ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಬಲ್ಯವೇ ಶಕ್ತಿಯಾದಾಗ...

Last Updated 30 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಸಚಿನ್ ಶಿಂಧೆ
ಸುಮಾರು 25 ವರ್ಷಗಳ ಹಿಂದಿನ ಘಟನೆ. ಸಚಿನ್ ಶಿಂಧೆ, ಆಗ ಖಾಸಗಿ ಕಾಲೇಜಿನಲ್ಲಿ ಐಟಿಐ ವಿದ್ಯಾಭ್ಯಾಸ ಮಾಡುತ್ತಿದ್ದರು. ಸಹೋದರಿಗೆ ಬಸ್ ಟಿಕೆಟ್ ಕೊಡಿಸಿ ಶಿಂಧೆ ಕಾಲ್ನಡಿಗೆಯಲ್ಲೇ ಸುಮಾರು 8 ಕಿ.ಮೀ ನಡೆದು ಕಾಲೇಜಿಗೆ ಹೋಗುತ್ತಿದ್ದರು. ಬಾಲ್ಯದಿಂದಲೇ ಕಷ್ಟಗಳನ್ನು ಅನುಭವಿಸಿ ಹಂತ ಹಂತವಾಗಿ ಮೇಲೆ ಬಂದ ಶಿಂಧೆ, ಇಂದು ವಾರ್ಷಿಕ 20 ಕೋಟಿ ರೂಪಾಯಿ ವಹಿವಾಟಿನ ಉದ್ದಿಮೆ ನಡೆಸುತ್ತಿದ್ದಾರೆ. ಅವರ ಸಾಧನೆಯ ಮಜಲುಗಳ ಕಿರು ಪರಿಚಯ ಇಲ್ಲಿದೆ.

ಸಚಿನ್ ಶಿಂಧೆ ಮೂಲತಃ ಮುಂಬೈ ನಿವಾಸಿ. ತಂದೆ ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಅಪ್ಪನ ಸಂಪಾದನೆ ಕುಟುಂಬ ನಿರ್ವಹಣೆಗೆ ಸಾಲುತ್ತಿರಲಿಲ್ಲ.ಇದರ ಜೊತೆಗೆ ಇಬ್ಬರು ಮಕ್ಕಳ ವಿದ್ಯಾಭ್ಯಾಸ ಬೇರೆ. ಕಾಲೇಜು ಶುಲ್ಕ, ಬಸ್ ಚಾರ್ಜ್ ಹಾಗೂ ಇತರೆ ಖರ್ಚುಗಳಿಗೆ ಹಣವೇ ಸಾಲುತ್ತಿರಲಿಲ್ಲ. ಕಷ್ಟದಲ್ಲೇ ಐಟಿಐ ಪೂರ್ಣಗೊಳಿಸಿದ ಶಿಂಧೆಗೆ ಬಾಬಾ ಅಣುಸ್ಥಾವರ ಕೇಂದ್ರದಲ್ಲಿ ಕೆಲಸ ದೊರೆಯಿತು.

ಫ್ರಿಜ್‌, ಏ.ಸಿ, ದೊಡ್ಡ ದೊಡ್ಡ ಕೂಲಿಂಗ್ ಯಂತ್ರಗಳನ್ನು ದುರಸ್ಥಿ ಮಾಡುವ ಕೆಲಸ ಅದು. ಹೇಗೊ ಕೆಲಸ ಸಿಕ್ಕಿತು, ಬದುಕಿಗೂ ಒಂದು ದಾರಿಯಾಯಿತು ಎಂದು ಶಿಂಧೆ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದರು. ಅಲ್ಲಿ 15 ವರ್ಷ ಕೆಲಸ ಮಾಡಿ ಅಪಾರ ಅನುಭವ ಗಳಿಸಿದರು. ಈ ವೇಳೆ ಶಿಂಧೆ ಸಹೋದ್ಯೋಗಿಯೊಬ್ಬರು ನಿವೃತ್ತಿಯಾದರು. ಅವರಿಗೆ ಸಿಕ್ಕಿದ್ದು ಕೇವಲ 15 ಲಕ್ಷ ರೂಪಾಯಿ. ಈ ಸಂಗತಿ ಶಿಂಧೆಗೆ ಬೇಸರ ತರಿಸಿತ್ತು.

ಕೇವಲ 15-20 ಲಕ್ಷ ರೂಪಾಯಿ ಪಡೆಯಲು 60 ವರ್ಷದವರೆಗೂ ಕೆಲಸ ಮಾಡಬೇಕೇ ಎಂದು ತಮ್ಮನೇ ತಾವು ಪ್ರಶ್ನಿಸಿಕೊಂಡರು. ಬಾಲ್ಯದ ಕಷ್ಟಗಳನ್ನು ನೆನೆದರು.ಏನಾದರೂ ಸಾಧಿಸಬೇಕು, ನ್ಯಾಯಯುತವಾಗಿ ಹಣ ಸಂಪಾದಿಸಬೇಕು ಎಂದು ನಿಶ್ಚಯಿಸಿ, ಕೆಲಸಕ್ಕೆ ರಾಜೀನಾಮೆ ನೀಡಿದರು.

ಉಳಿಸಿದ ಅಲ್ಪ ಸ್ವಲ್ಪವನ್ನು ಹೂಡಿಕೆ ಮಾಡಿ ಫ್ರಿಜ್‌, ಏ.ಸಿ, ಕೂಲರ್‌ಗಳನ್ನು ರಿಪೇರಿ ಮಾಡುವ ‘ಸ್ಪ್ಯಾನ್ ಸ್ಪೆಕ್ಟ್ರಂ’ ಎಂಬ ಸಣ್ಣ ಉದ್ಯಮವನ್ನು ತೆರೆದರು.  ಆ ಉದ್ಯಮ ಶಿಂಧೆ ಅವರ ಕೈಹಿಡಿಯುವುದರ ಜೊತೆಗೆ ಅವರ ಭವಿಷ್ಯವನ್ನು ಉಜ್ವಲಗೊಳಿಸಿತು. ಮನಸ್ಸಿದ್ದರೆ ಮಾರ್ಗ ಎಂಬ ಮಾತಿಗೆ ಸಚಿನ್ ಶಿಂಧೆ ಉದಾಹರಣೆಯಾಗಿ ನಿಲ್ಲುತ್ತಾರೆ.  www.spanspectrum.com

***
ಅರ್ಬನ್ಸ್ ಟೀಮ್

ಬೆಂಗಳೂರು ಮೂಲದ ಮಹಿಳಾ ಉದ್ಯಮಿ ಪೂಜಾ ಅವರು ಯಶಸ್ವಿ ಉದ್ಯಮ ಕಟ್ಟಿದ ಕಥೆ ಇದು. ಮನೆಗಳಲ್ಲಿ ಎಂತಹದೇ ಕ್ರಿಮಿಕೀಟಗಳನ್ನು ಸಂಹಾರ ಮಾಡಬಹುದು, ಆದರೆ ತಿಗಣೆಗಳನ್ನು ನಾಶಪಡಿಸಲು ಮಾತ್ರ ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಾರೆ. ಅದಕ್ಕೆಂದೇ ಉದ್ಯಮಿ ಪೂಜಾ ಅವರು ತಿಗಣೆಗಳನ್ನು ನಾಶ ಮಾಡುವಂತಹ ಕೀಟ ನಾಶಕವನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ತಿಗಣೆಗಳು ಮಾತ್ರವಲ್ಲದೆ ಮನೆಯಲ್ಲಿರುವ ಎಲ್ಲ ರೀತಿಯ ಕ್ರಿಮಿಕೀಟಗಳು, ಹುಳ ಹುಪ್ಪಟೆಗಳು, ವಿಷ ಜಂತುಗಳನ್ನು ಕೊಲ್ಲುವಂಥ ಉತ್ಪನ್ನವನ್ನು ತಮ್ಮ ಅರ್ಬನ್ಸ್ ಎಂಬ ಕಂಪೆನಿಯಲ್ಲಿ ಉತ್ಪಾದಿಸುತ್ತಿದ್ದಾರೆ. ಪೂಜಾ ಕಳೆದೊಂದು ವರ್ಷದಿಂದ ಇಲ್ಲಿಯವರೆಗೂ ಈ ಉದ್ಯಮದಲ್ಲಿ 30 ಲಕ್ಷ ರೂಪಾಯಿಗಳಿಗೂ ಹೆಚ್ಚು ವಹಿವಾಟು ನಡೆಸಿದ್ದಾರೆ.

ಈಗಾಗಲೇ ಪೂಜಾ ಅವರು ವಸ್ತ್ರ ವಿನ್ಯಾಸದ ಉದ್ಯಮವನ್ನು ನಡೆಸುತ್ತಿದ್ದು, ಅದರ ಜತೆಯಲ್ಲೇ ಈ ಅರ್ಬನ್ಸ್ ಉದ್ಯಮ ನಡೆಸುತ್ತಿದ್ದಾರೆ. ಕೃಷಿ ವಿಜ್ಞಾನಿಗಳು ನೈಸರ್ಗಿಕ ಗಿಡ ಮೂಲಿಕೆಗಳನ್ನು ಬಳಸಿ ಕೀಟನಾಶಕಗಳನ್ನು ಉತ್ಪಾದನೆ ಮಾಡುತ್ತಾರೆ. ಪುಡಿ, ದ್ರಾವಣ ಮತ್ತು ಸಿಂಪಡನೆ ಮಾದರಿಯಲ್ಲಿ ಕೀಟನಾಶಕಗಳನ್ನು ತಯಾರಿಸುವುದು ವಿಶೇಷ.

ಈ ಅರ್ಬನ್ಸ್ ಕಂಪೆನಿ ಆರಂಭಿಸುವ ಮುನ್ನ ಸ್ವತಃ ಪೂಜಾ ಅವರೇ ತಿಗಣೆಗಳ ಸಮಸ್ಯೆಯನ್ನು ಎದುರಿಸಿದ್ದರು. ಕೆಲವರು ತಿಗಣೆಗಳಿಗೆ ಪರಿಹಾರವೇ ಇಲ್ಲ ಎಂದು ಫ್ಲ್ಯಾಟ್ ಖಾಲಿ ಮಾಡುವಂತೆ ಸಲಹೆ ನೀಡಿದ್ದರಂತೆ. ‘ಸಮಸ್ಯೆಯನ್ನೇ ಶಕ್ತಿಯನ್ನಾಗಿ ಮಾರ್ಪಡಿಸಿಕೊಂಡು ಈ ಉದ್ಯಮ ಆರಂಭಿಸಲಾಯಿತು’ ಎಂದು ಪೂಜಾ ಹೇಳುತ್ತಾರೆ. ಅರ್ಬನ್ಸ್ ಕಂಪೆನಿ ಈಗಿನ್ನೂ ಅಂಬೆಗಾಲಿಡುತ್ತಿದ್ದು, ಮಾರುಕಟ್ಟೆಯಲ್ಲಿ   ಅಸ್ತಿತ್ವ ಉಳಿಸಿಕೊಳ್ಳುವುದು ನಮ್ಮ ಗುರಿಯಾಗಿದೆ ಎನ್ನುತ್ತಾರೆ ಪೂಜಾ.

ರಾಸಾಯನಿಕಗಳನ್ನು ಬಳಸದೆ ಗಿಡಮೂಲಿಕೆಗಳಿಂದಲೇ ಉತ್ಪನ್ನಗಳನ್ನು ತಯಾರಿಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಹಾಗೂ ಎಲ್ಲ ರೀತಿಯ ಕ್ರಿಮಿಗಳು ಸಂಪೂರ್ಣವಾಗಿ ನಾಶವಾಗುತ್ತವೆ ಎಂದು ಪೂಜಾ ಹೇಳುತ್ತಾರೆ.
www.urbanns.com

***
ಕೌಸಲ್ಯಾ  ನಂದಕುಮಾರ್

ಹೆಚ್ಚು ಬಂಡವಾಳ ಬಯಸದ ಲಾಜಿಸ್ಟಿಕ್ ಉದ್ಯಮ ಇತ್ತೀಚಿನ ದಿನಗಳಲ್ಲಿ ಯುವಕರ ಆಕರ್ಷಣೀಯ ಸ್ಟಾರ್ಟ್ಅಪ್ ಕ್ಷೇತ್ರವಾಗಿದೆ. ಹೆಚ್ಚು ಪರಿಶ್ರಮ ಇಲ್ಲದೆ, ಕಡಿಮೆ ಬಂಡವಾಳದಲ್ಲೇ ಸ್ಥಳೀಯವಾಗಿ ಸರಬರಾಜು ಉದ್ಯಮವನ್ನು ಲಾಭದಾಯಕವಾಗಿ ಬೆಳೆಸಬಹುದು ಎನ್ನುತ್ತಾರೆ ಸ್ಮಾರ್ಟ್ಸ್ ಶಿಫ್ಟ್ಸ್ ಕಂಪೆನಿಯ ಸಿಇಒ ಕೌಸಲ್ಯಾ ನಂದಕುಮಾರ್.

ಕೌಸಲ್ಯಾ ನಂದಕುಮಾರ್ ಮೂಲತಃ ಹೈದರಾಬಾದ್‌ನವರು. ಓದಿದ್ದು ವಾಣಿಜ್ಯ ಪದವಿ. ಯಾವುದಾದರೊಂದು ಕಾರ್ಪೊರೇಟ್‌ ಕಂಪೆನಿಯಲ್ಲಿ ಮಗಳು ಕೆಲಸ ಮಾಡಿ ತನ್ನ ಕಾಲ ಮೇಲೆ ನಿಂತುಕೊಳ್ಳಲಿ ಎಂದು ಪೋಷಕರು ಬಯಸಿದ್ದರು. ಕೌಸಲ್ಯಾ, ಹಲವರಿಗೆ ಉದ್ಯೋಗ ಕೊಡುವಂತಹ ಕಂಪೆನಿಯನ್ನು ಆರಂಭಿಸಿ ಸೈ ಎನಿಸಿಕೊಂಡರು!

ಪದವಿ ಬಳಿಕ ಕೌಸಲ್ಯಾ, ಒಂದು ವರ್ಷ ಗೆಳೆಯರ ಜತೆಯಲ್ಲಿ ಸರಕು ಸೇವೆಯ ಲಾಜಿಸ್ಟಿಕ್ ಉದ್ಯಮದ ಬಗ್ಗೆ ಸಮಗ್ರ ಅಧ್ಯಯನ ಮಾಡಿದರು. ಗ್ರಾಹಕರ ಆಕರ್ಷಣೆ ಮತ್ತು ಮಾರುಕಟ್ಟೆಯ ತಂತ್ರಗಳನ್ನು ಅರಿತು ಕಡಿಮೆ ಬಂಡವಾಳದಲ್ಲಿ ಅಂತರ ನಗರಗಳಿಗೆ ಸೇವೆ ಕಲ್ಪಿಸುವ ‘ಸ್ಮಾರ್ಟ್ಸ್ ಶಿಫ್ಟ್ಸ್’ ಎಂಬ ಲಾಜಿಸ್ಟಿಕ್ ಕಂಪೆನಿಯನ್ನು 2015ರ ಅಕ್ಟೋಬರ್ ತಿಂಗಳಲ್ಲಿ ತೆರೆದರು. ಇದು ಹೈದರಾಬಾದ್ ಮತ್ತು ಮುಂಬೈ ನಗರಗಳ ಮಧ್ಯೆ ಸೇವೆ ನೀಡುವ ಸಂಸ್ಥೆಯಾಗಿದೆ. ಕಳೆದೊಂದು ವರ್ಷದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡಿರುವುದಾಗಿ ಕೌಸಲ್ಯಾ ಹೇಳುತ್ತಾರೆ.

ಗ್ರಾಹಕರ ಪಾರ್ಸಲ್ ಸರಕುಗಳನ್ನು ಸಕಾಲದಲ್ಲಿ ತಲುಪಿಸುವುದು ನಮ್ಮ ಮೊದಲ ಆದ್ಯತೆ. ಅವರ ಸರಕುಗಳು ಮುಕ್ಕಾಗದಂತೆ ನೋಡಿಕೊಳ್ಳುವುದು  ಕಂಪೆನಿಯ ಎರಡನೇ ಆದ್ಯತೆಯಾಗಿದೆ. ಒಂದು ವೇಳೆ ಗ್ರಾಹಕರ ಸರಕನ್ನು ತಲುಪಿಸುವಾಗ ಏನಾದರೂ ಹಾನಿ ಆದರೆ ಆ ಸರಕಿನ ಪೂರ್ಣ ಬೆಲೆಯನ್ನು ಕಂಪೆನಿಯೇ ಭರಿಸುತ್ತದೆ ಎಂದು ವಿವರಿಸುತ್ತಾರೆ ಅವರು .

ಕಂಪೆನಿಯ ವಿಶ್ವಾಸಾರ್ಹತೆ ಫಲದಿಂದಾಗಿ, ದಿನದಿಂದ ದಿನಕ್ಕೆ ಸೇವೆಯನ್ನು ಪಡೆಯುತ್ತಿರುವ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಉದ್ಯಮವನ್ನು ದೇಶದ ಎಲ್ಲ ರಾಜಧಾನಿ ಕೇಂದ್ರಗಳು ಮತ್ತು ಎರಡನೇ ವರ್ಗದ ನಗರಗಳಿಗೂ ವಿಸ್ತರಿಸುವ ಯೋಜನೆಯನ್ನು ರೂಪಿಸಲಾಗಿದ್ದು ಅದಕ್ಕಾಗಿ ಬಂಡವಾಳ ಕ್ರೋಢೀಕರಿಸುವ ಕೆಲಸ ಮಾಡಲಾಗುತ್ತಿದೆ ಎನ್ನುತ್ತಾರೆಕೌಸಲ್ಯಾ. ಆತ್ಮವಿಶ್ವಾಸವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಕೌಸಲ್ಯಾ ಸಾಕ್ಷಿಯಾಗಿದ್ದಾರೆ.
https://smartshift.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT