್ಟಿಕ್ (ಉತ್ತರ ಯುರೋಪ್‌ನ ಬಾಲ್ಟಿಕ್ ಸಮುದ್ರದ ಪೂರ್ವ ಕರಾವಳಿಯಲ್ಲಿರುವ ಈಸ್ಟೋನಿಯಾ, ಲಾಟ್ವಿಯಾ ಮತ್ತು ಲಿಥುವೇನಿಯಾ) ದೇಶಗಳಿಗೆ ನೀಡಿರುವ ಭದ್ರತೆಯ ಖಾತರಿಯನ್ನು ಹಿಂದಕ್ಕೆ ಪಡೆಯುವುದನ್ನು ಬಯಸಬಹುದು.

ವಿದೇಶಾಂಗ ನೀತಿಯ ಮೇಲೆ ವ್ಯಾಪಾರ ಪರಿಗಣನೆಗಳು ಮೇಲುಗೈ ಸಾಧಿಸಿದರೆ ಅದರಿಂದಾಗುವ ವಿನಾಶಕಾರಿ ಪರಿಣಾಮಗಳನ್ನು ರಾಷ್ಟ್ರೀಯ ಭದ್ರತಾ ಅಧಿಕಾರಿಗಳು ವಿವರಿಸಿ ಹೇಳಬಹುದು ಎಂಬ ಆಶಾವಾದವನ್ನು ನಾವು ಇರಿಸಿಕೊಳ್ಳಬಹುದು. ಆದರೆ ವರದಿಗಳು ಹೇಳುವಂತೆ ಟ್ರಂಪ್ ಅವರು ಈ ಅಧಿಕಾರಿಗಳನ್ನು ಭೇಟಿಯೇ ಆಗಿಲ್ಲ; ಅಧ್ಯಕ್ಷನಾಗಿ ಆಯ್ಕೆಯಾದ ವ್ಯಕ್ತಿ ರಾಷ್ಟ್ರೀಯ ಭದ್ರತಾ ಅಧಿಕಾರಿಗಳಿಂದ ಮಾಹಿತಿ ಪಡೆಯುವುದು ಸಾಮಾನ್ಯ. ಆದರೆ ಟ್ರಂಪ್ ಅದನ್ನು ನಿರಾಕರಿಸಿದ್ದಾರೆ.

ಹಾಗಾಗಿ, ಟ್ರಂಪ್ ಯುಗದ ಭ್ರಷ್ಟಾಚಾರದ ಪರಿಣಾಮಗಳು ಹೇಗಿರಬಹುದು? ಅತ್ಯುತ್ತಮ ಊಹೆ ಎಂದರೆ, ಅದು ನಾವು ಕಲ್ಪಿಸಿಕೊಂಡದ್ದಕ್ಕಿಂತಲೂ ಹೆಚ್ಚು ಕೆಟ್ಟದಾಗಿರುತ್ತದೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT