ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಟ್ಟದ ಮೇಲೆ ಸಿಕ್ಕ ಅಜ್ಜಿ ಪುಸ್ತಕ

ಹೂಡಿಕೆ
Last Updated 1 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ದಿನಾಂಕ 05–02–1982 ಕೆನರಾ ಬ್ಯಾಂಕ್‌ನಲ್ಲಿ ಆರ್‌ಡಿ ಮೆಚ್ಯೂರ್ ಆಗಿ ₹1000 ಸಿಕ್ಕಿತು. ಅದನ್ನು ಎಫ್‌ಡಿ ಮಾಡಿಸಿ, ಮತ್ತೆ 50 ರೂಪಾಯಿಗೆ ಆರ್‌ಡಿ ಮಾಡಿಸಿದೆ. ಈ ದುಡ್ಡು ಇರುವುದು ಇವರಿಗೆ ಗೊತ್ತಿಲ್ಲ. ನಾನು ಟ್ಯೂಷನ್ ಹೇಳಿ ಗಳಿಸಿದ, ಇವರು ಮನೆ ಖರ್ಚಿಗೆಂದು ಕೊಟ್ಟ ದುಡ್ಡಿನಲ್ಲಿ ಉಳಿಸಿದ ಹಣ ಅದು. ಇವರೇನೋ ಮನೆ ಕಟ್ಟಿಸೋಣ ಅಂತಿದ್ದಾರೆ. ಅವರಿಗೊಂದು ಸರ್‌ಪ್ರೈಜ್ ಕೊಡಬೇಕು ಅಂತ ಆಸೆ ಆಗ್ತಿದೆ...’

ಆ ಮನೆಯಲ್ಲಿ ಯುಗಾದಿಗೆ ಮುನ್ನಾ ದಿನ ಮನೆಯೆಲ್ಲಾ ದೂಳು ತೆಗೆಯುವುದು ವಾಡಿಕೆ. ರಾಣಿ ಒಮ್ಮೆ ಅಟ್ಟ ಕ್ಲೀನ್ ಮಾಡ್ತಿದ್ದಾಗ ಸಿಕ್ಕ ಅಜ್ಜಿಯ ಲೆಕ್ಕದ ಪುಸ್ತಕದ ಒಂದು ಹಾಳೆಯ ಒಕ್ಕಣೆ ಓದಿ ಅವಕ್ಕಾದಳು. ಅವಳಿಗೆ ತನ್ನ ಅಮ್ಮನೂ ಅಪ್ಪನಿಗೆ ತಿಳಿಯದಂತೆ ಒಂದಿಷ್ಟು ಹಣ ಕೂಡಿಸುತ್ತಿದ್ದುದು ಗೊತ್ತಿತ್ತು.

ಅದೇ ಲೆಕ್ಕದ ಪುಸ್ತಕ ತಿರುವುತ್ತಾ ಹೋದಂತೆ, ದುಡ್ಡಿನ ವಿಚಾರದಲ್ಲಿ ತನ್ನ ಅಜ್ಜಿ ಎಷ್ಟು ಬುದ್ಧಿವಂತಳು ಎಂಬುದು ರಾಣಿಗೆ ಅರ್ಥವಾಗುತ್ತಿತ್ತು. ಆ ಲೆಕ್ಕದ ಪುಸ್ತಕದ ಸಾಲುಗಳು ಇಲ್ಲಿವೆ ಓದಿಕೊಳ್ಳಿ...

***
‘ದಿನಾಂಕ 10–08–1982, ಹೇಗೂ 30X40 ಸೈಟ್ ಇದೆ. ಮನೆ ಕಟ್ಟಿಸಿಬಿಡೋಣ್ವಾ? ಮನೆಯವರು ಕೇಳಿದರು. ನಾನು ಖುಷಿಯಿಂದ ಒಪ್ಪಿಕೊಂಡೆ. ಅವರು ಟೆಲಿಫೋನ್ ಎಕ್ಸ್‌ಚೇಂಜ್ ಎದುರು ಇರೋ ಸೈಟ್ ಮಾರೋಣ ಅಂತಿದ್ದಾರೆ. ನಾನು ಬೇಡ, ಉಳಿಸಿಕೊಳ್ಳೋಣ. ಮಕ್ಕಳಿಗೆ ಆಗುತ್ತೆ ಅಂತಾ ಇದ್ದೀನಿ. ನೋಡ್ಬೇಕು ಏನು ಮಾಡ್ತಾರೋ...?

‘ದಿನಾಂಕ 10–10–1982, ಪಾಯದ ಪೂಜೆ ಮಾಡಿಸಿದೆವು. ನನ್ನ ಮಾತಿಗೆ ಬೆಲೆ ಕೊಟ್ರು, ಸೈಟ್ ಮಾರಲಿಲ್ಲ. ಸಾಲ ಮಾಡಿ ಮನೆ ಕಟ್ಟುವುದು, ನಾನು ಇನ್ನೂ ಎರಡು ಬ್ಯಾಚ್ ಟ್ಯೂಷನ್ ಜಾಸ್ತಿ ಮಾಡುವುದು ಎಂದು ತೀರ್ಮಾನವಾಯಿತು. ನಾನು ಇಲ್ಲೀವರೆಗೆ ಉಳಿಸಿದ್ದ ಹಣ 20 ಸಾವಿರ ರೂಪಾಯಿ ಆಗಿದೆ ಅಂತ ಹೇಳಿದೆ. ಅವರಿಗೆ ಎಷ್ಟು ಖುಷಿ ಆಯ್ತು ಗೊತ್ತಾ? ‘ನಿನ್ನಂತ ಹೆಂಡತಿ ಇದ್ರೆ ಎಂಥ ಹೆಡ್ಡನೂ ಮನೆ ಕಟ್ತಾನೆ’ ಅಂತ ಮಕ್ಕಳ ಎದುರು ನನ್ನ ಭುಜ ತಟ್ಟಿದ್ರು. ನಂಗೆ ನಾಚಿಕೆ ಆಯ್ತು.’

***
ಅಟ್ಟದ ಮೇಲೆ ಕುಕ್ಕರುಗಾಲಲ್ಲಿ ಕೂತು ದೂಳು ತೆಗೆಯುತ್ತಿದ್ದ ರಾಣಿ ತಾರಸಿ ನೋಡುತ್ತಾ ತನಗೆ ತಾನೇ ಎಂಬಂತೆ ಹೇಳಿಕೊಂಡಳು. ‘ಹೌದು ಕಣಜ್ಜಿ, ನಾನೂ ನಿನ್ನಷ್ಟೇ ಜಾಣಿ ಆಗ್ತೀನಿ. ನನ್ನ ಗಂಡ ಹೆಡ್ಡನಾದ್ರೂ ಮನೆ ಕಟ್ಟಿಸ್ತೀನಿ’. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT