ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಡ್ಸ್‌ರಹಿತ ವಿಶ್ವಕ್ಕಾಗಿ ‘ಕೈಗಳನ್ನು ಮೇಲೆತ್ತಿ’

Last Updated 2 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಏಡ್ಸ್ ಎಂಬ ಸೊಂಕು ಮೊದಲ ಬಾರಿ ಕಾಣಿಸಿಕೊಂಡದ್ದು 1982ರಲ್ಲಿ; ಬಳಿಕ ಅದೊಂದು ದೊಡ್ಡ ಪಿಡುಗಾಗಿ ಬೆಳೆಯಿತು. 1988ರಿಂದ ಪ್ರತಿ ವರ್ಷ ಡಿಸೆಂಬರ್ ಒಂದರಂದು ಏಡ್ಸ್ ದಿನಾಚರಣೆಯನ್ನು ಆಚರಿಸುತ್ತಿದ್ದು, ಡಿಸೆಂಬರ್ ಮಾಸವನ್ನು ‘ಏಡ್ಸ್ ಜಾಗೃತಿ ಮಾಸ’ವಾಗಿ ಆಚರಿಸುತ್ತಾ ಹಲವು ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳುತ್ತಿದ್ದರೂ, ಸುಮಾರು ಹದಿನೆಂಟು ಕೋಟಿಗೂ ಹೆಚ್ಚು ಮಂದಿ ಎಚ್.ಐ.ವಿ. ವಿರುದ್ಧದ ಚಿಕಿತ್ಸೆ ಪಡೆಯುತ್ತಿದ್ದರೂ, ತಾಯಿಯಿಂದ ಮಗುವಿಗೆ ಸೊಂಕು ಹರಡುವುದನ್ನು ತಪ್ಪಿಸುವ ಪ್ರಯತ್ನವಾಗುತ್ತಿದ್ದರೂ, ಹೊಸದಾಗಿ ಎಚ್.ಐ.ವಿ. ಸೋಂಕು ಹರಡುವ ಸಂಖ್ಯೆ ಇನ್ನೂ ಗಮನಾರ್ಹವಾಗಿ ಕಡಿಮೆಯಾಗಬೇಕಾದಷ್ಟು ಇಳಿದಿಲ್ಲ ಎನ್ನುವುದು ಕಹಿ ಸಂಗತಿ. ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಸುಮಾರು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗುವುದು ಹೆಚ್ಚಾಗುತ್ತಿದೆ.

ಹಿಂದುಳಿದ ದೇಶಗಳಲ್ಲಿ ಸೋಂಕು ಪತ್ತೆಯಾಗುವುದೂ ಕಡಿಮೆ, ಪತ್ತೆಯಾದವರು ಚಿಕಿತ್ಸೆಯ ಪರಿಮಿತಿಗೂ ಒಳಪಡುವುದಿಲ್ಲ.  ಮಹಿಳೆಯರಲ್ಲಂತೂ ಎಚ್.ಐ.ವಿ. ಸೊಂಕು ಇರುವುವರಲ್ಲಿ ಗರ್ಭ ಕೊರಳಿನ ಕ್ಯಾನ್ಸರ್‌ಗೆ ಒಳಗಾಗುವ ಸಂಭವ ನಾಲ್ಕರಿಂದ ಐದು ಪಟ್ಟು ಹೆಚ್ಚು. ಜೊತೆಗೆ ಕ್ಷಯರೋಗ, ಹೆಪಟೈಟಿಸ್ ಸಿ, ಕಾಯಿಲೆಗೆ ತುತ್ತಾಗುವ ಸಂಭವವೂ ಹೆಚ್ಚು. ಈ ಅಂಶಗಳನ್ನು ಅವಲೋಕಿಸಿದರೆ 2030ರ ಹೊತ್ತಿಗೆ ಏಡ್ಸ್ ಎಂಬ ಸಾಂಕ್ರಾಮಿಕದಿಂದ ಜಗತ್ತನ್ನು ಮುಕ್ತಗೊಳಿಸುವುದೂ ಕನಸಾಗಿಯೇ ಉಳಿಯುತ್ತದೆ; 2020ರ ಹೊತ್ತಿಗೆ ಏಡ್ಸ್‌ನಿಂದ ಸಾಯುವವರ ಸಂಖ್ಯೆಯನ್ನು ಐದು ಲಕ್ಷಕ್ಕೂ ಕಡಿಮೆ ಮಾಡಬೇಕೆಂಬ ಸಂಕಲ್ಪವನ್ನು ಜಾರಿಗೆ ತರುವುದು ಅಸಾಧ್ಯವಾಗುತ್ತದೆ.

ಏಡ್ಸ್‌ಮುಕ್ತ ವಿಶ್ವವಾಗಬೇಕಾದರೆ ಹುಟ್ಟಿನಿಂದ ವೃದ್ಧಾಪ್ಯದವರೆಗೆ ಜೀವನದ ಪ್ರತಿ ಹಂತದಲ್ಲೂ ಎಚ್.ಐ.ವಿ. ಸೋಂಕು ಬರದ ಹಾಗೆ, ಹರಡದ ಹಾಗೆ ಮುಂಜಾಗ್ರತೆ ವಹಿಸಬೇಕು; ಅಂದರೆ ತಾಯಿಯಿಂದ ಮಗುವಿಗೆ ಹರಡುವ ಸೋಂಕು ಕಡಿಮೆ ಆಗಿ ಎಲ್ಲ ಮಕ್ಕಳು ಸೋಂಕುರಹಿತ ಜೀವನವನ್ನು ಪ್ರಾರಂಭಿಸಬೇಕು. ಯೌವನದಲ್ಲೂ, ಪ್ರೌಢಾವಸ್ಥೆಯಲ್ಲೂ ಸೋಂಕು ತಗಲದಂತೆ ಎಚ್ಚರ ವಹಿಸಬೇಕು. 2011–15ರವರೆಗೆ ಏಡ್ಸ್ ದಿನಾಚರಣೆಯ ಘೋಷವಾಕ್ಯವು ಶೂನ್ಯವನ್ನು ಸಾಧಿಸುವತ್ತ ಎಂದಾಗಿತ್ತು. ಈ ಬಾರಿ ಯೂನಿ ಏಡ್ಸ್‌ನ ಘೋಷವಾಕ್ಯ ‘ಎಚ್.ಐ.ವಿ. ಸೋಂಕು ತಡೆಗಟ್ಟಲು ಕೈಗಳನ್ನು ಮೇಲೆತ್ತಿ’ ಎನ್ನುವುದು.

ಎಚ್.ಐ.ವಿ. ಮತ್ತು ಏಡ್ಸ್‌
ಎಚ್.ಐ.ವಿ. ಎಂದರೇನು? ಏಡ್ಸ್ ಎಂದರೇನು? ಹೇಗೆಲ್ಲಾ ಹರಡುತ್ತದೆ ಎಂದು ಈ ಸಂದರ್ಭದಲ್ಲಿ ಪುನಃ ಅವಲೋಕಿಸಲೇಬೇಕು. ಎಚ್.ಐ.ವಿ. ಎಂದರೆ ಹ್ಯೂಮನ್ ಇಮ್ಯೂನೋ ಡಿಫಿಷಿಯೆನ್ಸಿ ವೈರೆಸ್ ಮನುಷ್ಯನಲ್ಲಿ ರೋಗನಿರೋಧಕ ಶಕ್ತಿಯ ಹರಣವನ್ನು ಮಾಡುವ ಒಂದು ವೈರಸ್. ಇದು ಮುಖ್ಯವಾಗಿ ರಕ್ತ, ವೀರ್ಯ, ಮಹಿಳೆಯಲ್ಲಾದರೆ ಯೋನಿದ್ರವಗಳಲ್ಲಿ ವಾಸ ಮಾಡಿಕೊಂಡಿರುತ್ತದೆ.  ಈ ಸೋಂಕು ಪತ್ತೆಯಾದರೆ ಅದನ್ನು ಎಚ್.ಐ.ವಿ. ಪಾಸಿಟಿವ್ ಎನ್ನುತ್ತಾರೆ. ಅಂದರೆ ಇದು ಏಡ್ಸ್ ಅಲ್ಲ.

ಹಾಗಾದರೆ ಏಡ್ಸ್ ಎಂದರೇನು? ಎಚ್.ಐ.ವಿ. ವೈರಸ್ ಮಾನವಶರೀರವನ್ನು ಪ್ರವೇಶಿಸಿದ ಮೇಲೆ ತನ್ನ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತಾ ಹೊಗಿ, ರೋಗನಿರೋಧಕ ಶಕ್ತಿಯನ್ನು ನೀಡುವ ಬಿಳಿ ರಕ್ತಕಣಗಳ ಮೇಲೆ ದಾಳಿ ಮಾಡಿ, ಸೀಡಿ–4ಕಣಗಳನ್ನು ಸಾಯುಸುತ್ತಾ, ರೋಗನಿರೋಧಕ ಶಕ್ತಿಯನ್ನು ಸಂಪೂರ್ಣವಾಗಿ ಕುಂದಿಸುತ್ತದೆ.  ಈ ಸಂದರ್ಭದಲ್ಲಿ ಇನ್ನಾವುದೇ ವ್ಯಾಧಿಕಾರಕ ಸೂಕ್ಷ್ಮಣುಜೀವಿಗಳು ದೇಹವನ್ನು ಪ್ರವೇಶಿಸಿದಾಗ ಅದನ್ನು ಎದುರಿಸಬೇಕಾದ ರಕ್ಷಣಾ ವ್ಯವಸ್ಥೆಯೇ ಇಲ್ಲದೇ ಸಣ್ಣ ಸಣ್ಣ ಸೋಂಕು ಕೂಡ ಮಾರಣಾಂತಿಕವಾಗಿ ಮಾರ್ಪಡುತ್ತದೆ.  ಇದನ್ನೇ ಏಡ್ಸ್ ಅಂದರೆ (ಎ.ಐ.ಡಿ.ಸ್-ಅಕ್ವಯರ್ಡ್‌ ಇಮ್ಯೂನೋ ಡಿಪಿಷಿಯನ್ಸಿ ಸಿಂಡ್ರೋಂ) ‘ಆರ್ಜಿತ ಕುಂದಿದ ರೋಗಲಕ್ಷಣಗಳ ಕೂಟ’ ಎನ್ನುವುದು.

ಎಚ್.ಐ.ವಿ. ಸೋಂಕಿನ ನಂತರ ಮನುಷ್ಯನಲ್ಲಿ ಸಿಡಿ ಕೌಂಟ್ (<200/ಎಂ. ಎ.ಂ ಕ್ಯೂಬಿಕ್) ಕಡಿಮೆ ಆದಾಗ ಏಡ್ಸ್‌ಗೆ ಪೂರ್ಣ ಬಾಗಿಲು ತೆರೆದ ಹಾಗೆ, ಕೆಲವರು ಒಂದೆರಡು ವರ್ಷದಲ್ಲಿಯೇ ಏಡ್ಸ್‌ನ ಸ್ಥಿತಿ ತಲುಪಿದರೆ ಕೆಲವರಲ್ಲಿ 10ರಿಂದ 12 ವರ್ಷಗಳಾದರೂ ಬೇಕಾಗಬಹುದು.

ಎಚ್.ಐ.ವಿ. ಸೋಂಕು ಹರಡುವ ನಾಲ್ಕು ಮುಖ್ಯ ವಿಧಾನಗಳು
* ಲೈಂಗಿಕ ಕ್ರಿಯೆಯಿಂದ ಶೇ.90 ಹೆಚ್ಚು
* ಸೋಂಕಿರುವವರಿಂದ ರಕ್ತದಾನ ಪಡೆದಾಗ. ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಒಂಬತ್ತು ಸಾವಿರಕ್ಕೂ ಹೆಚ್ಚು ಜನರು ರೋಗಿ ರಕ್ತದಾನ ಪಡೆದಿರುವುದರಿಂದ ಸೋಂಕಿಗೆ ತುತ್ತಾಗಿದ್ದಾರೆ – ಎಂದಿದೆ ರಾಷ್ಟ್ರೀಯ ನಿಯಂತ್ರಣ ಸಂಸ್ಥೆ (ನ್ಯಾಕೊಯ ಇತ್ತೀಚಿನ ವರದಿ.
* ತಾಯಿಯಿಂದ ಮಗುವಿಗೆ ಶೇ. 1/3 ರಷ್ಟು.
* ಮಾದ ದ್ರವ್ಯ ವ್ಯಸನಿಗಳಲ್ಲಿ ಇನ್ನಿತರ ಸಂದರ್ಭಗಳಲ್ಲಿ ಸಂಸ್ಕರಿಸದೆ ಇರುವ ಸಿರೆಂಜ್‌ಗಳನ್ನು ಬಳಸುವುದರಿಂದ. ಆದರೆ ಕೈ ಕುಲುಕುವುದು, ಅಥವಾ ಸೊಳ್ಳೆಗಳಿಂದ ಈ ಸೋಂಕು ಹರಡುವುದಿಲ್ಲ.

ರೋಗಲಕ್ಷಣಗಳು
ಪದೇ ಪದೇ ತಿಂಗಳು ಗಟ್ಟಲೆ ಜ್ವರ ಬರುವುದು, ಲಿಂಫ್ ನೋಡ್ (ದುಗ್ದ ಗ್ರಂಥಿ) ಊದಿಕೊಳ್ಳುವುದು, ಪದೇ ಪದೇ ಬೇಧಿಯಾಗುವುದು, ಕಾರಣವಿಲ್ಲದೆ ದೇಹದ ಶೇ.30ಕ್ಕೂ ಹೆಚ್ಚು ತೂಕ ಒಮ್ಮೆಲೇ ಕಡಿಮೆಯಾಗುವುದು; ಜೊತೆಗೆ ಹೆಪಟ್ಯಟಿಸ್ ಬಿ/ಸಿ ಸೋಂಕು, ಕ್ಷಯರೋಗ, ಫಂಗಸ್ ಸೋಂಕು ಇನ್ನಿತರ ತೊಂದರೆಗಳು ಕಾಣಿಸಿಕೊಳ್ಳಬಹುದು.

ಸೋಂಕನ್ನು ಪತ್ತೆ ಹಚ್ಚುವುದು ಹೇಗೆ?
ಎಲ್ಲ ಸರ್ಕಾರಿ ಜಿಲ್ಲೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ  ಹಾಗೂ ಆಪ್ತ ಸಮಾಲೋಚನ ಕೇಂದ್ರಗಳಲ್ಲಿ ಉಚಿತವಾಗಿ ರಕ್ತಪರೀಕ್ಷೆ ನಡೆಸಿ ವರದಿಯನ್ನು ಗೌಪ್ಯವಾಗಿಡುತ್ತಾರೆ. ಈ ಸೋಂಕಿಗೆ ಶಾಶ್ವತಚಿಕಿತ್ಸೆ ಇಲ್ಲದಿದ್ದರೂ ‘ಆ್ಯಂಟಿ ರಿಟ್ರೋವೈರಲ್ ಥೆರಪಿ’ (ಎ.ಆರ್.ಟಿ) ಆಶಾದಾಯಕವಾಗಿದೆ ಹಾಗೂ ಇದು ಉಚಿತವಾಗಿ ಸಿಗುತ್ತದೆ. ಜೊತೆಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಉತ್ತಮ ಸತ್ವಯುತ ಆಹಾರವನ್ನು ಸೇವಿಸುತ್ತ ದೈಹಿಕ ಚಟುವಟಿಕೆಗಳನ್ನು ನಿಯಮಿತವಾಗಿ ಮಾಡುತ್ತಾ ವೈಯಕ್ತಿಕ ಹಾಗೂ ಸುತ್ತಮುತ್ತಲಿನ ಪರಿಸರದ ಶುಭ್ರತೆಯನ್ನು ಕಾಯ್ದಕೊಳ್ಳುತ್ತಾ ನಿಯಮಬದ್ಧ ಜೀವನಶೈಲಿ ಅನುಸರಿಸಿದರೆ ಎಚ್.ಐ.ವಿ.ಯೊಂದಿಗೆ ಸಹಜೀವನ ನಡೆಸಬಹುದು. 

ಮಹಿಳೆ ಮತ್ತು ಎಚ್.ಐ.ವಿ. 
ಏಡ್ಸ್‌ನಲ್ಲಿಯೂ ಲಿಂಗತಾರತಮ್ಯವಿದೆ. ಸಮಾಜವು ಮಹಿಳೆಯನ್ನು ತತ್‌ಕ್ಷಣವೇ ಆಪರಾಧಿಸ್ಥಾನದಲ್ಲಿ ನಿಲ್ಲಿಸಿಬಿಡುತ್ತದೆ. ಸೋಂಕು ಹರಡುವುದರಲ್ಲಿ ಪುರುಷರ ಪಾತ್ರವನ್ನು ಮನ್ನಿಸಿಬಿಡುತ್ತದೆ. ಜೈವಿಕವಾಗಿಯೂ ಕೂಡ ಹೆಣ್ಣಿನ ಜನನಾಂಗಗಳ ರಚನೆ ಎಚ್.ಐ.ವಿ. ಸೋಂಕು ಒಳನುಗ್ಗಲು ಸುಲಭವಾಗಿ ದಾರಿ ಮಾಡಿಕೊಡುತ್ತದೆ. ಮಹಿಳೆಯರಲ್ಲಿರುವ ಕಡಿಮೆ ಸಾಕ್ಷರತೆ, ಬಾಲ್ಯವಿವಾಹ, ಕಾಂಡಮ್ ಬಳಕೆ ಹಾಗೂ ಸುರಕ್ಷಿತ ಲೈಂಗಿಕತೆಯ ಮಾಹಿತಿ ಇಲ್ಲದಿರುವುದು, ಅರಿವು ಇದ್ದರೂ ಲೈಂಗಿಕತೆಯ ಮೇಲೆ ಸಮಾಜದಲ್ಲಿ ಮಹಿಳೆಯ ಹತೋಟಿ ಮಿತವಾಗಿದ್ದು ಪುರುಷರ ಅಸಹಕಾರದಿಂದ ಮಹಿಳೆಯೇ ಎಚ್.ಐ.ವಿ. ಸೋಂಕಿಗೆ ಹೆಚ್ಚಿಗೆ ಒಳಗಾಗುವ ಸಂಭವವಿದೆ. ಒಟ್ಟಿನಲ್ಲಿ ಆಚಾತುರ್ಯವೊ ಅನಿವಾರ್ಯವೋ – ಎಚ್.ಐ.ವಿ.  ಪಾಸಿಟಿವ್ ಮಹಿಳೆ ಗರ್ಭಿಣಿಯಾದರೆ ಹೆರಿಗೆಯ ಸಂದರ್ಭದಲ್ಲಿಯೂ ಎದೆಹಾಲೂಣಿಸುವ ಸಂದರ್ಭದಲ್ಲಿಯೂ ಸೂಕ್ತ ಮುಂಜಾಗ್ರತಾಕ್ರಮಗಳನ್ನು  ವಹಿಸುವುದರಿಂದ ತಾಯಿಂದ ಮಗುವಿಗೆ ಸೋಂಕು ತಗಲುವುದನ್ನು ಶೇ.30ರಿಂದ ಶೇ. ಒಂದಕ್ಕಿಂತ ಕಡಿಮೆ ಮಾಡಬಹುದು. ಮಹಿಳೆಯರು ರಕ್ತಹೀನತೆಯನ್ನು ಮೊದಲೇ ಸರಿಪಡಿಸಿಕೊಂಡು ಮುಂದೆ ರಕ್ತದಾನ ಪಡೆಯುವ ಸಂಭವವನ್ನು ಕಡಿಮೆ ಮಾಡಿಕೊಳ್ಳಬೇಕು.

ಯುವಜನತೆಗೆ ಮತ್ತು ಎಚ್.ಐ.ವಿ.
ಎಚ್.ಐ.ವಿ. ಸೋಂಕು ಇದ್ದವರಲ್ಲಿ ದೇಶದ ಭವಿಷ್ಯವಾದ ಯುವಜನರೇ ಶೇ.30ಕ್ಕೂ ಹೆಚ್ಚಿದ್ದಾರೆ ಎನ್ನುವುದು ಅತ್ಯಂತ ನೋವಿನ ಸಂಗತಿ. ಯೌವನದ ಉತ್ಸಾಹದ ಜೊತೆ ಜೀವನವನ್ನು ಜೋಪಾನ ಮಾಡಿಕೊಳ್ಳಲು, ಮಾದಕದ್ರವ್ಯಗಳಿಂದ ದೂರವಿದ್ದು , ಲೈಂಗಿಕ ಶೋಷಣೆಗಳಿಗೆ ಅವಕಾಶ ನೀಡದೆ ಅಪಾಯಕಾರಿ ಪ್ರಯೋಗಗಳಿಗೆ, ಒತ್ತಡಗಳಿಗೆ ಮಣಿಯದೆ ವಿವಾಹಕ್ಕೆ ಮುನ್ನ ಲೈಂಗಿಕ ಸಂಪರ್ಕದಿಂದ ದೂರವಿದ್ದು, ಸದಾ ದೇಹ ಮನಸ್ಸುಗಳ ಸಂಯಮ ತಪ್ಪದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು; ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ (ಕಾಂಡೋಮ್ ರಹಿತ) ದೂರವಿದ್ದು. ಮುಂಜಾಗ್ರತೆ ವಹಿಸಬೇಕು. ಒಮ್ಮೆ ಸೊಂಕು ಉಂಟಾದವರೂ ಪ್ರಸ್ತುತ ಅಸ್ತಿತ್ವದಲ್ಲಿರುವ ಚಿಕಿತ್ಸೆ ಹಾಗೂ ಕಾನೂನುಗಳನ್ನು ಸೂಕ್ತವಾಗಿ ಬಳಸಿಕೊಂಡು ಚಿಕಿತ್ಸೆಗೆ ಒಳಗಾದರೆ 2030ರ ಒಳಗಾಗಿ ಏಡ್ಸ್ ರಹಿತ ವಿಶ್ವದ ಗುರಿಯನ್ನು ತಲುಪಬಹುದು. ಇದಕ್ಕಾಗಿ ಎಲ್ಲರೂ ಒಟ್ಟಾಗಿ ಕೈ ಮೇಲೆತ್ತುವ, ಕೈ ಜೋಡಿಸುವ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT