ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆ ಮತ್ತು ಮಾರುಕಟ್ಟೆಯ ತರ್ಕ

Last Updated 1 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅಖಿಲಾ ವಾಸನ್‌/ ವಿಜಯ ಕುಮಾರ್‌ ಎಸ್‌.

₹ 500 ಮತ್ತು 1000ದ ನೋಟುಗಳು ರದ್ದಾದ ಮೇಲೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು, ಔಷಧಿ ಮತ್ತು ದೈನಂದಿನ ವಸ್ತುಗಳ ಖರೀದಿಗೆ ಜನರ ಪರದಾಟ ಈಗಲೂ ಮುಂದುವರಿದಿದೆ. ಮುಂಬೈನ ಒಂದು ಖಾಸಗಿ ಆಸ್ಪತ್ರೆಯಲ್ಲಿ  ಹಳೆ ನೋಟುಗಳನ್ನು ನಿರಾಕರಿಸಿ, ಚಿಕಿತ್ಸೆ ನೀಡದ ಕಾರಣ ಶಿಶುವೊಂದರ ಸಾವು ಸಂಭವಿಸಿದ ವರದಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿಯೂ ಆಯಿತು. ಹಣ ಇದ್ದವರಿಗೆ ಮಾತ್ರ ಆರೋಗ್ಯ ಸೇವೆ ಎಂಬ ಸಹಜೀಕರಣಗೊಂಡಿರುವ ಮಾರುಕಟ್ಟೆಯ ಕ್ರೂರ ನಿಯಮ ಮತ್ತು ಸರ್ಕಾರಗಳು ನಾಗರಿಕರನ್ನು ಅನಾಥಗೊಳಿಸಿರುವುದು ಇದರಿಂದ ಮತ್ತಷ್ಟು ಸ್ಪಷ್ಟವಾಯಿತು. 

ಈ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಒಂದು ಮಹತ್ವದ ಬೆಳವಣಿಗೆ ಕುರಿತು ನಾಗರಿಕರು ಗಮನ ಹರಿಸಬೇಕಾಗಿದೆ. ನೋಟುಗಳ ರದ್ದತಿ ವಿಷಯ ನಮ್ಮನ್ನು ಆವರಿಸಿಕೊಳ್ಳುವ ಮುನ್ನ, ರಾಜ್ಯದ ಆರೋಗ್ಯ ಸಚಿವರು ಅಕ್ಟೋಬರ್ ಕೊನೆಯಲ್ಲಿ ಒಂದು ಹೇಳಿಕೆ ನೀಡಿದರು. ‘ಖಾಸಗಿ ಆಸ್ಪತ್ರೆಗಳ ಮೇಲೆ ಕಡಿವಾಣ ಹಾಕಲು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜನರಿಗೆ ಮೋಸ, ವಂಚನೆಗಳಿಂದ ರಕ್ಷಣೆ ನೀಡಲು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ- 2007ಕ್ಕೆ ಸರ್ಕಾರ ತಿದ್ದುಪಡಿ ತರುತ್ತಿದೆ ಮತ್ತು ಈ ಪ್ರಕ್ರಿಯೆಗೆ ಪೂರಕವಾಗಿ ತಜ್ಞರ ಸಮಿತಿಯನ್ನು ರಚಿಸಲಾಗುತ್ತಿದೆ’ ಎಂಬುದು ಅವರ ಹೇಳಿಕೆಯಾಗಿತ್ತು.

ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಹಕ್ಕುಗಳ ಸಂರಕ್ಷಣೆ, ನಾಗರಿಕರ ದೂರು ಆಲಿಸುವ ವ್ಯವಸ್ಥೆ, ಖಾಸಗಿ ಆಸ್ಪತ್ರೆಗಳ ಸೇವಾ ಶುಲ್ಕದ ಮೇಲೆ ಕಡಿವಾಣ, ಸೇವಾ ಮಾನದಂಡಗಳ ಕಡ್ಡಾಯ ಪಾಲನೆ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಅಂಕಿ-ಅಂಶಗಳ ಕಡ್ಡಾಯ ವರದಿ ಸಲ್ಲಿಕೆ ಮುಂತಾದ ಅಂಶಗಳನ್ನು ಹೊಂದಿರುವ ಈ ತಿದ್ದುಪಡಿ ಪ್ರಕ್ರಿಯೆಯು ಒಂದು ರೀತಿ ಪ್ರಗತಿಪರವಾದುದು.

ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಖಾಸಗಿ ತಜ್ಞ ವೈದ್ಯರು ದಲಿತ ಸಮುದಾಯಗಳ ಅಮಾಯಕ ಮಹಿಳೆಯರನ್ನು ಗುರಿಯಾಗಿಸಿ, ಅವರ ಗರ್ಭಕೋಶಗಳನ್ನು ಯಾವುದೇ ವೈದ್ಯಕೀಯ ಕಾರಣಗಳಿಲ್ಲದೆ ಕಿತ್ತುಹಾಕುತ್ತಿರುವುದು ಈಗಾಗಲೇ ರಾಷ್ಟ್ರಮಟ್ಟದ ಸುದ್ದಿಯಾಗಿದೆ. ಇಂತಹ ಅನಾಹುತಗಳನ್ನು ತಪ್ಪಿಸಲು ಮತ್ತು ನಾಗರಿಕರನ್ನು, ಅದರಲ್ಲೂ ಮಹಿಳೆಯರು, ಮಕ್ಕಳು, ಲೈಂಗಿಕ ಅಲ್ಪಸಂಖ್ಯಾತರು, ಎಚ್‌ಐವಿ ಸೋಂಕಿನೊಂದಿಗೆ ಬದುಕುತ್ತಿರುವವರು, ಅಂಗವಿಕಲರಂತಹ ಸುಲಭದಲ್ಲಿ ಗುರಿ ಮಾಡಬಹುದಾದ ಗುಂಪುಗಳನ್ನು ಸುಲಿಗೆ ಮಾಡುವುದು ಹಾಗೂ ಅಸಮಂಜಸ, ಅಪಾಯಕಾರಿ, ಅನವಶ್ಯಕ ಪರೀಕ್ಷೆಗಳು, ಚಿಕಿತ್ಸೆಗಳಿಂದ ರಕ್ಷಿಸಲು ಸಮರ್ಪಕ ಕಾನೂನು ವ್ಯವಸ್ಥೆ ಅತ್ಯಗತ್ಯ. ಆದರೆ ಸಚಿವರ ಹೇಳಿಕೆ ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುವುದಕ್ಕಿಂತ ಹೆಚ್ಚಾಗಿ ಮತ್ತಷ್ಟು ಪ್ರಶ್ನೆಗಳನ್ನೇ ಹುಟ್ಟುಹಾಕಿದೆ.

ಇಂದಿನ ಆರೋಗ್ಯ ನೀತಿಗಳನ್ನು ಗಮನಿಸಿದರೆ, ಸಾರ್ವಜನಿಕರನ್ನು ಖಾಸಗಿ ಆಸ್ಪತ್ರೆಗಳ ಬಲೆಯಿಂದ ಸರ್ಕಾರ ರಕ್ಷಿಸುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಸರ್ಕಾರಿ ಆರೋಗ್ಯ ವ್ಯವಸ್ಥೆ ಬಗ್ಗೆ ನಂಬಿಕೆ ಕಳೆದುಕೊಂಡು, ಪರ್ಯಾಯವಿಲ್ಲದೆ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳ ಮೊರೆಹೋಗುತ್ತಿದ್ದಾರೆ ಎಂಬುದನ್ನು ಮರೆಯಬಾರದು. ನಾಗರಿಕರನ್ನು ಖಾಸಗಿ ಆಸ್ಪತ್ರೆಗಳ ಬಲೆಯಿಂದ ರಕ್ಷಿಸಬೇಕೆಂದರೆ ಅವರು ಅಲ್ಲಿಗೆ ಹೋಗುವುದನ್ನೇ ತಪ್ಪಿಸಬೇಕಾಗುತ್ತದೆ.

ಅಂದರೆ ಇರುವ ಸರ್ಕಾರಿ ವ್ಯವಸ್ಥೆಯನ್ನು ಬಲಗೊಳಿಸಿದರೆ ಮಾತ್ರ ಇದು ಸಾಧ್ಯ. ಆದರೆ ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸುತ್ತಿಲ್ಲ ಎಂಬುದು ಖಚಿತವಾಗುತ್ತಿದೆ. ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಾರ್ವಜನಿಕ ಆಸ್ಪತ್ರೆಗಳನ್ನು ಖಾಸಗಿ ವಲಯಕ್ಕೆ ಹಸ್ತಾಂತರ ಮಾಡಿ ತನ್ನ ಆರೋಗ್ಯ ವ್ಯವಸ್ಥೆಯ ಮೇಲೆ ತಾನೇ ‘ಸರ್ಜಿಕಲ್ ಸ್ಟ್ರೈಕ್’ಗಳನ್ನು ನಡೆಸುತ್ತಿರುವ ಸರ್ಕಾರ, ನಿಜಕ್ಕೂ ನಾಗರಿಕರ ಹಿತಾಸಕ್ತಿ ಕಾಪಾಡುತ್ತದೆ ಎಂದು ನಂಬುವುದು ಕಷ್ಟವಾಗಿದೆ. ಒಂದೆಡೆ ಸರ್ಕಾರವೇ ಜನರನ್ನು ಖಾಸಗಿ ವಲಯಕ್ಕೆ ದೂಡಿ ಮತ್ತೊಂದೆಡೆ ಅವರಿಗೆ ನ್ಯಾಯ, ರಕ್ಷಣೆ ನೀಡುತ್ತೇವೆ ಎಂಬ ಹೇಳಿಕೆಗಳಲ್ಲಿ ಅದರ ದ್ವಂದ್ವ ನೀತಿ ಸ್ಪಷ್ಟವಾಗುತ್ತದೆ.

ಒಂದು ವೇಳೆ ಸರ್ಕಾರದ ಉದ್ದೇಶಗಳನ್ನು ನಂಬುವುದೇ ಆದರೆ, ಖಾಸಗಿ ಆಸ್ಪತ್ರೆಗಳ ಮೇಲಿನ ಕಡಿವಾಣವನ್ನು ಬಿಗಿ ಮಾಡುವುದು ಮುಖ್ಯ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ- 2007ಕ್ಕೆ ‘ನಾಗರಿಕ ಕೇಂದ್ರೀಕೃತ’ ತಿದ್ದುಪಡಿಗಳನ್ನು ತಂದು, ಅದನ್ನು ನಾಗರಿಕರ ಹಿತಾಸಕ್ತಿ ಕಾಪಾಡುವ ಕಾಯ್ದೆಯನ್ನಾಗಿ ಮಾರ್ಪಾಡು ಮಾಡುವಲ್ಲಿ ಸಾರ್ವಜನಿಕರು, ರಾಜ್ಯದ ಜನಪರ ಸಂಘಟನೆಗಳು ಎಷ್ಟರ ಮಟ್ಟಿಗೆ ಭಾಗಿಯಾಗಿವೆ ಎಂಬುದನ್ನು ಗಮನಿಸಬೇಕಾಗಿದೆ. ಖಾಸಗಿ ಆಸ್ಪತ್ರೆಗಳ ಒಕ್ಕೂಟಗಳು, ಸಂಶೋಧನಾ ಸಂಸ್ಥೆಗಳು, ವೈದ್ಯಕೀಯ ಒಕ್ಕೂಟಗಳನ್ನು ‘ತಜ್ಞರ’ ಸಮಿತಿಯಲ್ಲಿ ಸೇರಿಸಿಕೊಳ್ಳಬೇಕಾಗಿದೆ.

ವೈದ್ಯ ಸಮುದಾಯದಿಂದ ಉತ್ತರದಾಯಿತ್ವ ಮತ್ತು ದಕ್ಷತೆಯನ್ನು ಬಯಸುವ ಯಾವುದೇ ಪ್ರಕ್ರಿಯೆಗೆ, ವ್ಯಾಪಾರೀಕರಣಗೊಂಡಿರುವ ವೈದ್ಯ ವೃತ್ತಿ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದೆ. ಭಾರತೀಯ ವೈದ್ಯಕೀಯ ಪರಿಷತ್ತನ್ನು ರದ್ದು ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸಲು ನೀತಿ ಆಯೋಗವು ಇತ್ತೀಚೆಗೆ ಮುಂದಾಗಿದೆ. ಈ ಕುರಿತು ಜನಪರ ಸಂಘಟನೆಗಳಲ್ಲಿ ಹಲವಾರು ಆಕ್ಷೇಪಗಳಿವೆ. ಆದರೆ ಭಾರತೀಯ ವೈದ್ಯಕೀಯ ಒಕ್ಕೂಟದ ಆಕ್ಷೇಪಗಳನ್ನು ಗಮನಿಸಿದರೆ ಅವು ಆತಂಕಕಾರಿಯಾಗಿವೆ.

ಈ ಹಿಂದೆ ವೈದ್ಯಕೀಯ ಪರಿಷತ್ತಿನಲ್ಲಿ ಭ್ರಷ್ಟಾಚಾರಕ್ಕೆ ಕಾರಣವಾದ ಚುನಾವಣಾ ಪ್ರಕ್ರಿಯೆಯನ್ನು ರದ್ದು ಮಾಡಿ ಈ ಹೊಸ ಆಯೋಗಕ್ಕೆ ವೈದ್ಯರು ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಿಂದ, ಅಂದರೆ ಕಾನೂನು ತಜ್ಞರು, ಸಾಮಾಜಿಕ ಹೋರಾಟಗಾರರು ಮುಂತಾದವರಲ್ಲದೆ  ಸರ್ಕಾರಿ ಅಧಿಕಾರಿಗಳನ್ನು ನೇಮಕ ಮಾಡಬೇಕೆಂಬ ಯೋಜನೆ ಇದೆ. ಆದರೆ ವೈದ್ಯಕೀಯ ಆಡಳಿತದಲ್ಲಿ ವೈದ್ಯಕೀಯ  ಕ್ಷೇತ್ರಕ್ಕೆ ಸೇರದ ಪಾಲುದಾರರ ಒಳಗೊಳ್ಳುವಿಕೆ ಬಗ್ಗೆ ವೈದ್ಯಕೀಯ ಒಕ್ಕೂಟವು  ವಿರೋಧ ವ್ಯಕ್ತಪಡಿಸಿದೆ.

ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಕಾರ್ಪೊರೇಟ್ ಲಾಭಪರ ಸಂಸ್ಥೆಗಳೂ ಪ್ರಾರಂಭಿಸಬಹುದೆಂಬ ನೀತಿ ಆಯೋಗದ ಅಪಾಯಕಾರಿ ಶಿಫಾರಸನ್ನು ಒಕ್ಕೂಟವು ಖಂಡಿಸಿಲ್ಲ. ಮಾರುಕಟ್ಟೆಯಲ್ಲಿ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವ, ಮಾರುಕಟ್ಟೆಯ ಪೈಪೋಟಿಯಲ್ಲಿ ತನ್ನ ಉಳಿಯುವಿಕೆ ಖಾತ್ರಿಗೊಳಿಸಿಕೊಳ್ಳುವ   ಉದ್ದೇಶ ಹೊಂದಿದ ವೈದ್ಯ ಸಮುದಾಯ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳು ಸಾಮಾಜಿಕ ಚಿಂತನೆ, ವೃತ್ತಿಪರ ಉತ್ತರದಾಯಿತ್ವ, ದಕ್ಷತೆ ಕುರಿತು ಕಾಳಜಿ ವಹಿಸುತ್ತವೆಂದು ನಿರೀಕ್ಷಿಸುವುದು  ಅಪಾಯಕಾರಿ.

ಕೇಂದ್ರ ಮಟ್ಟದ ಈ ಬೆಳವಣಿಗೆಗಳು ರಾಜ್ಯ ಸರ್ಕಾರದ ಮುಂದಿರುವ ಸವಾಲುಗಳನ್ನು ಸೂಚಿಸುತ್ತವೆ. ಖಾಸಗಿ ವೈದ್ಯ ಒಕ್ಕೂಟಗಳು ಮತ್ತು ಇತರ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡ ರಾಜ್ಯ ಸರ್ಕಾರಕ್ಕೂ ತಪ್ಪಿದ್ದಲ್ಲ. ಇಂತಹ ಜನವಿರೋಧಿ ಶಕ್ತಿಗಳ ಪ್ರಭಾವದ ಪರಿಣಾಮವಾಗಿಯೇ ನಾಗರಿಕರ ಸ್ವತ್ತಾದ ಸಾರ್ವಜನಿಕ ಆಸ್ಪತ್ರೆಗಳನ್ನು, ಅಲ್ಲಿನ ಭೂಮಿಯನ್ನು ಸರ್ಕಾರ ಹರಾಜು ಮಾಡಲು ಹೊರಟಿದೆ. ಸಮಾಜವಾದಿ ಆಶಯಗಳನ್ನು ಪ್ರತಿಪಾದಿಸುವ ನಮ್ಮ ಆರೋಗ್ಯ ಸಚಿವರು ವೈದ್ಯಕೀಯ/ ಆರೋಗ್ಯ ಕ್ಷೇತ್ರದಲ್ಲಿ ಸಹಜೀಕರಣಗೊಂಡಿರುವ ಮಾರುಕಟ್ಟೆಯ ತರ್ಕವನ್ನು ಸಮರ್ಥಿಸಿಕೊಳ್ಳಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT