ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ನಿರ್ಮಾಣ: ನೆಪ ಸಾಕು ಮನೋಭಾವ ಬದಲಾಗಬೇಕು

Last Updated 29 ನವೆಂಬರ್ 2016, 19:30 IST
ಅಕ್ಷರ ಗಾತ್ರ

ನಮ್ಮ ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತವಾಗಬೇಕು, ಮನೆಗೊಂದು ಶೌಚಾಲಯ ಇರಲೇಬೇಕು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು ನಡೆಸುತ್ತಿರುವ ಪ್ರಯತ್ನ, ಹಮ್ಮಿಕೊಂಡ ಯೋಜನೆಗಳಿಗೆ ಲೆಕ್ಕವೇ ಇಲ್ಲ. ಸ್ವಚ್ಛ ಭಾರತ ಅಭಿಯಾನ, ನಿರ್ಮಲ ಕರ್ನಾಟಕ, ಪೂರ್ಣ ನೈರ್ಮಲ್ಯ ಅಭಿಯಾನ ಮುಂತಾದ ಯೋಜನೆಗಳ ಅಡಿ ಮನೆಗೊಂದು ಶೌಚಾಲಯ ನಿರ್ಮಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರು ಮತ್ತು  ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಗಮನಾರ್ಹ ಸಾಧನೆ ಮಾಡುವ ಗ್ರಾಮ ಪಂಚಾಯ್ತಿಗಳಿಗೆ  ನಿರ್ಮಲ ಗ್ರಾಮ ಪುರಸ್ಕಾರ ಯೋಜನೆ ಅಡಿ ಬಹುಮಾನ ನೀಡಲಾಗುತ್ತಿದೆ. ಹೀಗಾಗಿ ಸರ್ಕಾರಿ ಅಂಕಿಅಂಶಗಳ ಪುಸ್ತಕಗಳಲ್ಲಿ ಸಿಕ್ಕಾಪಟ್ಟೆ ಶೌಚಾಲಯಗಳು ನಿರ್ಮಾಣವಾಗಿವೆ. ಆದರೂ ಬೆಳಿಗ್ಗೆ ಎದ್ದು ದೇಹಬಾಧೆ ತೀರಿಸಿಕೊಳ್ಳಲು ಬಯಲು ಪ್ರದೇಶವನ್ನು ಹುಡುಕಿಕೊಂಡು ಹೋಗುವ ಚಾಳಿ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಪೂರ್ಣವಾಗಿ ನಿಂತಿಲ್ಲ. ಸರ್ಕಾರ ಉದಾರವಾಗಿ ಅನುದಾನ ಕೊಡುತ್ತದೆ ಎಂಬ ಕಾರಣಕ್ಕೆ ಹಳ್ಳಿಗಾಡಿನ ಎಷ್ಟೋ ಮನೆಗಳಲ್ಲಿ ಶೌಚಾಲಯಗಳು ನಿರ್ಮಾಣವಾಗಿವೆ. ಆದರೆ ಅವು ಆ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ.  ಬದಲಾಗಿ,  ಮನೆ ಮಂದಿಗೆ ಬೇಡವಾದ ಹಳೆಯ ವಸ್ತುಗಳನ್ನು ಸಂಗ್ರಹಿಸಿ ಇಡುವ ಕಿರು ಗೋದಾಮುಗಳಾಗಿವೆ ಇಲ್ಲವೇ ಮನೆಯ ಸಾಮಗ್ರಿ ಇಡುವ ಕೊಠಡಿಗಳಾಗಿವೆ ಎನ್ನುವ ವಿಷಯ ಅನೇಕ ಸಮೀಕ್ಷೆಗಳಿಂದ ಬೆಳಕಿಗೆ ಬಂದಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದು ಇರಲಾರದು. 

‘ಸರ್ಕಾರ ಮತ್ತು ಪಂಚಾಯ್ತಿ ಸಹಾಯಧನ ನೀಡುತ್ತವೆ. ಆದ್ದರಿಂದ ಶೌಚಾಲಯ ಕಟ್ಟಿಸಿಕೊಳ್ಳಿ’ ಎಂದು ಗ್ರಾಮಸ್ಥರ ಮನೆ ಬಾಗಿಲಿಗೆ ಹೋಗಿ ಮನವೊಲಿಸುವುದು ಅವುಗಳ ಚುನಾಯಿತ  ಸದಸ್ಯರ ಕರ್ತವ್ಯ. ಆದರೆ ಅನೇಕ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರು, ನಗರ ಹಾಗೂ ಪಟ್ಟಣ ಸ್ಥಳೀಯ ಸಂಸ್ಥೆಗಳ ಸದಸ್ಯರ ಮನೆಗಳಲ್ಲಿಯೇ ಈಗಲೂ ಶೌಚಾಲಯ ಇಲ್ಲ. ಸ್ವಚ್ಛ ಭಾರತ ಅಭಿಯಾನದ ಅಡಿ ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ನಡೆಸಿದ ಸಮೀಕ್ಷೆಯೊಂದರಲ್ಲಿ ಇಂತಹ ಅನೇಕ ಆಘಾತಕಾರಿ ಅಂಶಗಳು ಬಯಲಿಗೆ ಬಂದಿವೆ. ಜಿಲ್ಲೆಯ ಆರು ತಾಲ್ಲೂಕು ಪಂಚಾಯ್ತಿಗಳು ಮತ್ತು 198 ಗ್ರಾಮ ಪಂಚಾಯ್ತಿಗಳ ಶೇ 52ರಷ್ಟು ಸದಸ್ಯರು  ಶೌಚಾಲಯವನ್ನೇ ಹೊಂದಿಲ್ಲ. ಗ್ರಾಮ ಪಂಚಾಯ್ತಿಗಳ 3165 ಸದಸ್ಯರಲ್ಲಿ 1674 ಮಂದಿ ಮತ್ತು ತಾಲ್ಲೂಕು ಪಂಚಾಯ್ತಿಗಳ 130 ಸದಸ್ಯರ ಪೈಕಿ 21 ಮಂದಿ ಮನೆಯಲ್ಲಿ ಶೌಚಾಲಯ ಇಲ್ಲ. ಈಗಲೂ ಬಹಿರ್ದೆಸೆಗೆ ಇವರ ಕುಟುಂಬ ಬಯಲನ್ನೇ ಅವಲಂಬಿಸಿದೆ. ಹೀಗಿರುವಾಗ ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಬೇರೆಯವರಿಗೆ ಹೇಳಲು ನೈತಿಕವಾಗಿ ಇವರಿಗೆ ಸಾಧ್ಯವೇ? ಅಲ್ಲಿನ ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕರು ಹೇಳುವಂತೆ,   ಶೌಚಾಲಯ ಕಟ್ಟಿಸಿಕೊಳ್ಳಲು ಈ ಸದಸ್ಯರ ಮನವೊಲಿಸುವುದಕ್ಕಾಗಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಮಿತಿ ರಚಿಸಲಾಗಿದೆ. ಇದು ಒಂದು ಕಡೆಯಾದರೆ ಇನ್ನೊಂದು ಕಡೆ, ಶೌಚಾಲಯ ಕಟ್ಟಿಸಲೇಬೇಕು  ಎಂದು ಪೋಷಕರ ಮೇಲೆ ಒತ್ತಡ ತರುವುದಕ್ಕಾಗಿ ಮಕ್ಕಳು ಧರಣಿ ನಡೆಸಿದ ಮತ್ತು ಅನ್ನ ಆಹಾರ ಬಿಟ್ಟು ಪ್ರತಿಭಟನೆ ಮಾಡಿದ ಉದಾಹರಣೆಗಳೂ ನಮ್ಮ ಮುಂದಿವೆ.

ಬಯಲು ಬಹಿರ್ದೆಸೆಗೂ ಅನಾರೋಗ್ಯಕ್ಕೂ ಬಹಳ ಹತ್ತಿರದ ಸಂಬಂಧ. ಈ ಕಾರಣಕ್ಕಾಗಿಯೇ  ವೈಯಕ್ತಿಕ ಅಥವಾ ಸಾಮೂಹಿಕ ಶೌಚಾಲಯಗಳ ಬಳಕೆ ಮಾಡುವಂತೆ ಹಳ್ಳಿಗಾಡಿನಲ್ಲಿ ದೊಡ್ಡ ಅಭಿಯಾನವೇ ನಡೆಯುತ್ತಿದೆ. ಬಹಿರ್ದೆಸೆಗಾಗಿ ಬಯಲಿಗೆ ಹೋಗುವವರನ್ನು ತಡೆಯಲು ಹೂ ಕೊಡುವುದು, ಗಂಟೆ ಬಾರಿಸುವುದು, ಕಾಲಿಗೆ ಬೀಳುವುದು ಹೀಗೆ ನವನವೀನ ವಿಧಾನಗಳ ಪ್ರಯೋಗ ನಡೆಯುತ್ತಿದೆ. ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ತನ್ನ ಮನೆಯಲ್ಲಿ ಶೌಚಾಲಯ ಹೊಂದುವುದು ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಕಡ್ಡಾಯ. ಒಂದು ವೇಳೆ ನಾಮಪತ್ರ ಸಲ್ಲಿಕೆ ಕಾಲಕ್ಕೆ ಮನೆಯಲ್ಲಿ ಶೌಚಾಲಯ ಇಲ್ಲದೇ ಹೋದರೆ, ‘ಆಯ್ಕೆಯಾಗಿ ಒಂದು ವರ್ಷದ ಒಳಗೆ ಶೌಚಾಲಯ ಕಟ್ಟಿಸಿಕೊಳ್ಳುತ್ತೇನೆ’ ಎಂಬ ಪ್ರಮಾಣ ಪತ್ರ ನೀಡಬೇಕು. ಅಷ್ಟೆಲ್ಲ ವಾಗ್ದಾನ ಮಾಡಿದ ನಂತರವೂ ಎಷ್ಟೋ ಸದಸ್ಯರು ಶೌಚಾಲಯ ಕಟ್ಟಿಸಿಕೊಂಡಿಲ್ಲ.  ಅಂಥವರನ್ನು ಅನರ್ಹಗೊಳಿಸಬೇಕು ಎನ್ನುತ್ತದೆ ಕಾನೂನು. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. 2012ರಲ್ಲಿ ಮಹಾರಾಷ್ಟ್ರದ ಯವತ್‌ಮಾಲ್‌ ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿಗಳ 664 ಸದಸ್ಯರ ಸದಸ್ಯತ್ವವನ್ನು ಇದೇ ಕಾರಣಕ್ಕಾಗಿ ರದ್ದು ಮಾಡಲಾಗಿತ್ತು. ಕುಡಿಯುವ ನೀರಿಗೆ ತತ್ವಾರ ಇರುವಾಗ ಶೌಚಾಲಯ ಸ್ವಚ್ಛಗೊಳಿಸಲು ನೀರು ತರುವುದು ಎಲ್ಲಿಂದ ಎಂಬುದು  ಕೆಲವರ ವಾದ. ಕಡಿಮೆ ನೀರು ಬಳಸುವ ಶೌಚಾಲಯ ನಿರ್ಮಾಣ ತಂತ್ರಜ್ಞಾನಗಳು ಈಗ ಲಭ್ಯವಿದ್ದು ಅವನ್ನು ಅಳವಡಿಸಿಕೊಳ್ಳಬೇಕು. ಆದ್ದರಿಂದ ಕಟ್ಟಿಸಿಕೊಳ್ಳದೇ ಇರುವುದಕ್ಕೆ ಮುಂದೊಡ್ಡುವ ಸಬೂಬುಗಳಿಗೆ ಅರ್ಥವೇ ಇಲ್ಲ. ನೈರ್ಮಲ್ಯ ಪಾಲನೆ ವಿಷಯದಲ್ಲಿ ಊರವರಿಗೆಲ್ಲ ಮಾದರಿಯಾಗಬೇಕಾದ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿತುಕೊಳ್ಳುವುದು ಒಳ್ಳೆಯದು. ಇಲ್ಲಿ ಬದಲಾಗಬೇಕಿರುವುದು ಅವರ ಮನೋಭಾವ. ಮನಸ್ಸಿದ್ದಲ್ಲಿ ಮಾರ್ಗ ಇದ್ದೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT