ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡವನ್ನೂ ಒಳಗೊಂಡಂತೆ ಮಾತೃಭಾಷಾ ಶಾಲೆಗಳಲ್ಲಿ ಇಂಗ್ಲಿಷ್ ಒಂದನೇ ತರಗತಿಯಿಂದಲೇ ಒಂದು ಕಡ್ಡಾಯ ವಿಷಯವಾಗಬೇಕು

Last Updated 2 ಡಿಸೆಂಬರ್ 2016, 13:47 IST
ಅಕ್ಷರ ಗಾತ್ರ

ರಾಯಚೂರು: ಕನ್ನಡಕ್ಕೆ ಸಾವಿಲ್ಲ; ಸವಾಲುಗಳಿವೆ. ಈ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಕನ್ನಡಿಗರಿಗೆ ಕೊಟ್ಟರೆ ಕನ್ನಡದ ಕಂಟಕಗಳಿಗೆ ಅವರೇ ಸವಾಲು ಎಸೆಯುತ್ತಾರೆ. ಹಾಗಾದರೆ  ಕನ್ನಡಿಗರಿಗೆ ನಾವು ಕೊಡಬೇಕಾದ ಶಕ್ತಿ ಯಾವುದು? ಬದುಕುವ ಶಕ್ತಿ; ಸಾಮಾಜಿಕ ಶಕ್ತಿ; ಆರ್ಥಿಕ ಶಕ್ತಿ; ಶಿಕ್ಷಣದ ಶಕ್ತಿ; ಉದ್ಯೋಗ ಶಕ್ತಿ; ಹಸಿವುಮುಕ್ತ ಶಕ್ತಿ; ಸಮಾನತೆಯ ಶಕ್ತಿ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ರಾಯಚೂರಿನಲ್ಲಿ ನಡೆಯುತ್ತಿರುವ 82ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನನ್ನ ಅಧಿಕೃತ ಭಾಷಣವನ್ನು ಒಂದು ಸಂಕಟದ ಸಂವೇದನೆಯೊಂದಿಗೆ ಆರಂಭಿಸುತ್ತೇನೆ. ಸಂವೇದನೆ ಎಂಬ ಪದದಲ್ಲೇ ‘ವೇದನೆಯಿದೆ. ವೇದನೆ ಮತ್ತು ಸಂವೇದನೆ ಒಂದಾದ ಕಾಲಘಟ್ಟ ನಮ್ಮದು. ಅಷ್ಟೇಕೆ ವೇದನೆಯೇ ಸಂವೇದನೆಯಾಗುತ್ತಿರುವ ವೈರುಧ್ಯ ವಲಯವೂ ನಮ್ಮದು ಎಂದಿದ್ದಾರೆ.


ಸಮ್ಮೇಳನಾಧ್ಯಕ್ಷರ ಭಾಷಣ ಮುಖ್ಯಾಂಶಗಳು

  • ಮೇಲ್ ಸೇತುವೆ ಅಲ್ಲ, ಮನೋ ಸೇತುವೆ ನಿರ್ಮಾಣವಾಗಬೇಕು

ಅಭಿವೃದ್ಧಿಯ ಅಸಮತೋಲನವನ್ನು  ತಪ್ಪಿಸಲು, ಜನಮುಖಿ ನ್ಯಾಯದ ವೇಗವನ್ನು ವೃದ್ಧಿಸಲು, ರಾಜಧಾನಿ ಕೇಂದ್ರಿತ ಸಚಿವಾಲಯವನ್ನು ವಿಕೇಂದ್ರೀಕರಣಗೊಳಿಸಬೇಕು. ಅಂದರೆ ಕರ್ನಾಟಕದ ಪ್ರತಿ ಕಂದಾಯ ವಿಭಾಗಕ್ಕೊಂದು ಸಚಿವಾಲಯವನ್ನು ಸ್ಥಾಪಿಸಬೇಕು. ಸರ್ಕಾರದ ನೀತಿನಿಯಮಗಳಿಗೆ ಸಂಬಂಧಿಸಿದ ಮುಖ್ಯವಿಷಯಗಳನ್ನು ಮಾತ್ರ ರಾಜಧಾನಿ ಕೇಂದ್ರಿತ ಮಾಡಿ, ಉಳಿದೆಲ್ಲ ಅನುಷ್ಠಾನದ ಅಧಿಕಾರವನ್ನು ವಿಭಾಗೀಯ ಸಚಿವಾಲಯಗಳಿಗೆ ಕೊಡಬೇಕು; ಕೇವಲ ಅಧಿಕಾರ ಕೊಟ್ಟರೆ ಸಾಲದು; ಬಜೆಟ್ ಹಂಚಿಕೆಯನ್ನು ಅಧಿಕೃತಗೊಳಿಸಬೇಕು. ರಾಜ್ಯ ಮಂತ್ರಿಮಂಡಲದ ನಿರ್ಣಯಗಳನ್ನು ಆಯಾ ವಿಭಾಗದ ಮಂತ್ರಿಗಳ ಉಪಸಮಿತಿಯು ಅನುಷ್ಠಾನಗೊಳಿಸುವ ಜವಾಬ್ದಾರಿ ಹೊರಬೇಕು.  ನೀತಿ ನಿಯಮ ನಿರ್ಧಾರಗಳನ್ನು ಹೊರತು ಪಡಿಸಿ ವಿಭಾಗೀಯ  ಸಚಿವಾಲಯಗಳು ಸಾಯತ್ವ ಸ್ವರೂಪದಲ್ಲಿ  ಕೆಲಸ ಮಾಡುವಂತಾಗಬೇಕು.

ಬೆಂಗಳೂರಲ್ಲಿ ಸುಗಮ ಸಂಚಾರಕ್ಕೆ ‘ಮೇಲ್ ಸೇತುವೆಗಳನ್ನು ನಿರ್ಮಿಸುವ ಸರ್ಕಾರ, ಕರ್ನಾಟಕದಾದ್ಯಂತ ‘ಮನೋ ಸೇತುವೆಗಳನ್ನು  ನಿರ್ಮಿಸಬೇಕಾಗಿದೆ.

ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುವ ನೀತಿಗಳಿಂದ ಅಧಿಕಾರ ಮೊಟಕಾಗುವುದು ಮತ್ತು ಆರ್ಥಿಕ ಶಕ್ತಿ ಕುಗ್ಗುವುದಷ್ಟೇ ಸಮಸ್ಯೆಯಲ್ಲ. ಶೈಕ್ಷಣಿಕವಾಗಿ, ಭಾಷಿಕವಾಗಿ, ಸಾಂಸ್ಕೃತಿಕವಾಗಿ ಸಮಸ್ಯೆಗಳು ಎದುರಾಗುತ್ತವೆ. ಕೇಂದ್ರ ಕೃಪಾಪೋಷಿತ ಶಿಕ್ಷಣವೇ ಶ್ರೇಷ್ಠವೆಂಬ ಭ್ರಮೆ ಬೆಳೆಯುತ್ತಲೇ ಇರುವುದನ್ನು ಈಗ ಗಮನಿಸಬಹುದು. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನೂ ರಾಷ್ಟ್ರಮಟ್ಟದಲ್ಲಿ ಕೇಂದ್ರೀಕರಿಸಿಕೊಂಡಿದ್ದು ರಾಜ್ಯಗಳ ಹಕ್ಕು ಮೊಟಕಾಗಿರುವುದನ್ನೂ ನೋಡಬಹುದು. ನಾನಿಲ್ಲಿ ಪ್ರತಿಪಾದಿಸುತ್ತಿರುವುದು ಕೇಂದ್ರ ಸರ್ಕಾರದ ಮಧ್ಯಪ್ರವೇಶ ಬೇಡವೇ ಬೇಡ ಎಂದಲ್ಲ. ಒಕ್ಕೂಟ ವ್ಯವಸ್ಥೆಯೆನ್ನುವುದು ಕೇಂದ್ರೀಕೃತ ಪದ್ಧತಿಗೆ ವಿರುದ್ಧವಾದುದು ಎಂಬ ವಿವೇಕದಿಂದ ನಡೆದುಕೊಳ್ಳಬೇಕು ಎಂದು ಹೇಳಬಯಸುತ್ತೇನೆ. 

  • ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ

ಇಡಿ ರಾಷ್ಟ್ರದಲ್ಲಿಯೇ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮಕ್ಕೆ ಅವಕಾಶವಾಗುವಂತೆ ಸಂವಿಧಾನದ ತಿದ್ದುಪಡಿಗೆ ಪ್ರಯತ್ನಿಸುವುದು ಮುಖ್ಯ. ಈ ದಿಕ್ಕಿನಲ್ಲಿ ವಿವಿಧ ರಾಜ್ಯಗಳ ಸಮಾನ ಮನಸ್ಕರು ಸಂಘಟಿತರಾಗಬೇಕು. ಸಂಸದರ ಮತ್ತು ಕೇಂದ್ರ ಸರ್ಕಾರದ  ಮನವೊಲಿಸಬೇಕು. ಈ ಕೆಲಸಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು  ಕರ್ನಾಟಕ  ಸರ್ಕಾರವು ನಾಂದಿ  ಹಾಡಬೇಕು. ದೇಶದ ಶಿಕ್ಷಣ ತಜ್ಞರು, ಸಾಮಾಜಿಕ ಚಿಂತಕರು, ಸಾಮಾಜಿಕ ಕಾರ್ಯಕರ್ತರ ಸಹಕಾರವನ್ನು ಪಡೆದು ಅಭಿಪ್ರಾಯ ಮೂಡಿಸಬೇಕು. ವಿವಿಧ  ರಾಜ್ಯಗಳ ರಾಜಕೀಯ ಮುಖಂಡರಿಗೂ  ಮನವರಿಕೆ  ಮಾಡಿಕೊಡಬೇಕು. ಈ ದಿಕ್ಕಿನ ಮೊದಲ ಹೆಜ್ಜೆಯಾಗಿ ವಿವಿಧ ರಾಜ್ಯಗಳ ನೇತಾರರ, ಚಳವಳಿಗಾರರ ಮತ್ತು ಚಿಂತಕರ ಸಭೆಯನ್ನು ಕರೆದು ಚರ್ಚಿಸಿ ಚಾಲನೆ  ನೀಡಬೇಕು. ಜೊತೆಗೆ ಸಾರ್ವಜನಿಕರಿಗೆ ವಸ್ತುಸ್ಥಿತಿಯನ್ನು ತಿಳಿಸಿ  ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮ ಕಡ್ಡಾಯವಾದರೆ ಮಕ್ಕಳ ಭವಿಷ್ಯಕ್ಕೆ ಧಕ್ಕೆಯಾಗುವುದಿಲ್ಲವೆಂಬುದನ್ನು ಮನವರಿಕೆ ಮಾಡಿಕೊಡಬೇಕು.

೧. ವಿವಿಧ ಮಾದರಿ ಶಾಲೆಗಳನ್ನು ಬಿಡಿ ಬಿಡಿಯಾಗಿ ಸ್ಥಾಪಿಸಿ ಮಕ್ಕಳಲ್ಲಿ ತಾರತಮ್ಯ ಮಾಡುವ ಬದಲು ಪ್ರತಿ ಗ್ರಾಮಪಂಚಾಯಿತಿಗೊಂದು ಸುಸಜ್ಜಿತ ಹಾಗೂ ಸಮಸ್ತ ಸೌಲಭ್ಯಗಳುಳ್ಳ ಏಕರೂಪದ ಮಾದರಿ ಶಾಲೆಯನ್ನು  ಸ್ಥಾಪಿಸಬೇಕು. ಈ ಶಾಲೆಯು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ಒಳಗೊಂಡಿರಬೇಕು. ಉಳಿದ ಹಳ್ಳಿಗಳಲ್ಲಿ ಅಗತ್ಯಕ್ಕನುಗುಣವಾಗಿ ಕಿರಿಯ ಪ್ರಾಥಮಿಕ ಶಾಲೆಗಳಿರಬೇಕು. ಗ್ರಾಮಪಂಚಾಯಿತಿಗೊಂದು ಇರುವ ಸುಸಜ್ಜಿತ ಶಾಲೆಗೆ ಹತ್ತಿರದ ಊರುಗಳಿಂದ ಮಕ್ಕಳು ಬರಲು ವಾಹನ ವ್ಯವಸ್ಥೆ ಮಾಡಬೇಕು. ನಗರ ಮತ್ತು ಪಟ್ಟಣಗಳಲ್ಲಿ ಪ್ರತಿ ವಾರ್ಡಿಗೊಂಡು ಇಂತಹ ಶಾಲೆಯನ್ನು ಸ್ಥಾಪಿಸಬೇಕು. ಈ ಕೆಲಸವನ್ನು ಸಮರೋಪಾದಿಯಲ್ಲಿ ಮಾಡಿ ಸಮಾನ ಶಿಕ್ಷಣಕ್ಕೆ ಬುನಾದಿ ಹಾಕಬೇಕು. ಶಿಕ್ಷಣದ ಹೊಣೆ ಪೂರ್ಣವಾಗಿ ಶಿಕ್ಷಣ ಇಲಾಖೆಯದಾಗಿರಬೇಕು.

೨ ಕನ್ನಡವನ್ನೂ ಒಳಗೊಂಡಂತೆ ಮಾತೃಭಾಷಾ ಶಾಲೆಗಳಲ್ಲಿ ಇಂಗ್ಲಿಷ್ ಒಂದನೇ ತರಗತಿಯಿಂದಲೇ ಒಂದು ಕಡ್ಡಾಯ ವಿಷಯವಾಗಬೇಕು. ಕನ್ನಡೇತರ ಶಾಲೆಗಳಲ್ಲಿ ಕನ್ನಡ ಒಂದು ಕಡ್ಡಾಯ ವಿಷಯವಾಗಬೇಕು.
೩. ಬಹುಮುಖ್ಯವಾಗಿ, ಸರ್ಕಾರವು  ಪ್ರಾಥಮಿಕ ಪೂರ್ವ ಶಾಲೆಗಳನ್ನು ಸ್ಥಾಪಿಸಬೇಕು. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಅಂಗನವಾಡಿಗಳನ್ನು ಪ್ರಾಥಮಿಕ ಪೂರ್ವ ಶಾಲೆಗಳಾಗಿ ರೂಪಾಂತರಿಸಿ ಕ್ರಮಬದ್ಧಗೊಳಿಸುವಂತೆ ಮಾಡಿದ ಶಿಫಾರಸ್ಸಿಗೆ   ಅಂದಿನ ಸರ್ಕಾರ  ತಾತ್ವಿಕ ಒಪ್ಪಿಗೆ  ನೀಡಿತ್ತು. ‘ಎಲ್.ಕೆ.ಜಿ. ಯು.ಕೆ.ಜಿ.ಯಂತೆ ಪ್ರಾಥಮಿಕ ಪೂರ್ವ ಶಾಲೆಗಳನ್ನು ಆರಂಭಿಸಿ ಆನಂತರ ಒಂದನೇ ತರಗತಿಯಿಂದ ಮಾತೃಭಾಷೆ ಅಥವಾ ರಾಜ್ಯಭಾಷಾಮಾಧ್ಯಮದ ಜೊತೆಗೆ ಇಂಗ್ಲಿಷನು ಒಂದು ಭಾಷೆಯಾಗಿ ಕಲಿಸಿದರೆ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಾಕಷ್ಟು ಕೊಡುಗೆ ನೀಡಿದಂತಾಗುತ್ತದೆ. ಇದೇ ಸಂದರ್ಭದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನೂ ಒದಗಿಸಬೇಕು. ಎಲ್.ಕೆ.ಜಿ; ಯು.ಕೆ.ಜಿ. ಮತ್ತು ಸರ್ಕಾರಿ ಪ್ರಾಥಮಿಕ ಪೂರ್ವ ಶಾಲೆಗಳಿಗೆ ಏಕರೂಪದ ಹೊಸ ಕಾಯಿದೆ ರೂಪಿಸಬೇಕು.
೪. ಮಾತೃಭಾಷೆ ಅಥವಾ ರಾಜ್ಯ ಭಾಷಾ ಶಿಕ್ಷಣ ಮಾಧ್ಯಮವನ್ನು ಜಾರಿಗೆ ತರಲು ಸಂವಿಧಾನ ತಿದ್ದುಪಡಿಗೆ ಒತ್ತಾಯ ಮತ್ತು ಹೋರಾಟಕ್ಕೆ ಅಣಿಯಾಗುವುದರ ಜೊತೆಗೆ ಯಾವುದೇ ಭಾಷಾ ಮಾಧ್ಯಮದ ಶಾಲೆಗಳಲ್ಲಿ ಕನ್ನಡದ ಪರಿಸರವನ್ನು ನಿರ್ಮಾಣ ಮಾಡುವ ಕುರಿತು ಪರ್ಯಾಯ ಮಾರ್ಗಗಳನ್ನು ಶೋಧಿಸಬೇಕು. ಈ ವಿಷಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು, ಕನ್ನಡ ಕಾರ್ಯಕ್ರಮಗಳ ಆಯೋಜನೆ, ಕನ್ನಡ  ಸಾಂಸ್ಕೃತಿಕ   ಸಾಧಕರೊಂದಿಗೆ ಸಂವಾದ, ಕನ್ನಡ ರಾಜ್ಯೋತ್ಸವದ ಕಡ್ಡಾಯ ಆಚರಣೆ, ಕನ್ನಡ ಭಾಷಾಧಾರಿತ ವಿವಿಧ ಸ್ಪರ್ಧೆ ಇತ್ಯಾದಿಗಳನ್ನು ಇಂತಿಷ್ಟು ನಡೆಸಬೇಕೆಂಬ ನಿಯಮಾವಳಿಯು ಶಾಲಾ  ಮಂಜೂರಾತಿಯ ಭಾಗವಾಗಬೇಕು. ಹೀಗೆ ಕನ್ನಡ ಪರಿಚಯ ಮತ್ತು ಪರಿಸರವನ್ನು  ಕಾಪಾಡುವ ಕೆಲಸವಾಗಬೇಕು.
೫. ಪ್ರಾಥಮಿಕ ಶಿಕ್ಷಣದಲ್ಲಿ ವಿಷಯವಾರು ಅಧ್ಯಾಪಕರನ್ನು ನೇಮಿಸಿಕೊಳ್ಳಬೇಕು, ಪ್ರಾಥಮಿಕ ಶಿಕ್ಷಣವನ್ನು ಅನಗತ್ಯ ಪ್ರಯೋಗಗಳ  ಬಲಿಪೀಠದ ಮೇಲೆ ಪ್ರತಿಷ್ಠಾಪಿಸಬಾರದು.
೬. ಶಾಲೆಗಳಲ್ಲಿ ಕಲಿಸುವ ವ್ಯಾಕರಣದ ಬಗ್ಗೆ ಮರುಚಿಂತನೆ ನಡೆದು ‘ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣ ಎಂಬ ಪರಿಕಲ್ಪನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ಬಗ್ಗೆ ತಜ್ಞರ ಜೊತೆ ಸಮಾಲೋಚಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕು.

  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ

ಆದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ ಮಾಡಬೇಕಾದ ಕೆಲಸ ಸಾಕಷ್ಟಿದೆ. ಕನ್ನಡವನ್ನು ತಂತ್ರಜ್ಞಾನದ  ಭಾಷೆಯನ್ನಾಗಿ ವಿಸ್ತರಿಸುವ ಯೋಜನೆಗಳನ್ನು ಸರ್ಕಾರವು ತೀವ್ರಗತಿಯಲ್ಲಿ ಕೈಗೆತ್ತಿಕೊಳ್ಳಬೇಕಾಗಿದೆ. ಭಾಷಾಶಾಸ್ತ್ರೀಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಅಗತ್ಯವೂ ಇದೆ. ಇದಕ್ಕಾಗಿ ಕರ್ನಾಟಕ ಸರ್ಕಾರವು ‘ಯೂನಿಕೋಡ್ ಕನ್ಸಾರ್ಟಿಯಂ ಎಂಬ ಜಾಗತಿಕ ಸಂಸ್ಥೆಯಲ್ಲಿ ಪೂರ್ಣ  ಪ್ರಮಾಣದ ಸದಸ್ಯತ್ವದ  ಮೂಲಕ ಮತ ಚಲಾವಣೆಯ ಹಕ್ಕನ್ನು ಪಡೆಯಬೇಕು. ಇದರಿಂದ ಜಾಗತಿಕ ಸಂಸ್ಥೆಯಲ್ಲಿ ಕನ್ನಡದ ಸಮಸ್ಯೆಗಳನ್ನು ಗಮನಕ್ಕೆ ತಂದು ಸರಿಪಡಿಸಬಹುದು. ಕಂಪ್ಯೂಟರ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಕೆಯಾಗುವ ಕನ್ನಡ ಅಕ್ಷರಗಳು ಮತ್ತು ತಂತ್ರಜ್ಞಾನದ ಶಿಷ್ಟತೆಯನ್ನು ರೂಪಿಸುವುದಕ್ಕೆ ಒಂದು ಶಾಶ್ವತ ಸಲಹಾ ಸಮಿತಿಯನ್ನು ರಚಿಸಬೇಕು. ಇದರಲ್ಲಿ ಭಾಷಾ ತಜ್ಞರು ಜೊತೆಗೆ ತಂತ್ರಜ್ಞರು ಇರಬೇಕು.

ಕರ್ನಾಟಕದಲ್ಲಿ ದೇಶದ ಯಾವುದೇ ರಾಜ್ಯದಲ್ಲಿ ಇರುವುದಕ್ಕಿಂತ ಹೆಚ್ಚು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿದ್ದರೂ ಅವುಗಳಿಂದ ಕನ್ನಡಕ್ಕೆ ಆಗಿರುವ ಅನುಕೂಲ ಸೊನ್ನೆಯೆಂದೇ ಹೇಳಬೇಕು. ಈ ಸಂಸ್ಥೆಗಳನ್ನು ಕನ್ನಡಕ್ಕಾಗಿ ತೊಡಗಿಸಿಕೊಳ್ಳುವ ಕೆಲಸವಾಗಬೇಕು, ಜೊತೆಗೆ ಕರ್ನಾಟಕ ಸರ್ಕಾರವು ತಂತ್ರಾಂಶ ನೀತಿಯಲ್ಲಿ ಭಾಷೆಗೆ ಒತ್ತು ನೀಡುವ ಅಂಶವನ್ನು ಅಳವಡಿಸಿಕೊಳ್ಳಬೇಕು, ಸರ್ಕಾರದ ಇ- ಇಲಾಖೆಯ ಕನ್ನಡ ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ಒಟ್ಟಾರೆ ಕನ್ನಡವನ್ನು ಮಾಹಿತಿ ತಂತ್ರಜ್ಞಾನದ ಭಾಷೆಯನ್ನಾಗಿ ಸಜ್ಜುಗೊಳಿಸುವ ಕೆಲಸವು ಪ್ರತ್ಯೇಕ ವಿಭಾಗ ಹಾಗೂ ತಂಡದ ಮೂಲಕ ಯೋಜನಾ ಬದ್ಧವಾಗಿ ಶೀಘ್ರಗತಿಯಲ್ಲಿ ನಡೆಯಬೇಕು, ಇದು ಕನ್ನಡವನ್ನು ತಂತ್ರಜ್ಞಾನದ ಸಂದರ್ಭದಲ್ಲಿ ಬೆಳೆಸುವ ಕ್ರಮ.
ಹೀಗೆ ಕನ್ನಡ ಮತ್ತು ತಂತ್ರಜ್ಞಾನದ ಸಂಬಂಧ ಮತ್ತು ಪ್ರಗತಿಯನ್ನು ಗಟ್ಟಿಗೊಳಿಸುವ ಯೋಜನೆಗಳನ್ನು ಕಾರ್ಯಗತಗೊಳಿಸುವ ಬದಲು  ಶಿಕ್ಷಣದಲ್ಲಿ ಅಗತ್ಯಮೀರಿ ತಂತ್ರಜ್ಞಾನದ ಸರ್ವಾಧಿಕಾರ ಸ್ಥಾಪಿಸುವುದು ಸರಿಯಲ್ಲ. ಕಂದಕ ನಿರ್ಮಾಣವೂ ಸೂಕ್ತವಲ್ಲ.

  • ವೃತ್ತಿ ಶಿಕ್ಷಣ

ಈಗಲಾದರೂ ಸರ್ಕಾರವು ವೃತ್ತಿ ಶಿಕ್ಷಣವನ್ನೂ ಒಳಗೊಂಡಂತೆ ಒಟ್ಟು ಉನ್ನತ ಶಿಕ್ಷಣದಲ್ಲಿ ಕನ್ನಡದ ಸ್ಥಾನವನ್ನು ಗಟ್ಟಿಗೊಳಿಸಬೇಕು. ಕುಂಟು ನೆಪಗಳನ್ನು ಕೈಬಿಡಬೇಕು. ಒಟ್ಟು ಶಿಕ್ಷಣದಲ್ಲಿ ಆಯಾ ಕೋರ್ಸುಗನುಸಾರ ಉಚಿತ ರೀತಿಯಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಉನ್ನತ ಶಿಕ್ಷಣದ ಕಾರ್ಪೋರೇಟರೀಕರಣದ ಬದಲು ಕರ್ನಾಟಕೀಕರಣ ಮಾಡಬೇಕು. ಬಹುತ್ವದ ಭಾರತೀಕರಣವಾಗಬೇಕು.

  • ಭಾಷಾ ಹೋರಾಟ

ಕನ್ನಡಕ್ಕೆ ಸಾವಿಲ್ಲ; ಸವಾಲುಗಳಿವೆ. ಈ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಕನ್ನಡಿಗರಿಗೆ ಕೊಟ್ಟರೆ ಕನ್ನಡದ ಕಂಟಕಗಳಿಗೆ ಅವರೇ ಸವಾಲು ಎಸೆಯುತ್ತಾರೆ. ಹಾಗಾದರೆ  ಕನ್ನಡಿಗರಿಗೆ ನಾವು ಕೊಡಬೇಕಾದ ಶಕ್ತಿ ಯಾವುದು? ಬದುಕುವ ಶಕ್ತಿ; ಸಾಮಾಜಿಕ ಶಕ್ತಿ; ಆರ್ಥಿಕ ಶಕ್ತಿ; ಶಿಕ್ಷಣದ ಶಕ್ತಿ; ಉದ್ಯೋಗ ಶಕ್ತಿ; ಹಸಿವುಮುಕ್ತ ಶಕ್ತಿ; ಸಮಾನತೆಯ ಶಕ್ತಿ.
ಅಂದರೆ ನಮ್ಮ ಭಾಷಾ ಹೋರಾಟಗಳು ಸಾಮಾಜಿಕ ಹೋರಾಟಗಳೂ ಆಗಬೇಕು. ಬದುಕಿನ ಅಗತ್ಯಗಳಿಗೂ ಭಾಷೆಗೂ ಇರುವ ಅಂತರ್ ಸಂಬಂಧವನ್ನು ಗ್ರಹಿಸಿದ ತಾತ್ವಿಕತೆ ಕೇಂದ್ರಪ್ರಜ್ಞೆಯಾಗಬೇಕು. ಸಮೂಹ ಸನ್ನಿಯಾಗದ ಸಮೂಹ ಪ್ರಜ್ಞೆ ಬೇಕು. ಭಾಷೆಯನ್ನು ಉಳಿಸುವುದೆಂದರೆ ಬದುಕನ್ನು ಉಳಿಸುವುದು, ಬದುಕನ್ನು ಉಳಿಸುವುದೆಂದರೆ ಭಾಷೆಯನ್ನು ಉಳಿಸುವುದು ಎಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT