ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ತಮಾಷೆ

Last Updated 30 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಪ್ರತಿ ವರ್ಷವೂ ಹೊಸ ಭರವಸೆ, ಹೊಸ ಕನಸು, ಗುರಿ, ಜೊತೆಗೆ ಈ ವರ್ಷ ಏನು ಮಾಡಬೇಕು, ಏನು ಮಾಡಬಾರದು, ಹೇಗಿರಬೇಕು, ಯಾವುದನ್ನು ಬಿಡಬೇಕು ಎಂಬ ನಿರ್ಧಾರದ ಪಟ್ಟಿಯೊಂದಿಗೇ ಆರಂಭವಾಗಿರುತ್ತದೆ.  ಅವುಗಳಲ್ಲಿ ಕೈಗೂಡಿದವು ಕೆಲವಾದರೆ, ಆರಂಭಶೂರತ್ವ ತೋರಿ ವರ್ಷಾನುಗಟ್ಟಲೆ ಹಾಗೇ  ಮೂಲೆಗುಂಪಾದ ಹಲವು ಯೋಜನೆಗಳು ಸಾಕಷ್ಟಿರುತ್ತವೆ. ಅಂಥ ಯೋಜನೆಗಳದ್ದೊಂದು ದೊಡ್ಡ ಪಟ್ಟಿ ಪ್ರತಿಯೊಬ್ಬರ ಬಳಿಯೂ ಇರುತ್ತದೆ.

ಆದರೆ ನಿರ್ಧಾರವನ್ನು ಅನುಸರಿಸಲು ಸೋತು ಸುಣ್ಣವಾದರೂ ಮುಂದಿನ ವರ್ಷವೂ ಅದನ್ನು ಮುಂದುವರೆಸುವ ಛಲ ಮಾತ್ರ ಹೋಗಿರುವುದಿಲ್ಲ. ಆ ಸೋಲನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯೂ ಇಲ್ಲ.  ಸೋಲನ್ನು ತಮಾಷೆಯಾಗೇ ನೋಡಬಹುದಲ್ಲ? ಇದೇ ಎಳೆಯನ್ನಿಟ್ಟುಕೊಂಡು ಕಾಮನಬಿಲ್ಲು ‘ಸೋಲಿನ ತಮಾಷೆ’ ಪ್ರಸಂಗಗಳನ್ನು ಓದುಗರಿಂದ ಆಹ್ವಾನಿಸಿತ್ತು. ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಸಿದ ಸಾಕಷ್ಟು ಬರಹಗಳು ಕೈಸೇರಿದವು. ಅವುಗಳಲ್ಲಿ ಕೆಲವು ಇಲ್ಲಿವೆ...

***
ಗ್ಯಾರಂಟಿ ಓದೇ ಓದ್ತೀನಿ ನೋಡ್ತಿರು

ಅಯ್ಯೋ ದೇವರೆ ಅದೆಷ್ಟೋ ಸಲ ಅಂದುಕೊಂಡಿದ್ದೆ, ಈ ವರ್ಷವಾದರೂ ಚೆನ್ನಾಗಿ ಓದಿ ಒಳ್ಳೆ ಅಂಕಗಳನ್ನು ತೆಗೆದು, ಏನಾದರು ಒಂದು ಕೆಲಸಕ್ಕೆ ಸೇರಿ, ಬೇಗ ಬೇಗ ನನ್ನ ದಾರಿಯನ್ನು ನಾನು ನೋಡ್ಕೊಬೇಕು, ಕೆಲಸ ಮಾಡಿ ಹಣ ಗಳಿಸಿ ಎಲ್ಲರಿಂದಲೂ ಸೈ ಎನಿಸಿಕೊಳ್ಳಬೇಕು ಎಂದು. ಹೀಗೆ ಅಂದುಕೊಳ್ಳುತ್ತ ನಾಲ್ಕು ವರ್ಷಗಳೇ ಉರುಳಿ ಹೋದವು. ಆದರೆ ಇದುವರೆಗೂ ಒಂದು ಆಸೆಯೂ ಈಡೇರಲೇ ಇಲ್ಲ.

‘ಈ ವರ್ಷವಾದರೂ ಪುಸ್ತಕ ಹಿಡಿದು ಓದಲೇಬೇಕು, ಈ ವರ್ಷ ಯಾರ ಮಾತೂ ಕೇಳಲ್ಲ, ಯಾರ ಸಂಗಡವೂ ಸೇರಲ್ಲ, ಗೆಳೆಯರ ಜೊತೆ ಅಲ್ಲಿ ಇಲ್ಲಿ ಸುತ್ತಾಡಲ್ಲ, ಹುಡುಗಿಯ ಸ್ನೇಹ ಮಾಡಲ್ಲ, ಮಾಡಿದರೂ ಪ್ರೀತಿ ಗೀತಿ ಅನ್ನೋ ಫಜೀತಿಗೆ ಹೋಗುವುದಿಲ್ಲ, ಇಂಥ ಕೆಲಸಗಳಿಂದ ಸುಮ್ನೆ ಸಮಯ ವ್ಯರ್ಥ’ ಅಂತ ನನ್ನ ಮನಸ್ಸಿಗೆ ಎಚ್ಚರಿಕೆ ಗಂಟೆ ನೀಡಿದೆ. ಆದರೆ ಅದು ಒಳಗೊಳಗೆ ನನ್ನನ್ನು ಛೇಡಿಸುತ್ತ ವ್ಯಂಗ್ಯ ನಗುವೊಂದನ್ನು ಬೀರಿ, ‘ನೀನು ಹೇಳಿದ್ದನ್ನೇ ಎಷ್ಟು ಬಾರಿ ಹೇಳ್ತೀಯ, ನೀನಂತೂ ಬದಲಾಗುವುದಿಲ್ಲ.ವರ್ಷಪೂರ್ತಿ ನಿಂದು ಇದೇ ಹಣೆಬರಹ ಆಯ್ತು’ ಅಂತ ಜೋರಾಗಿ ನಕ್ಕುಬಿಟ್ಟಿತು.

ಇರಲಿ, ಈ ವರ್ಷ ನೋಡು ನಾನು ಏನಂತ ತೋರಿಸುತ್ತೇನೆ ಅಂತ ಹೇಳಿ ಮುಂದುವರಿದೆ. ಮಾತಿನ ಪ್ರಕಾರ ಯಾರೊಂದಿಗೂ ಮಾತನಾಡದೆ, ಯಾರ ಜೊತೆ ಸೇರದೆ ತರಗತಿ ಮುಗಿದ ತಕ್ಷಣ ಹಾಸ್ಟೆಲ್‌ಗೆ ಬಂದು ಓದಿಕೊಳ್ಳುತ್ತಿದ್ದೆ. ಆದರೆ ನಾನು ಅಂದುಕೊಂಡಂತೆ ಆಗಲಿಲ್ಲ. ಗಟ್ಟಿ ಮನಸ್ಸು ಮಾಡಿ ಒಂದು ತಿಂಗಳೇನೋ ಇದೇ ದಿನಚರಿ ನಡೆಯಿತು. ಆದರೆ ಎದುರು ಬರುವ ದಿನಗಳು ನನ್ನದಾಗಿರಲಿಲ್ಲ. ಹಳೆಯ ಹವ್ಯಾಸಗಳು ಮತ್ತೆ ನನ್ನನ್ನು ತಬ್ಬಿಕೊಂಡವು. ಎಷ್ಟು ಸಲ ಬಿಡಿಸಲೆತ್ನಿಸಿದರೂ ಸಾಧ್ಯವಾಗಲಿಲ್ಲ. ಹಲ್ಲು ಕಿತ್ತ ಹಾವಿನಂತೆ ಶರಣಾದೆ. ನನಗೆ ಬುದ್ಧಿ ಹೇಳಿದ ನನ್ನ ಮನಸ್ಸು ನನಗೆ ತಿಳಿಯದೇ ಹಳೆಯ ಚಾಳಿಯತ್ತ ಬಾಲ ಅಲ್ಲಾಡಿಸಿಕೊಂಡು ನಡೆಯಿತು.

ಗೆಳೆಯರು ಪಾರ್ಟಿ, ಟ್ರಿಪ್ ಅಂತ ಮತ್ತೆ ನನ್ನ ವರಸೆಯನ್ನು ಶುರುಮಾಡಿಕೊಂಡೆ. ಇದರ ಮಧ್ಯೆ ಹುಡುಗಿ ಪರಿಚಯವಾಗಿ ಪ್ರೀತಿ ಮೊಳೆತು ಹೆಮ್ಮರವಾಯಿತು. ಪ್ರೀತಿ ಬಲೆಯೊಳಗೆ ಸಿಲುಕಿದರೆ ಮುಂದೆ ಏನಾಗುತ್ತೆ ಅಂತ ಹೇಳಬೇಕೆ? ಎಂಥ ಕಡಿದು ಕಟ್ಟೆ ಹಾಕುವ ಕೆಲಸ ಇದ್ದರೂ ಅದನ್ನು ಬದಿಗೊತ್ತಿ ಪ್ರೇಯಸಿ ಹಿಂದೆ ಸುತ್ತಾಡೊದು ಹುಡುಗರಿಗೆ ಒಂದು ರೀತಿಯ ಪ್ರತಿಷ್ಠೆ ಅಲ್ವಾ, ನನಗೂ ಅದೇ ಆಯ್ತು.

ಈ ವರ್ಷವಾದರೂ ಬುಕ್ಕಿನ ಹುಳು ಆಗಬೇಕು ಅಂದೋನು ಅದೇಕೋ ಮನಸ್ಸು ಬೇರೆಲ್ಲೋ ಅಲೆಯುತ್ತಿದೆ. ಇನ್ನೆಲ್ಲಿಂದ ಓದೋದು ಹೇಳಿ? ಹಿಂದಿನ ನಾಲ್ಕು ವರ್ಷದ ಜೊತೆಗೆ ಈ ಒಂದು ವರ್ಷವು ಅಂಟಿಕೊಂಡು ಐದು ವರ್ಷಗಳು ಉರುಳುವ ವೇಳೆ ಸನಿಹ ಬಂದುಬಿಟ್ಟಿತು. ಕಾಲ ಬದಲಾಗಿತೇ ಹೊರತು ನನ್ನಿಂದ ಯಾವ ಮಹಾಕಾರ್ಯಗಳು ನಡೆಯದೆ ಹೋದವು. ಅದಕ್ಕೆ ಈ ವರ್ಷ ನಿರ್ಧಾರ ಮಾಡಿದ್ದೇನೆ– ಮುಂಬರುವ ವರ್ಷದಲ್ಲಿ ದೃಢಮನಸ್ಸು ಮಾಡಿ ಓದಿ, ಕೆಲಸ ಅಂತ ತಗೊಂಡೇ ತಗೋತೀನಿ ಅಂತ. ನೋಡ್ರಿ ನನ್ನ ಮನಸ್ಸು ಮತ್ತೆ ವ್ಯಂಗ್ಯ ಮಾಡಿ ನಗುತ್ತಿದೆ.
-ಶಿವಮೂರ್ತಿ ಎಂ.

***
ನಿರಂತರ ಪ್ರತಿಜ್ಞಾ ಭಂಗ

ಹೊಸ ವರ್ಷದ ನಿರ್ಣಯ ಎಂದ ಕೂಡಲೇ ನನಗೆ ನೆನಪಾಗುವುದು, ಪತ್ರಿಕೆಗಳಲ್ಲಿ ಯುಗಾದಿ, ದೀಪಾವಳಿ ವಿಷೇಶಾಂಕಗಳಿಗೆ ಆಹ್ವಾನಿಸುವ ಕಥೆ, ಕವನ ಇತ್ಯಾದಿಗಳ ಜಾಹೀರಾತು. ಪ್ರತಿ ವರ್ಷವೂ ಈ ಜಾಹೀರಾತುಗಳನ್ನು ನೋಡಿದಾಗಲೆಲ್ಲಾ ಈ ಬಾರಿ ಖಂಡಿತ ಬರೆಯಬೇಕೆಂದು ಪ್ರತಿಜ್ಞೆ ಮಾಡುತ್ತೇನೆ. ಅಷ್ಟೆ! ದೇವರಾಣೆ, ಪ್ರತೀ ಬಾರಿಯೂ ಒಂದಕ್ಷರವನ್ನೂ ಬರೆದಿದ್ದಿಲ್ಲ! ಆದರೆ ಮಜಾ ಏನೆಂದರೆ ಪ್ರತೀ ಬಾರಿಯೂ ನನಗೇ ಯಾವುದೋ ಒಂದು ಬಹುಮಾನ ಬಂದಂತೆ, ಅದೇ ನನ್ನ ಬರವಣಿಗೆಯ ಏಣಿಯಾದಂತೆ, ಮುಂದಿನ ಕೆಲವು ವರ್ಷಗಳಲ್ಲೇ ನಾನೂ ನಾಡಿನ ಪ್ರಖ್ಯಾತ ಲೇಖಕಿಯಾದಂತೆ... ಹೀಗೆ ಹಗಲು ಕನಸುಗಳಲ್ಲೇ ತೇಲುತ್ತಿರುತ್ತೇನೆ.

ಈ ಭ್ರಮಾಲೋಕ ನನ್ನ ಮಂಡೆಯನ್ನು ಮುತ್ತೋದು ಯಾವಾಗ ಗೊತ್ತ? ಸ್ಪರ್ಧೆಗೆ ಏನಾದರೂ ಬರೆಯಲು ಕೂತಾಗ! ಬರೆಯುವುದಕ್ಕಿಂತ ಈ ಸ್ವಪ್ನವಿಹಾರವೇ ಪರಮಾನಂದವೀಯುತ್ತಿರುವಾಗ ಅದಕ್ಕೇಕೆ ಚ್ಯುತಿ ತರುವುದೆಂದು ಪೆನ್ನಿಗೆ ಕ್ಯಾಪು ಹಾಕಿ, ಕಣ್ಮುಚ್ಚಿ ಕೂರುತ್ತೇನೆ.

ನನ್ನ ಇಂಕು ಪೆನ್ನಿನಿಂದ ಆರಂಭವಾದ ಬರವಣಿಗೆ ನಂತರ ಬಂದ ಬಾಲ್ ಪೆನ್, ಈಗ ಇಮೇಲ್ ಅಂತ ಬದಲಾವಣೆ ಹೊಂದಿದರೂ ನನ್ನ ನಿರಂತರ ಪ್ರತಿಜ್ಞಾ ಭಂಗಕ್ಕೇನೂ ಅಡ್ಡಿಯಾಗಿಲ್ಲ!..? ಮೊದಲು ಇಂಕು ಖಾಲಿಯಾಯಿತೆಂಬ ಸಬೂಬು, ನಂತರ ಲೆಡ್ ಖಾಲಿಯಾಯಿತೆಂಬ ನೆವ, ಅಂಚೆ ಹಾಕಲು ದೂರ ಹೋಗಬೇಕೆಂಬ ಕಷ್ಟ, ಈಗ ಈ ಹಳ್ಳಿಯಿಂದ ನೆಟ್‌ವರ್ಕ್‌ ಸಿಕ್ಕಿ, ಮೇಲ್ ಹೋಗ್ಬೇಕಲ್ಲಾ ಎಂಬ ಸಂದೇಹ. ಇವೆಲ್ಲಾ ಬರೆಯದೇ ಇರಲು ಸಕಾರಣವಾಗಿ ನನ್ನ ಮನಸ್ಸನ್ನು ಸಮಾಧಾನ ಪಡಿಸುತ್ತವೆ.

‘ಕುಣಿಯಲು ಬಾರದವಳಿಗೆ ನೆಲ ಡೊಂಕು’ ಎಂಬಂತೆ ಅಪ್ಪಿ ತಪ್ಪಿಯೂ ‘ನಿನ್ನನ್ನು ತಬ್ಬಿಕೊಂಡಿರುವ ಸೋಮಾರಿತನವೇ ನಿನ್ನ ಕತೃತ್ವ ಶಕ್ತಿಗೆ ಅಡ್ಡಿ ಎಂಬ ಅಂತರಾತ್ಮದ ಮಾತನ್ನು ಒಪ್ಪದಂತೆ ಈ ಚಂಚಲ ಚಿತ್ತ ಎಚ್ಚರಿಕೆ ವಹಿಸುತ್ತಿರುತ್ತದೆ. ಈ ಸಮಜಾಯಿಷಿಗಳು, ವಿಷೇಶಾಂಕಗಳು, ಪತ್ರಿಕೆಗಳ ಲೇಖನ ಸ್ಪರ್ಧೆ... ಹೀಗೆ ಎಲ್ಲ ಸಮಯದಲ್ಲೂ ಜಾಗೃತಾವಸ್ಥೆಯಲ್ಲಿರುತ್ತದೆ.

ನಾನು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಬರೆಯಬೇಕೆಂದು ಅಂದುಕೊಳ್ಳುತ್ತಲೇ ಮುಂದೂಡಿದ ವಿದ್ಯಾರ್ಥಿ ವಿಭಾಗಕ್ಕೆ ಮುಂದೆ ಮಗನಿಂದಲಾದರೂ ಬರೆಸಬೇಕೆಂದು ಅಂದುಕೊಳ್ಳುತ್ತಿರುವಾಗಲೇ ಅವನೂ ಎಂಜನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿಯೂ ಆಯ್ತು!

ಚಿಟಿಕೆ ಹೊಡೆಯುವಷ್ಟರಲ್ಲಿ ಇಷ್ಟೊಂದು  ಸಮಯ ಸರಿಯಿತೇ?  ಅಬ್ಬ ಸುಳ್ಳೆಂಬ ಮಾಯೆ ಮನಸ್ಸೆಂಬ ಮರ್ಕಟವನ್ನು ಹೀಗೆ ದಶಕಗಳ ಕಾಲ ತುಂಬ ಸುಲಭವಾಗಿ ಆಳುತ್ತಿರುವುದಕ್ಕೆ ರೋಸಿ ಹೋಗಿದ್ದೇನೆ. ಮುಂದಿನ ವರ್ಷವಾದರೂ ನಾನು ನನ್ನ ‘ನಿರಂತರ ಪ್ರತಿಜ್ಞಾ ಭಂಗ’ವನ್ನು ಭಂಗ ಮಾಡ್ತೀನಿ ಅಂತ ಆತ್ಮಸಾಕ್ಷಿಯಾಗಿ ಶಪಥ ಮಾಡ್ತೀನಿ! ನೋಡೇ ಬಿಡ್ತೀನಿ. ಇದು ನನ್ನನ್ನು ಏಳಿಸುತ್ತೋ ಬೀಳಿಸುತ್ತೋ ಎಂದು!
  ­–ಹಾದಿಗಲ್ಲು ಸರಸ್ವತಿ ರಾಘವೇಂದ್ರ

***
ನಗಿಸಿತು ಇಂಗ್ಲಿಷ್‌  ಶಪಥ

ವರ್ಷದ ಆರಂಭ ಎಂದರೆ ಆ ವರ್ಷ ನಮಗೆ ಅವಶ್ಯಕವಾದ, ಆದರೆ ಕಷ್ಟವೂ ಎನಿಸಿದ ಕೆಲವು ನಿರ್ಧಾರಗಳನ್ನು ಕೈಗೊಳ್ಳುವ ಸಮಯ. ಗಟ್ಟಿಮನಸ್ಸಿನಿಂದ ಅದನ್ನು ಮಾಡಲೇಬೇಕು ಎಂದು ಹೊರಡುವ ಹುಮ್ಮಸ್ಸೂ ತುಂಬಿರುವ ಅವಧಿ. ಹಾಗೇ ನಾನು ಕೂಡ ನನಗಾಗಿ ಬೇಕಾದ ಕೆಲವೊಂದು ಕೆಲಸದ ಪಟ್ಟಿ ಮಾಡಿ ಸಾಧಿಸಿಯೇ ತೀರುತ್ತೇನೆ ಎಂದು ಸವಾಲು ಹಾಕಿ ಮುಖ ಸಣ್ಣ ಮಾಡಿಕೊಂಡೆ.

ಮೂರು ವರ್ಷ ಗೆಲ್ಲಲಾಗದ ಆ ಸವಾಲನ್ನು ಈ ವರ್ಷವೂ ಹಾಕಿಕೊಂಡೆ. ಅದೆಂದರೆ ಇಂಗ್ಲಿಷ್ ಭಾಷೆಯ ಕಲಿಕೆ. ಹೇಗಾದರೂ ಇಂಗ್ಲಿಷ್ ಕಲಿಯಲೇಬೇಕೆಂದು  ಹಟ ಮಾಡಿಕೊಂಡೆ. ಆದರೆ ಈ ಬಾರಿ ದೊಡ್ಡ ಹೊಡೆತಕ್ಕೆ ಸಿಕ್ಕಿಹಾಕಿಕೊಳ್ಳಲೇ ಬೇಕಾಯಿತು. ವರ್ಷದ ಆರಂಭದ ಉತ್ಸಾಹದಲ್ಲಿ ನನ್ನ ಸ್ನೇಹಿತನಿಗೆ ಸವಾಲ್ ಎಸೆದಿದ್ದೆ– ಇನ್ನು ಒಂದು ವರ್ಷದಲ್ಲಿ ಇಂಗ್ಲಿಷ್ ಕಲಿಯುತ್ತೇನೆ ಕಣೋ ಎಂದು. ಅವನೂ ಆ ಸವಾಲನ್ನು ಸ್ವೀಕರಿಸಿದ್ದ.

ಆರಂಭ ಶೂರನಂತೆ ಚೆನ್ನಾಗಿ ಅಭ್ಯಾಸ ಮಾಡಿ ನಂತರ ಬಿಟ್ಟುಬಿಟ್ಟೆ. ಅವನು ಮರೆತಿದ್ದಾನೆ ಎಂದುಕೊಂಡಿದ್ದೆ.  ಆದರೆ ಪುಣ್ಯಾತ್ಮ ಮೊನ್ನೆ ಮನೆಗೆ ಕರೆದುಕೊಂಡು ಹೋದ.ಕಾರಣ ಮಾತ್ರ ಹೇಳಲಿಲ್ಲ. ಅಮ್ಮನಿಗೆ ಹೇಳಿ ಕಾಫಿ ತರಿಸಿ, ‘ಚಿಕ್ಕಪ್ಪ, ಚಿಕ್ಕಪ್ಪ’ ಎಂದು ಕೂಗಿದ. ಅವರ ಚಿಕ್ಕಪ್ಪ ಬಂದು ‘ಏನೋ’ ಎಂದರು. ‘ಅದೇ ಚಿಕ್ಕಪ್ಪ, ಚ್ಯಾಲೆಂಜ್ ಅಂತ ಹೇಳಿದ್ದೆನಲ್ಲ.  ಇವನೇ ಪರೀಕ್ಷೆ ಆರಂಭಿಸಿ’ ಎಂದ. ಅಲ್ಲಿಯವರೆಗೂ ಏನೂ ಅರ್ಥವಾಗದ ನಾನು ಚೆನ್ನಾಗೇ ಸಿಕ್ಕಿಕೊಂಡಿದ್ದೆ. ಚಿಕ್ಕಪ್ಪನ ಇಂಗ್ಲಿಷ್‌ಗೆ ನಾನು ಉತ್ತರಿಸಲು ಶುರುಮಾಡಿದೆ.

ಸಮರದ ಆರಂಭದಲ್ಲಿ, ಏನು ಮಹಾ ಎಂದು ಧೈರ್ಯವಾಗಿ ಕುಳಿತೆ. ನನ್ನ ಸ್ನೇಹಿತನ ಕುತಂತ್ರವೋ ಏನೋ ಅವರ ಚಿಕ್ಕಮ್ಮ ಹಾಗೂ ಇಡೀ ಫ್ಯಾಮಿಲಿಯೇ ಬಂದುಬಿಟ್ಟಿತು.ಎದ್ದು ಬರುವಂತೆಯೂ ಇಲ್ಲ, ಸುಮ್ಮನೆ ಇರುವಂತೆಯೂ ಇಲ್ಲ.  ಹೀಗೇ  ಮುಂದುವರಿದ ಈ ಸಮರದಲ್ಲಿ ನಾನು ಸುಲಭಕ್ಕೆ ಸೋಲು ಒಪ್ಪಿಕೊಳ್ಳಲಿಲ್ಲ.

ಪ್ರತಿಯೊಂದಕ್ಕೂ ಉತ್ತರ ಕೊಡುತ್ತಿದ್ದೆ. ಎಲ್ಲರೂ ನನ್ನನ್ನು ನುಂಗುವಂತೆ ನೋಡುತ್ತಿದ್ದರು. ನನ್ನ ಸ್ನೇಹಿತ ಮಾತ್ರ ಬಾಯಿ ಮುಚ್ಚಿಕೊಂಡು ನಗುತ್ತಿದ್ದ. ಬರುಬರುತ್ತಾ ಕೆಲವೊಂದು ಪದಗಳಿಗೆ ಇಂಗ್ಲಿಷ್‌ನಲ್ಲಿ ಗೊತ್ತಾಗದಿದ್ದಾಗ ಕನ್ನಡ ಸೇರಿಸಿ ಹೇಳಿಬಿಡುತ್ತಿದ್ದೆ. ಆಗ ಚಿಕ್ಕಪ್ಪನನ್ನು ಸೇರಿ ಕುಟುಂಬವೇ ನಗೆಗಡಲಲ್ಲಿ ತೇಲಿತು. ಆ ಪಂದ್ಯದಲ್ಲಿ ಸೋತೆ, ಆದರೆ ಆಗ ಸಿಕ್ಕ ಧೈರ್ಯ ಮಾತ್ರ ಲೆಕ್ಕಕಿಲ್ಲದಷ್ಟು. ‘ನೀನು ಸೋತಿರಬಹುದು ಕಣೋ, ಒಂದಲ್ಲಾ ಒಂದು ದಿನ ಗೆಲ್ಲುತ್ತಿ. ನೀನು ಕೊಟ್ಟ ನಗೆ ಕೂಟಕ್ಕೆ ಧನ್ಯವಾದ’ ಎಂದರು. ಚಿಕ್ಕಮ್ಮ ಅಂತೂ ನಕ್ಕು ನಕ್ಕು ಮಂಚದ ಮೇಲೆ ಕುಣಿಯುತ್ತಿದ್ದರು. ಆಗ ಆರಂಭವಾದ ಇಂಗ್ಲಿಷ್‌ ಕಲಿಕೆ ಇನ್ನೂ ಮುಂದುವರೆಯುತ್ತಲೇ ಇದೆ.
–ಚಂದ್ರಶೇಖರ ಮಧುಗಿರಿ

***
ಬಿಡದ ಅವಸರದ ನಂಟು

ಇಲ್ಲಾ ಕಣೇ, ಪ್ರತಿ ವರ್ಷದಂತಲ್ಲ, ಈ ವರ್ಷದ ಕೊನೆಯೊಳಗೆ ಈ ಅವಸರ, ಧಾವಂತ ಎಲ್ಲಕ್ಕೂ ಮಂಗಳ ಹಾಡ್ತೀನಿ ನೋಡ್ತಾ ಇರು, ನನ್ನ ಗಂಡ ಇದೇನಪ್ಪ ಬುದ್ಧ ಆಗಿಬಿಟ್ರಪ್ಪ ಅಂತಿಯಾ ನೀನು! ಕಂಡಿದೀನಿ, 36 ವರ್ಷಗಳಿಂದ ನೋಡಿಲ್ವಾ? ಎಲ್ಲಾ ಬಾಯಿ ಮಾತು. ಬುದ್ಧ ಆಗೋಕೆ ಹೋಗಿ ಬುದ್ದೂ ಆಗಿಬಿಟ್ಟೀರಾ ಮತ್ತೆ.

ಹೀಗೆ ಖಂಡತುಂಡವಾಗಿ ನನ್ನ ಮಾತು ತುಂಡರಿಸುವುದೆಂದರೆ ಇವಳಿಗೆ ಅಮಿತಾನಂದ. ನಿಜ, ನನಗೆ ಮೊದಲಿನಿಂದಲೂ ಎಲ್ಲಾ ವಿಷಯಗಳಲ್ಲಿ ಆತುರ ಜಾಸ್ತಿ. ಬಿಸಿಕಾಫಿ ಗಟಗಟ ಕುಡಿಯುವುದು, ಗಬಗಬ ಮೂರೇ ನಿಮಿಷದಲ್ಲಿ ಊಟ ಮಾಡುವುದು, ಊರಿಗೆ ಹೋಗುವಾಗಲೂ ಅಷ್ಟೇ.

ಬಸ್ಸು ಬರುವುದು 8 ಗಂಟೆಗೆಂದಿದ್ದರೆ ನಾನು 7ಕ್ಕೆಲ್ಲ ಬಸ್ ನಿಲ್ದಾಣದಲ್ಲಿ ಪ್ರೆಸೆಂಟ್ ಸಾರ್! ಬಸ್ ಬಂದು ನಿಲ್ಲುವಂತಿಲ್ಲ, ಆಗಲೇ ಲಗೇಜ್ ಹಿಡಿದು ಓಡಿಯಾಯಿತು, ಇಳಿಯುವಾಗಲೂ ಅಷ್ಟೇ. ಊರು ಬರಲು ಇನ್ನೂ 2 ಕಿ.ಮೀ ಇರುವಾಗಲೇ ‘ತಡೀರಿ, ಬಸ್ ನಿಲ್ಲಲಿ ಯಾಕೆ ಅವಸರ ಮಾಡ್ತೀರಾ?’ ಎನ್ನುವ ಭಾರ್ಯಾಅಮೃತವಾಣಿಗೆ ಕಿವಿಗೊಡದೇ ಲಗೇಜ್ ಕೈಯಲ್ಲಿ ಹಿಡಿದು, ಕಂಬಿ ಹಿಡಿದು ನೇತಾಡಿ, ಅವರಿವರ ಕಾಲು ತುಳಿದು, ಪಕ್ಕದ ಸೀಟಿನವನ ಬೋಳು ತಲೆಗೆ ಬ್ಯಾಗ್‌ನ ತುದಿ ಬಡಿಸಿ ಅವರ ವಾಚಾಮಗೋಚರ ಸ್ತೋತ್ರ ಕೇಳಿ ಕೆಲವೊಮ್ಮೆ ಅವರ ಮೇಲೇ ಹರಿಹಾಯ್ದು, ಕೊನೆಗೆ ಅರ್ಧಾಂಗಿಯಿಂದ ಬೈಸಿಕೊಂಡು ಕೆಳಗಿಳಿದಾಗಲೇ ಬ್ರೇಕ್!.

ಹುಟ್ಟಿದ್ದು 7ನೇ ತಿಂಗಳಿಗಲ್ಲ, 9ರ ನಂತರವೇ. ಆದರೂ ಅದೇನೋ ಅವಸರಕ್ಕೂ ನನಗೂ ಅವಿನಾಭಾವ ಸಂಬಂಧ. ಇದು ವಂಶಪಾರಂಪರ್ಯವೇ ಇರಬೇಕು. ಏಕೆಂದರೆ ಬಾಲ್ಯದಲ್ಲಿ ಶಾಲೆಯಿಂದ ಶಾಲೆ ಬದಲಾಯಿಸುವಾಗ ನಮ್ಮಪ್ಪ ಒಂದನೇ ತರಗತಿಯಿಂದ ನೇರ ಮೂರಕ್ಕೆ ಸೇರಿಸಿದ್ದರಂತೆ. ಪಾಪ, ಅವರಿಗೂ ಅವಸರ. ಮಗ ಒಂದು ವರ್ಷ ಮೊದಲೇ ಡಾಕ್ಟರ್ ಆಗಲಿ ಅಂತ! ಹಾಗಾಗಿ ನಾನು 2ನೇ ತರಗತಿ ಓದಲೇ ಇಲ್ಲ.

ಮದುವೆಯೂ ಅಷ್ಟೇ, ನನ್ನ ಗೆಳೆಯರ ಗುಂಪಿನಲ್ಲಿ ನಾನೇ ಮೊದಲು ಬಾಸಿಂಗ ಧರಿಸಿದ್ದು. ಮತ್ತೊಂದೇ ವರ್ಷದಲ್ಲಿ ಮಗಳನ್ನು ಆಡಿಸಿದ್ದೆ. ಹಾಗಾಗಿ 50ರ ಗಡಿ ದಾಟುವುದರೊಳಗೇ ತಲೆ ಕೂದಲು ಬೆಳ್ಳಗಾಗದಿದ್ದರೂ ಮೊಮ್ಮಗಳು ಜನಿಸಿ ತಾತಾ ಎಂದು ಬಿಟ್ಟಳು.

ಏನು ಮಾಡಲಿ? ನಿಧಾನವೇ ಪ್ರಧಾನ, ಆತುರಗಾರನಿಗೆ ಬುದ್ಧಿ ಮಟ್ಟ, ಅವಸರವೇ ಅಪಘಾತಕ್ಕೆ ಮೂಲ ಈ ಎಲ್ಲಾ ಘೋಷಣೆಗಳನ್ನು ಓದಿದ್ದರೂ ಅವಸರ ನನಗೆ ಅಂಟಿಕೊಂಡೇ ಇದೆ. ಪ್ರತಿವರ್ಷದಂತೆ ಈ ವರ್ಷವೂ ಡಿಸೆಂಬರ್ ಕೊನೆಯೊಳಗೆ ನಾನು ಸಾವಧಾನಿಯಾಗಿಯೇ ತೀರುತ್ತೇನೆಂದು ಹೆಂಡತಿಯ ಮುಂದೆ ಭೀಷ್ಮ ಪ್ರತಿಜ್ಞೆ ಮಾಡಿದ್ದೇನೆ. ಇದನ್ನು ಹೇಳಿದ್ದೇ, ನನ್ನ ಬಾಳ ಸಂಗಾತಿ ‘ಅವಸರ ಮಾರ್ತಾಂಡೇಶ್ವರ...’ ಎಂದು ಕಣ್ಣಲ್ಲೇ ಕೆಣಕುತ್ತಿದ್ದಳು.
–ಕೆ.ಶ್ರೀನಿವಾಸರಾವ್

***
ಒಲಿಯದ ಹಳೆಗನ್ನಡ

ಅದೇನೋ ಗೊತ್ತಿಲ್ಲ, ಮುಂಚಿನಿಂದಲೂ ಸಾಹಿತ್ಯದ ಓದು ಎಂದರೆ ಏನೋ ಒಂದು ಆಕರ್ಷಣೆ, ಕಲ್ಲುಸಕ್ಕರೆಯಂತೆ. ಶಾಲಾದಿನಗಳಲ್ಲಿ ಪ್ಲಾಂಕ್, ಮ್ಯಾಕ್ಸ್‌ವೆಲ್, ಫರ್ಮಿ ಮುಂತಾದ ಥಿಯರಿಗಳ ಜೊತೆಯಲ್ಲಿ ಕಾರಂತ, ಭೈರಪ್ಪರ ಕಾದಂಬರಿಗಳು, ಪಂಜೆ, ವೈದೇಹಿಯವರ ಕಥೆಗಳು, ಅಡಿಗ, ಬೇಂದ್ರೆಯವರ ಭಾವಗೀತೆಗಳು ಅಪ್ಯಾಯಮಾನವಾಗಿ ಸೆಳೆಯುತ್ತಿದ್ದವು. ಆದರೆ ಇದೇ ಓದುವ ಸುಲಾಲಿತ್ಯ ಹಳಗನ್ನಡದ ವಿಚಾರವಾಗಿ ಒಲಿಯಲಿಲ್ಲ.

ಎಲ್ಲಿ ಒಡೆದು ಓದಬೇಕೆಂದು ತಿಳಿಯದೇ ಏನೇನೋ ಓದಿ ನಗೆಪಾಟಲಿಗೊಳಗಾಗುತ್ತಿದ್ದೆ. ಕಂಡು ಓದುವಾಗಲೇ ತಡಬಡಿಸುವಾಗ ಇನ್ನು ಬಾಯಿಪಾಠದ ಮಾತೆಲ್ಲಿ? ನನ್ನಪ್ಪ ಪಂಪನ ‘ಚಲದೊಳ್ ದುರ್ಯೋಧನಂ...’ ಅಥವಾ ‘ನೆತ್ತಮನಾಡಿ ಭಾನುಮತಿ ಸೋಲ್ತೊಡೆ...’ ಆಗಲೀ ರನ್ನನ ‘ಆರವಮಂ ನಿರ್ಭೀತಕಂಠೀರವವರಮಂ...’ ಆಗಲೀ ಅಥವಾ ಕವಿರಾಜಮಾರ್ಗದ ‘ಪದನರಿದು ನುಡಿಯಲುಂ...’ ಆಗಲೀ ಮುಂತಾದವುಗಳನ್ನು ಕೇಳಿದೊಡನೆ ಥಟ್ಟನೆ ಹೇಳುವಂತೆ ನನಗೆ ಹೇಳಲು ಸಾಧ್ಯವಾಗಲಿಲ್ಲ.

ಮುಂದೆ ಮಗುವಿಗೆ ಲಾಲಿಹಾಡು ಹೇಳಲು ‘ಶ್ರೀವನಿತೆಯರರಸನೆ...’ ಕಲಿತಿದ್ದು ಬಿಟ್ಟರೆ ಮತ್ಯಾವುದೂ ಕೂಡಿ ಬರಲೇಇಲ್ಲ. ಎಂ.ಎ ಮಾಡುವಾಗ ಕಲಿಯಬೇಕಾಗಿ ಬಂದರೂ ಅದು ಪರೀಕ್ಷಾದೃಷ್ಟಿಯಿಂದ ಮಾತ್ರ, ತತ್ಕಾಲಕ್ಕೆ. ಈಗೀಗ ಗಮಕವಾಚನದ ಕಾರ್ಯಕ್ರಮಗಳಿಗೆ ಹೋದಾಗ ನನಗೇಕೆ ಇದು ಒಲಿದು ಬರುತ್ತಿಲ್ಲ ಎಂದು ಮನಸ್ಸು ಕಸಿವಿಸಿಗೊಳ್ಳುತ್ತದೆ.

ಗೋವಿನ ಹಾಡಿನಂತೆಯೋ, ರಾಷ್ಟ್ರಗೀತೆಯಂತೆಯೋ ಅಥವಾ ಇನ್ನ್ಯಾವುದೋ ಸಿನಿಮಾ ಹಾಡಿನಂತೆಯೋ ತನ್ನೊಳಗೆ ಇದೇಕೆ ಸೇರುತ್ತಿಲ್ಲ ಎಂದು ಪ್ರಶ್ನಿಸಿಕೊಳ್ಳುತ್ತೇನೆ. ‘ಕೆಲವಂ ಬಲ್ಲವರಿಂದ ಕಲ್ತು...’ ಎಂಬ ಸೋಮೇಶ್ವರನ ಸೂಕ್ತಿಯಂತೆ ಮುಂದಿನ ವರ್ಷ ಕಲಿಯುತ್ತೇನೆ ಎಂದುಕೊಂಡು, ಹಾಗೆಯೇ ಕೆಲವು ವರ್ಷಗಳಿಂದ ಮುಂದೂಡುತ್ತಲೇ ಬಂದಿದ್ದೇನೆ. ಆದರೆ ಇದಕ್ಕೆ ಸರಿಯಾಗಿ, ಇಷ್ಟು ದಿನ ಆಗದ್ದು ಇನ್ನೆಲ್ಲಿ ಎಂದು ಸಂಸಾರಬಂಧ ಅಣಕಿಸುತ್ತದೆ.
-ಶ್ರೀರಂಜನಿ

***
ಸೋಲಲ್ಲೂ ಖುಷಿಯಿದೆ

ಕಾನೂನು ಪದವಿ ನಂತರ ಸ್ನಾತಕೋತ್ತರ ಬೇಕೇ ಬೇಡವೇ ಎಂಬ ದ್ವಂದ್ವದಲ್ಲೇ ಎರಡು ವರ್ಷ ಕಳೆದೇ ಹೋಗಿತ್ತು. ಕೊನೆಗೂ ಮಾಸ್ಟರ್ ಪದವಿಗೆ ಓದಲು ನಿರ್ಧರಿಸಿ ಕೋರ್ಸಿಗೆ ಸೇರಿದ್ದೂ ಆಯ್ತು. ಕೇವಲ ಎರಡು ವರ್ಷ ಕಷ್ಟಪಟ್ಟರೆ ಸಾಕು, ನನಗೆ ಅತೀ ಪ್ರಿಯವಾದ ಉಪನ್ಯಾಸಕ ಹುದ್ದೆಯಲ್ಲಿ ಕನಿಷ್ಠ ನಾಲ್ಕು ವರ್ಷ ಸೇವೆ ಸಲ್ಲಿಸುವ ಬಯಕೆ ಈಡೇರೀತು, ಈ ಎಲ್ಲ ಲೆಕ್ಕಾಚಾರ ಸಾಕಾರವಾಗಬೇಕಲ್ಲ? ಆನ್ಲೈನ್ ಆಫ್‌ಲೈನ್‌ಗಳಲ್ಲಿ ಸಾವಿರಾರು ರೂಪಾಯಿ ಸುರಿದು ಪಠ್ಯ ಪುಸ್ತಕ, ಗೈಡ್ ಇತ್ಯಾದಿ ಖರೀದಿಯೂ ಮುಗಿದು ಮತ್ತೆ ಓದಿನಲ್ಲಿ ಮುಳುಗಿದೆ, ಅತ್ತ ಸಂಸಾರವನ್ನೂ ನಿಭಾಯಿಸುತ್ತ ...

ಆಂತರಿಕ ಪರೀಕ್ಷೆಗಳ ತಯಾರಿಯೂ ಜೋರಾಗಿಯೇ ನಡೆದಿತ್ತು. ಪದವಿಯಲ್ಲಿ ತಪ್ಪಿದ ರ್‍್ಯಾಂಕ್‌ ಅನ್ನು ಈ ಅವಕಾಶದಲ್ಲಾದರೂ ಗಳಿಸಬೇಕೆಂಬ ಛಲ. ವರ್ಷದ ಮಧ್ಯೆ ಅನಿರೀಕ್ಷಿತ ಘಟನೆಗಳು ನನ್ನೆಲ್ಲ ಆಸೆಗಳನ್ನು ಕಮರಿಸಿತು. ಗಟ್ಟಿ ಮನಸ್ಸಿನಿಂದ ಪುಸ್ತಕಗಳನ್ನೆಲ್ಲ ಗಂಟುಮೂಟೆ ಕಟ್ಟಿ ಅಟ್ಟಕ್ಕೆ ಏರಿಸಿದೆ ಅಷ್ಟೆ, ಅದನ್ನು ಮತ್ತೆ ತೆಗೆಯಲೇ ಇಲ್ಲ. ಈಗ ಸ್ವಲ್ಪ ಬೇಸರವೆನಿಸಿದರೂ ಪಶ್ಚಾತ್ತಾಪವಿಲ್ಲ.

ಸದ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ನನ್ನ ಮೊಮ್ಮೊಗನಿಗೆ ಅಜ್ಜಿ ಕಮ್ ಮ್ಯಾಮ್ (ಅವನ ಭಾಷೆಯಲ್ಲಿ ಶಿಕ್ಷಕಿ) ಆಗಿದ್ದೇನೆ. ಕಾಲೇಜಿನಲ್ಲಿ ಕಾನೂನು ಪಾಠ ಮಾಡಲಾಗದಿದ್ದರೂ ಕನ್ನಡ ವರ್ಣಮಾಲೆಯಿಂದ ಹಿಡಿದು ಮಗ್ಗಿ ಪದ್ಯಗಳನ್ನು ಅವನಿಗೆ ಕಲಿಸುವಾಗಿನ ಖುಷಿ ಓದು ಕಡಿತಗೊಂಡ ಸೋಲನ್ನೂ ಸೋಲಿಸುತ್ತಿದೆ.
–ಕೆ.ವಿ.ರಾಜಲಕ್ಷ್ಮಿ

***
ಅಡ್ಡ ವೃದ್ಧಿಯನ್ನು ಅಡ್ಡ ಹಾಕೋದು ಹೇಗೆ?

ದೇಶಕ್ಕೆ ಪಂಚವಾರ್ಷಿಕ ಯೋಜನೆಯಿರುವಂತೆ ನನಗೂ ಪ್ರತಿ ಡಿಸೆಂಬರ್‌ ಕೊನೆಯ ವಾರದಲ್ಲಿ ಸಾಂವತ್ಸರಿಕ ಯೋಜನೆಯನ್ನಿಟ್ಟುಕೊಳ್ಳುವ ಪರಿಪಾಠವಿದೆ. ಅದರಲ್ಲಿ ಮುಖ್ಯವಾಗಿ ನೌಕರಿಯ ಬಡ್ತಿ ಸಂಬಂಧಿತದ್ದು, ಮಕ್ಕಳ ವಿದ್ಯಾಭ್ಯಾಸ ಹಾಗೂ ನನ್ನ ಅಡ್ಡ ಬೆಳೆಯುವಿಕೆಯನ್ನು ತಡೆಯುವ ವಿಧಾನಗಳು ಪ್ರಾಮುಖ್ಯ ಪಡೆಯುತ್ತಿದ್ದವು. ಎಲ್ಲಾ ಸರಿಸುಮಾರಾಗಿ ಅಂದುಕೊಂಡಂತೆ ಆಗುತ್ತಿದ್ದರೂ ನನ್ನ ವಿಷಯದಲ್ಲಿ ಮಾತ್ರ ಕುಂಠಿತವಾಗುತ್ತಿತ್ತು.

ಜನವರಿ ಮೊದಲ ವಾರದಲ್ಲಿ ಎಲ್ಲಿಲ್ಲದ ಹುರುಪಿನಿಂದ ಚುಮು ಚುಮು ಚಳಿಯಲ್ಲೂ ಬಿರುಸಿನ ನಡಿಗೆಯನ್ನು ಶುರು ಮಾಡೇಬಿಟ್ಟೆ. ಹಾಗೂ ಹೀಗೂ ಸಂಕ್ರಾಂತಿಯವರೆಗೂ ಸಾಗುತ್ತಿತ್ತು. ಸಂಕ್ರಾಂತಿಯ ಮೂರು ದಿನದ ಸಂಭ್ರಮದಲ್ಲಿ ಅದುವರೆಗಿದ್ದ ನಡಿಗೆ, ನಾಲಗೆ ಮೇಲಿನ ಕಟ್ಟುಪಾಡೆಲ್ಲಾ ಎಗರಿಹೋಗುತ್ತಿತ್ತು. ಮತ್ತೆ ಶುರುಮಾಡಲು ತುಂಬಾ ಕಷ್ಟವಾಗುತ್ತಿತ್ತು. ಚಳಿಯ ಕೊರೆತ, ಸೊಗಸಾದ ಸಿಹಿ ನಿದ್ದೆ ಮುಂತಾದವು ನನ್ನನ್ನು ತೆಳ್ಳಗಾಗಲು ತಡೆಯುತ್ತಿದ್ದವು. ಮತ್ತೆ ಆಫೀಸಿನ ಫೆಬ್ರುವರಿ ಮಾರ್ಚ್‌ ಟಾರ್ಗೆಟ್‌ನ ಒತ್ತಡದಲ್ಲಿ ನನಗರಿವಾಗದಂತೆಯೇ ಮುಂಚೆ ಮೀಟಿಂಗ್‌ನಲ್ಲಿ ಬೇಡವೆನ್ನುತ್ತಿದ್ದ ಬಜ್ಜಿ, ಬೋಂಡಾ, ಸ್ವೀಟ್‌ಗಳು ಮತ್ತೆ ನನ್ನ ನಾಲಗೆಯ ಸಿಂಹಾಸನದಲ್ಲಿ ನಲಿದಾಡುತ್ತಿದ್ದವು.

ಮುಂದೆ ಬೇಸಿಗೆಯ ಬೇಗೆಯಲ್ಲಿ ಬಸವಳಿಯುತ್ತಿದ್ದರಿಂದ ನಡಿಗೆ, ವ್ಯಾಯಾಮಗಳು ಮೂಲೆಗುಂಪಾಗಿರುತ್ತಿತ್ತು. ಮತ್ತೆ ಶ್ರಾವಣದಲ್ಲಿ ಬರುವ ಸಾಲು ಸಾಲು ಹಬ್ಬಗಳ ಭರಾಟೆಯಲ್ಲಿ ಜಿಹ್ವೆಯನ್ನು ತಡೆದರೆ ಮಹಾಪಾಪವೆಂದು ಎಣಿಸಿ ಆತ್ಮ ತೃಪ್ತಿಗೊಳ್ಳುತ್ತಿದ್ದೆ. ಹೀಗೆ ಸಾಗುತ್ತಿರುವಾಗ ಒಮ್ಮೆ ತೂಕ ನೋಡಿಕೊಂಡಾಗ ಮುಂಚಿಗಿಂತ ನಾಲ್ಕು ಕೆ.ಜಿ ಹೆಚ್ಚಾಗಿದ್ದೆ. ಏನಪ್ಪಾ ಮಾಡೋದು ಅಂತ ತಲೆಬಿಸಿ ಮಾಡಿಕೊಳ್ಳುವುದರೊಳಗಷ್ಟರಲ್ಲೇ ಡಿಸೆಂಬರ್‌ ಬಂದು ಮತ್ತೆ ಹೊಸ ಗಟ್ಟಿ ನಿರ್ಧಾರ ಹೇಗೆ ಮಾಡಬೇಕೆಂಬ ಯೋಚನೆಯಲ್ಲಿಯಾದರೂ ಗೆಲ್ಲಬಹುದೇನೋ? ಇದೇ ಆಲೋಚನೆಯಿಂದ ಸ್ವಲ್ಪ ಆಶಾಭಾವನೆಯಿಂದ ಮುಂದಿನ ವರ್ಷವನ್ನು ಎದುರು ನೋಡುವುದೇ ಸಂತೋಷ ಕೊಡುತ್ತಿದೆ.
–ವಿ. ವಿಜಯೇಂದ್ರ ರಾವ್‌

***
ಮೊದಲ ದಿನವೇ ಬಂತು ಫಜೀತಿ!

ಈ ವರ್ಷದ ಪ್ರಾರಂಭದಲ್ಲಿ ವರ್ಷದ ಯೋಜನೆಗಳನ್ನು, ಸಂಕಲ್ಪಗಳನ್ನ ಮೊದಲ ಪುಟದಲ್ಲಿ ಬರೆದಿಟ್ಟಿದ್ದೆ. ಅದರಲ್ಲಿ ನನಗೆ ನಾನೇ ಹಾಕಿಕೊಂಡ ಹೊಸ ದಿನಚರಿ, ಪ್ರತಿದಿನ ಯೋಗ ಮಾಡುವುದು, ಪತ್ರಿಕೆಯಲ್ಲಿ ಒಂದಾದರೂ ಲೇಖನ ಪ್ರಕಟಿಸುವುದು, ಅಡುಗೆ ಕಲಿಯುವುದು ಇತ್ಯಾದಿ... ಇಂತಹ ಯೋಜನೆಗಳು ಕಳೆದ ಐದು ವರ್ಷದ ಡೈರಿಯ ಮೊದಲ ಪುಟದಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವಂತಹದ್ದು. ಆದರೆ ಈ ವರ್ಷ ಹೇಗಾದರೂ ಮಾಡಿ ಕಾರು ಚಲಾಯಿಸುವುದನ್ನು ಕಲಿಯಲೇಬೇಕೆಂಬ ಹೊಸ ನಿರ್ಧಾರ ಮಾಡಿದೆ.

ಕಳೆದ ವರ್ಷ ಕ್ಲಾಸಿಗೆ ಹೋಗಿದ್ದೆನಾದರೂ ಸ್ವಂತ ಕಾರಿನಲ್ಲಿ ಓಡಿಸುವುದು ಕಷ್ಟವಾಗುತ್ತಿತ್ತು. ಹಾಗೂ ಹೀಗೂ ಅಣ್ಣನಿಗೆ ದುಂಬಾಲು ಬಿದ್ದ ಮೇಲೆ ಕಾರು ಚಲಾಯಿಸುವುದನ್ನು ಕಲಿಸಲು ಒಪ್ಪಿದ. ವರ್ಷದ ಮೊದಲನೇ ದಿನ ತಿಳಿದಿರುವ ಎಲ್ಲಾ ವಿದ್ಯೆಯನ್ನು ಪ್ರಯೋಗಿಸಿ ಕಾರನ್ನು ಮನೆಯ ಗೇಟಿನಿಂದ ಹೊರಗೆ ಹಾಕಿ ರಸ್ತೆಗೆ ಇಳಿಸಿದೆ.

ನನ್ನ ಕಾರು ರಸ್ತೆಯ ಎಡ ಭಾಗದಲ್ಲೇ ಇರುವಂತೆ, ಯಾವುದೇ ಪ್ರಾಣಿಗೆ ಅಥವಾ ಇತರೆ ಮನುಷ್ಯರು, ವಾಹನಗಳಿಗೆ ಡಿಕ್ಕಿ ಹೊಡೆಯದಂತೆ, ವೇಗದ ಮಿತಿ ಕಾಪಾಡುವಂತೆ ಅಣ್ಣ ಎಚ್ಚರಿಕೆ ಕೊಡುತ್ತಿದ್ದ. ಅವನು ಹೇಳಿದ ಕಡೆ ಹಾರ್ನ್‌ ಹಾಕುತ್ತ, ಗೇರ್‌ ಚೇಂಜ್‌ ಮಾಡುತ್ತ ಸಲೀಸಾಗಿ ಐದು ಕಿಲೋಮೀಟರ್‌ ಹೊಡೆದ ನಂತರ ಯೂಟರ್ನ್‌ ತೆಗೆದು ವಾಪಸ್‌ ಮನೆಯ ಕಡೆಗೆ ಓಡಿಸಿದೆ. ಕೊನೆಗೂ ಕಾರು ಓಡಿಸಲು ಕಲಿತೆ ಎಂಬ ಸಂತೃಪ್ತಿ ನನಗೆ.

ನನ್ನ ಕಾರು ಒಂದು ಆಟಿಕೆಯಂತೆ ಅನಿಸಿತು. ಸ್ಟೇರಿಂಗನ್ನು ಬಹಳ ಸಲೀಸಾಗಿ ತಿರುಗಿಸತೊಡಗಿದೆ. ಅಷ್ಟರಲ್ಲಿ ಒಂದು ಎಮ್ಮೆ ದಾರಿಗೆ ಅಡ್ಡ ಬಂತು. ನಾನು ಎಕ್ಸಲೇಟರನ್ನು ಬಿಟ್ಟು ಸಡನ್ನಾಗಿ ಬ್ರೇಕನ್ನು ಒತ್ತಿದೆ. ಆದರೂ ಕಾರು ಎಮ್ಮೆಗೆ ಬಡಿದು ದಡಕ್ಕನೆ ರಸ್ತೆ ಮಧ್ಯೆ ನಿಂತಿತು. ನನ್ನ ಪ್ರಾಣವೇ ಬಾಯಿಗೆ ಬಂದಂತೆ, ಕಾರಿನಿಂದ ಇಳಿದು ಬಂದು ನೋಡುವಷ್ಟರಲ್ಲಿ ಎಮ್ಮೆಯ ಮೈಯಿಂದ ರಕ್ತ ಜಿನುಗುತ್ತಿತ್ತು. ಎಮ್ಮೆಯ ಮಾಲೀಕ ಕೋಪದಿಂದ ಬಾಯಿಗೆ ಬಂದಂತೆ ಬಯ್ಯತೊಡಗಿದ.

ರಸ್ತೆಯ ಮಧ್ಯೆಯೇ ನಮ್ಮನ್ನು ತರಾಟೆಗೆ ತೆಗೆದುಕೊಂಡಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಹತ್ತು ಹಲವಾರು ಗಾಡಿಗಳು ಹಾರ್ನ್‌ ಮಾಡುತ್ತ ಸಾಲುಗಟ್ಟಿ ನಿಂತಿದ್ದವು.ಅಂತೂ ಇಂತೂ ಆ ಎಮ್ಮೆಯ ಮಾಲೀಕನಿಗೆ ಸಮಾಧಾನಪಡಿಸಿ ಆದ ತಪ್ಪಿಗೆ ಕೇಳಿದಷ್ಟು ಹಣವನ್ನು ಕೊಟ್ಟು ಬರುವಷ್ಟರಲ್ಲಿ ಅರ್ಧ ಜೀವವಾಗಿತ್ತು. ಈ ಘಟನೆಯ ನಂತರ ಮತ್ತೆ ಕಾರಿನ ಸ್ಟೇರಿಂಗನ್ನು ಹಿಡಿಯಲೇ ಇಲ್ಲ...! ಆದರೂ ಮನದ ಮೂಲೆಯಲ್ಲೆಲ್ಲೋ ಮತ್ತೆ ಕಾರು ಓಡಿಸುವ ಆಸೆ ಆಗಾಗ್ಗೆ ಇಣುಕುತ್ತದೆ.
–ಮನೀಷಾ ಎನ್‌. ಭಟ್ಟ್

***
ನಡೆದು ಸೋತು, ಸೋತು ನಡೆದು...

ನವೆಂಬರ್ ಕನ್ನಡಿಗರಾದ ನಮ್ಮೆಲ್ಲರ ಕನ್ನಡ ಪ್ರೇಮದ ಮುಕ್ತಾಯ ಸಮಾರಂಭಗಳ ಭರಾಟೆ ಒಂದೆಡೆಯಾದರೆ, ಇಷ್ಟು ವರ್ಷಗಳೂ ಚಾಲ್ತಿಯಲ್ಲಿದ್ದ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಅವಸಾನ; ಹೊಸ ನೋಟುಗಳ ಪಡೆದುಕೊಳ್ಳುವ ಧಾವಂತ - ಪರದಾಟ ಇನ್ನೊಂದೆಡೆ. ಈ ಎಲ್ಲದರ ಮಧ್ಯೆ ವರ್ಷ ಮುಗಿಯುತ್ತಲಿದ್ದು ವರ್ಷಾರಂಭದಲ್ಲಿ ನಿರ್ಣಯಗಳನೇಕವನ್ನು ಕೈಗೊಂಡು ‘ಈ ಸಲ ಮಾತ್ರ ನನ್ನ ದೈನಂದಿನ ಜೀವನದಲ್ಲಿ ಅವಶ್ಯ ಅಳವಡಿಸಿಕೊಳ್ಳುತ್ತೇನೆ’ ಎಂದು ಪ್ರತಿಜ್ಞೆ ಮಾಡಿದ್ದೇನೋ ಹೌದು.

ಆರಂಭ ಶೂರಳಾದದ್ದೂ ಹೌದು. ಅನೇಕ ನಿರ್ಣಯ ಕೈಗೊಂಡದ್ದೇಕೆಂದರೆ ಕಡೇಪಕ್ಷ  ಒಂದನ್ನಾದರೂ ಜಾರಿಗೊಳಿಸುವೆನೆಂಬ ಭಂಡಧೈರ್ಯದಿಂದ.  ಆದರೆ ಅದನ್ನು ಹಾಯಾಗಿ ಮರೆತು ಗಾಳಿಗೆ ತೂರಲ್ಪಟ್ಟು ಪ್ರತೀಸಲದಂತೆ ತಿಲಾಂಜಲಿ ಇತ್ತದ್ದು ಯಾವಾಗ... ಯಕ್ಷಪ್ರಶ್ನೆಯಾಗಿ ಕಾಡತೊಡಗುವುದು ಯಾರಾದರೂ ಕೇಳಿ ಕಾಲೆಳೆದಾಗ ಮಾತ್ರ.

ಇತ್ತೀಚಿನ ವರುಷಗಳಲ್ಲಿ ಹೊಸವರ್ಷಕ್ಕೆ ಹೊಸ ನಿರ್ಣಯಗಳನ್ನು ಕೈಗೊಳ್ಳುವುದು ಸಂಪ್ರದಾಯವಾಗಿಬಿಟ್ಟಿದೆ. ಯಾರೇ ಸಿಗಲಿ ಹೊಸ ವರ್ಷದ ಅಭಿನಂದನೆಗಳ ವಿನಿಮಯದ ನಂತರ ತೂರಿ ಬರುವ ಮೊದಲ ಪ್ರಶ್ನೆಯೇ ‘ಹೊಸ ವರ್ಷಕ್ಕೇನು ರೆಸಲ್ಯೂಷನ್?’ ಎಂದು.

ಮೊದಮೊದಲು ನನಗದು ಬಲು ಮೋಜೆನ್ನಿಸಿತ್ತು. ಯಾರೆಷ್ಟು ಪಾಲಿಸಿದ್ದಾರೆಂಬುದನ್ನು ಪರೀಕ್ಷಿಸುವುದೇ ಚಟವಾಗಿ ಕಾಲೆಳೆಯುವುದು ರೂಢಿಯಾಗಿತ್ತು. ಆದರೆ ನಂತರದಲ್ಲಿ ನಾನೂ ಅದಕ್ಕೆ ಬದ್ಧಳಾಗಿ ಹೊಸವರ್ಷದ ನಿರ್ಣಯಗಳನ್ನು ಜಾರಿಗೊಳಿಸಿ ಯಶ ಕಾಣದೇ ಹೋದರೂ ಮನದ ಮೂಲೆಯಲ್ಲಿ ಗೂಟ ಹೊಡೆದು ಕುಳಿತು ಅಣಕಿಸುತ್ತಿರುವ ಆ ಒಂದು ನಿರ್ಣಯವನ್ನು ಮಾತ್ರ ಇಂದಿಗೂ ಮರೆಯಲಾಗುತ್ತಿಲ್ಲ .

ಬೆಳಗಿನ ವಾಯುವಿಹಾರ ಎಷ್ಟೊಂದು ಆಹ್ಲಾದಕರ; ಆರೋಗ್ಯಕ್ಕೂ ಒಳ್ಳೆಯದು. ಕಡೇಪಕ್ಷ ವಾರದಲ್ಲಿ ಐದರಿಂದ ಆರು ದಿನವಾದರೂ ಹೋಗಬೇಕು ಅಂದುಕೊಂಡದ್ದೊಂದೇ ಬಂತು. ‘ಅಯ್ಯೋ, ನಿಮಗೇನ್ ಬಿಡ್ರಿ, ಆರಾಮಿದ್ದೀರಿ... ನನಗೋ ಮಕ್ಕಳಿಗೆ ಡಬ್ಬಿ ಕಟ್ಬೇಕು. ಬೆಳಿಗ್ಗೆ ಸರಿಯಾಗಿ ಉಸಿರು ತೊಗೊಳ್ಳೋಕೂ ಪುರುಸೊತ್ತಿರಲ್ಲ ... ’ ಕಳ್ಳನಿಗೊಂದು ಪಿಳ್ಳೆ ನೆವ ಸಿಕ್ಕಿತ್ತು ಆಗ.  ಆದರೆ ಈಗವು ರೆಕ್ಕೆ ಬಲಿತು ಹಾರಿವೆ.

ಯಾವ ಅವಸರವೂ ಇಲ್ಲ, ನಿಯಮಿತವಾಗಿ ಹೋಗಬಹುದು. ಹಾಗಾಗಿ  ಪ್ರತಿವರ್ಷದ ಆರಂಭದಲ್ಲಿ ಹುರುಪಿನಿಂದಲೇ ವಾಯುವಿಹಾರ ಕೈಗೊಳ್ಳುತ್ತೇನೆ. ತಯಾರಿಯೂ ಜೋರಾಗಿರುತ್ತದೆ... ಹೊಸ ಬೂಟು, ಚೂಡಿ... ಹೀಗೆ. ಆದರೆ ಅದ್ಯಾವಾಗ ನನ್ನ ಉತ್ಸಾಹದ ಬಲೂನು ಠುಸ್ ಎನ್ನುತ್ತದೋ ತಿಳಿಯದಾಗಿದೆ.

ಎಷ್ಟೇ ಪ್ರಯತ್ನಪಟ್ಟರೂ ನಾನು ಮಾಡಿಕೊಂಡ ಆ ನಿರ್ಣಯವನ್ನು ಯಶಸ್ವಿಯಾಗಿ ಜಾರಿಗೊಳಿಸಲು ಇನ್ನೂ ನನ್ನಿಂದ ಸಾಧ್ಯವಾಗಿಲ್ಲ. ನನ್ನ ನಿರ್ಣಯ ಬಹಳ ಸರಳವಾಗಿ ಕಂಡರೂ ಅನುಷ್ಠಾನಕ್ಕೆ ತರುವುದು ಕ್ಲಿಷ್ಟವೆನ್ನಿಸಿದೆ. ಬೆಂಬಿಡದ ತ್ರಿವಿಕ್ರಮನಂತೆ ಅದೇ ನಿರ್ಣಯವನ್ನು ಅನೇಕ ಬಾರಿ ಕೈಗೊಂಡಿರುವೆನಾದರೂ ಸೋತು ಸುಣ್ಣವಾಗಿ ದ್ರಾಕ್ಷಿಯೇ ಹುಳಿ ಎಂಬ ಗುಳ್ಳೆನರಿಯ ತೀರ್ಮಾನಕ್ಕೆ ಬದ್ಧಳಾಗಿಬಿಟ್ಟಿರುವೆ. ಆದರೂ ಪ್ರಯತ್ನವನ್ನಿನ್ನೂ ಬಿಟ್ಟಿಲ್ಲ... ಹೊಸವರ್ಷ ಬರುತ್ತಿದೆ, ಹೊಸ ಬೂಟು ಖರೀದಿಸಬೇಕು... ಈ ಸಲವಾದರೂ ಯಶ ಕಾಣೆಂದು ಶುಭ ಹಾರೈಸಿ !
–ಲತಾ ಹೆಗಡೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT