ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದಿನ ಮನೆಯ ಒಲುಮೆ

Last Updated 1 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಸ್ನೇಹಿತರೊಬ್ಬರು ಹೊಸ ಮನೆ ಕಟ್ಟಿಸಿದ್ದರು. ಗೃಹ ಪ್ರವೇಶಕ್ಕೆ ಹೋಗಲು ಆಗಿರಲಿಲ್ಲ. ನಂತರದ ದಿನಗಳಲ್ಲಿ ಒಂದು ಅನೌಪಚಾರಿಕ ಭೇಟಿ ನೀಡಬೇಕಾಯಿತು. ಮನೆಯನ್ನೆಲ್ಲ ತೋರಿಸುತ್ತ ಅವರು ಲಿವಿಂಗ್‌ ರೂಮಿನಿಂದ ಡೈನಿಂಗ್‌ ಹಾಲ್‌ಗೆ, ಅಲ್ಲಿಂದ ಕಿಚನ್‌ಗೆ, ನಂತರ ಬೆಡ್‌ರೂಮ್‌, ಗೆಸ್ಟ್‌ ರೂಮ್‌, ಸ್ಟೋರ್‌ ರೂಮ್‌ಗಳನ್ನೆಲ್ಲ ತೋರಿಸುತ್ತ ಮನೆಯ ತುಂಬೆಲ್ಲ ಸುತ್ತಿಸಿದರು. ‘ಇದು ಓದುವ ಕೋಣೆ’ ಎನ್ನುವಾಗ ಮಾತ್ರ ಅವರ ಕಣ್ಣಿನಲ್ಲೊಂದು ಬೆಳಕು ಹರಿದು ಹೋಯ್ತು. 

‘ನಾನು ಅತ್ಯಂತ ಪ್ರೀತಿಯಿಂದ ಸಮಯ ಕಳೆಯುವ ಜಾಗ, ನನಗೆಂದೇ ಮಾಡಿಕೊಂಡ ‘ಸ್ಪೇಸ್‌’. ದಿನದ ಕೆಲಸವೆಲ್ಲ ಮುಗಿದ ಮೇಲೆ ಮಕ್ಕಳು ಶಾಲೆಯಿಂದ ಬರುವವರೆಗೆ ಇದು ನನ್ನದೇ ಜಗತ್ತು. ಇಲ್ಲಿ ಬಂದು ಕೂತೆನೆಂದರೆ ನನ್ನೇ ನಾ ಮರೆಯುತ್ತೇನೆ. ಇಲ್ಲಿ ಇರುವಷ್ಟು ಹೊತ್ತು ನಾನು ನಾನೇ ಆಗಿರುತ್ತೇನೆ. ಹೆಂಡತಿ, ತಾಯಿ, ಸೊಸೆ ಏನೂ ಆಗಿರುವುದಿಲ್ಲ. ಆ ಪಾತ್ರಗಳನ್ನೆಲ್ಲ ಅಡುಗೆಮನೆ, ಬೆಡ್‌ರೂಮಿನಲ್ಲಿಯೇ ಬಿಟ್ಟು ಇಲ್ಲಿ ನಾನು ನಾನಾಗಿ ಬಂದು ಕೂರುತ್ತೇನೆ...’ ಎನ್ನುತ್ತ ಅವರು ಕಿಟಕಿಗೆ ಮುಖ ಮಾಡಿ ನಿಂತರು.


ಸೊಂಪಾದ ಗಾಳಿ, ಸೊಗಸಾದ ಬೆಳಕು, ಎಡಕ್ಕೂ ಬಲಕ್ಕೂ ಇರಿಸಲಾಗಿದ್ದ ರ್‍್ಯಾಕ್‌ ಮೇಲೆ ಜೋಡಿಸಿದ ಪುಸ್ತಕಗಳು, ಮನಸ್ಸಿಗೆ ಹಿತವೆನಿಸುವಂಥ ಗೋಡೆಯ ಬಣ್ಣ ... ಮನಸ್ಸು ತಂತಾನೇ ಧ್ಯಾನಸ್ಥ ಸ್ಥಿತಿ ತಲುಪಿದ ಅನುಭವ... ಹೌದು, ಹೀಗೇ ಇರಬೇಕು ಓದುವ ಕೋಣೆ ಎನಿಸಿದ್ದು ಆಗಲೇ. ಹೊರಗಿನ ಶಬ್ದಮಾಲಿನ್ಯ ಸುಲಭವಾಗಿ ಒಳ ಸುಳಿಯದ ಹಾಗೆ, ಅಡುಗೆಮನೆಯ ಘಾಟು, ಬೆಡ್‌ರೂಮಿನ ಸೆಂಟು ವಾಸನೆಗಳೆಲ್ಲ ದಾಂಗುಡಿ ಇಡದ ಹಾಗೆ...

ನಮ್ಮ ಕನಸಿನ ಮನೆ ಸಿದ್ಧಗೊಳ್ಳುವಾಗ ನಾವು ಏನೆಲ್ಲ ಯೋಚಿಸುತ್ತೇವೆ. ವರಾಂಡಾದಿಂದ ಹಿಡಿದು, ಲಿವಿಂಗ್‌ ರೂಮ್‌, ಕಿಚನ್‌, ಡೈನಿಂಗ್‌ ಹಾಲ್‌, ಬೆಡ್‌ ರೂಮ್‌, ಪೂಜಾ ಕೋಣೆ, ಬಾಲ್ಕನಿ... ಹೀಗೆ ಎಲ್ಲಾ ಕೋಣೆಗಳ ಬಗ್ಗೆ ನಮ್ಮದೇ ಆದ ಕಲ್ಪನೆಯೊಂದಿರುತ್ತದೆ. ಆದರೆ ಇವೆಲ್ಲಕ್ಕಿಂತ ಮುಖ್ಯವಾದುದು ರೀಡಿಂಗ್‌ ರೂಮ್‌.

ಓದುವ ಕೋಣೆಯ ಗುಣ
ಓದುವ ಕೋಣೆಯ ಕಿಟಕಿ, ಬಾಗಿಲು, ಕುರ್ಚಿ, ಮೇಜು... ಇವೆಲ್ಲದರ ಬಗ್ಗೆ ನಾವು ಮಾತನಾಡುತ್ತಲೇ ಇರುತ್ತೇವೆ. ಆದರೆ ಓದುವ ಕೋಣೆ ಮೊದಲು ನಮ್ಮ ಮನಸ್ಸಿಗೆ ಆಪ್ತವಾಗಬೇಕು. ಓದುವ ಹೊತ್ತು ಮನಸ್ಸನ್ನು ಏಕಾಂತವಾಗಿಡುವ ಕಾವ್ಯಗುಣ ಅದಕ್ಕಿರಬೇಕು. ಅಲ್ಲಿ ಇರುವಷ್ಟು ಹೊತ್ತು ಬೇರೆಯದೇ ಲೋಕದಲ್ಲಿದ್ದ  ಅನುಭವವನ್ನು ಅದು ಕಟ್ಟಿಕೊಡಬೇಕು. ಅಂತಹ ಗುಣವನ್ನು ಅದರಲ್ಲಿ ತುಂಬುವುದು ಮತ್ತು ಅದನ್ನು ಅನುಭವಿಸುವುದು ನಮ್ಮದೇ ಜವಾಬ್ದಾರಿ.

ಓದುವ ಕೋಣೆಗೆ ತನ್ನದೇ ಆದ ಗಾಂಭೀರ್ಯವಿದೆ, ಸ್ವಭಾವವಿದೆ. ಪ್ರಶಾಂತ ವಾತಾವರಣ, ಸರಿಯಾದ ಗಾಳಿ–ಬೆಳಕು ಪ್ರಧಾನ. ಜೊತೆಗೆ ಅವರವರ ಆಸಕ್ತಿ–ಅಭಿರುಚಿಗೆ ತಕ್ಕಂತೆ ಆ ಕೋಣೆಗೆ ಒಂದು personal touch ಕೊಡಬೇಕು.

ಸಮನಾದ ಗಾಳಿ–ಬೆಳಕು, ಒಂದಷ್ಟು ನಿಶ್ಯಬ್ದ, ಏಕಾಂತವನ್ನು ಬಯಸುವ ಈ ಕೋಣೆಗೆ ಒಂದು ವಿಶೇಷ ಸ್ಥಾನವಿದೆ. ಮಕ್ಕಳಿಗಾಗಲೀ, ದೊಡ್ಡವರಿಗಾಗಲಿ, ಅತಿಥಿಗಳಿಗೇ ಆಗಲಿ ಓದಲಿಕ್ಕೆಂದೇ ಇರುವ ಒಂದು ಪ್ರತ್ಯೇಕ ಕೋಣೆಯನ್ನು ನಿರ್ಮಿಸುವಾಗ ಸಾಕಷ್ಟು ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

ಓದಲು ಕಾರಣ–ಓರಣ
ಓದುವ ಕೋಣೆಯಲ್ಲಿ ಬೆಡ್‌ ಬೇಡ. ಈ ಕೋಣೆಯಲ್ಲಿ ಸುಮ್ಮನೇ ರಿಲ್ಯಾಕ್ಸ್‌ ಆಗಲೆಂದೊ, ಆರಾಮಾಗಿ ಮೈಚೆಲ್ಲಿ ಓದುವಂತಾಗಲೆಂದೊ ಕಾಟ್‌ ಮತ್ತು ಬೆಡ್‌ ಹಾಕಿಕೊಳ್ಳುವುದನ್ನು ತಪ್ಪಿಸಿ.  ಹಾಗೆಯೇ ತಿನ್ನುವುದನ್ನೆಲ್ಲ ಮುಗಿಸಿಯೇ ಈ ಕೋಣೆ ಸೇರಿಕೊಳ್ಳಿ. ತಿನ್ನುತ್ತ ಓದಲು ಕೂರಬೇಡಿ. ಅಲ್ಲಿ ಪುಸ್ತಕ ಮತ್ತೆ ನೀವು ಇಬ್ಬರೇ ಇದ್ದರೆ ಒಳ್ಳೆಯದು.

ಬಳಸುವ ಮೇಜು ಅಗತ್ಯವಿದ್ದಷ್ಟು ವಿಸ್ತಾರದಲ್ಲಿರಲಿ. ಕುಳಿತುಕೊಳ್ಳುವ ಖುರ್ಚಿ ಸೂಕ್ತವಾಗಿರಲಿ. ಗಾಳಿಯಾಡಬಲ್ಲ ಫ್ಯಾಬ್ರಿಕ್‌ ಕುರ್ಚಿ ಒಳ್ಳೆಯದು. ಬೆನ್ನುಮೂಳೆಗೆ ಸಪೂರ್ಟ್‌ ನೀಡಬಲ್ಲ ವಿನ್ಯಾಸದಲ್ಲಿರಲಿ. ಕುಳಿತಾಗ ನಿಮ್ಮ ಕಾಲು ನೆಲವನ್ನು ಮುಟ್ಟುವಂತಿರಬೇಕು.

ಸೂರ್ಯೋದಯದ, ಧ್ಯಾನ ಮಾಡುವ, ನಿಸರ್ಗದ ಪೋಸ್ಟರ್‌ಗಳನ್ನು ಹಾಕಿಕೊಳ್ಳಬಹುದು. ಮಕ್ಕಳಿಗಾಗಿ ಸಂತರ, ಗಾಂಧಿ–ನೆಹರೂ ಅವರಂತಹ ನಾಯಕರ ಚಿತ್ರಗಳೊಂದಿಗೆ ಅವರ ಸಂದೇಶಗಳಿರುವ ಪೋಸ್ಟರ್‌ಗಳು ಉತ್ತಮ.

ಓದುವ ಕೋಣೆಗೆ ಜೀವ ಕಳೆ ತುಂಬಿ
ಓದುವ ಕೋಣೆ, ಅದರ ಕಿಟಕಿ–ಬಾಗಿಲು  ಯಾವ  ದಿಕ್ಕಿಗೆ ಇರಬೇಕು ಎನ್ನುವುದು ಮುಖ್ಯವಲ್ಲ. ಓದಲು ಕೂರುವ ದಿಕ್ಕು ಸರಿಯಾಗಿರಬೇಕಷ್ಟೇ. ಅದಕ್ಕೆ ವೈಜ್ಞಾನಿಕ ಕಾರಣಗಳೂ ಇವೆ.

ಓದಲು ಕೂರುವಾಗ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಬೇಕು. ಸೂರ್ಯ–ಚಂದ್ರರು ಇರುವ ದಿಕ್ಕಿದು. ಸೂರ್ಯ ಎಂದರೆ ‘ಶಕ್ತಿ’. ಸೂರ್ಯ ಜಾಗೃತಿಯ ಸಂಕೇತ. ಕೈಲಾಸ ಪರ್ವತ ಇರುವುದು ಉತ್ತರಕ್ಕೆ. ಸಾಧು–ಸಂತರು, ಸಿದ್ಧಿಪುರುಷರು ಇಲ್ಲಿದ್ದಾರೆ. ಅವರ ಕಡೆ ಮುಖ ಮಾಡಿ ಕೂಡುವುದರಿಂದ ಜ್ಞಾನ ವೃದ್ಧಿಗೆ ಅನುಕೂಲ ಎನ್ನುವ ನಂಬಿಕೆ ಇದೆ.  ಹೀಗಾಗಿ ಈ ದಿಕ್ಕುಗಳಿಗೆ ಮುಖ ಮಾಡಿ ಕೂಡಬೇಕು. ಇದೆಲ್ಲಕ್ಕೂ ವಾಸ್ತುಶಾಸ್ತ್ರದಲ್ಲಿ ವೈಜ್ಞಾನಿಕ ವಿವರಣೆ ಇದೆ.  

* ಪುಸ್ತಕಗಳನ್ನು ಚೆಂದವಾಗಿ ಜೋಡಿಸಿಡಿ

* ಓದಿದ ಪುಸ್ತಕಗಳನ್ನು ಹಾಗೂ ಓದಬೇಕಾದ ಪುಸ್ತಕಗಳನ್ನು ಪ್ರತ್ಯೇಕವಾಗಿಡಿ

* ಕಿಟಕಿ ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕುಗಳಿಗೆ ಇರಲಿ

* ಕಪಾಟುಗಳು ಪೂರ್ವ, ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಲಿ.

* ಮನೆಯ  ಪೂರ್ವ, ಉತ್ತರ ಅಥವಾ ಈಶಾನ್ಯಭಾಗದಲ್ಲಿರುವ ಕೋಣೆಗಳನ್ನು ಇದಕ್ಕಾಗಿ ಬಳಸಿದರೆ ಉತ್ತಮ.

ಬೆಳಕು ಬೆಡಗಾಗಿ ಬರಲಿ
ಓದುವ ಕೋಣೆ ಹೇಗಿರಬೇಕು, ಬಾಗಿಲು-ಕಿಟಕಿ ಎಲ್ಲಿರಬೇಕು ಎನ್ನುವುದಕ್ಕಿಂತ ಇಲ್ಲಿ ಬೆಳಕು ಪ್ರಧಾನವಾಗಬೇಕು. ಹೀಗಾಗಿ ನಾವಿಲ್ಲಿ ಬರೀ ಬೆಳಕಿನೆಡೆಗೆ ಹೋಗೋಣ.ಬೆಳಕು ಎನ್ನುವುದನ್ನು ವಾಸ್ತುಶಿಲ್ಪದಲ್ಲಿ ಒಂದು ರೂಪಕವಾಗಿ ನೋಡಲಾಗುತ್ತದೆ.

ಬೆಳಕು ಬರೀ ಬೆಳಕಲ್ಲ ಅದು ಜ್ಞಾನದ ಸಂಕೇತ. ಸೂರ್ಯನ ಬೆಳಕೇ ಸರಿ, ಕೃತಕ ಬೆಳಕೇ ಸರಿ, ಮೇಜಿನ ಮೇಲೆ ಸಾಕಷ್ಟು ಬೆಳಕು ಬರುವಂತಿರಬೇಕು. ಆದರೆ ಬೆಳಕು ‘ಬಿಸಿಲಾಗಿ’ ಅಲ್ಲ, ‘ಬೆಳಕಾಗಿ’ ಬರಬೇಕಷ್ಟೆ. ಅಂದರೆ ಸೂರ್ಯನ ನೇರ–ಪ್ರಕರವಾದ ಬೆಳಕು, ಕಣ್ಣಿಗೆ ರಾಚುವಂತಹ ಕೃತಕ ಬೆಳಕು ಅಲ್ಲ. ಕಣ್ಣಿಗೆ ಹಿತವೆನಿಸುವ ಬೆಳಕದು.

ಕಪಾಟಿಗೆ ಹೆಚ್ಚು ಬೆಳಕೇನೂ ಬೇಡ. ಮಂದ ಬೆಳಕಾದರೂ ಸರಿ. ಪುಸ್ತಕವನ್ನು ಕಪಾಟಿನಿಂದ ಮೇಜಿಗೆ ತರುವ ಪ್ರಕ್ರಿಯೆಯನ್ನೇ ತಮಸ್ಸಿನಿಂದ ಬೆಳಕಿನೆಡೆಗೆ ಸಾಗುವ ರೂಪಕವಾಗಿ ನೋಡಬೇಕಾಗುತ್ತದೆ.ಬಣ್ಣ ಅವರವರ ಆಸಕ್ತಿ–ಪ್ರೀತಿಗೆ ಸಂಬಂಧಿಸಿದ್ದು ಅದಕ್ಕೆ ಸಾರ್ವತ್ರಿಕ ಉತ್ತರ ಇಲ್ಲ. ಆದರೆ ನನ್ನನ್ನು ಕೇಳಿದರೆ ನಾನು ಢಾಳಾಗಿ ಕಾಣುವ ಬಣ್ಣ ಬೇಡ. ಬಿಳಿ ಬಣ್ಣ ಸಾಕು ಎನ್ನುತ್ತೇನೆ.
- ನಾಗರಾಜ್‌ ವಸ್ತಾರೆ, ವಾಸ್ತುಶಿಲ್ಪಿ

***
ಓದುವ ಕೋಣೆಗೆ ತಿಳಿ ಕೇಸರಿ, ತಿಳಿ ಹಳದಿ, ನೀಲಿ, ನೇರಳೆ ಸೇರಿದಂತೆ ಕಣ್ಣಿಗೆ ತಂಪೆನಿಸುವ ಬಣ್ಣಗಳನ್ನು ಬಳಸಿ. ಇವು  ಮನಸಿಗೆ ಶಾಂತಿ ನೀಡುವ ಜೊತೆಗೆ ಸ್ಫೂರ್ತಿ ಒದಗಿಸುತ್ತವೆ.
–ಶೇಷಯ್ಯ ವಿ, ವಾಸ್ತುಶಿಲ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT