ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೈರ್ಯ, ಆತ್ಮವಿಶ್ವಾಸವೇ ಪರಿಹಾರದ ದಾರಿ...

Last Updated 2 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಮಧ್ಯ ವಯಸ್ಸಿನ ಆಕೆ ಸರ್ಕಾರಿ ಅಧಿಕಾರಿ. ಆಕೆಯ ಮೇಲಧಿಕಾರಿ ಒಂದಲ್ಲ ಒಂದು ರೀತಿಯಲ್ಲಿ ಈಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈಕೆಯ ಸಹನೆ ಮೀರಿದ್ದು ಆಕೆ ತನ್ನ ಸಹೋದ್ಯೋಗಿಗಳೊಂದಿಗೆ ಈ ವಿಷಯ ಹಂಚಿಕೊಂಡಾಗ ಅವರೂ ಸಹ ತಮಗಾದ ಕಿರುಕುಳದ ಬಗ್ಗೆ ತಿಳಿಸಿದರು. ಈಕೆ ಇನ್ನು ಆ ವ್ಯಕ್ತಿಗೆ ಬುದ್ಧಿ ಕಲಿಸಲೇಬೇಕೆಂದು ಅದೇ ಇಲಾಖೆಯಲ್ಲಿದ್ದು ನಿವೃತ್ತಗೊಂಡ ತನ್ನ ಪತಿಯ ಸಹಾಯದಿಂದ ಪೊಲೀಸರಿಗೆ ಮೊದಲು ದೂರಿತ್ತು ನಂತರ ತನ್ನ ಇಲಾಖೆಯ ಮುಖ್ಯಸ್ಥರಿಗೂ ದೂರು ನೀಡುತ್ತಾಳೆ. ಇಲಾಖಾ ಮುಖ್ಯಸ್ಥರು ತಾವೇ ಅದಕ್ಕೆ ಕ್ರಮ ಕೈಗೊಳ್ಳುತ್ತೇವೆಂದು ಆಶ್ವಾಸನೆ ನೀಡಿ ಇಲಾಖೆಯ ಮರ್ಯಾದೆಗೆ ಕುಂದು ಬರಬಾರದೆಂದು ಆಕೆ ಪೊಲೀಸರಿಗಿತ್ತ ದೂರನ್ನು ಹಿಂಪಡೆಯುವಂತೆ ಮಾಡುತ್ತಾರೆ. ಮುಂದೆ ಸುಪ್ರೀಂ ಕೋರ್ಟ್ ವಿಶಾಖಾ ಕೇಸಿನಲ್ಲಿ ನೀಡಿರುವ ಮಾರ್ಗಸೂಚಿಯನ್ವಯ ತನಿಖೆ ನಡೆದು ಆತನ ವಿರುದ್ಧ ಅಪರಾಧ ಸಾಭೀತಾಗುತ್ತದೆ.

ಇದಕ್ಕೆ ಆತನಿಗೆ ಸಿಗುವ ಶಿಕ್ಷೆ ಕೇವಲ ‘ವರ್ಗಾವಣೆ’. ಆತ ನಿವೃತ್ತಿಯ ಅಂಚಿನಲ್ಲಿದ್ದ ಕಾರಣ ಅವನನ್ನು ಕೆಲಸದಿಂದ ವಜಾ ಮಾಡಬಾರದೆಂದು ಇಲಾಖೆ ತೀರ್ಮಾನಿಸಿತು. ಅವನನ್ನು ಇಲಾಖೆ ಬೇರೆಡೆ ವರ್ಗಾವಣೆ ಮಾಡುತ್ತದೆ. ಈ ಎಲ್ಲಾ ಮಾಹಿತಿಯನ್ನು ಆ ಇಲಾಖೆಯ ಕಾರ್ಮಿಕ ಸಂಘಟನೆ ತನ್ನ ಕಾರ್ಮಿಕ ಬುಲೆಟಿನ್ ಎಂಬ ಪತ್ರಿಕೆಯಲ್ಲಿ ಪ್ರಕಟಿಸುತ್ತದೆ. ಈ ಪ್ರಕಟನೆಯಿಂದ ತನ್ನ ಮರ್ಯಾದೆ ಹರಾಜಾಯಿತೆಂದು ಆ ಮೇಲಧಿಕಾರಿ ಮಹಿಳಾ ಅಧಿಕಾರಿಯ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತಾನೆ. ಮುಂದೆ ಆ ಕೇಸು ಹತ್ತು ವರ್ಷ ನಡೆದು ಆತನ ಅರ್ಜಿ ವಜಾಗೊಳ್ಳುತ್ತದೆ. ಆಕೆ ಮಾಡದ ತಪ್ಪಿಗಾಗಿ ಹತ್ತು ವರ್ಷ ಸಮಯ ಮತ್ತು ಹಣ ಖರ್ಚು ಮಾಡಿ ನ್ಯಾಯಾಲಯದ ಕಟಕಟೆ ಏರಿದರೂ ಯಾವುದೇ ರೀತಿಯ ಪರಿಹಾರ ಸಿಗಲಿಲ್ಲ. ಆ ಮೇಲಧಿಕಾರಿಯ ಅರ್ಜಿ ವಜಾ ಆಗಿದ್ದೇ ಮಹತ್ಸಾಧನೆ ಎಂಬಂತೆ ಆಕೆ ಸುಮ್ಮನಿರಬೇಕಾಯಿತು.

ಈ ಒಂದು ಪ್ರಕರಣ ಮಹಿಳಾ ದೌರ್ಜನ್ಯದ ಅನೇಕ ಮುಖಗಳನ್ನು ತೆರೆದಿಡುತ್ತದೆ. ಮೊದಲಿಗೆ ದೌರ್ಜನ್ಯಕ್ಕೆ ವಯಸ್ಸಿಲ್ಲ, ಸರ್ಕಾರದ ಅಧಿಕಾರಿಯೆಂಬ ಭಯವಿಲ್ಲ, ಅಪರಾಧಿಗೆ ತಕ್ಕ ಶಿಕ್ಷೆಯಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅಪರಾಧಿ ತನ್ನ ಅಪರಾಧ ಸಾಬೀತಾದ ಹೊರತಾಗಿಯೂ ದೌರ್ಜನ್ಯಕ್ಕೊಳಗಾದ ಮಹಿಳೆಯ ವಿರುದ್ಧವೇ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿ ಆಕೆಯನ್ನು ಮತ್ತೊಂದಿಷ್ಟು ದೌರ್ಜನ್ಯಕ್ಕೆ ಒಳಪಡಿಸಿ ಯಾವುದೇ ರೀತಿಯ ಶಿಕ್ಷೆಯಿಲ್ಲದೆ ಹೊರ ನಡೆದ. ಅಂದರೆ ಅಂತಿಮ ಹಂತದಲ್ಲೂ ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದರಲ್ಲಿ ಮತ್ತು ಅಧಿಕಾರಿಗೆ ಸೂಕ್ತ ಪರಿಹಾರ ಕೊಡಿಸುವುದರಲ್ಲಿ ಕಾನೂನು ಹಾಗೂ ನ್ಯಾಯಾಲಯಗಳು ವಿಫಲವಾದವು.

ಸರ್ಕಾರಿ ಅಧಿಕಾರಿಯ ಕಥೆಯೇ ಹೀಗಾದರೆ ಇನ್ನು ಸಣ್ಣಪುಟ್ಟ ಹುದ್ದೆಗಳಲ್ಲಿ ಖಾಸಗಿ, ಅಸಂಘಟಿತ ವಲಯಗಳಲ್ಲಿ ಹಾಗೂ ಇನ್ನಿತರ ನೂರಾರು ಕ್ಷೇತ್ರಗಳಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡುವ ಮಹಿಳೆಯರ ಪಾಡನ್ನು ಊಹಿಸಿಕೊಳ್ಳಬಹುದು. ಸಮೀಕ್ಷೆಗಳ ಪ್ರಕಾರ ವಿದ್ಯಾವಂತ/ಅವಿದ್ಯಾವಂತ ಉನ್ನತ/ಸಾಧಾರಣ, ಸರ್ಕಾರಿ/ಖಾಸಗಿ – ಹೀಗೆ ಯಾವುದೇ ಭೇದಭಾವವಿಲ್ಲದೆ ಮಹಿಳಾ ದೌರ್ಜನ್ಯ ಸತತವಾಗಿ ಸಾಗುತ್ತಲೇ ಇದೆ.

ಹಾಗಾದರೆ ಇದಕ್ಕೆ ಪರಿಹಾರವೇನು ಎಂಬುದೇ ಎಲ್ಲರನ್ನೂ ಸದಾ ಕಾಡುತ್ತಿರುವ ಚಿಂತೆ. ಇದಕ್ಕೆ ಎರಡು ಬಗೆಯ ಪರಿಹಾರಗಳಿವೆ:

1. ಕಾನೂನಾತ್ಮಕ ವಿಧಾನ
2. ಮಹಿಳಾ ಸ್ವರಕ್ಷಣಾ ವಿಧಾನಗಳು


ಕಾನೂನಾತ್ಮಕ ವಿಧಾನ
ಕಾನೂನಾತ್ಮಕವಾಗಿ ಸರ್ವೋಚ್ಛ ನ್ಯಾಯಾಲಯದ ಮಾರ್ಗ ಸೂಚಿಯಂತೆ ಮಹಿಳಾ ನೌಕರರಿರುವಲ್ಲಿ ದೂರು ಸಮಿತಿ (Complaints Committee) ರಚನೆ ಮಾಡಿ, ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿ ಸಂಬಂಧಪಟ್ಟ ಇಲಾಖೆಗೆ ವರದಿ ನೀಡುವುದು. ಈ ವರದಿಯ ಆಧಾರದ ಮೇಲೆ ಇಲಾಖೆಯ ಶಿಸ್ತು ಸಮಿತಿ ಕ್ರಮ ತೆಗೆದುಕೊಳ್ಳುತ್ತದೆ. ಅಪರಾಧದ ಗಂಭೀರತೆಗೆ ಅನುಗುಣವಾಗಿ ಅಪರಾಧಿಯ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುತ್ತದೆ. ಅತಿ ಕಠಿಣ ಶಿಕ್ಷೆಯೆಂದರೆ ಕೆಲಸದಿಂದ ವಜಾ ಮಾಡುವುದು. ಆದರೆ ಇದಿಷ್ಟೂ ಕ್ರಮಬದ್ಧವಾಗಿ ಜರುಗಿ ಅಪರಾಧಿಗೆ ಶಿಕ್ಷೆಯಾಗುವ ಸಾಧ್ಯತೆ ಈ ನಮ್ಮ ವ್ಯವಸ್ಥೆಯಲ್ಲಿ ಎಷ್ಟರ ಮಟ್ಟಿಗೆ ನಿರೀಕ್ಷಿಸಬಹುದು ಎಂಬುದೇ ದೊಡ್ಡ ಪ್ರಶ್ನೆ.

ಮಹಿಳಾ ಲೈಂಗಿಕ ದೌರ್ಜನ್ಯದಿಂದ ಆಕೆಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅಂದರೆ ಸಂವಿಧಾನದಡಿ ನೀಡಲಾಗಿರುವ ಸ್ವಾತಂತ್ರ್ಯ ಮತ್ತು ಬದುಕುವ ಹಕ್ಕು ಹಾಗೂ ಲಿಂಗತಾರತಮ್ಯ ವಿರೋಧಿ ಹಕ್ಕುಗಳ ಉಲ್ಲಂಘನೆಯೇ ಇದೆಂದು ನಮ್ಮ ಸರ್ವೋಚ್ಚ ನ್ಯಾಯಾಲಯ ಈಗಾಗಲೇ ಅನೇಕ ಪ್ರಕರಣಗಳಲ್ಲಿ ಉಲ್ಲೇಖಿಸಿದೆ. ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯ 2013ರಲ್ಲಿ ಈ ವಿಷಯದ ಬಗ್ಗೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳನ್ನು ಆದೇಶಿಸಿದೆ. ಹಾಗೆಯೇ ಸರ್ಕಾರಗಳು ಸಹ ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಇವೆಲ್ಲವನ್ನೂ ಮೀರಿ ಇಂದಿಗೂ ಮಹಿಳಾ ಲೈಂಗಿಕ ದೌರ್ಜನ್ಯಗಳು ಅಂತ್ಯ ಕಂಡಿಲ್ಲ. 

ಮತ್ತೊಂದು ಮುಖ್ಯ ಅಂಶವೆಂದರೆ ಇಲಾಖಾ ಮುಖ್ಯಸ್ಥರು, ಸಂಸ್ಥೆಯ ಮಾಲೀಕರು ಹಾಗೂ ಸಂಬಂಧಪಟ್ಟವರು ತಮ್ಮ ಮಹಿಳಾ ಮತ್ತು ಪುರುಷ ಉದ್ಯೋಗಿಗಳಿಗೆ ಪ್ರಾರಂಭದಲ್ಲೇ ‘ಮಹಿಳಾ ದೌರ್ಜನ್ಯ ತಡೆ’ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು. ತಮ್ಮ ಉದ್ಯೋಗಿಗಳಿಗೆ ಎಲ್ಲ ರೀತಿಯ ರಕ್ಷಣೆ ಒದಗಿಸುವುದು ತಮ್ಮ ನೈತಿಕ ಹೊಣೆಯೆಂಬುದನ್ನು ಮಾಲೀಕರು ಮನಗಾಣಬೇಕು. ಸರ್ಕಾರ ಇದನ್ನು ಕಡ್ಡಾಯಗೊಳಿಸಬೇಕು, ತಪ್ಪಿದ್ದಲ್ಲಿ ಮುಂದಾಗಬಹುದಾದ ಅಹಿತಕರ ಘಟನೆಗಳಿಗೆ ಮಾಲೀಕರನ್ನು ಹೊಣೆಗಾರರನ್ನಾಗಿಸಬೇಕು.

ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ।
ರಕ್ಷಂತಿ ಸ್ಥವಿರೇ ಪುತ್ರಾ ‘ಉದ್ಯೋಗೇ ಸ್ವಾಮಿನಸ್ತಥಾ।।


‘ಸ್ತ್ರೀಗೆ ಬಾಲ್ಯದಲ್ಲಿ ತಂದೆ, ಯೌವನದಲ್ಲಿ ಗಂಡ, ಮುಪ್ಪಿನಲ್ಲಿ ಗಂಡುಮಕ್ಕಳು ರಕ್ಷಣೆ ನೀಡಬೇಕು’ –  ಮನುಮಹರ್ಷಿಯ ಈ ಮಾತಿಗೆ ನ್ಯಾಯಮೂರ್ತಿ  ರಾಮಾಜೋಯಿಸರನ್ನು ಸೇರಿಸಿರುವ ವಾಕ್ಯವೆಂದರೆ- ‘ಉದ್ಯೋಗೇ ಸ್ವಾಮಿನಸ್ತಥಾ’.  ಎಂದರೆ ಕೆಲಸ ಮಾಡುವ ಸ್ಥಳದಲ್ಲಿ ಸ್ತ್ರೀಯನ್ನು ಮಾಲೀಕನು ರಕ್ಷಣೆ ಮಾಡಬೇಕು.

ಸ್ವರಕ್ಷಣಾಕ್ರಮ
ಇನ್ನು ಸ್ವರಕ್ಷಣಾಕ್ರಮದಲ್ಲಿ ಮೊಟ್ಟಮೊದಲನೆಯದೆಂದರೆ - ಮಹಿಳೆಯು ಧೈರ್ಯ ಮತ್ತು ಆತ್ಮವಿಶ್ವಾಸಗಳನ್ನು ಬೆಳಸಿಕೊಳ್ಳುವುದು. ಮಹಿಳೆಯರು ಈ ನಿಟ್ಟಿನಲ್ಲಿ ತಮ್ಮ ಕಾನೂನಿನ ಜ್ಞಾನವನ್ನು ವೃದ್ಧಿಗೊಳಿಸಿಕೊಳ್ಳುವುದರಿಂದ ಸಹಜವಾಗಿಯೇ ಅವರ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಆತ್ಮವಿಶ್ವಾಸವಿದ್ದಲ್ಲಿ ಎಂತಹ ಸಮಸ್ಯೆಯನ್ನಾದರೂ ಧೈರ್ಯವಾಗಿ ಎದುರಿಸಬಹುದು.

ಎರಡನೆಯದಾಗಿ - ‘ಮಹಿಳಾ ಸಂಘಟನೆ’. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಪರಿಣಾಮಕಾರಿಯಾಗಿ, ಸುಸೂತ್ರವಾಗಿ ಎದುರಿಸಬೇಕಾದರೆ ಮಹಿಳಾ ನೌಕರರು ತಮ್ಮ ಸ್ಥಾನಮಾನದ, ತಾರತಮ್ಯಗಳನ್ನೆಲ್ಲಾ  ಪಕ್ಕಕ್ಕಿರಿಸಿ ತಮ್ಮತಮ್ಮ ಇಲಾಖೆಯಲ್ಲಿ ಈ ದೌರ್ಜನ್ಯ ವಿರೋಧಿ ಸಂಘಟನೆಗಳನ್ನು ಪ್ರಾರಂಭಿಸಿ ತಮಗಾಗುವ ದೌರ್ಜನ್ಯದ ಬಗ್ಗೆ ನಿರ್ಭೀಡೆಯಿಂದ ಚರ್ಚಿಸಿ ಸುಸಂಘಟಿತರಾಗಿ ಎದುರಿಸಬೇಕು. ಈ ದಿಕ್ಕಿನಲ್ಲಿ ಸಂಘಟನಾ ಶಕ್ತಿಯೊಂದೇ ಬಲಶಾಲಿ ಅಸ್ತ್ರ. ಇದರಿಂದ ಮಾತ್ರವೇ ತುರ್ತು ನ್ಯಾಯ ದೊರಕಿಸಿಕೊಳ್ಳುವ ಸಾಧ್ಯತೆ ಇದೆ.

ಇದರ ಜೊತೆಗೆ ಸಾಧ್ಯವಾದಷ್ಟು ಸಾಕ್ಷಿ–ಪುರಾವೆಗಳನ್ನು ಕಲೆ ಹಾಕಿ ಮಹಿಳೆಯರು ತಮಗಾದ ದೌರ್ಜನ್ಯವನ್ನು ಜಗಜ್ಜಾಹೀರು  ಮಾಡಬೇಕು; ಮಾಧ್ಯಮಗಳ ಸಹಕಾರ ಪಡೆಯಲು ಹಿಂಜರಿಯಬಾರದು. ಇದು ಉಳಿದವರಿಗೂ ಎಚ್ಚರಿಕೆಯ ಘಂಟೆಯಾಗುತ್ತದೆ.

ಮೂರನೆಯದಾಗಿ- ಮಹಿಳೆಯರು ಪುರುಷ ಸಹೋದ್ಯೋಗಿಗಳೊಡನೆ ವ್ಯವಹರಿಸುವಾಗ ತಮ್ಮ ರೀತಿ, ನೀತಿ, ನಡವಳಿಕೆಗಳ ಮಿತಿಯನ್ನು ಅರಿತು ಜಾಗರೂಕತೆಯಿಂದ ನಡೆದುಕೊಳ್ಳಬೇಕು. ಸಹೋದ್ಯೋಗಿಗಳೊಡನೆ ಅತಿಯಾದ ಸಲುಗೆ ವಹಿಸಿ ತಮ್ಮ ವೈಯಕ್ತಿಕ ವಿಚಾರಗಳನ್ನೆಲ್ಲಾ ಅವರೊಡನೆ ಹಂಚಿಕೊಳ್ಳುವುದರಿಂದ ಮುಂದೆ ಆ ಸಹೋದ್ಯೋಗಿಗಳು ಅದನ್ನು ದುರುಪಯೋಗ ಪಡಿಸಿಕೊಳ್ಳುವ ಅವಕಾಶವಿದ್ದು ಮಹಿಳೆಯರು ಮತ್ತೊಂದು ಕಂಟಕ ಎದುರಿಸಲು ಸಿದ್ಧರಾಗಬೇಕಾಗುತ್ತದೆ.

ಮಹಿಳೆಯರು ಪುರುಷ ಸಹೋದ್ಯೋಗಿಗಳ ದುರ್ನಡತೆಯ ಬಗ್ಗೆ ಎಚ್ಚರಿಕೆಯಿಂದಿದ್ದು ಸೂಕ್ಷ್ಮವಾಗಿ ಪರಿಶೀಲಿಸಿ ಪ್ರಾರಂಭದಲ್ಲೇ ವಿರೋಧಿಸಬೇಕು. ‘ಮರ್ಯಾದೆ’ಯ ಹಣೆಪಟ್ಟಿಯಡಿ ಹೆದರಿ ವಿಷಯ ಮುಚ್ಚಿಡದೇ, ಸ್ನೇಹಿತರೊಡನೆ, ಸಂಘ–ಸಂಸ್ಥೆಗಳೊಡನೆ ಪ್ರಸ್ತಾಪಿಸಿ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕು. ಹಣ, ಭಡ್ತಿ ಇತರೇ ಭೌತಿಕ ಲಾಲಸೆಗಳಿಗೆ ಒಳಗಾಗಬಾರದು.  

ಮಹಿಳೆಯರು ಅತಿಯಾದ ಅಲಂಕಾರ ಪ್ರಚೋದನಕಾರಿ ವೇಷಭೂಷಣಗಳಿಗೆ ಕಡಿವಾಣ ಹಾಕಬೇಕು. ಇದೆಲ್ಲದರ ಜೊತೆಗೆ ಮಹಿಳೆಯರು ಕೆಲವೊಂದು ಆಮಿಷಗಳಿಗೆ ಬಲಿಯಾಗಿ ಪುರುಷ ಸಹೋದ್ಯೋಗಿಗಳೊಡನೆ ಕೈ ಜೋಡಿಸಿ ಅವರ ವಿರೋಧಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಮೇಲೆ ಹೇಳಿದ ಕಾನೂನುಗಳ ದುರ್ಬಳಕೆ ಮಾಡಿಕೊಳ್ಳುವುದು ಎಂದಿಗೂ ಸಲ್ಲದು.
– ಮೀರಾ ಫಡಕೆ (ಲೇಖಕಿ ನ್ಯಾಯಾವಾದಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT