ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಅನುಷ್ಠಾನ ಸರಿಯಲ್ಲ

Last Updated 1 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ರಾಷ್ಟ್ರದಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಮೊದಲು ರಾಷ್ಟ್ರಗೀತೆ ಪ್ರಸಾರ ಮಾಡಬೇಕು ಮತ್ತು ಈ ಸಂದರ್ಭದಲ್ಲಿ ಚಿತ್ರಪರದೆಯ ಮೇಲೆ ರಾಷ್ಟ್ರಧ್ವಜ ಪ್ರದರ್ಶಿಸಬೇಕು; ಆಗ ಜನರು ಗೌರವಪೂರ್ವಕವಾಗಿ ಎದ್ದುನಿಲ್ಲಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ನ್ಯಾಯಾಂಗ ಸಕ್ರಿಯತೆಯ ಅತಿರೇಕದ ದ್ಯೋತಕ ಇದು. ನ್ಯಾಯಾಂಗದ ಮುಖ್ಯ ಕೆಲಸ ಕಾನೂನುಗಳ ವ್ಯಾಖ್ಯಾನ ಮಾಡುವುದು. ಹೀಗಾಗಿ ಹೊಸ ಕಾನೂನುಗಳನ್ನು ಮಾಡುವ ಮೂಲಕ ಶಾಸಕಾಂಗದ ಅಧಿಕಾರದ ಅತಿಕ್ರಮಣ ಸಲ್ಲದು.

ನಮ್ಮ ರಾಷ್ಟ್ರಗೀತೆಯನ್ನು ಗೌರವಿಸಬೇಕು, ನಮ್ಮ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ರಾಷ್ಟ್ರಗೀತೆಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂಬಂಥ ಸುಪ್ರೀಂ ಕೋರ್ಟ್ ನಿರ್ದೇಶನವೂ ಸರಿಯಾದುದು. ಆದರೆ ರಾಷ್ಟ್ರಗೀತೆಗೆ  ಗೌರವ ಸಲ್ಲಿಕೆ ಸಿನಿಮಾ ಮಂದಿರಗಳಲ್ಲೂ ನಡೆಯಬೇಕು ಎಂಬುದು ಅಸಂಗತ. ಸಿನಿಮಾ ಮಂದಿರಗಳಿಗೆ ಜನರು ಹೋಗುವುದು ಮನರಂಜನೆಗಾಗಿ ಎಂಬುದು ನಮ್ಮ ನೆನಪಿನಲ್ಲಿರಬೇಕು.

‘ಮೊದಲು ನಾವು ಭಾರತೀಯರು ಹಾಗೂ ಆ ನಂತರ ವ್ಯಕ್ತಿ ಸ್ವಾತಂತ್ರ್ಯ ಎಂಬುದನ್ನು  ಎಲ್ಲಾ ನಾಗರಿಕರು ಅರ್ಥಮಾಡಿಕೊಳ್ಳಬೇಕು’ ಎಂದು ಕೋರ್ಟ್ ಹೇಳಿದೆ. ರಾಷ್ಟ್ರೀಯತೆಯ ವಿಚಾರವನ್ನು  ರಾಜಕೀಯ ಲಾಭಕ್ಕಾಗಿ ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿರುವುದು ಗೊತ್ತಿರುವ ಸಂಗತಿ. ಆದರೆ ಇಂತಹ ಹುಸಿ ರಾಷ್ಟ್ರೀಯತೆಯನ್ನು  ನ್ಯಾಯಾಂಗವೂ ಹೇರಲು ಆರಂಭಿಸಿರುವುದು ಹೊಸ ಬೆಳವಣಿಗೆ. ರಾಷ್ಟ್ರಪ್ರೇಮವೆಂಬುದು ಹೃದಯಾಂತರಾಳದಿಂದ ಬರಬೇಕು. ರಾಷ್ಟ್ರಕ್ಕೆ ಗೌರವ ತೋರಿಸುವ ಕ್ರಿಯೆಯನ್ನು ಸಾಂಸ್ಥೀಕರಣಗೊಳಿಸುವ ಈ ಪ್ರಕ್ರಿಯೆಯಿಂದ ಹೆಚ್ಚಿನದೇನೂ ಸಾಧನೆಯಾಗದು.

ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಸಿನಿಮಾ ಪ್ರೇಕ್ಷಕರು ಎದ್ದು ನಿಲ್ಲಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಪಾಲನೆ ವಾಸ್ತವದಲ್ಲಿ ಕ್ಲಿಷ್ಟಕರವಾದದ್ದು. ಈ ಕಾನೂನು ಉಲ್ಲಂಘಿಸುವ ಜನಸಾಮಾನ್ಯರ ವಿರುದ್ಧ  ಕ್ರಮ ಜಾರಿಗೊಳಿಸುವುದು  ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಲಿದೆ. ಏಕೆಂದರೆ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ಅಧಿಕಾರಿಗಳಿಗೆ ಈಗಾಗಲೇ ಸಾಕಷ್ಟು ಕೆಲಸಗಳ ಒತ್ತಡವಿದೆ.

ಜೊತೆಗೆ ಈಗಾಗಲೇ ರಾಷ್ಟ್ರದ ವಿವಿಧ ಭಾಗಗಳಲ್ಲಿ ರಾಷ್ಟ್ರಗೀತೆ ಹಾಡುವಾಗ ಗೌರವ ಸೂಚಿಸಲಿಲ್ಲ ಎಂಬ ಕಾರಣಕ್ಕಾಗಿ ಅನೇಕ ವಿವಾದಗಳು ಸೃಷ್ಟಿಯಾಗಿವೆ. ಹಲ್ಲೆ ಪ್ರಕರಣಗಳೂ ನಡೆದಿವೆ. ಈಗ ಮತ್ತೆ ಕಾನೂನು ಕೈಗೆತ್ತಿಕೊಂಡು ಹಲ್ಲೆ ನಡೆಸಬಹುದಾದಂತಹ ವಿವಾದಾತ್ಮಕ ಪ್ರಕರಣಗಳು ಹೆಚ್ಚಾಗುವ ಭೀತಿಯಂತೂ ಇದೆ. ರಾಷ್ಟ್ರಗೀತೆಗೆ ಅದರದೇ ಪಾವಿತ್ರ್ಯ ಇದೆ ಎಂಬುದನ್ನು ಮರೆಯಲಾಗದು. ನಾಗರಿಕರು ತಮ್ಮದೇ ರೀತಿಯಲ್ಲಿ ರಾಷ್ಟ್ರೀಯತೆಯನ್ನು ವ್ಯಕ್ತಪಡಿಸುತ್ತಾರೆ. ಇದಕ್ಕಾಗಿ ಯಾವುದೇ ರೀತಿಯ ಒತ್ತಡ ಹೇರುವುದು ಪ್ರತಿಕೂಲ ಪರಿಣಾಮಗಳಿಗೆ ನಾವೇ ದಾರಿ ಮಾಡಿಕೊಟ್ಟಂತೆ ಆಗುತ್ತದೆ. 

1962ರಲ್ಲಿ ಚೀನಾ ಜೊತೆ ಭಾರತ ಯುದ್ಧದ ನಂತರ ರಾಷ್ಟ್ರಗೀತೆಯನ್ನು ಸಿನಿಮಾ ಮಂದಿರಗಳಲ್ಲಿ ಸಿನಿಮಾ ಪ್ರದರ್ಶನದ ನಂತರ ದಶಕಗಳಿಗೂ ಹೆಚ್ಚು ಕಾಲ ನುಡಿಸಲಾಗುತ್ತಿತ್ತು. ಆದರೆ ಆಗಲೂ ಎಲ್ಲಾ  ಜನರೂ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲು ನಿಲ್ಲುತ್ತಿರಲಿಲ್ಲ ಎಂಬುದನ್ನು ನೆನಪಿಸಿಕೊಳ್ಳಬಹುದು. ನಂತರ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸುವ ಈ ಅಭ್ಯಾಸ ನಿಂತಿತ್ತು.

ರಾಷ್ಟ್ರೀಯತೆಯನ್ನು ಒತ್ತಡಪೂರ್ವಕವಾಗಿ ಹೇರುವುದು ಭಾರತದ ಜೀವಾಳವಾದ ಬಹು ಅಸ್ಮಿತೆ, ಸಂಸ್ಕೃತಿಗಳಿಗೆ ಮಾರಕ. ನ್ಯಾಯಾಂಗದಲ್ಲಿ ಇತ್ಯರ್ಥಕ್ಕೆ ಕಾದು ಕುಳಿತಿರುವ  ತುರ್ತು ಪ್ರಕರಣಗಳು ಬೇಕಾದಷ್ಟಿವೆ. ಆದರೆ ಅದನ್ನೆಲ್ಲಾ ಬದಿಗಿರಿಸಿ, ಹುಸಿ ರಾಷ್ಟ್ರೀಯತೆಯನ್ನು ಬೋಧಿಸುವ ಈ ತೀರ್ಪನ್ನು ತುರ್ತಾಗಿ ನೀಡಿರುವುದು ವಿಪರ್ಯಾಸದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT