ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಕೌಟ್‌ನಲ್ಲಿ ಉತ್ತಮ ಪ್ರದರ್ಶನ

ಪದೇ ಪದೇ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ರಾಬಿನ್‌ ಉತ್ತಪ್ಪ
Last Updated 1 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಪಟಿಯಾಲ: ‘ತಂಡದ ಹಿರಿಯ ಆಟಗಾರನಾಗಿ ಕೆಲವು ಪಂದ್ಯಗಳಲ್ಲಿ ನನ್ನ ಜವಾಬ್ದಾರಿಗೆ ತಕ್ಕಂತೆ ಆಡಲು ಆಗಿಲ್ಲ. ಲೀಗ್‌ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದೇವೆ. ನಾಕೌಟ್‌ನಲ್ಲಿ ಚೆನ್ನಾಗಿ ಆಡಿ ನಮ್ಮ ತಂಡಕ್ಕೆ ಗೆಲುವು ತಂದುಕೊಡುವ ಆಸೆ ನನ್ನದು...’
ರನ್‌ ಗಳಿಸಲು ಪದೇ ಪದೇ ಪರದಾಡುತ್ತಿರುವ ಕರ್ನಾಟಕ ತಂಡದ ಹಿರಿಯ ಆಟಗಾರ ರಾಬಿನ್‌ ಉತ್ತಪ್ಪ ಅವರ ಭರವಸೆಯ ನುಡಿಗಳಿವು.

ಬಲಗೈ ಬ್ಯಾಟ್ಸ್‌ಮನ್‌ ರಾಬಿನ್‌ 14 ವರ್ಷಗ ಳಿಂದ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿ ದ್ದಾರೆ. ತಂಡಕ್ಕೆ ಹಲವಾರು ಸ್ಮರಣೀಯ ಗೆಲುವುಗಳನ್ನೂ ತಂದುಕೊಟ್ಟಿದ್ದಾರೆ. ಆದರೆ ಈ ಬಾರಿ ಅವರು ಅಸ್ಸಾಂ ತಂಡದ ಎದುರು ಹೊಡೆದ ಒಂದು ಶತಕ ಹೊರತುಪಡಿಸಿದರೆ ಉಳಿದ ಪಂದ್ಯಗಳಲ್ಲಿ ಆಡಿದ್ದು ಅಷ್ಟಕ್ಕಷ್ಟೇ.

ಸೌರಾಷ್ಟ್ರ ವಿರುದ್ಧದ ಪಂದ್ಯವೂ ಸೇರಿದಂತೆ ಆಡಿದ ಏಳು ಪಂದ್ಯಗಳಿಂದ ಒಟ್ಟು 328 ರನ್‌ ಹೊಡೆದಿದ್ದಾರೆ. ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ರಾಬಿನ್ ತಮ್ಮ ಬ್ಯಾಟಿಂಗ್‌ ವೈಫಲ್ಯವನ್ನು ಒಪ್ಪಿಕೊಂಡಿದ್ದು, ನಾಕೌಟ್‌ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸ ವ್ಯಕ್ತಪಡಿದ್ದಾರೆ. ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.

* ಪ್ರಮುಖ ಪಂದ್ಯಗಳಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮೇಲಿಂದ ಮೇಲೆ ವೈಫಲ್ಯ ಕಾಣುತ್ತಿ ದ್ದಾರೆ. ಇದಕ್ಕೆ ಏನು ಕಾರಣ?
ಆರಂಭದ ಐದೂ ಪಂದ್ಯಗಳಲ್ಲಿ ನಮ್ಮ ತಂಡದ ಬ್ಯಾಟಿಂಗ್ ಚೆನ್ನಾಗಿಯೇ ಇತ್ತು. ಇನ್ನುಳಿದ ಪಂದ್ಯಗಳಲ್ಲಿ ಏರು ಪೇರಾಗಿದೆ ನಿಜ. ಕೆಲವು ಸಲ ಹೀಗಾಗು ವುದು ಸಹಜ. ಈ ವೈಫಲ್ಯದಿಂದ ನಮಗೆ ಹಿನ್ನಡೆಯಾಗಿದೆ ಎಂದು ಭಾವಿಸಿಲ್ಲ. ಏಕೆಂದರೆ ನಾವು ಈಗಾಗಲೇ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದೇವೆ. ನಾಕೌಟ್‌ ಹಂತದಲ್ಲಿ ಚೆನ್ನಾಗಿ ಆಡುತ್ತೇವೆ.

* ಒಡಿಶಾ ವಿರುದ್ಧದ ಪಂದ್ಯದಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳೆಲ್ಲರೂ ವಿಫಲರಾದರಲ್ಲ. ಇದರ ಬಗ್ಗೆ ಹೇಳಿ?
ಲೀಗ್‌ ಹಂತದ ಕೊನೆಯ ಪಂದ್ಯ ಗಳು ನಮಗೆ ಬಹಳ ಮುಖ್ಯ. ಅಗ್ರಸ್ಥಾನ ಉಳಿಸಿಕೊಂಡೇ ನಾಕೌಟ್‌ ಪ್ರವೇಶಿಸುವ ಆಸೆ ಹೊಂದಿದ್ದೇವೆ. ಒಡಿಶಾ ವಿರುದ್ಧ ಹಿರಿಯ ಆಟಗಾರನಾಗಿ ನಾನೇ ಜವಾಬ್ದಾರಿ ತಗೆದುಕೊಳ್ಳಬೇಕಿತ್ತು. ಆದರೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಆಸರೆಯಾದರು. ಆ ಪಂದ್ಯದಲ್ಲಿ ಒಡಿಶಾ ಗೆಲುವಿಗೆ ಉತ್ತಮ ಅವಕಾಶವಿದ್ದರೂ ಅವರು ಇದನ್ನು ಬಳಸಿಕೊಳ್ಳಲಿಲ್ಲ. ಒಂದು ವೇಳೆ ಅವರ ಸ್ಥಾನದಲ್ಲಿ ನಮ್ಮ ತಂಡವಿದ್ದಿದ್ದರೆ ಗೆಲುವಿಗಾಗಿಯೇ ಆಡುತ್ತಿದ್ದೆವು. ಆ ರೀತಿಯ ಸಕಾರಾತ್ಮಕ ಮನೋಭಾವ ನಮ್ಮ ತಂಡದ ಪ್ರತಿಯೊಬ್ಬ ಆಟಗಾರನಲ್ಲಿಯೂ ಇದೆ. ಆರಂಭಿಕ ಕ್ರಮಾಂಕದ ಬ್ಯಾಟಿಂಗ್ ಸಾಮರ್ಥ್ಯ ತೋರಿಸಲು ಮುಂದೆ ಇನ್ನು ಪಂದ್ಯಗಳಿವೆ.

*ತಂಡದ ಹಿರಿಯ ಆಟಗಾರನಾಗಿ ನೀವು ರನ್‌ ಗಳಿಸಲು ಪರದಾಡುತ್ತಿದ್ದೀರಲ್ಲಾ ಏಕೆ?
ಉತ್ತಮ ಅವಕಾಶ ಸಿಕ್ಕಾಗಲೆಲ್ಲಾ ಚೆನ್ನಾಗಿಯೇ ಆಡಿದ್ದೇನೆ. ಬ್ಯಾಟ್ಸ್‌ಮನ್‌ಗಳಂತೆಯೇ ಬೌಲರ್‌ಗಳೂ ಚೆನ್ನಾಗಿ ಬೌಲ್‌ ಮಾಡಿದಾಗ  ಔಟಾಗಿದ್ದೇನೆ. ಆದರೆ ಯಾವ ಪಂದ್ಯಗಳಲ್ಲಿಯೂ ಅನಗತ್ಯವಾಗಿ ವಿಕೆಟ್‌ ಕೈಚೆಲ್ಲಿಲ್ಲ. ಮಹತ್ವದ ಪಂದ್ಯಗಳಲ್ಲಿ ರಾಜ್ಯ ತಂಡಕ್ಕೆ ಗೆಲುವು ತಂದುಕೊಡಬೇಕು ಎನ್ನುವ ಆಸೆಯಿದೆ. 

* ಅಸ್ಸಾಂ ವಿರುದ್ಧದ ಪಂದ್ಯಕ್ಕೆ ಎರಡು ದಿನ ಮೊದಲು ನಿಮ್ಮ ಕೋಚ್‌ ಪ್ರವೀಣ್‌ ಆಮ್ರೆ ಬಳಿ ಪಡೆದ ತರಬೇತಿ ಯಿಂದ ಏನಾದರೂ ಪ್ರಯೋಜನ ವಾಗಿದೆಯೇ?
ಖಂಡಿತವಾಗಿಯೂ ಆಗಿದೆ. ಅವರ ಬಳಿ ತರಬೇತಿ ಪಡೆದಿದ್ದರಿಂದ ಮೂರ್ನಾಲ್ಕು ವರ್ಷಗಳಿಂದ ಹೆಚ್ಚು ರನ್‌ಗಳನ್ನು ಗಳಿಸಲು ಸಾಧ್ಯವಾಗುತ್ತಿದೆ. ಎಲ್ಲಿ ತಪ್ಪು ಮಾಡುತ್ತಿದ್ದೇನೆ ಎನ್ನುವುದನ್ನು ಅವರು ತೋರಿಸಿ ಕೊಡುತ್ತಿದ್ದಾರೆ. ಅದನ್ನು ತಿದ್ದುಕೊಳ್ಳಲು ಏನು ಮಾಡಬೇಕು ಎನ್ನುವುದನ್ನೂ ಹೇಳಿಕೊಡುತ್ತಾರೆ. ಬ್ಯಾಟಿಂಗ್‌ನಲ್ಲಿ ತೊಂದರೆ ಎದುರಾಗಲೆಲ್ಲಾ ಅವರ ಮೊರೆ ಹೋಗುತ್ತೇನೆ.

* ನೀವು ವೇಗವಾಗಿ ರನ್‌ ಗಳಿಸುವ ಆಟಕ್ಕೆ ಹೆಸರುವಾಸಿ. ಆದರೆ ಇತ್ತೀಚಿಗೆ ಬಹಳ ನಿಧಾನವಾಗಿ ರನ್‌ ಗಳಿಸುತ್ತಿದ್ದೀರಲ್ಲಾ. ಇದರ ಹಿಂದೆ ಏನಾದರೂ ಯೋಜನೆಯಿದೆಯೇ?
ಪ್ರತಿದಿನವೂ ಹೊಸ ತಂತ್ರಗಳನ್ನು ಕಲಿಯುತ್ತಲೇ ಇರುತ್ತೇನೆ. ಅವುಗಳಿಗೆ ಹೊಂದಿಕೊಳ್ಳಲು ಕೆಲ ಸಮಯ ಬೇಕಾಗುತ್ತದೆ. ಆದ್ದರಿಂದ ನಿಧಾನವಾಗಿ ಆಡುತ್ತೇನೆ. ಆ ತಂತ್ರದಲ್ಲಿ ಪರಿಣತಿ ಸಾಧಿಸಿದ ಬಳಿಕ ಎಂದಿನಂತೆಯೇ ಸಹಜ ಆಟಕ್ಕೆ ಒತ್ತು ಕೊಡುತ್ತೇನೆ. ಈಗಷ್ಟೇ ಹೊಸ ಬ್ಯಾಟಿಂಗ್‌ ತಂತ್ರ ಕಲಿತಿದ್ದೇನೆ. ಅದನ್ನು ರೂಢಿಸಿಕೊಳ್ಳಲು ಸಮಯ ಅಗತ್ಯ.

*ನಾಲ್ಕು ವರ್ಷಗಳ ಬಳಿಕ ಕೆ. ಗೌತಮ್ ತಂಡಕ್ಕೆ ಮರಳಿದ್ದಾರೆ. ತಂಡದಲ್ಲಿ ಅವರ ಸ್ಥಾನ ಯಾಕೆ ಮುಖ್ಯ?
ಮೊದಲು ವಿನಯ್‌, ಮಿಥುನ್‌, ಅರವಿಂದ್‌, ಸ್ಟುವರ್ಟ್‌ ಅವರ ಮೇಲೆ ಹೆಚ್ಚು ಜವಾಬ್ದಾರಿಯಿತ್ತು. ಸ್ಪಿನ್‌ ವಿಭಾಗದಲ್ಲಿ ಶ್ರೇಯಸ್‌ ಜೊತೆ ಗೌತಮ್‌ ಕೂಡ ಬಂದಿರುವುದರಿಂದ ತಂಡದ ಹಿರಿಯ ಆಟಗಾರರಿಗೆ ಅಲ್ಪ ವಿಶ್ರಾಂತಿ ಸಿಕ್ಕಂತಾಗಿದೆ. ಗೌತಮ್‌ ಮೊದಲಿಗಿಂತಲೂ ಸಾಕಷ್ಟು ಬದಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT