ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟಣ್ಣ: ಬೆಳ್ಳಿಮೋಡದ ಕಾಮನಬಿಲ್ಲು

ಅತಿಥಿ ಅಂಕಣ
Last Updated 1 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

-ಪ್ರಗತಿ ಅಶ್ವತ್ಥ ನಾರಾಯಣ

ಪುಟ್ಟಣ್ಣನವರನ್ನು ಮೊದಲ ಬಾರಿಗೆ ನಾನು ಭೇಟಿ ಮಾಡಿದ್ದು ಮದರಾಸಿನ ‘ವೀನಸ್ ಸ್ಟುಡಿಯೋ’ದಲ್ಲಿ. ಅವರ ‘ಬೆಳ್ಳಿಮೋಡ’ (1965) ಸಿನಿಮಾ ಸ್ಟಿಲ್ ಫೋಟೋಗ್ರಫಿಗೆಂದು ಹೋಗಿದ್ದೆ. ಮುಂದೆ ಅವರ ನಿರ್ದೇಶನದ ಹತ್ತು ಸಿನಿಮಾಗಳಿಗೆ (ಒಂಬತ್ತು ಕನ್ನಡ ಮತ್ತು ಒಂದು ಮಲಯಾಳಂ) ಕೆಲಸ ಮಾಡಿದೆ. ಅವರೊಂದಿಗೆ ಕೆಲಸ ಮಾಡುವ ಮೂಲಕ ನನಗೂ ಕಲಿಯಲು ಸಾಧ್ಯವಾಯ್ತು ಎಂದು ಹೇಳಬಹುದು.

ಪುಟ್ಟಣ್ಣನವರ ಸಿನಿಮಾಗಳ ಪ್ರತೀ ಸೀನ್‌ಗಳಿಗೂ ಒಂದು ಕಲಾತ್ಮಕ ಫ್ರೇಮ್ ಇರುತ್ತದೆ. ಅವರಿಗೆ ಕ್ಯಾಮರಾ ಆ್ಯಂಗಲ್‌ಗಳ ಬಗ್ಗೆ ಸ್ಪಷ್ಟ ಚಿತ್ರಣವಿತ್ತು. ಅಗ್ಗದ ಗಿಮಿಕ್‌ಗಳ ಬಗ್ಗೆ ಕಿಡಿಕಾರುತ್ತಿದ್ದ ಅವರು ಅನಗತ್ಯವಾಗಿ ತಂತ್ರಜ್ಞಾನದ ಬಳಕೆ ಮಾಡುತ್ತಿರಲಿಲ್ಲ. ಕತೆ, ದೃಶ್ಯಕ್ಕೆ ಅಗತ್ಯವಿದ್ದರಷ್ಟೇ ಕ್ಯಾಮೆರಾ ತಂತ್ರಗಾರಿಕೆ ಬಳಕೆಯಾಗುತ್ತಿತ್ತು. ‘ನಾಗರಹಾವು’ ಚಿತ್ರದ ಹಾಡನ್ನು ಸ್ಲೋ ಮೋಷನ್‌ನಲ್ಲಿ ಚಿತ್ರಿಸಿದ ಪುಟ್ಟಣ್ಣ ‘ಋಣಮುಕ್ತಳು’ ಚಿತ್ರಕ್ಕೆ ಝೂಮ್ ಬಳಕೆ ಮಾಡಿರಲೇ ಇಲ್ಲ.

ತಂತ್ರಜ್ಞರನ್ನು ಅವರು ಅತ್ಯಂತ ಸಮರ್ಥವಾಗಿ ದುಡಿಸಿಕೊಂಡರು. ಸಾಧಾರಣ ಎನಿಸಿಕೊಂಡ ತಂತ್ರಜ್ಞರು ಕೂಡ ಪುಟ್ಟಣ್ಣನವರ ಸಂಗದಲ್ಲಿ ಅತ್ಯುತ್ತಮ ಕೆಲಸಗಾರರಾಗಿ ಹೊರಹೊಮ್ಮಿದರು. ಚಿತ್ರೀಕರಣವಾದ ನಂತರ ನಾನು ಸ್ಟಿಲ್ಸ್ ತೆಗೆದುಕೊಳ್ಳುವಾಗಲೂ ಅವರು ಅಲ್ಲಿರುತ್ತಿದ್ದರು. ಮೂವೀ ಕ್ಯಾಮೆರಾ ಪೊಸಿಷನ್‌ನಲ್ಲೇ ಫೋಟೋ ತೆಗೆಯಬೇಕಾಗಿತ್ತು. ಆಗ ಪುಟ್ಟಣ್ಣ ನನಗೂ ಸೂಕ್ತ ನಿರ್ದೇಶನ ನೀಡುತ್ತಿದ್ದರು. ಲೈಟಿಂಗ್ ಬಗ್ಗೆ ಅವರಿಗೆ ಅತಿಯಾದ ಕಾಳಜಿ. ಟೇಕ್‌ಗೆ ಮುನ್ನ ಕಲಾವಿದರಿಗೆ ಲೈಟಿಂಗ್ ರಿಹರ್ಸಲ್ ಕೊಡುತ್ತಿದ್ದುದು ಕಡ್ಡಾಯವಾಗಿತ್ತು.

ನಿರ್ದೇಶಕ ಪುಟ್ಟಣ್ಣನವರೊಂದಿಗೆ ಕೆಲಸ ಮಾಡಿದ ನಮಗೆ ಈಗಿನ ತಂತ್ರಜ್ಞರ ಕಾರ್ಯವೈಖರಿ ನೋಡಿದಾಗ ಕೆಲವು ಬಾರಿ ಸೋಜಿಗವೆನಿಸುತ್ತದೆ. ತೆರೆಯ ಮೇಲಿನ ಚಲಿಸುವ ಚಿತ್ರಗಳಿಗೂ ಹಿನ್ನೆಲೆ ಸಂಗೀತಕ್ಕೂ ಸಂಬಂಧವಿಲ್ಲದಿದ್ದರೆ ಫ್ರೇಮ್‌ಗಳು ನೀರಸವೆನಿಸುತ್ತವೆ. ದೃಶ್ಯ ಮಾಧ್ಯಮವನ್ನು ದುಡಿಸಿಕೊಳ್ಳುವ ಕಲೆ ಗೊತ್ತಿರದಿದ್ದರೆ ಜನರನ್ನು ತಲುಪಲು ಸಾಧ್ಯವೇ ಇಲ್ಲ. ಪುಟ್ಟಣ್ಣನವರಿಗೆ ಸಿನಿಮಾದ ಎಲ್ಲಾ ವಿಭಾಗಗಳಲ್ಲಿಯೂ ಅಪಾರ ತಿಳಿವಳಿಕೆಯಿತ್ತು ಮತ್ತು ಅವರು ಅದನ್ನು ಸಮರ್ಪಕವಾಗಿ ದುಡಿಸಿಕೊಳ್ಳುತ್ತಿದ್ದರು.

ಹಾಗಾಗಿಯೇ ಅವರು ಚಿತ್ರಿಸಿರುವ ಪ್ರತೀ ಸನ್ನಿವೇಶಗಳಲ್ಲಿಯೂ ಜೀವಂತಿಕೆ ಕಾಣಿಸುವುದು. ಚಿತ್ರಕ್ಕೆ ಸಂಭಾಷಣೆ, ಗೀತೆಗಳನ್ನು ಬರೆದವರೂ ಸೆಟ್‌ನಲ್ಲಿ ಪುಟ್ಟಣ್ಣನವರೊಂದಿಗೆ ಇರುತ್ತಿದ್ದರು. ಪ್ರತೀ ಶಾಟ್‌ಗೆ ಮುನ್ನ ಪರಸ್ಪರ ಚರ್ಚೆ ನಡೆಯುತ್ತಿತ್ತು. ಸೆಟ್‌ನಲ್ಲಿ ಜೊತೆಗಿರುವ ಬರಹಗಾರರ ಅಭಿಪ್ರಾಯಗಳನ್ನು ಪಡೆದ ನಂತರ ತಮ್ಮ ಹೇಳಿಕೆಯನ್ನೂ ಪುಟ್ಟಣ್ಣ ದಾಖಲಿಸುತ್ತಿದ್ದರು.

ಇವುಗಳಲ್ಲಿ ಅತ್ಯಂತ ಸಮರ್ಪಕವೆನಿಸುವ ಅಭಿಪ್ರಾಯವೊಂದು ಸನ್ನಿವೇಶವಾಗಿ ಮೈದಾಳುತ್ತಿತ್ತು. ಪುಟ್ಟಣ್ಣ ಸನ್ನಿವೇಶವೊಂದನ್ನು ಕ್ಷಣಕ್ಷಣಕ್ಕೂ ಚೆಂದಗೊಳಿಸಲು ಶ್ರಮಿಸುತ್ತಿದ್ದರು. ಕಲಾವಿದರಿಗೆ ಸ್ವತಃ ತಾವೇ ಅಭಿನಯಿಸಿ ತೋರಿಸುವ ಪರಿಪಾಠ ರೂಢಿಸಿಕೊಂಡಿದ್ದ ನಿರ್ದೇಶಕ ಅವರು. ನಟ, ನಟಿಯರು ಇದನ್ನು ಶ್ರದ್ಧೆಯಿಂದ ಅನುಸರಿಸಿದರೆ ಸಾಕಿತ್ತು. ಹೀಗೆ ಪುಟ್ಟಣ್ಣನವರ ನಿರ್ದೇಶನದಲ್ಲಿ ತೀರಾ ಸಾಧಾರಣ ಎನ್ನುವವರು ಕೂಡ ಪಳಗಿದ ಕಲಾವಿದರಾಗಿ ಹೆಸರು ಮಾಡಿದರು.

ನಾನು ನೋಡಿದಂತೆ, ವೃತ್ತಿಪರತೆಗೆ ಒಳ್ಳೆಯ ಉದಾಹರಣೆ ಪುಟ್ಟಣ್ಣ. ಅವರ ಶೂಟಿಂಗ್ ಸೆಟ್‌ನಲ್ಲಿ ಕೆಲಸ ಮಾಡುವ ಎಲ್ಲರಲ್ಲೂ ಶಿಸ್ತು ಮೈಗೂಡಿರುತ್ತಿತ್ತು. ಸೆಟ್‌ನಲ್ಲಿ ಕೆಲಸ ಮಾಡುವಾಗ ಅನುಚಿತ ವರ್ತನೆ, ಜೋರು ದನಿಯಲ್ಲಿ ಮಾತನಾಡುವುದನ್ನು ಪುಟ್ಟಣ್ಣ ಸಹಿಸುತ್ತಿರಲಿಲ್ಲ. ಯಾವುದೇ ಒತ್ತಡವಿಲ್ಲದೆ ಆರಾಮವಾಗಿ  ಚಿತ್ರಿಸುವುದು ಅವರ ಶೈಲಿ.ಸೆಟ್‌ನಲ್ಲಿ ಎಲ್ಲರಿಗೂ ಪುಟ್ಟಣ್ಣನವರ ರೀತಿ, ನೀತಿಯ ಅರಿವಿರುತ್ತಿತ್ತು. ಹಾಗಾಗಿ ಅವರ ಕೋಪಕ್ಕೆ ಆಸ್ಪದ ನೀಡದಂತೆ ನಡೆದುಕೊಳ್ಳುತ್ತಿದ್ದರು. ಈಗಲೂ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್‌ನವರ ಹೆಸರು ಹೇಳಿ ನನ್ನನ್ನು ಗುರುತಿಸುವಾಗ ಹೆಮ್ಮೆ ಎನಿಸುತ್ತದೆ.

ನಿರೂಪಣೆ : ಶಶಿಧರ ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT