ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿರಿಕ್ ಪಾರ್ಟಿ’ಯಲ್ಲಿ ಸಾಚಾ ಹುಡುಗಿ

Last Updated 1 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕೂರ್ಗ್‌ನ ಈ ಸುಂದರಿಗೆ ಬಾಲ್ಯದಿಂದಲೂ ಸ್ಲ್ಯಾಮ್‌ಬುಕ್‌ ಬರೆಸುವ ಹುಚ್ಚು. ಒಮ್ಮೆ ಅಮ್ಮನ ಕೈಗೆ ಸ್ಲ್ಯಾಮ್‌ಬುಕ್‌ ಕೊಟ್ಟಾಗ ‘ಅಚ್ಚುಮೆಚ್ಚಿನ ನಟಿ’ ಜಾಗದಲ್ಲಿ ಬರೆದಿದ್ದು ‘ರಶ್ಮಿಕಾ’ ಎಂದು. ಮಗಳು ನಟಿಯಾಗುತ್ತಾಳೆ ಎಂಬ ಊಹೆ ಬಹುಶಃ ಅವರಲ್ಲಿ  ಇರಲಿಲ್ಲವೇನೋ. ಆದರೆ, ಆ ಭವಿಷ್ಯ ಹತ್ತು ವರ್ಷಗಳ ಬಳಿಕ ನಿಜವಾಗಿದ್ದಂತೂ ಹೌದು.

‘ಕಿರಿಕ್ ಪಾರ್ಟಿ’ ಚಿತ್ರತಂಡ ‘ಬೆಳಗೆದ್ದು ಯಾರ ಮುಖವಾ ನಾ ನೋಡಿದೆ’ ಎಂಬ ಹಾಡನ್ನು ಯೂಟ್ಯೂಬ್‌ನಲ್ಲಿ ಹರಿಬಿಟ್ಟಾಗ ಅದರ ಸಂಗೀತದಷ್ಟೇ ಗಮನ ಸೆಳೆದದ್ದು, ದಪ್ಪ ಚೌಕಟ್ಟಿನ ಕನ್ನಡಕ ತೊಟ್ಟ ಚೆಲುವೆ ರಶ್ಮಿಕಾ ಮಂದಣ್ಣ. ರಶ್ಮಿಕಾ ಅವರ ಮುಖಚರ್ಯೆಯನ್ನು ಅನೇಕರು ‘ಪ್ರೇಮಂ’ ಚಿತ್ರದ ‘ಮಲರ್‌’ ಖ್ಯಾತಿಯ ಮಲಯಾಳಂ ನಟಿ ಸಾಯಿ ಪಲ್ಲವಿ ಅವರಿಗೆ ಹೋಲಿಸಿದ್ದಾರೆ. ಅದನ್ನು ಅವರು ತಮಗೆ ದೊರೆತ ಗೌರವ ಎಂದೇ ಪರಿಗಣಿಸಿದ್ದಾರೆ.

ನಿನ್ನೆ ಶೂಟಿಂಗ್‌, ಇವತ್ತು ಐದನೇ ಸೆಮಿಸ್ಟರ್‌ ಪರೀಕ್ಷೆ. ಸಂಜೆ ಒಂದು ಸಂದರ್ಶನ. ಮತ್ತೆ ಶೂಟಿಂಗ್‌, ಪರೀಕ್ಷೆ... ಮಾತಿಗೆ ಶುರುಹಚ್ಚಿಕೊಂಡ ರಶ್ಮಿಕಾ ತಮ್ಮ ಸದ್ಯದ ವೇಳಾಪಟ್ಟಿ ತೆರೆದಿಟ್ಟರು.

ಸಿನಿಮಾ ಹಿನ್ನೆಲೆ ಇಲ್ಲದ ರಶ್ಮಿಕಾ, ರಕ್ಷಿತ್‌ ಶೆಟ್ಟಿ ನಾಯಕರಾಗಿರುವ ‘ಕಿರಿಕ್‌ ಪಾರ್ಟಿ’ ಚಿತ್ರಕ್ಕೆ ಆಯ್ಕೆಯಾಗಿದ್ದು ಆಕಸ್ಮಿಕ. ಸಣ್ಣಪುಟ್ಟ ಮಾಡೆಲಿಂಗ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರ ಭಾವಚಿತ್ರವನ್ನು ಪತ್ರಿಕೆಯೊಂದರಲ್ಲಿ ನೋಡಿದ ನಿರ್ದೇಶಕ ರಿಷಭ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ, ‘ತಮ್ಮ ಸಿನಿಮಾಕ್ಕೆ ಈಕೆಯೇ ನಾಯಕಿ’ ಎಂದು ನಿರ್ಧರಿಸಿದರು.

ಹೇಳದೆ ಕೇಳದೆ ಒಲಿದು ಬಂದ ಅದೃಷ್ಟವನ್ನು ಬಿಡಲು ಸಾಧ್ಯವೇ? ನೇರವಾಗಿ ಕ್ಯಾಮೆರಾ ಮುಂದೆಯೇ ನಿಂತರು ರಶ್ಮಿಕಾ. ಕ್ಯಾಮೆರಾ ಎದುರಿಸುವುದು ಹೇಗೆ ಎಂಬುದನ್ನು ರಿಷಭ್‌ ಹೇಳಿಕೊಟ್ಟರು. ನಟನೆಯ ಅನುಭವ ಇಲ್ಲ. ತರಬೇತಿಯನ್ನೂ ಪಡೆದಿರಲಿಲ್ಲ. ಆದರೂ ಅವರಿಗೆ ಅಭಿನಯ ಕಷ್ಟವಾಗಲಿಲ್ಲ.

‘ತಾಲೀಮು ಮಾಡಿದರೆ ಅದನ್ನೇ ಪುನರಾವರ್ತಿಸಬೇಕು ಎಂಬ ಎಚ್ಚರಿಕೆ ಕಾಡುತ್ತಿರುತ್ತದೆ. ಆದರೆ ಒಂದೇ ಬಾರಿಗೆ ಕ್ಯಾಮೆರಾ ಎದುರು ಅಭಿನಯಿಸಿದರೆ ಸಲೀಸಾಗಿ ಭಾವನೆಗಳು ಬರುತ್ತವೆ. ನಟನೆ ಹೀಗೆ ಸಹಜ ಸ್ವಾಭಾವಿಕವಾಗಿ ಮೂಡಿದರೇ ಚೆಂದ’ ಎನ್ನುವುದು ಅವರ ಅಭಿಪ್ರಾಯ.

‘ಕಿರಿಕ್ ಪಾರ್ಟಿ’ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತರಲೆ, ತುಂಟತನ, ಬದುಕಿನ ಚಿತ್ರಣಗಳನ್ನು ನೀಡುವ ಸಿನಿಮಾ. ಎಂಜಿನಿಯರಿಂಗ್ ವಿದ್ಯಾರ್ಥಿನಿ ಅಲ್ಲದಿದ್ದರೂ, ಅವರಂತೆಯೇ ತುಂಟತನದ, ತರಗತಿಗೆ ಬಂಕ್‌ ಹೊಡೆದು ಸಿನಿಮಾಕ್ಕೆ ತೆರಳುವ ತುಂಟಾಟದ ಸ್ವಭಾವ ರಶ್ಮಿಕಾ ಅವರಲ್ಲಿಯೂ ಇದೆ. ಆದರೆ ಸಿನಿಮಾದಲ್ಲಿ ಅವರು ಅದಕ್ಕೆ ತದ್ವಿರುದ್ಧ. ಮೊದಲನೇ ಬೆಂಚಿನ, ಅತಿ ಗಾಂಭೀರ್ಯ, ಓದಿನಲ್ಲಿ ಮೊದಲಿರುವ ವಿದ್ಯಾರ್ಥಿನಿ ಅವರು.

ತನ್ನ ಸುತ್ತಮುತ್ತಲೂ ಇರುವ ಜನರೆಲ್ಲರೂ ನಗು ನಗುತ್ತಾ ಇರಬೇಕು. ತಾನು ಅವರನ್ನು ನಗಿಸುತ್ತಿರಬೇಕು ಎಂಬ ಬಾಲ್ಯದ ಆಸೆ ರಶ್ಮಿಕಾ ಅವರದು. ಈ ಸಿನಿಮಾ ಮೂಲಕ ಇನ್ನೊಂದು ಬಗೆಯಲ್ಲಿ ಅದು ಸಾಕಾರಗೊಳ್ಳುತ್ತಿದೆ ಎಂಬ ತೃಪ್ತಿ ಅವರಿಗಿದೆ. ಸೆಟ್‌ನಲ್ಲಿ ಬೆಳಿಗ್ಗೆ ನಗುನಗುತ್ತಾ ಇರುವ ರಿಷಭ್‌ ಮತ್ತು ರಕ್ಷಿತ್‌ ಶೆಟ್ಟಿ ಮಧ್ಯಾಹ್ನದ ವೇಳೆಗೆ ತೀರಾ ಗಂಭೀರರಾಗುತ್ತಿದ್ದರಂತೆ. ಆಗ ಅವರ ಮುಖದಲ್ಲಿ ನಗು ತರಿಸುವ ಪ್ರಯತ್ನಕ್ಕೆ ಕೈಹಾಕುತ್ತಿದ್ದರು. ಅದರಲ್ಲಿ ಯಶಸ್ವಿಯೂ ಆಗುತ್ತಿದ್ದರು.

ಶಿಸ್ತಿನ ಬದುಕು
ರಶ್ಮಿಕಾ 10ನೇ ತರಗತಿವರೆಗೂ ಓದಿದ್ದು ರೆಸಿಡೆನ್ಸಿ ಶಾಲೆಯಲ್ಲಿ. ಬೆಳಿಗ್ಗೆ 5.45ಗೆ ಎದ್ದು ಜಾಗಿಂಗ್‌, ತಿಂಡಿ, ತರಗತಿ, ಸಂಜೆಯಿಂದ ಓದು ಹೀಗೆ ಅತಿ ಶಿಸ್ತಿನ ಪರಿಸರದಲ್ಲಿ ಅವರ ಬೆಳೆದಿದ್ದು. ಬಳಿಕ ಮೈಸೂರಿನಲ್ಲಿ ಪಿಯುಸಿ ಮುಗಿಸಿದರು. ವಿಜ್ಞಾನ ಮತ್ತು ಗಣಿತ ಅವರ ಪಾಲಿಗೆ ಕಬ್ಬಿಣದ ಕಡಲೆ. ಹೀಗಾಗಿ ಅದರ ಸಹವಾಸವೇ ಬೇಡ ಎಂದು ಪದವಿಯಲ್ಲಿ ಆಯ್ದುಕೊಂಡಿದ್ದು ಪತ್ರಿಕೋದ್ಯಮ, ಮನಃಶಾಸ್ತ್ರ ಮತ್ತು ಇಂಗ್ಲಿಷ್‌ ಸಾಹಿತ್ಯವನ್ನು.

ಇವು ಕೂಡ ಅವರ ಆಸಕ್ತಿಯ ವಿಷಯಗಳೇನಲ್ಲ. ‘ಸೈಕಾಲಜಿ  ಓದಿ ಓದಿ ನಾವೇ ಸೈಕೋಗಳಾಗುವ ಅಪಾಯವಿದೆ’ ಎಂದು ಓದಿನ ಬಗ್ಗೆ ತಮಾಷೆ ಮಾಡುತ್ತಾರೆ.ನಟಿಯಾಗುವ ಅವಕಾಶ ಸಿಗದೆ ಹೋಗಿದ್ದರೆ, ಊರಿಗೆ ಮರಳಿ ಅಪ್ಪ ಅಮ್ಮನ ಬಿಜಿನೆಸ್‌ನಲ್ಲಿ ಸೇರಿಕೊಳ್ಳುವ ಉದ್ದೇಶ ಅವರದ್ದಾಗಿತ್ತು.

ಶಾಲೆ–ಹಾಸ್ಟೆಲ್‌ನಲ್ಲಿ ಇಂಗ್ಲಿಷ್‌ನಲ್ಲಿಯೇ ವ್ಯವಹರಿಸಬೇಕು ಎಂಬ ನಿಯಮ ಕಡ್ಡಾಯವಾಗಿದ್ದರಿಂದ ಅವರಿಗೆ ಕನ್ನಡ ಸುಲಲಿತವಾಗಿರಲಿಲ್ಲ. ಈಗ ಚಿತ್ರತಂಡದೊಂದಿಗೆ ಮಾತನಾಡಿ ಭಾಷೆ ಸುಧಾರಿಸಿದೆ. ಮೊಬೈಲ್‌ ಸಂದೇಶಗಳನ್ನೂ ಕನ್ನಡದಲ್ಲಿಯೇ ವಿನಿಮಯ ಮಾಡುತ್ತಾರೆ.

ರಶ್ಮಿಕಾ ಅವರು ಸಿನಿಮಾದ ನಾಯಕಿ ಎನ್ನುವುದು ಕಾಲೇಜಿನ ಬಹುತೇಕರಿಗೆ ಇನ್ನೂ ತಿಳಿದಿಲ್ಲ. ಚಿತ್ರೀಕರಣದ ಮುಗಿಸಿ ತರಗತಿ ಹೊಕ್ಕ ಬಳಿಕ ಅವರು ಎಲ್ಲರೊಳಗೆ ಒಂದಾಗುತ್ತಾರೆ. ‘ಹಾಡು ಬಿಡುಗಡೆಯಾದ ಬಳಿಕ ಜನರು ಗುರುತಿಸತೊಡಗಿದ್ದಾರೆ. ಇನ್ನು ಕೆಲವರಿಗೆ ಅದು ನಾನೇನಾ ಎಂಬ ಸಂದೇಹವೂ ಮೂಡುತ್ತದೆ. ಇದೊಂದು ಹೊಸ ಅನುಭವ’ ಎನ್ನುತ್ತಾರೆ ಅವರು.

ದರ್ಶನ್‌ ಸಿನಿಮಾನೂ ಸಿಕ್ಕಿತು...
‘‘ಕಿರಿಕ್ ಪಾರ್ಟಿ’ಗೆ ಆಯ್ಕೆಯಾದಾಗ ಮೊದಲು ನಂಬಲಿಲ್ಲ. ಈಗಲೂ ನಂಬಿಕೆ ಬರುತ್ತಿಲ್ಲ. ಅಷ್ಟರಲ್ಲೇ ದರ್ಶನ್‌ಗೆ ನಾಯಕಿಯಾಗುವ ಅದೃಷ್ಟ ಸಿಕ್ಕಿದೆ’’ ಎಂದು ಸಂಭ್ರಮಿಸುತ್ತಾರೆ ರಶ್ಮಿಕಾ. ಇದು ಅವರ ಪಾಲಿಗೆ ಕನಸು ನನಸಾದಗಳಿಗೆ.

ಭವಿಷ್ಯದ ಸಿನಿಮಾ ಆಯ್ಕೆಗಳ ಕುರಿತು ಅವರು ನಿರ್ಧರಿಸಿಲ್ಲ. ಆರಂಭದಲ್ಲಿ ದೊರೆತಿರುವ ಹರಿವಿನ ಜತೆಗೆ ತಾವೂ ಸಾಗುವ ಉದ್ದೇಶ ಅವರದು. ‘ಕೆಲವು ಸಿನಿಮಾಗಳು ಕಳೆದ ಬಳಿಕ ಮುಂದಿನ ದಾರಿ ಸ್ಪಷ್ಟತೆ ದೊರಕುತ್ತದೆ. ಮೊದಲ ಜನ ನನ್ನನ್ನು ಒಪ್ಪಿಕೊಳ್ಳುತ್ತಾರೆಯೆ, ಇಲ್ಲವೇ ಎಂಬುದನ್ನು ನೋಡಬೇಕಲ್ಲ’ ಎನ್ನುತ್ತಾರೆ ರಶ್ಮಿಕಾ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT