ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರ ಸ್ವಂತ ಮನೆಯಲ್ಲಿ ಮಗನಿಗೆ ಕಾನೂನಾತ್ಮಕ ಹಕ್ಕಿಲ್ಲ

ಅನುಕಂಪ ಆಧಾರದಲ್ಲಿ ವಾಸಿಸಲು ಅವಕಾಶ
Last Updated 30 ನವೆಂಬರ್ 2016, 19:37 IST
ಅಕ್ಷರ ಗಾತ್ರ

ನವದೆಹಲಿ: ಪೋಷಕರ ಸ್ವಂತ ಮನೆಯಲ್ಲಿ ವಾಸಿಸಲು ಮಗನಿಗೆ ಯಾವುದೇ ಕಾನೂನಾತ್ಮಕ ಹಕ್ಕಿಲ್ಲ, ಆತ ಅನುಕಂಪದ ಆಧಾರದಲ್ಲಿ ಮಾತ್ರ ಅಲ್ಲಿ ವಾಸಿಸಬಹುದು ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

ಸಂಬಂಧದ ಆತ್ಮೀಯತೆಯ ಕಾರಣ ಮಗನಿಗೆ ತಮ್ಮ ಮನೆಯಲ್ಲಿ ನೆಲೆಸಲು ಅವಕಾಶ ನೀಡುವುದು, ಜೀವನವಿಡೀ ಆತನ ‘ಹೊರೆ’ಯನ್ನು ಸಹಿಸಿಕೊಳ್ಳಬೇಕೆಂದು ಅರ್ಥವಲ್ಲ ಎಂದೂ ಕೋರ್ಟ್ ತಿಳಿಸಿದೆ. ಇದು ಮಗ ವಿವಾಹಿತ ಅಥವಾ ಅವಿವಾಹಿತ ಎಂಬ ಅಂಶವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

‘ಪೋಷಕರು ಸ್ವಂತ ಮನೆಯನ್ನು ಹೊಂದಿದ್ದರೆ, ಮಗ ವಿವಾಹಿತ ಅಥವಾ ಅವಿವಾಹಿತನಾಗಿರಲಿ, ಆತನಿಗೆ ಅಲ್ಲಿ ಜೀವಿಸಲು ಕಾನೂನಾತ್ಮಕ ಹಕ್ಕು ಇರುವುದಿಲ್ಲ. ಪೋಷಕರು ಆತನ ಮೇಲಿನ ಕರುಣೆಯಿಂದ ಅನುಮತಿ ನೀಡಿದರೆ ಮಾತ್ರ ಆತ ಮನೆಯಲ್ಲಿ ಉಳಿದುಕೊಳ್ಳಬಹುದು’ ಎಂದು ನ್ಯಾಯಮೂರ್ತಿ ಪ್ರತಿಭಾ ರಾಣಿ ಆದೇಶದಲ್ಲಿ ತಿಳಿಸಿದ್ದಾರೆ.

ಮನೆಯನ್ನು ತೊರೆಯಲು  ತಮ್ಮ ಮಗ ಮತ್ತು ಸೊಸೆ ಇಬ್ಬರಿಗೂ ಸೂಚಿಸುವಂತೆ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯವು ವ್ಯಕ್ತಿಯ ಪರವಾಗಿ ತೀರ್ಪು ನೀಡಿತ್ತು. ಇದನ್ನು ಮಗ ಮತ್ತು ಸೊಸೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ತಮ್ಮ ಜತೆ ವಾಸಿಸುತ್ತಿರುವ ಗಂಡುಮಕ್ಕಳು  ಮತ್ತು ಸೊಸೆಯಂದಿರು ತಮ್ಮ ಬದುಕನ್ನು ಹೈರಾಣಾಗಿಸಿದ್ದಾರೆ ಎಂದು ಪೋಷಕರು ನ್ಯಾಯಾಲಯದಲ್ಲಿ ಆರೋಪಿಸಿದ್ದರು. ತಮ್ಮದು ಸ್ವಂತ ಆಸ್ತಿಯಾಗಿರುವುದರಿಂದ ಮಕ್ಕಳನ್ನು ಮನೆಯಿಂದ ಹೊರಹಾಕುವಂತೆ 2007 ಮತ್ತು 2012ರಲ್ಲಿ ಸಾರ್ವಜನಿಕ ನೋಟಿಸ್‌ಗಳನ್ನು ಸಹ ನೀಡಿದ್ದರು.

ಆರೋಪಗಳನ್ನು ಅಲ್ಲಗಳೆದಿದ್ದ ಮಕ್ಕಳು ಮತ್ತು ಸೊಸೆಯಂದಿರು, ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ನಿವೇಶನ ಖರೀದಿ ಮತ್ತು ನಿರ್ಮಾಣದಲ್ಲಿ ತಮ್ಮದೂ ಖರ್ಚಿನ ಪಾಲು ಇದೆ. ಹೀಗಾಗಿ ತಾವೂ ಅದರ ಸಹ ಮಾಲೀಕರು ಎಂದು ಅವರು ವಾದಿಸಿದ್ದರು. ಆದರೆ, ವಿಚಾರಣಾ ನ್ಯಾಯಾಲಯ ಪೋಷಕರ ಪರವಾಗಿ ತೀರ್ಪು ನೀಡಿತ್ತು. ಇದನ್ನು ಒಬ್ಬ ಮಗ ಮತ್ತು ಆತನ ಪತ್ನಿ  ಪ್ರಶ್ನಿಸಿದ್ದರು.

ತಾವು ಮನೆಯ ಸಹ ಮಾಲೀಕರು ಎಂಬುದನ್ನು ಸಾಬೀತುಪಡಿಸಲು ಅವರಿಬ್ಬರೂ ವಿಫಲರಾಗಿದ್ದರು. ಅಲ್ಲದೆ, ಪೋಷಕರು ಅದು ತಮ್ಮದೇ ಆಸ್ತಿ ಎನ್ನುವುದಕ್ಕೆ ಅಗತ್ಯ ಪುರಾವೆಗಳನ್ನು ಒದಗಿಸಿದ್ದರು. ಇದರಿಂದ ನ್ಯಾಯಮೂರ್ತಿ ಪ್ರತಿಭಾ ರಾಣಿ ಅವರು ಪೋಷಕರ ಪರ ತೀರ್ಪು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT