ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮ್ಮಾ’ ಎನ್ನುವ ದನಿಯ ಹಿಂದೆ...

Last Updated 2 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಮದುವೆಯಾಗಿ ಎಂಟು ವರ್ಷಗಳಾದ ಮೇಲೆ ಮುದ್ದು ಕಂದನ ಆಗಮನದಿಂದ ಮನೆಯಲ್ಲಿ ಖುಷಿಯ ಹೊನಲು. ಕೂಸಿನ ತುಂಟಾಟ, ಚೇಷ್ಟೆ ಹೆಚ್ಚೇ ಇದ್ದಿದ್ದರಿಂದ ಆತನೊಂದಿಗೆ ಬೆರೆತ ಪೋಷಕರೂ ಮಕ್ಕಳಾಗಿಬಿಟ್ಟರು. ಮಗುವಿನ ಮೊದಲ ಎರಡು ವರ್ಷಗಳ ಜನ್ಮದಿನದ ಸಂಭ್ರಮವೂ ಜೋರಾಗಿತ್ತು. ಆದರೆ, ಆ ಸಂಭ್ರಮಕೊಮ್ಮೆ ತಡೆಗೋಡೆ ಬಿದ್ದುಬಿಟ್ಟಿತು. ಏಕೆಂದರೆ ಅಮ್ಮನ ಕೂಗು ಆ ಕೂಸಿನ ಕಿವಿಗೆ ಬೀಳುತ್ತಲೇ ಇರಲಿಲ್ಲ. ಪ್ರೀತಿಯಿಂದ ಕರೆದಾಗ ತಕ್ಷಣ ತಿರುಗಿ ನೋಡುತ್ತಿರಲಿಲ್ಲ. ಭಾರಿ ಶಬ್ದ ಉಂಟಾದರೂ ಮಗುವಿನ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗುತ್ತಿರಲಿಲ್ಲ. ಅಷ್ಟೇ ಅಲ್ಲ; ಎರಡು ವರ್ಷ ಕಳೆದರೂ ನಾಲಿಗೆ ಹೊರಳುತ್ತಿರಲಿಲ್ಲ. ಆತಂಕಕ್ಕೆ ಒಳಗಾದ ಅಪ್ಪ–ಅಮ್ಮ, ಮೈಸೂರಿನ ಅಖಿಲ ಭಾರತ ವಾಕ್‌–ಶ್ರವಣ ಸಂಸ್ಥೆಗೆ (ಆಯಿಷ್‌) ಧಾವಿಸಿದರು.

‘ಮಗುವಿಗೆ ಶ್ರವಣದೋಷವಿದೆ’ ಎಂಬುದು ಖಚಿತವಾದಾಗ ಆ ಕ್ಷಣಕ್ಕೆ ಪೋಷಕರ ಪಾಲಿಗೆ ಆಕಾಶವೇ ಕಳಚಿ ಬಿದ್ದ ಅನುಭವ. ನಗು, ಖುಷಿ, ಸಂಭ್ರಮವೆಲ್ಲ ಉಡುಗಿ ಹೋಯಿತು. ಆಸೆ–ಕನಸುಗಳು ಕಮರಿದವು. ಆದರೆ, ಆ ಆತಂಕ, ದುಃಖ ಕೆಲವೇ ದಿನಗಳಿಗಷ್ಟೇ ಸೀಮಿತವಾಯಿತು. ಏಕೆಂದರೆ, ಆಯಿಷ್‌ನಲ್ಲಿ ಲಭಿಸಿದ ಥೆರಪಿ, ಶಸ್ತ್ರಚಿಕಿತ್ಸೆಯಿಂದ ಆ ಮಗು ಸಾಮಾನ್ಯರಂತಾಗಿದೆ.  ಎಲ್ಲರಂತೆ ಆತನೂ ಈಗ ಶಾಲೆಗೆ ಹೋಗುತ್ತಿದ್ದಾನೆ. ಪೋಷಕರ ಮೊಗದಲ್ಲಿ ಮತ್ತೆ ಮಂದಹಾಸ. ಇಷ್ಟೆಲ್ಲ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ಆ ಬಾಲಕನಿಗೆ ಎಂಟು ವರ್ಷ ತುಂಬಿತ್ತು. ಶಾಲೆಗೆ ಸೇರಿದ್ದು ತಡವಾಗಿದ್ದರಿಂದ ಸಮಾಜಕ್ಕೆ ತನ್ನನ್ನು ತಾನು ತೆರೆದುಕೊಳ್ಳುವ ಅವಧಿಯೂ ವಿಳಂಬವಾಯಿತು. ಅಮೂಲ್ಯ ಕ್ಷಣಗಳು ಕಳೆದುಹೋಗಿದ್ದವು.

ಇದು ಒಂದು ಮಗುವಿನ ಸಮಸ್ಯೆಯಲ್ಲ. ಶ್ರವಣದೋಷ ಇರುವುದು ತಡವಾಗಿ ಅರಿವಿಗೆ ಬಂದ ಪ್ರತಿ ಮಗುವಿನ ಗೋಳಾಟ. ಪೋಷಕರ ಪರದಾಟ. ಚಿನ್ನು ಎಂದು ಕರೆದಾಗ ‘ಅಮ್ಮಾ’ ಎಂದು ಹೊರಹೊಮ್ಮುವ ಮಧುರವಾದ ಕೂಗು ತಾಯಿಯ ಹೃದಯಾಂತರಾಳದಲ್ಲಿ ಪ್ರೀತಿಯ ಸೆಲೆ ಹರಿಸುತ್ತದೆ. ತನ್ನ ಕರೆಗೆ ಕೂಸು ತಕ್ಷಣವೇ ಸ್ಪಂದಿಸದಿದ್ದರೆ ಅದೇ ಹೃದಯ ಜೋರಾಗಿ ಬಡಿದುಕೊಳ್ಳಲಾರಂಭಿಸುತ್ತದೆ.

ಇದಕ್ಕೆ ಪರಿಹಾರೋಪಾಯ ಹುಡುಕುವ ನಿಟ್ಟಿನಲ್ಲಿ ಆಯಿಷ್‌ ‘ನವಜಾತ ಶಿಶುಗಳ ಶ್ರವಣ ಪರೀಕ್ಷೆ’ (ಯೂನಿವರ್ಸಲ್‌ ನ್ಯೂಬಾರ್ನ್‌ ಹಿಯರಿಂಗ್‌ ಸ್ಕ್ರೀನಿಂಗ್‌–UNHs) ಎಂಬ ತಪಾಸಣಾ ವಿಧಾನವನ್ನು ಕಾರ್ಯರೂಪಕ್ಕೆ ತಂದಿದೆ. ಜನಿಸಿದ ಎಲ್ಲ ಶಿಶುಗಳನ್ನು ಈ ವಿಧಾನದಡಿ ಶ್ರವಣತಪಾಸಣೆಗೆ ಒಳಪಡಿಸಲಾಗುತ್ತದೆ. ಶ್ರವಣದೋಷ, ಮಾತು ಬಾರದಿರುವುದನ್ನು ಆರಂಭಿಕ ಹಂತದಲ್ಲಿಯೇ ಇದರಿಂದ ಪತ್ತೆ ಮಾಡಲು ಸಾಧ್ಯ.

ಹೆರಿಗೆ ಆಸ್ಪತ್ರೆಯಲ್ಲಿ ಘಟಕ
ಗ್ರಾಮೀಣ ಭಾಗದ ಜನರೇ ಹೆಚ್ಚು ಧಾವಿಸುವ ಮೈಸೂರಿನ ಚೆಲುವಾಂಬ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಶ್ರವಣದೋಷ ಪರೀಕ್ಷೆಗೆ ಪ್ರಯೋಗಾಲಯ ತೆರೆಯಲಾಗಿದೆ. ಇದಕ್ಕಾಗಿ ಕೊಠಡಿಯನ್ನು ಮರುವಿನ್ಯಾಸಗೊಳಿಸಿದ್ದು, ಆಯಿಷ್‌ ವತಿಯಿಂದಲೇ ಯಂತ್ರೋಪಕರಣ, ಸಲಕರಣೆಗಳನ್ನು ನೀಡಲಾಗಿದೆ. ಆಸ್ಪತ್ರೆಯಲ್ಲಿ ಜನಿಸುವ ಪ್ರತಿ ಶಿಶುವನ್ನೂ ಇಲ್ಲಿ ಪರೀಕ್ಷಿಸಲಾಗುತ್ತಿದೆ. ಮಾರ್ಚ್‌ನಲ್ಲಿ ಆರಂಭವಾಗಿರುವ ಪ್ರಯೋಗಾಲಯದಲ್ಲಿ ಅಕ್ಟೋಬರ್‌ ಅಂತ್ಯದವರೆಗೆ 5,230 ಶಿಶುಗಳ ಶ್ರವಣಶಕ್ತಿಯನ್ನು ಪರೀಕ್ಷಿಸಲಾಗಿದೆ. ಈ ಪೈಕಿ 812 ಮಕ್ಕಳಲ್ಲಿ ನ್ಯೂನತೆ ಕಂಡುಬಂದಿದ್ದು, ಹೆಚ್ಚಿನ ತಪಾಸಣೆಗಾಗಿ ಆಯಿಷ್‌ಗೆ ತೆರಳಲು ಸೂಚಿಸಲಾಗಿದೆ. ಡಿಸೆಂಬರ್‌ ಅಂತ್ಯದ ವೇಳೆಗೆ ಮಿಷನ್‌  ಆಸ್ಪತ್ರೆಯಲ್ಲಿಯೂ ಈ ಪರೀಕ್ಷಾ ಕೇಂದ್ರ ಶುರುವಾಗಲಿದೆ.

ನಗರದ ಇತರ 18 ಹೆರಿಗೆ ಆಸ್ಪತ್ರೆಗಳು ಹಾಗೂ ಮಕ್ಕಳ ರಕ್ಷಣಾ ಘಟಕಗಳಲ್ಲಿಯೂ ಶ್ರವಣಪರೀಕ್ಷೆ ನಿಯಮಿತವಾಗಿ ನಡೆಯುತ್ತಿದೆ. ವಾರಕ್ಕೆ ಎರಡು ಬಾರಿ ಆಯಿಷ್‌ ವೈದ್ಯರು ಈ ಆಸ್ಪತ್ರೆಗಳಿಗೆ ಭೇಟಿ ನೀಡಿ ನವಜಾತ ಶಿಶುಗಳ ಶ್ರವಣಶಕ್ತಿಯ ತಪಾಸಣೆ ಮಾಡುತ್ತಿದ್ದಾರೆ. ಆಯಿಷ್‌ ಕೇಂದ್ರಕ್ಕೆ ಸೀಮಿತವಾಗಿದ್ದ ಈ ತಪಾಸಣೆ ಹೆರಿಗೆ ಆಸ್ಪತ್ರೆಗಳಿಗೂ ವಿಸ್ತರಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂಬುದು ವೈದ್ಯರ ಅಭಿಮತ. ಚುಚ್ಚುಮದ್ದುಗಳ ರೀತಿಯಲ್ಲೇ ‘ನವಜಾತ ಶಿಶುಗಳ ಶ್ರವಣಪರೀಕ್ಷೆ’ಯನ್ನು ಕಡ್ಡಾಯಗೊಳಿಸಬೇಕು ಎಂಬ ಬಲವಾದ ಕೂಗು ಕೇಳಿಬರುತ್ತಿದೆ.

ದೋಷ ಪತ್ತೆಯಾಗದಿದ್ದರೆ?
ಶ್ರವಣದೋಷವನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಪತ್ತೆ ಮಾಡುವುದು ಅವಶ್ಯ. ಜನಿಸಿದ ಮೊದಲ ತಿಂಗಳಲ್ಲೇ ಮಗುವಿನಲ್ಲಿ ಆರಂಭವಾಗುವ ಆಲಿಸುವಿಕೆಯ ಪ್ರಕ್ರಿಯೆಯು ಮುಂದೆ ಮಾತನಾಡಲು ಸನ್ನದ್ಧಗೊಳಿಸುತ್ತದೆ.  ತಾಯಿಯ ಗರ್ಭದಿಂದ ಹೊರಬಂದ ಕ್ಷಣದಿಂದಲೇ ಮಗುವಿನ ಮೆದುಳಿನಲ್ಲಿ ಹೊಸ ನರಜಾಲಗಳು ವಿಕಸನಗೊಳ್ಳಲು ಶುರುವಾಗುತ್ತವೆ. ಈ ನರಜಾಲಗಳ ಸಹಾಯದಿಂದಲೇ ಸಾಮಾನ್ಯ ಮಗು ಮೊದಲ 30 ದಿನಗಳಲ್ಲಿ ಶಬ್ದವನ್ನು ಗ್ರಹಿಸುವ, ತಾಯಿಯನ್ನು ಗುರುತಿಸುವ ಸಾಮರ್ಥ್ಯ ಹೊಂದುತ್ತದೆ. ಇದು ಹಂತಹಂತವಾಗಿ ವಿಕಸನಗೊಳ್ಳುತ್ತದೆ. ಮೊದಲ ಎರಡು ವರ್ಷಗಳ ಅವಧಿ ಮಗುವಿನ ಮಾತು, ಭಾಷೆಯ ಕಲಿಕೆ ಮತ್ತು ಸಾಮಾಜಿಕ ಬೆಳವಣಿಗೆಗೆ ಅತ್ಯಮೂಲ್ಯ ಸಮಯ. ಈ ಹಂತದಲ್ಲಿ ವಯಸ್ಕರಿಗಿಂತ ಮಕ್ಕಳ ಮೆದುಳು ಹೆಚ್ಚು ಸಂವೇದನಾಶೀಲ ಆಗಿರುತ್ತದೆ. ಮಗುವಿನ ನರಜಾಲಗಳಿಗೆ ಆರಂಭದಿಂದಲೇ ಕೆಲಸ ಕೊಡದಿದ್ದರೆ ಅವು ನಿಷ್ಕ್ರಿಯಗೊಳ್ಳುವ ಸಾಧ್ಯತೆ ಹೆಚ್ಚು.

ಮಗುವಿನಲ್ಲಿ ಶ್ರವಣದೋಷ ಹುಟ್ಟಿದ ತಕ್ಷಣ ಪತ್ತೆಯಾದರೆ, ಆರರಿಂದ ಎಂಟು ತಿಂಗಳ ಅವಧಿಯಲ್ಲೇ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಅನಂತರ ಮಗುವಿಗೆ ಥೆರಪಿ, ತರಬೇತಿ ನೀಡಲು ಸುಲಭವಾಗುತ್ತದೆ. ಇದರಿಂದ ಸಾಮಾನ್ಯರಂತೆ ವರ್ಷ ತುಂಬುವ ವೇಳೆಗಾಗಲೇ ಮಗು ಭಾಷೆಯ ಕಲಿಕೆಯತ್ತ ಗಮನ ಹರಿಸುತ್ತದೆ. ಆಗ ಭಾಷಾಕಲಿಕೆ, ಸಾಮಾಜಿಕ ಬೆಳವಣಿಗೆ, ಶೈಕ್ಷಣಿಕ ಜೀವನಕ್ಕೆ ಇದರಿಂದ ಸಾಕಷ್ಟು ಪ್ರಯೋಜನವಾಗುತ್ತದೆ.

ಯುಎನ್‌ಎಚ್‌ನ ಕಾರ್ಯವಿಧಾನ
ಸಾಮಾನ್ಯವಾಗಿ ಮಗುವಿನ ಕಿವಿಯ ಒಂದು ನಿರ್ದಿಷ್ಟ ಕ್ಷೇತ್ರದ ಶ್ರವಣಶಕ್ತಿಯನ್ನು ಪರೀಕ್ಷಿಸಲು ಓಟೊ ಅಕೌಸ್ಟಿಕ್‌ ಎಮಿಷನ್‌ (OAE) ಎಂಬ ಸಾಧನವನ್ನು ಬಳಸಲಾಗುತ್ತದೆ. ಅನುಭವಿ ಶ್ರವಣತಜ್ಞರು ಈ ಪರೀಕ್ಷೆ ನಡೆಸುತ್ತಾರೆ. ಮಗುವಿನ ಎರಡು ಕಿವಿ ಮತ್ತು ಹಣೆಗೆ OAE ಸಾಧನದ ಪಿನ್ನುಗಳನ್ನು ಹಾಕಲಾಗುತ್ತದೆ. ಮಗುವಿಗೆ ಶ್ರವಣದೋಷವಿದೆ ಎಂದಾದರೆ ‘ರೆಫರ್‌’ (REFER) ಎಂದೂ, ಇಲ್ಲದಿದ್ದರೆ ‘ಪಾಸ್‌’ (PASS) ಎಂದು ಸಾಧನ ತೋರಿಸುತ್ತದೆ.

ಈ ಪರೀಕ್ಷೆಗೂ ಮುನ್ನ ಮಗುವಿನ ತಾಯಿಯ ಬಳಿ ಕೆಲವು ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ. ಗರ್ಭಾವಸ್ಥೆಯಲ್ಲಿ ಜ್ವರ ಬಂದಿರುವುದು, ಒಂಬತ್ತು ತಿಂಗಳು ನಿರಂತರವಾಗಿ ವಾಂತಿ ಇರುವುದು, ರಕ್ತದೊತ್ತಡ, ಸಕ್ಕರೆಕಾಯಿಲೆಯ ಸಮಸ್ಯೆಗಳು ಇದ್ದವೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಬಳಿಕ ‘ಬಿಹೇವಿಯರಲ್‌ ಅಬ್ಸರ್ವೇಷನ್‌ ಆಡಿಯೋಮೆಟ್ರಿ’ (BOA) ಎಂಬ ಸಾಧನ ಬಳಸಿ ಮಗುವಿನ ಶಬ್ದಗ್ರಹಿಕೆಯನ್ನು ಗುರುತಿಸಲಾಗುತ್ತದೆ. ಮಗು ನಿದ್ದೆಯಲ್ಲಿದ್ದಾಗ ಸಾಧನವನ್ನು ಕಿವಿಯ ಸಮೀಪ ಹಿಡಿದು ಶಬ್ದ ಹೊರಹೊಮ್ಮಿಸಲಾಗುತ್ತದೆ. ಆಗ ಮಗು ಬೆಚ್ಚುವ, ಎಚ್ಚರಗೊಳ್ಳುವ ಹಾಗೂ ಅಳುವ ಮೂಲಕ ಪ್ರತಿಕ್ರಿಯೆ ನೀಡಿದಲ್ಲಿ ಮಗುವಿನ ಶ್ರವಣಶಕ್ತಿ ಸಹಜವಾಗಿದೆ ಎಂಬ ನಿರ್ಧಾರಕ್ಕೆ ಬರಲಾಗುತ್ತದೆ. ಖಚಿತ ಮಾಡಿಕೊಳ್ಳಲು OAE ಪರೀಕ್ಷೆ ಮಾಡಿಸಲೇಬೇಕಾಗುತ್ತದೆ ಎನ್ನುತ್ತಾರೆ, ಆಡಿಯೊಲಜಿ ಪ್ರಾಧ್ಯಾಪಕ ಡಾ. ಅನಿಮೇಷ್ ಬರ್ಮನ್‌.

ತಾಯಿಯ ಪಾತ್ರ
ಪ್ರತಿ ಮಗುವಿಗೂ ತಾಯಿಯ ನಂಟು ಅತ್ಯವಶ್ಯ. ಹಾಲುಣಿಸುವಿಕೆಯಿಂದ ಮೊದಲಿಡುವ ತಾಯಿ–ಮಗುವಿನ ಬೆಸುಗೆಯ ಅನುಸಂಧಾನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ತಾಯಿಯ ಅಂಕೆಯಲ್ಲೇ ಬೆಳವ ಮಗುವಿಗೆ ಆಟ, ಪಾಠ, ಊಟ ಎಲ್ಲಕ್ಕೂ ಅಮ್ಮನೇ ಬೇಕು. ಈ ವೇಳೆ ತಾಯಿ ತನ್ನೆಲ್ಲ ತ್ಯಾಗಕ್ಕೂ ಸಿದ್ಧಳಾಗಿ ಮಗುವಿನ ಪೋಷಣೆಯಲ್ಲೇ ತನ್ನತನ ಕಾಣುತ್ತಾಳೆ.

ಅಮ್ಮನ ಆಸರೆ, ಪ್ರೀತಿ, ಕಾಳಜಿ ಮಗುವಿನ ಮಾನಸಿಕ ಬೆಳವಣಿಗೆಗೆ ಪೂರಕ. ಅದರಲ್ಲೂ ವಿಶೇಷ ಮಕ್ಕಳ ಬೆಳವಣಿಗೆಯಲ್ಲಿ ತಾಯಿ ತುಸು ಹೆಚ್ಚೇ ಸಮಯ ನೀಡಬೇಕು. ಮಗುವಿನ ನಿದ್ರೆಯ ಅವಧಿಯನ್ನು ಹೊರತುಪಡಿಸಿ ಉಳಿದೆಲ್ಲ ಸಮಯದಲ್ಲೂ ತಾಯಿ ನಿರಂತರ ಕಲಿಸುವಿಕೆಯಲ್ಲೇ ತೊಡಗಿರಬೇಕು. ತಾಯಿ ಮತ್ತು ಶ್ರವಣದೋಷದ ಮಗು – ಇಬ್ಬರಿಗೂ ಆಯಿಷ್‌ನಲ್ಲಿ ತರಬೇತಿ ನೀಡುವುದರಿಂದ ತಾಯಿಯೂ ಹೊಸದಾಗಿ ಶಾಲೆಗೆ ಹೋಗುವ ಅನುಭವ ಪಡೆಯಬಹುದು. ಇತರ ಮಕ್ಕಳು, ತಾಯಂದಿರೊಂದಿಗೆ ಬೆರೆತು ಮತ್ತಷ್ಟು ಹೊಸ ವಿಚಾರ ಕಲಿಯಬಹುದು. ಇದಕ್ಕೆ ಸಾಕಷ್ಟು ತಾಳ್ಮೆ, ಸಂಯಮ ಅತ್ಯವಶ್ಯ. ಈ ಕಾರ್ಯ ಸಫಲವಾಗಲು ಕುಟುಂಬ ಸದಸ್ಯರ ಸಹಕಾರವೂ ಅಗತ್ಯ.

ಶೀಘ್ರ ಪತ್ತೆ ಉಪಯುಕ್ತ

ಆರಂಭದಲ್ಲೇ ಮಗುವಿನ ಶ್ರವಣದೋಷ ಪತ್ತೆ ಮಾಡಿದರೆ ಭವಿಷ್ಯ ಉತ್ತಮವಾಗಿ ರೂಪುಗೊಳ್ಳಲು ಸಾಧ್ಯ. ಯಾವ ಕಾರಣಕ್ಕೂ ವ್ಯಕ್ತಿಯ ಸ್ವಾವಲಂಬಿ, ಸ್ವತಂತ್ರದ ಬದುಕಿಗೆ ಹಿನ್ನಡೆಯಾಗಬಾರದು. ಈ ನಿಟ್ಟಿನಲ್ಲಿ ಪ್ರತಿ ಮಗುವೂ ‘ನವಜಾತ ಶಿಶುಗಳ ಶ್ರವಣಪರೀಕ್ಷೆ’ಗೆ ಒಳಗಾಗುವುದು ಅತ್ಯವಶ್ಯ. ಎಲ್ಲ ಹೆರಿಗೆ ಆಸ್ಪತ್ರೆಗಳಲ್ಲೂ ಈ ವ್ಯವಸ್ಥೆಯನ್ನುಕಲ್ಪಿಸಿದರೆ, ಅಲ್ಪಮಟ್ಟಿಗಾದರೂ ಈ ಸಮಸ್ಯೆ ನಿವಾರಿಸಬಹುದು.
- ಡಾ. ಸುಧಾ ರುದ್ರಪ್ಪ, ಮಕ್ಕಳ ವಿಭಾಗದ ಮುಖ್ಯಸ್ಥೆ, ಚೆಲುವಾಂಬ ಆಸ್ಪತ್ರೆ


ಮಗುವಿನ ಕಾಳಜಿ ಅತ್ಯಗತ್ಯ

ಶ್ರವಣದೋಷ ಇರುವ ಮಗುವಿನ ಬಗ್ಗೆ ಪೋಷಕರು ಕಾಳಜಿ ವಹಿಸುವುದು ಅತ್ಯಗತ್ಯ. ಸರಿಯಾದ ಸಮಯದಲ್ಲಿ ಅಗತ್ಯ ಚಿಕಿತ್ಸೆ, ಥೆರಪಿ ನೀಡಿದರೆ ಮಗುವಿನ ಸಾಮಾಜಿಕ ಬೆಳವಣಿಗೆ ಸುಲಲಿತವಾಗುತ್ತದೆ. ಶ್ರವಣದೋಷವಿರುವುದು ಗೊತ್ತಾದರೂ ಬಹಳಷ್ಟು ಪೋಷಕರು ಚಿಕಿತ್ಸೆ ಕೊಡಿಸುವುದಿಲ್ಲ. ಮೂಢನಂಬಿಕೆ, ಆರ್ಥಿಕ ಸಂಕಷ್ಟವೂ ಇದಕ್ಕೆ ಕಾರಣವಿರಬಹುದು. ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವುದು ಪೋಷಕರ ಕರ್ತವ್ಯ, ಜವಾಬ್ದಾರಿ ಕೂಡ. 18 ವರ್ಷ ತುಂಬಿದ ಬಳಿಕ ಅಥವಾ ಮಗಳಿಗೆ ಮದುವೆ ಮಾಡಲು ನಿರ್ಧರಿಸಿದಾಗ ಪೋಷಕರು ನಮ್ಮ ಬಳಿ ಬರುತ್ತಾರೆ. ‘ಏನಾದರೂ ಮಾಡಿ ನಮ್ಮ ಮಗಳ ಸಮಸ್ಯೆಯನ್ನು ಸರಿಪಡಿಸಿ’ ಎಂದು ದುಂಬಾಲು ಬೀಳುತ್ತಾರೆ. ಆ ಹಂತದಲ್ಲಿ ನಾವೇನೂ ಮಾಡಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಪೋಷಕರಲ್ಲೇ ಅರಿವು ಅಗತ್ಯ.
- ಡಾ. ಎಸ್‌.ಆರ್‌. ಸಾವಿತ್ರಿ, ನಿರ್ದೇಶಕಿ, ಆಯಿಷ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT