ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ನೆಲೆ ಮೇಲೆ ದಾಳಿ ಏಳು ಯೋಧರು ಬಲಿ

ಪೊಲೀಸ್‌ ಸಮವಸ್ತ್ರದಲ್ಲಿ ನುಸುಳಿದ ಆರು ಉಗ್ರರ ಹತ್ಯೆ
Last Updated 29 ನವೆಂಬರ್ 2016, 20:09 IST
ಅಕ್ಷರ ಗಾತ್ರ

ಶ್ರೀನಗರ: ಸೇನೆಯ 16–ಕೋರ್‌ ವಿಭಾಗದ ಜಮ್ಮು ವಲಯದ ಕೇಂದ್ರ ಕಾರ್ಯಾಲಯಕ್ಕೆ ಸಮೀಪದಲ್ಲಿರುವ ನಗರೋಟಾ ಸೇನಾ ಘಟಕದ ಮೇಲೆ ಮಂಗಳವಾರ ಮುಂಜಾನೆ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಏಳು ಜನ ಯೋಧರು ಪ್ರಾಣ ಕಳೆದು ಕೊಂಡಿದ್ದಾರೆ.

ಪ್ರಾಣ ಕಳೆದುಕೊಂಡವರಲ್ಲಿ ಇಬ್ಬರು ಅಧಿಕಾರಿಗಳೂ ಸೇರಿದ್ದಾರೆ. ಭಾರಿ ಪ್ರಮಾಣದಲ್ಲಿ ಶಸ್ತ್ರಸಜ್ಜಿತರಾಗಿದ್ದ, ಪೊಲೀಸ್ ಸಮವಸ್ತ್ರದಲ್ಲಿದ್ದ ಆರು ಉಗ್ರರು ನಗರೋಟಾದಲ್ಲಿನ ಸೇನಾ ಘಟಕದ ಮೇಲೆ ಬೆಳಿಗ್ಗೆ 5.30ರ ಸುಮಾರಿಗೆ ದಾಳಿ ನಡೆಸಿದರು.

‘ಸೇನಾ ಘಟಕದ ಮೇಲೆ ದಾಳಿ ನಡೆಸಿದ ಉಗ್ರರು ಮೊದಲು ಗ್ರೆನೇಡ್ ದಾಳಿ ನಡೆಸಿದರು, ಕಾವಲಿಗೆ ನಿಂತಿದ್ದ ಸೈನಿಕರ ಮೇಲೆ ಗುಂಡು ಹಾರಿಸಿದರು. ತಕ್ಷಣ ಯೋಧರು ಪ್ರತಿ ದಾಳಿ ನಡೆಸಿದರು. ಈ ಗುಂಡಿನ ಚಕಮಕಿಯಲ್ಲಿ ಒಬ್ಬ ಅಧಿಕಾರಿ ಹಾಗೂ ಮೂವರು ಸೈನಿಕರು ಹುತಾತ್ಮರಾದರು’ ಎಂದು ರಕ್ಷಣಾ ವಕ್ತಾರ ಕರ್ನಲ್ ಎನ್‌.ಎನ್. ಜೋಷಿ ತಿಳಿಸಿದರು.

‘ನಂತರ ಸೇನಾಧಿಕಾರಿಗಳು, ಅವರ ಕುಟುಂಬದ ಸದಸ್ಯರು ಹಾಗೂ ಸೈನಿಕರು ಇರುವ ಕಟ್ಟಡಕ್ಕೆ ಉಗ್ರರು ನುಗ್ಗಿದರು. ಆಗ ಕೆಲ ಕಾಲ ಅಲ್ಲಿ ಒತ್ತೆಯಂತಹ ಸ್ಥಿತಿ ನಿರ್ಮಾಣವಾಗಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ ಯೋಧರು, 12 ಜನ ಸೈನಿಕರು, ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳನ್ನು ಕಟ್ಟಡದಿಂದ ಹೊರತಂದರು’ ಎಂದು ಜೋಷಿ ಹೇಳಿದರು.

ಆದರೆ ಇವರನ್ನು ಕಾಪಾಡುವ ಕಾರ್ಯಾಚರಣೆಯಲ್ಲಿ ಇನ್ನೊಬ್ಬ ಸೇನಾಧಿಕಾರಿ ಹಾಗೂ ಇಬ್ಬರು ಸೈನಿಕರು ಹುತಾತ್ಮರಾದರು ಎಂದು ಮಾಹಿತಿ ನೀಡಿದರು.

ಮೂರು ಉಗ್ರರ ಮೃತದೇಹಗಳು ಸಿಕ್ಕಿವೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ಜೋಷಿ ಹೇಳಿದರು.

‘ಉಗ್ರರು ನುಗ್ಗಿದ್ದ ಕಟ್ಟಡದತ್ತ ಸೇನೆ ನಿಧಾನವಾಗಿ ಸಾಗುತ್ತಿದೆ. ಉಗ್ರರಲ್ಲಿ ಯಾರಾದರೂ ಜೀವಂತ ಇರಬಹುದೇ ಎಂಬ ಅನುಮಾನದ ಅಡಿ, ಸೇನೆ ಆಗಾಗ ಗುಂಡು ಹಾರಿಸುತ್ತಿದೆ. ಉಗ್ರರು ಆ ಪ್ರದೇಶದಲ್ಲಿ ಎಲ್ಲಿಯಾದರೂ ಸ್ಫೋಟಕ ಅಡಗಿಸಿಟ್ಟಿರಬಹುದೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಅಲ್ಲಿ ಅಡಗಿರಬಹುದಾದ ಒಬ್ಬ ಅಥವಾ ಇಬ್ಬರು ಉಗ್ರರಿಗೆ ಸೇನೆ ಹುಡುಕಾಟ ನಡೆಸುತ್ತಿದೆ. ಈ ಪ್ರದೇಶದ ಮೇಲೆ ಈಗ ಡ್ರೋನ್‌ ಹಾಗೂ ಹೆಲಿಕಾಪ್ಟರ್‌ ಮೂಲಕ ಕಣ್ಣಿಡಲಾಗಿದೆ’ ಎಂದು ಗೊತ್ತಾಗಿದೆ.

ಬಿಗಿ ಭದ್ರತೆ ಇರುವ ಈ ಜಾಗಕ್ಕೆ ಉಗ್ರರು ನುಗ್ಗಿದ್ದು ಹೇಗೆ ಎಂಬುದು ಗೊತ್ತಾಗಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯ ನಾಲ್ಕು ಕೇಂದ್ರ ಕಾರ್ಯಾಲಯಗಳ ಪೈಕಿ ಇದೂ ಒಂದು. ಇಲ್ಲಿ ಒಂದು ಸಾವಿರ ಜನ ಸೇನಾಧಿಕಾರಿಗಳು ಇದ್ದಾರೆ. ಪಾಕಿಸ್ತಾನದ ಸೇನೆಯ ನೇತೃತ್ವವನ್ನು ಜನರಲ್ ಕಮರ್ ಜಾವೆದ್ ಬಜ್ವಾ ಅವರು ವಹಿಸಿಕೊಂಡ ದಿನವೇ ಈ ದಾಳಿ ನಡೆದಿದೆ.

ದಾಳಿ ನಡೆದಿರುವುದು ಗೊತ್ತಾದ ತಕ್ಷಣ ನಗರೋಟಾ ಪ್ರದೇಶದ ಎಲ್ಲ ಶಾಲೆಗಳಿಗೆ ರಜೆ ಘೊಷಿಸಲಾಯಿತು. ಈ ಪ್ರದೇಶದ ಮೂಲಕ ಸಾಗುವ ಜಮ್ಮು – ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆಹಿಡಿಯಲಾಯಿತು. ‘ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳನ್ನು ಮುಚ್ಚಲಾಯಿತು’ ಎಂದು ಜಮ್ಮು ಜಿಲ್ಲಾಧಿಕಾರಿ ಸರಣದೀಪ್ ಸಿಂಗ್ ತಿಳಿಸಿದರು.

ದಾಳಿ ನಡೆದ ತುಸು ಹೊತ್ತಿನಲ್ಲಿ ಜಮ್ಮು – ಪಠಾಣ್‌ಕೋಟ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ, ಜಮ್ಮು, ಶ್ರೀನಗರ ಹಾಗೂ ವೈಷ್ಣೋದೇವಿ ದೇವಸ್ಥಾನಕ್ಕೆ ಸಾಗುವ ಮಾರ್ಗದ ತಳ ಶಿಬಿರ ಇರುವ ಕತ್ರಾದಲ್ಲಿ ಭದ್ರತೆ ಹೆಚ್ಚಿಸಲಾಯಿತು.

ನುಸುಳುಕೋರರ ಹತ್ಯೆ (ಶ್ರೀನಗರ ವರದಿ): ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ನುಸುಳುಕೋರರನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಹತ್ಯೆ ಮಾಡಿದೆ.

ಈ ವೇಳೆ, ಬಿಎಸ್‌ಎಫ್‌ನ ಡಿಐಜಿ ಸೇರಿದಂತೆ ನಾಲ್ಕು ಜನ ಯೋಧರು ಗಾಯಗೊಂಡಿದ್ದಾರೆ. ಬಿಎಸ್‌ಎಫ್‌ ಸಿಬ್ಬಂದಿ ಸೋಮವಾರ ಮಧ್ಯರಾತ್ರಿಯ ಸುಮಾರಿಗೆ ಗಡಿ ಪ್ರದೇಶದಲ್ಲಿ ಉಗ್ರರ ಅನುಮಾನಾಸ್ಪದ ಓಡಾಟ ಗಮನಿಸಿದರು. ಗಡಿಯ ಬಳಿ ಇರುವ ಹೊಲದ ನೀರೆತ್ತುವ ಪಂಪಿನ ಮನೆಯಲ್ಲಿ ಉಗ್ರರು ಅಡಗಿದ್ದರು. ಬೆಳಕು ಹರಿಯುತ್ತಿದ್ದಂತೆಯೇ ಅವರ ಮೇಲೆ ದಾಳಿ ನಡೆಸಿ, ಹತ್ಯೆ ಮಾಡಲಾಯಿತು ಎಂದು ಬಿಎಸ್‌ಎಫ್‌ ತಿಳಿಸಿದೆ.

ಉಗ್ರನೊಬ್ಬನ ಮೃತ ದೇಹ ಹೊರಗೆ ತೆಗೆಯುವ ವೇಳೆ ಕಚ್ಚಾ ಬಾಂಬ್‌ ಸಿಡಿದ ಪರಿಣಾಮವಾಗಿ ಬಿಎಸ್‌ಎಫ್‌ ಸಿಬ್ಬಂದಿಗೆ ಗಾಯಗಳಾದವು.
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ದಾಳಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಣೆ ನೀಡಿದ್ದಾರೆ. ಇದಕ್ಕೂ ಮುನ್ನ ಪರಿಕ್ಕರ್‌ ಅವರು ಸೇನಾ ಪಡೆ ಮುಖ್ಯಸ್ಥ ಜನರಲ್‌ ದಲ್ಬೀರ್‌ ಸಿಂಗ್‌ ಸುಹಾಗ್‌ ಅವರಿಂದ ಮಾಹಿತಿ ಪಡೆದರು.

ಬೆಂಗಳೂರಿನ ಮೇಜರ್ ಅಕ್ಷಯ್‌  ಹುತಾತ್ಮ
ದಾಳಿಯಲ್ಲಿ ಮೃತಪಟ್ಟ ಇಬ್ಬರು ಅಧಿಕಾರಿಗಳಲ್ಲಿ ಒಬ್ಬರು ಬೆಂಗಳೂರಿ ನವರು. ಅವರ ಹೆಸರು ಮೇಜರ್‌ ಅಕ್ಷಯ್ ಗಿರೀಶ್ ಕುಮಾರ್ (31) ಎಂದು ಸೇನೆ ತಿಳಿಸಿದೆ.

ಜಮ್ಮು –ಕಾಶ್ಮೀರಕ್ಕೆ ತೆರಳಿದ ಕುಟುಂಬ ಸದಸ್ಯರು
ಬೆಂಗಳೂರು:
ನಗರೋಟಾ ದಾಳಿಯಲ್ಲಿ ನಗರದ ಮೇಜರ್‌ ಅಕ್ಷಯ್‌ ಗಿರೀಶ್‌ ಕುಮಾರ್‌ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಅವರ ಕುಟುಂಬದ ಸದಸ್ಯರು  ಜಮ್ಮು–ಕಾಶ್ಮೀರಕ್ಕೆ ತೆರಳಿದ್ದಾರೆ.

ಕೋರಮಂಗಲ ನಿವಾಸಿ ಅಕ್ಷಯ್‌ ನಾಲ್ಕು ವರ್ಷಗಳ ಹಿಂದೆ ಸಂಗೀತಾ ಎಂಬುವರ ಜತೆ ಮದುವೆಯಾಗಿದ್ದರು. ಅವರಿಗೆ ಎರಡು ವರ್ಷದ ಮಗುವಿದೆ. ಅಕ್ಷಯ್‌ ತಂದೆ ಗಿರೀಶ್‌ ಜೆಟ್‌ ಏರ್‌ವೇಸ್‌ನಲ್ಲಿ ಪೈಲಟ್‌ ಆಗಿದ್ದಾರೆ.

ಹುತಾತ್ಮರಾದ ಯೋಧರು
ಮೇಜರ್‌ ಅಕ್ಷಯ್‌ ಗಿರೀಶ್‌ ಕುಮಾರ್‌ (31 ವರ್ಷ, ಬೆಂಗಳೂರು), ಮೇಜರ್‌ ಗೋಸವಿ ಕುನಾಲ್‌ ಮನ್ನಾದಿರ್‌ (33, ಸೋಲಾಪುರ, ಮಹಾರಾಷ್ಟ್ರ), ಹವಾಲ್ದಾರ್‌ ಸುಖ್‌ರಾಜ್‌ ಸಿಂಗ್‌ (32, ಗುರುದಾಸಪುರ, ಪಂಜಾಬ್‌), ಲ್ಯಾನ್ಸ್‌ ನಾಯಕ್‌ ಕದಮ್‌ ಸಂಭಾಜಿ ಯೆಶೊವಾಂತ್ರೊ (32, ನಾಂದೇಡ್‌, ಮಹಾರಾಷ್ಟ್ರ), ರಾಘವೇಂದ್ರ ಸಿಂಗ್‌ (28, ಧೋಲ್‌ಪುರ, ರಾಜಸ್ತಾನ), ಅಸಿಮ್‌ ರಾಯ್‌ (32, ಖೊಟಾಂಗ್‌, ನೇಪಾಳ)

ಗಡಿ ನಿಯಂತ್ರಣ ರೇಖೆ ದಾಟಿ ಭಾರತೀಯ ಸೇನೆ ಸೆಪ್ಟೆಂಬರ್‌ 29ರಂದು ನಡೆಸಿದ ‘ನಿರ್ದಿಷ್ಟ ದಾಳಿ’ ನಂತರ ಸೇನೆಯ ಮೇಲೆ ಪಾಕಿಸ್ತಾನದ ಕಡೆಯಿಂದ ಹಲವು ಬಾರಿ ದಾಳಿ ನಡೆದಿದೆ. ಪ್ರಮುಖ ದಾಳಿಗಳು ಇವು:
* ನವೆಂಬರ್‌ 22: ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಿರುವ ಕುಪ್ವಾರಾ ಜಿಲ್ಲೆಯ ಮಚ್ಚಲ್ ಪ್ರದೇಶದಲ್ಲಿ ಪಾಕಿಸ್ತಾನದ ಗಡಿ ಕಾರ್ಯಾಚರಣೆ ತಂಡ ನಡೆಸಿದ ದಾಳಿಯಲ್ಲಿ ಭಾರತದ ಮೂವರು ಯೋಧರು ಜೀವ ಕಳೆದುಕೊಂಡರು. ಇದರಲ್ಲಿ ಒಬ್ಬ ಯೋಧನ ಶಿರಚ್ಛೇದ ಮಾಡಲಾಗಿತ್ತು.

* ನವೆಂಬರ್ 9: ಮಚ್ಚಲ್ ಪ್ರದೇಶದಲ್ಲಿ ಪಾಕಿಸ್ತಾನದ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಮೃತ.

* ನವೆಂಬರ್ 8: ರಜೌರಿ ಜಿಲ್ಲೆಯ ನೌಶೇರಾ ಪ್ರದೇಶದಲ್ಲಿ ಪಾಕ್‌ ಸೇನೆ ನಡೆಸಿದ ಶೆಲ್‌ ದಾಳಿಯಿಂದಾಗಿ ಇಬ್ಬರು ಯೋಧರ ಸಾವು.

* ನವೆಂಬರ್ 6: ಪೂಂಛ್‌ ಜಿಲ್ಲೆಯಲ್ಲಿನ ಭಾರತದ ಸೇನಾ ಠಾಣೆಗಳ ಮೇಲೆ ಪಾಕ್‌ ಸೇನೆ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಯೋಧರು ಪ್ರಾಣ ಕಳೆದುಕೊಂಡರು.

* ನವೆಂಬರ್ 1: ಅರ್ನಿಯಾ ಮತ್ತು ರಜೌರಿಯಲ್ಲಿ ಪಾಕ್‌ ನಡೆಸಿದ ಶೆಲ್‌ ದಾಳಿಯಲ್ಲಿ ಎಂಟು ನಾಗರಿಕರ ಸಾವು.

* ಅಕ್ಟೋಬರ್ 28: ಮಚಿಲ್ ವಲಯದಲ್ಲಿ ಪಾಕಿಸ್ತಾನ ಸೈನಿಕರು ಭಾರತದ ಯೋಧನೊಬ್ಬನನ್ನು ಕೊಂದು, ಮೃತದೇಹ ವಿರೂಪಗೊಳಿಸಿದರು.

* ಅಕ್ಟೋಬರ್ 8: ಕಾಶ್ಮೀರದ ಶೋಪಿಯಾನ್‌ನಲ್ಲಿ ಉಗ್ರರಿಂದ ಪೊಲೀಸರೊಬ್ಬರ ಹತ್ಯೆ.

* ಅಕ್ಟೋಬರ್ 3: ಬಾರಾಮುಲ್ಲಾದಲ್ಲಿನ ಬಿಎಸ್‌ಎಫ್‌ ಮತ್ತು ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಿದ ಉಗ್ರರಿಂದ ಅರೆಸೇನಾ ಪಡೆಯ ಒಬ್ಬ ಯೋಧನ ಹತ್ಯೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT